Tuesday, July 14, 2015

ಸಣ್ಣ ಕಥೆ: ಆತ್ಮವೊಂದರ ಸ್ವಗತ

ಎಷ್ಟೋ ಸಲ ಅನ್ನಿಸಿತ್ತು. ಸಾಕು ಇನ್ನು ಜೀವನ. "ದೇವರು ಯಾವಾಗ ಮುಕ್ತಿ ಕೊಡುವನೋ?" ಎಂದು. ಆದರೆ ಇಂದು ಶಿವನ ಮೊರೆಯೇನು ಹೋಗಿರಲಿಲ್ಲ ಆದರೂ ಅವನು ಅಸ್ತು ಎಂದಾಗಿತ್ತು. ಓದಿದ ಎಷ್ಟೋ ಕಾದಂಬರಿಗಳು ಸಾವಿನಲ್ಲಿ ಮುಕ್ತಾಯವಾಗಿದ್ದು ನೆನಪಾದವು. ಹಾಗೇಯೇ ನನ್ನ ಕಥೆಯೂ ಮುಗಿದಿದೆ. ಕುತೂಹಲದಿಂದ ಅಂತಿಮ ದರ್ಶನಕ್ಕೆ ಬಂದವರತ್ತ ನೋಟ ಬೀರಿದೆ. ಬಂದಿದ್ದು ಕೆಲವೇ ಕೆಲವು ಜನ. ಆಶ್ಚರ್ಯ ಅಥವಾ ಬೇಸರ ಯಾವುದೂ ಆಗಲಿಲ್ಲ. ಏಕೆಂದರೆ ನಾನು ಇಂಥ ಸಂದರ್ಭಗಳಿಗೆ ಹೋಗಿದ್ದು ತುಂಬಾ ಕಡಿಮೆಯೇ. ಹಾಗಾಗಿಯೋ ಏನೋ ಬಂದ ಜನ ವಿಶಿಷ್ಟ ಆಸಕ್ತಿಯೇನನ್ನು ಮೂಡಿಸಲಿಲ್ಲ. ಆದರೆ ಬಂದವರಿಗೆ ಅವಸರ, ಮುಂದಿನ ಕೆಲಸಗಳತ್ತ ಗಮನ ಮತ್ತು ತಮ್ಮ ನಾಳೆಗಳ ಚಿಂತೆ ಆವರಿಸಿರುವುದು ಅವರ ಮುಖಭಾವಗಳು ಸ್ಪಷ್ಟ ಪಡಿಸುತ್ತಿದ್ದವು. ಬದುಕಿದಿದ್ದರೆ ಮುಗುಳ್ನಗುತ್ತಿದ್ದನೇನೋ? ಆದರೆ ನಿರ್ಜೀವ ಶವ ಎಲ್ಲರಿಗೂ ಹೊರೆ. ಅದಕ್ಕೆ ಒಂದು ವ್ಯವಸ್ಥೆ ಮಾಡಿದರು. ಹಾಗಾಗಿ ಸ್ಮಶಾನ ಸೇರಲಿಕ್ಕೆ ಬಹು ಹೊತ್ತೇನು ಬೇಕಾಗಲಿಲ್ಲ.

ಬರಿ ಮೈಯಲ್ಲಿ ಯಾವತ್ತು ಮಲಗದಿದ್ದ ನನಗೆ ಇದು ಹೊಸ ಅನುಭವ. ತುಂಬು ಹೊದ್ದುಕೊಂಡು ಬೆಚ್ಚಗೆ ಮಲಗುತಿದ್ದ ರಾತ್ರಿಗಳು ಹೇಗೆ ಸರಿದು ಹೋಗುತ್ತಿದ್ದವೋ ಏನೋ? ಆದರೆ ಇಂದು ಮಣ್ಣಿನ ಹೊದಿಕೆ. ಚಳಿಯೇನು ಅನ್ನಿಸುತ್ತಿಲ್ಲ. ಉಸಿರಾಡುವ ಅವಶ್ಯಕತೆ ಇಲ್ಲದಿರುವುದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಮೂಗಿನಲ್ಲಿ ಮಣ್ಣು ಸೇರಿಕೊಂಡು ಏನು ಗತಿ? ಬದುಕಿದ್ದಾಗ ಬಲು ಸತಾಯಿಸಿದ್ದು ನನ್ನ ಮೂಗು. ಮೂಗಿದ್ದವರಿವಿಗೆ ನೆಗಡಿ ತಪ್ಪಿದ್ದಲ್ಲ ಎಂದು ಗಾದೆ ಮಾತು ಇದೆ. ಆದರೆ ಬಯಲು ಸೀಮೆಯಲ್ಲಿ ಹುಟ್ಟಿದ್ದ ನನಗೆ ಬೆಂಗಳೂರು ಹವಾಮಾನ ಒಗ್ಗದೆ, ಮೂಗಿನಲ್ಲಿ ಸತತ ಒರತೆ. ಯಾವುದಾದರೂ ನದಿಯ ಮೂಲ ನನ್ನ ಮೂಗಿನಲ್ಲಿದ್ದಿರಬಹುದೇ ಎನ್ನಿಸಿದ್ದು ಉಂಟು. ಅಲ್ಲಿ ಶುರುವಾದ ಕಿರಿಕಿರಿ ಗಂಟಲು, ಕಣ್ಣು, ತಲೆಗೆ ಹಬ್ಬದೇ ಸುಮ್ಮನಾದದ್ದಿಲ್ಲ. ಆದರೆ ಇಂದು ಮೂಗು ನಿಷ್ಕ್ರಿಯ. ಮುಚ್ಚಿದ ಕಣ್ಣುಗಳಿಗೆ ಗಾಢ ಅಂಧಕಾರ.

ಸಮಯ ಸರಿಯುತ್ತ ಇದೆ. ನಾಯಿ, ನರಿಗಳು ಊಳಿಟ್ಟು ಸುಮ್ಮನಾದವು. ಸರಿಸೃಪಗಳು ಹರಿದು ಹೋದದ್ದು ಬಿಟ್ಟರೆ ಬೇರೆ ಯಾವ ಶಬ್ದ ಕೇಳಿಸುತ್ತಿಲ್ಲ. ಅರೆ, ಇದು ಎಂಥ ಮೌನ. ಸ್ಮಶಾನ ಮೌನ. ಹೌದು, 'ಸ್ಮಶಾನ ಮೌನ' ಎನ್ನುವುದು ಕೇವಲ ಅಲಂಕಾರಿಕ ಶಬ್ದವಲ್ಲ. ಒಂದು ಕ್ಷಣ ಹೆಂಡತಿಯ ನೆನಪಾಯಿತು. ಅವಳಿಗೆ ಮೌನವೆಂದರೆ ಆಗಿ ಬರುವುದಿಲ್ಲ. ಇದೆಲ್ಲ ನನಗೆ. ಬಾಗಿಲು ಹಾಕಿಕೊಂಡು ಮೂದೇವಿಯಂತೆ ಓದುತ್ತ ಕೂಡುತ್ತಿದ್ದದ್ದು ನಾನೇ ಅಲ್ಲವೇ. ಇನ್ನು ಮೌನವೇ ನನ್ನ ಸಂಗಾತಿ. ಸಾಹಿತಿಗಳು ಹೇಳುವ ಹಾಗೆ ಇದು ಚಿರ ನಿದ್ರೆಗೆ ಜಾರುವ ಸಮಯ.

ಇದೇನು ಯಾರೋ ಮಾತನಾಡುವ, ಅಲ್ಲ ಕೂಗುವ ಹಾಗೆ ಕೇಳಿಸುತ್ತಿದೆಯಲ್ಲ? ಹೌದು, ಇದು ತರಕಾರಿ ಮಾರುವವಳ ಕೂಗು. ಅವಳನ್ನು ಮಣ್ಣು ಮಾಡಿದ್ದು ಇಲ್ಲೇ ಹತ್ತಿರದಲ್ಲೇ ಎಂದು ಜನ ಮಾತಾಡಿಕೊಂಡದ್ದು ನೆನಪಿಗೆ ಬಂತು. ಸಂತೆ ಎಂದರೆ ಮಾರು ದೂರ ಸರಿವ ನನಗೆ ಇದು ಎಂಥ ನೆರೆ ಹೊರೆ? ನನ್ನ ವಿಚಾರಕ್ಕೆ ಉತ್ತರ ಎನ್ನುವಂತೆ ಮತ್ತೆ ಕೇಳಿ ಬಂತು ಅದೇ ಧ್ವನಿ

"ನಾನು ಇದೇ ಜಾಗ ಎಂದು ಕೇಳಿರಲಿಲ್ವೊ, ನನ್ನ ಗಂಡ, ಮಕ್ಳು ಸೇರಿ ಹೂತು ಹೋದ್ರು. ನಿನ್ನ ಹಣೆ ಬರಹಕ್ಕೆ ನಾನೇನು ಮಾಡೋಕಾಗತ್ತೆ?"

ಇದೇನಾಶ್ಚರ್ಯ? ಹಾಗಾದರೆ ದೊಸ್ತೊವ್ಸ್ಕಿಯ ಕಥೆಯಲ್ಲಿ ಒಂದು ಪಾತ್ರವೊಂದು ಆತ್ಮಗಳ ಜೊತೆ ಮಾತನಾಡುವುದು ಬರೀ ಕಲ್ಪನೆಯಲ್ಲ. ಆದರೆ ಅದು ರಶಿಯಾದ ಕಥೆ. ಆದ್ರೇನಾಯಿತು? ಆತ್ಮಗಳಿಗೆ ದೇಶ-ಭಾಷೆಯ ಎಲ್ಲೆ ಏಲ್ಲಿ?

ಹಾಗೆಯೇ, ಆಕೆ ನನ್ನ ಹಣೆ ಬರಹ ಅಂದಿದ್ದು ಯಾಕೆ? ಬ್ರಹ್ಮನ ಬರಹಕ್ಕೆ ಸಾವಿನಲ್ಲೂ ಕೊನೆಯಿಲ್ಲವೇ? ನಾನು ' ಹಣೆ ಬರಹ ಎನ್ನುವದೆಲ್ಲ ಸುಳ್ಳು, ಅದು ಮನುಷ್ಯ ತನ್ನ ಪ್ರಯತ್ನ ಮೀರಿದ ಮೇಲೆ ಹತಾಶನಾಗಿ ಆಡುವ ಮಾತು ಅಷ್ಟೇ' ಎಂದು ವಾದಿಸುತ್ತಿದ್ದದ್ದು ಎಂಥ ವ್ಯರ್ಥ ಪ್ರಯತ್ನವಾಗಿತ್ತು! ಕೆಲವು ಸತ್ಯಗಳನ್ನು ತಿಳಿಯುವದಕ್ಕೆ ಒಂದು ಜನ್ಮ ಸಾಕಾಗುವದಿಲ್ಲವೇನೋ?

ಅದೇನೇ ಇರಲಿ, ಮೃತರ ಲೋಕದಲ್ಲಿ ನಮ್ಮ ವಿಚಾರದ ಮೂಲಕವೇ ಇತರರೊಂದಿಗೆ ಸಂಪರ್ಕ ಸಾಧಿಸಬಹುದು ಎಂದಾಯಿತು. ಅದರ ಜೊತೆಗೇನೆ ನಾನು ಇನ್ನು ಶಾಲಾ ದಿನಗಳಲ್ಲಿದ್ದಾಗ ತೀರಿಕೊಂಡ ಅಜ್ಜಿಯ ನೆನಪಾಯಿತು. ಎಂಥ ನಿಷ್ಕಲ್ಮಶ ಪ್ರೀತಿ ಅಜ್ಜಿಯದ್ದು. ನಸುಕಿನಲ್ಲಿ ಎದ್ದು ಸ್ನಾನ ಮಾಡಿ, ಅವಳ ದೇವರ ಪೂಜೆಗೆ ಮಡಿ ನೀರು ಹಿಡಿದು, ಸಂಜೆ ಶಾಲೆ ಮುಗಿದ ನಂತರ ಅವಳ ಮನೆಯಲ್ಲೇ ನಡೆಸುತ್ತಿದ್ದ್ದ ಅಕ್ಕಿ ವ್ಯಾಪಾರದಲ್ಲೂ ನೆರವಾಗುತ್ತಿದ್ದೆ. ಅವಳು ಪುಡಿಗಾಸನ್ನು ನನ್ನ ಕೈಯಿಂದ ಒಮ್ಮೆ ಎಣಿಸಿ ತನ್ನ ಲೆಕ್ಕ ಸರಿಯಾಗಿದೆಯೇ ಎಂದು ಖಾತರಿ ಪಡೆಸಿಕೊಳ್ಳುತ್ತಿದ್ದಳು. ಹೊಲದಲ್ಲಿ ರಾಶಿ ನಡೆದಿರುವಾಗ, ಚಿಕ್ಕವನಿದ್ದ ನನ್ನನ್ನು ಅವಳು ಕೈ ಹಿಡಿದು ಅಷ್ಟು ದೂರ ನಡೆಸಿದ್ದು, ಹಳ್ಳ ದಾಟುವ ಜಾಗೃತೆಯನ್ನು ಕಲಿಸಿದ್ದು ಮಸುಕು ಮಸುಕಾಗಿ ನೆನಪಿದೆ. ಪರಲೋಕದಲ್ಲಿ ಅವಳು ಮತ್ತೆ ನನ್ನ ಕೈ ಹಿಡಿದು ನಡೆಸಬಹುದೇನೋ? ಆದರೆ ಅವಳನ್ನು ಹೇಗೆ ಹುಡುಕುವುದು? ಮತ್ತೆ ಕೇಳಿ ಬರುತ್ತಿದ್ದ ಶಬ್ದಗಳಿಗೆ ಕಿವಿ ಕೊಟ್ಟೆ.

ಅಲ್ಲಿ ನಡೆಯತ್ತಿದ್ದದ್ದು ಇಹಲೋಕದಿಂದ ಭಿನ್ನವಾಗೇನೂ ಇರಲಿಲ್ಲ. ಹುಟ್ಟು ಗುಣ ಸುಟ್ಟರೂ ಹೋಗದು ಎಂಬಂತೆ, ಒಬ್ಬ ತನ್ನ ಕಾಯಕವನ್ನು ಮರಣದ ನಂತರವೂ ಮುಂದುವರಿಸಿದ್ದ. ಇಲ್ಲಿಯೂ ಅವನಿಗೆ ಹಿಂಬಾಲಕರು ದೊರಕಿದ್ದರು. ಅವನಿಗೆ ಇಲ್ಲಿ ನಡೆಯುವ ಪ್ರತಿಯೊಂದು ಆಗು-ಹೋಗುಗಳ ಮಾಹಿತಿ ಬೇಕಿತ್ತು. ಅವರೊಲ್ಲಬ್ಬ ಹೇಳುತ್ತಿದ್ದ ಸ್ಮಶಾನದಲ್ಲಿನ ಹೊಸ ಆಗಮನದ ಬಗ್ಗೆ. ನನಗೆ ಸ್ಪಷ್ಟವಾಯಿತು, ಅದು ನನ್ನ ಬಗ್ಗೇನೇ.

'ಏನೋ ಕಥೆ ಬರೀತಿದ್ನಂತೆ. ಕರೆಸಿ ಕೇಳೋಣ. ಇಲ್ಲೇನು ಕಥೆ ಕಟ್ತಾನಂತೆ'.

ನಿಜ, ನರಕದ ನಾಯಕರು ನನ್ನ ಕಥೆಗೆ ವಸ್ತುವಾಗುವದರಲ್ಲಿ ಯಾವುದೇ ಸಂದೇಹ ಇರಲಿಲ್ಲ. ಆದರೆ ಇದರ ಸಲುವಾಗಿಯೋ ನಾನು ದೇವರ ಹತ್ತಿರ ಮುಕ್ತಿ ಕೇಳಿದ್ದು?

ಸಮಸ್ಯೆಗಳು ಸಾವಿನಲ್ಲಿ ಮುಕ್ತಾಯ ಕಾಣದಿದ್ದರೆ, ಬದುಕುವುದೇ ಎಷ್ಟೋ ಲೇಸು. ಬದುಕಿದ್ದರೆ ಕೆಲ ಸಮಸ್ಯೆಗಳಿಗಾದರೂ ಪರಿಹಾರ ಕಾಣಿಸಬಹುದಾಗಿತ್ತು. ಹಾಗಿದ್ದರೆ ಸಾವು ಬಯಸುವುದು ಒಂದು ತರಹ ಕೆಲವರು ಹೇಳುವ ಪ್ರಕಾರ ಪಲಾಯನವೇ. ಇಹಲೋಕ-ಪರಲೋಕಕ್ಕೆ ಇರುವ ಅಂತರ ಚಿಂತೆ-ಚಿತೆಗೆ ಇರುವಷ್ಟೇ ಅಂತರ. ಬದುಕಿದ್ದಲ್ಲಿ ಚಿಂತೆಗಳನ್ನು ಕಡಿಮೆ ಮಾಡಿಕೊಳ್ಳಬಹುದೇನೋ? ಆದರೆ ಸಾವು ಇತಿಹಾಸದ ಕೊನೆಯ ಪುಟ.

ಅರೆ, ಎಂತಹ ತಪ್ಪಾಯಿತು. ಕೆಲ ಸಮಸ್ಯೆಗಳನ್ನು ಕೊನೆಗಾಣಿಸಿಕೊಂಡಿದ್ದರೆ ಇನ್ನೂ ನೆಮ್ಮದಿಯ ಸಾವು ನನ್ನದಾಗಬಹುದಾಗಿತ್ತು. ಬದುಕಿದ್ದಾಗ 'ಸಾವು ಕೊಡು' ಎಂದು ದೇವರಲ್ಲಿ ಕೇಳಿದ ಹಾಗೆ, ಸತ್ತ ಮೇಲೆ 'ಮತ್ತೆ ಬದುಕು ಕೊಡು' ಎಂದು ಕೇಳಲು ಸಾಧ್ಯವೇ?