Wednesday, June 19, 2019

"ಕವಲು ದಾರಿ" ಮತ್ತು "ಬೆಲ್ ಬಾಟಮ್": ಮನ ತಣಿಸುವ ಪತ್ತೇದಾರಿ ಚಿತ್ರಗಳು

ಕಳೆದ ಎರಡು ತಿಂಗಳ ಅವಧಿಯಲ್ಲಿ ನೋಡಿದ ಕೆಲವು ಚಿತ್ರಗಳಲ್ಲಿ ಈ ಎರಡು ಚಿತ್ರಗಳು ನನ್ನ ಮನ ಸೆಳೆದವು. ಇವೆರಡು ಪತ್ತೇದಾರಿ ಚಿತ್ರಗಳು ಮತ್ತು ಸಾಕಷ್ಟು ಹೊಸ ಮುಖಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ, ಹಾಗೆ ಉತ್ತಮ ನಿರೂಪಣೆ ಮೂಲಕ ಪ್ರೇಕ್ಷಕರಕನ್ನು ಹಿಡಿದಿಡುವ ಚಿತ್ರಗಳು.

"ಕವಲು ದಾರಿ"ಯ ಮುಖ್ಯ ಕಥೆ ಎಷ್ಟೋ ವರ್ಷಗಳ ಹಿಂದೆ ನಡೆದ ಕೊಲೆಯೊಂದರ ಜಾಡು ಹಿಡಿದು, ಕೊಲೆಗಾರನನ್ನು ಪತ್ತೆ ಹಚ್ಚುವುದು. ಸಹಜತೆಗೆ ಸಾಕಷ್ಟು ಹತ್ತಿರ ಎನ್ನಿಸುವ ಅಭಿನಯದಲ್ಲಿ ಮಾಗಿದ ನಟ ಅನಂತ್ ನಾಗ್ ಚಿತ್ರವನ್ನು ಸುಲಭದಲ್ಲಿ ಮುಂದೆ ಸಾಗಿಸುತ್ತಾರೆ. ನಾಯಕ ನಟನಾಗಿ ರಿಷಿ ಕೂಡ ಒಳ್ಳೆಯ ಅಭಿನಯ ನೀಡಿದ್ದಾರೆ. ಇದರ ಖಳ ನಾಯಕನ ಒಂದು ಸಂಭಾಷಣೆ "ಸರಿ-ತಪ್ಪು ಅನ್ನೋ ಚೌಕಟ್ಟಿನಿಂದ ಆಚೆ ಬಂದ ಮೇಲೆ, ಅದರಲ್ಲಿರುವ ಮನುಷ್ಯರನ್ನು ಆಡಿಸುವುದು ಎಷ್ಟು ಸುಲಭ" ಎನ್ನುವ ಮಾತು ನನಗೆ ಮನಶಾಸ್ತ್ರದ ಅರಿವೆಲ್ಲ ಒಂದೇ ಮಾತಿನಲ್ಲಿ ಕೇಳಿಸಿ ಕೊಂಡ ಹಾಗಾಯಿತು.

 "ಬೆಲ್ ಬಾಟಮ್" ನಾನು ಸಂಪೂರ್ಣ ಆನಂದಿಸಿದ ಚಿತ್ರ. ಇದು ನಡೆಯುವುದು ಕೆಲವು ದಶಕಗಳ ಹಿಂದೆ  "ಬೆಲ್ ಬಾಟಮ್" ಗಳು ಚಾಲ್ತಿ ಇದ್ದ ಕಾಲದಲ್ಲಿ. ಇದು ಪೊಲೀಸ್ ಸ್ಟೇಷನ್ ನಲ್ಲಿ ನಡೆಯುವ ಒಂದು ಕಳ್ಳತನದ ಜಾಡು ಹಿಡಿದು ಸಾಗುತ್ತದೆ. ಅದು ಹೇಗಾಯಿತು, ಮಾಡಿದ್ದು ಯಾರು ಮತ್ತು ಅವರ ನಿಜ ಉದ್ದೇಶ ಏನಿತ್ತು ಎನ್ನುವುದರ ಸನ್ನಿವೇಶಗಳನ್ನು ಅನಾವರಣಗೊಳಿಸುತ್ತ ಚಿತ್ರ ಸಾಗುತ್ತದೆ. ಇದರಲ್ಲಿ ಎಲ್ಲ ಪಾತ್ರಗಳ ಅಭಿನಯ, ಪೂರಕ ಸಂಭಾಷಣೆ, ಹಳೆ ಕಾಲದ ವೇಷ-ಭೂಷಣಗಳು, ಚಿತ್ರದ ನಿರೂಪಣೆ ಎಲ್ಲವೂ ಮನ ಮುಟ್ಟುವಂತಿವೆ. ಬಹಳ ದಿನದ ನಂತರ ಒಂದು ಒಳ್ಳೆಯ ಚಿತ್ರ ನೋಡಿದ ಅನುಭವ ಈ ಚಿತ್ರ ಕೊಟ್ಟಿತು.

ಕನ್ನಡದಲ್ಲಿ ಒಳ್ಳೆಯ ಚಿತ್ರಗಳೇ ಅಪರೂಪ ಎನ್ನುವ ಈ ಕಾಲದಲ್ಲಿ, ಈ ಎರಡು ಚಿತ್ರಗಳು ಆ ಮಾತು ಸುಳ್ಳು ಎನ್ನುವ ಖುಷಿ ಕೊಡುತ್ತವೆ.

No comments:

Post a Comment