Wednesday, May 17, 2017

ಮರ್ಯಾದೆಗೆ ಹೆದರುವುವರು ಮತ್ತು ಹೆದರದವರು

ಈ ಜಗತ್ತಿನಲ್ಲಿ ಎರಡು ತರಹದ ಜನರಿದ್ದಾರೆ.  ಮರ್ಯಾದೆಗೆ ಹೆದರುವುವರು ಮತ್ತು ಹೆದರದವರು. ಹೆದರುವವರದೇ ಹೆಚ್ಚಿನ ಸಂಖ್ಯೆ (ಅದರಲ್ಲೂ ಹೆಣ್ಣು ಮಕ್ಕಳು). ಅವರು ಅಕ್ಕ-ಪಕ್ಕದವರು, ಬಂಧು-ಬಳಗ, ಊರಿನ ಜನ ಹೀಗೆ ಒಟ್ಟಿನಲ್ಲಿ ಸಮಾಜ ತಮ್ಮನ್ನು ಹೇಗೆ ನೋಡಬಹುದು ಎನ್ನುವುದಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಸಮಾಜದಲ್ಲಿ ತಮ್ಮ ಗೌರವಕ್ಕೆ ಎಂದೂ ಕುಂದು ಬರಬಾರದು ಎನ್ನುವ ಪ್ರಯತ್ನದಲ್ಲೇ ಜೀವನ ಸಾಗಿಸುತ್ತಾರೆ. ತಮ್ಮ ಮನೆಯಲ್ಲಿ ಏನಾದರೂ ಸಮಸ್ಯೆ ಇದೆಯೋ, ಅದು ಹೊರಗಿನ ಸಮಾಜಕ್ಕೆ ಗೊತ್ತಾಗದಂತೆ ಕಾಳಜಿ ವಹಿಸುತ್ತಾರೆ. ತಮ್ಮ ಮಗ ಲಂಪಟನೋ, ಸಾಲಗಾರನೋ ಆಗಿದ್ದರೆ, ತಮ್ಮ ಕುಟುಂಬದ ಗೌರವಕ್ಕೆ ಹೆದರಿ ಆ ಸಾಲವನ್ನು ತಾವು ಮುಟ್ಟಿಸುವ ಮೂಲಕ ಸಮಸ್ಯೆಯ ಬಗೆಹರಿಸಲು ನೋಡುತ್ತಾರೆ. ಪತಿ ಕುಡುಕನೋ ಅಥವಾ ಮೋಜುಗಾರನೋ ಆಗಿದ್ದರೆ, ಅವನ ಪತ್ನಿ ಈ ವಿಷಯ ಹೊರಗೆ ಬಾರದಂತೆ ತಡೆಯುವ ಎಲ್ಲ ಪ್ರಯತ್ನ ಮಾಡುತ್ತಾಳೆ. ಇದು ಸಾಕಷ್ಟು ಕುಟುಂಬಗಳಲ್ಲಿ ನಡೆಯುವ ಸರ್ವೇ ಸಾಮಾನ್ಯ ಸಂಗತಿ. ಮೊದ ಮೊದಲಿಗೆ ಇಂತಹ ಸಮಸ್ಯೆಗಳು ಬಗೆ ಹರಿದಂತೆ ಕಂಡರೂ ಅವು ಕ್ರಮೇಣ ದೊಡ್ಡದಾಗುತ್ತ ಹೋಗುತ್ತವೆ.

ಅದಕ್ಕೆ ಕಾರಣ ಇನ್ನೊಂದು ವರ್ಗದ ಜನರಿದ್ದಾರಲ್ಲ, ಮರ್ಯಾದೆಗೆ ಹೆದರದವರು (ಅಥವಾ ಮರ್ಯಾದೆ ತೆಗೆಯುವುವರು). ಅವರು ಈ ಮರ್ಯಾದೆಗೆ ಹೆದರುವುವರ ಮನಸ್ಥಿತಿಯನ್ನು ಚೆನ್ನಾಗಿ ಅರಿತಿರುತ್ತಾರೆ. ಅವರಿಗೆ ಅದೇ ಬಂಡವಾಳ. ಸಾಲ ಕೊಟ್ಟವರನ್ನು ಸರಹೊತ್ತಿನಲ್ಲಿ ಮನೆಗೆ ಬರುವಂತೆ ಮಾಡುತ್ತಾರೆ. ಕುಟುಂಬದ ಗೌರವವನ್ನು ಪ್ರಶ್ನೆಗೆ ಈಡು ಮಾಡುತ್ತಾರೆ. ಅಲ್ಲಿಗೆ ಪತ್ನಿಯ ಮೈ ಮೇಲಿನ ಒಂದು ಆಭರಣ ಮಾಯವಾಗುತ್ತದೆ. ಆದರೆ ಇಂತಹ ಪರಿಸ್ಥಿತಿಗಳು ಮೇಲಿಂದ ಮೇಲೆ ಬರ ತೊಡಗುತ್ತವೆ. ಕಾಲ ಕ್ರಮೇಣ ಅವನ ಪತ್ನಿ ನಿರಾಭರಣ ಸುಂದರಿ ಆಗುತ್ತಾಳೆ ಅಥವಾ ಅವನ ತಂದೆಯ ಸ್ಥಿರಾಸ್ಥಿಗಳು ಸಾಲಗಾರರ ಪಾಲಾಗಿರುತ್ತವೆ.

ಕಳೆದುಕೊಳ್ಳಲು ಏನೂ ಇಲ್ಲವೋ ಆಗ ಆ ಪತ್ನಿಯ ಅಥವಾ ತಂದೆ-ತಾಯಿಯ ಪ್ರತಿಭಟನೆ ಶುರುವಾಗುತ್ತದೆ. 'ದುಡಿದು ತಂದರೆ ಹಿಟ್ಟು, ಇಲ್ಲದಿದ್ದರೆ ತಣ್ಣೀರು ಬಟ್ಟೆ' ಎನ್ನುವ ಉತ್ತರ ಸಲೀಸಾಗಿ ಹೊರ ಬರುತ್ತದೆ. ಮರ್ಯಾದೆಗೆ ಹೆದರದವರಿಗೆ ಬಯ್ಗುಳ ಏನೂ ಹೊಸತೇ? ಅವರು ಅಲ್ಲಿಗೆ ಜಗ್ಗುವುದಿಲ್ಲ. ಆದರೆ ಅವರ ಆಟ ಮುಗಿದಿದೆ. ಅವನ ಪತ್ನಿ (ಅಥವಾ ಪೋಷಕರು) ಈಗ ಮರ್ಯಾದೆಗೆ ಹೆದರುವುದಿಲ್ಲ. ಅವರು ಅವನನ್ನು ಮೂಲೆಗೆ ಕೂಡಿಸುತ್ತಾರೆ ಅಥವಾ ಮನೆಯಿಂದ ಹೊರ ಹಾಕುತ್ತಾರೆ. ಆಗ ಅವನು ತನ್ನ ಖರ್ಚು ತಾನು ದುಡಿಯುವ ಸಾಧ್ಯತೆಗಳೂ ಹೆಚ್ಚು.

ಆದರೆ ಇದೇ ನಿರ್ಧಾರ ಮೊದಲೇ ತೆಗೆದುಕೊಂಡಿದ್ದರೆ, ಕಳೆದುಕೊಳ್ಳುವುದು ತಪ್ಪಿಸ ಬಹುದಿತ್ತಲ್ಲವೇ? ಆಗ ಅದು ಕುಟುಂಬದ ಗೌರವದ ಪ್ರಶ್ನೆ ಆಗಿತ್ತು. ಸರಿ, ಆ ಗೌರವ ಉಳಿಯಿತೇ?  ಕಳೆದುಕೊಂಡ ಮೇಲೆ ಬುದ್ದಿ ಬಂತು ಅಂತ ಗಾದೆ ಮಾತೇ ಇದೆ ಎಂದು ಸಮಾಧಾನ ಮಾಡಿಕೊಳ್ಳಬಹುದು. ಆದರೆ ವಿಚಾರ ಮಾಡಿ ನೋಡಿ. ಮರ್ಯಾದೆ ಎನ್ನುವುದು ಊಟದ ನಡುವಿನ ಉಪ್ಪಿನಕಾಯಿ ಅಲ್ಲ. ಅದು ನಮ್ಮ ಭ್ರಮೆ. ಅದಕ್ಕೆ ಹೆದರುವುದು ನಮ್ಮ ದೌರ್ಬಲ್ಯ. ಮರ್ಯಾದೆಗೆ ಹೆದರದವರು ಅದರ ದುರ್ಬಳಕೆ ಮಾಡಿಯೇ ನಮ್ಮನ್ನು ಅವರ ಜೊತೆ ನಿಲ್ಲಿಸಿಬಿಡುತ್ತಾರೆ. ಅಕ್ಕಂದಿರೇ, ತಾಯಂದಿರೇ, ನಿಮ್ಮ ಪತಿ ಅಥವಾ ಮಗ ಮರ್ಯಾದೆಗೆ ಹೆದರದವನು ಎಂದು ಗುರುತಿಸಿದ ದಿನವೇ ಅವನನ್ನು ಎಲ್ಲಿಡಬೇಕೋ ಅಲ್ಲಿಡಿ. ಅವನ ದೌರ್ಬಲ್ಯಗಳು ಸಮಾಜಕ್ಕೆ ಗೊತ್ತಾದರೆ ಆಗಲಿ. ಅವನಿಗೆ ಹೊಸ ಸಾಲ ಸಿಕ್ಕುವುದು ತಪ್ಪುತ್ತದೆ. ಅದು ಬಿಟ್ಟು, ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಏನಾದೀತು ಎಂದು ನೀವು ಭಯ ಪಟ್ಟರೆ ಅದು ನಿಜವಾಗುವ ದಿನ ಬಂದೇ ಬಿಡುತ್ತದೆ. ಅದರ ಬದಲು ಸಮಸ್ಯೆಯನ್ನು ಎದುರಿಸಿದರೆ ಅದರಿಂದ ಉಪಯೋಗವಾದೀತು. ಇಷ್ಟಕ್ಕೂ ಸಮಾಜಕ್ಕೆ ಗೊತ್ತು ಎಲ್ಲರ ಮನೆ ದೋಸೆ ತೂತೆ ಎಂದು. ಅದು ತನ್ನ ಪಾಡಿಗೆ ತಾನು ಸಾಗುತ್ತದೆ. ಎದುರಿಸಿ ಗೆದ್ದೀರೋ, ಆಗ ನೀವೇ ಆ ಸಮಾಜಕ್ಕೆ ಮಾದರಿ.