Sunday, October 31, 2021

ಮೋಸಗಾರರ ತಣ್ಣನೆಯ ಕ್ರೌರ್ಯ ಗುರುತಿಸದೆ ಹೋದರೆ

ಹಣಕಾಸಿನ ವಿಚಾರದಲ್ಲಿ ಮೋಸ ಹೋದ ಅನುಭವಗಳು ಸಾಕಷ್ಟು ಜನರಿಗೆ ಆಗಿರುತ್ತದೆ. ಹಾಗೆಯೆ ಯಾವುದೊ ಕೆಲಸ ಮಾಡಿಕೊಡುತ್ತೇನೆ ಎಂದು ಕರೆದುಕೊಂಡು ಹೋಗಿ ನಡು ನೀರಿನಲ್ಲಿ ಕೈ ಬಿಟ್ಟು ಹೋಗುತ್ತಾರಲ್ಲ. ಅಂತಹ ಅನುಭವಗಳ ಬಗ್ಗೆ ಸಾಕಷ್ಟು ಸ್ನೇಹಿತರಿಂದ ಕೇಳಿ ತಿಳಿದುಕೊಂಡಿದ್ದೇನೆ. ಮರಾ ಮೋಸದಲ್ಲಿ ಆಗುವ ಕೊಲೆ, ಸುಲಿಗೆಗಳ ಬಗ್ಗೆ ದಿನ ಪತ್ರಿಕೆಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಇವೆಲ್ಲ ಘಟನೆಗಳಲ್ಲಿ ಮೋಸ ಹೋದವರು ಒಂದು ಮುಗ್ದರು ಇಲ್ಲವೇ ಯಾವುದೊ ಕುರುಡು ನಂಬಿಕೆಯಿಂದ ಬಂದು ಸಿಕ್ಕಿ ಹಾಕಿಕೊಂಡವರು. ಆದರೆ ಮೋಸ ಮಾಡುವವರು ಮಾತ್ರ ಚಾಣಾಕ್ಷರು. ಅವರಿಗೆ ಯಾರನ್ನು ಹೇಗೆ ಹಳ್ಳಕ್ಕೆ ಬೀಳಿಸಬೇಕು ಎನ್ನುವುದರಲ್ಲಿ ಪರಿಣಿತಿ ಇದೆ. ಮೋಸಗಾರರು ಯಾಕೆ ಮೋಸ ಮಾಡುತ್ತಾರೆ ಎಂದು ವಿಚಾರ ಮಾಡಿ ನೋಡಿದರೆ, ಅವರು ಕಷ್ಟ ಪಟ್ಟು ದುಡಿಯುವುದಕ್ಕೆ ಇಷ್ಟ ಪಡದೆ ಸುಲಭದ ಮಾರ್ಗಗಳನ್ನೇ ಆಯ್ದುಕೊಂಡಿರುತ್ತಾರೆ. ಆ ಕಲೆ ಒಮ್ಮೆ ಕರಗತವಾದರೆ ಸಾಕು, ಅವರು ಮನುಷ್ಯ ರಕ್ತದ ರುಚಿ ನೋಡಿದ ಹುಲಿಯ ಹಾಗೆ ನರಭಕ್ಷಕರಾಗಿ ತಯಾರಾಗಿ ಹೋಗುತ್ತಾರೆ. ಅಲ್ಲಿಂದ ಅವರಿಗೆ ಬೇರೆ ಯಾವ ವೃತ್ತಿಯು ರುಚಿಸುವುದಿಲ್ಲ. ಬೇಟೆ ಹುಲಿಯ ತಣ್ಣನೆಯ ಕ್ರೌರ್ಯ ಅವರಲ್ಲಿ ಮೈಗೂಡಿ ಬಿಡುತ್ತದೆ. ಮಿಕ ಬಲೆಗೆ ಬೀಳುವವರೆಗೆ ಬೇರೆಯೇ ಮುಸುಕು ಧರಿಸುವ ಅವರು, ತಮ್ಮ ನಿಜ ಗುಣವನ್ನು ತೋರಿಸಿಕೊಡುವುದು ತಮ್ಮ ಬೇಟೆಯನ್ನು ಸವಿಯುವಾಗಲೇ.

 

ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಿದರೆ, ಮೋಸಗಾರರ ಜಾಡನ್ನು ಗ್ರಹಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ಅವರು ನಿಮ್ಮ ಜೊತೆಗೆ ಹಲವಾರು ವರುಷ ಪ್ರಾಮಾಣಿಕತೆಯಿಂದ ವ್ಯವಹರಿಸಿ, ನಿಮ್ಮ ನಂಬಿಕೆ ಗಳಿಸಿಕೊಂಡಿದ್ದರೆ, ಅವರ ಜೊತೆಗೆ ನಿಮ್ಮ ಮುನ್ನೆಚ್ಚರಿಕೆಗಳು ಕಡಿಮೆ ಮಟ್ಟದಲ್ಲಿ ಇರುತ್ತವೆ. ಹೀಗೆ ಒಂದು ನಿಮ್ಮ ಅಜಾಗರೂಕತೆಯ ಕ್ಷಣದಲ್ಲಿ, ನಂಬಿಕೆಯ ಸಂಪೂರ್ಣ ಲಾಭ ಪಡೆದು ನಿಮ್ಮನ್ನು ಅವರು ದೊಡ್ಡ ಕುತ್ತಿಗೆ ಸಿಕ್ಕಿಸಿಬಿಡುತ್ತಾರೆ. ಆಗ ನಿಮಗೆ ಬೇಟೆ ಹುಲಿಯ ಮತ್ತು ಅದರ ತಣ್ಣನೆಯ ಕ್ರೌರ್ಯದ ದರ್ಶನವಾಗುತ್ತ ಹೋಗುತ್ತದೆ. ನಿಮಗೆ ಸಾಮರ್ಥ್ಯವಿದ್ದಲ್ಲಿ ಅವರ ಕಪಿ ಮುಷ್ಟಿಯಿಂದ ಹೊರ ಬಂದು, ಅವರನ್ನು ದೂರ ಇಡುತ್ತೀರಿ.

 

ಒಂದು ವೇಳೆ ಈ ಮೋಸಗಾರರು ನಿಮ್ಮ ಕುಟುಂಬದವರೇ, ಅಥವಾ ನಿಮ್ಮ ಪತಿ, ಪತ್ನಿಯೇ ಆಗಿದ್ದರೆ? ಆಗ ಮೋಸದಿಂದ ಆದ ನಷ್ಟಕ್ಕಿಂತ, ನಂಬಿಕೆಗೆ ಆದ ಮೋಸ ಹೆಚ್ಚು ಇರಿಯುತ್ತದೆ. ಚಾಕು ಬೆನ್ನಿಗೆ ಬಿದ್ದಿದ್ದರು, ಅದು ಎದೆಗೆ ಇರಿದಿರುತ್ತದೆ. ಅರೆ, ಏಕೆ ಹೀಗಾಯ್ತು ಎಂದು ಅವಲೋಕಿಸಿದಾಗ, ಮೋಸದ ಹೆಜ್ಜೆ ಜಾಡುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಎಂತಹ ವ್ಯಕ್ತಿಯನ್ನು ನಂಬಿ ಬಿಟ್ಟೆನೆಲ್ಲಾ ಎಂದು ನಮಗೆ ನಾವೇ ಅಂದುಕೊಳ್ಳುತ್ತೇವೆ. ಆ ವ್ಯಕ್ತಿಗೆ ಕಷ್ಟ ಕಾಲದಲ್ಲಿ ನೀವು ಸಹಾಯ ಮಾಡಿದ್ದರಂತೂ ಮುಗಿದೇ ಹೋಯಿತು. 'ನೀನೆ ಸಾಕಿದ ಗಿಣಿ' ಹಾಡಿನ ಪ್ರತಿ ಪದದ ಭಾವಾರ್ಥ ನೀವು ಬಿಡಿಸಿ ಹೇಳಬಲ್ಲಿರಿ.

 

ಆಗಿ ಹೋದದ್ದಕ್ಕೆ ಕೊರಗುವುದಕ್ಕಿಂತ, ಮುಂದೆ ಮಾಡಬೇಕಾದ್ದರ ಬಗ್ಗೆ ಯೋಚಿಸುವುದು ಜಾಣತನ. ಆದರೆ ಮುಂದಿನ ದಾರಿಗಳು ಎಲ್ಲವೂ ನೋವಿನಿಂದ ಕೂಡಿರುತ್ತವಲ್ಲ. ನೀವು ಅವರನ್ನು ಕ್ಷಮಿಸಿದರೂ, ಅವರು ಮತ್ತೆ ಕತ್ತಿ ಮಸೆಯತೊಡಗುತ್ತಾರೆ. ಮತ್ತೆ ಅವರನ್ನು ನಂಬುವುದು ರಾತ್ರಿ ಕಂಡ ಭಾವಿಯಲ್ಲಿ ಹಗಲು ಬಿದ್ದ ಹಾಗೆ. ತಣ್ಣನೆಯ ಕ್ರೌರ್ಯದ ನರಭಕ್ಷಕ ಹುಲಿ ಬದಲಾದ ಕಥೆ ಎಲ್ಲಾದರೂ ಕೇಳಿದ್ದೀರಾ? ಸಾಧ್ಯವಾದಲ್ಲಿ ಆ ಸಂಬಂಧದಿಂದ ಹೊರ ಬರುವುದು ಇಲ್ಲವಾದಲ್ಲಿ ಮನಸ್ಸಿನಿಂದ ಕಿತ್ತು ಹಾಕುವುದು ನಿಮಗೆ ಉಳಿದಿರುವ ದಾರಿ. ಅವರಿಗಿರುವ ಆಯುಧಗಳನ್ನೆಲ್ಲ ಕಿತ್ತು ಹಾಕಿ, ಅವರಿಗೆ ನಿಮ್ಮನ್ನು ಘಾಸಿಗೊಳಿಸುವ ಮಾರ್ಗಗಳನ್ನೆಲ್ಲ ಮುಚ್ಚಿ ಹಾಕದಿದ್ದರೆ, ಮತ್ತೆ ಹಳೇ ಅನುಭವಗಳಿಗೆ ನೀವು ತಯಾರಾಗಬೇಕು. 'ಬ್ಲಾಕ್ ಮೇಲ್' ಮಾಡುವವರನ್ನು ನೀವು ಹೊರ ಸಮಾಜಕ್ಕೆ ಬಹಿರಂಗ ಪಡಿಸಿದಾಗ, ಅವರ ಆಟಗಳು ಮತ್ತು ಅವುಗಳಿಗಿರುವ ಕಿಮ್ಮತ್ತು ಇವುಗಳ ಸತ್ಯ ದರ್ಶನ ಅವರಿಗೆ ಆಗಿಯೇ ತೀರುತ್ತದೆ. ಆಗ ನಿಮ್ಮನ್ನು ಬಿಟ್ಟು ಬೇರೆ ಬಲಿಪಶುವನ್ನು ಅವರು ಹುಡುಕತೊಡಗುತ್ತಾರೆ. ಅವರೆಂದಿಗೂ ಬದಲಾಗುವುದಿಲ್ಲ. ಬದಲಾಗಬೇಕಾದದ್ದು ನಾವುಗಳು ಅಷ್ಟೇ.

Friday, October 29, 2021

ಆಡಿಸಿ ನೋಡು, ಬೀಳಿಸಿ ನೋಡು, ಒಡೆಯದೆ ಬಿಡದು

ಲವವಿಕೆಯ ಅಪ್ಪು ಇನ್ನಿಲ್ಲ ಎಂದರೆ ಅದು ಬೇಸರಕ್ಕೂ ಮೀರಿದ ನೋವಿನ ಸಂಗತಿ. ದೈವದಾಟವೋ, ವಿಧಿಯ ಬರಹವೋ, ರಾಜಕುಮಾರನೆಂಬ ಗೊಂಬೆ ಉರುಳಿ ಬಿದ್ದು ಒಡೆದು ಹೋಗಿದೆ. 'ವಸಂತ ಗೀತ', 'ಎರಡು ನಕ್ಷತ್ರಗಳು', 'ಯಾರಿವನು?', 'ಭಕ್ತ ಪ್ರಹ್ಲಾದ', 'ಚಲಿಸುವ ಮೋಡಗಳು', 'ಹೊಸ ಬೆಳಕು' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಪ್ಪು ವನ್ನು ನೋಡುತ್ತಾ ಬೆಳೆದ ನನಗೆ, ಅಪ್ಪು ಒಬ್ಬ ನಟನಲ್ಲ, ಬದಲಿಗೆ ಕನ್ನಡ ಚಲನಚಿತ್ರರಂಗ ಪರಂಪರೆಯ ಒಂದು ಭಾಗ. 'ಬೆಟ್ಟದ ಹೂ' ಇಷ್ಟು ಬೇಗ ಬಾಡಿ ಹೋಗಬಾರದಿತ್ತು ಎಂದು ನಮಗೆ ಅನ್ನಿಸಿದರೂ, ಆಡಿಸುವಾತನ ಕರೆಗೆ ಯಾರು ಇಲ್ಲವೆನ್ನಲಾಗದು ಎನ್ನುವ ಸತ್ಯ ಅಪ್ಪು ನಮಗೆ ನೆನಪಿಸಿ ಹೋಗಿದ್ದಾರೆ. ಆತನಿಗೊಂದು ಭಾವಪೂರ್ಣ ಶೃದ್ಧಾಂಜಲಿ.


'ಕತ್ತಲಲ್ಲಿ ನ್ಯಾಯವಿಟ್ಟನು, 

ನಮ್ಮ ಶಿವ ಕಣ್ಣುಗಳ ಕಟ್ಟಿಬಿಟ್ಟನು

  

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು'




Thursday, October 7, 2021

ಕನಸು, ವಾಸ್ತವ ಮತ್ತು ಮಾಯೆ

ನಿಮಗೆ ನಡು ರಾತ್ರಿಯಲ್ಲಿ ಭೀಕರವಾದ ದುಃಸ್ವಪ್ನ ಬೀಳುತ್ತದೆ. ಅದು ನಿಮ್ಮಲ್ಲಿ ಭಯ ಹುಟ್ಟಿಸಿ, ನಿಮ್ಮ ಉದ್ವೇಗ ಹೆಚ್ಚಾಗಿ ನಿದ್ದೆಯಿಂದ ಎಚ್ಚರವಾಗುತ್ತದೆ. ಎದ್ದ ಮೇಲೆ ಕ್ರಮೇಣ ಅದು ಒಂದು ಕನಸು ಮಾತ್ರ ಎನ್ನುವುದು ನಿಮಗೆ ಅರಿವಿಗೆ ಬರುತ್ತದೆ. ಆಗ ನಿರಾಳವಾಗುತ್ತೀರಿ. ದೇವರಿಗೆ ಧನ್ಯವಾದ ಸಲ್ಲಿಸುತ್ತೀರಿ. ಆದರೆ ಕನಸು ನಡೆದಷ್ಟೂ ಹೊತ್ತು ಅದು ಕನಸು ಎನ್ನುವ ಅರಿವೆಯೇ ನಿಮಗೆ ಇದ್ದಿಲ್ಲ. ಅರಿವು ಬಂದಿದ್ದು ಕನಸಿನಿಂದ ಹೊರ ಬಂದ ಮೇಲೆಯಷ್ಟೇ ಅಲ್ಲವೇ?


ಸಾವಿನ ಅನುಭವವು ಹೀಗೆಯೇ ಇರಬಹುದಲ್ಲವೇ? ಸತ್ತ ನಂತರ ಎಚ್ಚರವಾಗಿ, ನಿರಾಳವಾಗಿ, ಬದುಕಿದ್ದು ಒಂದು ಕನಸಿನ ತರಹ, ಅದು ನಿಜವಲ್ಲ ಎಂದು ಅನಿಸಲು ಸಾಧ್ಯವಿದೆ ಅಲ್ಲವೇ? ಕನಸಿನಲ್ಲಿ ಇದ್ದಷ್ಟು ಹೊತ್ತು ಅದು ವಾಸ್ತವವೇ ಎಂದು ತೋರುತ್ತಿತ್ತು. ಅದು ಮುಗಿದ ಮೇಲೆಯೇ ಅದು ವಾಸ್ತವವಲ್ಲ ಎನ್ನುವುದು ಅರಿವಿಗೆ ಬಂದಿದ್ದು. ಹಾಗೆಯೆ ನಮ್ಮ ಜೀವನವು ಕೂಡ, ಬದುಕಿರುವಾಗ ವಾಸ್ತವ ಎಂದು ಅನ್ನಿಸಿದರೂ ಅದು ಮುಗಿದ ಮೇಲೆ ಅದರ ನಿಜ ಗತಿ ಗೊತ್ತಾಗುವುದು ಅಲ್ಲವೇ?


ಕನಸು, ಜೀವನ ಎರಡು ವಾಸ್ತವ ಅಲ್ಲ ಅಂದರೆ ಅವು ಏನು? ಅದು ಮಾಯೆ ಎನ್ನುವ ಉತ್ತರ ನೀಡುತ್ತವೆ ನಮ್ಮ ವೇದ-ಉಪನಿಷತ್ ಗಳು. Elon Musk ಎನ್ನುವ ಆಧುನಿಕ ಕಾಲದ ಮೇಧಾವಿ "We're Probably Living in a Simulation " ಎಂದು ಹೇಳಿದನಲ್ಲ. ಹಾಗಾದರೆ ನಾವು ನಾಟಕದ ವೇಷಧಾರಿಗಳೇ? ಅನ್ಯಲೋಕದಲ್ಲಿರುವ ಯಾರೋ ನಮ್ಮನ್ನು ವಿಡಿಯೋ ಗೇಮ್ ತರಹ ಆಡುತ್ತಿರಬಹುದೇ? ಈ ಆಟವನ್ನು ಬಲ್ಲವರು, ಜೋತಿಷ್ಯ ಶಾಸ್ತ್ರ ಬರೆದರೆ? ಎಷ್ಟೋ ಸಲ ಜೋತಿಷ್ಯ ಹೇಳಿದಂತೆ ಕರಾರುವಕ್ಕಾಗಿ ನಡೆಯುತ್ತದೆಯಲ್ಲ. ಹಾಗಾದರೆ ಇಲ್ಲಿ ನಮಗೊಪ್ಪಿಸಿದ ಸಂಭಾಷಣೆಯನ್ನು ಹೇಳಿ ಹೋಗವುದು ಮಾತ್ರ ನಮ್ಮ ಕರ್ತವ್ಯವೇ? ಹಾಗಂತ ನಮ್ಮ ಪ್ರಯತ್ನಕ್ಕೆ ಫಲ ಇಲ್ಲ ಎಂದೇನಿಲ್ಲ. ಹಾಗಾದರೆ ಈ ಮಾಯೆ ಎನ್ನುವ ಚಿತ್ರದ ನಟರು, ನಿರ್ದೇಶಕರುಗಳು ನಾವುಗಳೇ? ನಮ್ಮ ಕರ್ಮಗಳಿಗೆ ತಕ್ಕಂತೆ ನಮಗೆ ಇಲ್ಲಿ ಪಾತ್ರ ಸಿಕ್ಕಿತೇ? ಪಾತ್ರ ಚೆನ್ನಾಗಿ ನಿಭಾಯಿಸಿದರೆ ಹೆಚ್ಚಿನ ಮಹತ್ವದ ಪಾತ್ರಗಳು ಸಿಗುವವೇ? ಸಿಕ್ಕಿದ ಪಾತ್ರ ಬಿಟ್ಟು ನಮಗೆ ಬೇರೆ ಏನಾದರು ವ್ಯಕ್ತಿತ್ವ ಇರಲು ಸಾಧ್ಯವೇ?


ವೇದಾಂತ, ವಿಜ್ಞಾನ ಎರಡು ಸಂಧಿಸಿದಾಗ ತರ್ಕಬದ್ಧವಾದ ಉತ್ತರಗಳನ್ನು ಪಡೆಯಬಹುದು. ಆದರೆ ಅಲ್ಲಿಯವರೆಗೆ ಕಾಯುವ ಅವಶ್ಯಕತೆ ಇಲ್ಲ ಎನ್ನುತ್ತಾರೆ ನಮ್ಮ ಸಾಧು-ಸಂತರು. ಈ ಪ್ರಶ್ನೆಗಳಿಗೆ ಅವರು ಹುಡುಕಿಕೊಂಡ ಮಾರ್ಗ 'ಧ್ಯಾನ'. ಧ್ಯಾನ ಉತ್ತರ ಕೊಡುವ ಬದಲು, ನಮ್ಮ ಪ್ರಶ್ನೆಗಳಿಗೆ ಸ್ಪಷ್ಟತೆ ಕೊಡಲಾರಂಭಿಸುತ್ತದೆ. ಕ್ರಮೇಣ ನಮ್ಮ ಪ್ರಶ್ನೆಗಳೇ ಇಲ್ಲವಾಗಿ ಹೋಗಿಬಿಡುತ್ತವೆ. ಭಾಷೆ-ತರ್ಕವನ್ನು ಮೀರಿದ ಮೌನಕ್ಕೆ ಅಲ್ಲಿ ಪ್ರಾಶಸ್ತ್ಯ. ಆ ದಿವ್ಯ ಮೌನ ನಮ್ಮನ್ನು ಮಾಯೆಯಿಂದ ಹೊರದೂಡುತ್ತದೆ. ಇದು ಯೋಗಿಗಳ ಅನುಭವ. ನನಗೆ ಇದರ ಅನುಭವ ಇನ್ನು ಆಗಿರದಿದ್ದರೂ, ಅದು ನಿಜ ಅನ್ನಿಸತೊಡಗಿದೆ.

Tuesday, October 5, 2021

ಎಲ್ಲೂ ಇರದ ಆದರ್ಶ ಸಂಗಾತಿಯ ಬಯಸುತ್ತ

ನಾನು ೫-೬ ವರ್ಷದವನಿದ್ದಾಗ ನನ್ನ ಅಕ್ಕ ಚಿತ್ರ ಮಂದಿರಕ್ಕೆ ಒಬ್ಬಳೇ ಹೋಗಲಾಗದೆ, ನನಗೆ ಒಂದು  ಪಾರ್ಲೆ-ಜಿ ಬಿಸ್ಕಿಟ್ ಕೊಡಿಸಿಕೊಂಡು ಜೊತೆಗೆಂದು ಕರೆದುಕೊಂಡು ಹೋಗುತ್ತಿದ್ದಳು. ಒಂದೇ ಚಿತ್ರ ಅದು ಆಗ ನನಗೆ ಅರ್ಥವಾಗದದಿದ್ದರೂ ಹಲವಾರು ಬಾರಿ ನೋಡಿದ್ದ ನೆನಪಿದೆ. ಅದು ೧೯೮೩ ರಲ್ಲಿ ಬಿಡುಗಡೆಯಾದ 'ಬೆಂಕಿಯ ಬಲೆ' ಚಿತ್ರ. ಗಂಡ-ಹೆಂಡತಿ ನಡುವಿನ ನವಿರು ಪ್ರೇಮ ದುಃಖಾಂತ ಕಾಣುವ ಚಿತ್ರ. ಆ ಚಿತ್ರದಲ್ಲಿ ನಾಯಕ-ನಾಯಕಿ 'ಬಿಸಿಲಾದರೇನು, ಮಳೆಯಾದರೇನು' ಎಂದು ಯಾವ ಕಷ್ಟವನ್ನು ಜೊತೆಯಲ್ಲೇ ಎದುರಿಸುವ ಹಾಡು ಹಾಡುತ್ತಾರೆ. ಗಂಡ ಅನಾರೋಗ್ಯದಿಂದ ಸಾವನ್ನಪ್ಪಿದಾಗ, ಹೆಂಡತಿ  ಅವನ ಹೆಣ ಸಾಗಿಸುವ ಬಂಡಿಯಲ್ಲೇ ಪ್ರಾಣ ತ್ಯಜಿಸುತ್ತಾಳೆ. ಅಂದಿಗೆ ಆ ಚಿತ್ರ ನೋಡಿದವರು ಗಂಡ-ಹೆಂಡತಿ ಅಂದರೆ ಅನಂತನಾಗ್, ಲಕ್ಷ್ಮಿ ತರಹ ಇರಬೇಕು ಎಂದು ಮಾತನಾಡಿಕೊಂಡಿದ್ದರು.

 

ಕಥೆ, ಕಾದಂಬರಿಗಳು, ಚಲನಚಿತ್ರಗಳಲ್ಲಿ ಅದರ ಕರ್ತೃಗಳು ಸದುದ್ದೇಶದಿಂದ ಆದರ್ಶ ತುಂಬುತ್ತಾರೆ. ಅವರ ಉದ್ದೇಶ ಸಮಾಜ ಅದನ್ನು ಅನುಕರಿಸಲಿ ಎನ್ನುವುದು. ಆದರೆ ಅವು ವಾಸ್ತವ ಕಥೆಯಿಂದ ದೂರ ಇರುತ್ತವೆ. ಆ ಚಿತ್ರದ ನಾಯಕಿ ಲಕ್ಷ್ಮಿ ನಿಜ ಜೀವನದಲ್ಲಿ ಮೂರು ಮದುವೆಯಾಗಿ, ಯಾವ ಗಂಡ ಸತ್ತರೆ ತನಗೇನು ಎನ್ನುವಂತೆ ಹಾಯಾಗಿಲ್ಲವೇ? ಹಾಗೆಯೇ ಅನಂತನಾಗ್ ಕೂಡ ತಮ್ಮ ನಿಜ ಜೀವನದ ಹೆಂಡತಿಗೆ 'ನೀನಿಲ್ಲದೆ ಬದುಕುವ ಶಕ್ತಿ ನನಗಿಲ್ಲ' ಎಂದು ಹೇಳಿದ್ದಾರೆಯೇ ಎನ್ನುವುದು ಅನುಮಾನ. ಚಿತ್ರಕಥೆಯೇ ಬೇರೆ. ನಿಜ ಜೀವನವೇ ಬೇರೆ. ಏಕೆ ಹೀಗೆ?

 

ಪ್ರತಿಯೊಬ್ಬ ಮನುಷ್ಯ, ಗಂಡಾಗಲಿ, ಹೆಣ್ಣಾಗಲಿ ಅವರದೇ ಆದ ವೈಯಕ್ತಿಕ ಆಸೆ, ಹಂಬಲಗಳನ್ನು ಹೊಂದಿರುತ್ತಾರೆ. ಬೇರೆ ಬೇರೆ ಕುಟುಂಬಗಳಲ್ಲಿ, ಬೇರೆ ವಾತಾವರಣದಲ್ಲಿ ಬೆಳೆದ ಇಬ್ಬರು, ಮದುವೆಯಲ್ಲಿ ಜೊತೆಯಾದಾಗ ಅವರಿಬ್ಬರ ನಡುವೆ ಸಾಮ್ಯತೆಗಳಿಗಿಂತ, ಬೇರೆ ಬೇರೆ ಪ್ರವೃತ್ತಿಗಳೇ ಹೆಚ್ಚಾಗಿರುತ್ತವೆ. ಇಬ್ಬರ ಆಸೆಗಳು ವಿರುದ್ಧ ದಿಕ್ಕಿನ ಕಡೆಗೆ ಸೆಳೆದಾಗ, ಮದುವೆ ಇಬ್ಬರ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಇಬ್ಬರಲ್ಲಿ ಒಬ್ಬರು ಸಹನೆ ಕಳೆದುಕೊಂಡರೂ ಸಾಕು. ದಾಂಪತ್ಯದ ಬಿರುಕು ಅವರಿಬ್ಬರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಅಲ್ಲಿಂದ ಶುರುವಾಗುವ ದೋಷಾರೋಪಣೆಗಳು ಕುಟುಂಬದ ಇತರೆ ಸದಸ್ಯರನ್ನು ಸೆಳೆದುಕೊಂಡುಬಿಡುತ್ತವೆ. ಆದರ್ಶ ದಂಪತಿಗಳ ಜೀವನ ದ್ವೇಷಮಯವಾಗುತ್ತದೆ.

 

ಇದಕ್ಕೆಲ್ಲ ಮೂಲ ಕಾರಣ, ಗಂಡ ತನಗೆ ತಕ್ಕ ಹೆಂಡತಿ ಸಿಕ್ಕಿಲ್ಲವೆಂದುಕೊಳ್ಳುವುದು. ಮತ್ತು ಹೆಂಡತಿ ನಾನಾದಕ್ಕೆ ಇವರ ಜೊತೆ ಸಂಸಾರ ಮಾಡಿಕೊಂಡು ಹೋಗುತ್ತಿದ್ದೇನೆ ಎನ್ನುವ ಭಾವದಲ್ಲಿ ಬದುಕುವುದು. ಎಂತಹ ಹೆಂಡತಿ ಸಿಕ್ಕಿದ್ದರೂ, ತಾನು ಜಗಳವಾಡುತ್ತಿದ್ದ ಎನ್ನುವುದು ಗಂಡ ಒಪ್ಪುವುದಿಲ್ಲ. ಇವನನ್ನು ಬಿಟ್ಟು, ಇನ್ನೂ ಮೂರು ಮದುವೆಯಾದರು ತಾನು ಹೊಸ ಗಂಡನಲ್ಲಿ ಸಮಸ್ಯೆ ಹುಡುಕದೆ ಬಿಡುತ್ತಿದ್ದಿಲ್ಲ ಎನ್ನುವುದು ಹೆಂಡತಿ ಒಪ್ಪುವುದಿಲ್ಲ. ಸಮಸ್ಯೆ ಅವರ ಮದುವೆಯಲ್ಲಿಲ್ಲ. ಅವರ ವ್ಯಕ್ತಿತ್ವದಲ್ಲಿದೆ. ಅವರಿಬ್ಬರೂ 'ಬೆಂಕಿಯ ಬಲೆ' ಚಿತ್ರದ ಆದರ್ಶ ದಂಪತಿಗಳನ್ನು ನೋಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅನಂತನಾಗ್, ಲಕ್ಷ್ಮಿ ಬೇರೆಯೇ ತರಹದ ವ್ಯಕ್ತಿತ್ವ ಹೊಂದಿದ್ದಾರೆ ಎನ್ನುವುದು ಮರೆತು ಹೋಗಿದ್ದಾರೆ. ಚಿತ್ರಕಥೆಯಲ್ಲಿರುವ ನಾಯಕ-ನಾಯಕಿಗಿರುವ ಹೊಂದಾಣಿಕೆಯನ್ನು ಕಂಡು ಬೆರಗಾಗುತ್ತಾರೆ. ಆದರೆ ತಾವು ಮಾತ್ರ ಸಣ್ಣ-ಪುಟ್ಟ ಹೊಂದಾಣಿಕೆಗೂ ತಯ್ಯಾರು ಇರುವುದಿಲ್ಲ. ಎಲ್ಲೂ ಇರದ ಆದರ್ಶ ಸಂಗಾತಿ ತಮಗೆ ಸಿಕ್ಕಿದ್ದರೆ ಎಷ್ಟು ಚೆನ್ನ ಇತ್ತು ಎನ್ನುವ ಕೊರಗಿನಲ್ಲೇ ಸಮಯ ದೂಡುತ್ತಾರೆ. ಇರುವ ಸಂಬಂಧಗಳನ್ನು ಆದರ್ಶವಾಗಿಸಿಕೊಳ್ಳಲು ಪ್ರಯತ್ನ ಮಾಡುವುದರಲ್ಲಿ ಸೋತು ಹೋಗುತ್ತಾರೆ.

Saturday, October 2, 2021

ಗೀತೆಯ ಹಿಂದಿನ ಸಾಹಿತಿ: ಕಣಗಾಲ್ ಪ್ರಭಾಕರ ಶಾಸ್ತ್ರಿ

ಹಳೆಯ ಹಾಡುಗಳು ಮಧುರ ಮತ್ತು ಅರ್ಥಪೂರ್ಣ ಇದ್ದವಲ್ಲವೇ? ಅದರ ಹಿಂದಿನ ಕಾರಣ ಗೀತೆ ರಚನೆಕಾರರಿಗಿದ್ದ ಆಳವಾದ ಜೀವನ ಅನುಭವ, ಕನ್ನಡ ಭಾಷೆಯ ಮೇಲಿನ ಪ್ರೀತಿ ಮತ್ತು ಗೀತೆಯ ಸವಿಯನ್ನು ಪ್ರೇಕ್ಷಕರಿಗೆ ಸರಳ ಪದಗಳಲ್ಲಿ, ಪ್ರಾಸಬದ್ಧವಾಗಿ ಮುಟ್ಟಿಸುವ ಕಲೆ. ೬೦ ಮತ್ತು ೭೦ ರ ದಶಕದಲ್ಲಿ ತೆರೆ ಕಂಡ ಚಿತ್ರಗಳಲ್ಲಿ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಮತ್ತು ಗೀತೆಗಳನ್ನು ಬರೆದವರು ಕಣಗಾಲ್ ಪ್ರಭಾಕರ ಶಾಸ್ತ್ರಿ. ಇವರು ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅಣ್ಣ. ಕಡು ಬಡತನದ ಕುಟುಂಬದಲ್ಲಿ ಬೆಳೆದ ಇವರು, ತಾತನ ತೊಡೆಯ ಮೇಲೆ ಕುಳಿತು ಕೇಳಿದ ಕಥೆಗಳು ಇವರಲ್ಲಿ ಸಾಹಿತ್ಯನ್ನು ಹುಟ್ಟು ಹಾಕಿದವು. ಹೊಟ್ಟೆ ಪಾಡಿಗಾಗಿ ಚಿಕ್ಕ ವಯಸ್ಸಿನಲ್ಲೇ ನಾಟಕ ಕಂಪನಿ ಸೇರಿದ ಇವರು ಸರಸ್ವತಿಯನ್ನು ಒಲಿಸಿಕೊಂಡು, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.


೧೯೫೮ ರಲ್ಲಿ ತೆರೆ ಕಂಡ 'ಸ್ಕೂಲ್ ಮಾಸ್ಟರ್' ಎನ್ನುವ ಚಿತ್ರಕ್ಕೆ ಇವರು ಬರೆದ ಗೀತೆ 'ಅತಿ ಮಧುರ ಅನುರಾಗ' ಜನಪ್ರಿಯವಾಯಿತು. ೧೯೬೩ ರಲ್ಲಿ ತೆರೆ ಕಂಡ ರಾಜಕುಮಾರ್ ಅಭಿನಯದ 'ಕುಲ ವಧು' ಚಿತ್ರದ 'ಒಲವಿನ ಪ್ರಿಯಲತೆ' ಹಾಡು ಗಮನ ಸೆಳೆಯಿತು. ೧೯೭೦ ರಲ್ಲಿ ಬಂದ 'ನನ್ನ ತಮ್ಮ' ಚಿತ್ರದ 'ಇದೆ ಹೊಸ ಹಾಡು, ಹೃದಯಸಾಕ್ಷಿ ಹಾಡು, ಎದೆಯಾಸೆ ಭಾಷೆ ಈ ಹಾಡು' ಎನ್ನುವ ಗೀತೆ ಇವರ ಅಂತರಂಗವನ್ನೇ ಪ್ರತಿನಿಧಿಸುತ್ತಿತ್ತು. 'ಶ್ರೀ ಕೃಷ್ಣದೇವರಾಯ' ಚಿತ್ರದ 'ತಿರುಪತಿ ಗಿರಿ ವಾಸ ಶ್ರೀ ವೆಂಕಟೇಶ' ಹಾಡು ಕೂಡ ಇವರ ರಚನೆಯೇ. ಅಲ್ಲಿಂದ ಸಾಲು ಸಾಲು ಚಿತ್ರಗಳಿಗೆ ಗೀತೆ, ಸಂಭಾಷಣೆ ರಚಿಸುವುದರಲ್ಲಿ ಪ್ರಭಾಕರ ಶಾಸ್ತ್ರಿ ಸಂಪೂರ್ಣ ಮುಳುಗಿ ಹೋದರು. ಆದರೆ ಇವರ ದೈತ್ಯ ಪ್ರತಿಭೆಯ ಅನಾವರಣವಾಗಿದ್ದು ಅವರ ತಮ್ಮ ಪುಟ್ಟಣ್ಣ ಅವರು ತಮ್ಮ ಚಿತ್ರಗಳಿಗೆ ಇವರಿಂದ ಹಾಡು ಬರೆಸಲು ಆರಂಭ ಮಾಡಿದಾಗ.


'ಶರಪಂಜರ' ಚಿತ್ರದ 'ಬಿಳಿಗಿರಿ ರಂಗಯ್ಯ, ನೀನೇ ಹೇಳಯ್ಯ' ಎನ್ನುವ ಮನೋಜ್ಞ ಹಾಡು ಇವರಿಂದ ಹುಟ್ಟಿ ಬಂತು. 'ಸಾಕ್ಷಾತ್ಕಾರ' ಚಿತ್ರಕ್ಕೆ ಇವರು ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಹೀಗೆ ಸಮಗ್ರ ಸಾಹಿತ್ಯದ ಜವಾಬ್ದಾರಿ ಹೊತ್ತರು. 'ರಂಗನಾಯಕಿ', 'ಶುಭ ಮಂಗಳ' ಚಿತ್ರಗಳಿಗೆ ಇವರು ರಚಿಸಿದ ಹಾಡುಗಳು ಚಿತ್ರಕ್ಕೆ ಮೆರುಗು ತಂದು ಕೊಟ್ಟವು. ಭಾಷಾ ಪ್ರಜ್ಞೆಯನ್ನು, ಭಾವನೆಗಳ ಜೊತೆ ಮೇಳೈಸಿ ಇವರು ರಚಿಸಿದ 'ಶುಭ ಮಂಗಳ' ಚಿತ್ರದ ಈ ಗೀತೆ ನನಗೆ ಅಚ್ಚು ಮೆಚ್ಚು.


"ಶುಭ ಮಂಗಳ

ಸುಮುಹೂರ್ತವೆ 

ಶುಭವೇಳೆ

ಅಭಿಲಾಷೆಯ

ಅನುಬಂಧವೇ

ಕರೆಯೋಲೆ


ಚೈತ್ರ ವಸಂತವೇ ಮಂಟಪ ಶಾಲೆ 

ತಾರಾಲೋಕದ ದೀಪಮಾಲೆ

ಸದಾನುರಾಗವೇ ಸಂಬಂಧ ಮಾಲೆ

ಬದುಕೇ ಭೋಗದ ರಸರಾಸ ಲೀಲೆ


ಭಾವತರಂಗವೇ ಸಪ್ತಪದಿ ನ ಓಲೆ 

ಭಾವೈಕ್ಯ ಗಾನವೇ ಉರುಟಣೆ ಉಯ್ಯಾಲೆ 

ಭಾವೋನ್ಮಾದವೇ ಶೃಂಗಾರ ಲೀಲೆ 

ಬದುಕೇ ಭಾವದ ನವರಾಗಮಾಲೆ


ಈ ಜೀವನವೇ ನವರಂಗ ಶಾಲೆ

ಯೌವನ ಕಾಲವೇ ಆನಂದ ಲೀಲೆ 

ಹೃದಯ ಮಿಲನವೇ ಹರುಷದ ಹಾಲೆಲೆ

ಬದುಕೇ ಸುಮಧುರ ಸ್ನೇಹ ಸಂಕೋಲೆ


ಶುಭ ಮಂಗಳ

ಸುಮುಹೂರ್ತವೆ 

ಶುಭವೇಳೆ

ಅಭಿಲಾಷೆಯ

ಅನುಬಂಧವೇ

ಕರೆಯೋಲೆ"


ನಮ್ಮ ನಿಮ್ಮ ಜೀವನವನ್ನು ಒಂದೆರಡು ಭಾವಗಳು ಆಳಿದರೆ, ಕಣಗಾಲ್ ಪ್ರಭಾಕರ ಶಾಸ್ತ್ರಿ ತರಹದ ಕವಿಗಳ ಬದುಕೇ ಭಾವದ ನವರಾಗಮಾಲೆ.