Labels
Saturday, August 24, 2024
ಸಾವನ್ನು ನಾವು ಏಕೆ ಒಪ್ಪಿಕೊಳ್ಳುವುದಿಲ್ಲ?
Saturday, August 3, 2024
ನೀನಾರಿಗಾದೆಯೋ ಎಲೆ ಮಾನವ?
Friday, July 5, 2024
ಗುಡಿ ಸೇರದ, ಮುಡಿ ಏರದ
ಹೂವಿನ ಸಾರ್ಥಕತೆ ಇರುವದೇ ಅಲ್ಲಿ ಅಲ್ಲವೇ? ಗುಡಿ ಸೇರಿ ಪೂಜಿಸಿಕೊಂಡರೆ, ಮುಡಿ ಏರಿ ಆಕರ್ಷಿಸದೇ ಹೋದರೆ ಹೂವಾಗಿ ಅರಳಿ ಏನು ಉಪಯೋಗ? ಆದರೆ ಕಡೆಗಣಿಸಿಕೊಳ್ಳುವ ಹೂಗಳಿಗೇನು ಕಮ್ಮಿ ಇಲ್ಲ.
ಇಷ್ಟಕ್ಕೂ
ಆರಾಧಕ ಇಲ್ಲದೆ ಹೋದರೆ ಸೌಂದರ್ಯಕ್ಕೆ ಏನು ಬೆಲೆ? ಯಾವುದೊ
ಕಾಡ ಮೂಲೆಯಲ್ಲಿ ಘಮ್ಮೆನೆ ಅರಳಿ ಹಾಗೆಯೆ ಬಾಡಿ
ಹೋಗುವ ಹೂವುಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ?
ಹೂವಿಗೆ ಬೆಲೆ ಬರುವುದು ಅದರ
ಬಣ್ಣಗಳನ್ನು ಮೆಚ್ಚಿಕೊಳ್ಳುವ ಚಿತ್ರಕಲಾವಿದನಿಂದ. ಅದರ ಸುವಾಸನೆಯನ್ನು ಮೆಚ್ಚಿಕೊಳ್ಳುವ
ಜನರಿಂದ. ಅದನ್ನು ಹಾರವಾಗಿ ದೇವರ ಕೊರಳಿಗೆ ಅರ್ಪಿಸುವ
ಭಕ್ತರಿಂದ. ಅದನ್ನು ಮುಡಿದು ತಮ್ಮ ಅಂದ ಹೆಚ್ಚಿಸಿಕೊಳ್ಳುವ
ಹೆಂಗಸರಿಂದ.
ಅದನ್ನೇ
ನಮ್ಮ ಜನರ ಜೀವನಕ್ಕೆ ಹೋಲಿಸಿ
ನೋಡೋಣ. ಹೆಚ್ಚಿನ ಪ್ರಮಾಣದಲ್ಲಿ ಹಣ ಗಳಿಸುವ ಜನರಿಗೆ
ಪ್ರಪಂಚದ ಎಲ್ಲ ಮೂಲೆಯಲ್ಲಿ ಗೌರವ
ಇದೆ. ನಮ್ಮ ದೇಶದಲ್ಲಿ ಕ್ರಿಕೆಟ್
ಆಟಗಾರರಿಗೆ, ಚಲನ ಚಿತ್ರ ಕಲಾವಿದರಿಗೆ,
ಧರ್ಮ ಗುರುಗಳಿಗೆ, ಮಠಾಧಿಪತಿಗಳಿಗೆ ಇರುವ ಗೌರವ ಹೆಚ್ಚಿನದು.
ಹಾಗೆಯೆ ಹೆಚ್ಚಿನ ಹಣ, ಜನಪ್ರಿಯತೆ ಗಳಿಸದೆ
ಇದ್ದರೂ, ಮಕ್ಕಳನ್ನು ತಿದ್ದುವ ಮೇಷ್ಟ್ರುಗಳಿಗೆ ಸಮಾಜದ ಮನ್ನಣೆ ಇದೆ. ಹಾಗೆಯೆ ಗಡಿ
ಕಾಯುವ ಸೈನಿಕ ಪ್ರಾಣ ತೆತ್ತಾಗ ಅವನ ಅಂತ್ಯ ಸಂಸ್ಕಾರಕ್ಕೆ
ಇಡೀ ಊರಿನ ಜನ ಬಂದು
ಗೌರವ ಕೊಡುತ್ತಾರೆ. ಅವರೆಲ್ಲ ನಿಸ್ಸಂದೇಹವಾಗಿ ಗುಡಿ ಸೇರುವ ಹೂಗಳು.
ಬ್ಯಾಂಕ್
ನಲ್ಲಿ ಸಾಲ ಮಂಜೂರು ಮಾಡುವ
ಆಫೀಸರ್ ಗಳು, ಡಿ.ಸಿ.
ಆಫೀಸಿನಲ್ಲಿ ಕೆಲಸ ಮಾಡಿಸಿಕೊಳ್ಳುವ ಕ್ಲರ್ಕುಗಳು
ಗುಡಿ ಸೇರದೆ ಇದ್ದರೂ ಅವಶ್ಯಕತೆ ಇರುವವರ ಮುಡಿ ಸೇರುತ್ತಾರೆ. ಪ್ರತಿ
ದಿನ ಬೇರೆ ಬೇರೆಯವರ ಮುಡಿ
ಸೇರಿ ಕೃತಜ್ಞರಾಗುತ್ತಾರೆ.
ಇನ್ನು
ಕೆಲವು ಜನರ ಸೇವೆ ಯಾರ
ಕಣ್ಣಿಗೂ ಗೌರವ ಕೊಡುವ ಹಾಗೆ
ಕಾಣುವುದಿಲ್ಲ. ಹೋಟೆಲಿನಲ್ಲಿ ತಿಂಡಿ ತಂದು ಕೊಡುವ ಸಪ್ಲಾಯಿರ್ಗಳು,
ರಸ್ತೆ ಕಸ ಗುಡಿಸುವ, ಚರಂಡಿ
ಸ್ವಚ್ಛಗೊಳಿಸುವ ಪೌರ ಕಾರ್ಮಿಕರು, ಸ್ಮಶಾನದಲ್ಲಿ
ಕುಣಿ ತೊಡುವವರು ಅವರುಗಳ ಕೆಲಸ ಯಾರಿಗೂ ಮಹತ್ವದ್ದು
ಅನಿಸುವುದಿಲ್ಲ. ಅವರುಗಳು ಗುಡಿ ಸೇರದ, ಮುಡಿ
ಏರದ, ಕಡೆಗಾಣಿಸೋ ಹೂಗಳು.
ಮನುಷ್ಯ
ಸಂಘ ಜೀವಿ. ಇಲ್ಲಿ ಪ್ರತಿಯೊಬ್ಬರಿಗೂ ತಮ್ಮ ಜೀವನ ಮಹತ್ವದ್ದು
ಎಂದು ಅನಿಸಿಕೊಳ್ಳುವ ಇರಾದೆ ಇದ್ದೆ ಇರುತ್ತದೆ. ಆದರೆ ನಮ್ಮ ಸಮಾಜ
ಕೆಲವರನ್ನು ಗುಡಿ ಸೇರಿಸಿ, ಕೆಲವರನ್ನು
ಮುಡಿಗೇರಿಸಿ ಉಳಿದೆಲ್ಲರನ್ನು ಯಾವುದೇ ಮುಲಾಜು ಇಲ್ಲದೆ ವ್ಯವಸ್ಥಿತವಾಗಿ ತುಳಿದು ಹಾಕುತ್ತದೆ. ಅವರುಗಳು ತಮ್ಮ ಜೀವನದ ಸಾರ್ಥಕತೆ
ಕಂಡು ಕೊಳ್ಳಲು ಪ್ರತಿ ದಿನ ಹೋರಾಡಬೇಕು. ಹೋರಾಡುವುದರಲ್ಲೇ
ಅವರ ಸಾರ್ಥಕತೆ ಅಡಗಿದೆ ಏನೋ?
Sunday, March 3, 2024
ಸೋತಾಗ ಹಣೆ ಬರಹ, ಅರ್ಥವಾಗದಿದ್ದಾಗ ಕರ್ಮ
Saturday, February 24, 2024
ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು
ಅಮಾವಾಸ್ಯೆ ಕಳೆದು ೫-೬ ದಿನಗಳಷ್ಟೇ ಆಗಿತ್ತು. ರಾತ್ರಿ ಹೊತ್ತು ಸೆಖೆ ತಾಳದೆ ಹೊರಗೆ ಬಾಲ್ಕನಿಯಲ್ಲಿ ಬಂದು ಮಲಗಿದೆ. ಸಹಜವಾಗಿ ಕಣ್ಣು ಆಕಾಶದತ್ತ ನೋಡಿತು. ಆ ಕಡೆ ಪೂರ್ತಿ ಕತ್ತಲು ಇಲ್ಲ, ಈ ಕಡೆ ಶುಭ್ರ ಬೆಳದಿಂಗಳು ಕೂಡ ಅಲ್ಲ. ಕೆಂಪು ದೀಪ ಮಿಟುಕಿಸುತ್ತ ಹಾರುವ ವಿಮಾನಗಳು ಇದು ಬೆಂಗಳೂರಿನ ಆಕಾಶ ಎನ್ನುವ ಸಂಜ್ಞೆ ಬಿಟ್ಟರೆ ಬೇರೆ ಏನು ಗೋಚರಿಸುತ್ತಿರಲಿಲ್ಲ. ಅಲ್ಲಿ ಚಂದ್ರನಿಲ್ಲ ಎನ್ನುವ ಕೊರತೆ ಎದ್ದು ಕಾಣುತ್ತಿತ್ತು.
ಕೇಳುತ್ತಿದ್ದ ೯೦ ರ ದಶಕದ ಹಿಂದಿ ಹಾಡುಗಳು ಕೂಡ ಅದೇ ಭಾವವನ್ನು ಹೊಮ್ಮಿಸುತಿದ್ದವು.
ಮೊದಲಿಗೆ ಆಶಿಕಿ ಚಿತ್ರದ ಗೀತೆ:
'ಚಾಂದ ಕಿ ಜರೂರತ್ ಹೈ ಜೈಸೇ ಚಾಂದನಿ ಕೆ ಲಿಯೇ,
ಬಸ್ ಏಕ್ ಸನಮ್ ಚಾಹಿಯೇ ಆಶಿಕಿ ಕೆ ಲಿಯೇ'
ಹೌದಲ್ಲವೇ? ಚಂದ್ರನಿಲ್ಲದೆ ಬೆಳೆದಿಂಗಳೆಲ್ಲಿ? ಪ್ರೇಯಸಿ ಇರದೇ ಪ್ರೀತಿ ಎಲ್ಲಿ?
ನಂತರ ಇನ್ನೊಂದು ಗೀತೆ 'ಹಮ್ ಹೈ ರಾಹಿ ಪ್ಯಾರ್ ಕೆ' ಚಿತ್ರದ್ದು
'ಜಬ್ ತಕ್ ನ ಪಡೆ ಆಶಿಕಿ ಕಿ ನಜರ್,
ಸಿಂಗಾರ್ ಅಧೂರಾ ರೆಹತಾ ಹೈ'
ಇದೂನು ಸರಿಯೇ. ಮೆಚ್ಚುವವರು ಇರದೇ ಹೋದರೆ ಸಿಂಗಾರಕ್ಕೆ ಯಾವ ಬೆಲೆ?
ಆಕಾಶಕ್ಕೂ ಒಂದು ಅಪೂರ್ಣತೆ ಇದೆ. ಅಲ್ಲಿ ಚಂದ್ರನಿದ್ದರೆ ಕಳೆ. ಇಲ್ಲದಿದ್ದರೆ ಅಲ್ಲಿ ಯಾವ ಆಕರ್ಷಣೆಯೂ ಇಲ್ಲ. ಅದು ಬರಿ ಕಗ್ಗತ್ತಲು.
ಹಗಲು ಹೊತ್ತಿನಲ್ಲಿ ಉರಿಯುವ ಸೂರ್ಯ ನಮಗೆ ಬೆವರಿಳಿಸಿ ಕಂಗಾಲು ಮಾಡಿ ಬಿಡುತ್ತಾನೆ. ಅದೇ ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು ಪ್ರತಿಫಲಗೊಂಡು ಆ ಬೆಳಕು ಉಷ್ಣತೆ ಕಳೆದುಕೊಂಡು ಬೆಳದಿಂಗಳಾಗಿ ರಾತ್ರಿಯಲ್ಲಿ ಆಹ್ಲಾದತೆ ತಂದು ಕೊಡುತ್ತದೆ. ಸಮುದ್ರವನ್ನು ಉಕ್ಕೇರಿಸತ್ತದೆ. ಪ್ರೇಮಿಗಳಿಗೆ ಮತ್ತೇರಿಸುತ್ತದೆ. ಕವಿಗಳಿಗೆ ಉತ್ತೇಜನ ನೀಡುತ್ತದೆ. ದಣಿದ ಜೀವಗಳಿಗೆ ತಂಪೆರುಯುತ್ತದೆ. ಆದರೆ ಆ ಸಂತೋಷ ನಿಮಗೆ ಪ್ರತಿ ದಿನ ಇಲ್ಲ.
ಇದು ಗಾಲಿ ತಿರುಗಿದ ಹಾಗೆ ಅಲ್ಲವೇ? ಹುಣ್ಣಿಮೆ ನಂತರ ನಿಮಗೆ ಬೇಕೋ ಬೇಡವೋ ಅಮಾವಾಸ್ಯೆಯ ಕತ್ತಲು ಅನಿಭವಿಸಿದ ಮೇಲೆಯೇ ಇನ್ನೊಮ್ಮೆ ಹುಣ್ಣಿಮೆ. ನಿಮಗೆ ಹುಣ್ಣಿಮೆಯ ಸಂತೋಷ ಬೇಕೆಂದರೆ ಅಮಾವಾಸ್ಯೆ ಹುಟ್ಟಿಸುವ ದಿಗಿಲು ಕೂಡ ಅನುಭವಿಸಬೇಕು. ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು. ಸರಸ-ವಿರಸವೆಂಬ ಹುಣ್ಣಿಮೆ-ಅಮಾವಾಸ್ಯೆಗಳು ಎಲ್ಲರ ಬಾಳಿನಲ್ಲಿ ಉಂಟು. ಅದು ಪ್ರಕೃತಿ ನಿಯಮ.
ನೀವು ಪ್ರಕೃತಿಯನ್ನು ಮೀರಿಸುವ ಸನ್ಯಾಸಿಯಾದರೆ ನಿಮಗೆ ಹುಣ್ಣಿಮೆ ಸಂತೋಷ ತರದು ಹಾಗೆಯೇ ಅಮಾವಾಸ್ಯೆಯ ಕತ್ತಲು ಭೀತಿಗೊಳಿಸದು. ಆದರೆ ಉಳಿದ ಭಾವನಾತ್ಮಕ ಮನುಜರಿಗೆ ಹುಣ್ಣಿಮೆಯ-ಅಮಾವಾಸ್ಯೆಗಳ ಚಕ್ರಗಳಿಂದ ಹೊರ ಬರಲು ಆಗದು. ಹುಣ್ಣಿಮೆ ಇರುವಷ್ಟು ಹೊತ್ತು ಆನಂದಿಸಿ. ಅದು ಕ್ಷೀಣಿಸಿದಾಗ ಸಂತೋಷದಿಂದಲೇ ಬೀಳ್ಕೊಡಿ. ಏಕೆಂದರೆ ಇನ್ನೊಂದು ಹುಣ್ಣಿಮೆ ಬಂದೆ ಬರುತ್ತದೆ.
ಹೊಸ ತೇರು, ಹಳೆ ಜಾತ್ರೆ, ಸಮಾಯಾತೀತ ಶ್ರೀ ಮಲ್ಲಿಕಾರ್ಜುನ
ನಮ್ಮೂರಿನಲ್ಲಿ ಇಂದು ಭರತ ಹುಣ್ಣಿಮೆಯ ದಿನದಂದು ಶ್ರೀ ಮಲ್ಲಿಕಾರ್ಜುನನ ಜಾತ್ರೆ. ಇಲ್ಲಿ ಜಾತ್ರೆಯ ದಿನದಂದು ಎಳೆಯುವ ತೇರು ಎಷ್ಟು ವರುಷ ಹಳೆಯದು, ಯಾರು ಮಾಡಿಸಿದ್ದು ಎಂದು ಈ ಊರಿನಲ್ಲಿರುವ ೮೦-೯೦ ವರುಷದ ವೃದ್ಧರಿಗೂ ತಿಳಿದಿಲ್ಲ. ಅವರಿಗೆ ಜಾತ್ರೆಯ ದಿನದಂದು ತೇರು ಎಳೆದದ್ದು ಅಷ್ಟೇ ನೆನಪು. ತೇರಿನ ಹಳೆಯ ಭಾಗಗಳು (ಕಟ್ಟಿಗೆಯಿಂದ ಮಾಡಿದ್ದು) ಗಮನಿಸಿ ನೋಡಿದಾಗ ಇದು ೧೨೦ ರಿಂದ ೧೫೦ ವರುಷ ಹಳೆಯದು ಎಂದು ಅಂದಾಜು ಮಾಡಬಹುದು. ಗಟ್ಟಿ-ಮುಟ್ಟ್ಯಾಗಿರುವ ಜನ ತುಂಬಾ ಭಾರವೆನಿಸುವ ಹಗ್ಗ ಹಿಡಿದು ತೇರು ಎಳೆದರೆ, ಉಳಿದೆಲ್ಲ ಭಕ್ತರಿಗೆ ತೇರಿನ ಕಳಸಕ್ಕೆ ಬಾಳೆ ಹಣ್ಣು ಎಸೆಯುವ ಸಂಭ್ರಮ. ತೇರು ತನ್ನ ಮನೆಗೆ ಮರಳಿದ ನಂತರ ಸಂಜೆ ಹೊತ್ತಿಗೆ ಜಾತ್ರೆ ಶುರು. ಇದು ಸಾವಿರಾರು ವರುಷಗಳಿಂದ ಇಲ್ಲಿ ನೆಲೆಗೊಂಡಿರುವ ಶ್ರೀ ಮಲ್ಲಿಕಾರ್ಜುನನ ಜಾತ್ರೆ.
Thursday, January 4, 2024
ಆಶಾವಾದಿಯ ಕನಸುಗಳು ಮತ್ತು ನಿರಾಶಾವಾದಿಯ ಹತಾಶೆಗಳು
ಯಾವುದೇ ರಾಜಕಾರಣಿಯ ಭಾಷಣ ಕೇಳಿ ನೋಡಿ. ಅವರು ನಿಮಗೆ ಭವಿಷ್ಯದ ಕನಸು ಕಟ್ಟಿ ಕೊಡುತ್ತಾರೆ. ನಿಮ್ಮ ಚಿಕ್ಕ ಮಕ್ಕಳು ಸ್ವಲ್ಪ ಜಾಣತನ ತೋರಿದರು ಸಾಕು. ಮುಂದೆ ಅವರು ದೊಡ್ಡ ಮನುಷ್ಯರಾಗುವ ಕನಸು ನೀವೇ ಕಾಣತೊಡಗುತ್ತೀರಿ. ಭರವಸೆ ಹುಟ್ಟಿಸುವ ಯಾವುದೇ ಕೆಲಸಗಾರನ ಭವಿಷ್ಯದ ಅಂದಾಜು ಎಲ್ಲರಿಗೂ ಮನವರಿಕೆ ಆಗಿರುತ್ತದೆ. ಮನುಷ್ಯ ಎಂತಹ ಸೋಮಾರಿಯೇ ಆಗಿರಲಿ ಅವನು ಕನಸು ಕಾಣದೆ ಇರಲಾರ. ಅದು ಆಶಾವಾದಿಯ ಜಗತ್ತು.
ಒಂದು ಕಾಲದಲ್ಲಿ ಕನಸು ಕಂಡು ಆದರೆ ಕೈ ಸುಟ್ಟುಕೊಂಡು ನಿರಾಶಾವಾದಿಯಾಗಿ ಬದಲಾಗಿರುತ್ತಾರಲ್ಲ. ಅವರಿಗೆ ಯಾವುದರಲ್ಲೂ ಭರವಸೆ ಇರುವುದಿಲ್ಲ. ಅವರದ್ದು ಬರೀ ಹತಾಶೆಯ ಮಾತುಗಳು. ನಮ್ಮ ದೇಶ ಬದಲಾಗೋದಿಲ್ಲ ಬಿಡಿ ಅನ್ನುತ್ತಾ ಇರುತ್ತಾರೆ. ಭಾರತದ ಉಪಗ್ರಹ ಚಂದ್ರನ ಮೇಲೆ ಇಳಿದದ್ದು ಅವರಿಗೆ ಸಾಧನೆ ಎನಿಸುವುದಿಲ್ಲ.ಸಂತೆ ವ್ಯಾಪಾರಕ್ಕೆ ಸ್ಮಾರ್ಟ್ ಫೋನ್ ಬಳಕೆಯಾಗುವುದು ಅವರಿಗೆ ಪ್ರಗತಿ ಎನಿಸುವುದಿಲ್ಲ. 'ಏನೇ ಆಗಲಿ ನಮ್ಮ ದೇಶದ ಕಥೆ ಇಷ್ಟೇ ಬಿಡಿ' ಎಂದೇ ಅವರು ಹೇಳುವುದು. ದೇಶದ ಕಥೆ ಹೇಗೆಯೇ ಇರಲಿ ನಿರಾಶಾವಾದಿಗಳ ಕಥೆ ಮಾತ್ರ ಅಲ್ಲಿಯೇ ಉಳಿದಿರುತ್ತದೆ.
ವಿಚಾರ ಮಾಡಿ ನೋಡಿ. ಒಂದು ವಯಸ್ಸಿನವರೆಗೆ (ಸುಮಾರು ೧೬-೧೮ ವರುಷದವರೆಗೆ) ಮನುಷ್ಯ ಆಶಾವಾದಿಯಾಗಿದ್ದರೆ ತೊಂದರೆ ಏನಿಲ್ಲ. ಆದರೆ ಮುಂದೆಯೂ ಅವನು ವಿಪರೀತ ಕನಸುಗಾರನಾದರೆ, ಅವನಿಗೆ ಜೀವನ ಪೆಟ್ಟು ಕೊಡದೆ ಬಿಡುವುದಿಲ್ಲ. ನಿರಾಶಾವಾದಿಗಳ ಎಚ್ಚರಿಕೆ ಸ್ವಭಾವ ಅವರನ್ನು ಮತ್ತೆ ಎಡವದಂತೆ ಕಾಯುತ್ತದೆ. ಆದರೆ ಸಂಪೂರ್ಣ ಆಶಾವಾದಿಗಳು ಅಪಾಯಗಳನ್ನು ನಿರ್ಲಕ್ಷಿಸುವ ಸ್ವಭಾವ ಹೊಂದಿರುತ್ತಾರೆ. ಅದೇ ಅವರಿಗೆ ಮುಳುವಾಗುತ್ತದೆ. ಮುಂದೆ ನಾವು ದೊಡ್ಡ ಮನುಷ್ಯರಾಗಬೇಕು ನಿಜ ಆದರೆ ಇಂದಿಗೆ ನಾವು ಎಚ್ಚರಿಕೆಯಿಂದ ಕೂಡ ಇರಬೇಕಾದದ್ದು ಅವಶ್ಯಕ ಅಲ್ಲವೇ?
ಸಂಪೂರ್ಣ ಆಶಾವಾದಿಯಾಗದೆ ಅಥವಾ ನಿರಾಶಾವಾದಿಯಾಗದೆ, ಎರಡರ ನಡುವಿನ ವಾಸ್ತವವಾದಿಯಾಗಿ ನೋಡಿ. ಅವನಿಗೆ ಜಗತ್ತು ಹೇಗೆ ಇದೆಯೋ ಹಾಗೆ ನೋಡಲು ಸಾಧ್ಯವಾಗುತ್ತದೆ. ಅವನಿಗೆ ಆಶಾವಾದಿಗೆ ಕಾಣುವ ಅವಕಾಶಗಳು ಮತ್ತು ನಿರಾಶಾವಾದಿಗೆ ಕಾಣುವ ಅಪಾಯಗಳು ಎರಡು ಗೋಚರಿಸುತ್ತವೆ. ಅವನು ಸಮತೋಲನದಿಂದ, ಸಮಚಿತ್ತದಿಂದ ವರ್ತಿಸುತ್ತಾನೆ. ಅಪಾಯ ಗೊತ್ತಿರದ ಆಶಾವಾದಿ ಮತ್ತು ಪ್ರಯತ್ನ ನಿಲ್ಲಿಸಿರುವ ನಿರಾಶಾವಾದಿಗಿಂತ ಹೆಚ್ಚಿನ ಸಾಧನೆ ವಾಸ್ತವವಾದಿಯದ್ದಾಗಿರುತ್ತದೆ.
ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಕಾಂಕ್ಷಿಗಳು ಆಶಾವಾದಿಗಳಾಗಿದ್ದರು. ಅಪಾಯಗಳು ಅವರು ಮೈ ಮರೆತ ಕ್ಷಣಗಳಲ್ಲಿ ಅವರನ್ನು ಸಣ್ಣ ಯುದ್ಧಗಳಲ್ಲಿ ಅಳಿಸಿ ಹಾಕಿದವು. ನೆಪೋಲಿಯನ್ ವಾಟರ್ಲೂ ಕಾಳಗದಲ್ಲಿ ಸೋತ ಹಾಗೆ. ಬಲಿಷ್ಠ ವಿಜಯನಗರ ಸಾಮ್ರಾಜ್ಯವನ್ನು ಐದು ಸಣ್ಣ ರಾಜ್ಯಗಳು ಒಟ್ಟಿಗೆ ಸೇರಿ ಸೋಲಿಸಿದ ಹಾಗೆ. ಹಾಗೆಯೆ ನಿರಾಶಾವಾದಿಗಳು ಯಾವ ಚರಿತ್ರೆಯ ಪುಟಗಳಲ್ಲಿ ಕಾಣ ಸಿಗುವುದಿಲ್ಲ. ಏಕೆಂದರೆ ಅವರು ಸಾಧಿಸುವ ಕೆಲಸಗಳಿಗೆ ಕೈ ಹಾಕಲೇ ಇಲ್ಲ.
ವಾಸ್ತವವಾದಿಗಳ ಉದಾಹರಣೆ ಕೊಡಿ ಎಂದು ಕೇಳಲೇಬೇಡಿ. ಅವರು ಎಲ್ಲೆಲ್ಲೂ ಇದ್ದಾರೆ. ಉದಾಹರಣೆಗೆ ನಿಮ್ಮ ಬ್ಯಾಂಕ್ ಮ್ಯಾನೇಜರ್. ಅವನು ಸಾಲ ಕೊಡುವ ಮುನ್ನ ನಿಮ್ಮ ಸಾಲ ವಾಪಸ್ಸು ಕೊಡುವ ತಾಕತ್ತು ಅಳೆಯುತ್ತಾನೆ. ಅವನು ನಿಮ್ಮ ಕನಸುಗಳಿಗಿಂತ ವಾಸ್ತವಕ್ಕೆ ಬೆಲೆ ಕೊಡುತ್ತಾನೆ. ನವ ಭಾರತ ಕಟ್ಟಿದ ಗಾಂಧಿ-ನೆಹರು-ಪಟೇಲ್ ವಾಸ್ತವವಾದಿಗಳಾಗಿದ್ದರು. ಅವರು ಭಾರತಕ್ಕೆ ಸ್ವತಂತ್ರ ತರುವ ಜೊತೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ನೆಲೆಯೂರುವಂತೆ ನೋಡಿಕೊಂಡರು. ಬಹುಕಾಲ ಬಾಳಿದ ಯಾವುದೇ ಸಂಘ-ಸಂಸ್ಥೆ, ಇಲ್ಲವೇ ದೇಶಗಳನ್ನೇ ಗಮನಿಸಿ ನೋಡಿ. ಅವುಗಳನ್ನು ವಾಸ್ತವವಾದಿಗಳೇ ಕಟ್ಟಿರುತ್ತಾರೆ. ಯುದ್ಧ ಮಾಡಿ ನಿರಾಶನಾದ ಸಾಮ್ರಾಟ್ ಅಶೋಕ, ಸಮಾಜ ಪ್ರಗತಿಗೆ ಪ್ರಯತ್ನ ಮಾಡುವ ಆಶಾವಾದಿಯೂ ಆಗಿದ್ದ. ಎಲ್ಲವನ್ನು ಹಿಂದೆ ಬಿಟ್ಟು ನಡೆದ ಬುದ್ಧ, ಶಾಂತಿ ಸಂದೇಶ ಸಾರುವ ಆಶಾವಾದಿಯೂ ಆಗಿದ್ದ. ಅದರ ಫಲ ಎಷ್ಟು ಜನ ಪಡೆದುಕೊಂಡರು ಎಂದು ವಿಚಾರ ಮಾಡದೆ ಇರುವ ನಿರಾಶಾವಾದಿಯೂ ಆಗಿದ್ದ.
ಆಶಾವಾದಿಗಳ ಪ್ರಯತ್ನ, ನಿರಾಶಾವಾದಿಗಳ ಎಚ್ಚರಿಕೆ ಈ ಎರಡರ ಸಮ್ಮಿಶ್ರಣ ಬದುಕನ್ನು ಸುಲಭವಾಗಿಸುತ್ತದೆ. ಅವುಗಳು ವಾಹನದಲ್ಲಿ ಆಕ್ಸಿಲರೇಟರ್ ಮತ್ತು ಬ್ರೆಕ್ ಎರಡರನ್ನು ಅಗತ್ಯಕ್ಕೆ ತಕ್ಕಂತೆ ಉಪಯೋಗ ಮಾಡಿಕೊಂಡು ಮುಂದೆ ಸಾಗಿದ ಹಾಗೆ. ಕನಸುಗಳ ಜೊತೆಗೆ ಅಪಾಯಗಳನ್ನು ಸರಿದೂಗಿಸಿಕೊಂಡು ಹೋಗುವ ವಾಸ್ತವವಾದಿಗಳು ನಾವಾಗಬೇಕಲ್ಲವೇ? ನೀವು ಏನಂತೀರಿ?
Saturday, December 23, 2023
ಸಂಖ್ಯೆಗಳು, ಕಥೆಗಳು ಮತ್ತು ಭಾವನೆಗಳು
Tuesday, December 19, 2023
ಅಸೂಯೆ ಅತಿಯಾಸೆಯ ತಾಯಿ
Thursday, November 23, 2023
ಬುಲೆಟ್ ಪುರಾಣ
Thursday, November 9, 2023
ತೋಳ ಬಂತು ತೋಳ
Sunday, October 8, 2023
ಇಳಿಸಂಜೆಯ ಹೆಂಗಸು
Monday, September 4, 2023
ಆದಾಯ ಮುಖ್ಯವೋ, ಖರ್ಚು ಮುಖ್ಯವೋ?
ನಿಮ್ಮ ಮನೆ ಎಷ್ಟು ದೊಡ್ಡದು? ನಿಮ್ಮ ಕಾರಿನ ಬೆಲೆ ಎಷ್ಟಾಗುತ್ತದೆ? ನೀವು ಧರಿಸುವ ಬಟ್ಟೆಗಳು ಎಂಥವು? ನಿಮ್ಮ ಮೈ ಮೇಲಿರುವ ಬಂಗಾರದ ಒಡವೆಗಳ ಮೌಲ್ಯ ಎಷ್ಟು? ಅದನ್ನು ಯಾರು ಬೇಕಾದರೂ ಹೇಳಲು ಸಾಧ್ಯ.
ನಿಮಗೆ ಇಷ್ಟ ಇದೆಯೋ, ಇಲ್ಲವೋ, ಸಮಾಜ ಮಾತ್ರ ನೀವು ಮಾಡುವ ಖರ್ಚುಗಳ ಮೇಲೆ ನಿಮ್ಮನ್ನು ಅಳೆಯುತ್ತದೆ. ನಿಮಗೆ ಎಷ್ಟು ಪ್ರತಿಷ್ಠೆ ಕೊಡಬೇಕು ಎನ್ನುವುದು ಕೂಡ ಅದರ ಮೇಲೆ ನಿಗದಿಯಾಗಿರುತ್ತದೆ. ನೀವು ಸಮಾಜದಲ್ಲಿನ ಪ್ರತಿಷ್ಠೆಗೆ ಬೆಂಕಿ ಇಡೀ ಎನ್ನಬಹುದು. ಆದರೆ ನಿಮ್ಮ ತಂದೆ-ತಾಯಿ, ಹೆಂಡತಿ-ಮಕ್ಕಳು ಸಮಾಜದ ಒಂದು ಭಾಗ ಅಲ್ಲವೇ? ಅವರಿಗೆ ತಾವು ಏನು ಎಂದು ಯಾರಿಗೋ ತೋರಿಸಬೇಕಾಗಿರುತ್ತದೆ. ಅವರುಗಳು ತಮ್ಮ ಬಿಲ್ಲಿಗೆ ನಿಮ್ಮನ್ನೇ ಬಾಣವನ್ನಾಗಿಸುತ್ತಾರೆ. ಅದೇ ಕಾರಣಕ್ಕೆ ನಿಮ್ಮ ಮನೆಯಲ್ಲಿನ ಸಮಾರಂಭಗಳಿಗೆ ನೀವು ಕಡಿಮೆ ಖರ್ಚು ಮಾಡಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ನೀವು ದುಡಿಮೆ ಕೂಡ ಹೆಚ್ಚಿಗೆ ಮಾಡಿಕೊಳ್ಳಬೇಕಾಗುತ್ತದೆ.
ನಿಮಗೆ ಸರಳ ಜೀವನ ಇಷ್ಟ ಎಂದುಕೊಳ್ಳಿ. ಆದರೆ ನಿಮ್ಮ ಆತ್ಮೀಯ ಸ್ನೇಹಿತರು ಕೂಡ, ಒಂದಲ್ಲ ಒಂದು ಸಲ ನಿಮಗೆ ಖರ್ಚು ಹೆಚ್ಚಿಸಿಕೊಳ್ಳಲು ಸಲಹೆ ನೀಡಿಯೇ ಬಿಡುತ್ತಾರೆ. ಮನೆ ಕಟ್ಟಿಸುವುದು ಒಂದೇ ಸಲ, ಚೆನ್ನಾಗಿಯೇ ಕಟ್ಟಿಸಿಕೊಳ್ಳಿ ಎಂದು ಚೆನ್ನಾಗಿಯೇ ಖರ್ಚು ಮಾಡಿಸುತ್ತಾರೆ. ಆಮೇಲೆ ಎಷ್ಟು ದಿನ ಅಂತ ಬಸ್ ನಲ್ಲಿ, ಬೈಕ್ ನಲ್ಲಿ ಓಡಾಡುತ್ತಿರ? ಅದು ಕೂಡ ಯಾರು ಯಾರೋ ಕಾರು ತೆಗೆದುಕೊಳ್ಳುತ್ತಿರುವ ಕಾಲದಲ್ಲಿ? ಬೆಂಗಳೂರಿನಲ್ಲಿ ಟ್ರಾಫಿಕ್ ಜಾಸ್ತಿ, ಒಬ್ಬ ಡ್ರೈವರ್ ಇಟ್ಟುಕೊಂಡರೆ ಅನುಕೂಲ ಎನ್ನುವುದು ಅದರ ಮುಂದಿನ ಖರ್ಚು. ಅಷ್ಟೆಲ್ಲ ಆದ ಮೇಲೆ ಜೀವನಕ್ಕಿಂತ ದುಡ್ಡು ಮುಖ್ಯನಾ ಎನ್ನುವ ವಾದ ಬೇರೆ.
ನೀವು ಒಮ್ಮೆ ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚುಗಳಿಗೆ ವಾಲಿದರೆ ಮುಗಿಯಿತು. ಊರಿನ ಜನರ ಹೆಸರಿನಲ್ಲಿ ನೀವು ದೊಡ್ಡ ಪಾರ್ಟಿ. ಆದರೆ ಸಾಲ ಯಾವಾಗ ತೀರುತ್ತದೋ ಎನ್ನುವ ನಿಮ್ಮ ಚಿಂತೆ ಅವರಿಗೆ ಕೇಳಲು ಇಷ್ಟವೇ ಇಲ್ಲ. ಈ ಜಂಜಾಟದಲ್ಲಿ ನಿಮಗೆ ದುಡ್ಡಿಗಿಂತ ನೆಮ್ಮದಿ ಮುಖ್ಯ ಎನ್ನಿಸಲು ಶುರು ಆಗುತ್ತದೆ. ನಿಮಗೆ ಈಗಾಗಲೇ ಆದಾಯ ತರುವ ಸಂತೋಷ, ಖರ್ಚು-ಸಾಲ ತರುವ ಸಂಕಟಗಳನ್ನು ಬೇಕಾದಷ್ಟು ಸಲ ಅನುಭವಿಸಿ ಆಗಿದೆ. ಕ್ರಮೇಣ ದುಡ್ಡಿಗಿಂತ ಜೀವನ ಮುಖ್ಯ ಅಲ್ಲವೇ ಎಂದು ನೀವು ಸ್ವಂತ ಅನುಭವದಿಂದಲೇ ಕಂಡುಕೊಳ್ಳುತ್ತೀರಿ. ಆಮೇಲೆ ನೀವು ಬಡವರಾಗಿದ್ದಾಗ ಎಷ್ಟು ನೆಮ್ಮದಿ ಇತ್ತು ಆದರೆ ಈಗ ಶ್ರೀಮಂತಿಕೆ ಬಂದರೂ ಅದು ಏಕಿಲ್ಲ ಎನ್ನುವ ವಿಚಾರ ಮೂಡಲು ಆರಂಭ ಆಗುತ್ತದೆ.
ದುಡ್ಡು ಬೇಕೆಂದರೆ ಅದು ಹೇಗೆ ಸಿಗುವುದಿಲ್ಲವೋ, ಹಾಗೆಯೆ ನೆಮ್ಮದಿ ಬೇಕೆಂದರೆ ಅದು ಸಿಗಲು ಸಾಧ್ಯವೇ ಇಲ್ಲ. ಯಾವುದೊ ವೃತ್ತಿಯಲ್ಲಿ ಪರಿಣಿತಿ ಸಾಧಿಸಿದ ಮೇಲೆ, ಸಾಕಷ್ಟು ಶ್ರಮ ಪಟ್ಟ ಮೇಲೆ ನಿಮಗೆ ದುಡ್ಡು ಬಂತು. ಆದರೆ ನೆಮ್ಮದಿ ಬೇಕೆಂದರೆ ಮಾಡಬೇಕಾದದ್ದು ಇನ್ನೂ ಕಷ್ಟದ ಕೆಲಸ. ಈಗ ನೀವು ನೆಮ್ಮದಿ ಹುಡುಕುವುದಕ್ಕಿಂತ, ನೆಮ್ಮದಿ ಹೇಗೆ ಕಳೆದು ಹೋಗುತ್ತದೆ ಮತ್ತು ಆ ವಿಷಯಗಳನ್ನು ನೀವು ಹೇಗೆ ದೂರ ಮಾಡಿಕೊಳ್ಳಬೇಕು ಎಂದು ಹುಡುಕಬೇಕು. ಪದೇ, ಪದೇ ಕೈ ಕೊಡುವ ಕಾರನ್ನು ಹೇಗೆ ಮಾರಿ ಕೈ ತೊಳೆದುಕೊಳ್ಳುತ್ತೇವೆಯೋ, ಹಾಗೆಯೆ ನಮ್ಮನ್ನು ಸಮಸ್ಯೆಗೆ ಈಡು ಮಾಡುವ ಸಂಗತಿಗಳನ್ನು ದೂರ ಮಾಡಿಕೊಳ್ಳುತ್ತ ಹೋಗಬೇಕು. ಇಷ್ಟ ಪಟ್ಟು ಕಟ್ಟಿಸಿದ ಮನೆ ಕೂಡ ಮಾರಿ ಬಿಡಬಹುದು. ಆದರೆ ಪದೇ ಪದೇ ಫೇಲ್ ಆಗುವ ಮಗನನ್ನು ಏನು ಮಾಡುವಿರಿ? ಮನುಷ್ಯ ಸಂಬಂಧದ ಸಮಸ್ಯೆಗಳಿಂದ ಪಾರಾಗುವುದು ಕಠಿಣ.
ದುಡ್ಡು ಗಳಿಸುವುದು-ಉಳಿಸಿಕೊಳ್ಳುವುದು ಹೇಗೆ ಕಠಿಣವೋ, ನೆಮ್ಮದಿ ಕೂಡ ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದು ಹೆಚ್ಚು ಕಠಿಣ. ದುಡ್ಡಿನ ವಿಷಯದಲ್ಲಿ ಹೇಗೆ ಆದಾಯ-ಖರ್ಚುಗಳನ್ನು ಸರಿದೂಗಿಸಿಕೊಂಡು ಹೋಗಬೇಕೋ, ನೆಮ್ಮದಿಯಲ್ಲಿ ಕೂಡ ಖುಷಿ ತರುವ ವಿಷಯಗಳು, ಬೇಜಾರು ಮಾಡುವ ವಿಷಯಗಳನ್ನು ಸಮತೋಲನದಲ್ಲಿಡಬೇಕು. ನಿಮ್ಮ ಖರ್ಚು ಕಡಿಮೆ ಇದ್ದರೆ, ಕಡಿಮೆ ಆದಾಯದಲ್ಲಿ ಬದುಕಬಹುದಲ್ಲವೇ? ಅದು ದುಡ್ಡು ಆಗಿರಲಿ, ನೆಮ್ಮದಿಯೇ ಆಗಿರಲಿ. ಕಡಿಮೆ ಸಂತೋಷ ಬಯಸಿದರೆ, ದುಃಖ ಕೊಡುವ ಸಂಗತಿಗಳು ಕೂಡ ತಾನಾಗಿಯೇ ಕಡಿಮೆ ಆಗುತ್ತವೆ. ಖರ್ಚು ಕಡಿಮೆ ಮಾಡಲು ಸಾಧ್ಯ ಇಲ್ಲ ಎಂದರೆ, ಅವುಗಳು ಹತೋಟಿಯಲ್ಲಾದರೂ ಇರಬೇಕು. ಅಂದ ಹಾಗೆ ಇದನ್ನು ನಾನು ಪುಸ್ತಕ ಓದಿ ಕಲಿತದದ್ದಲ್ಲ.
ನೀವು ಕಡು ಬಡತನದಲ್ಲಿದ್ದರೆ ನಿಮಗಿರುವುದು ಆದಾಯದ ಸಮಸ್ಯೆ. ಊಟ-ಬಟ್ಟೆಗೆ ತೊಂದರೆಯಿಲ್ಲ ಆದರೆ ದುಡ್ಡು ಸಾಕಾಗುತ್ತಿಲ್ಲ ಎಂದರೆ ಅದು ಖರ್ಚಿನ ಸಮಸ್ಯೆ. ಹಣಕಾಸಿನ ತೊಂದರೆ ಇಲ್ಲ ಆದರೆ ನೆಮ್ಮದಿ ಇಲ್ಲ ಎಂದರೆ ನೀವು ಜೀವನದಲ್ಲಿ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ನಿಮ್ಮಲ್ಲಿ ದುಡ್ಡು-ನೆಮ್ಮದಿ ಎರಡು ಇದ್ದು ಇನ್ನೂ ಫೇಸ್ ಬುಕ್ ನಲ್ಲಿ ಉಳಿದುಕೊಂಡಿದ್ದರೆ ನಿಮಗೆ ಪ್ರಣಾಮಗಳು.
Sunday, August 27, 2023
ಗುಡ್ಡದ ಮೇಲೆ ಗುಡಿ ಕಟ್ಟಿದ ಮನುಷ್ಯನೇ ಮೆಟ್ಟಿಲು ಕಟ್ಟಿದ
ಹಲವಾರು ಶತಮಾನಗಳಿಂದ ಬೆಟ್ಟದ ಮೇಲೆ ವಿರಾಜಮಾನನಾಗಿರುವ ಶ್ರೀ ಮಲ್ಲಿಕಾರ್ಜುನ ನನ್ನ ಇಷ್ಟ ದೈವ. ಚಿಕ್ಕಂದಿನಿಂದ ಶ್ರಾವಣದಲ್ಲಿ ಬೆಟ್ಟ ಹತ್ತಿ ಆತನ ದರ್ಶನ ಮಾಡುವ ಅಭ್ಯಾಸ ಇನ್ನು ಬಿಟ್ಟು ಹೋಗಿಲ್ಲ. ಬೆಟ್ಟ ಹತ್ತಿದ ಪ್ರತಿ ಬಾರಿಯೂ ಹೊಸ ವಿಚಾರಗಳು ಮೂಡುತ್ತವೆ. ಅದು ಈ ಬಾರಿಯೂ ಕೂಡ ಆಯಿತು.
ದೇವರು ಮನುಷ್ಯನನ್ನು ಹುಟ್ಟಿಸಿದು ಎಂದು ನಾವೆಲ್ಲ ಅಂದುಕೊಂಡರೆ, ಮನುಷ್ಯನೇ ದೇವರನ್ನು ಹುಟ್ಟಿ ಹಾಕಿದ್ದು ಎಂದು ಸೂಚಿಸುತ್ತದೆ ಡಾರ್ವಿನ್ ವಿಕಾಸವಾದ ಸಿದ್ಧಾಂತ. ಅವೆರಡನ್ನು ಒಟ್ಟು ಮಾಡಿ, ಒಂದು ಕಲ್ಲಿಗೆ ಬಹು ಕಾಲ ಭಕ್ತಿಯಿಂದ ಪೂಜಿಸಿದರೆ, ಅದರಲ್ಲಿ ವಿಶೇಷ ಶಕ್ತಿ ತುಂಬಿ ದೈವ ಕಳೆ ಬರುತ್ತದೆ ಎನ್ನುವ ವಿವರಣೆ ಕೂಡ 'Sapiens ' ಅನ್ನುವ ಪುಸ್ತಕದಲ್ಲಿದೆ. ಮೂರ್ತಿ ಪೂಜೆಯನ್ನು ವಿರೋಧಿಸಿದ ಬುದ್ಧ. ನಶ್ವರವನ್ನೇ ಶಿವನೆಂದರು ನಮ್ಮ ವಚನಕಾರರು.
ಆದರೆ ಅವೆಲ್ಲವನ್ನು ಬದಿಗಿಟ್ಟು ವಿಚಾರ ಮಾಡಿದಾಗ ನನಗೆ ಅನ್ನಿಸಿದ್ದು ಇಷ್ಟು. ಆದಿ ಮಾನವ ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡುತ್ತಿದ್ದ. ಆಗ ಅವನು ಪೂಜಿಸುತ್ತಿದ್ದ ದೈವಗಳು ಕೂಡ ಬೆಟ್ಟದೆ ಮೇಲೆಯೇ ಇದ್ದವು. ಮುಂದೆ ಆ ಮಾನವ ಬೆಟ್ಟ ಇಳಿದು ಬಯಲಿಗೆ ಬಂದು, ವ್ಯವಸಾಯ ಕಲಿತು ನಾಗರಿಕನಾದ. ಆದರೆ ಬೆಟ್ಟದ ದೈವವನ್ನು ಮರೆಯಲಿಲ್ಲ. ತನ್ನ ನಾಗರಿಕತೆಗೆ ತಕ್ಕಂತೆ ತಾನು ಪೂಜಿಸುತ್ತಿದ್ದ ಜಾಗವನ್ನು ಗುಡಿಯಾಗಿ ಮಾರ್ಪಡಿಸಿದ. ತನಗೆ ಬೆಟ್ಟ ಹತ್ತಿ, ಇಳಿಯಲು ಅನುಕೂಲವಾಗಲೆಂದು ಮೆಟ್ಟಿಲು ನಿರ್ಮಿಸಿದ. ಶತಮಾನಗಳು ಕಳೆದರು ಆ ದೇವಸ್ಥಾನಗಳ ಮೇಲಿನ ಅವನ ಭಕ್ತಿ ಕಡಿಮೆ ಆಗಲಿಲ್ಲ. ಮನುಷ್ಯ ಸಮಾಜದ ಏಳಿಗೆ ಬಯಸುವ ವ್ಯಕ್ತಿಗಳು ಎಲ್ಲ ಕಾಲಕ್ಕೂ ಇರುತ್ತಾರಲ್ಲ. ಅವರು ಸಮಾಜ ಒಟ್ಟಿಗೆ ಕೂಡಲಿ ಎನ್ನುವ ಉದ್ದೇಶದಿಂದ, ಬೆಟ್ಟದ ಮೇಲಿನ ದೈವದ ಹೆಸರಿನಲ್ಲಿ ಜಾತ್ರೆ, ಪೂಜೆಗಳನ್ನು ಏರ್ಪಾಡು ಮಾಡಿದರು. ಹೀಗೆ ದೈವ ಸಮಾಜದ ಒಗ್ಗಟ್ಟಿಗೆ ಮುಖ್ಯ ಕಾರಣವಾಯ್ತು.
ಅಷ್ಟೇ ಅಲ್ಲ. ಬೆಟ್ಟ ಹತ್ತಿದ ದಣಿವು ಮನುಷ್ಯನ ಅರೋಗ್ಯ ಸುಧಾರಿಸುತ್ತಿತ್ತು. ಬೆಟ್ಟದ ಮೇಲಿನಿಂದ ನೋಡಿದರೆ, ಮನುಷ್ಯನಿಗೆ ತನ್ನ ಮನೆ ಎಷ್ಟು ಚಿಕ್ಕದು ಕಾಣುತ್ತಲ್ಲವೇ? ಹಾಗೆಯೆ ಆ ಮನೆಯಲ್ಲಿನ ಸಮಸ್ಯೆಗಳು ಕೂಡ ಇನ್ನು ಚಿಕ್ಕವು ಎನ್ನುವ ಅರಿವು ಅವನಿಗೆ ಬೆಟ್ಟದ ಮೇಲೆ ಮೂಡಲು ಸಾಧ್ಯ. ಮನೆಯಲ್ಲಿ ಕುಳಿತಾಗ ಬೆಟ್ಟದಂತಹ ಸಮಸ್ಯೆ ಅನಿಸಿದ್ದು, ಬೆಟ್ಟ ಹತ್ತಿ ನಿಂತಾಗ ಬದಲಾಗಲು ಸಾಧ್ಯ ಇದೆ. ಹಾಗೆಯೆ ಬೆಟ್ಟದ ವಾತಾವರಣ ಕೂಡ ಬೇರೆಯೇ. ಬಯಲಲ್ಲಿ ಬೆಳೆಯದ ಗಿಡ, ಮರಗಳು, ಬಯಲಲ್ಲಿ ಕಾಣದ ಪ್ರಾಣಿ, ಪಕ್ಷಿಗಳು ಅಲ್ಲಿ ಕಾಣುತ್ತವೆ. ಮೆಟ್ಟಿಲ ಮೇಲೆ ಮೆಲ್ಲಗೆ ಸಾಗುವ ಝರಿಗಳು, ಪಕ್ಕದ ಗುಡ್ಡದಿಂದ ಕೇಳಿಸುವ ನವಿಲಿನ ಕೇಕೆ, ಬಯಲಿಗಿಂತ ಬೆಟ್ಟವನ್ನು ಇಷ್ಟ ಪಡುವ ಮಂಗಗಳು, ಕಲ್ಲಿನಡಿ ಮಲಗಿರಬಹುದಾದ ಸರಿಸೃಪಗಳು ಮನುಷ್ಯನನ್ನು ಸ್ವಲ್ಪ ಕಾಲಕ್ಕಾದರೂ ಬೇರೆಯ ಲಹರಿಯಲ್ಲಿ ಇರುವಂತೆ ಮಾಡುತ್ತವೆ.
ಬೆಟ್ಟ ಇಳಿದು, ಹೊಟ್ಟೆ ಹಸಿವು ಇಂಗಿಸಲು ಹತ್ತಿರದ ಹೋಟೆಲಿಗೆ ತೆರಳಿದೆ. ಆದರೆ ನನ್ನ ವಿಚಾರ ಸರಣಿ ಮತ್ತೆ ಮುಂದುವರೆಯಿತು.
ಕಾಲಕ್ಕೆ ತಕ್ಕಂತೆ ಮಾರ್ಪಾಡು ಆದರೂ, ಆದಿ ಮಾನವನಲ್ಲಿ ಅಡಗಿದ್ದ ಜೀನ್ ಗಳು ನಮ್ಮ ಪೀಳಿಗೆಗಳಿಗೆ ಸಾಗಿ ಬಂದು, ನಮ್ಮನ್ನು ಸ್ವಾರ್ಥಿಗಳಾಗಿ, ಜೀವನ ಸಂಗಾತಿ ಹುಡುಕಿ ವಂಶ ಮುಂದುವರೆಯುವಂತೆ ಪ್ರಚೋದಿಸುವುದರ ಜೊತೆಗೆ, ತಾವು ಬದುಕ್ಕಿದ್ದ ಕಾಲ ಘಟ್ಟವನ್ನು ಮರೆಯದೆ, ಮೂಲಗಳನ್ನು ಹುಡುಕಿ ಕೊಂಡು ಹೋಗುವ ಪ್ರಚೋದನೆಗಳನ್ನು ಕೂಡ ಮಾಡುತ್ತದೆ.
ನನ್ನ ತಲೆಯಲ್ಲಿರುವುದು ಪುಸ್ತಕದ ಬದನೇಕಾಯಿ ಗಿಡವೋ ಎನ್ನುವ ಸಂಶಯ ಮೂಡಿ, ಚಹಾ ಹೀರುತ್ತಾ ಸುತ್ತಲಿನ ಜನರನ್ನು ಗಮನಿಸತೊಡಗಿದೆ.
ಚಿಕ್ಕಂದಿನಲ್ಲಿ ಶಾಲೆ ಓದುತ್ತಿರುವಾಗ ಬಡ ಸ್ನೇಹಿತರನ್ನು ತನ್ನ ಮನೆಗೆ ಊಟಕ್ಕೆ (ವಾರಾನ್ನ) ಕರೆದುಕೊಂಡು ಹೋಗುತ್ತಿದ್ದ ಸ್ನೇಹಿತ ಕಣ್ಣಿಗೆ ಬಿದ್ದ. ಈಗ ಅವನು ತನ್ನ ಅಂಗಡಿಯ ಮುಂದೆ ಗೋವಿನ ಪೂಜೆ ಮಾಡುತ್ತಿದ್ದ ಅದಕ್ಕೆ ಹಣ್ಣು ತಿನ್ನಿಸುತ್ತಿದ್ದ. ಚಿಕ್ಕಂದಿನ ಅವನ ನಡುವಳಿಕೆ ನಲವತ್ತು ವರುಷ ಕಳೆದರು ಬದಲಾಗಿರಲಿಲ್ಲ. ಅದಕ್ಕೆ ಕಾರಣ ಅವನಲ್ಲಿನ ಜೀನ್ ಗಳು ಎಂದಾದರೆ, ಬೆಟ್ಟದ ದೈವದ ಆಕರ್ಷಣೆ ಕೂಡ ನಮ್ಮ ಪೂರ್ವಜರ ಬಳುವಳಿ ಏಕಾಗಿರಬಾರದು?
ಸಾವಿರಾರು ವರುಷ ಹಿಂದೆ ಬದುಕಿದ್ದ ನಮ್ಮ ಹಿರಿಯರು, ತಮ್ಮ ಬೆಟ್ಟದ ದೈವದ ನಂಬಿಕೆಯನ್ನು ಕೂಡ ನಮಗೆ ವರ್ಗಾಯಿಸುತ್ತ ಹೋದರು. ಕೆಲ ಪೀಳಿಗೆಯವರು ಸುಸಜ್ಜಿತ ಗುಡಿ ಕಟ್ಟಿದರೆ, ಇನ್ನು ಕೆಲವರು ಮೆಟ್ಟಿಲು ಕಟ್ಟಿದರು. ಇಂದಿನ ಪೀಳಿಗೆಯವರು ಆ ಮೆಟ್ಟಿಲುಗಳಿಗೆ ಸುಣ್ಣ ಬಳಿದು ಅಂದ ಹೆಚ್ಚಿಸಿದರು. ನಾನು ತಪ್ಪದೆ ಪ್ರತಿ ವರುಷ ದರ್ಶನಕ್ಕೆ ಬರುತ್ತೇನೆ.
ಪುರಾವೆ ಕೇಳುವ ವಿಜ್ಞಾನದಲ್ಲಿ ಮುಂದೆ ಒಂದು ದಿನ ಇವೆಲ್ಲವುಗಳಿಗೆ ಸಮರ್ಪಕ ವಿವರಣೆ ಸಿಗಬಹುದು. ನನಗೆ ದೇವರ ಮುಂದೆ ತಲೆ ಬಾಗಿಸುವುದನ್ನು ಕಲಿಸಿದ ಅಜ್ಜಿಯ ಭಕ್ತಿ ನನಗೆ ಅಂಧಾನುಕರಣೆ ಅನಿಸುವುದಿಲ್ಲ. ಇವತ್ತಿಗೆ ನನ್ನ ಅಜ್ಜಿ ಇಲ್ಲ. ಮುಂದೆ ಒಂದು ದಿನ ನಾನೂ ಇರುವುದಿಲ್ಲ. ಆದರೆ ಬೆಟ್ಟದ ದೈವ ಇರುತ್ತದೆ. ಹಾಗೆಯೆ ಶ್ರೀ ಮಲ್ಲಿಕಾರ್ಜುನನ ಭಕ್ತರು ಯಾವತ್ತಿಗೂ ಇರುತ್ತಾರೆ.
Sunday, August 20, 2023
ಬಯಲು ಗಣೇಶ, ಸರ್ಕಲ್ ಮಾರಮ್ಮ
ಬಲ್ಲವರಿಗಷ್ಟೇ ಗೊತ್ತು ಕಸ್ತೂರಿ ಪರಿಮಳ
Thursday, August 10, 2023
ಕವನ: ದುಡಿಯುವ ಕಷ್ಟ
ದುಡಿಯದೆ ಇದ್ದರೆ ನಾಯಿಪಾಡು
ದುಡಿಯಲೇ ಬೇಕು ಹೊಟ್ಟೆಪಾಡು
ಹೊಟ್ಟೆ ತುಂಬುವಷ್ಟು ದುಡಿದರೆ ಜೀರ್ಣ
ಜಾಸ್ತಿ ದುಡಿದರೆ ಆಗ ಶುರು ಅಜೀರ್ಣ
ಹೆಚ್ಚಿಗೆ ದುಡಿದರೆ ಹೊಟ್ಟೆ ಕಿಚ್ಚಿನವರ ಮುಖಾಮುಖಿ
ಅದಕ್ಕೂ ಜಾಸ್ತಿ ದುಡಿದರೆ ಅನ್ನುತ್ತಾರೆ ಇವನದೇನೋ ಕಿತಾಪತಿ
ಕಣ್ಣು ಕುಕ್ಕುವಷ್ಟು ದುಡಿದರೆ ಕಾಯುವರು ನಿನ್ನ ಅವನತಿ
ಲೆಕ್ಕಕ್ಕೆ ಸಿಗದಷ್ಟು ದುಡಿದರೆ ಕಾಣಿಸುವರು ನಿನಗೆ ಸದ್ಗತಿ
ದುಡಿದ ದುಡ್ಡು ಎಲ್ಲೂ ಹೇಳದಿದ್ದರೆ ನಿನ್ನದು
ಲೆಕ್ಕ ಗೊತ್ತಾದರೆ ಪಾಲು ಬೇಕು ಎಲ್ಲರಿಗು
ದುಡಿಯುವದಕ್ಕಿಂತ ಕಷ್ಟ ಉಳಿಸಿಕೊಳ್ಳುವುದು
ಅದಕ್ಕೆ ಶ್ರೀಮಂತರು ಹೆಣಗುವುದು
ಹೊಟ್ಟೆ-ಬಟ್ಟೆ, ಸಂತೋಷ-ನೆಮ್ಮದಿ
ಮೀರಿದಾಗ ದುಡ್ಡೇ ನಿನಗೆ ಸಮಾಧಿ
Wednesday, August 2, 2023
ಕವನ: ದುಡ್ಡು ಒಂದೇ, ನಾಮ ಹಲವು
Monday, July 17, 2023
ಗಾಳಿಪಟದೆತ್ತರದ ಕನಸು, ಸೂತ್ರ ಹರಿಯುವ ಹೊತ್ತು
ಮಂಜ, ತಂದೆಯಿಲ್ಲದ, ತಾಯಿಯ ಆರೈಕೆಯಲ್ಲಿರುವ ಬಾಲಕ. ಗಾಳಿಪಟ ಹಾರಿಸುವುದು ಅವನ ಮೆಚ್ಚಿನ ಹವ್ಯಾಸ. ಅಕ್ಕ ಪಕ್ಕದವರ ಮನೆ ಮಹಡಿ ಹತ್ತಿ ಗಾಳಿಪಟ ಬಿಡುವುದರಲ್ಲೇ ಅವನು ಮಗ್ನ. ಅವನನ್ನು ಹುಡುಕಿ ಮನೆಗೆ ಕರೆತಂದು ಓದಲು ಬರೆಯಲು ಹಚ್ಚುವುದೇ ಅವನ ತಾಯಿಗೆ ಕಾಯಕ. ಗಾಳಿಪಟದೆತ್ತರಕ್ಕೆ ಅವನು ಬೆಳೆಯಬೇಕೆಂಬ ಹಂಬಲ ಅವನ ತಾಯಿಯ ಸಹಜ ಆಸೆ. ಅವನು ಶಾಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ ಅವನ ಜೊತೆ ತಾನು ಕೂಡ ಗಾಳಿಪಟ ಹಾರಿಸುವುದಕ್ಕೆ ಬರುವುದಾಗಿ ಅವನ ತಾಯಿ ಭಾಷೆ ನೀಡುತ್ತಾಳೆ. ಅದಕ್ಕೆ ತಕ್ಕಂತೆ ಮಂಜ ಕೂಡ ಶಾಲೆಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರಲ್ಲಿ ಸಫಲನಾಗುತ್ತಾನೆ. ಕೈಯಲ್ಲಿ ಅಂಕಪಟ್ಟಿ ಹಿಡಿದು ಮನೆಗೆ ಓಡುವ ಮಂಜನಿಗೆ ದಾರಿಯಲ್ಲಿ ಕಾದಿರುವ ದೌರ್ಭಾಗ್ಯ ಏನು ಎಂದು ನೀವು ಈ ಕಿರು ಚಿತ್ರ ನೋಡಿಯೇ ತಿಳಿದುಕೊಳ್ಳಿ.
Wednesday, June 28, 2023
ಹಾಳೂರಿನಲ್ಲಿ ಉಳಿದವರು
ಊರುಗಳು ಏತಕ್ಕೆ ಪಾಳು ಬೀಳುತ್ತವೆ? ನಮ್ಮ ಹಂಪೆಯನ್ನು ಶತ್ರುಗಳು ಹಾಳುಗೆಡವಿದರು. ಹಿರೋಷಿಮಾ, ನಾಗಸಾಕಿ ಪಾಳು ಬೀಳುವುದಕ್ಕೆ ಪರಮಾಣು ಬಾಂಬ್ ಗಳು ಕಾರಣವಾದವು. ಒಂದು ಯುದ್ಧ ಮುಗಿಯುವುದಕ್ಕೆ ಕೆಲ ಊರುಗಳು ಪಾಳು ಬೀಳಬೇಕೇನೋ? ಅದನ್ನೇ ಇಂದಿಗೂ ಉಕ್ರೇನ್ ನಲ್ಲಿ ಕೂಡ ಕಾಣಬಹುದು. ಆದರೆ ಅದು ಅಷ್ಟೇ ಅಲ್ಲ. ಅಕ್ಬರ್ ಕಟ್ಟಿದ ಫತೇಪುರ್ ಸಿಕ್ರಿ ಯಲ್ಲಿ ನೀರು ಸಾಕಾಗದೆ ಮೊಗಲ್ ದೊರೆಯಿಂದ ಸಾಮಾನ್ಯ ಪ್ರಜೆಗಳವರೆಗೆ ಎಲ್ಲರೂ ಊರು ಬಿಟ್ಟರು. ಹಿಂದೆ ಪ್ಲೇಗ್ ಬಂದಾಗ ಜನ ಊರು ತೊರೆಯುತ್ತಿದ್ದರು. ಭೂಕಂಪಗಳು ಕೂಡ ಊರುಗಳನ್ನು ಕ್ಷಣಾರ್ಧದಲ್ಲಿ ಪಾಳು ಬೀಳಿಸಿಬಿಡುತ್ತವೆ. ಇಂದಿಗೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜನ ದುಡಿಮೆ ಅರಸಿ ಬೆಂಗಳೂರಿಗೆ ಗುಳೆ ಹೊರಡುತ್ತಾರಲ್ಲ. ಅವರು ತಮ್ಮ ಹಳ್ಳಿಗಳಿಗೆ ಹಿಂತಿರುಗದಿದ್ದರೆ ಅವುಗಳು ಸ್ವಲ್ಪ ಮಟ್ಟಿಗಾದರೂ ಪಾಳು ಬೀಳದೆ ಏನು ಮಾಡುತ್ತವೆ?
ಬಹು ಕಾಲದ ಹಿಂದೆ ಆದಿ ಮಾನವ ಬೆಟ್ಟ, ಗುಡ್ಡಗಳಲ್ಲಿ, ಗುಹೆಗಳಲ್ಲಿ ವಾಸಿಸುತ್ತಿರಲಿಲ್ಲವೇ? ಅವನು ಬೆಟ್ಟ ಇಳಿದು, ನೀರಿನ ವ್ಯವಸ್ಥೆ ಇದ್ದಲ್ಲಿ ವ್ಯವಸಾಯ ಆರಂಭಿಸಿದ. ಕ್ರಮೇಣ ಬಯಲಲ್ಲಿ ಮನೆಗಳನ್ನು ಕಟ್ಟಿಕೊಂಡ. ಅವುಗಳು ಊರಾಗಿ ಬೆಳೆದವು. ವಾಸಕ್ಕೆ ಅನುಕೂಲ ಹೆಚ್ಚಿದ್ದರೆ ಹೊಸ ಊರು ಕಟ್ಟಿಕೊಂಡು ಹಳೆ ಊರು ತೊರೆಯಲು ಹಿಂದೆ ಮುಂದೆ ಯೋಚಿಸಲಿಲ್ಲ. ನಂತರ ಸಮಾಜ ರೂಪುಗೊಂಡು, ಪ್ರದೇಶಗಳು ಸಾಮ್ರಾಜ್ಯಗಳ ಸೀಮೆ ರೇಖೆಗಳಾದವು. ಗೆದ್ದವರು ಸೋತವರ ಊರನ್ನು ಹಾಳುಗೆಡವುತ್ತಿದ್ದರು. ಆ ಸಂಪ್ರದಾಯ ಮುಂದೆ ಹಲವು ಊರುಗಳು ಅಳಿಯಲು ಮತ್ತು ಹೊಸ ಊರುಗಳು ಹುಟ್ಟಿಕೊಳ್ಳಲು ಕಾರಣವಾದವು.
ಆದರೆ ಹಾಳೂರಿನಲ್ಲಿ ಒಬ್ಬಿಬ್ಬರು ಉಳಿದುಕೊಂಡರೆ ಅವರೇ ಊರ ಗೌಡರು ಎನ್ನೋದು ಗಾದೆ ಮಾತು. ಆದರೆ ಆ ಊರಿನಲ್ಲಿ ಉಳಿದುಕೊಳ್ಳಲು ಕಾರಣಗಳು ಮುಗಿದು ಹೋಗಿವೆ. ಹಳೆ ನೆನಪಿಗಳಿಗೆ, ಸಂಪ್ರದಾಯಗಳಿಗೆ, ಮುಲಾಜಿಗೆ ಬಿದ್ದು ಉಳಿದುಕೊಂಡರೆ ಅವರು ಸಾಧಿಸುವುದೇನು? ಬೇರೆಲ್ಲ ಜನ ಊರು ಬಿಟ್ಟು ಹೋಗಿ ಆಗಿದೆಯಲ್ಲವೇ? ಮತ್ತೆ ಆ ಊರಲ್ಲಿ ಹಳೆಯ ಅನುಕೂಲಗಳು ಉಳಿಯುವುದಿಲ್ಲ. ಪರಸ್ಪರ ಸಹಾಯ, ವ್ಯಾಪಾರ ಯಾವುದು ಸಾಧ್ಯವಿಲ್ಲ. ಹಾಗಿದ್ದಲ್ಲಿ ಪಾಳು ಬಿದ್ದ ಕೋಟೆ ಕಾಯುವೆದೇಕೆ? ಸತ್ತ ಹೆಣಕ್ಕೆ ಶೃಂಗಾರ ಮಾಡಿದರೆ ಏನುಪಯೋಗ?
ನಮ್ಮ ಪೂರ್ವಜರು ಅವರ ಹಿರಿಯರು ಬದುಕಿದ್ದಲ್ಲಿಯೇ ಇರುತ್ತೇವೆ ಎಂದು ನಿಶ್ಚಯ ಮಾಡಿದ್ದರೆ, ಇಂದಿಗೆ ನಾವು ಕೂಡ ಗುಹೆಗಳಲ್ಲಿ ವಾಸ ಮಾಡಬೇಕಿತ್ತು. ಆದರೆ ಹಾಗಾಗಲಿಲ್ಲ. ಸಮಾಜಕ್ಕೆ ಬೇಡದ ಊರುಗಳನ್ನು ಅವನು ತೊರೆದು ಹೊಸ ಜೀವನ ಕಟ್ಟಿಕೊಂಡ. ಆದರೂ ಅಲ್ಲೊಬ್ಬರು ಇಲ್ಲೊಬ್ಬರು ಹಾಳೂರಿನಲ್ಲೂ ಗೌಡರಾಗಿ ಉಳಿದುಕೊಂಡರು. ಅದು ಯಾವುದೊ ಪ್ರತಿಷ್ಠೆಗೋ, ಅಥವಾ ಮುಲಾಜಿಗೆ ಬಿದ್ದು. ಅವರಿಗೆ ತಾವು ಕಳೆದುಕೊಂಡಿದ್ದು ಏನು ಎಂದು ತಿಳಿಯಲಿಲ್ಲ.
ಸಂಪ್ರದಾಯಗಳನ್ನು ಮರೆಯಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಸಂಪ್ರದಾಯಗಳಿಗಾಗಿ ಸಾಯಬಾರದು ಎನ್ನುವುದಷ್ಟೆ ನನ್ನ ಅಭಿಪ್ರಾಯ. ಇಲ್ಲಿ ಊರುಗಳಷ್ಟೇ ಹಾಳು ಬೀಳುವುದಿಲ್ಲ ಎನ್ನುವುದು ಗಮನಿಸಬೇಕು. ಕುಟುಂಬಗಳು ಹಾಳು ಬಿದ್ದಾಗ ಅವರ ಮನೆಗಳು ಕೂಡ ಹಾಳು ಬೀಳುತ್ತವೆ. ಒಬ್ಬ ಮನುಷ್ಯ ಹಾಳು ಬಿದ್ದರೆ ಅವನ ಸಂಬಂಧಗಳು ಕೂಡ ಹಾಳು ಬೀಳುತ್ತವೆ. ಅಂತಹ ಹಾಳೂರುಗಳನ್ನು ಬಿಟ್ಟು ಮುನ್ನಡೆದಷ್ಟೂ ಹೊಸ ಜೀವನಕ್ಕೆ ಅವಕಾಶ.
ಹಾಳೂರು, ಪಾಳು ಬಿದ್ದ ಮನೆ, ಮನುಷ್ಯ ಅಲ್ಲಿ ಗೌಡರಾಗಿ ಉಳಿದು ಯಾವ ಪ್ರಯೋಜನ?