Saturday, February 24, 2024

ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು

ಅಮಾವಾಸ್ಯೆ ಕಳೆದು ೫-೬ ದಿನಗಳಷ್ಟೇ ಆಗಿತ್ತು. ರಾತ್ರಿ ಹೊತ್ತು ಸೆಖೆ ತಾಳದೆ ಹೊರಗೆ ಬಾಲ್ಕನಿಯಲ್ಲಿ ಬಂದು ಮಲಗಿದೆ. ಸಹಜವಾಗಿ ಕಣ್ಣು ಆಕಾಶದತ್ತ ನೋಡಿತು. ಆ ಕಡೆ ಪೂರ್ತಿ ಕತ್ತಲು ಇಲ್ಲ, ಈ ಕಡೆ ಶುಭ್ರ ಬೆಳದಿಂಗಳು ಕೂಡ ಅಲ್ಲ. ಕೆಂಪು ದೀಪ ಮಿಟುಕಿಸುತ್ತ ಹಾರುವ ವಿಮಾನಗಳು ಇದು ಬೆಂಗಳೂರಿನ ಆಕಾಶ ಎನ್ನುವ ಸಂಜ್ಞೆ ಬಿಟ್ಟರೆ ಬೇರೆ ಏನು ಗೋಚರಿಸುತ್ತಿರಲಿಲ್ಲ. ಅಲ್ಲಿ ಚಂದ್ರನಿಲ್ಲ ಎನ್ನುವ ಕೊರತೆ ಎದ್ದು ಕಾಣುತ್ತಿತ್ತು. 


ಕೇಳುತ್ತಿದ್ದ ೯೦ ರ ದಶಕದ ಹಿಂದಿ ಹಾಡುಗಳು ಕೂಡ ಅದೇ ಭಾವವನ್ನು ಹೊಮ್ಮಿಸುತಿದ್ದವು. 


ಮೊದಲಿಗೆ ಆಶಿಕಿ ಚಿತ್ರದ ಗೀತೆ:


'ಚಾಂದ ಕಿ ಜರೂರತ್ ಹೈ ಜೈಸೇ ಚಾಂದನಿ ಕೆ ಲಿಯೇ, 

ಬಸ್ ಏಕ್ ಸನಮ್ ಚಾಹಿಯೇ ಆಶಿಕಿ ಕೆ ಲಿಯೇ'


ಹೌದಲ್ಲವೇ? ಚಂದ್ರನಿಲ್ಲದೆ ಬೆಳೆದಿಂಗಳೆಲ್ಲಿ? ಪ್ರೇಯಸಿ ಇರದೇ ಪ್ರೀತಿ ಎಲ್ಲಿ?


ನಂತರ ಇನ್ನೊಂದು ಗೀತೆ 'ಹಮ್ ಹೈ ರಾಹಿ ಪ್ಯಾರ್ ಕೆ' ಚಿತ್ರದ್ದು 


'ಜಬ್ ತಕ್ ನ ಪಡೆ ಆಶಿಕಿ ಕಿ ನಜರ್,

ಸಿಂಗಾರ್ ಅಧೂರಾ ರೆಹತಾ ಹೈ'


ಇದೂನು ಸರಿಯೇ. ಮೆಚ್ಚುವವರು ಇರದೇ ಹೋದರೆ ಸಿಂಗಾರಕ್ಕೆ ಯಾವ ಬೆಲೆ?


ಆಕಾಶಕ್ಕೂ ಒಂದು ಅಪೂರ್ಣತೆ ಇದೆ. ಅಲ್ಲಿ ಚಂದ್ರನಿದ್ದರೆ ಕಳೆ. ಇಲ್ಲದಿದ್ದರೆ ಅಲ್ಲಿ ಯಾವ ಆಕರ್ಷಣೆಯೂ ಇಲ್ಲ. ಅದು ಬರಿ ಕಗ್ಗತ್ತಲು.


ಹಗಲು ಹೊತ್ತಿನಲ್ಲಿ ಉರಿಯುವ ಸೂರ್ಯ ನಮಗೆ ಬೆವರಿಳಿಸಿ ಕಂಗಾಲು ಮಾಡಿ ಬಿಡುತ್ತಾನೆ. ಅದೇ ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು ಪ್ರತಿಫಲಗೊಂಡು ಆ ಬೆಳಕು ಉಷ್ಣತೆ ಕಳೆದುಕೊಂಡು ಬೆಳದಿಂಗಳಾಗಿ ರಾತ್ರಿಯಲ್ಲಿ ಆಹ್ಲಾದತೆ ತಂದು ಕೊಡುತ್ತದೆ. ಸಮುದ್ರವನ್ನು ಉಕ್ಕೇರಿಸತ್ತದೆ. ಪ್ರೇಮಿಗಳಿಗೆ ಮತ್ತೇರಿಸುತ್ತದೆ. ಕವಿಗಳಿಗೆ ಉತ್ತೇಜನ ನೀಡುತ್ತದೆ. ದಣಿದ ಜೀವಗಳಿಗೆ ತಂಪೆರುಯುತ್ತದೆ. ಆದರೆ ಆ ಸಂತೋಷ ನಿಮಗೆ ಪ್ರತಿ ದಿನ ಇಲ್ಲ.


ಇದು ಗಾಲಿ ತಿರುಗಿದ ಹಾಗೆ ಅಲ್ಲವೇ? ಹುಣ್ಣಿಮೆ ನಂತರ ನಿಮಗೆ ಬೇಕೋ ಬೇಡವೋ ಅಮಾವಾಸ್ಯೆಯ ಕತ್ತಲು ಅನಿಭವಿಸಿದ ಮೇಲೆಯೇ ಇನ್ನೊಮ್ಮೆ ಹುಣ್ಣಿಮೆ. ನಿಮಗೆ ಹುಣ್ಣಿಮೆಯ ಸಂತೋಷ ಬೇಕೆಂದರೆ ಅಮಾವಾಸ್ಯೆ ಹುಟ್ಟಿಸುವ ದಿಗಿಲು ಕೂಡ ಅನುಭವಿಸಬೇಕು. ಯುಗಳ ಗೀತೆ ಹಾಡಿದರೆ ವಿಷಾದ ಗೀತೆ ಕೂಡ ಹಾಡಲೇ ಬೇಕು. ಸರಸ-ವಿರಸವೆಂಬ ಹುಣ್ಣಿಮೆ-ಅಮಾವಾಸ್ಯೆಗಳು ಎಲ್ಲರ ಬಾಳಿನಲ್ಲಿ ಉಂಟು. ಅದು ಪ್ರಕೃತಿ ನಿಯಮ.


ನೀವು ಪ್ರಕೃತಿಯನ್ನು ಮೀರಿಸುವ ಸನ್ಯಾಸಿಯಾದರೆ ನಿಮಗೆ ಹುಣ್ಣಿಮೆ ಸಂತೋಷ ತರದು ಹಾಗೆಯೇ ಅಮಾವಾಸ್ಯೆಯ ಕತ್ತಲು ಭೀತಿಗೊಳಿಸದು. ಆದರೆ ಉಳಿದ ಭಾವನಾತ್ಮಕ ಮನುಜರಿಗೆ ಹುಣ್ಣಿಮೆಯ-ಅಮಾವಾಸ್ಯೆಗಳ ಚಕ್ರಗಳಿಂದ ಹೊರ ಬರಲು ಆಗದು. ಹುಣ್ಣಿಮೆ ಇರುವಷ್ಟು ಹೊತ್ತು ಆನಂದಿಸಿ. ಅದು ಕ್ಷೀಣಿಸಿದಾಗ ಸಂತೋಷದಿಂದಲೇ ಬೀಳ್ಕೊಡಿ. ಏಕೆಂದರೆ ಇನ್ನೊಂದು ಹುಣ್ಣಿಮೆ ಬಂದೆ ಬರುತ್ತದೆ.

ಹೊಸ ತೇರು, ಹಳೆ ಜಾತ್ರೆ, ಸಮಾಯಾತೀತ ಶ್ರೀ ಮಲ್ಲಿಕಾರ್ಜುನ


ನಮ್ಮೂರಿನಲ್ಲಿ ಇಂದು ಭರತ ಹುಣ್ಣಿಮೆಯ ದಿನದಂದು ಶ್ರೀ ಮಲ್ಲಿಕಾರ್ಜುನನ ಜಾತ್ರೆ. ಇಲ್ಲಿ ಜಾತ್ರೆಯ ದಿನದಂದು ಎಳೆಯುವ ತೇರು ಎಷ್ಟು ವರುಷ ಹಳೆಯದು, ಯಾರು ಮಾಡಿಸಿದ್ದು ಎಂದು ಈ ಊರಿನಲ್ಲಿರುವ ೮೦-೯೦ ವರುಷದ ವೃದ್ಧರಿಗೂ ತಿಳಿದಿಲ್ಲ. ಅವರಿಗೆ ಜಾತ್ರೆಯ ದಿನದಂದು ತೇರು ಎಳೆದದ್ದು ಅಷ್ಟೇ ನೆನಪು. ತೇರಿನ ಹಳೆಯ ಭಾಗಗಳು (ಕಟ್ಟಿಗೆಯಿಂದ ಮಾಡಿದ್ದು) ಗಮನಿಸಿ ನೋಡಿದಾಗ ಇದು ೧೨೦ ರಿಂದ ೧೫೦ ವರುಷ ಹಳೆಯದು ಎಂದು ಅಂದಾಜು ಮಾಡಬಹುದು. ಗಟ್ಟಿ-ಮುಟ್ಟ್ಯಾಗಿರುವ ಜನ ತುಂಬಾ ಭಾರವೆನಿಸುವ ಹಗ್ಗ ಹಿಡಿದು ತೇರು ಎಳೆದರೆ, ಉಳಿದೆಲ್ಲ ಭಕ್ತರಿಗೆ ತೇರಿನ ಕಳಸಕ್ಕೆ ಬಾಳೆ ಹಣ್ಣು ಎಸೆಯುವ ಸಂಭ್ರಮ. ತೇರು ತನ್ನ ಮನೆಗೆ ಮರಳಿದ ನಂತರ ಸಂಜೆ ಹೊತ್ತಿಗೆ ಜಾತ್ರೆ ಶುರು. ಇದು ಸಾವಿರಾರು ವರುಷಗಳಿಂದ ಇಲ್ಲಿ ನೆಲೆಗೊಂಡಿರುವ ಶ್ರೀ ಮಲ್ಲಿಕಾರ್ಜುನನ ಜಾತ್ರೆ.

ನೂರಾರು ವರುಷಗಳ ಹಳೆಯ ಸಂಪ್ರದಾಯ ಎನಿಸುವ ಪೂಜೆಗಳು ಬೆಳಿಗ್ಗೆ ಹೊತ್ತಿಗೆಲ್ಲ ಶುರು. ಹೆಚ್ಚು ಕಡಿಮೆ ಊರಿನ ಜನ ಎಲ್ಲ ಶ್ರೀ ಮಲ್ಲಿಕಾರ್ಜುನ ದರ್ಶನ ಪಡೆಯುವಷ್ಟರಲ್ಲಿ ಸುತ್ತ ಹತ್ತಾರು ಹಳ್ಳಿಗಳಿಂದ ಜನರ ಆಗಮನ, ಡೊಳ್ಳು ಬಾರಿಸುತ್ತ ಬರುವ ಕುರುಬರು ವಿಶೇಷ ಗಮನ ಸೆಳೆಯುತ್ತಾರೆ. ಸಣ್ಣ ಮಕ್ಕಳ ಕೈಯಲ್ಲಿ ಬಣ್ಣದ ಬಲೂನುಗಳು, ಹೆಂಗಳೆಯರ ಮುಖದಲ್ಲಿ ಭಕ್ರಿ ಭಾವ, ಗಂಡಸರ ಮುಖದಲ್ಲಿ ತೇರು ಎಳೆಯುವ ಉತ್ಸಾಹ. ಇದು ಪ್ರತಿ ವರುಷ ಜಾತ್ರೆಯ ದಿನ ಕಾಣ ಸಿಗುವ ನೋಟ.

ಶ್ರೀ ಮಲ್ಲಿಕಾರ್ಜುನ ಕಾಲಾತೀತ. ಆತನಿಗೆ ಹಳೆ ಪೀಳಿಗೆಯ ಭಕ್ತರು ಮಣ್ಣು ಸೇರಿದರೆ  ಹೊಸ ಪೀಳಿಗೆಯ ಭಕ್ತರು ಮಲ್ಲಿಕಾರ್ಜುನ ಜಾತ್ರೆ ನಡೆಸಿಕೊಂಡು ಹೋಗುತ್ತಾರೆ. ಸುಮಾರು ೫-೬ ಪೀಳಿಗೆಯ ಜನ ಎಳೆದ ತೇರು ಕೆಲವು ವರುಷಗಳಿಂದ ತೊಂದರೆ ಕೊಡುತ್ತಲಿತ್ತು. ಹೊಸ ಗಾಲಿಗಳು ಬಂದರು ತೊಂದರೆ ತಪ್ಪಲಿಲ್ಲ. ದಾರಿ ಬಿಟ್ಟು ಬರುವ ತೇರು, ಸಿಕ್ಕಿ ಹಾಕಿಕೊಂಡ ಜಾಗದಿಂದ ಮಿಸುಗಾಡದ ತೇರು, ತುಂಡಾಗುವ ಹಗ್ಗ ಹೀಗೆ ಹಲವು ತೊಂದರೆಗಳಿಂದ ತೇರನ್ನು ಒಂದೇ ದಿನದಲ್ಲಿ ಆದರೆ ಮನೆಗೆ ಸೇರಿಸಲು ಆಗುತ್ತಿರಲಿಲ್ಲ. ದೈವ ಕೃಪೆಯೋ, ಭಕ್ತರ ಕಾಳಜಿಯೋ ಒಟ್ಟಿನಲ್ಲಿ ಈ ವರುಷ ಹೊಸ ತೇರು ಬಂದಾಗಿದೆ. 

ಹಳೆಯ ತೇರನ್ನು ಕೊನೆಯ ಬಾರಿಗೆ ಎಳೆದು, ಹೊಸ ತೇರನ್ನು ಮಲ್ಲಿಕಾರ್ಜುನನ ಸೇವೆಗೆ ಬಿಡುವ ಜಾತ್ರೆ ಇಂದು. ಎರಡು ತೇರುಗಳನ್ನು ಒಟ್ಟಿಗೆ ನೋಡಿದ ಆನಂದ ಈ ದಿನ ನನ್ನದು. ಅಷ್ಟೇ ಅಲ್ಲ, ನಿಮಗೂ ಅದನ್ನು ತೋರಿಸುವ ಆಸೆ. ಒಮ್ಮೆ ವಿಡಿಯೋ ನೋಡಿ.