ಮಂಜ, ತಂದೆಯಿಲ್ಲದ, ತಾಯಿಯ ಆರೈಕೆಯಲ್ಲಿರುವ ಬಾಲಕ. ಗಾಳಿಪಟ ಹಾರಿಸುವುದು ಅವನ ಮೆಚ್ಚಿನ ಹವ್ಯಾಸ. ಅಕ್ಕ ಪಕ್ಕದವರ ಮನೆ ಮಹಡಿ ಹತ್ತಿ ಗಾಳಿಪಟ ಬಿಡುವುದರಲ್ಲೇ ಅವನು ಮಗ್ನ. ಅವನನ್ನು ಹುಡುಕಿ ಮನೆಗೆ ಕರೆತಂದು ಓದಲು ಬರೆಯಲು ಹಚ್ಚುವುದೇ ಅವನ ತಾಯಿಗೆ ಕಾಯಕ. ಗಾಳಿಪಟದೆತ್ತರಕ್ಕೆ ಅವನು ಬೆಳೆಯಬೇಕೆಂಬ ಹಂಬಲ ಅವನ ತಾಯಿಯ ಸಹಜ ಆಸೆ. ಅವನು ಶಾಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ ಅವನ ಜೊತೆ ತಾನು ಕೂಡ ಗಾಳಿಪಟ ಹಾರಿಸುವುದಕ್ಕೆ ಬರುವುದಾಗಿ ಅವನ ತಾಯಿ ಭಾಷೆ ನೀಡುತ್ತಾಳೆ. ಅದಕ್ಕೆ ತಕ್ಕಂತೆ ಮಂಜ ಕೂಡ ಶಾಲೆಯ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರಲ್ಲಿ ಸಫಲನಾಗುತ್ತಾನೆ. ಕೈಯಲ್ಲಿ ಅಂಕಪಟ್ಟಿ ಹಿಡಿದು ಮನೆಗೆ ಓಡುವ ಮಂಜನಿಗೆ ದಾರಿಯಲ್ಲಿ ಕಾದಿರುವ ದೌರ್ಭಾಗ್ಯ ಏನು ಎಂದು ನೀವು ಈ ಕಿರು ಚಿತ್ರ ನೋಡಿಯೇ ತಿಳಿದುಕೊಳ್ಳಿ.
ಗಾಳಿಪಟದ ದಾರಕ್ಕೆ ಗಾಜಿನ ಪುಡಿಯನ್ನು ಸವರುವುದು ಬರೀ ಪಕ್ಷಿಗಳ ಪ್ರಾಣ ಅಷ್ಟೇ ಅಲ್ಲ, ಮನುಷ್ಯರ ಅದರಲ್ಲೂ ಅನೇಕ ಬಾಲಕರ ಪ್ರಾಣಗಳನ್ನು ಕೂಡ ತೆಗೆದುಬಿಟ್ಟಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಣಗೊಂಡ 'ಮಂಜ' ಕಿರುಚಿತ್ರ ನೋಡುಗರ ಗಮನ ಸೆಳೆಯುತ್ತದೆ. ಮತ್ತು ಹಲವಾರು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಥೆ ಸಾಗುವ ರೀತಿ, ಛಾಯಾಗ್ರಹಣ, ಧ್ವನಿ ಸಂಯೋಜನೆ ಎಲ್ಲದರ ಸ್ಪಷ್ಟ ನಿರೂಪಣೆಯ ಜೊತೆಗೆ ಈ ಒಂದು ಕಿರುಚಿತ್ರ, ಪೂರ್ಣ ಪ್ರಮಾಣದ ಚಲನಚಿತ್ರ ನೋಡುವ ಅನುಭವ ಒದಗಿಸುತ್ತದೆ. ಹೆಚ್ಚಿನ ಕಲಾವಿದರು ಹೊಸಬರು ಆದರೂ, ಅಭಿನಯದಲ್ಲಿ ಏನೂ ಕಡಿಮೆ ಇಲ್ಲ. ಚಿತ್ರದ ಆರಂಭ ಮತ್ತು ಕೊನೆಯಲ್ಲಿ ಡಾಲಿ ಧನಂಜಯ ಅವರ ಹಿನ್ನೆಲೆ ಧ್ವನಿ ಗಮನ ಸೆಳೆಯುತ್ತದೆ. ಮತ್ತು ಚಿತ್ರ ಮುಗಿದಾಗ ವಿಷಾದ ಭಾವ ಮೂಡುವುದರ ಜೊತೆಗೆ ಒಂದು ದುರಭ್ಯಾಸ ಹೇಗೆ ಮಾರಣಾಂತಕ ಆಗಬಲ್ಲದು ಎನ್ನುವ ಪ್ರಜ್ಞೆ ಮೂಡುತ್ತದೆ.
ಗಮನ ಸೆಳೆಯುವ ಕಥೆ ಬರೆದು, ಈ ಕಿರು ಚಿತ್ರ ನಿರ್ಮಿಸಿದ ಅನಂತ ಸುಬ್ರಮಣ್ಯ (Anantha Subramanyam K) ಮತ್ತು ನಿರ್ದೇಶಕರಾದ ಹರ್ಷಿತ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇವರ ಪ್ರತಿಭೆಯಲ್ಲಿ ಇನ್ನು ಅನೇಕ ಕಥೆಗಳು ಅಡಗಿವೆ. ಅವುಗಳು ತೆರೆಗೆ ಬಂದು, ಸದಭಿರುಚಿಯ ನೋಡುಗರ ಗಮನ ಸೆಳೆಯುತ್ತ, ಯಶಸ್ಸು ಕಾಣಲಿ ಎಂದು ಹಾರೈಸುವೆ.