Friday, July 5, 2024

ಗುಡಿ ಸೇರದ, ಮುಡಿ ಏರದ

ಹೂವಿನ ಸಾರ್ಥಕತೆ ಇರುವದೇ ಅಲ್ಲಿ ಅಲ್ಲವೇ? ಗುಡಿ ಸೇರಿ ಪೂಜಿಸಿಕೊಂಡರೆ, ಮುಡಿ ಏರಿ ಆಕರ್ಷಿಸದೇ ಹೋದರೆ ಹೂವಾಗಿ ಅರಳಿ ಏನು ಉಪಯೋಗ? ಆದರೆ ಕಡೆಗಣಿಸಿಕೊಳ್ಳುವ ಹೂಗಳಿಗೇನು ಕಮ್ಮಿ ಇಲ್ಲ.

 

ಇಷ್ಟಕ್ಕೂ ಆರಾಧಕ ಇಲ್ಲದೆ ಹೋದರೆ ಸೌಂದರ್ಯಕ್ಕೆ ಏನು ಬೆಲೆ? ಯಾವುದೊ ಕಾಡ ಮೂಲೆಯಲ್ಲಿ ಘಮ್ಮೆನೆ ಅರಳಿ ಹಾಗೆಯೆ ಬಾಡಿ ಹೋಗುವ ಹೂವುಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ? ಹೂವಿಗೆ ಬೆಲೆ ಬರುವುದು ಅದರ ಬಣ್ಣಗಳನ್ನು ಮೆಚ್ಚಿಕೊಳ್ಳುವ ಚಿತ್ರಕಲಾವಿದನಿಂದ. ಅದರ ಸುವಾಸನೆಯನ್ನು ಮೆಚ್ಚಿಕೊಳ್ಳುವ ಜನರಿಂದ. ಅದನ್ನು ಹಾರವಾಗಿ ದೇವರ ಕೊರಳಿಗೆ ಅರ್ಪಿಸುವ ಭಕ್ತರಿಂದ. ಅದನ್ನು ಮುಡಿದು ತಮ್ಮ ಅಂದ ಹೆಚ್ಚಿಸಿಕೊಳ್ಳುವ ಹೆಂಗಸರಿಂದ.

 

ಅದನ್ನೇ ನಮ್ಮ ಜನರ ಜೀವನಕ್ಕೆ ಹೋಲಿಸಿ ನೋಡೋಣ. ಹೆಚ್ಚಿನ ಪ್ರಮಾಣದಲ್ಲಿ ಹಣ ಗಳಿಸುವ ಜನರಿಗೆ ಪ್ರಪಂಚದ ಎಲ್ಲ ಮೂಲೆಯಲ್ಲಿ ಗೌರವ ಇದೆ. ನಮ್ಮ ದೇಶದಲ್ಲಿ ಕ್ರಿಕೆಟ್ ಆಟಗಾರರಿಗೆ, ಚಲನ ಚಿತ್ರ ಕಲಾವಿದರಿಗೆ, ಧರ್ಮ ಗುರುಗಳಿಗೆ, ಮಠಾಧಿಪತಿಗಳಿಗೆ ಇರುವ ಗೌರವ ಹೆಚ್ಚಿನದು. ಹಾಗೆಯೆ ಹೆಚ್ಚಿನ ಹಣ, ಜನಪ್ರಿಯತೆ ಗಳಿಸದೆ ಇದ್ದರೂ, ಮಕ್ಕಳನ್ನು ತಿದ್ದುವ ಮೇಷ್ಟ್ರುಗಳಿಗೆ ಸಮಾಜದ ಮನ್ನಣೆ ಇದೆ. ಹಾಗೆಯೆ ಗಡಿ ಕಾಯುವ ಸೈನಿಕ ಪ್ರಾಣ ತೆತ್ತಾಗ ಅವನ ಅಂತ್ಯ ಸಂಸ್ಕಾರಕ್ಕೆ ಇಡೀ ಊರಿನ ಜನ ಬಂದು ಗೌರವ ಕೊಡುತ್ತಾರೆ. ಅವರೆಲ್ಲ ನಿಸ್ಸಂದೇಹವಾಗಿ ಗುಡಿ ಸೇರುವ ಹೂಗಳು.

 

ಬ್ಯಾಂಕ್ ನಲ್ಲಿ ಸಾಲ ಮಂಜೂರು ಮಾಡುವ ಆಫೀಸರ್ ಗಳು, ಡಿ.ಸಿ. ಆಫೀಸಿನಲ್ಲಿ ಕೆಲಸ ಮಾಡಿಸಿಕೊಳ್ಳುವ ಕ್ಲರ್ಕುಗಳು ಗುಡಿ ಸೇರದೆ ಇದ್ದರೂ ಅವಶ್ಯಕತೆ ಇರುವವರ ಮುಡಿ ಸೇರುತ್ತಾರೆ. ಪ್ರತಿ ದಿನ ಬೇರೆ ಬೇರೆಯವರ ಮುಡಿ ಸೇರಿ ಕೃತಜ್ಞರಾಗುತ್ತಾರೆ.

 

ಇನ್ನು ಕೆಲವು ಜನರ ಸೇವೆ ಯಾರ ಕಣ್ಣಿಗೂ ಗೌರವ ಕೊಡುವ ಹಾಗೆ ಕಾಣುವುದಿಲ್ಲ. ಹೋಟೆಲಿನಲ್ಲಿ ತಿಂಡಿ ತಂದು ಕೊಡುವ ಸಪ್ಲಾಯಿರ್ಗಳು, ರಸ್ತೆ ಕಸ ಗುಡಿಸುವ, ಚರಂಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು, ಸ್ಮಶಾನದಲ್ಲಿ ಕುಣಿ ತೊಡುವವರು ಅವರುಗಳ ಕೆಲಸ ಯಾರಿಗೂ ಮಹತ್ವದ್ದು ಅನಿಸುವುದಿಲ್ಲ. ಅವರುಗಳು ಗುಡಿ ಸೇರದ, ಮುಡಿ ಏರದ, ಕಡೆಗಾಣಿಸೋ ಹೂಗಳು.

 

ಮನುಷ್ಯ ಸಂಘ ಜೀವಿ. ಇಲ್ಲಿ ಪ್ರತಿಯೊಬ್ಬರಿಗೂ ತಮ್ಮ ಜೀವನ ಮಹತ್ವದ್ದು ಎಂದು ಅನಿಸಿಕೊಳ್ಳುವ ಇರಾದೆ ಇದ್ದೆ ಇರುತ್ತದೆ. ಆದರೆ ನಮ್ಮ ಸಮಾಜ ಕೆಲವರನ್ನು ಗುಡಿ ಸೇರಿಸಿ, ಕೆಲವರನ್ನು ಮುಡಿಗೇರಿಸಿ ಉಳಿದೆಲ್ಲರನ್ನು ಯಾವುದೇ ಮುಲಾಜು ಇಲ್ಲದೆ ವ್ಯವಸ್ಥಿತವಾಗಿ ತುಳಿದು ಹಾಕುತ್ತದೆ. ಅವರುಗಳು ತಮ್ಮ ಜೀವನದ ಸಾರ್ಥಕತೆ ಕಂಡು ಕೊಳ್ಳಲು ಪ್ರತಿ ದಿನ ಹೋರಾಡಬೇಕು. ಹೋರಾಡುವುದರಲ್ಲೇ ಅವರ ಸಾರ್ಥಕತೆ ಅಡಗಿದೆ ಏನೋ?