Friday, November 29, 2024

Monday, November 4, 2024

ಏಕಾಂತ ಹುಟ್ಟಿಸುವ ಅರಿವು

ನವೆಂಬರ್ ತಿಂಗಳ ಚಳಿ. ಆಫೀಸ್ ಗೆ ಬೇಗ ಹೋಗಬೇಕೆಂದು ಇಟ್ಟುಕೊಂಡಿದ್ದ ಅಲಾರಾಂ ಹೊಡೆಯುವ ಮುನ್ನವೇ ನನಗೆ ಎಚ್ಚರವಾಗಿದೆ. ಮುಖಕ್ಕೆ ತಣ್ಣೀರು ಎರಚಿಕೊಳ್ಳುತ್ತೇನೆ. ಕತ್ತಲು ಹರಿದು ಬೆಳ್ಳನೆ ಬೆಳಗಾಗುವ ಹೊತ್ತಿಗೆಲ್ಲ ನನ್ನ ಬೈಕು ಗುರುಗುಟ್ಟತೊಡಗುತ್ತದೆ. ಬೆಚ್ಚಗೆ  ಹೊದ್ದು ಮಲಗುವುದು ಎಷ್ಟು ಸುಖವೊ ಅಷ್ಟೇ ಆನಂದ ಆ ಹೊತ್ತಿನಲ್ಲಿ ರಸ್ತೆಗೆ ಇಳಿಯುವುದು ಎನ್ನುವ ನನ್ನ ಹಿಂದಿನ ಅನುಭವ ಇಂದು ಮತ್ತೆ ಆಗತೊಡಗಿದೆ.  ರಸ್ತೆಯ ಮೇಲೆ ಅತಿ ಕಡಿಮೆ ಅನ್ನಿಸುವಷ್ಟು ವಾಹನಗಳು. ಕೆಂಪು ದೀಪ ಹೊತ್ತಿಕೊಂಡು ನಮಗೆ ನಿಲ್ಲಿ ಎಂದು ಆಜ್ಞೆ ಮಾಡಲು ಇನ್ನು ಸಮಯವಿದೆ. ಸಲೀಸಾಗಿ ನಾನು ಸಾಗತೊಡಗುತ್ತೇನೆ. ಬೆಂಗಳೂರು ವಿಶ್ವವಿದ್ಯಾಲಯ ಒಳಗಡೆ ರಸ್ತೆಯ ಮೇಲೆ ಜಾಗಿಂಗ್ ಮಾಡುತ್ತಿರುವ ಹಲವರು ನನಗಿಂತ ಜೀವನವನ್ನು ಹೆಚ್ಚಿಗೆ ಪ್ರೀತಿ ಮಾಡುವಂತೆ ಕಾಣುತ್ತಾರೆ. ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಪೂರ್ತಿ ಖಾಲಿ ಇದೆ. ಆದರೂ ಪ್ರತಿ ದಿನ ನಿಲ್ಲಿಸುವ ಜಾಗದಲ್ಲೇ ನನ್ನ ಗಾಡಿಯನ್ನು ನಿಲ್ಲಿಸುತ್ತೇನೆ. ಹಾಗೆ ಮೆಟ್ರೋದಲ್ಲಿ  ಕುಳಿತುಕೊಳ್ಳಲು ಜಾಗ ಸಿಗುವುದೋ ಇಲ್ಲವೋ ಎನ್ನುವ ಭಯವಿಲ್ಲ. ಮೆಟ್ರೋ ರೈಲಿನಲ್ಲಿ ಕುಳಿತು ಜೇಬಲ್ಲಿರುವ ಮೊಬೈಲ್ ತೆಗೆದು ಬರೆಯಲು ತೊಡಗುತ್ತೇನೆ.


ಓದುವದಕ್ಕೂ ಬರೆಯುವದಕ್ಕೂ ಏಕಾಂತ ಬೇಕೇ ಬೇಕು. ಆ ಏಕಾಂತ ರಸ್ತೆಯ ಮೇಲೆ ಹಾಗು ಪ್ರಯಾಣದಲ್ಲಿ ಸಿಕ್ಕಾಗ ಅಂದಿನ ಲಹರಿಯೇ ಬೇರೆ. ಓದುವುದು ನಮ್ಮನ್ನು ಏಕಾಂಗಿಗಳಾಗಿ ಮಾಡುತ್ತದೋ ಅಥವಾ ಏಕಾಂತ ನಮ್ಮನ್ನು ಓದಲು ಪ್ರೆರೇಪಿಸಿಸುತ್ತದೋ ಹೇಳುವುದು ಕಷ್ಟ. ಅವು ಒಂದಕ್ಕೊಂದು ಪೂರಕ. ಜೋಡಿ ಹಕ್ಕಿಗಳ ಹಾಗೆ, ಬೆಸೆದ ಹಾವುಗಳ ಹಾಗೆ, ಹೊಂದಿಕೊಂಡ ದಂಪತಿಗಳ ಹಾಗೆ. ಓದುವ ಮತ್ತು  ಲಹರಿ ಹುಟ್ಟಿಸಿದ ಭಾವ ಗಟ್ಟಿಗೊಂಡ ಮೇಲೆ ಮತ್ತೆ ಅವು ಅಕ್ಷರ ರೂಪ ತಾಳಿ ಹೊರ ಬರುವುದೇ ಬರವಣಿಗೆ. ಅದು ಬೇಡುವ ಏಕಾಗ್ರತೆ ಓದಿಗಿಂತ ಹೆಚ್ಚಿನದು. ಈ ಓದು-ಬರಹಕ್ಕಿಂತ ದೊಡ್ಡ ಮೆಟ್ಟಿಲು ಧ್ಯಾನ. ನಿಮ್ಮ ಓದು ಮುಗಿದಾಗ ಮತ್ತು ಬರೆಯುವ ಅವಶ್ಯಕೆತೆ ಇಲ್ಲದಾದಾಗ ಹುಟ್ಟಿಕೊಳ್ಳುವುದೇ ಧ್ಯಾನ. ಕಣ್ಣು ಮುಚ್ಚಿದರೂ ಮನಸ್ಸು ತೆರೆದೆಕೊಳ್ಳುತ್ತದೆಯಲ್ಲ. ಅದು ಹೇಳುವುದೆಲ್ಲ ಮುಗಿಸಿ ಇನ್ನ್ಯಾವ ತಗಾದೆ ಇಲ್ಲ ಎಂದಾದಾಗ ಆ ಜಾಗದಲ್ಲಿ ಶಾಂತಿ ಅವರಿಸಿಕೊಳ್ಳತೊಡಗುತ್ತದೆ. ಮತ್ತೆ ಕಣ್ಣು ತೆಗೆದು ನೋಡುತ್ತೇನೆ. ಸುತ್ತಲಿನ ಜನ ಭಾವನೆಗಳ ಒತ್ತಡದಲ್ಲಿ ಸಿಲುಕಿರಿವುದು ಸ್ಪಷ್ಟವಾಗಿಯೇ ಗೋಚರ ಆಗುತ್ತದೆ. 


ಲೌಕಿಕ  ಪ್ರಪಂಚದ ಹೊರ ನಿಂತು ನೋಡಿದರೆ ಯಾವ ಚಿಂತೆಯೂ ದೊಡ್ಡದಲ್ಲ. ಆದರೆ ಅದು ಸುಲಭವೆ? ಅಲ್ಲಮ ಹೇಳಿದ ಹಾಗೆ ಮನದ ಮುಂದಿನ ಆಸೆಗೆ ಸಿಲುಕಿದಾಗ ಮಾಯಾ ಪ್ರಪಂಚ ನಮ್ಮನ್ನು ಸೆಳೆದುಕೊಳ್ಳದೆ ಬಿಟ್ಟಿತೇ? ಹಾಗೆಯೆ ಬುದ್ಧ ಹೇಳಿದ ಹಾಗೆ ಬಂಧನಗಳನ್ನು ಕಳಚದೆ ಮುಕ್ತಿ ದೊರಕಿತೆ? ಅವರಿಗೂ ಏಕಾಂತದಲ್ಲಿ ಭಾವನೆಗಳ ಹೊಯ್ದಾಟ ಮುಗಿದ ಮೇಲೆ ಅರ್ಥವಾಗಿದ್ದ ಸತ್ಯ ಇಷ್ಟೇ ಇತ್ತೋ ಏನೋ? ಆದರೆ ಅದು ಅರಿವಿಗೆ ಬಂದ ಮೇಲೆ ನಮಗೆ ಸಂತೋಷ ಮತ್ತು ದುಃಖ ಎರಡರ ನಡುವಿನ ನಿರ್ಲಿಪ್ತತೆಗೆ ಮನಸ್ಸು ಬಂದು ನಿಂತು ಬಿಡುತ್ತದೆ.ನಾನು ಆಫೀಸ್ ಸೇರಿ ಕೆಲಸಕ್ಕೆ  ತೊಡಗುತ್ತೇನೆ. ಸಂತೋಷದಿಂದ ಅಲ್ಲ. ದುಃಖದಿಂದಲೂ ಅಲ್ಲ. ಆದರೂ ತುಟಿಯ ಮೇಲೆ ಕಿರುನಗೆ ಮೂಡುತ್ತದೆ. ಅದು ಮನದೊಳಗೆ ಹುಟ್ಟಿದ ಅರಿವಿನಿಂದ.