Seals from Harappan times (Source: Harappa.com) |
ಬಹು ಕಾಲದ ಹಿಂದೆ, ಶ್ರೀರಾಮನ ಪೂರ್ವಜನಾದ ಪುರುಕುತ್ಸನು ಅಯೋಧ್ಯೆಯನ್ನು ಆಳುತಿದ್ದ ರಾಜ. ಅವನ ತಂಗಿ ಪುರುಕುತ್ಸಾನಿಯೇ ಅವನ ಪತ್ನಿ. ರಾಜ ಮನೆತನದ ಆಗಿನ ಪದ್ದತಿಯಂತೆ ಸೋದರ-ಸೋದರಿಯ ನಡುವೆ ವಿವಾಹ ಜರುಗಿತ್ತು. ಆದರೆ ದಾಂಪತ್ಯ ಜೀವನ ಅವರಿಂದ ಸಾಧ್ಯವಾಗದೆ, ಪುರುಕುತ್ಸನು ವಿಲಾಸಿ ಜೀವನದಲ್ಲಿ ಮುಳುಗುತ್ತಾನೆ. ರಾಜ್ಯ ನಿಭಾಯಿಸುವ ಹೊಣೆ ಹಂತ ಹಂತವಾಗಿ ರಾಣಿಯ ಕಡೆಗೆ ವಾಲುತ್ತದೆ. ಶತ್ರು ದೇಶದ ಆಕ್ರಮಣವೊಂದರಲ್ಲಿ, ಪುರುಕುತ್ಸ ಬಂಧಿಯಾಗಿ ಅಯೋಧ್ಯೆಯಿಂದ ಬೇರ್ಪಡುತ್ತಾನೆ. ಆಗ ರಾಜ್ಯದ ಸಂಪೂರ್ಣ ಜವಾಬ್ದಾರಿ ರಾಣಿಯ ಹೆಗಲೇರುತ್ತದೆ.
ತುಂಬ ಮುಂದಾಲೋಚಾನೆಯಿದ್ದ ರಾಣಿ, ಅಯೋಧ್ಯೆಯ ಹಿತವನ್ನು ಸಮರ್ಥವಾಗಿ ಕಾಪಾಡಿ ಕೊಂಡು ಬರುತ್ತಾಳೆ. ರಾಜ್ಯದ ಆಂತರಿಕ ಸಮಸ್ಯೆಗಳನ್ನು ಮತ್ತು ಹೊರ ಶತ್ರುಗಳ ಭಾಧೆಯನ್ನು ಬುದ್ದಿವಂತಿಕೆಯಿಂದ ಪರಿಹರಿಸಿಕೊಳ್ಳುತ್ತಾಳೆ. ಆದರೆ ಅವಳಿಗಿರುವ ನೋವೆಂದರೆ ಸಂತಾನವಿಲ್ಲದಿರುವುದು. ಇದಕ್ಕೆ ಪರಿಹಾರವಾಗಿ ನಿಯೋಗದಿಂದ ಸಂತಾನ ಪಡೆಯುವಂತೆ ಸೂಚಿಸುತ್ತಾರೆ ಅವಳ ಧರ್ಮ ಗುರುಗಳು. ಹೊರ ಲೋಕಕ್ಕೆ ರಾಜ ಪುರುಕುತ್ಸನೇ ಗರ್ಭಧಾರಣೆಗಾಗಿ ಕೆಲ ಕಾಲ ಸೆರೆಯಿಂದ ಹೊರಬಂದಂತೆ ಸನ್ನಿವೇಶ ಸ್ರಷ್ಟಿಸಿ, ಸಿಂಹಭಟ್ಟನೆಂಬ ಬ್ರಾಹ್ಮಣನಿಂದ ಪುತ್ರ ಸಂತಾನವನ್ನು ಪಡೆಯುವ ರಾಣಿ ಮಗುವಿನ ಬೆಳವಣಿಗೆಯಲ್ಲಿ, ರಾಜ್ಯದ ಪಾಲನೆಯಲ್ಲಿ ಮುಳುಗಿ ಹೋಗುತ್ತಾಳೆ.ಅವಳ ಮಗ ತ್ರಸದಸ್ಸ್ಯು ಬೆಳೆದು, ರಾಜ್ಯದ ಅಧಿಕಾರವನ್ನು ವಹಿಸಿಕೊಳ್ಳುತ್ತಾನೆ. ತಾಯಿಯ ಬಲಗೈ ಬಂಟ ತಾರ್ಕ್ಷ್ಯನೇ ಅವನಿಗೆ ಸಮರ ಕಲೆಗಳನ್ನು ಕಲಿಸುವ ಗುರುವಾಗುತ್ತಾನೆ. ತದ ನಂತರ ರಾಣಿ ಪುರುಕುತ್ಸಾನಿ ರಾಜಕೀಯವನ್ನು ತೊರೆದು ಆಶ್ರಮವಾಸಿಯಗುತ್ತಾಳೆ.
ತರುಣ ರಾಜ ತ್ರಸದಸ್ಸ್ಯು ವಿಲಕ್ಷಣ ಸಂಧರ್ಭವೊಂದರಲ್ಲಿ ತನ್ನ ಗೆಳೆಯ ವೃಶಭಟ್ಟನೊಂದಿಗೆ ವಾಜ್ಯಕ್ಕೆ ಇಳಿಯುತ್ತಾನೆ. ಇದನ್ನು ನಿಶ್ಪಕ್ಷಪಾತಿಯಾಗಿ ಬಗೆ ಹರಿಸಲು ಪಕ್ಕದ ಕಾಶಿ ರಾಜ್ಯದ ದೊರೆಗೆ ಅಹ್ವಾನ ಹೊಗುತ್ತದೆ. ರಾಜ ತ್ರಸದಸ್ಸ್ಯುವಿನ ಮಾನ ತೆಗೆಯಲು ಪಣ ತೊಟ್ಟ ವೃಶಭಟ್ಟ ರಾಜನ ಜನ್ಮ ರಹಸ್ಯದ ಬಗ್ಗೆ ಪ್ರಶ್ನಿಸುತ್ತಾನೆ. ಸಂಶಯದ ಅನುಮಾನ ಹೊಕ್ಕ ತ್ರಸದಸ್ಸ್ಯು ತಾಯಿಯನ್ನು ಮತ್ತು ಗುರುಗಳನ್ನು ಪ್ರಶ್ನಿಸಲು ಆಶ್ರಮಕ್ಕೆ ತೆರಳುತ್ತಾನೆ. ಅವನು ದೈವಾಂಶದಿಂದ ಹುಟ್ಟಿದವನೆಂದು ಅವನಿಗೆ ಭೊಧನೆಯಗುತ್ತದೆ. ಆಶ್ರಮದಲ್ಲಿ ಮತಿ ಭ್ರಮಣೆಗೊಂಡಿರುವ ಸಿಂಹಭಟ್ಟ ರಾಣಿಯನ್ನು ತನ್ನ ಪತ್ನಿ ಎಂದು ಹೇಳುವುದು ಮತ್ತು ಪುರುಕುತ್ಸಾನಿ ಕರುಣೆಯಿಂದ ಅವನಿಗೆ ಲೈಂಗಿಕ ಸಹಕಾರ ನೀಡುವುದು ಗೊತ್ತಾಗುತ್ತದೆ.
ಅಯೋಧ್ಯೆಗೆ ಮರಳುವ ರಾಜನಿಗೆ ನೆರೆ ದೇಶಗಳು ಯುದ್ಧ, ಸಂಘರ್ಷಗಳಲ್ಲಿ ತೊಡಗಿರುವುದು ತಿಳಿಯುತ್ತದೆ. ರಾಜ್ಯಕ್ಕಿರುವ ಅಪಾಯವನ್ನು ಮನಗಂಡು ಸೂಕ್ತ ಮಾರ್ಗದರ್ಶನ ಕೊಡುವದಕ್ಕಾಗಿ ರಾಣಿ ರಾಜಕೀಯಕ್ಕೆ ಮರಳುತ್ತಾಳೆ. ತಾರ್ಕ್ಷ್ಯನ ತೆಕ್ಕೆಯಲ್ಲಿ ಮತ್ತೆ ಜೀವನಾನಂದ ಹೊಂದುವ ಆಕೆ, ರಾಜ್ಯದ ರಕ್ಷಣೆಗೆ ಸೂಕ್ತ ಉಪಾಯಗಳನ್ನು ಹೆಣೆಯುತ್ತಾಳೆ. ತ್ರಸದಸ್ಸ್ಯು ಯುದ್ಧದಲ್ಲಿ ಪಾಲ್ಗೊಂಡು ಬಂಧನದಲ್ಲಿದ್ದ ತಮ್ಮ ಸ್ನೇಹಿತ ಕಾಶಿ ರಾಜನನ್ನು ಬಿಡುಗಡೆ ಮಾಡುತ್ತಾನೆ.
ಇದೊಂದು ವಿಶಿಷ್ಟ ಕೃತಿ. ಲೇಖಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ತಂದು ಕೊಟ್ಟ ಕಾದಂಬರಿ. ಇದು ಪ್ರಾಚೀನ ಕಾಲದ ಜನರ ಜೀವನ ಶೈಲಿ, ಅವರ ನ್ಯಾಯ-ಅನ್ಯಾಯದ ವಿಮರ್ಶೆ, ಋಗ್ವೇದದ ದೇವರುಗಳು ಮತ್ತು ಅಥರ್ವ ವೇದದ ಕ್ಷುದ್ರ ಶಕ್ತಿಗಳ ಆರಾಧನೆ, ಇತಿಹಾಸವನ್ನು ದಾಖಲಿಸಲು ಮೊಹರು, ಫಲಕಗಳ ಬಳಕೆ ಮುಂತಾದ ವಿಷಯಗಳ ಮೇಲೆ ಅರಿವು ಮೂಡಿಸುತ್ತದೆ. ಲೇಖಕರು ಇದನ್ನು ಇತಿಹಾಸದಂತೆ ಓದದೆ, ಕಾಲ್ಪನಿಕ ಕೃತಿಯಂತೆ ಓದುವ ಸಲಹೆ ನೀಡುತ್ತರಾದರೂ, ಈ ಪುಸ್ತಕ ನೀಡುವ ಮಾಹಿತಿ ಅಲ್ಲಗೆಳೆಯುವಂತಿಲ್ಲ. ಅದರಲ್ಲಿ ಗಮನಿಸ ಬೇಕಾದ ಒಂದು ಅಂಶವೆಂದರೆ, ಋಗ್ವೇದದ ಎಲ್ಲ ಶ್ಲೋಕಗಳು ದೇವರ ಕೀರ್ತನೆಯಲ್ಲ. ಮನುಷ್ಯ ಶೋಕದ ಆಲಾಪಗಳು ಸೇರಿವೆ ಎನ್ನುವುದು .
ಶಂಕರ ಮೊಕಾಶಿ ಪುಣೆಕರ ಅವರ ಸಂಶೋಧನಾ ಸಾಮರ್ಥ್ಯ ಅದ್ಭುತವದದ್ದು. 'ಗಂಗವ್ವ ಗಂಗಾಮಾಯಿ' ಕಾದಂಬರಿಯಿಂದ ಜನಪ್ರಿಯತೆ ಪಡೆದ ಅವರು, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇನ್ನು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಧಾರವಾಡ ಅವರ ಹುಟ್ಟೂರು. ವೃತ್ತಿಯಿಂದ ಶಿಕ್ಷಕರು. ಅವರ ಸಾಹಿತ್ಯ ಸೇವೆ ಅವರನ್ನು ಅಜರಾಮರನ್ನಾಗಿಸಿದೆ.
ಈ ಕಾದಂಬರಿ ಪ್ರಸ್ತಾಪಿಸುವ ವಿಷಯಗಳ ಸತ್ಯಾಸತ್ಯತೆಯನ್ನು ಒಪ್ಪುವುದು, ಬಿಡುವುದು ಆಯಾ ಓದುಗರಿಗೆ ಬಿಟ್ಟ ವಿಚಾರ. ಆದರೆ ನಮ್ಮ ಸಾಹಿತ್ಯದ ಪರಿವಿಧಿಯನ್ನು ವಿಸ್ತರಿಸಿಕೊಳ್ಳುವದಕ್ಕೆ ಇದರ ಓದು ಅತ್ಯಗತ್ಯ.