ಅವಳ ಹೆಸರು ಜಾನಕಿ. ಅದು ಸೀತೆಯ ಇನ್ನೊಂದು ಹೆಸರು. ಕಾಕತಾಳೀಯ ಎನ್ನುವಂತೆ ಈ ಜಾನಕಿಗೂ ಗಂಡನ ಜೊತೆ ನೆಮ್ಮದಿಯ ಬಾಳು ಸಾಧ್ಯವಾಗಲಿಲ್ಲ. ಬದಲಿಗೆ ಅವಳ ದಾಂಪತ್ಯ ಜೀವನ ಕೆಲವೇ ದಿನಗಳಲ್ಲಿ ಮುಗಿದು ಹೋಗಿತ್ತು.
ಅದು ಕಲಬುರ್ಗಿ ಜಿಲ್ಲೆಯ ಹಳ್ಳಿ. ಬಿಸಿಲು ಧಾರಾಕಾರ. ನೀರಿಗೆ ಹಾಹಾಕಾರ. ಹಳ್ಳದಲ್ಲಿ ಕುಡಿಯುವ ನೀರು ತುಂಬಿಕೊಂಡು ಬಿಂದಿಗೆ ಹೊತ್ತು ಕೊಂಡು ಬೆವರಿಳಿಸುತ್ತ ಬಂದ ಜಾನಕಿಗೆ, ಅಂದು ಆಕೆಯನ್ನು ನೋಡಲು ಗಂಡು ಬರುವ ವಿಷಯ ತಿಳಿಸಿದ ತಾಯಿ, ಅಂದು ಹೊಲಕ್ಕೆ ಕೂಲಿಗೆ ಹೋಗದೇ ಮನೆಯಲ್ಲೇ ಇರಲು ತಿಳಿಸಿದಳು. ಜಾನಕಿಯ ಅಪ್ಪ ಮನೆಗಿಂತ ಬೇವಿನ ಗಿಡದ ಕಟ್ಟೆಯ ಮೇಲೆ ಬೀಡಿ ಸೇದುತ್ತಾ, ಊರವರೊಡನೆ ಹರಟುತ್ತ ಕಾಲ ಕಳೆದದ್ದೇ ಹೆಚ್ಚು. ಈ ಕಾರಣಕ್ಕೋ ಏನೋ, ಮಗಳ ಮೇಲೆ ತಾಯಿಗೆ ವಿಶೇಷ ಕಾಳಜಿ. ಅವಳು ಜಾನಕಿ ಇನ್ನೂ ಹೊಟ್ಟೆಯಲ್ಲಿರುವಾಗ ಊರಿನ ಗೌಡರ ಮನೆಯ ಟಿವಿಯಲ್ಲಿ ರಾಮಾಯಣ ತಪ್ಪದೇ ನೋಡುತ್ತಿದ್ದಳು. ರವಿವಾರ ಹೇಗೂ ಕೂಲಿ ಸಿಗುತ್ತಿದ್ದಿಲ್ಲ. ಬಸ್ಸು ಹತ್ತಿ ಪಟ್ಟಣಕ್ಕೆ ಹೋಗಿ ಸಿನೆಮಾ ನೋಡುವುದು ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಸಾಧ್ಯವಾಗುವ ವಿಷಯ. ಬದಲಿಗೆ ರವಿವಾರದಂದು ಗೌಡತಿಗೆ ಮನೆ ಕೆಲಸದಲ್ಲಿ ಸ್ವಲ್ಪ ಸಹಾಯ ಮಾಡಿ, ಹಿತ್ತಿಲ ಬಾಗಿಲ ಓರೆಯಿಂದಲೇ ಕಾಣುವ ಟಿವಿಯಲ್ಲಿ ಬರುವ ರಾಮಾಯಣವನ್ನು ಕಣ್ತುಂಬಿಕೊಳ್ಳುತ್ತಿದ್ದಳು. ಅದರ ಪ್ರಭಾವದಿಂದ ಮಗ ಹುಟ್ಟಿದರೆ ರಾಮ, ಮಗಳು ಹುಟ್ಟಿದರೆ ಜಾನಕಿ ಎಂದು ಹೆಸರು ಇಡುವ ಎಂದುಕೊಂಡಿದ್ದಳು. ಜಾನಕಿ ಬೆಳೆದು ಈಗ ಮದುವೆಯ ವಯಸ್ಸಿಗೆ ಬಂದಾಗಿದೆ. ಅಪ್ಪ ಸುಮ್ಮನಿದ್ದ ಅಂತ ಅಮ್ಮ ಸುಮ್ಮನಿರಲಾದಿತೇ? ತನ್ನ ಬಂಧುಗಳಲ್ಲಿ ಅವಳಿಗೆ ಗಂಡು ಹುಡುಕಲು ಕೇಳಿಕೊಂಡಿದ್ದರಿಂದ ಇಂದು ಜಾನಕಿಗೆ ಒಬ್ಬ ಗಂಡು ಬಂದಿದ್ದ.
ಬಂದವರದು ಹತ್ತಿರದ ಹಳ್ಳಿ. ಹುಡುಗ ಕಟ್ಟು ಮಸ್ತಾಗಿದ್ದ. ಅವನು ಉಳಿದವರಂತೆ ಊರಲ್ಲಿರದೆ ಸೈನ್ಯಕ್ಕೆ ಸೇರಿಕೊಂಡಿದ್ದ. ಅವನು ಕಳುಹಿಸುವ ಹಣ ತಂಗಿಯ ಮದುವೆಗೆ ಎಂದು ಕೂಡಿ ಇಡುತ್ತಿದ್ದಳು ಅವನ ತಾಯಿ. ಜೊತೆಗೆ ಒಂದು ಎಕರೆ ಜಮೀನಿತ್ತು. ರಜೆಗೆಂದು ಬಂದಾಗ ನೋಡಿದ ಜಾನಕಿಯನ್ನು ಒಪ್ಪಿದ್ದ. ಜಾನಕಿ ಇನ್ನು ಬೇರೆಯವರ ಹೊಲದಲ್ಲಿ ಮಾಡುವ ಕೂಲಿಯ ಬದಲು ತನ್ನದೇ ಹೊಲದಲ್ಲಿ ಕೆಲಸ ಮಾಡಬಹುದು ಎಂದುಕೊಂಡಳು. ಬೆಟ್ಟದ ಮೇಲಿನ ವೀರಭದ್ರ ಗುಡಿಯಲ್ಲಿ ಸರಳವಾಗಿ ಮದುವೆ ನಡೆದು ಜಾನಕಿ ಗಂಡನ ಮನೆಗೆ ಬಂದಿದ್ದಳು. ಕೆಲವೇ ದಿನಗಳಲ್ಲಿ ಮನೆ ಒಳಗೆ, ಹೊರಗೆ ಜವಾಬ್ದಾರಿಗಳನ್ನು ತನ್ನ ಹೆಗಲೇರಿಸಿಕೊಂಡಿದ್ದಳು. ಆದರೆ ಎರಡು ಕುಟುಂಬದವರ ನೆಮ್ಮದಿ ಅಲ್ಪ ಕಾಲದ್ದಾಗಿತ್ತು.
ಸೈನ್ಯದ ಕೆಲಸಕ್ಕೆ ಮರಳಿದ ಗಂಡ ಮತ್ತೆ ವಾಪಸ್ಸು ಬಂದಿದ್ದು ಹೆಣವಾಗಿ. ಶವವನ್ನು ಊರು'ಮುಟ್ಟಿಸಲು ಬಂದಿದ್ದ ಸೈನ್ಯದ ಅಧಿಕಾರಿ ಆತನ ಶೌರ್ಯವನ್ನು ಕೊಂಡಾಡಿದ. ಗಡಿಯಲ್ಲಿ ನಡೆದ ಗುಂಡಿನ ಕಾಳಗ ಆತನ ದೇಹವನ್ನು ಜರಡಿ ಮಾಡಿ ಹಾಕಿತ್ತು. ರಕ್ತವೆಲ್ಲ ಸೋರಿ ಹೋದ ಮೈ ಪೂರ್ಣ ಕಪ್ಪಾಗಿ ಇದು ತಾನು ಮೋಹಿಸಿದ ಶರೀರವೇ ಎಂದು ಜಾನಕಿ ಹೆದರಿಕೊಂಡಳು. ತನ್ನೆಲ್ಲ ಶಕ್ತಿ ಉಡುಗಿ ಹೋಗಿದ್ದರೂ, ಆಘಾತದಿಂದ ಹಾಸಿಗೆ ಹಿಡಿದ ಅತ್ತೆ, ಮಾವರ ಸೇವೆಗೆ ನಿಂತಳು.
ಮನೆಯಲ್ಲಿ ಎಲ್ಲರು ಅಳುತ್ತ ಕೂತರೆ ಕುಡಿಯಲು ನೀರೆಲ್ಲಿ? ಗಂಡನ ಸಾವಿನ ಮರು ದಿನವೇ ಮತ್ತೆ ತನ್ನ ಎಲ್ಲ ಜವಾಬ್ದಾರಿಗೆ ಜಾನಕಿ ಮರಳಿದಳು. ಹೊಲದಲ್ಲಿ ರಾಶಿ ಕೆಲಸ ಬಿದ್ದಿತ್ತು. ದಣಿಯದಿದ್ದರೆ ನಿದ್ರೆಯೇ ಸುಳಿಯದು. ಕೆಲಸದ ನಡುವೆ ವಿರಾಮ ಸಿಕ್ಕಾಗ ಬೆಟ್ಟದ ವೀರಭದ್ರನಲ್ಲಿ ಹೋಗಿ ಪ್ರಶ್ನೆ ಹಾಕುವ ಎಂದುಕೊಳ್ಳುವಳು. ಆದರೆ ಹಣೆಬರಹ ಬರೆಯುವವನು ಬ್ರಹ್ಮ. ಅದಕ್ಕೆ ವೀರಭದ್ರ ಏನು ಮಾಡಿಯಾನು ಎಂದುಕೊಂಡು ಸುಮ್ಮನಾಗುವಳು. ಬದಲಾಗಿ ಗಂಡನ ತಂಗಿಯ ಮದುವೆಯತ್ತ ಚಿತ್ತ ಹರಿಸಿದರೆ, ಸತ್ತವನ ಆತ್ಮಕ್ಕೆ ಶಾಂತಿ ದೊರಕಬಹುದು ಎನ್ನಿಸಿ ಮತ್ತೆ ಕೆಲಸಕ್ಕೆ ತೊಡಗುವಳು.
ನಮ್ಮ ಪಾಡಿಗೆ ನಾವಿದ್ದರೂ ಸಮಾಜ ತನ್ನ ಪಾಡಿಗೆ ತಾನಿದ್ದೀತೆ? ಕೆಲವರು ಅವಳು ಕಾಲಿಟ್ಟ ಗಳಿಗೆಯ ಮೇಲೆ ಅಪವಾದ ಹೊರಿಸಿದರು. ಮತ್ತೆ ಕೆಲವರು ಜ್ಯೋತಿಷ್ಯ ಹೊಂದಾಣಿಕೆ ಇಲ್ಲದೆ ಮದುವೆ ಮಾಡಿದರೆ ಅಪಾಯ ತಪ್ಪಿದ್ದಲ್ಲ ಎಂದು ಅಭಿಪ್ರಾಯ ಪಟ್ಟರು. ಹಾಗೆಯೇ ಒಂಟಿ ಹೆಣ್ಣೆಂದು ಪಡ್ಡೆ ಹುಡುಗರ, ಕಾಮಪಿಪಾಸುಗಳ ದೃಷ್ಟಿ ಕೂಡ ಈಕೆಯ ಮೇಲೆ ಬೀಳತೊಡಗಿತು. ಎಷ್ಟು ದೂರ ಸರಿದರೂ, ಅಪವಾದಗಳು ಬೆನ್ನು ಬಿಡಲಿಲ್ಲ. ರಾಮಾಯಣದ ಸೀತೆಗೂ ಅಪವಾದ ತಪ್ಪಿರಲಿಲ್ಲ. ರಾಮರಾಜ್ಯಕ್ಕಿಂತ ಕಲಿಯುಗ ಯಾವುದರಲ್ಲಿ ಹೆಚ್ಚು, ಯಾವುದರಲ್ಲಿ ಕಡಿಮೆ?
ಹೆಂಗಸರ ಚುಚ್ಚು ಮಾತು, ಗಂಡಸರ ವಕ್ರ ದೃಷ್ಟಿ ಅಸಹನೀಯ. ಆಗಿಂದಾಗ್ಗೆ ಜೋರು ಬಾಯಿ ಮಾಡಿ ಸುಮ್ಮನಾಗಿಸಿದರೆ ಅಂಥ ಪ್ರಯತ್ನ ಕಡಿಮೆಯಾದಿತೇನೋ? ಆದರೆ ಮೃದು ಸ್ವಭಾವದ ಜಾನಕಿ ಯಾರ ಜೊತೆಗೂ ಮಾತಿಗಿಳಿಯದಿದ್ದರೂ, ಇವಳ ಕೇಳಿಸಿಕೊಳ್ಳಲೆಂದೇ ಆಡುವ ಮಾತುಗಳು ದಿನೆ ದಿನೇ ತೀಕ್ಷ್ನವಾಗತೊಡಗಿದವು. ಒಂದು ದಿನ ಹೊಲದಿಂದ ಹುಲ್ಲಿನ ಹೊರೆ ತಲೆಯ ಮೇಲಿಟ್ಟುಕೊಂಡು ಮನೆಗೆ ಮರಳುತ್ತಿದ್ದಳು ಜಾನಕಿ. ಹತ್ತು ಹೆಜ್ಜೆಗಳ ಹಿಂದೆ ಬರುತ್ತಿದ್ದ ಮಹಿಳೆಯರ ಗುಂಪು ಇವಳನ್ನೇ ಕುರಿತು ಗಟ್ಟಿ ದನಿಯಲ್ಲಿ ಮಾತನಾಡಲು ಆರಂಭಿಸಿತು.
"ಗಂಡಂಗೆ ಬ್ಯಾಡ ಅಂದ್ರೆ ಗುಂಡು ಕಲ್ಲಿಗೂ ಬ್ಯಾಡ ಅಂತ ಗಾದೆ ಮಾತೇ ಐತೆ. ಅಂತದ್ರಲ್ಲಿ ಇವ್ಳಿಗೆ ಇನ್ನ್ಯಾರೋ?"
"ಗಂಡ ಬಿಟ್ಟ ಇಲ್ಲ ಗಂಡ ಸತ್ತ ಎಲ್ಲ ಒಂದೇ. ಇವಳ್ ಆಸೆನೂ ಅದೇ ಇತ್ತೋ ಏನೋ?"
"ಇಲ್ದೆ ಏನು? ಇವ್ಳ ಹಾದ್ರ ಕಂಡು ಅವ್ನು ಸತ್ತಿರ್ ಬೇಕು"
ಅಲ್ಲಿಗೆ ಸಹನೆ ಮೀರಿದ ಜಾನಕಿ ತಲೆ ಮೇಲಿದ್ದ ಹುಲ್ಲಿನ ಹೊರೆಯಿಂದ ಕುಡುಗೋಲು ತೆಗೆದು ಹಿಂತಿರುಗಿ ಬರುತ್ತಿದ್ದ ಗುಂಪಿನತ್ತ ಬೀಸಿದಳು. ಅದು ಆ ಗುಂಪಿನಲ್ಲಿ ಒಬ್ಬಳಿಗೆ ಕುತ್ತಿಗೆಗೆ ತಗುಲಿ, ಅವಳು ಕುಸಿದು ಬಿದ್ದಳು. ರಕ್ತ ಧಾರಾಕಾರವಾಗಿ ಹರಿಯಿತು. ಕೆಲವರು ಆಕೆಯ ಕುತ್ತಿಗೆ ಗಾಯಕ್ಕೆ ಬಟ್ಟೆ ಒತ್ತಿ ಹಿಡಿದು ನಿಲ್ಲಿಸಲು ನೋಡಿದರು. ಆದರೆ ಉಪಯೋಗವಾಗಲಿಲ್ಲ. ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಜಾನಕಿ ಮಾತ್ರ ಸಿಟ್ಟಿನಿಂದ ಏದುಸಿರು ಬಿಡುತ್ತ ನಿಂತಲ್ಲೇ ನಿಂತಿದ್ದಳು.
ಕೆಲವು ಗಂಟೆಗಳಲ್ಲಿ ಬಂದ ಪೊಲೀಸರು ಜಾನಕಿಯನ್ನು ಬಂಧಿಸಿ ತಮ್ಮ ಜೀಪಿನಲ್ಲಿ ಕುಳಿಸಿದರು. ಜೀಪು ಶುರುವಾಗುವ ಹೊತ್ತಿಗೆ ಜಾನಕಿ ದೂರದಲ್ಲಿ ತನ್ನ ತಾಯಿಯನ್ನು ನೋಡಿದಳು. ಸುದ್ದಿ ಕೇಳಿ ಆಕೆ ಓಡಿ ಬರುವುದರಲ್ಲಿ ಜಾನಕಿ ಹೊರಟಾಗಿತ್ತು. ಧೂಳಿನಲ್ಲಿ ಅಸ್ಪಷ್ಟವಾಗಿ ಕಾಣ ಬರುತ್ತಿದ್ದ ತನ್ನ ತಾಯಿಯ ಆಕೃತಿ ಕ್ರಮೇಣ ಚಿಕ್ಕದಾಗಿ ಕಣ್ಮರೆಯಾಯಿತು. ಜಾನಕಿ ತಲೆ ತಗ್ಗಿಸಿದಳು. ಅವಳಿಗಾಗಲೇ ಆವೇಶ ಇಳಿದು ಹೋಗಿತ್ತು ಆದರೆ ತಾನು ಮಾಡಿದ್ದು ಸರಿಯೋ ತಪ್ಪೋ ಎಂದು ವಿಚಾರ ಮಾಡುವ ಶಕ್ತಿಯನ್ನು ಸಮಾಜ ಆಕೆಯಿಂದ ಕಸಿದುಕೊಂಡಿತ್ತು. ನ್ಯಾಯಾಲಯದಲ್ಲಿ ಏನು ಮಾತನಾಡಲು ಅವಳಿಗೆ ತೋಚಲಿಲ್ಲ. ಅವಳು ಮಾಡಿದ ತಪ್ಪಿಗೆ ಜೀವಾವಧಿ ಶಿಕ್ಷೆಯಾಯಿತು.
ಜೈಲಿನಲ್ಲಿ ವರ್ಷಗಳು ಸರಿದು ಹೋದವು. ದಿನವೂ ಅದೇ ಏಕತಾನತೆ. ಇಲ್ಲಿ ಅವಳಿಗೆ ಯಾವ ಜವಾಬ್ದಾರಿಯೂ ಇಲ್ಲ. ಅಪಸ್ವರದ ಮಾತು ಕೇಳುವುದೂ ಇಲ್ಲ. ಅವಳ ತಾಯಿಯೂ ಜಾನಕಿ ಜೈಲು ಸೇರಿದ ಮೊದಲ ವರ್ಷವೇ ಕೊರಗಿನಿಂದ ಸತ್ತು ಹೋಗಿದ್ದಳು. ಹೀಗಾಗಿ ಅವಳನ್ನು ನೋಡಲು ಬರುವವರು ಯಾರೂ ಇರಲಿಲ್ಲ. ಎಲ್ಲ ಸಂಬಂಧಗಳು ಕಳಚಿದ ಮೇಲೆ, ಈ ಜೈಲು ವಾಸ ಅವಳಿಗೆ ಬಂಧನಕ್ಕಿಂತ ಸ್ವಾತಂತ್ರ್ಯ ಎಂದೇ ತೋರತೊಡಗಿತು. ಜೈಲನ್ನು ಸ್ವಚ್ಚವಾಗಿ ಇಡಲು ಅಧಿಕಾರಿ ಹಾಗು ಸಿಬ್ಬಂದಿಗಳಿಗೆ ನೆರವಾಗುತ್ತಿದ್ದ ಜಾನಕಿ ಕ್ರಮೇಣ ಅವರ ವಿಶ್ವಾಸ ಗಳಿಸಿದಳು. ಕಸ ಗುಡಿಸುವ ಕೆಲಸವನ್ನೇ ಶೃದ್ಧೆಯಿಂದ ಮಾಡುತ್ತಿದ್ದ ಜಾನಕಿಯ ಎಲ್ಲಾ ಕೆಲಸಗಳಲ್ಲಿ ಒಪ್ಪ ಓರಣ ಇರುತ್ತಿತ್ತು. ನಿಮಿಷ ಮಾತ್ರದ ಆವೇಶ ಅವಳನ್ನು ಈ ಜೈಲು ವಾಸಕ್ಕೆ ತಳ್ಳಿತ್ತು. ಆದರೆ ಸೆರೆಮನೆ ಅವಳಿಗೆ ಮನೆಯಾಗಿ ಮಾರ್ಪಟ್ಟಿತ್ತು.
ಸುಮಾರು ಇಪ್ಪತ್ತು ವರ್ಷಗಳು ಕಳೆದ ಮೇಲೆ ಅವಳಿಗೆ ಬಿಡುಗಡೆ ಆಯಿತು. ಆದರೆ ಅವಳಿಗೆ ತನ್ನ ಜೀವನದ ಮೊದಲ ಇಪ್ಪತ್ತು ವರ್ಷಗಳಲ್ಲೇ ಸಂಬಂಧಗಳೆಲ್ಲ ಮುಗಿದು ಹೋಗಿದ್ದವು. ಮತ್ತೆ ಸಮಾಜ ಜೀವನಕ್ಕೆ ಕರೆದೊಯ್ಯುವ ಯಾವುದೇ ಶಕ್ತಿ ಜೀವಂತವಾಗಿ ಉಳಿದಿರಲಿಲ್ಲ. ಬದಲಿಗೆ ತನ್ನ ಇಪ್ಪತ್ತು ವರ್ಷ ಜೈಲು ವಾಸದಲ್ಲಿ ಅಲ್ಲಿ ನೀರುಣಿಸಿದ ಮರಗಳು ಮತ್ತು ಅದರಲ್ಲಿ ಬಿಟ್ಟ ಹೂಗಳು ಹೆಚ್ಚು ಜೀವಂತ ಎನಿಸಿದವು. ಪರಿಸ್ಥಿತಿ ಅರ್ಥ ಮಾಡಿಕೊಂಡ ಅಧಿಕಾರಿಯೊಬ್ಬರು ಆಕೆಗೆ ದಾರಿ ತೋರಿಸಿದರು. ಆಕೆಗೆ ಅಲ್ಲಿ ಸಹಾಯಕಿಯಾಗಿ ಉದ್ಯೋಗ ದೊರಕಿಸಿ ಕೊಟ್ಟರು. ಜಾನಕಿಯ ಜೈಲಿನ ನಂಟು ಮುಂದುವರೆಯಿತು.