(ಇದು ೨೦೧೫ ರಲ್ಲಿ ಬರೆದ ಲೇಖನ)
ರಾಯಚೂರು ಜಿಲ್ಲೆಯ ಮಸ್ಕಿ ನನ್ನೂರು. ಸಾಮ್ರಾಟ್ ಅಶೋಕ ತನ್ನನ್ನು 'ದೇವನಾಂಪ್ರಿಯ' ಎಂದು ಕರೆದುಕೊಂಡ ಶಿಲಾ ಶಾಸನ ಇಲ್ಲಿದೆಯಾದ್ದರಿಂದ, ಈ ಊರು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ. ಇಲ್ಲಿನ ಬೆಟ್ಟಗಳಲ್ಲಿ ಪುರಾತನ ಕಾಲದ, ಬಹುಶ ಶಿಲಾಯುಗಕ್ಕೆ ಸೇರಿದ ಮಾನವನ ಪಳೆಯುಳಿಕೆ ಸಿಕ್ಕಿರುವುದು, ಇಲ್ಲಿ ಸಹಸ್ರಾರು ವರ್ಷಗಳಿಂದ ಮಾನವ ವಸತಿ ಇರುವುದನ್ನು ಸೂಚಿಸುತ್ತದೆ. ಹಾಗಾಗಿ ಪುರಾತನ ಕಾಲದಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಮಸ್ಕಿ, ಅಶೋಕನ ಧರ್ಮ ಪ್ರಚಾರಕರಿಗೆ ಶಾಸನ ನಿರ್ಮಿಸಲು ಸೂಕ್ತ ಸ್ಥಳವಾಗಿ ಕಂಡಿದ್ದಿರಬೇಕು. ಅವರು ಲಂಕೆಗೆ ಸಾಗಿ ಹೋದ ದಾರಿ ಇದೆ ಆಗಿದ್ದರೂ ಆಶ್ಚರ್ಯವಿಲ್ಲ.
ಅಶೋಕನ ಕಾಲದ ಮಾತು ಬಿಡಿ, ಇಂದಿಗೆ ಜನಪ್ರಿಯತೆ ಇರುವುದು ಇಲ್ಲಿನ ಬೆಟ್ಟದ ಮೇಲೆ ವಿರಾಜಮಾನನಾಗಿರುವ ಮಲ್ಲಿಕಾರ್ಜುನನಿಗೆ. ಶ್ರೀಶೈಲದ ಮಲ್ಲಿಕಾರ್ಜುನನೇ ಇಲ್ಲಿ ನೆಲೆಸಿದುರುವಾಗಿ ಪ್ರತೀತಿ. ಶ್ರಾವಣದ ಪ್ರತಿ ಸೋಮವಾರದಂದು, ಈತನ ದರ್ಶನಕ್ಕೆ ಬೆಟ್ಟ ಹತ್ತಿ ಬರುವ ಭಕ್ತರು ಮಸ್ಕಿ ಪಟ್ಟಣದವರಷ್ಟೇ ಆಗಿರದೇ, ಸುತ್ತ ಮುತ್ತ ಗ್ರಾಮಗಳು ಮತ್ತು ಕೆಲವರು ಇನ್ನು ದೂರದ ಊರುಗಳಿಂದ ಬಂದಿರುವರು ಆಗಿರುತ್ತಾರೆ. ಕೆಲ ವರ್ಷಗಳ ಹಿಂದೆ ನೂರಾರು ಮೆಟ್ಟಿಲುಗಳನ್ನು ಹತ್ತಿದಾಗ ಮಾತ್ರ ಕಾಣ ಸಿಗುತ್ತಿದ್ದ ಮಲ್ಲಿಕಾರ್ಜುನ ಇಂದು ಗಾಡಿಗಳಲ್ಲಿ ಭುರ್ರೆಂದು ಬರುವವರಿಗೂ ದರ್ಶನ ಕೊಡುತ್ತಾನೆ. ಬೆಟ್ಟದ ಬುಡದಲ್ಲಿ ಆತನ ಪತ್ನಿಯಾದ ಭ್ರಮರಾಂಭೆಯ ಸುಸಜ್ಜಿತ ದೇವಸ್ಥಾನ ಇದೆ.
ನಾನು ಚಿಕ್ಕಂದಿನಿಂದ ಈತನ ದರ್ಶನ ತಪ್ಪಿಸಿದ್ದಿಲ್ಲ. ಸೋಮವಾರ ದಿನ ಬೆಳಿಗ್ಗೆ ಐದು ಗಂಟೆಗೆಲ್ಲ ಎದ್ದು ಸ್ನಾನ ಮಾಡಿ, ಕೈಯಲ್ಲಿ ಊದು ಬತ್ತಿ ಹಿಡಿದು, ದಾರಿಯಲ್ಲಿ ಮನೆ ಇರುವ ಸ್ನೇಹಿತರನ್ನು ಜೊತೆಗೂಡಿಸಿಕೊಂಡು, ಬೆಟ್ಟದ ಮೊದಲ ಮೆಟ್ಟಿಲು ತಲುಪವಷ್ಟರಲ್ಲಿ, ಕತ್ತಲು ಹರಿದು ಬೆಟ್ಟ ರಂಗೇರುತ್ತಿತ್ತು. ಆದರೂ ಹಿತವಾದ ಗಾಳಿ, ಎಲ್ಲಕ್ಕಿಂತ ನಮ್ಮ ಉತ್ಸಾಹ, ಬೆಟ್ಟ ಹತ್ತುವ ದಣಿವನ್ನು ಮರೆಸುತ್ತಿತ್ತು. ಹತ್ತುವಾಗ ನಡುವೆ ಎಲ್ಲೂ ಕುಳಿತು ಕೊಳ್ಳಬಾರದೆಂಬ ನಮ್ಮ ಹುಡುಗು ನಂಬಿಕೆಯಿಂದ, ಮೇಲೆ ದೇವಸ್ಥಾನ ಸನ್ನಿಧಿ ತಲುಪವವರೆಗೂ ನಿಲ್ಲದೇ ಸಾಗುತ್ತಿತ್ತು ನಮ್ಮ ಪಯಣ. ನಡು ನಡುವೆ ಹಾಗೇ ನಿಂತಲ್ಲೇ ಏದುಸಿರು ಕಡಿಮೆ ಮಾಡಿಕೊಂಡು, ತಿರುಗಿ ನೋಡಿ ಎಷ್ಟು ಎತ್ತರ ಏರಿದವೆಂದು ಆಶ್ಚರ್ಯ ಪಡುತ್ತ, ಹಾಗೆ ಇನ್ನು ಎಷ್ಟು ಮೆಟ್ಟಿಲು ಉಳಿದಿರಬಹುದು ಎಂದು ಊಹಿಸುತ್ತ, ಕೆಲವೇ ನಿಮಿಷಗಳಲ್ಲಿ ಬೆಟ್ಟದ ತುದಿ ತಲುಪಿರುತ್ತಿದ್ದೆವು. ಅಲ್ಲಿ ಒಂದು ನಿಮಿಷದಲ್ಲಿ ಮಲ್ಲಿಕಾರ್ಜುನ ಪ್ರದಕ್ಷಿಣೆ ಮುಗಿಸಿ ಹೊರಗೆ ಬಂದು ದೇವಸ್ಥಾನದಲ್ಲಿ ಒಡೆಸಿದ ಕಾಯಿಯ ಕೊಬ್ಬರಿ ಮುರಿದು ತಿಂದರೆ ಅಷ್ಟೇ ವಿಶ್ರಾಂತಿ. ಅಲ್ಲಿಂದ ಕಾಣುವ ವಿಹಂಗಮ ನೋಟದಲ್ಲಿ ನಮ್ಮ ಮನೆ, ಶಾಲೆಯನ್ನು ಗುರುತಿಸುವ ಕಾಯಕಕ್ಕೆ ತೊಡಗುತ್ತಿದ್ದೆವು. ಊರಿನ ಪರಿಧಿಯಾಗಿ ಒಂದು ಕಡೆ ಮುಖ್ಯ ರಸ್ತೆ, ಇನ್ನೊಂದು ಕಡೆ ಹಳ್ಳ, ಮತ್ತೊಂದು ಕಡೆಯಿಂದ ತುಂಗಭದ್ರ ಕಾಲುವೆ, ಇವುಗಳ ನಡುವೆ ತ್ರಿಕೋಣ ಆಕೃತಿಯ ಪ್ರದೇಶದಲ್ಲಿ ದಟ್ಟ ಜನ ವಸತಿ, ಇದು ಬೆಟ್ಟದ ತುದಿಯಿಂದ ಕಂಡು ಬರುವ ನನ್ನೂರಿನ ಪಕ್ಷಿ ನೋಟ.
ಬೆಟ್ಟ ಹತ್ತುವದಕ್ಕಿಂತ ಇಳಿಯುವುದು ಸುಲಭದ ಕೆಲಸ. ಆದರೆ ಸುಲಭ ಮಾರ್ಗದ ಬದಲಾಗಿ ನಡುವೆ ಬಳಸು ಮಾರ್ಗದಿಂದ ಸ್ವಲ್ಪ ಕಡಿದೆನ್ನುಸುವ ಮಾರ್ಗದಿಂದ ಇಳಿಯುತ್ತಿದ್ದೆವು. ನಡುವೆ ಯಾವುದಾದರೂ ಕಾಡು ಪ್ರಾಣಿ ಧುತ್ತೆಂದು ಎದುರಾದಿತು ಎನ್ನುವ ಆಶ್ಚರ್ಯ ಮತ್ತು ಆತಂಕ ನಮ್ಮಲ್ಲಿ ಮನೆ ಮಾಡಿರುತ್ತಿತ್ತು. ಆದರೆ ಮಂಗ ಮತ್ತು ಕಾಡು ಪಾರಿವಾಳ ಬಿಟ್ಟರೆ ಬೇರೆ ಏನೂ ಕಾಣ ಸಿಗುತ್ತಿದ್ದಿಲ್ಲ. ಬೆಟ್ಟದಲ್ಲಿ ನೈಸರ್ಗಿಕವಾಗಿ ಮೂಡಿದ ಜಾರು ಬಂಡೆಗಳಲ್ಲಿ ಮನಸಾರೆ ಆಡಿ, ಸಿಹಿ ನೀರ ಭಾವಿಯಲ್ಲಿ ನೀರು ಕುಡಿಯುವ ಹೊತ್ತಿಗೆಲ್ಲ ನಾವು ಶಾಲೆಗೆ ಹೊರಡುವ ಹೊತ್ತು ಹತ್ತಿರವಾಗುತ್ತಿತ್ತು. ಮತ್ತೆ ಮುಂದಿನ ಸೋಮವಾರ ಬರುವುದಾಗಿ ಮಾತನಾಡಿಕೊಂಡು ಸ್ನೇಹಿತರೆಲ್ಲ ಮನೆಗೆ ಮರಳುತ್ತಿದ್ದೆವು. ಇದು ಶ್ರಾವಣದಲ್ಲಿ ಬರುವ ನಾಲ್ಕು ಅಥವಾ ಐದು ಸೋಮವಾರಗಳದ ನಮ್ಮ ದಿನದ ಆರಂಭ. ಆ ಆನಂದವನ್ನು ನಾವು ಸ್ನೇಹಿತರು ಶಾಲೆಯಲ್ಲಿದ್ದಾಗ ತಪ್ಪಿಸಿಕೊಂಡ ನೆನಪಿಲ್ಲ.
ಆದರೆ ಕಾಲೇಜು ಓದಲು ಊರು ಬಿಟ್ಟ ಹೋದ ಮೇಲೂ, ಶ್ರಾವಣದಲ್ಲಿ ಕನಿಷ್ಠ ಒಂದು ಸೊಮವಾರವಾದರೂ ತಪ್ಪದೇ ಊರಿಗೆ ಬಂದು, ಮಲ್ಲಿಕಾರ್ಜುನನ ದರ್ಶನ ಪಡೆಯುತ್ತಿದ್ದೆ. ಶಾಲಾ ದಿನಗಳಲ್ಲಿ ಇದ್ದ ಬೆಟ್ಟದ ಬಗೆಗಿನ ಬೆರುಗು ಈಗ ಮರೆಯಾಗಿತ್ತು. ಆದರೆ ಸಂಪೂರ್ಣ ಧಾರ್ಮಿಕ ಸ್ವಭಾವ ನನ್ನದಲ್ಲವಾದರು, ಇಲ್ಲಿಗೆ ವರ್ಷಕ್ಕೆ ಒಮ್ಮೆ ಬಂದು ಹೋದರೆ ಒಮ್ಮೆ ಸಮಾಧಾನ ಎನ್ನಿಸುತ್ತಿತ್ತು. ನಂತರ ಉದ್ಯೋಗಕ್ಕೆ ದೂರದ ಬೆಂಗಳೂರಿಗೆ ಬಂದಾದರೂ, ಈ ರೂಢಿಯನ್ನು ತಪ್ಪಿಸಲಿಲ್ಲ. ಹಾಗಾಗಿ ಮಲ್ಲಿಕಾರ್ಜುನನಲ್ಲಿ ನನಗೆ ಭಾವನಾತ್ಮಕ ಸಂಬಂಧ ಬೆಳೆಯುತ್ತ ಹೋಯಿತು. ಸೋಮವಾರ ರಜೆ ಸಿಗುವುದು ಕಷ್ಟವಾದರೆ ರವಿವಾರದಂದೆ ಬೆಟ್ಟ ಹತ್ತಿ ದರ್ಶನ ಪಡೆದು ಮರಳುತ್ತಿದ್ದೆ. ಬಿಡುವು ಇರುವ ಸ್ನೇಹಿತರು ಜೊತೆಯಾಗುತ್ತಿದ್ದರು. ಅಲ್ಲದೇ ಶ್ರಾವಣದ ಪ್ರತಿ ದಿನ ಬೆಟ್ಟಕ್ಕೆ ಭಕ್ತರು ದರ್ಶನಕ್ಕೆ ಬರುತ್ತಾರೆ. ಸೋಮವಾರಕ್ಕೆ ಹೋಲಿಸಿದರೆ ಭಕ್ತರ ಸಂಖ್ಯೆ ಮಾತ್ರ ತೀರ ಕಡಿಮೆ. ಆದರೆ ಸೋಮವಾರದ ಗಜಿ ಬಿಜಿಗಿಂತ ಬಿಡಿ ದಿನದಲ್ಲೇ ಮಲ್ಲಿಕಾರ್ಜುನ ಹೆಚ್ಚು ಪ್ರಶಾಂತವಾಗಿ ಕಾಣ ತೊಡಗಿದ್ದರಿಂದ, ಅದನ್ನೇ ಆಯ್ದುಕೊಂಡೆ.
ಪ್ರತಿ ವರ್ಷದ ರೂಢಿಯಂತೆ ಈ ವರ್ಷವೂ ದರ್ಶನಕ್ಕೆ ಹೋಗಿದ್ದೆ. ಅದೇ ಆಹ್ಲಾದಕರ ಅನುಭವ. ದಾರಿಯಲ್ಲಿ ಮಂಗಗಳು ಪ್ರತಿ ವರ್ಷಕ್ಕಿಂತ ಸ್ವಲ್ಪ ಜಾಸ್ತಿಯೇ ಅನ್ನಿಸಿದವು. ಮರಿಗಳೇ ಜಾಸ್ತಿ ಇದ್ದ ಮಂಗಗಳ ಗುಂಪು, ಆಹಾರ ಅರಸಿ ಹೊರಟಿತ್ತು. ಅವುಗಳು ಸರ ಸರನೆ ಮರ ಏರುವ ಪರಿ, ಬಂಡೆಯಿಂದ ಬಂಡೆಗೆ ಕರಾರುವಕ್ಕಾಗಿ ಹಾರುವ ಕುಶಲತೆ ನೋಡುತ್ತಾ ಕೆಲ ಹೊತ್ತು ನಿಂತಿದ್ದೆ. ಅವುಗಳ ಮೇಲೆ ನಾನು ತೋರಿಸಿದ ಆಸಕ್ತಿ, ಕುತೂಹಲ ಅವುಗಳಿಗೆ ನನ್ನ ಮೇಲಿರಲಿಲ್ಲ. ಅವುಗಳು ದಾರಿ ಕೊಟ್ಟ ಮೇಲೆ ಬೆಟ್ಟದ ತುದಿ ತಲುಪಿದೆ. ದರ್ಶನದ ನಂತರ ಹೊರಗೆ ಬಂದು ಕೆಳಗೆ ಕಾಣುವ ಊರಿನ ನೋಟ ನೋಡಿದೆ. ಊರು ಮೊದಲಿನ ತ್ರಿಕೋಣ ಪರಿಧಿಗೆ ಸೀಮಿತವಾಗದೆ ಎಲ್ಲ ದಿಕ್ಕುಗಳಲ್ಲಿ ವಿಸ್ತರಿಸುತ್ತಿತ್ತು. ಹೊಸದಾಗಿ ಕುಡಿಯುವ ನೀರಿನ ಯೋಜನೆಗಾಗಿ ನಿರ್ಮಿಸಿದ ವಿಶಾಲವಾದ ಹೊಂಡ ದೊಡ್ಡ ಜಾಗ ಆಕ್ರಮಿಸಿಕೊಂಡಿತ್ತು. ಬೆಟ್ಟದ ದೇವಸ್ಥಾನದಲ್ಲೂ ಉತ್ತಮ ಬೆಳವಣಿಗೆ ಎನ್ನಿಸುವಂತ ಸಣ್ಣ ಸಣ್ಣ ಬದಲಾವಣೆಗಳಾಗಿದ್ದವು. ಆದರೆ ಇಷ್ಟು ವರ್ಷ ಸುಣ್ಣದ ಬಿಳಿ ಬಣ್ಣದಿಂದ ಹೊಳೆಯುತ್ತಿದ್ದ ದೇವಸ್ಥಾನದ ಹೊರ ಭಾಗ ಕೇಸರಿ ಬಣ್ಣ ಪಡೆದುಕೊಂಡಿತ್ತು. ಆ ಕ್ಷಣಕ್ಕೆ ಸರ್ವಜ್ಞನ ವಚನ ನೆನಪಾಯಿತು:
“ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ,
ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ,
ಬಲ್ಲವರು ಹೇಳಿ ಸರ್ವಜ್ಞ”
ಆದರೆ ಈಗ ಮಲ್ಲಿಕಾರ್ಜುನ ಶಿಖರದ ಬೆಳಕಿನ ಬಣ್ಣ ಬದಲಾದ ಕಾರಣ ಬಲ್ಲವರಲ್ಲಿ ಕೇಳಿ ತಿಳಿಯಬೇಕು ಎಂದು ವಿಚಾರ ಮಾಡುತ್ತಾ ಬೆಟ್ಟದ ಕೆಳಗಿಳಿದೆ. ನಂತರ ಲೌಕಿಕ ಜೀವನದಲ್ಲಿ ಅಂದು ಆ ಪ್ರಶ್ನೆ ಮರೆತು ಹೋಯಿತು. ಮತ್ತೆ ಇಂದು ನೆನಪಾಗಿ ಈ ಲೇಖನವಾಗಿ ಹೊರ ಬಂತು.
No comments:
Post a Comment