Thursday, October 12, 2017

ಕೆರೆಯ ನೀರನ್ನು ಕೆರೆಗೆ ಚೆಲ್ಲಿ

'ಕಿರಾತಕ' ಅಲ್ಲ 'ಭಗೀರಥ'

ನಾನು ನೋಡಿದ ಯಶ್ ಅಭಿನಯದ ಮೊದಲ ಚಿತ್ರ 'ಕಿರಾತಕ'. ಅನ್ವರ್ಥ ನಾಮಕ್ಕೆ ತಕ್ಕಂತೆ ಪಾತ್ರ ಆ ಚಿತ್ರದ ನಾಯಕನದ್ದು. ನಗೆಯಿಕ್ಕಿಸುವ ಸನ್ನಿವೇಶಗಳು, ಪಡ್ಡೆ ಹುಡುಗನ ತರಹೇವಾರಿ ವಿಚಾರಗಳು ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವ ವಿಧಾನಗಳನ್ನು ನೋಡಿ, ಈತ 'ಕಿರಾತಕ' ನೇ ಸರಿ ಅನ್ನಿಸಿದ್ದು ನಿಜ. ಆದರೆ ತೆರೆಯ ಮೇಲಷ್ಟೇ ನಾಯಕನಾಗಿ ಉಳಿಯದೆ, ಬತ್ತಿದ ಕೆರೆಗಳಿಗೆ ಪುನರುಜ್ಜೀವನ ಕೊಡುವ ಯೋಜನೆ ಕೈಗೊಂಡು ಅದರಲ್ಲಿ ಯಶಸ್ಸನ್ನು ಕಂಡ ಯಶ್ ರನ್ನು ಇಂದಿನ ಕಾಲದ 'ಭಗೀರಥ' ಎಂದು ಕರೆಯುವುದೇ ಸೂಕ್ತವಲ್ಲವೇ?



ಕೆರೆಯ ನೀರನ್ನು ಕೆರೆಗೆ ಚೆಲ್ಲಿ

 ತಲ್ಲೂರು ಕೆರೆ (ಚಿತ್ರ ಕೃಪೆ: ಪ್ರಜಾ ವಾಣಿ)
ಇಷ್ಟಕ್ಕೂ ಯಶ್ ದುಡ್ಡು ಮಾಡಿದ್ದು ಜನರಿಂದ ಮತ್ತು ಅವರು ಅದನ್ನು ಜನರಿಗೆ ಖರ್ಚು ಮಾಡಿದ್ದಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದ್ದಾರೆ ಎನ್ನುತ್ತೀರಾ? ಸರಿ, ನಾವು ದುಡ್ಡು ಕೊಟ್ಟಿದ್ದು ಚಿತ್ರ ವೀಕ್ಷಣೆಯ ಮನರಂಜನೆಗಾಗಿ ಅಲ್ಲವೇ? ಕೆರೆ ಕಟ್ಟಿ ಕೊಡಲಿಕ್ಕೆ ಅಲ್ಲವೇ ಅಲ್ಲ. ಇಷ್ಟಕ್ಕೂ ಬೇರೆ ಯಾವ ಚಿತ್ರ ನಟ ಇಂಥ ಸೃಜನ ಶೀಲತೆ ಮತ್ತು ದೂರ ದೃಷ್ಟಿ ಹೊಂದಿದ್ದಾರೆ? ಇಷ್ಟಕ್ಕೂ ನಮ್ಮ ಸುತ್ತ ಮುತ್ತಲಿನ ಕೆರೆ-ಭಾವಿಗಳ ಸಂರಕ್ಷಣೆಗೆ ಚಿತ್ರ ನಟರೇಕೆ ಬರಬೇಕು? ನಾವೇ ಆ ಆ ಭಾಗದ ಜನರು ಹಣ ಕೂಡಿಸಿಕೊಂಡು, ಸಹಕಾರಿ ಸಂಸ್ಥೆ ಕಟ್ಟಿಕೊಂಡು ಕೆರೆ-ಭಾವಿಗಳ ಪುನರುಜ್ಜೀವನಕ್ಕೆ ಕೈಲಾದ ಪ್ರಯತ್ನ ಮಾಡಬಾರದೇಕೆ? ಆ ಕೆಲಸ ನಿಮ್ಮಿಂದಾದರೇ, ನೀವೇ ನಿಮ್ಮೂರಿನ 'ರಾಜಾ ಹುಲಿ'.



ದಿನದ ಕೊನೆಗೆ ಉಳಿದದ್ದೆಷ್ಟು?

ನಾವೆಲ್ಲ ಲೆಕ್ಕ ಹಾಕುತ್ತೇವೆಲ್ಲ. ದಿನದ ಕೊನೆಗೆ ಅಥವಾ ತಿಂಗಳ ಕೊನೆಗೆ ಉಳಿದದ್ದೆಷ್ಟು? ಅದೇ ತರಹ ಆಣೆಕಟ್ಟುಗಳನ್ನು ಹೊರತು ಪಡಿಸಿ, ಮಳೆಗಾಲದ ಕೊನೆಗೆ ಉಳಿದದ್ದೆಷ್ಟು ನೀರು ಎನ್ನುವುದರ ಲೆಕ್ಕ ನಮಗೇಕೇ ಬೇಡ? ಹಾಗೆಯೇ ಜೀವನದ ಕೊನೆಗೆ ಉಳಿಯುವುದೇನು ಎನ್ನುವ ಪ್ರಶ್ನೆಗೆ ಯಶ್ ಉತ್ತರ ಕಂಡು ಕೊಂಡಿದ್ದಾರೆ ಎನಿಸುತ್ತದೆ. ಪ್ರಕೃತಿಯಿಂದ ಜೀವ ತಳೆಯುವ ಮಾನವ, ಜೀವ ಕುಲದ ಮುಂದುವರಿಕೆಗೆ ಅಗತ್ಯವಾದ ಜಲ ಸಂರಕ್ಷಣೆ ಮಾಡದೇ ಹೋದರೇ ಯಾವ ಉಪಯೋಗಕ್ಕೆ ಮನುಕುಲದ ಪ್ರಗತಿ?

No comments:

Post a Comment