Sunday, March 3, 2024

ಸೋತಾಗ ಹಣೆ ಬರಹ, ಅರ್ಥವಾಗದಿದ್ದಾಗ ಕರ್ಮ

ನಿಮ್ಮ ಸ್ನೇಹಿತ ಬಲು ಪ್ರಯತ್ನಶಾಲಿ. ಅವನ ಪ್ರಯತ್ನಗಳನ್ನು ನೀವು ಮೆಚ್ಚುಗೆಯಿಂದಲೇ ಗಮನಿಸುತ್ತಿರುತ್ತೀರಿ. ಅವನು ಎಂತಹ ಸಮಸ್ಯೆಗಳೇ ಬರಲಿ, ಧೈರ್ಯದಿಂದಲೇ ಎದುರಿಸುತ್ತಿರುತ್ತಾನೆ. ಆದರೆ ಅವನಿಗೆ ವಿಜಯಮಾಲೆ ದೂರ. ಅವನು ಛಲ ಬಿಡದ ತ್ರಿವಿಕ್ರಮ. ಮತ್ತೆ ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತಾನೆ. ಆದರೆ ನೋಡಿ. ಅದು ಏನು ಮಾಡಿದರೂ ಅವನು ಜಯಶಾಲಿ ಆಗುತ್ತಿಲ್ಲ. ಆಗ ನಮ್ಮ-ನಿಮ್ಮ ಬಾಯಿಂದ ಉದ್ಗಾರ ಹೊರಡುತ್ತದೆ. "ಹಣೆ ಬರಹದ ಮುಂದೆ ಯಾರೇನು  ಮಾಡುವುದಕ್ಕಾಗುತ್ತದೆ?"

ವಿಚಾರ ಮಾಡಿ ನೋಡಿದರೆ ಹಣೆ ಬರಹ ಅಂತ ಏನೂ ಇರುವುದಿಲ್ಲ. ಅದನ್ನೇ ಎಲ್ಲರು ನಂಬಿಕೊಂಡಿದ್ದರೆ, ಯಾರು ಪ್ರಯತ್ನವನ್ನೇ ಮಾಡುತ್ತಿದ್ದಿಲ್ಲ. ಆದರೆ ಪ್ರಯತ್ನ ಮಾಡಿದರೂ, ಅದಕ್ಕೆ ತಕ್ಕ ಪ್ರತಿಫಲ ದೊರಕದಿದ್ದರೆ 'ಹಣೆ ಬರಹ' ಎಂದು ಸುಮ್ಮನಾಗುತ್ತೇವೆ ಅಷ್ಟೇ.

ಇನ್ನೊಂದು ಉದಾಹರಣೆ ನೋಡಿ. ನಿಮ್ಮ ಮನೆಯಲ್ಲಿ ಒಬ್ಬ ಸೋಮಾರಿ. ಅವನಿಗೆ ದುಡಿಯುವುದು ಬೇಕಿಲ್ಲ. ಸಿಕ್ಕ ಅವಕಾಶಗಳನ್ನು ಉಪಯೋಗ ಮಾಡಿಕೊಳ್ಳುವುದಿಲ್ಲ. ಅವನಿಗೆ ಬುದ್ಧಿ ಹೇಳಲು ಮನೆಯವರು, ಸ್ನೇಹಿತರು, ಬಂಧುಗಳು ಎಲ್ಲ ಪ್ರಯತ್ನ ಮಾಡಿ ಸೋತು ಹೋಗುತ್ತಾರೆ. ಕೊನೆಗೆ ಎಲ್ಲರು ಹೇಳುವುದು ಒಂದೇ "ಅವನ ಹಣೆಬರಹಕ್ಕೆ ನಾವೇನು ಮಾಡುವುದುಕ್ಕಾಗುತ್ತದೆ?" 

ಕರ್ಮ ಅನ್ನುವುದು ಇದಕ್ಕಿಂತ ಸ್ವಲ್ಪ ಬೇರೆ (ತುಂಬಾ ಅಲ್ಲ). ಯಾರೋ ಒಬ್ಬರಿಗೆ ಹೆಚ್ಚು ಪ್ರಯತ್ನ ಇಲ್ಲದೆ ಯಶಸ್ಸು ದೊರಕಿದರೆ, ನಾವು ಅವನಿಗೆ ಅದೃಷ್ಟಶಾಲಿ ಎನ್ನುತ್ತೇವೆ. ಸ್ವಲ್ಪ ಜನ ಅದು ಅವರ ಸಂಸ್ಕಾರ, ಅವರ ಹಿಂದಿನ ಜನ್ಮದ ಪುಣ್ಯದ ಫಲ ಎಂದು ಕೂಡ ಹೇಳುತ್ತಾರೆ. ಅದೇ ಇನ್ನೊಬ್ಬರಿಗೆ ದಾರಿದ್ರ್ಯ ಕಾಡಿದರೆ ಅದು ಅವರು ಪಡೆದುಕೊಂಡು ಬಂದದ್ದು, ಅದು ಅವರ ಕರ್ಮ ಅನುಭವಿಸಲೇಬೇಕು ಎಂದು ಕೂಡ ಹೇಳುತ್ತೇವೆ. ಒಳ್ಳೆಯ ತಂದೆ-ತಾಯಿಗಳಿಗೆ ಕೆಟ್ಟ ಮಕ್ಕಳು, ಒಳ್ಳೆಯ ಗಂಡನಿಗೆ ಕಾಡುವ ಹೆಂಡತಿ ಅಥವಾ ಒಳ್ಳೆಯ ಹೆಂಡತಿಗೆ ದುಷ್ಟ ಗಂಡ ಇವೆಲ್ಲವುಗಳು ಅವರ ಪಾಪ-ಪುಣ್ಯದ ಫಲಗಳು, ಅದು ಅವರ ಕರ್ಮ ಎಂದು ಮಾತು ಮುಗಿಸುತ್ತೇವೆ. ಏಕೆಂದರೆ ಆ ನಂಟುಗಳು ನಮಗೆ ಅರ್ಥವಾಗದ್ದು.

ಈ ಕರ್ಮ ಎನ್ನುವುದು ನಿಜವಾಗಿ ಇದೆಯೋ ಇಲ್ಲವೋ ಯಾರಿಗೆ ಗೊತ್ತು? ಆದರೆ ಅರ್ಥವಾಗದ ವಿಷಯಗಳಿಗೆ ತುಂಬಾ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವುದಕ್ಕಿಂತ ಅದು ಕರ್ಮ ಎಂದು ಕೈ ತೊಳೆದುಕೊಳ್ಳುವುದು ವಾಸಿ ಅಲ್ಲವೇ? ಹಾಗೆ ಮಾಡುವುದರಿಂದ ಆ ಸಮಸ್ಯೆಯನ್ನು ಸ್ವಲ್ಪ ಸಮಯದ ಮಟ್ಟಿಗಾದರೂ ಪಕ್ಕಕ್ಕೆ ಇಟ್ಟು ಜೀವನ ಮುಂದುವರೆಸಲು ಆಗುತ್ತದೆ. ಅರ್ಥವಾಗದ ಸಮಸ್ಯೆಗಳಿಗೆ ಹಿಂದಿನ ಜನ್ಮವನ್ನು ಹೊಣೆಗಾರ ಮಾಡಿದರೆ ಈ ಜನ್ಮದಲ್ಲಿ ಸ್ವಲ್ಪವಾದರೂ ನೆಮ್ಮದಿ. ಅದು ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳುವ ರೀತಿ. ಹಾಗೆ ಮಾಡದೆ ಹೋದರೆ ನಮ್ಮ ಮನಸ್ಸಿನ ಮೇಲೆ ಆಗುವ ಪರಿಣಾಮಗಳು ಅಧಿಕ. ಹಿಂದಿನ ಜನ್ಮದಲ್ಲಿ ನೀವು ಕೆಟ್ಟದು ಮಾಡಿದ್ದಕ್ಕೆ ಇಂದಿನ ಜನ್ಮದಲ್ಲಿ ನೀವು ಒಳ್ಳೆಯವರು ಆದರೂ ಕಷ್ಟ ಅನುಭವಿಸುತ್ತಿದ್ದೀರಿ ಎಂದು ನಿಮ್ಮ ಮೇಲೆ ನೀವೇ ಅನುಕಂಪ ತೋರಿಸಿದರೆ ನೀವು ನಾಲ್ಕು ದಿನ ಬಾಳಲು ಸಾಧ್ಯ. ಇಲ್ಲದೆ ಹೋದರೆ ನೀವು ಈ ಜನ್ಮದ ಕಷ್ಟಗಳನ್ನು ಎದುರಿಸಲು ಆಗದೆ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೀರಿ. ಇಲ್ಲವೇ ದ್ವೇಷ ಸಾಧಿಸುತ್ತ ಬದುಕಲ್ಲಿ ಇನ್ನು ಹೆಚ್ಚು ತೊಂದರೆಗಳನ್ನು ಆಹ್ವಾನಿಸುತ್ತ ಹೋಗುತ್ತೀರಿ.

ನಮ್ಮ ವೇದ-ಪುರಾಣಗಳಲ್ಲಿ ಮರು ಜನ್ಮಗಳ ವ್ಯಾಖ್ಯಾನಗಳಿವೆ. ಪಾಪ-ಪುಣ್ಯ-ಕರ್ಮಗಳ ಲೆಕ್ಕಗಳಿವೆ. ಮಹಾಭಾರತದ ಉಪಕಥೆಗಳನ್ನು ಗಮನಿಸಿ ನೋಡಿ. ಅಲ್ಲಿ ಅವನು ಹಿಂದಿನ ಜನ್ಮದಲ್ಲಿ ಹಾಗೆ ಮಾಡಿದ್ದಕೆ ಈ ಜನ್ಮದಲ್ಲಿ ಇದನ್ನು ಅನುಭವಿಸುತ್ತಿದ್ದಾನೆ ಎನ್ನುವ ವಿವರಣೆಗಳಿವೆ. ಇವುಗಳ ಪ್ರಭಾವ ನಮ್ಮ ಮೇಲೆ ಕೂಡ ಆಗಿ ನಾವು ಪಾಪ-ಕರ್ಮಗಳ ಉದಾಹರಣೆಗಳನ್ನು ಸುಲಭದಲ್ಲಿ ಒಪ್ಪಿಕೊಂಡುಬಿಡುತ್ತೇವೆ. ಅದು ನಮಗೆ ಯಾರೋ ಕೆಟ್ಟದು ಮಾಡಿದಾಗ ಕೂಡ ನಾವು ಅವರ ಮೇಲೆ ದ್ವೇಷ ಸಾಧಿಸಿ ಮತ್ತೆ ಕೆಟ್ಟದು ಮಾಡದಂತೆ ಕಾಯುತ್ತದೆ. 

'ಇದು ಕಲಿಗಾಲ. ಒಳ್ಳೆಯವರಿಗೆ ಕೆಟ್ಟದ್ದು ಆಗುತ್ತದೆ' ಎಂದೆಲ್ಲ ಮಾತನಾಡುತ್ತಾರೆ ಅಲ್ಲವೇ. ಇದು ಯಾವ ಕಾಲವೇ ಆಗಿರಲಿ. ನಮಗೆ ಕೆಟ್ಟದು ಆದಾಗಲೂ ನಾವು ಒಳ್ಳೆಯತನ ಕೈ ಬಿಡಬಾರದು ಎನ್ನುವ ಉದ್ದೇಶದಿಂದ ಮನುಷ್ಯ ಆ ಮಾತುಗಳನ್ನು ರೂಢಿಗೆ ತಂದ. ಹಾಗೆಯೆ "ಕೆಟ್ಟವರನ್ನು ದೇವರು ನೋಡಿಕೊಳ್ಳುತ್ತಾನೆ" ಎನ್ನುವ ಸಮಾಧಾನದ ಮಾತುಗಳು ನಾವು ಸಮಾಜದಲ್ಲಿ ಕೆಟ್ಟ ಹುಳುಗಳು ಆಗದಂತೆ ನಮ್ಮನ್ನು ಕಾಪಾಡಿದವು.

ಇನ್ನು ಮುಂದೆ ನೀವು ಎಲ್ಲಿಯಾದರೂ 'ಹಣೆ ಬರಹ' ಎನ್ನುವ ಪದ ಕೇಳಿದಾಗ ಅಲ್ಲಿ ಅವರು ಪ್ರಯತ್ನ ಮಾಡಿ ಸೋತಿದ್ದಾರೆ ಎನ್ನುವುದು ಅರ್ಥ ಮಾಡಿಕೊಳ್ಳಿ. ನೀವು ಅವರ ಪ್ರಯತ್ನಗಳಿಗೆ  ಅಭಿನಂದಿಸಿ. 

ಹಾಗೆಯೇ ಯಾರಾದರೂ 'ಕರ್ಮ' ಎಂದು ಹೇಳುತ್ತಿದ್ದರೆ ಅವರು ಕಷ್ಟಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ. ಅವರ ಜೀವನ ಪ್ರೀತಿ ಕೂಡ ಅಷ್ಟೇ ದೊಡ್ಡದು ಎನ್ನುವುದು ಮರೆಯಬೇಡಿ.

No comments:

Post a Comment