ಈ ಕಥಾ ಸಂಕಲನದಲ್ಲಿ ಒಟ್ಟು
ಎಂಟು ಕಥೆಗಳಿವೆ. ಅದರಲ್ಲಿ ಮನಸ್ಸಿನ ಮೇಲೆ ತೀವ್ರ ಪರಿಣಾಮ
ಬೀರುವ ಮೂರು ಕಥೆಗಳನ್ನು ಇಲ್ಲಿ
ಪ್ರಸ್ತಾಪಿಸುತ್ತಿದ್ದೇನೆ.
"ಸೀಳು
ಲೋಟ" ಇದು ತಿರುಪತಿಗೆ ಹೋಗುವ
ಮುನ್ನ ಒಂದು ಸಣ್ಣ ಕಳ್ಳತನ
ಮಾಡಿ, ಅದನ್ನು ದೇವರ ಹುಂಡಿಗೆ ಹಾಕಿ,
ಕುಟುಂಬಕ್ಕೆ ಅಂಟಿದ ಪ್ರಾಯಶ್ಚಿತ್ತ ಕಳೆದುಕೊಳ್ಳುವ ಪ್ರಸಂಗದ ಸುತ್ತ ಹೆಣೆದಿದ್ದರೂ, ಇದು ಒಂದು ಕುಟುಂಬದ
ತಳಮಳಗಳು, ಬಡತನ ತಂದೊಡ್ಡುವ ಅಸಹಾಯಕತೆಗಳು,
ಮದುವೆ ಮನೆಯಲ್ಲಿ ನಡೆಯುವ ಕಳವಳಕಾರಿ ಸಂಗತಿಗಳು, ಅಣ್ಣ-ತಂಗಿಯ ಗಟ್ಟಿ
ಪ್ರೀತಿ, ದೇವರ ಮೇಲಿನ ಅಚಲ
ನಂಬಿಕೆ, ಆಣೆ-ಪ್ರಮಾಣಗಳು ಎಲ್ಲವು
ಒಟ್ಟುಗೂಡಿ ಆ ಕುಟುಂಬವನ್ನು ಹತ್ತಾರು
ವರುಷಗಳಿಂದ ಹತ್ತಿರದಿಂದ ನೋಡಿದ ಅನುಭವ ಸಿಗುತ್ತದೆ.
'ಕೆಂಪು
ಗಿಣಿ' ಇದು ಬಳ್ಳಾರಿ ಜಿಲ್ಲೆಯ
ಊರೊಂದರಲ್ಲಿ, ಹಲವು ದಶಕಗಳ ಹಿಂದೆ,
ಲೇಖಕರು ಚಿಕ್ಕವರಾಗಿದ್ದಾಗ ಶುರುವಾಗುವ ಕಥೆ. ಕಥೆಯ ಅರಂಭದಲ್ಲಿ
ಅವರ ಕುಟುಂಬದ (ಅಕ್ಕ, ತಾಯಿ, ತಂದೆ) ಪರಿಚಯ ಮತ್ತು ಶಾಲೆಯಲ್ಲಿ ನಡೆಯುವ ಸಂಗತಿಗಳು ಹಾಗೆಯೇ ಅವರ ಹೊಲವನ್ನು ಗುತ್ತಿಗೆ
ಆಧಾರದ ಮೇಲೆ ಉಳುವ ರೈತ
ಈರಪ್ಪ, ಅವನ ಹೆಂಡತಿ ನರಸಕ್ಕ
ಮತ್ತು ಮಗ ಕುಮಾರಸ್ವಾಮಿ, ಈ
ಎಲ್ಲರ ಪಾತ್ರ ಪರಿಚಯಗಳಾಗುತ್ತವೆ. ನಂತರ ತಮ್ಮ ಹೊಲಕ್ಕೆ
ಭೇಟಿ ಕೊಟ್ಟಾಗ ಅಲ್ಲಿರುವ ಹಸಿರು ಗಿಣಿಗಳು, ಅವುಗಳು ನಿರಂತರವಾಗಿ ಕೊಕ್ಕಿನಿಂದ ತಿಕ್ಕಿಕೊಂಡು ತಮ್ಮ ಮೈ ಸ್ವಚ್ಛ
ಮಾಡಿಕೊಳ್ಳುವ ಪರಿ ವಿಶಿಷ್ಟ ಎನಿಸುತ್ತದೆ.
ಈರಪ್ಪ ಹೇಳಿದ ಹೊಲದಲ್ಲಿ ಓಡಾಡುವ ಏಳು ಹೆಡೆ ಸರ್ಪದ
ಕಥೆ ಕೇಳಿ ಈ ಚಿಕ್ಕ
ಹುಡುಗನಿಗೆ ಮೈ ಝಂ ಎನ್ನಿಸ್ಸುತ್ತದೆ.
ಕಾಲಾಂತರದಲ್ಲಿ ಅಕ್ಕನ ಮದುವೆಯ ಖರ್ಚಿಗೆಂದು ಹೊಲ ಮಾರಿ, ಈರಪ್ಪನಿಗೂ
ದುಡ್ಡು ಕೊಡುತ್ತಾರೆ ಲೇಖಕರ ತಂದೆ. ಇದೆಲ್ಲ ಆಗಿ ಇಪ್ಪತ್ತು ವರುಷಗಳ
ನಂತರ, ತಮ್ಮ ಊರಿನ ಶಾಲೆಯ
ಕಾರ್ಯಕ್ರಮಕ್ಕೆ ಎಂದು ತಮ್ಮ ಹುಟ್ಟೂರಿಗೆ
ಹೊರಡುತ್ತಾರೆ ಲೇಖಕರು. ಹತ್ತಿರ ಬಂದಾಗ, ಅಪ್ಪ ಮಾರಿದ್ದ ಹೊಲ
ಈಗ ಹೇಗಿದೆಯೋ ಎಂದು ನೋಡಲು ಹೊರಡುತ್ತಾರೆ.
ಹಿಂದೊಮ್ಮೆ ಅಲ್ಲಿ ಬಿತ್ತಿ ಬೆಳೆಯುತ್ತಿದ್ದರು ಎನ್ನುವುದು ನಂಬಲಿಕ್ಕೇ ಅಸಾಧ್ಯ ಎನ್ನುವ ರೀತಿಯಲ್ಲಿ ಅಲ್ಲಿ ಗಣಿಗಾರಿಕೆ ನಡೆಯುತ್ತಿರುತ್ತದೆ. ಬಯಲಲ್ಲಿ ಕೆಲಸ ಮಾಡುವ ನೂರಾರು
ಯಂತ್ರಗಳು, ಮಣ್ಣು ಹೊತ್ತೊಯ್ಯಲು ನಿಂತಿರುವ ಸಾವಿರಾರು ಲಾರಿಗಳು ಅಲ್ಲಿನ ಪರಿಸರವನ್ನೇ ಸಂಪೂರ್ಣ ಬದಲಾಯಿಸಿರುತ್ತವೆ. ಅಲ್ಲಿನ ಒಂದು ದೊಡ್ಡ ಯಂತ್ರ
ನಿರ್ವಹಿಸುವ ವ್ಯಕ್ತಿ - ತನ್ನ ಬಾಲ್ಯದ ಗೆಳೆಯ
ಹಾಗೂ ತಮ್ಮ ಹೊಲದ ರೈತ
ಈರಪ್ಪನ ಮಗನಾದ ಕುಮಾರಸ್ವಾಮಿಯ ಭೇಟಿಯಾಗುತ್ತದೆ. ಅಲ್ಲಿನ ಬದಲಾವಣೆಗಳು ತಂದ ದಿಗ್ಭ್ರಮೆಗಳ ನಡುವೆ,
ಗಿಡದಲ್ಲಿ ಕುಳಿತಿರುವ ಕೆಂಪು ಪಕ್ಷಿಗಳ ಗುಂಪು ಕಣ್ಣಿಗೆ ಬೀಳುತ್ತವೆ. ಆದರೆ ಅವು ಸದಾ
ಮೈ ಸ್ವಚ್ಛ ಇಟ್ಟುಕೊಳ್ಳುವ ಹಸಿರು ಗಿಣಿಗಳು, ಸುತ್ತ ತುಂಬಿರುವ ಕೆಂಪು ಧೂಳಲ್ಲಿ, ನೀರಲ್ಲಿ ಮುಳುಗಿ ತೊಳೆದುಕೊಳ್ಳಲು ಕೆರೆಯೂ ಇಲ್ಲದಂತೆ ಮಾಡಿರುವ ಗಣಿಗಾರಿಕೆಯ ನಡುವೆ ಹೀಗೆ ಕೆಂಪು ಪಕ್ಷಿಗಳಾಗಿವೆ
ಎನ್ನುವುದು ಗೊತ್ತಾಗುತ್ತದೆ. ಹುಟ್ಟಿ ಬೆಳೆದ ಪ್ರೀತಿಯ ಊರು ನರಕವಾಗಿ ಕಾಣಲಾರಂಭಿಸುತ್ತದೆ.
'ಪೆದ್ದಿ
ಪದ್ಮಾವತಿ' ಇದು ಕನ್ನಡದಲ್ಲಿ ಒಳ್ಳೆಯ
ಅಂಕಗಳನ್ನು ಪಡೆದು, ಉಳಿದ ವಿಷಯಗಳಲ್ಲಿ ಹೇಗೋ
ಮೂವತ್ತೈದು ದಾಟಿ ಆದರೆ ಗಣಿತ
ವಿಷಯ ಮಾತ್ರ ಪಾಸಾಗುವ ಸೌಭಾಗ್ಯ ಇಲ್ಲದೆ ಎಸ್ಸೆಸ್ಸೆಲ್ಸಿ ಯನ್ನು ಮೂರು ಬಾರಿ ಫೇಲಾದ
ಪದ್ಮಾವತಿಯ ಕಥೆ. ಇದರಿಂದ ಪದ್ಮಾವತಿಯ
ತಾಯಿ ವೇದಮ್ಮನಿಗೆ ಬದುಕಲ್ಲಿ ನಂಬಿಕೆಯೇ ಕಳೆದಂತಾಗಿತ್ತು. ಆದರೆ ಪದ್ಮಾವತಿ ಒಂದು
ಬಾರಿ ಆತ್ಮಹತ್ಯೆಯ ವಿಫಲ ಪ್ರಯತ್ನ ಪಟ್ಟ
ಮೇಲೆ, ಅವಳ ತಾಯಿಯೂ ಆ
ವಿಷಯವನ್ನು ಅಲ್ಲಿಗೆ
ಬಿಟ್ಟು ಮತ್ತೆ ಪರೀಕ್ಷೆ ಕಟ್ಟಲು ಬಲವಂತ ಮಾಡುವುದಿಲ್ಲ ಎಂದಿದ್ದಳು. ವೇದಮ್ಮಳ ಒದ್ದಾಟ, ಪದ್ಮಾವತಿಯ ಪೆದ್ದುತನ ಪ್ರಸಂಗಗಳು ಮುಂದುವರೆದು ಕಥೆಯು ಈ ಕೊನೆಯ ಸನ್ನಿವೇಶದಲ್ಲಿ
ಕೊನೆಗೊಳ್ಳುತ್ತದೆ. ಭಾವಿಗೆ ನೀರು ತರಲು ಪದ್ಮಾವತಿ
ಹೋಗಿರುತ್ತಾಳೆ. ಹತ್ತಿರದ ಮರದಲ್ಲಿ ಜಗಳವಾಡುತ್ತಿರುವ ಕೋತಿಗಳ ಗುಂಪು. ಒಂದು ಮರಿ ಕೋತಿ
ತನ್ನ ತಾಯಿಯ ಮಡಿಲಿನ ಬಿಗಿ ಸಡಿಲಗೊಂಡು ದಪ್
ಎಂದು ಕೆಳಗೆ ಬೀಳುತ್ತದೆ. ತಾಯಿ ಕೋತಿ ತನ್ನ ಮರಿಯನ್ನು ಏಳಿಸಲು
ಪ್ರಯತ್ನಿಸಿ, ಪ್ರತಿಕ್ರಿಯೆ ದೊರಕದೆ ದುಃಖದಿಂದ ಅಳುತ್ತ, ಅಲ್ಲಿಯೇ ಇದ್ದ ಪದ್ಮಾವತಿಯ ಕೈಗೆ
ತನ್ನ ಮರಿಯನ್ನು ಕೊಟ್ಟು ಏನಾದರು ಮಾಡು ಎನ್ನುವಂತೆ ನೋಡುತ್ತದೆ.
ಪದ್ಮಾವತಿ ತೊಡೆಯ ಮೇಲೆ ಮರಿಯನ್ನು ಹಗೂರಕ್ಕೆ
ಸವರುತ್ತ ಮತ್ತು ಅವಳ ಸುತ್ತಲೂ ನೂರಾರು
ಕೋತಿಗಳು ಮೂಕವಾಗಿ ರೋಧಿಸುತ್ತ ಕೂತಿರುವ ದೃಶ್ಯ ಕಂಡು ಮಗಳನ್ನು ಹುಡುಕಿಕೊಂಡು
ಬಂದ ವೇದಮ್ಮ ವಿಸ್ಮಯದಿಂದ ನೋಡುತ್ತಾ ನಿಲ್ಲುತ್ತಾಳೆ.
ಲೇಖಕ
ವಸುಧೇಂದ್ರ ಬಳ್ಳಾರಿಯ ಜಿಲ್ಲೆಯ ಸಂಡೂರಿನಲ್ಲಿ ಜನಿಸಿದವರು. ಹಲವಾರು ಕಥಾ ಸಂಕಲನಗಳು, ಪ್ರಬಂಧಗಳನ್ನು
ರಚಿಸಿರುವ ಇವರು ಕನ್ನಡ ನಾಡಿನ
ಮನೆ ಮನಗಳ ತಲುಪುವುದಲ್ಲದೆ, ಇವರ
ಕೃತಿಗಳು ಹಲವಾರು ಭಾಷೆಗೆ ತರ್ಜುಮೆಗೊಂಡು ಕನ್ನಡ ನಾಡಿನಾಚೆಗೂ ಇವರ ಖ್ಯಾತಿ ಹಬ್ಬಿದೆ.
ಮಾನವ ಮೌಲ್ಯಗಳನ್ನು ಪ್ರತಿಬಿಂಬಿಸುವ ಇವರ ಕಥೆ, ಪ್ರಬಂಧಗಳು
ಓದುಗರಿಗೆ ತಮ್ಮ
ಬೇರುಗಳುಗಳನ್ನು ಗಟ್ಟಿಗೊಳಿಸುವ ಮತ್ತು ಜೀವನದಲ್ಲಿ ಒಂದು ಸಮತೋಲನ ಕಾಯ್ದುಕೊಳ್ಳುವ
ಮಹತ್ವವನ್ನು ಮನದಟ್ಟು ಮಾಡಿಸುತ್ತವೆ.