ಕೆಲ ವರ್ಷಗಳ ಹಿಂದೆ
ನಾನು ಊರಿಗೆ ಹೋದಾಗ ಸ್ನೇಹಿತ ಹೊಸದಾಗಿ ಆರಂಭಿಸಿದ ಅಂಗಡಿಯಲ್ಲಿ ಕುಳಿತಿದ್ದೆ. ಬೆಳಿಗ್ಗೆ ಹೊತ್ತು,
ವ್ಯಾಪಾರ ಚುರುಕುಗೊಳ್ಳುವ ಮುನ್ನ ಅಂಗಡಿಯವರು ಸುತ್ತ ಮುತ್ತಲಿನವರಿಗೆ ಒಂದು ನಮಸ್ಕಾರ ಹೇಳಿ, ಚಹಾ
ಕುಡಿದು, ದಿನಪತ್ರಿಕೆ ಮೇಲೆ ಕಣ್ಣಾಡಿಸುವ ಸಮಯ. ಆವಾಗ
ಬಂದಿದ್ದು ತುಂಬು ನಗೆ ಮೊಗದ ಆ ಹುಡುಗ. ನನಗಿಂತ ೮-೧೦ ವರ್ಷ ಚಿಕ್ಕವಿನಿದ್ದಿರಬಹುದು. ಅವನು ಕಾಲೇಜಿಗೆ
ಹೋಗುತ್ತಿದ್ದನೋ ಇಲ್ಲವೋ ಗೊತ್ತಿರಲಿಲ್ಲ. ತುಂಬ ಲವ ಲವಿಕೆಯಿಂದ ಕೆಲಸ ಮಾಡಿ ಸ್ವಲ್ಪ ಹಣ ಗಳಿಸುವದನ್ನು
ಗಮನಿಸಿದ್ದೆ. ಆದರೆ ಅಂದು ನನ್ನಲ್ಲಿ ಹಣದ ಸಹಾಯಕ್ಕಾಗಿ ವಿನಂತಿಸಿಕೊಳ್ಳುತ್ತಿದ್ದ. ಒಂದೇ ಊರು. ಮೇಲಾಗಿ
ಅವನಿಗೆ ಕೊಟ್ಟ ಹಣ ಸದ್ಬಳಕೆ ಆಗುವುದರಲ್ಲಿ ನನಗೆ ಯಾವುದೇ ಸಂದೇಹ ಇರಲಿಲ್ಲ. ಅವನು ಕೇಳುತ್ತಿದ್ದ
ಮೂರು ಸಾವಿರ ಜೇಬಿನಲ್ಲೆ ಇತ್ತು. ಕೊಟ್ಟಾದ ಮೇಲೆ ಇತರರಲ್ಲಿ ವಿಚಾರಿಸಿದೆ. ಅವನು ಬುಕ್ ಬೈಂಡಿಂಗ್
ಜೊತೆಗೆ ಬೇಕರಿಯಲ್ಲಿ ಸಿಹಿ ತಿಂಡಿ ಕಟ್ಟಿಕೊಡುವ ಪೊಟ್ಟಣಗಳನ್ನು ತಯಾರಿಸಿ ಕೊಡುತ್ತಿದ್ದ. ಮನೆಯಲ್ಲಿ
ಅನಾರೋಗ್ಯ ಪೀಡಿತ ತಂದೆ ಮತ್ತು ಇನ್ನು ಶಾಲೆಗೆ ಹೋಗುತ್ತಿರುವ ತಂಗಿಯರಿದ್ದರು. ಕುಟುಂಬದ ಸಂಪೂರ್ಣ
ಜವಾಬ್ದಾರಿ ಇವನ ಕೊರಳಿಗೆ ಬಿದ್ದಿತ್ತು. ಅವನ ಮಾಡುತ್ತಿದ್ದ ಕೆಲಸಗಳಿಂದ ಬರುವ ಸಂಪಾದನೆ ಅಷ್ಟರಲ್ಲೇ
ಇತ್ತು. ಆದರೂ ಅವನ ಹಸನ್ಮುಖ ಇದ್ಯಾವುದನ್ನೂ ಏಕೆ ತೋರುತ್ತಿಲ್ಲ ಎಂದು ಅರೆಕ್ಷಣ ವಿಚಾರ ಮಾಡಿದೆನಾದರೂ,
ಬೇರೆ ಕೆಲಸಗಳಲ್ಲಿ ಮಗ್ನನಾಗಿ, ವಾಪಸ್ಸು ಬೆಂಗಳೂರಿಗೆ ಬಂದ ನಂತರ ವಿಷಯ ಸಂಪೂರ್ಣ ಮರೆತು ಹೋದೆ.
ಕೆಲವು ತಿಂಗಳುಗಳೇ
ಸರಿದು ಹೋದವು. ಮತ್ತೆ ಯಾವುದೊ ಕಾರಣಕ್ಕಾಗಿ ಊರಿಗೆ ಹೋದೆ. ಅದೇ ಹುಡುಗನನ್ನುನೋಡಿದೆ. ಅವನು ಕೈಯಲ್ಲಿ
ಕಾಯಿ, ಹೂವು, ಊದುಬತ್ತಿ ಹಿಡಿದು ಗಂಭೀರವಾಗಿ, ಲೋಕದ ಪರಿವೆ ಇಲ್ಲದಂತೆ ಹೊರಟಿದ್ದ. ಸ್ನೇಹಿತನೊಬ್ಬ
ಹೇಳಿದ. ಅವನು ಹೋಗುತ್ತಿರುವುದು ಮೌನೇಶ್ವರನ ಗುಡಿಗೆ. ಮನೆಯಿಂದ ಹೊರಟು ದೇವರ ದರ್ಶನವಾಗುವವರೆಗೆ
ಅವನು ದಾರಿಯಲ್ಲಿ ಯಾರ ಜೊತೆಯೂ ಮಾತನಾಡುವುದಿಲ್ಲ. ಅವನು ಪ್ರತಿ ವಾರ ಇದನ್ನು ಚಾಚೂ ತಪ್ಪದೇ ಪಾಲಿಸುತ್ತಾನೆ.
ಮನೆ ಸಮಸ್ಯೆಗಳ ಪರಿಹಾರಕ್ಕೆ ಅವನದು ಈ ವೃತ. ಅವನಿಗೆ ತನ್ನ ಕುಟುಂಬದ ಬಗ್ಗೆ ಇರುವ ಕಾಳಜಿ, ನನ್ನಲ್ಲಿ
ಹೆಚ್ಚಿನ ಆಸಕ್ತಿ ಮೂಡಿಸಿತು. ಇನ್ನೂ ವಿಷಯ ಕೆದಕಿದಾಗ ತಿಳಿದು ಬಂತು. ಆ ಹುಡುಗನಿಗೆ ಬಡತನ ವಂಶ ಪಾರಂಪರ್ಯವಾಗಿ
ಬಂದದ್ದಲ್ಲ. ಅವನ ತಾತ ಊರಿನಲ್ಲೇ ದೊಡ್ಡದಾದ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಈ ಹುಡುಗನ ಅಪ್ಪ
ಅದರಲ್ಲಿ ಕೆಲ ಸಮಯ ಕೂಡುತ್ತಿದ್ದದ್ದು ನೆನಪಿಗೆ ಬಂತು. ಇದಾಗಿ ಸುಮಾರು ಇಪ್ಪತ್ತು ವರ್ಷಗಳ ಮೇಲೆಯೇ
ಆಗಿತ್ತು. ಆದರೆ ನೆನಪುಗಳ ನಾಗಾಲೋಟಕ್ಕೆ ಇಪ್ಪತ್ತು ವರ್ಷಗಳೇನು ಮಹಾ?
ಅದು ನನ್ನ ಬಾಲ್ಯದ
ದಿನಗಳು. ಅಂದು ನನ್ನ ಅಕ್ಕಳ ವಧು ಪರೀಕ್ಷೆ. ಉಪಹಾರದ ತಯ್ಯಾರಿಗೆಂದು ಕಿರಾಣಿ ಸಾಮಗ್ರಿಗಳನ್ನು ತರಲು
ಬರಿಗೈಲಿ ನನ್ನ ಕಳಿಸಿದ್ದು ಅದೇ ಅಂಗಡಿಗೆ, ಅಲ್ಲಿ ಆ ಹುಡುಗನ ಅಪ್ಪ ಗಲ್ಲದ ಮೇಲೆ ಕುಳಿತಿದ್ದರು.
ಹೀಗೆ ವಿಷಯ ಎಂದು ಹೇಳಿದ ಮೇಲೆ ಸಿಕ್ಕೇ ಬಿಟ್ಟಿತು ಉದ್ರಿ. ಸುಮಾರು ಮೂವತ್ತು ರೂಪಾಯಿಯ ಸಾಮಾನುಗಳೊಂದಿಗೆ
ಮನೆಗೆ ಹಿಂತಿರುಗಿದೆ. ಆದರೆ ಬೇಜವಾಬ್ದಾರಿಯಾದ ನನ್ನ ಅಪ್ಪ ಆ ಬಾಕಿಯನ್ನು ಮುಟ್ಟಿಸದೆ ಎಷ್ಟೋ ತಿಂಗಳು
ಸತಾಯಿಸಿಬಿಟ್ಟಿದ್ದ. ಆ ಅಂಗಡಿಯ ಮುಂದೆ ಓಡಾಡಲು ನನಗೆ ಮುಜುಗರ ಆಗುತ್ತಿತ್ತು. ದುಡ್ಡಿನ ಮಹತ್ವ ಮತ್ತು
ಸಾಲ ತರುವ ಅವಮಾನಗಳ ಅನುಭವ ನನಗೆ ತುಂಬಾ ಸಣ್ಣ ವಯಸ್ಸಿನಲ್ಲೇ ಆಗಿ ಹೋಗಿತ್ತು. ಆದರೆ ಕಾಲ ಕ್ರಮೇಣದಲ್ಲಿ
ಬೇರೆ ಊರಿಗೆ ಓದಲು ಮತ್ತು ಅಲ್ಲಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬಂದ ನನಗೆ ಆ ಕಿರಾಣಿ ಅಂಗಡಿಯೊಂದು
ಮುಚ್ಚಿ ಹೋದದ್ದು ಗಮನಕ್ಕೆ ಬರುವ ಯಾವ ಘಟನೆಗಳೂ ನಡೆದಿರಲಿಲ್ಲ. ಆ ಸಂದರ್ಭ ಮತ್ತೆ ಈಗ ಬಂದಿತ್ತು.
ಆದರೆ ನನಗೆ ಇವನು ಅದೇ ಕುಟುಂಬದ ಹುಡುಗನೇನಾ ಎಂದು ಆಶ್ಚರ್ಯ. ಅವನ ಮನೆ ಹುಡುಕಿಕೊಂಡು ಹೋದೆ. ಅವರು
ಮೊದಲಿದ್ದ ತಮ್ಮ ದೊಡ್ಡ ಮನೆ ಅದಾಗಲೇ ಮಾರಿಬಿಟ್ಟಿದ್ದರು. ಊರ ಹೊರಗೆ ಚಿಕ್ಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮನೆ ಹೊರಗೆ ನಿಂತಿದ್ದ ಆ ಹುಡುಗನ ಅಪ್ಪನ ಗುರುತು ಸಿಗಲು ಸ್ವಲ್ಪ ಕಷ್ಟವೇ ಆಯಿತು ಆದರೆ ಗುರುತು ಸಿಕ್ಕ
ಮೇಲೆ ಯಾವುದೇ ಸಂಶಯ ಉಳಿಯಲಿಲ್ಲ, ಅಂದು ಗಲ್ಲದ ಮೇಲೆ ಕುಳಿತು ಹೂಂಕರಿಸುತ್ತಿದ್ದ ಅದೇ ವ್ಯಕ್ತಿ ಇಂದು
ಅನಾರೋಗ್ಯದಿಂದ ದುಡಿಯಲಾರದ ಸ್ಥಿತಿ ತಲುಪಿದ್ದ. ಆತ ನನ್ನ ನೋಡಿದನಾದರೂ, ನನ್ನ ಗುರುತಿಸದೆ ಹೋದದ್ದು
ಸ್ಪಷ್ಟವಾಯಿತು.
ಯಾರಲ್ಲಿ ನಾನು ಅಸಹಾಯಕ
ಆದರೆ ಅವಶ್ಯ ಸನ್ನಿವೇಶದಲ್ಲಿ ಸಾಲದ ಸಹಾಯ ತೆಗೆದು ಕೊಂಡಿದ್ದೇನೋ, ಅದೇ ವ್ಯಕ್ತಿಯ ಮಗ ಸುಮಾರು ೨೦
ವರ್ಷದ ನಂತರ ನನ್ನ ಹತ್ತಿರ ಸಹಾಯ ತೆಗೆದುಕೊಂಡಿದ್ದ! ಕಾಲ ಪುನರಾವರ್ತನೆಯಾಗಿತ್ತು. ಆದರೆ ಪಾತ್ರಗಳು
ಸಂಪೂರ್ಣ ಅದಲು ಬದಲಾಗಿದ್ದವು.
ಆ ಹುಡುಗನಿಗೆ ನನ್ನಲ್ಲಿ
ವಿಶ್ವಾಸ ಬೆಳೆದಿತ್ತು. ಮತ್ತೆ ಭೇಟಿಯಾದಾಗ ಕ್ಷೇಮ ಸಮಾಚಾರ ವಿಚಾರಿಸಿದ. ಅವನ ಮನೆವರೆಗೆ ಹೋಗಿ ಬಂದಿದ್ದ
ನನಗೆ ಆ ಕುಟುಂಬದ ಸ್ಥಿತಿ-ಗತಿಯ ಅರಿವಾಗಿತ್ತು. ಒಂದು ಕ್ಷಣ ವಿಚಾರ ಮಾಡಿದೆ. ನನಗೆ ಬರಬೇಕಿದ್ದ ಬಾಕಿಯ
ನೆನಪು ಅವನಿಗೆ ಮಾಡಿದರೆ, ಮುಂದೊಂದು ದಿನ ಅವನ ಮಗನು ಮತ್ತೇ ಇದೇ ಕಥೆ ಬರೆಯಬಹುದು ಎನ್ನಿಸಿತು. ಬದಲಿಗೆ
ಅವನು ನಡೆಸುತ್ತಿದ್ದ ಚಿಕ್ಕ ಕೆಲಸಗಳ ಕೂಲಂಕುಷ ಪರಿಚಯ ಮಾಡಿಕೊಂಡೆ. ಕೆಲವು ಸ್ನೇಹಿತರ ಸಹಕಾರದೊಂದಿಗೆ
ಅವನ ಆದಾಯ ಹೆಚ್ಚಿಸುವ ವ್ಯವಸ್ಥೆ ಆಯಿತು. ಅವನ ಪ್ರಯತ್ನ ಎಲ್ಲರೂ ಮೆಚ್ಚಿತ್ತಿದ್ದ ಕಾರಣಕ್ಕೆ, ಅವನು
ಪ್ರಗತಿಯನ್ನು ಕಾಣುವುದರಲ್ಲಿ ಯಾರಿಗೂ ಸಂದೇಹ ಇರಲಿಲ್ಲ. ಮೌನೇಶ್ವರನು ತನ್ನ ಮೌನ ಮುರಿದು ಇವನಿಗೆ
ಅಸ್ತು ಅನ್ನುತ್ತಾನೋ ಇಲ್ಲವೋ, ಆದರೆ ಇವನ ನಂಬಿಕೆಯನ್ನು ದೃಢಗೊಳಿಸಿದ್ದ.
ಇದಾಗಿ ಸುಮಾರು ಎರಡು
ವರ್ಷಗಳವರೆಗೆ ನಾನು ನನ್ನೂರಿಗೆ ಹೋಗುವುದು ಕಡಿಮೆಯಾದದ್ದಕ್ಕೋ ಏನೋ ನನ್ನ ಅವನ ಭೇಟಿಯಾಗಲಿಲ್ಲ. ಮತ್ತೆ
ಸ್ವಲ್ಪ ದಿನಗಳ ಹಿಂದೆ ಅವನನ್ನು ನೋಡಿದೆ. ನಾನು ಸ್ನೇಹಿತನೊಂದಿಗೆ ಹೋಟೆಲಿಗೆ ಚಹಾ ಕುಡಿಯಲು ಹೋದಾಗ
ಅಲ್ಲಿಗೆ ಅವನೂ ಬಂದಿದ್ದ ಅವನ ಸ್ನೇಹಿತನೊಂದಿಗೆ. ದೂರದಿಂದಲೇ ಕೈ ಬೀಸಿದ. ಅದೇ ನಗು ಮುಖ. ಆದರೆ ಹೊಸ
ಕಳೆ ಮೂಡಿತ್ತು. ಅವನ ಹಾಕಿದ್ದ ಬಟ್ಟೆಗಳು ಉತ್ತಮ ಗುಣಮಟ್ಟದವು ಎನ್ನಿಸಿತು. ಅದಕ್ಕೆ ಕಾರಣ ಮೌನೇಶ್ವರನ
ವೃತವೋ, ಅಥವಾ ಅವನ ಸ್ವತ ಪ್ರಯತ್ನವೋ ಗೊತ್ತಾಗಲಿಲ್ಲ.
ಆದರೆ ಇತಿಹಾಸ ಪುನರಾವರ್ತನೆಯಾಗದೆ ಪರಿವರ್ತನೆ ಆಗುತ್ತಿರುವಂತೆ ಭಾಸವಾಯಿತು.