'ಹಣ ಗಳಿಸುವುದು ನನಗೆ ಮಖ್ಯವಲ್ಲ' ಎಂದು ಮಾತಾಡುವುದಕ್ಕೆ ಮುಂಚೆ ಸಾಕಷ್ಟು ಹಣ ಗಳಿಸಿರಬೇಕು ಎನ್ನುವುದು ನಮ್ಮ ಶಾಲಾ ಶಿಕ್ಷಕರೊಬ್ಬರು ಹೇಳುತ್ತಿದ್ದ ಮಾತು. ಹೌದು, ಆದರೆ ಎಷ್ಟು ಹಣ ಸಾಕು?
ನಾನು ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗುವಾಗ ಚಾಲಕ ಕೇಳಿದ, ನಿಮ್ಮ ಏರಿಯಾದಲ್ಲಿ ಎಷ್ಟು ನಡೆದಿದೆ? ನಾನು ಹೇಳಿದೆ. ಅದು ನಮ್ಮ ಏರಿಯಾದಲ್ಲಿ ಸೈಟ್ ನ ಬೆಲೆ. ಇನ್ನೂ ಸಾಕಷ್ಟು ದೂರದಲ್ಲಿ ಇರುವ, ಮೈಸೂರು ರಸ್ತೆಯ ದೊಡ್ಡ ಆಲದ ಮರದ ಹತ್ತಿರ ಬೆಲೆ ಎಷ್ಟಿರಬಹುದೆಂದು ಕೇಳಿದ. ನಾನು ಅಂದಾಜು ೮-೧೦ಲಕ್ಷ ಎಂದು ಹೇಳಿದೆ. ಆತ ಅದರ ಅರ್ಧ ಬೆಲೆಗೆ ಒಂದು ಸೈಟ್ ಕೆಲವು ವರ್ಷಗಳ ಹಿಂದೆ ಖರೀದಿಸಿದ್ದಾಗಿ, ಇನ್ನೂ ಸ್ವಲ್ಪ ವರ್ಷ ಕಾಯುವುದಾಗಿ, ೧೫-೨೦ ಲಕ್ಷ ಬಂದರೆ ಸಾಕೆಂದು ಹೇಳಿದ. ಮಗಳ ಮದುವೆ ಮಾಡಿ, ಆಟೋ ಓಡಿಸುವ ವೃತ್ತಿ ಬಿಟ್ಟು ಬಿಡುವುದಾಗಿ ಹೇಳಿದ. ಹಾಗೆಯೇ ನನ್ನ ಹತ್ತಿರ ಮೀಟರ್ ಗಿಂತ ಹೆಚ್ಚಿಗೆ ವಸೂಲು ಮಾಡಿದ, ವಾಪಸ್ಸು ಖಾಲಿ ಹೋಗಬೇಕು, ತನಗೆ ನಷ್ಟವಾಗುತ್ತೆ ಎಂದು.
ನಮ್ಮ ಆಫೀಸ್ ನಲ್ಲಿ ಸಹೋದ್ಯೋಗಿಗಳು ಮಾತನಾಡಿಕೊಳ್ಳುತ್ತಿದ್ದರು. ಅಮೆರಿಕೆಯಲ್ಲಿರುವ ನಮ್ಮ ಮುಖ್ಯ ಕಚೇರಿಯಲ್ಲಿ ಈಚೆಗೆ ನಡೆದ ವಿದ್ಯಮಾನವೊಂದರಲ್ಲಿ ಮುಖ್ಯ ಹುದ್ದೆಯಲ್ಲಿದ್ದ ಭಾರತ ಮೂಲದ ಅಧಿಕಾರಿಯೊಬ್ಬರಿಗೆ ೭ ಮಿಲಿಯನ್ ಡಾಲರ್ ಕೊಟ್ಟು ನಿವೃತ್ತಿಗೊಳಿಸಲಾಗಿತ್ತು. ಅದನ್ನು ಭಾರತಕ್ಕೆ ತಂದರೆ ಸುಮಾರು ೪೦ ಕೋಟಿಗೂ ಮೇಲಾಗುವುದು, 'ಆದರೆ ನನಗೆ ಅಷ್ಟು ಬೇಡ, ನಾಲ್ಕು ಕೋಟಿ ಕೊಟ್ಟರೆ ಸಾಕು' ಎಂದು ಒಬ್ಬ ಹೇಳುತ್ತಿದ್ದ. ಇನ್ನೊಬ್ಬ 'ನನಗೆ ಅಷ್ಟೂ ಕೂಡ ಬೇಡ, ಸುಮಾರು ಐವತ್ತು ಲಕ್ಷ ಕೊಟ್ಟರೆ ಸಾಕು, ತನಗೆ ಹೆಚ್ಚಿನ ಆಸೆ ಇಲ್ಲ' ಎಂದು!
ಊರಿನಲ್ಲಿರುವ ಅಕ್ಕಳಿಗೆ ಫೋನು ಮಾಡಿದ್ದಾಗ ಹೇಳುತ್ತಿದ್ದಳು, ಹಳೇ ಮನೆ ರೀಪೇರಿಗೆ ಬಂದಿದೆ. ಹತ್ತು ಲಕ್ಷ ಹೊಂದಿಸಿಕೊಂಡರೆ ಸಾಕು, ಬೇರೆ ಯಾವುದೇ ಸಮಸ್ಯೆ ಇಲ್ಲ, ನೆಮ್ಮದಿಯಾಗಿರಬಹುದು. ಚಿಕ್ಕಪ್ಪನಲ್ಲಿ ಪ್ರಶ್ನೆ ಹಾಕಿದೆ, ಎಷ್ಟು ಹಣ ಸಾಕು? ಆತನ ಉತ್ತರ, ಇದು ಕೇವಲ ಮೂರ್ಖರು ಕೇಳುವ ಪ್ರಶ್ನೆ. ಎಷ್ಟು ಸಾಧ್ಯವಾಗುತ್ತೋ ಅಷ್ಟು ಹಣ ಗಳಿಸಬೇಕು. ತಮ್ಮನ ಸ್ನೇಹಿತನೊಬ್ಬ ನನಗೇ ಪ್ರಶ್ನೆ ಹಾಕಿದ, 'ಹಣ ಗಳಿಸುವುದು ಹೇಗೆ?' ಎನ್ನುವ ಪುಸ್ತಕ ಬರೆದರೆ ಎಷ್ಟು ಪ್ರತಿಗಳನ್ನು ಮಾರಬಹುದು? ಮತ್ತು ಅದರ ಬೆಲೆ ಎಷ್ಟು ನಿಗದಿ ಪಡಿಸಿದರೆ ಸಮಂಜಸ?
ಕವಿ ಹೇಳಿದ 'ಮನುಷ್ಯ ಕತ್ತಲಿನ ದಾರಿಯಲ್ಲಿ ನಡೆದಾನು ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯಲಾರ'. ಕವಿ ಆಸೆಬುರುಕ. ಬುದ್ಧ ಹೇಳಿದ 'ಆಸೆಯೇ ದುಖಕ್ಕೆ ಮೂಲ'. ಆದರೆ ಆತ ಬುದ್ಧನಾಗುವುದಕ್ಕೆ ಮುಂಚೆ ಸಿರಿವಂತನಾಗಿದ್ದ. ಹಾಗಾದರೆ ಮೊದಲು ಶ್ರೀಮಂತಿಕೆ ಬರದೇ ಇದ್ದರೆ, ಅದನ್ನು ತಿರಸ್ಕರಿಸಿ ಹೋಗುವುದಾದರೂ ಹೇಗೆ? ಅದನ್ನು ಜನ ಒಪ್ಪಿಯಾರೆ? ದುಡಿಯಲಾರದೇ ಸನ್ಯಾಸಿಯಾದ ಎನ್ನುವ ಅನುಮಾನ ಯಾರೂ ಮಾಡಲಾರರೆ? ಕೈಗೆ ಎಟುಕಲಾರದ ದ್ರಾಕ್ಷಿ ಯಾವತ್ತು ಇದ್ದರೂ ಹುಳಿ ಎಂದು ಹಳೆ ಕಥೆ ಹೇಳಿ ಮನ ತುಂಬಿ ನಕ್ಕಾರು.
'ಹಳ್ಳದ ಕಡೆಗೆ ನೀರು ಹರಿವುದು, ಹಣವಂತರಿಗೆ ಹಣ ಸೇರುವುದು' ಎನ್ನುವುದು ಬರೀ ಮನರಂಜನೆಗಾಗಿ ಬರೆದ ಚಲನಚಿತ್ರದ ಗೀತೆಯ ಸಾಲುಗಳಲ್ಲ. ಚಕ್ರ ಬಡ್ಡಿ ಎನ್ನುವುದು ಜಗತ್ತಿನ ಎಂಟನೇ ಅದ್ಭುತ. ಅದನ್ನು ಅರಿತವನು ಗಳಿಸುತ್ತಾನೆ. ಇಲ್ಲದವನು ಅದನ್ನು ಕೊಡುತ್ತಾನೆ ಎಂದು ಹೇಳಿದ್ದು ಐನ್ ಸ್ಟೀನ್ ಮಹಾಶಯ. ಸಮಾಜವಾದ ಮತ್ತು ಬಂಡವಾಳಶಾಹಿಗಳ ನಡುವೆ ಸಾಕಷ್ಟು ಕದನಗಳೇ ನಡೆದಿವೆ. ಒಬ್ಬರಿಗೆ ಹಣ ಶತ್ರು, ಇನ್ನೊಬ್ಬರಿಗೆ ಅದೇ ಪರಮ ಮಿತ್ರ.
ನಾನೇ ಪ್ರಶ್ನೆ ಹಾಕಿಕೊಂಡೆ, ನನಗೆ ಎಷ್ಟು ಹಣ ಸಾಕು? ಒಮ್ಮೆಗೆ ನಿರ್ಣಯಕ್ಕೆ ಬರಲು ಆಗಲಿಲ್ಲ. ಎಲ್ಲಾ ಸಾಲಗಳು ಮುಟ್ಟಿ, ಉಳಿದ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟು ಬರಿ ಬಡ್ಡಿಯಲ್ಲಿ ಜೀವನ ಸಾಗಿಸಬೇಕೆಂದರೆ, ಎಷ್ಟು ಹಣ ಬೇಕು? ಹಣದುಬ್ಬರ ಹೆಚ್ಚಾದಂತೆ ಖರ್ಚುಗಳು ಹೆಚ್ಚಾಗುತ್ತವೆ. ಅದರ ಲೆಕ್ಕವನ್ನೂ ಸೇರಿಸಿ ಮೊತ್ತ ಹೇಳಿದರೆ ಉತ್ತಮವಲ್ಲವೇ? ಹಾಗೆಯೇ ಅರ್ಧಾಂಗಿಯ ಆಸೆಗಳ ಪಟ್ಟಿ ಸೇರಿಸದೇ ಹೋದರೇ ಮೊತ್ತದ ಆಚೆಗಿನ ಬದುಕು ಏರು-ಪೇರಾದಿತು ಎನ್ನುವ ಸಂದೇಹ ಮನದಲ್ಲಿ ಮೂಡಿತು.
ರಶಿಯದಲ್ಲಿನ ಗಾದೆ ಮಾತು -
"ಯಾರು ಸಾಲಗಾರರಲ್ಲವೋ ಅವರೇ ಶ್ರೀಮಂತರು".
ನಮ್ಮ ಹಳ್ಳಿಯ ಗೌಡಪ್ಪ ಹೇಳುತ್ತಿದ್ದ -
"ಸಾಲ ಇಲ್ಲದವ ಎಂಥ ಗಂಡಸು? ಚಿಂತೆ ಇಲ್ಲದವಳು ಎಂಥ ಹೆಂಗಸು?"
ಹಾಗಾದರೆ, ಯಾವ ದೇಶದ ಗಾದೆ ಮಾತು ಶ್ರೇಷ್ಠ?
("ಯಾವನಿಗ್ಗೊತ್ತು?"
ಎನ್ನುವುದು ಇತ್ತೀಚಿನ ಚಲನಚಿತ್ರವೊಂದರ ಗೀತೆ).