Sunday, November 8, 2015

ಸಣ್ಣ ಕಥೆ: ಒಡೆಯ, ನಿಮ್ಮ ಮಗು [ಮೂಲ: ರವೀಂದ್ರನಾಥ್ ಟ್ಯಾಗೋರ್]

ಅಧ್ಯಾಯ -

ರಾಯಚರಣ್ ತನ್ನ ಒಡೆಯನ ಮನೆಗೆ ಸೇವಕನಾಗಿ ಬಂದಾಗ, ಅವನಿಗೆ ಹನ್ನೆರಡು ವರ್ಷ ವಯಸ್ಸು. ತನ್ನ ಒಡೆಯನ ಚಿಕ್ಕ ಮಗುವಿನ ಆರೈಕೆಯ ಜವಾಬ್ದಾರಿ ಅವನದಾಗಿತ್ತು. ಕಾಲ ಸರಿದು ಹೋದ ಹಾಗೆ ರಾಯಚರಣ್ ಕೈಗಳಿಂದ ಕೆಳಗಿಳಿದ ಆ ಮಗು ಶಾಲೆಗೆ ಹೋಗಲಾರಂಭಿಸಿತು. ಶಾಲೆಯಿಂದ ಕಾಲೇಜು ಹಾಗೂ ಅಲ್ಲಿಂದ ನ್ಯಾಯಾಲಯದ ಕೆಲಸಕ್ಕೆ. ಅವನಿಗೆ ಮದುವೆ ಆಗುವವರೆಗೂ ರಾಯಚರಣ್ ಸೇವೆ ಅವನಿಗೆ ಮಾತ್ರ ಮೀಸಲು.

ಆದರೆ ಮನೆಗೆ ಒಡತಿಯ ಆಗಮನದೊಂದಿಗೆ, ರಾಯಚರಣ್ ಗೆ ಒಬ್ಬರ ಬದಲು ಇಬ್ಬರು ಒಡೆಯರು ಆದಂತಾಯಿತುರಾಯಚರಣ್ ಗೆ ತನ್ನ ಒಡೆಯನ ಮೇಲಿದ್ದ ಪ್ರಭಾವ ಹೊಸ ಒಡತಿಯ ಪಾಲಾಯಿತು. ಆದರೆ ಇದನ್ನು ಸರಿದೂಗಿಸಲು ಎನ್ನುವಂತೆ, ಮನೆಗೆ ಹೊಸ ಜೀವದ ಆಗಮನವಾಯಿತು. ಅನುಕೂಲ್ ಗೆ ಗಂಡು ಮಗು ಹುಟ್ಟಿದ ನಂತರರಾಯಚರಣ್ ಗಮನ ಅದರ ಮೇಲೆ ಹರಿದು, ಅದರ ಲಾಲನೆ-ಪಾಲನೆಯ ಮೇಲೆ ತನ್ನ ಸಂಪೂರ್ಣ ಹಿಡಿತ ಸಾಧಿಸಿದ. ಅವನು ಮಗುವನ್ನು ತನ್ನ ಕೈಗಳಿಂದ ಎತ್ತಿ, ತೂರಿ ಆಟವಾಡಿಸುತ್ತಿದ್ದ. ಮಗುವನ್ನು ಅದರ ಮುಗ್ಧ ಭಾಷೆಯಲ್ಲೇ ಮಾತನಾಡಿಸುತ್ತಿದ್ದ. ತನ್ನ ಮುಖವನ್ನು ಅದರ ಮುಖದ ಹತ್ತಿರ ಹಿಡಿದು, ನಂತರ ದೂರ ಸರಿದು ನಗೆ ಮೂಡಿಸುತ್ತಿದ್ದ.

ಮಗು ತೆವಳುತ್ತ ಮನೆಯ ಬಾಗಿಲನ್ನು ದಾಟುವುದು ಕಲಿತಿತ್ತು. ಆಗ ಅದರ ಹಿಂದೆ ರಾಯಚರಣ್ ಓಡಿದರೆ, ಅದು ಕಳ್ಳ ನಗೆ ಬೀರುತ್ತ ಮತ್ತೆ ಮನೆಯ ಒಳಗಡೆಯ ಸುರಕ್ಷತೆಗೆ ಮರಳುತ್ತಿತ್ತು. ರಾಯಚರಣ್ ಗೆ ಮಗುವಿನ ಸ್ವಭಾವ ಮತ್ತು ಅದರ ತಿಳುವಳಿಕೆ ಆಶ್ಚರ್ಯ ಮೂಡಿಸುತ್ತಿತ್ತು. ಅವನು ತನ್ನ ಒಡತಿಗೆ ವಿಸ್ಮಯದಿಂದ ಹೇಳುತ್ತಿದ್ದ "ನಿಮ್ಮ ಮಗು ದೊಡ್ಡವನಾದ ಮೇಲೆ ನ್ಯಾಯಾಧೀಶನೇ ಆಗುತ್ತಾನೆ!"

ರಾಯಚರಣ್ ಗೆ ಮುಂದೆ ಅದ್ಭುತಗಳ ಸರಮಾಲೆಯೇ ಕಾದಿತ್ತು. ಮಗು ಅಂಬೆಗಾಲಿಡಲು ಶುರು ಮಾಡಿದ ದಿನ, ಅವನಿಗೆ ಮನುಷ್ಯ ಇತಿಹಾಸದಲ್ಲಿ ಹೊಸ ಯುಗದ ಆರಂಭ ಎನ್ನಿಸಿತ್ತು. ಮಗು ತನ್ನ ಅಪ್ಪನನ್ನು "ಬಾ-ಬಾ", ಅಮ್ಮನನ್ನು "ಮಾ-ಮಾ" ಮತ್ತು ತನ್ನನ್ನು "-ನ್ನಾ" ಎಂದು ಕರೆಯಲು ಶುರುವಿಟ್ಟ ಮೇಲೆ ಅವನ ಆನಂದಕ್ಕೆ ಪಾರವೇ ಇರಲಿಲ್ಲ. ಅವನು ಸುದ್ದಿಯನ್ನು ಜಗತ್ತಿಗೇ ತಿಳಿಸಿ ಬರುತ್ತಿದ್ದ.

ಸಮಯಕ್ಕೆ ಅನುಕೂಲ್ ಗೆ ಬೇರೆ ಜಿಲ್ಲೆಗೆ, ಪದ್ಮ ನದಿಯ ದಂಡೆಯ ಮೇಲಿರುವ ಊರಿಗೆ ವರ್ಗಾವಣೆ ಆಗಿತ್ತು. ಅವನು ಕಲ್ಕತ್ತೆ ಬಿಡುವಾಗ, ತನ್ನ ಮಗನಿಗೆಂದು, ಚಿಕ್ಕ ತಳ್ಳುವ ಗಾಡಿಯನ್ನು ಕೊಂಡು ತಂದ. ಅದರ ಜೊತೆಗೆ ಹಳದಿ ಬಣ್ಣದ ನಿಲುವಂಗಿ, ಬಂಗಾರದ ಬಣ್ಣದಿಂದ ಕಸೂತಿ ಮಾಡಿದ ಟೋಪಿ, ಕೈ-ಕಾಲಿಗೆ ಹಾಕುವ ಕಡಗಗಳನ್ನೂ ತಂದಿದ್ದ. ಅವೆಲ್ಲವುಗಳ ನಿರ್ವಹಣೆ ರಾಯಚರಣ್ ಹೆಗಲೇರಿತು. ಅವನು ಮಗುವನ್ನು ಹೊರಗೆ ಕರೆ ತಂದಾಗ ಮಾತ್ರ ಅವುಗಳನ್ನು ಹೊರ ತೆಗೆಯುತ್ತಿದ್ದ.

ಮಳೆಗಾಲ ಆರಂಭವಾಗಿತ್ತು. ದಿನೇ ದಿನೇ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದ, ಅಲ್ಲಿಯವೆರೆಗೆ ಹಸಿದುಕೊಂಡಿದ್ದ ನದಿ, ಬೃಹತ್ ಸರ್ಪದಂತೆ ಹರಿದು, ದಾರಿಯಲ್ಲಿನ ಹೊಲ, ಮನೆಗಳನ್ನು ನುಂಗುತ್ತ ಸಾಗಿತ್ತು. ತುಂಬಿ ಹರಿಯುತ್ತಿದ್ದ ನದಿ, ದಡದ ಆಚೀಚೆ ಬೆಳೆದ ಆಳೆತ್ತರದ ಹುಲ್ಲನ್ನು ತನ್ನ ನೆರೆಯಲ್ಲಿ ಮುಳುಗಿಸಿತ್ತು. ಪ್ರವಾಹದ ಸೆಳೆತಕ್ಕೆ ಇಕ್ಕೆಲಗಳು ಕುಸಿಯತೊಡಗಿದ್ದವು. ಮರಗಳು ಬುಡ ಮೇಲಾಗಿ ಕೊಚ್ಚಿ ಹೋಗುತ್ತಿದ್ದವು. ನದಿ ಹರಿಯುವಿಕೆಯ ಆರ್ಭಟ ದೂರದಿಂದಲೇ ಕೇಳಿಸುತ್ತಿತ್ತು. ನೀರಿನ ಮೇಲಿನ ನೊರೆಯೂ ಕೂಡ ತ್ವರಿತ ಗತಿಯಲ್ಲಿ ಹರಿದು, ಪ್ರವಾಹದ ರಭಸವನ್ನು ತೋರಿಸುತ್ತಿತ್ತು.

ಒಂದು ದಿನ ಮಧ್ಯಾಹ್ನ ಮಳೆ ತಗ್ಗಿತು, ಮೋಡದ ಮರೆಯಿಂದಲೇ ಸೂರ್ಯ ಪ್ರಕಾಶಿಸಲು ಆರಂಭಿಸಿದ. ಸುಂದರ ದಿನ ರಾಯಚರಣ್ ಪುಟ್ಟ ಗೆಳೆಯ ಹೊರಗೆ ಕರೆದುಕೊಂಡು ಹೋಗಲು ಪೀಡಿಸತೊಡಗಿದ. ಅವನನ್ನು ತಳ್ಳುವ ಗಾಡಿಯಲ್ಲಿ ಕುಳ್ಳಿರಿಸಿಕೊಂಡು, ಸಾವಕಾಶವಾಗಿ ನದಿಯ ಅಂಚಿನ ಭತ್ತದ ಗದ್ದೆಗಳತ್ತ ಸಾಗಿದ ರಾಯಚರಣ್. ಗದ್ದೆಗಳಲ್ಲಿ ಅಂದು ಮನುಷ್ಯರು ಯಾರು ಕಾಣುತ್ತಿದ್ದಿಲ್ಲ. ಹಾಗೆಯೇ ನದಿಯಲ್ಲಿಯೂ ಯಾವುದೇ ದೋಣಿಗಳ ಸಂಚಾರವೂ ಇರಲಿಲ್ಲ. ನದಿಯ ಆಚಿನ ದಡದ ಮೇಲೆ, ಆಕಾಶದಲ್ಲಿ ಮೋಡಗಳು ದೂರ ದೂರ ಸರಿದು, ಸೂರ್ಯಾಸ್ತದ ಭವ್ಯ ವೈಭವವನ್ನು ತೋರಿಸಲು ಮುಂದಾಗಿದ್ದವು. ನಡುವೆ, ಒಮ್ಮೆಗೆ ಸದ್ದು ಮಾಡುತ್ತ, ಕೈ ಬೆರಳಿನಿಂದ ತೋರಿಸುತ್ತ ಮಗು ಹೇಳಿತು "-ನ್ನಾ, ಹೂ!"

ಹತ್ತಿರದಲ್ಲೆ ಇದ್ದ ಅಶೋಕ ವೃಕ್ಷದಲ್ಲಿ ಹೂಗಳು ಅರಳಿದ್ದವು. ದೇವರೇ, ಮಗು ಎಷ್ಟು ಆಸೆ ಕಣ್ಣುಗಳಿಂದ ಹೂಗಳನ್ನು ನೋಡುತ್ತಿತ್ತು. ಅದರ ಆಸೆ ರಾಯಚರಣ್ ಗೆ ಅರ್ಥ ಆಯಿತು. ಇಲ್ಲಿಗೆ ಬರುವ ಸ್ವಲ್ಪ ಹೊತ್ತಿಗೆ ಮುಂಚೆ ರಾಯಚರಣ್ ಹೂಗಳಿಂದಲೇ ಆಟದ ಪುಟ್ಟ ಬಂಡಿ  ಮಾಡಿ ಕೊಟ್ಟಿದ್ದ. ದಾರದ ತುದಿಯಿಂದ ಅದನ್ನು ಎಳೆದು ಮಗು ಎಷ್ಟು ಖುಷಿ ಪಟ್ಟಿತ್ತು.

ಆದರೆ ರಾಯಚರಣ್ ಗೆ ಮೊಳ ಕಾಲುದ್ದದ ಕೆಸರಲ್ಲಿ ಹೋಗಿ ಹೂಗಳನ್ನು ತರುವ ವಿಚಾರ ಇಷ್ಟ ಆಗಲಿಲ್ಲ. ಅವನು ಮಗುವಿನ ದೃಷ್ಟಿ ಬೇರೆ ಕಡೆಗೆ ಹೊರಳಿಸುವ ಉದ್ದೇಶದಿಂದ, ವಿರುದ್ಧ ದಿಕ್ಕಿನೆಡೆಗೆ ಬೆರಳು ಮಾಡಿ ತೋರಿಸುತ್ತ ಹೇಳಿದ "ಮಗು, ಅಲ್ಲಿ ನೋಡು ಪಕ್ಷಿ!". ಹಾಗೆಯೇ ಮಗುವನ್ನು ಹೊತ್ತ ಗಾಡಿಯನ್ನು ಅಶೋಕ ವೃಕ್ಷದಿಂದ ದೂರಕ್ಕೆ ಸಾಗಿಸಿದ.

ಆದರೆ, ಭವಿಷ್ಯದಲ್ಲಿ ನ್ಯಾಯಾಧೀಶನಾಗಬೇಕಾದ ಹುಡುಗನ ಗಮನ ಬೇರೆ ಕಡೆ ಸೆಳೆಯುವುದು ಸುಲಭ ಸಾಧ್ಯವಿದ್ದಿಲ್ಲ. ಅದಲ್ಲದೆ, ಸ್ಥಳದಲ್ಲಿ ಹುಡುಗನ ಕಣ್ಣಿಗೆ ಆಕರ್ಷಣೆಯಾಗಿ ಕಾಣುವಂಥದ್ದು ಬೇರೆ ಎನೂ ಇರಲಿಲ್ಲ. ಕಲ್ಪನೆಯಿಂದ ಹುಟ್ಟಿಸಿದ ಪಕ್ಷಿಯಿಂದ ಆ ಹುಡುಗನ ಗಮನ ಬಹು ಹೊತ್ತು ಹಿಡಿದಿಡುವುದು ಸಾಧ್ಯವಿದ್ದಿಲ್ಲ.

ಚಿಕ್ಕ ಒಡೆಯನ ಮನಸ್ಸು ಆಗಲೇ ನಿರ್ಧಾರಕ್ಕೆ ಬಂದಾಗಿತ್ತು. ಕೊನೆಗೆ ರಾಯಚರಣ್ ಹೇಳಿದ "ಆಯಿತು, ಮಗು. ನೀನು ಗಾಡಿಯಲ್ಲೇ ಕುಳಿತಿರು. ನಾನು ಹೂ ಗಳನ್ನು ತಂದು ಕೊಡುವೆ. ಆದರೆ ನೆನಪಿಟ್ಟಿಕೋ, ನೀರಿನ ಹತ್ತಿರ ಮಾತ್ರ ಹೋಗಬೇಡ".

ಹೀಗೆ ಹೇಳಿದವನೇ, ತನ್ನ ವಸ್ತ್ರವನ್ನು ಮೊಳ ಕಾಲಿನ ಮೇಲಕ್ಕೆ ಸರಿಸಿ, ಕೆಸರಲ್ಲಿ ಇಳಿದು, ಮರದ ಹತ್ತಿರಕ್ಕೆ ಹೊರಟ.

ರಾಯಚರಣ್ ಕಡೆ ಹೋದ ತಕ್ಷಣ, ಅವನ ಚಿಕ್ಕ ಒಡೆಯನ ಮನಸ್ಸು ಅವನಿಗೆ ಹೋಗಬೇಡ ಎಂದು ಹೇಳಿದ ನೀರಿನ ಕಡೆಗೆ ಹರಿಯಿತು. ಮಗುವಿಗೆ ಭೋರ್ಗರೆಯುತ್ತಾ, ರಭಸದಿಂದ ಹರೆಯುತ್ತಿದ್ದ ನದಿ, ಯಾರ ಮಾತು ಕೇಳದ ಅದರಲ್ಲಿನ ತೆರೆಗಳು ಒಬ್ಬ ದೊಡ್ಡ ರಾಯಚರಣ್ ನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವ ಸಾವಿರ ಮಕ್ಕಳ ಕೇಕೆಯಂತೆ ಕಂಡಿತು. ಕಿಡಿಗೇಡಿತನ ಕಂಡ ಮಗುವಿನ ಹೃದಯದಲ್ಲಿ ಉಲ್ಲಾಸ ತುಂಬಿ ಮನಸ್ಸು ಪ್ರಕ್ಷುಬ್ಧವಾಯಿತು. ಮಗು ತನ್ನ ಗಾಡಿಯಿಂದ ಕೆಳಗಿಳಿದು, ನದಿಯ ಕಡೆಗೆ ತಪ್ಪು ಹೆಜ್ಜೆ ಇಡುತ್ತ ನಡೆಯಿತು. ದಾರಿಯಲ್ಲಿ ಸಿಕ್ಕ ಚಿಕ್ಕ ಕೋಲನ್ನು ಕೈಯಲ್ಲಿ ಹಿಡಿದು, ನದಿಯ ದಂಡೆಯಿಂದ ನೀರಿನ ಮೇಲೆ ಬಾಗಿ, ಕೋಲನ್ನು ಇಳಿ ಬಿಟ್ಟಿತುನದಿಯಲ್ಲಿ ತುಂಟತನದಿಂದ ತುಂಬಿದ ಯಕ್ಷ, ಯಕ್ಷಿಣಿಯರು ರಹಸ್ಯಮಯ ಧ್ವನಿಯಿಂದ ತಮ್ಮ ಆಟದ ಮನೆಗೆ ಕರೆದಂತೆ ಆಯಿತು.

ಇತ್ತ ರಾಯಚರಣ್ ಸಾಕಷ್ಟು ಹೂ ಗಳನ್ನು ಬಿಡಿಸಿಕೊಂಡು, ಅವುಗಳನ್ನು ತನ್ನ ವಸ್ತ್ರದ ತುದಿಯಲ್ಲಿ ಗಂಟು ಕಟ್ಟಿಕೊಂಡು, ಮುಖದ ಮೇಲೆ ತುಂಬು ನಗೆಯೊಂದಿಗೆ ಗಾಡಿಯತ್ತ ಮರಳಿದ. ಆದರೆ ಅದರಲ್ಲಿ ಮಗು ಕಾಣಿಸಲಿಲ್ಲ. ಅವನು ಸುತ್ತೆಲ್ಲ ತಿರುಗಿ ನೋಡಿದ, ಆದರೆ ಯಾರೂ ಕಾಣಲಿಲ್ಲ. ಮತ್ತೆ ತಳ್ಳುವ ಗಾಡಿಯತ್ತ ನೋಡಿದ, ಅದು ಖಾಲಿಯಾಗಿತ್ತು.

ಭಯಾನಕ ಕ್ಷಣದಲ್ಲಿ, ಅವನಿಗೆ ತನ್ನ ರಕ್ತ ಹೆಪ್ಪುಗಟ್ಟಿದ ಅನುಭವ ಆಯಿತು. ತಲೆ ತಿರುಗಿ ಕಣ್ಣು ಕತ್ತಲೆ ಬಂದಂತಾಯಿತು. ತನ್ನ ಒಡೆದು ಹೋದ ಹೃದಯದಾಳದಿಂದ ಕೂಗಿದ "ಒಡೆಯ, ಒಡೆಯ. ನನ್ನ ಚಿಕ್ಕ ಒಡೆಯ".

ಆದರೆ "-ನ್ನಾ" ಎನ್ನುವ ಧ್ವನಿ ತಿರುಗಿ ಕೇಳಿ ಬರಲಿಲ್ಲ. ಯಾವ ಮಗುವೂ ತುಂಟತನದಿಂದ ನಗಲಿಲ್ಲ. ಯಾವ ಮಗುವಿನ ಕೇಕೆಯು ಅವನನ್ನು ಸ್ವಾಗತಿಸಲಿಲ್ಲ. ಆದರೆ ನದಿ ಮಾತ್ರ ಮೊದಲಿನಂತೆ ಸದ್ದು ಮಾಡುತ್ತಾ, ತನಗೆ ಯಾವ ವಿಷಯದ ಅರಿವೂ ಇಲ್ಲದಂತೆ ಹಾಗೆಯೇ ಒಂದು ಚಿಕ್ಕ ಮಗುವಿನ ಸಾವು ಗಮನಿಸುವಷ್ಟು ವ್ಯವಧಾನ ತನಗಿಲ್ಲ ಎನ್ನುವಂತೆ ಹರಿದಿತ್ತು.

ಸಂಜೆ ಆದಂತೆ ರಾಯಚರಣ್ ಒಡತಿಗೆ ಗಾಬರಿಯಿಂದ ಉದ್ವೇಗ ಹೆಚ್ಚಿ, ಮಗು ಮತ್ತು ರಾಯಚರಣ್ ನನ್ನು ಹುಡುಕಲು ಎಲ್ಲ ಕಡೆಗೆ ಜನರನ್ನು ಕಳಿಸಿದಳು. ಕೈಯಲ್ಲಿ ಕಂದೀಲು ಹಿಡಿದು ಹೋರಟ ಅವರು ಸಾಕಷ್ಟು ಹುಡುಕಾಟದ ನಂತರ ಪದ್ಮ ನದಿಯ ದಂಡೆಯ ಮೇಲೆ, ನಿರಾಸೆಯಿಂದ "ಒಡೆಯ, ಒಡೆಯ. ನನ್ನ ಚಿಕ್ಕ ಒಡೆಯ" ಎಂದು ಕೂಗುತ್ತಿದ್ದ ರಾಯಚರಣ್ ನನ್ನು ಕಂಡರು.

ರಾಯಚರಣ್ ನನ್ನು ಮನೆಗೆ ಕರೆ ತಂದ ಮೇಲೆ ಅವನು ತನ್ನ ಒಡತಿಯ ಕಾಲಿಗೆ ಬಿದ್ದ. ಅವನನ್ನು ಅಲ್ಲಾಡಿಸಿ, ಬಾರಿ ಬಾರಿ ಪ್ರಶ್ನೆ ಹಾಕಿದರು "ಮಗು ಎಲ್ಲಿ". ಆದರೆ ಅವನಿಗೆ ಹೇಳಲು ಸಾಧ್ಯವಾಗಿದ್ದು ಅವನಿಗೆ ಗೊತ್ತಿಲ್ಲ ಎಂದು.

ಅಲ್ಲಿದ್ದ ಎಲ್ಲರೂ ಮಗುವನ್ನು ಪದ್ಮ ನದಿ ನುಂಗಿದೆ ಎನ್ನುವ ಅಭಿಪ್ರಾಯಕ್ಕೆ ಬಂದರೂ, ಅವರ ಮನಸ್ಸಿನ ಮೂಲೆಯಲ್ಲಿ ಒಂದು ಅನುಮಾನ ಉಳಿದು ಹೋಯಿತು. ಗುಡ್ಡ ಗಾಡಿನ ಜನರ ಗುಂಪೊಂದು ದಿನ ಮಧ್ಯಾಹ್ನ ಕಾಣಿಸಿಕೊಂಡಿತ್ತು. ಅವರ ಮೇಲೆ ಕೆಲವರ ಗುಮಾನಿ ತಿರುಗಿತು. ಆದರೆ ಮಗುವಿನ ತಾಯಿಗೆ ತನ್ನೆಲ್ಲ ದುಃಖದ ನಡುವೆ, ರಾಯಚರಣ್ನೇ ಮಗುವನ್ನು ಕದ್ದು ಮುಚ್ಚಿಟ್ಟಿರಬಹುದೆಂಬ ಅನುಮಾನ. ಅವಳು ತನ್ನ ಕರುಣಾಜನಕ ಸ್ಥಿತಿಯಲ್ಲಿ, ರಾಯಚರಣ್ನನ್ನು ಪಕ್ಕಕ್ಕೆ ಕರೆದು ಹೇಳಿದಳು "ರಾಯಚರಣ್, ನನ್ನ ಮಗುವನ್ನು ವಾಪಸ್ಸು ಕೊಟ್ಟುಬಿಡು. ನನ್ನಿಂದ ಎಷ್ಟು ಹಣ ಬೇಕು ತೆಗೆದುಕೊ. ಆದರೆ ದಯವಿಟ್ಟು ನನ್ನ ಮಗುವನ್ನು ಮಾತ್ರ ವಾಪಸ್ಸು ಕೊಟ್ಟುಬಿಡು"

ಮಾತು ಕೇಳಿದ ರಾಯಚರಣ್ ತನ್ನ ಹಣೆಯನ್ನು ಚಚ್ಚಿಕೊಂಡ. ಅವನ ಒಡತಿ ರಾಯಚರಣ್ಗೆ ಮನೆ ಬಿಟ್ಟು ಹೋಗಲು ತಿಳಿಸಿದಳು.

ಅನುಕೂಲ್ ತನ್ನ ಹೆಂಡತಿಯನ್ನು ಅನುಮಾನದಿಂದ ಹೊರ ತರಲು ನೋಡಿದ "ಅವನು ಅಂಥ ಕೆಲಸ ಏಕೆ ಮಾಡಿಯಾನು?"

ಅದಕ್ಕೆ ಉತ್ತರ ಎನ್ನುವಂತೆ ಅವಳು ಹೇಳಿದಳು "ಮಗುವಿನ ಮೈ ಮೇಲೆ ಬಂಗಾರದ ಆಭರಣಗಳಿದ್ದವು. ಏನಾಗಿರಬಹುದೆಂದು ಯಾರಿಗ್ಗೊತ್ತು?"

ಅಲ್ಲಿಂದ ಅವಳಿಗೆ ಸಮಾಧಾನ ಹೇಳುವುದು ಯಾರಿಂದಲೂ ಸಾಧ್ಯವಾಗಲಿಲ್ಲ

ಅಧ್ಯಾಯ -

ರಾಯಚರಣ್ ತನ್ನ ಊರಿಗೆ ಮರಳಿದ. ಅಲ್ಲಿಯವರೆಗೆ ಅವನಿಗೆ ಮಕ್ಕಳಿದ್ದಿಲ್ಲ ಅದರ ಆಸೆಯನ್ನೂ ಅವನು ಕೈ ಬಿಟ್ಟಿದ್ದ. ಆದರೆ ವರ್ಷಾಂತ್ಯದಲ್ಲಿ, ಅವನ ಹೆಂಡತಿಯು ಒಂದು ಗಂಡು ಮಗುವಿಗೆ ಜನ್ಮವಿತ್ತು ತೀರಿಕೊಂಡಳು.

ಆದರೆ ಅವನ ಮನಸ್ಸಿನಲ್ಲಿ ನಾಶ ಪಡಿಸಲಾಗದ ಅಸಮಧಾನ ಮೂಡಿತ್ತು. ತನಗೆ ಹುಟ್ಟಿದ ಮಗು, ತನ್ನ ಚಿಕ್ಕ ಒಡೆಯನ ಜಾಗವನ್ನು ಅನ್ಯಾಯದ ದಾರಿಯಿಂದ ಆಕ್ರಮಿಸಿಕೊಂಡಂತೆ  ಅನಿಸುತ್ತಿತ್ತು. ಅಲ್ಲದೇ ತನ್ನ ಒಡೆಯನಿಗೆ ನೋವು ಕೊಟ್ಟ ತಾನು ಈಗ ಸಂತೋಷದಿಂದ ಇರುವುದು ನ್ಯಾಯ ಸಮ್ಮತ ಅಲ್ಲ ಎಂದು ತೋರುತ್ತಿತ್ತು. ಹೀಗಿರುವಾಗ, ವಿಧವೆಯಾದ ಅವನ ತಂಗಿ ಮಗುವನ್ನು ಜೋಪಾನ ಮಾಡದೇ ಇದ್ದರೆ, ಮಗು ಬಹು ದಿನ ಜೀವಂತ ಉಳಿಯಲು ಸಾಧ್ಯವಿರಲಿಲ್ಲ.

ಆದರೆ ನಿಧಾನವಾಗಿ ರಾಯಚರಣ್ ಮನಸ್ಸು ಬದಲಾಯಿತು. ಮಗು ತೆವಳಲು ಕಲಿತು, ಮನೆ ಬಾಗಿಲು ದಾಟಿ ತುಂಟ ನಗೆ ಬೀರುತ್ತಿತ್ತು. ಹಾಗೆಯೇ ವಾಪಸ್ಸು ಮನೆ ಒಳಗಿನ ಸುರಕ್ಷತೆಗೆ ಬರುವ  ಜಾಣ್ಮೆ ತೋರುತ್ತಿತ್ತು. ಮಗುವಿನ ಧ್ವನಿ, ನಗುವ ಮತ್ತು ಅಳುವ ರೀತಿ, ಹಾವ-ಭಾವ ಗಳೆಲ್ಲವೂ ರಾಯಚರಣ್ ಚಿಕ್ಕ ಒಡೆಯನದೇ ಆಗಿದ್ದವು. ಕೆಲವೊಂದು ದಿನ ಮಗು ಅತ್ತಾಗ, ಅದು ತನ್ನ ಚಿಕ್ಕ ಒಡೆಯನ ಕೂಗು ಯಾವುದೊ ಮೃತ್ಯು-ಲೋಕದಿಂದ ಕೇಳಿ ಬಂದಂತೆ ಆಗಿ, ರಾಯಚರಣ್ ಎದೆ ಜೋರಾಗಿ ಬಡಿದು ಕೊಳ್ಳಲು ಆರಂಭಿಸುತ್ತಿತ್ತು.

ಫೈಲ್ನ (ಅದು ಮಗುವಿಗೆ ರಾಯಚರಣ್ ಸೋದರಿ ಇಟ್ಟ ಹೆಸರು) ಮಾತನಾಡಲು ಶುರು ಇಟ್ಟಿತು. ಅದು ಮಗುವಿನ ಭಾಷೆಯಲ್ಲಿ "ಬಾ-ಬಾ", "ಮಾ-ಮಾ" ಎನ್ನಲು ಕಲಿಯಿತು. ಚಿರ ಪರಿಚಿತ ಧ್ವನಿ ಕೇಳಿದ ರಾಯಚರಣ್ಗೆ ಎಲ್ಲ ಸಂದೇಹಗಳು ದೂರಾದವು. ತನ್ನ ಚಿಕ್ಕ ಒಡೆಯನೇ ಮನೆಯಲ್ಲಿ ಹುಟ್ಟಿ ಬಂದಿರುವದರಲ್ಲಿ ಅವನಿಗೆ ಯಾವ ಅನುಮಾನವೂ ಉಳಿಯಲಿಲ್ಲ.

ನಡೆದು ಹೋದ ಸಂಗತಿಗಳು ಅವನ ನಂಬಿಕೆಗೆ ಪೂರಕವಾಗಿದ್ದವು.

. ಮಗು ಚಿಕ್ಕ ಒಡೆಯ ತೀರಿಕೊಂಡ ಬಹು ಕಾಲ ಆಗುವ ಮೊದಲೇ ಹುಟ್ಟಿತ್ತು.
. ಅವನ ಹೆಂಡತಿ ನಡು ವಯಸ್ಸಿನಲ್ಲಿ ಗರ್ಭಿಣಿ ಆಗುವ ಸಾಧ್ಯತೆ ಇರಲಿಲ್ಲ.
. ಹುಟ್ಟಿದ ಮಗುವಿನ ಎಲ್ಲ ಹೋಲಿಕೆಗಳು ಚಿಕ್ಕ ಒಡೆಯನಿಗೆ ಹೊಂದುತ್ತಿದ್ದವು. ಭವಿಷ್ಯದ ನ್ಯಾಯಾಧೀಶನ ಎಲ್ಲ ಕುರುಹುಗಳು ಮಗುವಿನಲ್ಲಿದ್ದವು.

ರಾಯಚರಣ್ಗೆ ತನ್ನ ಒಡತಿ ಮಾಡಿದ ಭಯಾನಕ ಆರೋಪದ ನೆನಪಾಯಿತು. "" ಅವನು ತನಗೆ ತಾನೇ ಹೇಳಿಕೊಂಡ. " ತಾಯಿಯ ಹೃದಯ ಸರಿಯಾಗಿ ಅರ್ಥ ಮಾಡಿ ಕೊಂಡಿತ್ತು. ಅವಳ ಮಗುವನ್ನು ಕದ್ದವನು ನಾನೇ". ಅವನು ನಿರ್ಧಾರಕ್ಕೆ ಬಂದಾದ ಮೇಲೆ, ಅವನಿಗೆ ತಾಯಿಯ ಮೇಲೆ ಅನುಕಂಪ ಹಾಗೂ ತನ್ನ ನಿರ್ಲಕ್ಷದ ಮೇಲೆ ಬೇಸರ ಮೂಡಿತು. ಅವನು ಈಗ ಸಂಪೂರ್ಣ ಶೃದ್ಧೆಯಿಂದ ಮಗುವಿನ ಲಾಲನೆ-ಪಾಲನೆ ಮಾಡಿದ. ಅವನು ಅದು ಒಬ್ಬ ಶ್ರೀಮಂತನ ಮಗು ಎನ್ನುವಂತೆ ಬೆಳೆಸಲು ಆರಂಭಿಸಿದ. ಮಗುವಿಗೆ ಒಂದು ತಳ್ಳುವ ಗಾಡಿ, ಹಳದಿ ಬಣ್ಣದ ನಿಲುವಂಗಿ, ಬಂಗಾರದ ಬಣ್ಣದಿಂದ ಕಸೂತಿ ಮಾಡಿದ ಟೋಪಿಯನ್ನು ಖರೀದಿಸಿ ತಂದ. ತನ್ನ ತೀರಿಕೊಂಡ ಪತ್ನಿಯ ಬಂಗಾರವನ್ನು ಕರಗಿಸಿ, ಮಗುವಿಗೆ ಚಿನ್ನದ ಕಡಗ ಮಾಡಿಸಿದ. ಅವನು ಮಗುವನ್ನು ನೆರೆ-ಹೊರೆಯವರೊಡನೆ ಆಡುವದಕ್ಕೆ ಬಿಡದೇ, ಅದಕ್ಕೆ ಹಗಲು-ರಾತ್ರಿ ತಾನೇ ಸಂಗಾತಿಯಾದ. ಮಗು ಬೆಳೆಯುತ್ತ ಹೋದಂತೆ ಶ್ರೀಮಂತಿಕೆಯಿಂದ ಕೂಡಿದ ಅದರ ವೇಷ-ಭೂಷಣ, ನಡುವಳಿಕೆಗಳನ್ನು ಕಂಡ ಹಳ್ಳಿ ಹುಡುಗರು ಮಗುವಿಗೆ "ಒಡೆಯ" ಎನ್ನಲು ಶುರುವಿಟ್ಟರು. ದೊಡ್ಡವರು ರಾಯಚರಣ್ ಪ್ರೀತಿ ಅತಿಯಾದದ್ದು ಎಂದುಕೊಂಡರು.

ಮಗು ಶಾಲೆ ಸೇರುವ ಸಮಯ ಬಂದಾಗ, ರಾಯಚರಣ್ ತನಗಿದ್ದ ಚೂರು ಜಮೀನನ್ನು ಮಾರಿ, ಮಗುವಿನ ಜೊತೆ ಕಲ್ಕತ್ತೆಗೆ ಹೊರಟು ನಿಂತ. ಅಲ್ಲಿ ಬಹು ಪ್ರಯಾಸದಿಂದ ಸೇವಕನ ಕೆಲಸ ಗಿಟ್ಟಿಸಿಕೊಂಡು ಮಗುವನ್ನು ಶಾಲೆಗೆ ಸೇರಿಸಿದ. ತನಗೆ ಎಷ್ಟು ನೋವು ಬಂದರೂ ನುಂಗಿಕೊಂಡು, ಮಗುವಿಗೆ ಶಾಲೆ, ಬಟ್ಟೆ, ಊಟ ಯಾವುದರಲ್ಲೂ ಕಡಿಮೆಯಾಗದಂತೆ ಎಚ್ಚರ ವಹಿಸಿದ. ತಾನು ಮುಷ್ಟಿಯಷ್ಟು ಅನ್ನ ಉಂಡರು, ರಹಸ್ಯದಲ್ಲಿ ಪ್ರಾರ್ಥಿಸುತ್ತಿದ್ದ " ನನ್ನ ಚಿಕ್ಕ ಒಡೆಯ. ನೀನು ನನ್ನ ಮನೆಯಲ್ಲಿ ಹುಟ್ಟಿ ಬರುವಷ್ಟು ನನ್ನ ಪ್ರೀತಿಸಿದೆ. ನೀನು ಮತ್ತೆ ನನ್ನ ಯಾವ ನಿರ್ಲಕ್ಷ್ಯದಿಂದ ಬಳಲಬಾರದು"

ಇದೇ ರೀತಿಯಲ್ಲಿ ಹನ್ನೆರಡು ವರ್ಷಗಳು ಕಳೆದು ಹೋದವು. ಹುಡುಗ ಸರಿಯಾಗಿ ಓದಲು, ಬರೆಯಲು ಕಲಿತ. ಅವನ ಬೆಳವಣಿಗೆ ಆರೋಗ್ಯಪೂರ್ಣವಾಗಿತ್ತು. ನೋಡಲು ಸುಂದರವಾಗಿ ಕಾಣುತ್ತಿದ್ದ. ಅವನು ತನ್ನ ವೇಷ ಭೂಷಣಕ್ಕೆ ವಿಶೇಷ ಒತ್ತು ಕೊಡುತ್ತಿದ್ದ, ಅದರಲ್ಲೂ ಅವನು ತಲೆ ಕೂದಲು ಬಾಚಿಕೊಳ್ಳುವದರಲ್ಲಿ ತುಂಬು ಎಚ್ಚರಿಕೆ ವಹಿಸುತ್ತಿದ್ದ. ಅವನು ಧಾರಾಳವಾಗಿ, ಸ್ವಲ್ಪ ದುಂದು ಎನ್ನುವಂತೆ ಖರ್ಚು ಮಾಡುತ್ತಿದ್ದ. ಅವನಿಗೆ ರಾಯಚರಣ್ನನ್ನು ತಂದೆಯ ರೀತಿ ನೋಡುವುದು ಸಾಧ್ಯವಾಗಲಿಲ್ಲ. ಅಲ್ಲಿ ತಂದೆಯ ಪ್ರೀತಿ ಇದ್ದರೂ, ಒಬ್ಬ ಸೇವಕನ ಮನೋಭಾವನೆ ಎದ್ದು ಕಾಣುತ್ತಿತ್ತು. ಅಲ್ಲದೇ ತಾನು ಹುಡುಗನ ತಂದೆ ಎನ್ನುವ ರಹಸ್ಯ ರಾಯಚರಣ್ ಎಲ್ಲರಿಂದ ಮುಚ್ಚಿಟ್ಟಿದ್ದ.

ಫೈಲ್ನ ಜೊತೆ ಹಾಸ್ಟೆಲ್ ನಲ್ಲಿದ್ದ ಹುಡುಗರು ರಾಯಚರಣ್ ಹಳ್ಳಿಯ ರೀತಿಗಳನ್ನು ಕಂಡು ಹಾಸ್ಯ ಮಾಡುತ್ತಿದ್ದರು. ಅವರ ಜೊತೆ ಫೈಲ್ನ ಕೂಡ ಶಾಮೀಲಾಗುತ್ತಿದ್ದ. ಆದರೆ ಅವರ ಹೃದಯದಾಳದಲ್ಲಿ ಎಲ್ಲ ಹುಡುಗರು ರಾಯಚರಣ್ ಮುಗ್ಧ ಪ್ರೀತಿ, ಮೃದು ಹೃದಯಕ್ಕೆ ಮನ ಸೋತಿದ್ದರು. ಇದಕ್ಕೆ ಫೈಲ್ನ ಎನೂ ಹೊರತಲ್ಲ. ಆದರೆ ಅವನು ರಾಯಚರಣ್ ನೋಡುವ ರೀತಿ ಮಾತ್ರ ಒಬ್ಬ ಸೇವಕನ ಹಾಗೆ. ತಾನು ಅವನಿಗಿಂತ ಶ್ರೇಷ್ಠ ಎನ್ನುವ ಭಾವನೆ ಅವನಲ್ಲಿ ಮನೆ ಮಾಡಿತ್ತು.

ರಾಯಚರಣ್ಗೆ ವಯಸ್ಸಾದ ಹಾಗೆ ಅವನ ಕೆಲಸಗಳಲ್ಲಿನ ತಪ್ಪುಗಳು ಅವನ ಯಜಮಾನನಿಗೆ ಎದ್ದು ಕಾಣ ತೊಡಗಿದವು. ರಾಯಚರಣ್ ತಾನು ಅರೆ ಹೊಟ್ಟೆ ಯಲ್ಲಿ ಇದ್ದು ಮಗನನ್ನು ಸಾಕುತ್ತಿದ್ದ. ಕಾರಣಕ್ಕಾಗಿ, ಅವನ ಮೈಯಲ್ಲಿನ ಶಕ್ತಿಯೂ ಕಡಿಮೆಯಾಗಿ, ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗಿತ್ತು. ಅವನಿಗೆ ನೆನಪಿನ ಶಕ್ತಿಯೂ ಕಡಿಮೆಯಾಗಿ, ಬುದ್ಧಿ ಮಂದವಾಗತೊಡಗಿತ್ತು. ಆದರೆ ಅವನ ಯಜಮಾನ ರಾಯಚರಣ್ನಿಂದ ಆಗುತ್ತಿರುವ ಕಡಿಮೆ ಕೆಲಸಕ್ಕೆ ಯಾವ ಕಾರಣಕ್ಕೂ ಒಪ್ಪಲು ಸಿದ್ಧನಿರಲಿಲ್ಲ. ರಾಯಚರಣ್ಗೆ ತನ್ನ ಅಲ್ಪ ಜಮೀನು ಮಾರಿ ಬಂದ ಹಣ ಈಗಾಗಲೇ ಖಾಲಿಯಾಗಿತ್ತು. ಆದರೆ ಯಾವುದೇ ಖರ್ಚು ಕಡಿಮೆ ಮಾಡಿಕೊಳ್ಳಲು ಇಚ್ಚಿಸಿದ ಮಗ ಹೆಚ್ಚು ಹಣ ಕೇಳಲಾರಂಭಿಸಿದ್ದ.

ಅಧ್ಯಾಯ -೩

ರಾಯಚರಣ್ ಒಂದು ನಿರ್ಧಾರಕ್ಕೆ ಬಂದ. ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ಕೈಯಲ್ಲಿದ್ದ ಸ್ವಲ್ಪ ಹಣವನ್ನು ಫೈಲ್ನ ನಿಗೆ ಕೊಟ್ಟು ಹೇಳಿದ "ನನಗೆ ಊರಲ್ಲಿ ಸ್ವಲ್ಪ ಕೆಲಸ ಇದೆ. ಬೇಗ ಮರಳಿ ಬರುತ್ತೇನೆ"

ಅವನು ಅಲ್ಲಿಂದ ಹೊರಟು ಅನುಕೂಲ್ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ಮಾಡುತ್ತಿದ್ದ ಊರು ತಲುಪಿದ. ಅನುಕೂಲ್ ಪತ್ನಿ ಇನ್ನು ಮಗನ ಸಾವಿನ ದುಃಖ ದಿಂದ ಹೊರ ಬಂದಿರಲಿಲ್ಲ. ಅಲ್ಲದೇ ಅವರಿಗೆ ಇನ್ನೊಂದು ಮಗುವೂ ಆಗಿರಲಿಲ್ಲ.

ದಿನ ಅನುಕೂಲ್ ತನ್ನ ದೀರ್ಘ ಮತ್ತು ಬಳಲಿಕೆಯ ಕೋರ್ಟ್ ಕೆಲಸ ಮುಗಿಸಿ ಮನೆಗೆ ಬಂದು ವಿಶ್ರಾಂತಿ ತೆಗೆದು ಕೊಳ್ಳುತ್ತಿದ್ದ. ಅವನ ಹೆಂಡತಿ, ಮಕ್ಕಳಾಗಲು ಸಹಾಯ ಮಾಡುವ ಗುಣವುಳ್ಳ ಎಂದು ಹೇಳಲಾದ ಒಂದು ಗಿಡ ಮೂಲಿಕೆಯನ್ನು, ಅತಿ ಎನ್ನಿಸುವ ಬೆಲೆ ಕೊಟ್ಟು ಕೊಂಡುಕೊಳ್ಳುತ್ತಿದ್ದಳು. ಆಗ ಮನೆ ಅಂಗಳದಲ್ಲಿ ಕರೆದ ಸದ್ದಾಗಿ, ಯಾರೆಂದು ನೋಡಲು ಅನುಕೂಲ್ ಹೊರಗೆ ಬಂದ. ಅಲ್ಲಿದ್ದದ್ದು ರಾಯಚರಣ್. ತನ್ನ ಹಳೆಯ ಸೇವಕನ ನೋಡಿದ ಅನುಕೂಲ್ ಅವನ ಸಮಾಚಾರ ವಿಚಾರಿಸಿದ. ಮತ್ತೆ ಕೆಲಸಕ್ಕೆ ಸೇರಲು ಆಹ್ವಾನ ನೀಡಿದ.

ತನ್ನ ನಿಶ್ಯಕ್ತಿಯ ಮುಖದಲ್ಲಿ ಮಂದಹಾಸ ತಂದುಕೊಂಡ ರಾಯಚರಣ್ ಒಡತಿಯನ್ನು ನೋಡಲು ಬಯಸುವುದಾಗಿ ತಿಳಿಸಿದ. ಅನುಕೂಲ್ ರಾಯಚರಣ್ ನನ್ನು ಕರೆದುಕೊಂಡು ಮನೆ ಒಳಗೆ ನಡೆದ. ಆದರೆ ಒಡೆಯ ಅವನನ್ನು ಆತ್ಮೀಯವಾಗಿ ಬರ ಮಾಡಿಕೊಂಡಂತೆ ಒಡತಿ ಮಾಡಲಿಲ್ಲ. ಆದರೆ ಅದನ್ನು ಗಮನಕ್ಕೆ ತೆಗೆದುಕೊಳ್ಳದೆ, ಕೈ ಕಟ್ಟಿಕೊಂಡು ನಿಂತ ರಾಯಚರಣ್ ಹೇಳಿದ "ಅಂದು ಪದ್ಮ ನದಿ ನಿಮ್ಮ ಮಗುವನ್ನು ಕದಿಯಲಿಲ್ಲ. ಕದ್ದದ್ದು ನಾನು"

ಅನುಕೂಲ್ ನಿಂದ ಉದ್ಗಾರ ಹೊರ ಬಂತು " ದೇವರೇ! ಏನು? ಈಗ ಎಲ್ಲಿದ್ದಾನೆ ಅವನು?"

ರಾಯಚರಣ್ ಉತ್ತರಿಸಿದ "ನನ್ನ ಜೊತೆಯಲ್ಲಿ ಇದ್ದಾನೆ. ನಾಳಿದ್ದು ಅವನನ್ನು ಕರೆ ತರುತ್ತೇನೆ"

ಅಂದು ಭಾನುವಾರ. ಕೋರ್ಟ್ಗೆ ರಜೆ ಇತ್ತು. ಗಂಡ ಹೆಂಡತಿ ಇಬ್ಬರೂ ಬೆಳಿಗ್ಗೆಯಿಂದ ರಾಯಚರಣ್ ಆಗಮನದ ನೀರಿಕ್ಷೆಯಲ್ಲಿದ್ದರು. ಹತ್ತು ಗಂಟೆ ಹೊತ್ತಿಗೆ, ರಾಯಚರಣ್ ಹುಡುಗನನ್ನು ಕರೆ ತಂದ.

ಅನುಕೂಲ್ ಹೆಂಡತಿ, ಯಾವುದೇ ಪ್ರಶ್ನೆ ಹಾಕದೇ, ಹುಡುಗನನ್ನು ತನ್ನ ತೆಕ್ಕೆಗೆ ತೆಗೆದುಕೊಂಡಳು. ಅವಳು ಆಶ್ಚರ್ಯದಿಂದ, ಒಮ್ಮೆ ನಗುತ್ತ, ಇನ್ನೊಮ್ಮೆ ಕಣ್ಣೀರು ಸುರಿಸುತ್ತ, ಹುಡುಗನನ್ನು ಮುಟ್ಟುತ್ತ, ಅವನ ಹಣೆಗೆ ಮುತ್ತಿಡುತ್ತ, ತನ್ನ ಹಸಿದ ಮತ್ತು ಆಸೆ ತುಂಬಿದ ಕಣ್ಣುಗಳಿಂದ ಅವನ ಮುಖವನ್ನು ದಿಟ್ಟಿಸಿದಳು. ಹುಡುಗ ನೋಡಲು ಸುಂದರವಾಗಿದ್ದ ಮತ್ತು ಅವನ ಬಟ್ಟೆಗಳು ಅವನು ಒಳ್ಳೆಯ ಮನೆತನದಿಂದ ಬಂದವನಂತೆ ತೋರುತ್ತಿದ್ದವು. ನೋಟ ನೋಡುತ್ತ ಅನುಕೂಲ್ ಹೃದಯ ಒಮ್ಮೆಗೆ ಹುಟ್ಟಿ ಬಂದ ಪ್ರೀತಿಯಿಂದ ತುಂಬಿ ಬಂತು.

ಆದಾಗ್ಯೂ ಮ್ಯಾಜಿಸ್ಟ್ರೇಟ್ ಕೇಳಿದ "ನಿನ್ನ ಹತ್ತಿರ ಯಾವುದಾದರೂ ಸಾಕ್ಷಿ ಇದೆಯಾ?"

ರಾಯಚರಣ್ ಉತ್ತರಿಸಿದ "ಇಂತಹ ಕೆಲಸಗಳಿಗೆ ಎಲ್ಲಿಯ ಸಾಕ್ಷಿ? ದೇವರೋಬ್ಬನಿಗೆ ಬಿಟ್ಟರೆ, ನಾನು ಮಗುವನ್ನು ಕದ್ದ ವಿಷಯ ಬೇರೆ ಯಾರಿಗೂ ಗೊತ್ತಿಲ್ಲ"

ಅನುಕೂಲ್ ತನ್ನ ಹೆಂಡತಿ ಹುಡುಗನನ್ನು ಪ್ರೀತಿಯಿಂದ ನೋಡುವ ನೋಟ ಕಂಡು, ಸಾಕ್ಷ್ಯ ಕೇಳುವ ನಿರರ್ಥಕತೆಯ ಗೋಜಿಗೆ ಹೋಗದೇ ನಂಬುವುದರಲ್ಲೇ ಹಿತವಿದೆ ಎನ್ನುವ ಸತ್ಯ ಅರ್ಥ ಮಾಡಿಕೊಂಡ. ಆದರೂ ರಾಯಚರಣ್ ನಂಥ ಮುದುಕ ಹುಡುಗನ್ನು ಎಲ್ಲಿಂದ ಕರೆ ತರಲು ಸಾಧ್ಯ? ಅಲ್ಲದೆ ತನ್ನ ಪ್ರಾಮಾಣಿಕ ಸೇವಕ ಮೋಸ ಮಾಡಿದ್ದು ಯಾಕೆ? ಎನ್ನುವ ವಿಚಾರ ಅವನನ್ನು ಕಾಡಿತು.

"ಆದರೆ" ನಿರ್ಧಾರ ಮಾಡಿದ ಧ್ವನಿಯಲ್ಲಿ ಅನುಕೂಲ್ ಹೇಳಿದ "ರಾಯಚರಣ್, ನೀನಿನ್ನೂ, ಇಲ್ಲಿ ಇರಕೂಡದು"

"ನಾನೆಲ್ಲಿ ಹೋಗಲಿ, ಒಡೆಯ?" ಕೇಳಿದ ರಾಯಚರಣ್ ತನ್ನ ಕೈ ಜೋಡಿಸುತ್ತ "ನನಗೀಗ ವಯಸ್ಸಾಗಿದೆ. ಮುದುಕನನ್ನು ಯಾರು ಕೆಲಸಕ್ಕೆ ಇಟ್ಟು ಕೊಳ್ಳುತ್ತಾರೆ?"

ಒಡತಿ ಹೇಳಿದಳು "ಅವನು ಬೇಕಾದರೆ ಇರಲಿ. ಅದರಿಂದ ನನ್ನ ಮಗುವಿಗೆ ಸಂತೋಷ ಆಗುತ್ತೆ. ನಾನು ಅವನನ್ನು ಕ್ಷಮಿಸಿದ್ದೇನೆ"

ಆದರೆ ಅನುಕೂಲ್ ವೃತ್ತಿ ಅನುಭವ ಅದಕ್ಕೆ ಒಪ್ಪಲಿಲ್ಲ. "ಇಲ್ಲ" ಅವನು ಹೇಳಿದ " ಅಪರಾಧ ಕ್ಷಮಿಸಲು ಸಾಧ್ಯವಿಲ್ಲ"

ರಾಯಚರಣ್ ಅನುಕೂಲ್ ಕಾಲು ಹಿಡಿದುಕೊಂಡು ಬೇಡಿಕೊಂಡ "ನನಗೆ ಇಲ್ಲಿ ಇರಲು ಅವಕಾಶ ಕೊಡಿ. ತಪ್ಪು ನಾನು ಮಾಡಿದ್ದಲ್ಲ. ಅದೆಲ್ಲ ದೇವರಿಚ್ಚೆ"

ದೇವರ ಮೇಲೆ ತಪ್ಪು ಹೊರಿಸಿದ್ದು ಅನುಕೂಲ್ ಗೆ ಸರಿ ಕಂಡು ಬರಲಿಲ್ಲ. "ಇಲ್ಲ" ಅವನು ಹೇಳಿದ "ಸಾಧ್ಯವಿಲ್ಲ. ನಾನು ಮತ್ತೆ ನಿನ್ನನ್ನು ನಂಬಲು ಸಾಧ್ಯವಿಲ್ಲ. ನೀನು ಮಾಡಿದ್ದು ಒಂದು ಮೋಸದ ಕೆಲಸ"

ರಾಯಚರಣ್ ಮೇಲೇಳುತ್ತ ಹೇಳಿದ "ಖಂಡಿತ ನಾನು ತಪ್ಪು ಕೆಲಸ ಮಾಡಿಲ್ಲ"

"ಹಾಗಾದರೆ ಯಾರು ಮಾಡಿದ್ದು?ಅನುಕೂಲ್ ಕೇಳಿದ.

ರಾಯಚರಣ್ ಉತ್ತರಿಸಿದ "ಅದು ನನ್ನ ಹಣೆ ಬರಹ"

ಆದರೆ ಯಾವುದೇ ವಿದ್ಯಾವಂತ ವ್ಯಕ್ತಿ ಇಂತಹ ವಾದ ಒಪ್ಪುವುದಿಲ್ಲ. ಹಾಗೆಯೇ ಅನುಕೂಲ್ ತನ್ನ ನಿರ್ಧಾರ ಬದಲಿಸಲಿಲ್ಲ.

ಯಾವಾಗ ಫೈಲ್ನ ನಿಗೆ ತಾನು ಒಬ್ಬ ಶ್ರೀಮಂತ ಮ್ಯಾಜಿಸ್ಟ್ರೇಟ್ ಒಬ್ಬರ ಮಗನೆಂಬ ವಿಷಯ ಅರಿವಿಗೆ ಬಂತೋ, ಅವನಿಗೆ ಮೊದಲಿಗೆ ರಾಯಚರಣ್ ಮೇಲೆ ಅಸಾಧ್ಯ ಕೋಪ ಬಂತು, ತನ್ನನ್ನು ಇಲ್ಲಿಯವರೆಗೆ ಜನ್ಮಸಿದ್ಧ ಹಕ್ಕುಗಳಿಂದ ದೂರ ಮಾಡಿದ್ದಕ್ಕೆ. ಆದರೆ ರಾಯಚರಣ್ ದಾರುಣ ಪರಿಸ್ಥಿತಿ ಕಂಡು ಅದು ಕನಿಕರವಾಗಿ ಬದಲಾಯಿತು. ಅವನು ಉದಾರ ಮನೋಭಾವದಿಂದ ತಂದೆಗೆ ಹೇಳಿದ "ಅವನನ್ನು ಕ್ಷಮಿಸಿಬಿಡು. ಅವನು ನಮ್ಮ ಜೊತೆಗೆ ಇರುವುದು ನಿನಗೆ ಇಷ್ಟ ಇರದೇ ಇದ್ದರೇ, ಅವನ ಖರ್ಚಿಗೆ ಪ್ರತಿ ತಿಂಗಳು ಸ್ವಲ್ಪ ಹಣ ಕಳಿಸು"

ಇದನ್ನು ಕೇಳಿದ ರಾಯಚರಣ್ ಗೆ ಬೇರೆ ಮಾತೇ ಹೊರಡಲಿಲ್ಲ. ಅವನು ಕೊನೆಯ ಸಲ ತನ್ನ ಮಗನ ಮುಖವನ್ನು ದಿಟ್ಟಿಸಿ ನೋಡಿದ. ತನ್ನ ಒಡೆಯ, ಒಡತಿಗೆ ನಮಸ್ಕರಿಸಿ ಅಲ್ಲಿಂದ ಹೊರಟು ಜನ ಜಂಗುಳಿಯಲ್ಲಿ ಕರಗಿ ಹೋದ.

ತಿಂಗಳ ಕೊನೆಯಲ್ಲಿ ಅನುಕೂಲ್ ರಾಯಚರಣ್ಗೆಂದು ಸ್ವಲ್ಪ ಹಣ ಅವನ ಹಳ್ಳಿಯ ವಿಳಾಸಕ್ಕೆ ಕಳಿಸಿದ. ಆದರೆ ಅದು ಮರಳಿ ಬಂತು. ಅಲ್ಲಿ ರಾಯಚರಣ್ ಹೆಸರಿನವರು ಯಾರೂ ಇರಲಿಲ್ಲ.

Thursday, November 5, 2015

If not marketed well, Gold Bonds would not see success

Gold bonds are rolled out but the response seems to be not so good.

First thing is how many are aware of this new thing on the market? If few have heard, are they clear with how they work? Retail investors would not come in unless the benefit of this scheme is explained well. Post offices and Public sector banks are no great marketers. Then who will promote this? But going by the arrangements, neither RBI nor Govt. have not much to take it to retail investors. But that is where approx. 20,000 tonnes of Gold lays idle. And if they are not convinced well, they would not come out of their addiction for physical gold. Unless this gap is bridged, a great scheme will not reach anywhere its potential. Govt. and RBI has to get few celebrities to promote the scheme. Incentives have to be created for those selling these bonds. Let the brokerage houses and agents sell these bonds too. And if they can become part of investments under section 80C, income tax payers would find it attractive. I hope the concerned authority will take necessary care to put these in the hands replacing the hunger for physical gold. 

Do you want to know the details of this bond? Here is the press release from RBI: https://rbi.org.in/Scripts/BS_PressReleaseDisplay.aspx?prid=35292


I was also thinking who would oppose these bonds? Of course, Jewelers and pawn brokers who deal with physical gold will see a competition and their business being impacted if gold bonds are to see huge success. But who would win if the bonds become a great success? It is whole of Indian economy in general, as import bill reduces and so will be the current account deficit. That would offer some relief to Rupee too. But for these benefits to materialize by monetizing the huge gold reserves India holds, these bonds need to be promoted well. And I do not see much effort in that direction, at least for now. Our focus and energy is lost in so many other things.