Sunday, November 15, 2015

ಅನುವಾದಿತ ಕಥೆ: ಗುಪ್ತ ನಿಧಿ [ಮೂಲ ಲೇಖಕರು: ರವೀಂದ್ರನಾಥ ಟಾಗೋರ್]



ಅದು ಆಗಸದಲ್ಲಿ ಚಂದ್ರನಿಲ್ಲದ ರಾತ್ರಿ. ಮೃತ್ಯುಂಜಯನು ಕಾಳಿ ದೇವತೆಯ ವಿಗ್ರಹದ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿದ್ದ. ಅದು ಮುಗಿಯುವ ಹೊತ್ತಿಗೆಲ್ಲ ಬೆಳಗಿನ ಜಾವ. ಕಾಗೆಯ "ಕಾಕಾ" ಸದ್ದು ಪಕ್ಕದ ಮಾವಿನ ತೋಪಿನಿಂದ ಕೇಳಿ ಬರುತ್ತಿತ್ತು.

ದೇವಸ್ಥಾನದ ಬಾಗಿಲು ಮುಚ್ಚಿದೆ ಎನ್ನುವದನ್ನು ಖಾತರಿ ಪಡಿಸಿಕೊಂಡು, ಕಾಳಿಯ ಚರಣಕ್ಕೆ ಇನ್ನೊಮ್ಮೆ ಬಾಗಿ, ವಿಗ್ರಹದ ಪೀಠವನ್ನು ಜರುಗಿಸಿ, ಅಲ್ಲಿಂದ ಒಂದು ಕಟ್ಟಿಗೆಯಿಂದ ಮಾಡಿದ ಒಂದು ಪೆಟ್ಟಿಗೆಯನ್ನು ತೆಗೆದನು. ತನ್ನ ಜನಿವಾರದಲ್ಲಿದ್ದ ಬೀಗದ ಕೈಯಿಂದ ಅದನ್ನು ತೆಗೆದು ತೆಗೆದು ನೋಡಿದನು. ಆದರೆ ಅದರಲ್ಲಿ ಅಲ್ಲಿ ಏನೂ ಇರದದ್ದನ್ನು ಕಂಡು ಆತಂಕಕ್ಕೊಳಗಾದನು. ಪೆಟ್ಟಿಗೆಯನ್ನು ಕೈಯಲ್ಲಿ ತೆಗೆದುಕೊಂಡು ಅದರ ಸುತ್ತ ನೋಡುತ್ತಾ ಮತ್ತು ಅದನ್ನು ಅಲ್ಲಾಡಿಸಿತ್ತಾ ಪರಿಶೀಲಿಸದನು. ಬೀಗ ಒಡೆದ ಯಾವ ಗುರುತುಗಳೂ ಇರಲಿಲ್ಲ. ಹಲವಾರು ಸಲ ದೇವರ ಮೂರ್ತಿಯನ್ನು ತಡಕಾಡಿದನು. ಆದರೆ ಅವನು ಹುಡುಕುತ್ತಿರುವುದು ಸಿಗಲಿಲ್ಲ.

ಮೃತ್ಯುಂಜಯನ ಪೂರ್ವಜರು ಕಟ್ಟಿದ ಚಿಕ್ಕ ಗುಡಿ, ಅವನ ತೋಟದ ಒಳ ಭಾಗದಲ್ಲಿತ್ತು. ಗುಡಿಯ ಸುತ್ತಲೂ ಗೋಡೆ ಇದ್ದು, ಪ್ರವೇಶಕ್ಕೆ ಒಂದೇ ದ್ವಾರ ಇತ್ತು. ಮತ್ತು ಗುಡಿಯ ಒಳಗೆ ಕಾಳಿಯ ವಿಗ್ರಹ ಬಿಟ್ಟರೆ ಬೇರೆ ಎನೂ ಇರಲಿಲ್ಲ. ಆತಂಕಕ್ಕೊಳಗಾದ ಮೃತ್ಯುಂಜಯ ಗುಡಿಯ ಸುತ್ತಲೂ ಸುಳಿವಿಗಾಗಿ ಹುಡುಕಾಡಿದ. ಆದರೆ ಅವನ ಪ್ರಯತ್ನ ವ್ಯರ್ಥವಾಯಿತು. ಅದಾಗಲೇ ಬೆಳಕು ಹರಿದಿತ್ತು. ಅವನು ನಿರಾಸೆಯಿಂದ, ತಲೆಯನ್ನು ತನ್ನ ಕೈಗೊಳಗೆ ಹುದುಗಿಸಿ ಚಿಂತಿಸುತ್ತಾ ಕುಳಿತ. ರಾತ್ರಿಯೆಲ್ಲಾ ನಿದ್ದೆಗೆಟ್ಟಿದ್ದರಿಂದ, ನಿದ್ದೆ ಬಂದ ಹಾಗಾಯಿತು. ಅಷ್ಟರಲ್ಲಿ ಅವನನ್ನು ಉದ್ದೇಶಿಸಿ ಯಾರೋ ಮಾತಾಡಿದ ಹಾಗೆ ಆಯಿತು. "ಹೇಗಿದ್ದೀಯ, ಮಗನೆ?" ಮೃತ್ಯುಂಜಯ ತಲೆ ಎತ್ತಿ ನೋಡಿದಾಗ ಅಲ್ಲಿ ಕಂಡದ್ದು, ಉದ್ದ ತಲೆಗೂದಲಿನ ಓರ್ವ ಸನ್ಯಾಸಿ. ಅವನಿಗೆ ವಂದಿಸಿದ ಮೃತ್ಯುಂಜಯನ ತಲೆ ಮೇಲೆ ಕೈ ಇಟ್ಟು ಸನ್ಯಾಸಿ ಹೇಳಿದ "ನಿನ್ನ ದುಃಖ ಅರ್ಥವಿಲ್ಲದ್ದು".

ಮೃತ್ಯುಂಜಯ ಅಚ್ಚರಿಯ ದನಿಯಲ್ಲಿ ಕೇಳಿದ "ನಿಮಗೆ ಇನ್ನೊಬ್ಬರ ಮನಸ್ಸು ಓದಲು ಬರುತ್ತದೆಯೇ? ನಿಮಗೆ ನನ್ನ ಕೊರಗು ಹೇಗೆ ಗೊತ್ತು? ಅದರ ಬಗ್ಗೆ ನಾನು ಯಾರಿಗೂ ಹೇಳಿರಲಿಲ್ಲ"

ಸನ್ಯಾಸಿ ಉತ್ತರಿಸಿದ "ಮಗನೇ, ನೀನು ಕಳೆದುಕೊಂಡದ್ದಕ್ಕೆ ವ್ಯಥೆ ಪಡುವದಕ್ಕಿಂತ, ಆನಂದ ಪಡಬೇಕು"

ಕೈ ಜೋಡಿಸುತ್ತ ಮೃತ್ಯುಂಜಯ ಉದ್ಗರಿಸಿದ "ಹಾಗಾದರೆ ನಿಮಗೆ ಎಲ್ಲ ವಿಷಯ ಗೊತ್ತು? ದಯವಿಟ್ಟು ಅದು ಹೇಗೆ ಕಳೆಯಿತು ಮತ್ತ ಅದನ್ನು ವಾಪಸು ಪಡೆಯುವ ರೀತಿ ತಿಳಿಸಿ"

ಸನ್ಯಾಸಿ ಹೇಳಿದ "ನನಗೆ ನಿನ್ನನ್ನು ದುರಾದೃಷ್ಟದ ಕೂಪಕ್ಕೆ ತಳ್ಳುವ ಆಸೆ ಇದ್ದರೆ ಹೇಳಿರುತ್ತಿದ್ದೆ. ಆದರೆ ದೇವರು ನಿನ್ನ ಮೇಲೆ ಕರುಣೆಯಿಂದ ತೆಗೆದುಕೊಂಡ ವಸ್ತುವಿನ ಬಗ್ಗೆ ವ್ಯಥೆ ಪಡಲು ಹೋಗಬೇಡ"

ಮೃತ್ಯುಂಜಯನಿಗೆ ಅಷ್ಟರಿಂದ ಸಮಾಧಾನವಾಗಲಿಲ್ಲ. ಅವನು ಸನ್ಯಾಸಿಯನ್ನು ಸಂತೋಷಗೊಳಿಸುವ ಉದ್ದೇಶದಿಂದ ಡೀ ದಿನ ಅವನ ಸೇವೆಯಲ್ಲಿ ತೊಡಗಿದ. ಆದರೆ ಮರು ದಿನ ಬೆಳಿಗ್ಗೆ ಅವನು ಹಾಲು ತರುವದಕ್ಕೆ ಹೋಗಿ ಮರಳಿ ಬಂದಾಗ ಸನ್ಯಾಸಿ ಅಲ್ಲಿ ಕಾಣಲಿಲ್ಲ.



ಮೃತ್ಯುಂಜಯ ಇನ್ನೂ ಮಗುವಾಗಿದ್ದಾಗ, ಅವನ ಅಜ್ಜ ಹರಿಹರ ಇದೇ ಗುಡಿಯ ಮೆಟ್ಟಿಲುಗಳ ಮೇಲೆ ಕುಳಿತಿದ್ದಾಗ, ಸನ್ಯಾಸಿಯೊಬ್ಬ ಅಲ್ಲಿಗೆ ಬಂದಿದ್ದ. ಹರಿಹರ ಅವನನ್ನು ಸ್ವಾಗತಿಸಿ, ಮನೆಯೊಳಗೆ ಕರೆದೊಯ್ದು, ಸಾಕಷ್ಟು ದಿನಗಳವರೆಗೆ ಆತನನ್ನು ಗೌರವ್ವಾನಿತ ಅತಿಥಿಯಂತೆ ನಡೆಸಿಕೊಂಡ. ಸನ್ಯಾಸಿ ಹೊರಡುವ ವೇಳೆಯಾದಾಗ ಹರಿಹರನಿಗೆ ಕೇಳಿದ "ಮಗೂ, ನೀನು ತುಂಬಾ ಬಡವನಲ್ಲವೇ?" ಅದಕ್ಕೆ ಉತ್ತರ ಬಂತು "ಹೌದು ಸ್ವಾಮಿ. ಹಿಂದೆ ನಮ್ಮ ಕುಟುಂಬವೇ ಊರಿಗೆ ದೊಡ್ಡ ಮನೆತನವಾಗಿತ್ತು. ಆದರೆ ಇಂದಿನ ಪರಿಸ್ಥಿತಿ ನಮ್ಮನ್ನು ತಲೆ ಎತ್ತಿ ತಿರುಗದಂತೆ ಮಾಡಿದೆ. ಮತ್ತೆ ನಮಮ್ ಸಿರಿವಂತಿಕೆ ಮರಳುವಂತೆ ಮಾಡಲು ಏನು ಮಾಡಬೇಕೆಂದು ತಾವು ತಿಳಿಸಿ ಕೊಡಬೇಕೆಂದು ಬೇಡುತ್ತೇನೆ."

ಸನ್ಯಾಸಿ ನಸು ನಗುತ್ತ ಹೇಳಿದ "ಮಗನೇ, ನಿನಗಿರುವ ಸ್ಥಿತಿಯಲ್ಲಿ ನೆಮ್ಮದಿಯಿಲ್ಲವೇ? ಶ್ರೀಮಂತನಾಗಲು ಪ್ರಯತ್ನಿಸಿ ಪ್ರಯೋಜನವೇನು?" ಆದರೆ ಹರಿಹರ ಪಟ್ಟು ಬಿಡದೆ ಹೇಳಿದ. ತನ್ನ ಕುಟುಂಬ ಮತ್ತೆ ಸಮಾಜದಲ್ಲಿ ಉನ್ನತ ದರ್ಜೆಗೆ ಏರಲು ಏನನ್ನು ಮಾಡಲು ತಯಾರಿರುವುದಾಗಿ ತಿಳಿಸಿದ.
ಆಗ ಸನ್ಯಾಸಿ ಸುರುಳಿ ಸುತ್ತಿದ್ದ ಬಟ್ಟೆಯನ್ನು ಬಿಡಿಸುತ್ತ ಅದರಿಂದ ಒಂದು ಕಾಗದದ ತುಣುಕು ಹೊರ ತೆಗೆದ. ಅದು ಜಾತಕ ಬರೆದ ಕಾಗದದಂತೆ ಕಾಣುತ್ತಿತ್ತು. ಅದನ್ನು ಸಂಪೂರ್ಣವಾಗಿ ಬಿಡಿಸಿದಾಗ ಅದರಲ್ಲಿ ವೃತ್ತಗಳ ಒಳಗೆ ಬರೆದಿದ್ದ ರಹಸ್ಯಮಯ ಚಿನ್ಹೆಗಳು ಮತ್ತು ಅದರ ಕೆಳಗೆ ಪ್ರಾಸಬದ್ದವಾಗಿ ಬರೆದ ಕೆಲವು ಸಾಲುಗಳು ಕಾಣಿಸಿದವು.

ನಿಮ್ಮ ಗುರಿಯ ಸಾಧನೆಯಾಗಲು,
ಪ್ರಾಸವಾದ ಶಬ್ದ ಸಿಗಲು,
'ರಾಧಾ' ದಿಂದ 'ಧಾ' ಮೊದಲು,
ನಂತರ 'ರಾ' ಬರಲು,
ಹುಣಸೆ-ಆಲದ ದ್ವಾರದಿಂದ,
ದಕ್ಷಿಣ ದಿಕ್ಕಿಗೆ ಮೊಗದಿಂದ,
ಮೂಡಣದಲ್ಲಿ ಬೆಳಕು ಮೂಡಲು,
ನಿಮಗೆ ಐಶ್ವರ್ಯದ ಹಬ್ಬ ತರಲು

ಅದನ್ನು ನೋಡಿದ ಹರಿಹರ ಹೇಳಿದ "ಸ್ವಾಮಿ, ಇದರಲ್ಲಿ ಬರೆದದ್ದು ನನಗೆ ಎನೂ ಅರ್ಥವಾಗಲಿಲ್ಲ"

ಅದಕ್ಕೆ ಸನ್ಯಾಸಿ ಉತ್ತರಿಸಿದ "ಅದನ್ನು ನಿನ್ನ ಹತ್ತಿರ ಇಟ್ಟುಕೋ. ದಿನವೂ ಕಾಳಿ ಮಾತೆಗೆ ಪ್ರಾರ್ಥನೆ ಸಲ್ಲಿಸು. ಆಕೆಯ ದಯೆಯಿಂದ, ನಿನಗೆ ಅಥವಾ ನಿನ್ನ ವಂಶದಲ್ಲಿ ಹುಟ್ಟುವವರಿಗೆ, ನೀವು ಕೇಳರಿಯದ ಸಂಪತ್ತು ದೊರೆಯುವುದು. ಅದನ್ನು ಅಡಗಿಸಿಟ್ಟುರುವ ಜಾಗದ ಗುರುತನ್ನು ಕಾಗದ ತೋರಿಸುತ್ತದೆ".
ಹರಿಹರ ಬರಹದ ಮರ್ಮ ವಿವರಿಸಲು ಪರಿ ಪರಿಯಾಗಿ ಬೇಡಿಕೊಂಡ. ಅದಕ್ಕೆ ಸನ್ಯಾಸಿ ಸಂಯಮದಿಂದ ಮಾತ್ರ ಇದರ ರಹಸ್ಯ ಭೇದಿಸಲು ಸಾಧ್ಯ ಎಂದು ತಿಳಿಸಿದ. ಅದೇ ಸಮಯಕ್ಕೆ ಹರಿಹರನ ತಮ್ಮನಾದ ಶಂಕರ, ಕಾಗದ ಕಿತ್ತುಕೊಂಡು ಅದರಲ್ಲಿ ಏನು ಬರೆದಿದೆ ಎಂದು ನೋಡಲು ಹವಣಿಸಿದ. ಅದನ್ನು ನೋಡಿದ ಸನ್ಯಾಸಿ ನಗುತ್ತ ನುಡಿದ "ನೋಡು. ಈಗಾಗಲೇ ಉನ್ನತಿಯ ಸೇರಲು ನೋವಿನ ಹಾದಿ ಶುರು ಆಗಿದೆ. ಆದರೆ ನೀನು ಭಯ ಪಡುವ ಅವಶ್ಯಕತೆಯಿಲ್ಲ. ರಹಸ್ಯವನ್ನು ತಿಳಿದುಕೊಳ್ಳಲು ನಿನ್ನ ಕುಟುಂಬದವರಲ್ಲಿ ಒಬ್ಬರಿಗೆ ಮಾತ್ರ ಸಾಧ್ಯ. ಬೇರೆಯವರು ಇದನ್ನು ಸಾವಿರ ಸಲ ನೋಡಿದರೂ ಅವರಿಗೆ ಏನೂ ಅರ್ಥವಾಗದು. ಹಾಗಾಗಿ ನೀನು ಇದನ್ನು ಯಾರಿಗಾದರೂ ಭಯವಿಲ್ಲದೇ ತೋರಿಸಬಹುದು.

ಸನ್ಯಾಸಿ ಅಲ್ಲಿಂದ ಹೊರಟು ಹೋದ ಮೇಲೆ, ಕಾಗದವನ್ನು ಬಚ್ಚಿಡುವವರೆಗೆ ಹರಿಹರನಿಗೆ ಸಮಧಾನವಿದ್ದಿಲ್ಲ. ಯಾರಾದರೂ, ಅದರಲ್ಲೂ ಅವನ ತಮ್ಮ ಗುಪ್ತ ನಿಧಿಯನ್ನು ಹುಡುಕಿ ತೆಗೆದು ತಮ್ಮದಾಗಿಸಿಕೊಂಡುಬಹುದೆಂಬ ಭಯದಿಂದ ಅವನು ಕಾಗದವನ್ನು ಒಂದು ಕಟ್ಟಿಗೆಯ ಪೆಟ್ಟಿಗೆಯಲ್ಲಿ ಇಟ್ಟು, ಕಾಳಿ ದೇವಿಯ ವಿಗ್ರಹದ ಕೆಳಗೆ ಮುಚ್ಚಿಟ್ಟುಬಿಟ್ಟ. ಪ್ರತಿ ತಿಂಗಳು ಅಮಾವಾಸ್ಯೆಯ ರಾತ್ರಿ, ಗುಡಿಯಲ್ಲಿ ಕಾಳಿಗೆ ಪ್ರಾರ್ಥನೆ ಸಲ್ಲಿಸಿ, ತನಗೆ ರಹಸ್ಯವನ್ನು ಭೇದಿಸುವ ಶಕ್ತಿಯನ್ನು ಕೊಡು ಎಂದು ಬೇಡಿಕೊಳ್ಳುತ್ತಿದ್ದ.

ಕೆಲವು ದಿನಗಳ ನಂತರ ಅವನ ತಮ್ಮ ಶಂಕರ ತನಗೆ ಕಾಗದವನ್ನು ತೋರಿಸುವಂತೆ ಅಣ್ಣನಲ್ಲಿ ಕೇಳಿಕೊಂಡ. "ದೂರ ಹೋಗು, ಮೂರ್ಖ! ಅಯೋಗ್ಯ ಸನ್ಯಾಸಿ, ಏನನ್ನೋ ಅಸಂಬದ್ಧವಾಗಿ, ನನ್ನನು ದಾರಿ ತಪ್ಪಿಸುವ ಸಲುವಾಗಿ ಬರೆದ ಕಾಗದವನ್ನು ನಾನು ಎಂದೋ ಸುಟ್ಟು ಹಾಕಿಬಿಟ್ಟೆ".
ಅಷ್ಟಕ್ಕೇ ಸುಮ್ಮನಾದ ಶಂಕರ ಕೆಲವು ಸಮಯದ ನಂತರ ಮನೆಯಿಂದ ಕಾಣೆಯಾದ. ಮತ್ತು ಅವನು ಮನೆಗೆ ವಾಪಸ್ಸು  ಬರಲೇ ಇಲ್ಲ. ವೇಳೆಯಿಂದ ಹರಿಹರ ತನ್ನ ಎಲ್ಲ ಕೆಲಸಗಳನ್ನು ಬದಿಗೊತ್ತಿ, ಗುಪ್ತ ನಿಧಿಯ ವಿಚಾರದಲ್ಲೇ ಮುಳುಗಿ ಹೋದ. ಅವನು ಸತ್ತ ನಂತರ, ರಹಸ್ಯಮಯ ಕಾಗದ ಅವನ ಹಿರಿಯ ಮಗನಾದ ಶ್ಯಾಮಪಾದನ ಪಾಲಿಗೆ ಬಂತು. ಅವನೂ ಕೂಡ ಯಾವತ್ತಾದರೂ ತನಗೆ ಅದೃಷ್ಟ ಲಕ್ಷ್ಮಿ ಒಲಿಯಬಹುದೆಂಬ ಆಸೆಯಲ್ಲಿ ತನ್ನ ವ್ಯವಹಾರ ಮರೆತು, ಕಾಗದದ ಮೇಲಿರುವ ರಹಸ್ಯ ಚಿನ್ಹೆಗಳ ಅಧ್ಯಯನ ಮತ್ತು ಕಾಳಿ ದೇವತೆಯ ಆರಾಧನೆಯಲ್ಲಿ ತನ್ನ ಜೀವನ ಕಳೆದ.

ಮೃತ್ಯುಂಜಯ ಶ್ಯಾಮಪಾದನ ಹಿರಿಯ ಮಗ. ಅವನ ತಂದೆಯ ಮರಣದ ನಂತರ ಕುಲಸ್ವತ್ತಾದ ಕಾಗದ ಅವನ ಕೈ ಸೇರಿತು. ಆದರೆ ರಹಸ್ಯವನ್ನು ಭೇದಿಸುವಲ್ಲಿ ಅವನು ತೋರಿಸದ ಅತ್ಯಾಸಕ್ತಿ ಅವನನ್ನು ಅಧೋಗತಿಗೆ ತಂದಿತು. ಸಮಯದಲ್ಲೇ ಕಾಗದ ಕಳೆದು ಹೋದದ್ದು ಮತ್ತು ಕಾಕತಾಳೀಯ ಎನ್ನುವಂತೆ ಒಬ್ಬ ಸನ್ಯಾಸಿ ಕಾಣಿಸಿ ಕೊಂಡದ್ದು. ಮೃತ್ಯುಂಜಯ ಸನ್ಯಾಸಿಯನ್ನು ಹುಡುಕಿ ಅವನಿಂದ ಎಲ್ಲ ತಿಳಿಯ ಬೇಕೆನ್ನುವ ಧೃಢ ನಿರ್ಧಾರದಿಂದ, ಅವನ ಶೋಧನೆಗಾಗಿ ಮನೆ ಬಿಟ್ಟು ಹೊರಟ.


ಸನ್ಯಾಸಿಯನ್ನು ಹುಡುಕುತ್ತ ಮೃತ್ಯುಂಜಯ ಊರಿಂದ ಊರಿಗೆ ಅಲೆಯುತ್ತ ಧಾರಾಪುರ ಎನ್ನುವ ಊರು ಬಂದು ಸೇರಿದ. ಅಲ್ಲಿ ದಿನಸಿ ಅಂಗಡಿಯವನ ಆಶ್ರಯದಲ್ಲಿ ಉಳಿದ. ಒಂದು ದಿನ ಇಳಿ ಸಂಜೆ, ಅನ್ಯಮನಸ್ಕನಾಗಿ, ಯಾವುದೊ ವಿಚಾರದಲ್ಲಿ ಮುಳುಗಿದ್ದಾಗ, ಪಕ್ಕದ ಹೊಲದ ಬದಿಯಲ್ಲಿ ಒಬ್ಬ ಸನ್ಯಾಸಿ ನಡೆದು ಹೋಗುತ್ತಿರುವುದನ್ನು ನೋಡಿದ. ಮೊದಲಿಗೆ ಅವನ ಗಮನ ಅದರತ್ತ ಅಷ್ಟಾಗಿ ಹರಿಯಲಿಲ್ಲ ಆದರೆ ಕೆಲವು ನಿಮಿಷಗಳ ನಂತರ ಅವನಿಗೆ ಮಿಂಚಿನಂತೆ ಹೊಳೆಯಿತು. ಅವನು ಹುಡುಕುತಿರುವ ಸನ್ಯಾಸಿ ಅವನೇ ಆಗಿದ್ದ. ಅವಸರದಲ್ಲಿ ತಾನು ಸೇದುತ್ತಿದ್ದ ಹುಕ್ಕಾ ಬದಿಗಿಟ್ಟು, ಅಂಗಡಿಯವನಿಗೆ ಗಾಬರಿಯಾಗುವ ಹಾಗೆ ಸನ್ಯಾಸಿ ಹೋದ ದಾರಿಯಲ್ಲಿ ಓಡಿದ. ಆದರೆ ಸನ್ಯಾಸಿ ಅಲ್ಲಿ ಕಾಣಲಿಲ್ಲ. ಅದಾಗಲೇ ಕತ್ತಲು ಕವಿದಿತ್ತು. ಪರಕೀಯ ಸ್ಥಳದಲ್ಲಿ ಸನ್ಯಾಸಿಯನ್ನು ಹುಡುಕುವ ಪ್ರಯತ್ನ ಬಿಟ್ಟು ಅಂಗಡಿಗೆ ಮರಳಿದ. ಮತ್ತು ಅಂಗಡಿಯವನಲ್ಲಿ ಹಳ್ಳಿಯ ಆಚೆಗಿನ ಅರಣ್ಯದಲ್ಲಿ ಏನುಂಟು ಎಂದು ವಿಚಾರಿಸಿದ.

ಅದಕ್ಕೆ ಉತ್ತರ ಬಂತು. "ಅಲ್ಲಿ ಒಂದು ಮಹಾ ನಗರಿ ಇತ್ತು. ಮಹರ್ಷಿ ಅಗಸ್ತ್ಯರಿಂದ ಶಾಪಕ್ಕೆ ಒಳಗಾದ ಅಲ್ಲಿನ ರಾಜ ಮತ್ತು ಎಲ್ಲ ನಿವಾಸಿಗಳು ಯಾವುದೋ ಅಂಟುರೋಗಕ್ಕೆ ಒಳಗಾಗಿ ಪ್ರಾಣ ಬಿಟ್ಟರು. ಅಲ್ಲಿ ಅಪರಿಮಿತ ಸಂಪತ್ತು ಮತ್ತು ಆಭರಣಗಳ ರಾಶಿಯೇ ಅಡಗಿರುವುದಾಗಿ ಜನ ನಂಬಿದ್ದಾರೆ. ಆದರೆ ಹಗಲು ಹೊತ್ತಿನಲ್ಲೂ ಕೂಡ ಅಲ್ಲಿಗೆ ಹೋಗುವ ಧೈರ್ಯ ಯಾರೂ ಮಾಡುವುದಿಲ್ಲ. ಮತ್ತು ಹಾಗೆ ಹೋದವರು ಮರಳಿ ಬಂದಿಲ್ಲ."
ಅದನ್ನು ಕೇಳಿದ ಮೃತ್ಯುಂಜಯ ಮನಸ್ಸಿಗೆ ವಿಶ್ರಾಂತಿ ಇಲ್ಲದಂತಾಯಿತು. ಇಡಿ ರಾತ್ರಿಯೆಲ್ಲ, ತನ್ನ ಚಾಪೆಯ ಮೇಲೆ ಮಲಗಿ, ಸೊಳ್ಳೆ ಕಾಟವನ್ನು ಲೆಕ್ಕಿಸದೆ, ಕಾಡು, ಸನ್ಯಾಸಿ, ಮತ್ತು ಅಲ್ಲಿ ಅಡಗಿರುವ ರಹಸ್ಯ ಇದರ ವಿಚಾರದಲ್ಲೇ ಕಳೆದ. ಕಾಗದದಲ್ಲಿದ್ದ ಪದ್ಯದ ಸಾಲುಗಳನ್ನು ಸಾಕಷ್ಟು ಸಲ ಓದಿದ್ದನಾದ್ದರಿಂದ ಅದು ಅವನಿಗೆ ಕಂಠ ಪಾಠವಾಗಿ ಹೋಗಿತ್ತು. ಅದೇ ವಿಚಾರದ ಸುಳಿಗೆ ಸಿಕ್ಕ ಅವನ ಮನದಲ್ಲಿ ಪದ್ಯದ ಸಾಲುಗಳು ಮತ್ತೆ ನೆನಪಿಗೆ ಬಂದವು:

ನಿಮ್ಮ ಗುರಿಯ ಸಾಧನೆಯಾಗಲು,
ಪ್ರಾಸವಾದ ಶಬ್ದ ಸಿಗಲು,
'ರಾಧಾ' ದಿಂದ 'ಧಾ' ಮೊದಲು,
ನಂತರ 'ರಾ' ಬರಲು,

ಶಬ್ದಗಳನ್ನು ಮತ್ತೆ ಮತ್ತೆ ಮೆಲುಕು ಹಾಕಿದ. ಬೆಳಗಿನ ಜಾವದ ಹೊತ್ತಿಗೆ ಅವನಿಗೆ ನಿದ್ದೆ ಹತ್ತಿತು. ಆಗ ಅವನಿಗೆ ಬಿದ್ದ ಕನಸಿನಲ್ಲಿ ಪದ್ಯದ ಅರ್ಥ ಸ್ಪಷ್ಟವಾಯಿತು. 'ರಾಧಾ' ದಿಂದ 'ಧಾ' ಮೊದಲು ಹಾಗೂ ನಂತರ 'ರಾ', ಅದನ್ನು ಜೋಡಿಸದರೆ ಬರುವ ಶಬ್ದ 'ಧಾರಾ'. ಮತ್ತು ಶಬ್ದಕ್ಕೆ ಪ್ರಾಸವೆನ್ನುವಂತೆ "ಪುರ" ಸೇರಿಸಿದರೆ ಆಯಿತು "ಧಾರಾಪುರ". ಅವನೀಗ ಬಂದು ಸೇರಿರುವ ಊರಿನ ಹೆಸರು ಧಾರಾಪುರ. ಅವನು ತಾನು ಮಲಗಿದ್ದ ಚಾಪೆಯ ಮೇಲೆ ದಿಗ್ಗನೆದ್ದು ಕುಳಿತನು. ಅವನು ತಾನು ಹುಡುಕುತ್ತಿದ್ದ ಸ್ಥಳಕ್ಕೇ ಬಂದು ಸೇರಿದ್ದನು.


ಹಗಲೆಲ್ಲ ಕಾಡಿನಲ್ಲಿ ಯಾವುದಾದರೂ ಕಾಲು ದಾರಿ ಸಿಗುವುದೇನೋ ಎಂದು ಮೃತ್ಯುಂಜಯ ಹುಡುಕಿದ. ರಾತ್ರಿಯ ಹೊತ್ತಿಗೆ ಹಸಿವಿನಿಂದ ಹಾಗೂ ಆಯಾಸದ ಬಳಲಿಕೆಯಿಂದ ಮತ್ತೆ ಊರಿಗೆ ವಾಪಸ್ಸಾದ. ಮರು ದಿನ ಸ್ವಲ್ಪ ಅಕ್ಕಿಯನ್ನು ಗಂಟಲ್ಲಿ ಕಟ್ಟಿಕೊಂಡು ಮತ್ತೆ ದಾರಿಯ ಅನ್ವೇಷಣೆಗೆ ತೊಡಗಿದ. ಮಧ್ಯಾಹ್ನದ ಹೊತ್ತಿಗೆ ಒಂದು ಸರೋವರದ ಪಕ್ಕದಿಂದ ಕಾಲು ದಾರಿ ಹೋಗಿರುವದನ್ನು ಗಮನಿಸಿದಸರೋವರದ ನಡುವಿನಲ್ಲಿ ನೀರು ಸ್ವಚ್ಚವಾಗಿತ್ತು ಆದರೆ ದಂಡೆಯ ಸುತ್ತ ಕಳೆ, ಕದಿರು, ನೀರಲ್ಲಿ ಬೆಳೆಯುವ ಹೂವಿನ ಗಿಡಗಳು ತುಂಬಿಕೊಂಡಿದ್ದವು. ನೀರಲ್ಲಿ ತಾನು ತಂದಿದ್ದ ಅಕ್ಕಿಯನ್ನು ನೆನೆಸಿ ತಿಂದ ಮೃತ್ಯುಂಜಯ, ಕಾಲು ದಾರಿಯಲ್ಲಿ ಯಾವುದಾದರೂ ಹಳೆ ಕಟ್ಟಡಗಳ ಅವಶೇಷ ಅಥವಾ ಕುರುಹುಗಳು ಕಾಣ ಸಿಗುತ್ತವೆಯೇ ಎಂದು ಹುಡುಕುತ್ತ ನಿಧಾನವಾಗಿ ಸಾಗಿದ. ಸರೋವರದ ಪಶ್ಚಿಮ ದಿಕ್ಕಿನ ಕೊನೆ ತಲುಪಿದಾಗ, ಒಂದು ದೊಡ್ಡ ಹುಣಸೆ ಮರ ಆಲದ ಮರದ ನಡುವಲ್ಲಿ ಬೆಳೆದು ನಿಂತಿರುವದನ್ನು ಗಮನಿಸಿದ. ಅವನಿಗೆ ಪದ್ಯದ ಸಾಲುಗಳನ್ನು ಮತ್ತೆ ನೆನಪಿಗೆ ತಂದುಕೊಂಡ.

ಹುಣಸೆ-ಆಲದ ದ್ವಾರದಿಂದ,
ದಕ್ಷಿಣ ದಿಕ್ಕಿಗೆ ಮೊಗದಿಂದ,

ಅಲ್ಲಿಂದ ದಕ್ಷಿಣ ದಿಕ್ಕಿನಲ್ಲಿ ಸ್ವಲ್ಪ ದೂರ ಸಾಗಲು, ದಟ್ಟ ಕಾಡಿನ ನಡುವೆ ಗೋಪುರವಿದ್ದ ಕಟ್ಟಡವೊಂದನ್ನು ಕಂಡ. ಹತ್ತಿರ ಹೋಗಿ ನೋಡಿದಾಗ ಅದು ಒಂದು ಪಾಳು ಬಿದ್ದ ಗುಡಿಯಾಗಿತ್ತು.   ಮತ್ತು ಅಲ್ಲಿ ಮನುಷ್ಯನ ವಾಸವಿದೆ ಎಂದು ಸೂಚಿಸುವ, ಸ್ವಲ್ಪ ಸಮಯದ ಹಿಂದೆ ಅಲ್ಲಿ ಬೆಂಕಿಯಿಂದಾದ ಬೂದಿ ಕಾಣುತ್ತಿತ್ತು. ಜಾಗರೂಕತೆಯಿಂದ ಹೆಜ್ಜೆ ಹಾಕುತ್ತ, ಮುರುಕು ಬಾಗಿಲಿನಿಂದ ಒಳಗೆ ಇಣುಕಿ ನೋಡಿದರೆ, ಅಲ್ಲಿ ಯಾರೂ ಕಾಣಲಿಲ್ಲ. ಒಂದು ಹೊದ್ದಿಕೆ, ನೀರಿನ ಬಿಂದಿಗೆ ಮತ್ತು ಸನ್ಯಾಸಿಗಳು ಹೆಗಲ ಮೇಲೆ ಧರಿಸುವ ವಸ್ತ್ರ ಮಾತ್ರ ಕಾಣಿಸಿತು. ಸಾಯಂಕಾಲ ಸಮೀಪಿಸುತ್ತಿತ್ತು, ದೂರದಲ್ಲಿದ್ದ ಹಳ್ಳಿಗೆ ಕತ್ತಲಲ್ಲಿ ದಾರಿ ಹುಡುಕಿ ಕೊಂಡು ಹೋಗುವುದು ಕಷ್ಟವಿತ್ತು. ಅಲ್ಲದೆ ಅಲ್ಲಿ ಮನುಷ್ಯ ವಾಸವಿರುವುದು ಕಂಡ ಮೃತ್ಯುಂಜಯ ರಾತ್ರಿ ಅಲ್ಲೇ ಉಳಿದುಕೊಳ್ಳಲು ಯೋಚಿಸಿದ.

ಅಲ್ಲಿ ಬಾಗಿಲಿನ ಹತ್ತಿರ, ಕಟ್ಟಡದ ಅವಶೇಷವಾಗಿ ಬಿದ್ದಿದ್ದ ಉದ್ದನೆಯ ಕಲ್ಲೊಂದರ ಮೇಲೆ ಕುಳಿತು ಆಲೋಚನೆಯಲ್ಲಿ ಮುಳುಗಿದ್ದಾಗ, ಕಲ್ಲಿನ ಮೇಲೆ ಕೆತ್ತಿದ್ದ ಚಿಹ್ನೆಗಳನ್ನು ಆಕಸ್ಮಾತ್ ಆಗಿ ಗಮನಿಸಿದ. ಅವುಗಳ ಹತ್ತಿರ ಹೋಗಿ ನೋಡಲು ಅವುಗಳನ್ನು ಮೊದಲು ಎಲ್ಲೋ ನೋಡಿದ ಹಾಗೆ ಅನ್ನಿಸಿತು. ಅವುಗಳು ಸ್ವಲ್ಪ ಅಳಿಸಿ ಹೋಗಿದ್ದರೂ, ಗುರುತು ಹಿಡಿಯುವಷ್ಟು ಸ್ಪಷ್ಟವಾಗಿದ್ದವು. ಅವು ತಾನು ಕಳೆದುಕೊಂಡ ಕಾಗದದ ಮೇಲಿದ್ದ ಚಿಹ್ನೆಗಳೇ ಆಗಿದ್ದವು. ಕಾಗದವನ್ನು ಸಾಕಷ್ಟು ಸಲ ನೋಡಿದ್ದನಾದ್ದರಿಂದ, ಅದು ಸಂಪೂರ್ಣವಾಗಿ ಅವನ ಮನಸ್ಸಿನ ಮೇಲೆ ಅಚ್ಚೊತ್ತಿದಂತೆ ನೆನಪಿನಲ್ಲಿ ಉಳಿದಿದ್ದವು. ಎಷ್ಟು ಸಲ ತಾನು ಕಾಳಿ ದೇವಿಯ ಮುಂದೆ ಮಧ್ಯರಾತ್ರಿಯಲ್ಲಿ ಗುಡಿಯಲ್ಲಿ ಕುಳಿತು ಬೇಡಿಕೊಂಡಿರಲಿಲ್ಲ, ಚಿಹ್ನೆಗಳ ಹಿಂದಿನ ರಹಸ್ಯ ತಿಳಿಯುವಂತೆ ಕೃಪೆ ತೋರಲು. ಇಂದು ಸದವಕಾಶ ಒದಗಿ ತನ್ನಾಸೆ ಇಡೇರುವ ಸಮಯ ಹತ್ತಿರ ಬಂದಿತೆಂದು ಅವನ ದೇಹ ಕಂಪಿಸಿತು. ಏನಾದರೂ ಪ್ರಮಾದ ಜರುಗಿದಲ್ಲಿ, ತನ್ನಾಸೆಯಲ್ಲ ಮಣ್ಣು ಪಾಲಾಗಬಹುದೆಂಬ ಭಯ ಅವನಲ್ಲಿ ಭಯ ಮೂಡಿತು. ಸನ್ಯಾಸಿ ತನಗಿಂತ ಮುಂಚೆ ರಹಸ್ಯ ನಿಧಿಯನ್ನು ಹುಡುಕಿ ತೆಗೆದರೆ ಹೇಗೆ ಎನ್ನುವ ವಿಚಾರ ಅವನಲ್ಲಿನ ಭಯವನ್ನು ವಿಪರೀತವಾಗಿಸಿತು. ಅವನಿಗೆ ಏನು ಮಾಡಿದರೆ ಸರಿ ಎಂಬ ನಿರ್ಣಯಕ್ಕೆ ಬರಲಿ ಆಗಲಿಲ್ಲ. ತಾನೀಗ ಗುಪ್ತ ನಿಧಿಯ ಮೇಲೆ ಕೂತಿದ್ದರೂ ಆಶ್ಚರ್ಯವಿಲ್ಲ ಎನ್ನುವ ವಿಚಾರ ಅವನಲ್ಲಿ ಮೂಡಿತು. ಅವನು ಕುಳಿತಲ್ಲೇ ಕಾಳಿ ಮಾತೆಯ ಜಪದಲ್ಲಿ ತೊಡಗಿದ. ಸಾಯಂಕಾಲ ಮುಗಿದು, ಕೀಟಗಳ ಸದ್ದಿನೊಂದಿಗೆ ಕತ್ತಲು ದಟ್ಟವಾಗತೊಡಗಿತು.



ಅವನು ಮುಂದೇನು ಮಾಡುವುದು ಎನ್ನುವ ವಿಚಾರದಲ್ಲಿದ್ದಾಗ, ಎಲೆ ಗೊಂಚಲುಗಳ ಮಧ್ಯದಿಂದ ದೂರದಲ್ಲಿ ಬೆಂಕಿ ಮಿನುಗುತ್ತಿದ್ದದ್ದು ಕಂಡು ಬಂತು. ತಾನು ಕುಳಿತಿದ್ದ ಜಾಗದ ಗುರುತು ಮಾಡಿಕೊಂಡು, ಬೆಂಕಿಯ ಬೆಳಕು ಬರುತ್ತಿದ್ದ ದಿಕ್ಕಿನ ಕಡೆಗೆ ಹೋರಟ. ಹತ್ತಿರ ಸಾಗಿ, ಒಂದು ಗಿಡದ ಮರೆಯಿಂದ ನಿಂತು ನೋಡಿದರೆ, ಅಲ್ಲಿ ತಾನು ಹುಡುಕುತ್ತಿದ್ದ ಸನ್ಯಾಸಿ ಕುಳಿತಿರುವುದನ್ನು ಕಂಡ ಮತ್ತು ಅವನ ಕೈಯಲ್ಲಿ ಅವನಿಗೆ ಚಿರ ಪರಿಚಿತವಾದ ಕಾಗದವಿತ್ತು. ಅದನ್ನು ಬಿಡಿಸಿ ಹಿಡಿದುಕೊಂಡು, ಬೆಂಕಿಯ ಬೆಳಕಿನಲ್ಲಿ, ಅದರ ಅರ್ಥವನ್ನು ಶೋಧಿಸುವ ಕಾರ್ಯದಲ್ಲಿ ಸನ್ಯಾಸಿ ಮಗ್ನನಾಗಿದ್ದ. ಕಾಗದ ಮೃತ್ಯುಂಜಯನಿಗೆ ಸೇರಿದ, ಅವನ ಅಜ್ಜನಿಂದ ಅವನ ತಂದೆಗೆ ಮತ್ತು ಅವನ ತಂದೆಯಿಂದ ಮೃತ್ಯುಂಜಯನಿಗೆ ಬಂದ ಕಾಗದವೇ ಆಗಿತ್ತು. ಆದರೆ ಅದು ಇವನ ಕೈಯಲ್ಲಿ, ಎಂಥ ಕಳ್ಳ, ಎಂಥ ಮೋಸಗಾರ ಎಂದುಕೊಂಡ ಮೃತ್ಯುಂಜಯ. ಇದಕ್ಕೆ ಏನೋ ಸನ್ಯಾಸಿ ತನಗೆ ಕಳೆದು ಹೋದದ್ದರ ಬಗ್ಗೆ ಚಿಂತೆ ಮಾಡಬೇಡ ಎಂದು ಹೇಳಿದ್ದು ಅನ್ನಿಸಿತು.

ಸನ್ಯಾಸಿ ಕಾಗದದ ಮೇಲಿರುವ ಚಿನ್ಹೆಗಳ ಅರ್ಥ ಏನಿರಬಹುದು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದ ಮತ್ತು ಆಗಾಗ ತನ್ನ ಕೈಯಲ್ಲಿ ಇದ್ದ ಕೋಲಿಂದ ನೆಲದ ಮೇಲೆ ದೂರವನ್ನು ಅಳೆಯುತ್ತಿದ್ದ. ಕೆಲವು ಸಲ ತನ್ನ ಲೆಕ್ಕಾಚಾರ ಸರಿ ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸುತ್ತ ಮತ್ತೆ ಹೊಸದಾಗಿ ಆರಂಭಿಸುತ್ತಿದ್ದ. ಹೀಗೆಯೇ ರಾತ್ರಿಯೆಲ್ಲ ಕಳೆದು ಹೋಯಿತು. ದಿನದ ಆರಂಭಕ್ಕೆ ಸಜ್ಜಾಗುತ್ತಿರುವಂತೆ, ತಂಪು ಗಾಳಿಯೊಂದಿಗೆ ಎಲೆ ತುಂಬಿದ ಗಿಡದ ಟೊಂಗೆಗಳು ಬೀಸತೊಡಗಿದ ಮೇಲೆ, ಸನ್ಯಾಸಿಯು ಕಾಗದವನ್ನು ಮಡಚಿ ಇಟ್ಟುಕೊಂಡು ಅಲ್ಲಿಂದ ಎದ್ದು ಹೋದ.

ಮೃತ್ಯುಂಜಯ ಗೊಂದಲಕ್ಕೆ ಒಳಗಾದ. ಸನ್ಯಾಸಿಯ ಸಹಾಯವಿಲ್ಲದೆ ಕಾಗದದಲ್ಲಿರುವ ರಹಸ್ಯ ತಿಳಿದುಕೊಳ್ಳಲು ಅವನಿಗೆ ಸಾಧ್ಯವಿದ್ದಿಲ್ಲ. ಆದರೆ ವಿಷಯ ತಿಳಿದ ಮೇಲೆ ಸನ್ಯಾಸಿ ತನಗೆ ಸಹಾಯ ಮಾಡಿಯಾನು ಎಂಬ ಭರವಸೆ ಇರಲಿಲ್ಲ. ಹಾಗಾಗಿ, ರಹಸ್ಯವಾಗಿ ಸನ್ಯಾಸಿಯನ್ನು ಹಿಂಬಾಲಿಸುವುದು ಅವನಿಗೆ ಉಳಿದ ಮಾರ್ಗವಾಗಿತ್ತು. ಆದರೆ ಹಳ್ಳಿಗೆ ಮರಳದ ಹೊರತು ಅವನ ಆಹಾರದ ಸಮಸ್ಯೆ ಬಗೆಹರಿಯುತ್ತಿದ್ದಿಲ್ಲ. ಮೃತ್ಯುಂಜಯ ಅದೇ ದಿನ ಬೆಳಿಗ್ಗೆ ಹಳ್ಳಿಗೆ ಹೋಗುವುದಾಗಿ ತೀರ್ಮಾನಿಸಿದ.

ಸಾಕಷ್ಟು ಬೆಳಕಾದ ಮೇಲೆ ತಾನು ಅಡಗಿದ್ದ ಮರದ ಮರೆಯಿಂದ ಹೊರ ಬಂದು, ಸನ್ಯಾಸಿ  ಕುಳಿತಿದ್ದ ಜಾಗದ ಹತ್ತಿರ ಬಂದು ಗಮನಿಸಿದ. ಅವನು ನೆಲದ ಮೇಲೆ ಮೂಡಿಸಿದ್ದ ಚಿನ್ಹೆಗಳ ತಲೆ ಬುಡ ಒಂದೂ ಗೊತ್ತಾಗಲಿಲ್ಲ. ಅಲ್ಲದೆ ಅಷ್ಟು ಸುತ್ತಾಡಿದ ನಂತರವೂ, ಅವನಿಗೆ ಭಾಗದ ಅರಣ್ಯ ಬೇರೆ ಭಾಗಗಳಿಂತ ವಿಭಿನ್ನ ಎನೂ ಅನಿಸಲಿಲ್ಲ.

ಸೂರ್ಯನ ಪ್ರಖರ ಕಿರಣಗಳು ದಟ್ಟ ಮರಗಳನ್ನು ತೂರಿಕೊಂಡು ಬರುವ ಹೊತ್ತಿಗೆ, ಮೃತ್ಯುಂಜಯ ಹಳ್ಳಿಯ ದಾರಿ ಹಿಡಿದು ಹೊರಟ. ಸನ್ಯಾಸಿ ಅವನನ್ನು ನೋಡಿಯಾನು ಭಯ ಅವನನ್ನು ತುಂಬ ಎಚ್ಚರಿಕೆಯಿಂದ ಸಾಗುವಂತೆ ಮಾಡಿತ್ತು. ದಿನ ಬೆಳಿಗ್ಗೆ ಅವನು ಉಳಿದುಕೊಂಡಿದ್ದ ಜಾಗದಲ್ಲಿ, ಬ್ರಾಹ್ಮಣರಿಗೆ ಹಬ್ಬದೂಟದ ಏರ್ಪಾಡು ಆಗಿತ್ತು. ಸರಿಯಾಗಿ ಹಸಿದಿದ್ದ ಮೃತ್ಯುಂಜಯ, ಹೊಟ್ಟೆ ತುಂಬಾ ಊಟ ಮಾಡಿ, ಅಲ್ಲಿ ಚಾಪೆಯ ಮೇಲೆ ಉರುಳಿ, ಗಾಢ ನಿದ್ರೆಯ ವಶವಾದ. ಬೆಳಿಗ್ಗೆ ಊಟ ಮುಗಿಸಿ, ಮಧ್ಯಾಹ್ನದ ವೇಳೆಗೆಲ್ಲ ಹಿಂತಿರುಗುವ ಯೋಜನೆ ಹಾಕಿಕೊಂಡಿದ್ದ ಮೃತ್ಯುಂಜಯನಿಗೆ ಆಗಿದ್ದೆಲ್ಲ ತಿರುವು ಮುರುವು. ಅವನು ಎದ್ದಾಗೆಲ್ಲ ಸೂರ್ಯಾಸ್ತವಾಗಿತ್ತು. ಕತ್ತಲಾಗುತ್ತಿದ್ದರೂ, ಕಾಡಿನತ್ತ ಕಾಲು ಸಾಗುವುದನ್ನು ನಿಗ್ರಹಿಸಲು ಆಗಲಿಲ್ಲ. ರಾತ್ರಿ ಆದಂತೆಲ್ಲ ಗಾಢ ಅಂಧಕಾರ ಕವಿದು, ದಟ್ಟ ಅಡವಿಯಲ್ಲಿ ಅವನಿಗೆ ದಾರಿ ಕಾಣದಂತಾಯಿತು. ತಾನು ಯಾವ ದಾರಿಯಲ್ಲಿ ಹೊರಟಿದ್ದೇನೆ ಎನ್ನುವುದು ಅವನಿಗೇ ತಿಳಿಯಲಿಲ್ಲ. ಬೆಳಕು ಹರಿದ ನಂತರ ತಾನು ಹಳ್ಳಿಯ ಸುತ್ತ ತಿರುಗಿರುವುದು ಬಂತು. ಅಲ್ಲಿನ ಕಾಗೆಗಳು ಕೇಳಲು ಅಹಿತ ಎನ್ನಿಸುವ ಕಿರುಚಾಟ, ಮೃತ್ಯುಂಜಯನಿಗೆ ಅವು ತನನ್ನು ಅಣಕಿಸಿದಂತೆ ಅನ್ನಿಸಿತು.



ಸಾಕಷ್ಟು ತಪ್ಪು ಲೆಕ್ಕಗಳು ಮತ್ತು ಅವುಗಳ ತಿದ್ದುಪಡಿಯ ನಂತರ ಸನ್ಯಾಸಿಯು, ಸ್ವಲ್ಪ ದೂರದಲ್ಲಿ ಒಂದು ಸುರಂಗ ಮಾರ್ಗದ ದಾರಿಯಿರುವುದನ್ನು ಗುರುತಿಸಿದನು. ಕೈಯಲ್ಲಿ ಪಂಜು ಇಡಿದು ಅದರ ಹೊಳ ಹೊಕ್ಕನು. ಇಟ್ಟಿಗೆಯಿಂದ ಕಟ್ಟಿದ ಗೋಡೆಗಳು ಪಾಚಿಗಟ್ಟಿದ್ದವು ಮತ್ತು ಗೋಡೆಯಲ್ಲಿ ಬಿಟ್ಟ ಬಿರುಕುಗಳಿಂದ ನೀರು ಒಸರುತ್ತಿತ್ತು. ಕೆಲವು ಜಾಗದಲ್ಲಿ ಕಪ್ಪೆಗಳ ಗುಡ್ಡೆ-ರಾಶಿಯಾಗಿ ಕುಳಿತಿದ್ದವು. ಜಾರುತ್ತಿದ್ದ ಕಲ್ಲುಗಳ ಮೇಲೆ ಸಾಗುತ್ತ ಸನ್ಯಾಸಿ ಒಂದು ಅಡ್ಡ ಗೋಡೆಯನ್ನು ತಲುಪಿದನು. ಕಬ್ಬಿಣದ ಹಾರೆಯೊಂದರಿಂದ ಆ ಗೋಡೆಗೆ ಹೊಡೆದು, ಎಲ್ಲಿಂದಾದರೂ ಪೊಳ್ಳು ಜಾಗದಲ್ಲಿ ಬರುವಂತ ಶಬ್ದ ಬರುತ್ತಿದೆಯೇ ಎಂದು ಗಮನಿಸಿದನು. ಆದರೆ ಆ ಸುರಂಗ ಅಲ್ಲಿಗೇ ಮುಗಿಯಿತು ಎನ್ನುವದರಲ್ಲಿ ಯಾವುದೇ ಅನುಮಾನ ಉಳಿಯಲಿಲ್ಲ.

ಸನ್ಯಾಸಿಯು ಅಂದಿನ ಇಡೀ ರಾತ್ರಿಯನ್ನು ಮತ್ತೆ ಆ ರಹಸ್ಯ ಕಾಗದ ಅಧ್ಯಯನದಲ್ಲಿ ಕಳೆದನು. ತನ್ನ ಎಲ್ಲ ಲೆಕ್ಕಾಚಾರಗಳು ತಾಳೆಯಾದ ನಂತರ, ಬೆಳಿಗ್ಗೆ ಹೊತ್ತಿಗೆ ಮತ್ತೆ ಸುರಂಗ ಮಾರ್ಗವನ್ನು ಹೊಕ್ಕನು. ಈ ಸಲ, ಜಾಗರೂಕತೆಯಿಂದ ಆ ಕಾಗದದಲ್ಲಿನ ಎಲ್ಲ ಸೂಚನೆಗಳನ್ನು ಅನುಸರಿಸುತ್ತ, ಒಂದು ಜಾಗದಲ್ಲಿ ನಿಂತು, ಅಲ್ಲಿನ ಗೋಡೆಯಿಂದ ಕಲ್ಲನ್ನು ಸರಿಸಿದನು ಮತ್ತು ಅಲ್ಲಿ ಒಂದು ತಿರುವಿಗೆ ದಾರಿಯಿರುವುದನ್ನು ಕಂಡನು. ಆ ದಾರಿ ಹಿಡಿದು ಹೋದಾಗ ಮತ್ತೆ ಒಂದು ಅಡ್ಡ ಗೋಡೆ ಎದುರಾಗಿ ಅವನ ಪ್ರಯತ್ನಕ್ಕೆ ಅಡ್ಡಗಾಲಾಯಿತು.

ಹೀಗೆ ಐದು ರಾತ್ರಿಗಳು ಕಳೆದ ನಂತರ, ಸನ್ಯಾಸಿಯು ಸುರಂಗ ಮಾರ್ಗ ಪ್ರವೇಶ ಮಾಡಿದ ನಂತರ ಉದ್ಗರಿಸಿದನು "ಇಂದು ನಾನು ದಾರಿಯನ್ನು ಕಂಡು ಹಿಡಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ"

ಆ ಮಾರ್ಗವು ಒಂದು ಚಕ್ರವ್ಯೂಹದಂತಿತ್ತು. ಅಲ್ಲಿನ ತಿರುವು ಮತ್ತು ಕವಲುಗಳಿಗೆ ಕೊನೆಯೇ ಇದ್ದಿಲ್ಲ. ಕೆಲವು ಜಾಗಗಳಲ್ಲಿ ದಾರಿಯು ಇಕ್ಕಟ್ಟಾಗಿ, ತೆವಳುತ್ತ ಸಾಗಬೇಕಾಗಿತ್ತು. ಆ ದಾರಿಯಲ್ಲಿ ಜಾಗರೂಕತೆಯಿಂದ ಸಾಗಿ ಬಂದ ಸನ್ಯಾಸಿ ಕೊನೆಗೆ ವೃತ್ತಕಾರದಲ್ಲಿದ್ದ ಒಂದು ಕೋಣೆಗೆ ಬಂದು ತಲುಪಿದನು. ಅದರ ಮಧ್ಯದಲ್ಲಿ ಒಂದು ಸದೃಢವಾದ, ಕಲ್ಲಿನ ಗೋಡೆಯಿದ್ದ ಭಾವಿ ಇತ್ತು. ಸನ್ಯಾಸಿಗೆ ತನ್ನ ಪಂಜಿನ ಬೆಳಕಿನಲ್ಲಿ ಆ ಭಾವಿ ಎಷ್ಟು ಆಳ ಇದೆ ನೋಡಲು ಸಾಧ್ಯವಾಗಲಿಲ್ಲ. ಆದರೆ ಛಾವಣಿಯಿಂದ ಇಳಿ ಬಿದ್ದ ಒಂದು ಕಬ್ಬಿಣದ ಸರಪಳಿಯನ್ನು ಕಂಡನು. ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಸನ್ಯಾಸಿ ಅದನ್ನು ಜಗ್ಗಿದ ಆದರೆ ಅದು ಸ್ವಲ್ಪ ಮಾತ್ರವೇ ಜರುಗಿತು. ಆದರೆ ಭಾವಿಯ ಆಳದಲ್ಲಿ ಲೋಹದ ಬಡಿತದಿಂದ ಉಂಟಾದ ಶಬ್ದ ಆ ಮಬ್ಬುಗತ್ತಲಿನ ಕೋಣೆಯಲ್ಲೆಲ್ಲ ಪ್ರತಿಧ್ವನಿಸಿತು. ಅದರಿಂದ ಉತ್ತೇಜಿತನಾದ ಸನ್ಯಾಸಿ "ಕೊನೆಗೂ ನಾನು ಇದನ್ನು ಕಂಡು ಹಿಡಿದೆ" ಎಂದು ಘೋಷಿಸಿದನು. ಮರು ಕ್ಷಣ ಅವನು ಬಂದ ದಾರಿಯಿಂದ ಬಂಡೆಗಲ್ಲೊಂದು ಉರುಳಿ ಬಂತು. ಅದರ ಹಿಂದೆಯೇ ಯಾರೋ ದೊಡ್ಡ ದನಿಯಲ್ಲಿ ಕೂಗುತ್ತ ಜಾರಿ ಬಿದ್ದ ಶಬ್ದ ಕೇಳಿ ಬಂತು. ಹಠತ್ತಾನೆ ಕೇಳಿ ಬಂದ ಈ ಶಬ್ದಕ್ಕೆ ಬೆದರಿದ ಸನ್ಯಾಸಿಯ ಕೈಯಿಂದ ಪಂಜು ಜಾರಿ ಬಿದ್ದು ಕೊಣೆಯಲ್ಲೆಲ್ಲ ಕತ್ತಲು ಕವಿಯಿತು.



ಸನ್ಯಾಸಿ ಕೂಗಿ ನೋಡಿದ "ಯಾರಲ್ಲಿ?", ಆದರೆ ಯಾವುದೇ ಉತ್ತರ ಬರಲಿಲ್ಲ. ತನ್ನ ಕೈಯಿಂದ ತಡಕಾಡುತ್ತಿದ್ದಾಗ, ಒಂದು ಮನುಷ್ಯ ದೇಹದ ಸ್ಪರ್ಶ ಅನುಭವಕ್ಕೆ ಬಂತು. ಅದನ್ನು ಅಲ್ಲಾಡಿಸುತ್ತ ಕೇಳಿದ "ಯಾರು ನೀನು?" ಮತ್ತೆ ಉತ್ತರ ಬರಲಿಲ್ಲ. ಬಿದ್ದಿದ್ದ ಆ ಮನುಷ್ಯನಿಗೆ ಪ್ರಜ್ಞೆ ತಪ್ಪಿತ್ತು.
ಪಂಜನ್ನು ಮತ್ತೆ ಹುಡುಕಿ ಅದನ್ನು ಹೊತ್ತಿಸಿದ ಸನ್ಯಾಸಿಗೆ, ಬಿದ್ದ ಮನುಷ್ಯನಿಗೆ ಪ್ರಜ್ಞೆ ಮರಳುತ್ತಿರುವುದು ಕಾಣಿಸಿತು. ಅವನು ನೋವಿನಿಂದ ನರಳುತ್ತ, ಎದ್ದು ಕೂಡಲು ಪ್ರಯತ್ನಿಸುತ್ತಿದ್ದ. ಅವನನ್ನು ನೋಡಿದ ಸನ್ಯಾಸಿ ಆಶ್ಚರ್ಯದಿಂದ ಉದ್ಗರಿಸಿದ "ನೀನು ಮೃತ್ಯುಂಜಯ. ಇಲ್ಲೇನು ಮಾಡುತ್ತಿರುವೆ?"
ಮೃತ್ಯುಂಜಯ ಉತ್ತರಿಸಿದ "ಸ್ವಾಮಿ, ನನ್ನನ್ನು ಕ್ಷಮಿಸಿ. ನಾನು ನಿಮ್ಮ ಮೇಲೆ ಕಲ್ಲು ಉರುಳಿಸಲು ಪ್ರಯತ್ನಿಸುತ್ತಿರುವಾಗ, ಕಾಲು ಜಾರಿ ಕೆಳಗೆ ಬಿದ್ದೆ. ಬಹುಶ ನನ್ನ ಕಾಲು ಮುರಿದಿರಬೇಕು"

ಸನ್ಯಾಸಿ ಕೇಳಿದ "ನನ್ನನ್ನು ಸಾಯಿಸಿದರೆ ನಿನಗೆ ದೊರಕುವ ಭಾಗ್ಯವೇನಿತ್ತು?"

ಮೃತ್ಯುಂಜಯ ಹೇಳಿದ "ಏನು ಒಳ್ಳೆಯದು! ನೀನು ಯಾಕೆ ನಾನು ಗುಡಿಯಲ್ಲಿಟ್ಟಿದ್ದ ರಹಸ್ಯ ಕಾಗದವನ್ನು ಕದ್ದೆ? ಆ ಭೂಗತ ಪ್ರದೇಶದಲ್ಲಿ ಏನು ಮಾಡುತ್ತಿರುವೆ? ನೀನೊಬ್ಬ ಕಳ್ಳ, ಮೋಸಗಾರ. ನನ್ನ ಅಜ್ಜನಿಗೆ ಆ ಕಾಗದ ಕೊಟ್ಟ ಸನ್ಯಾಸಿ ಹೇಳಿದ್ದು ನಮ್ಮ ಕುಟುಂಬದವರಿಗೆ ಮಾತ್ರ ಆ ರಹಸ್ಯ ಭೇಧಿಸಲು ಸಾಧ್ಯ ಎಂದು. ಆ ರಹಸ್ಯ ನನ್ನಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿ ಮತ್ತು ಅದರ ಮೇಲಿನ ಹಕ್ಕು ನನ್ನದು. ಹೀಗಾಗಿ ನಿನ್ನನ್ನು ಹಗಲು ರಾತ್ರಿಯೆನ್ನದೇ, ನೆರಳಿನಂತೆ ಹಿಂಬಾಲಿಸಿದೆ. ನಾನು ಎಷ್ಟೋ ದಿನಗಳಿಂದ ಸರಿಯಾಗಿ ಊಟ, ನಿದ್ದೆ ಕೂಡ ಮಾಡಿಲ್ಲ. ನೀನು ಇಂದು 'ಕಂಡು ಹಿಡಿದೆ' ಎಂದು ಕೂಗಿದಾಗ, ನನಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ನಾನು ನಿನ್ನ ಹಿಂಬಾಲಿಸಿ ಬಂದು ಗೋಡೆಯ ಹಿಂದೆ ಅವಿತುಕೊಂಡಿದ್ದೆ. ನಿನ್ನನ್ನು ಸಾಯಿಸಲು ಪ್ರಯತ್ನಿಸಿದೆ. ನನಗೆ ಶಕ್ತಿ ಸಾಲದೇ, ಅಲ್ಲದೆ ನಾನು ಕಾಲು ಜಾರಿ ಬಿದ್ದಿದ್ದದ್ದರಿಂದ ನನ್ನ ಪ್ರಯತ್ನ ವಿಫಲವಾಯಿತು. ನೀನೀಗ ನನ್ನನ್ನು ಸಾಯಿಸಬಹುದು ಆದರೆ ನಾನು ಪ್ರೇತಾತ್ಮವಾಗಿ ಈ ನನ್ನ ಸಂಪತ್ತಿನ ಕಾವಲು ಕಾಯುತ್ತೇನೆ. ನಾನು ಬದುಕಿದರೆ ನಿನಗೆ ಇದನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಎಂದಿಗೂ ಸಾಧ್ಯವಿಲ್ಲ! ಅಷ್ಟಕ್ಕೂ ನೀನು ಪ್ರಯತ್ನ ಪಟ್ಟರೆ, ನಾನು ಈ ಭಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ನಿನಗೆ ಬ್ರಾಹ್ಮಣನ ಶಾಪವನ್ನು ತಟ್ಟುವಂತೆ ಮಾಡುತ್ತೇನೆ. ನಿನಗೆ ಈ ಸಂಪತ್ತನ್ನು ಎಂದಿಗೂ ಸಂತೋಷದಿಂದ ಅನುಭವಿಸಲು ಸಾಧ್ಯವಿಲ್ಲ. ನನ್ನ ತಂದೆ ಮತ್ತು ಅವರ ತಂದೆ ಈ ಸಂಪತ್ತನ್ನು ಬಿಟ್ಟು ಬೇರೆ ಯಾವ ವಿಚಾರ ಮಾಡಲಿಲ್ಲ ಮತ್ತು ಅದರ ಚಿಂತೆಯಲ್ಲೇ ಪ್ರಾಣ ಬಿಟ್ಟರು. ಈ ನಿಧಿಗೊಸ್ಕರ ನಮ್ಮ ಕುಟುಂಬ ಬಡತನದಲ್ಲಿ ಬದುಕ ಬೇಕಾಗಿದೆ. ಇದರ ಹುಡುಕಾಟದಲ್ಲಿ, ನಾನು ಹೆಂಡತಿ, ಮಕ್ಕಳನ್ನು ಬಿಟ್ಟು, ಸರಿಯಾದ ಊಟ ನಿದ್ದೆ ಇಲ್ಲದೆ, ಒಂದೂರಿನಿಂದ ಇನ್ನೊಂದು ಊರಿಗೆ ಹುಚ್ಚನಂತೆ ಅಲೆದಿದ್ದೇನೆ. ನಾನು ಈ ನಿಧಿಯನ್ನು ನನ್ನಿಂದ ಕಸಿದುಕೊಳ್ಳಲು, ನನಗೆ ನೋಡಲು ಕಣ್ಣಿರುವುವರೆಗೆ ಯಾರಿಗೂ ಬಿಡುವುದಿಲ್ಲ."



ಸನ್ಯಾಸಿ ಶಾಂತ ಧ್ವನಿಯಲ್ಲಿ ಹೇಳಿದ "ಮೃತ್ಯುಂಜಯ, ನಾನು ಹೇಳುವ ಮಾತನ್ನು ಕೇಳು. ನಾನು ನಿನಗೆ ಎಲ್ಲ ವಿಷಯ ತಿಳಿಸುತ್ತೇನೆ. ನಿನ್ನ ಅಜ್ಜನಿಗೆ ಒಬ್ಬ ಶಂಕರ ಎನ್ನುವ ಹೆಸರಿನ ಒಬ್ಬ ತಮ್ಮನಿದ್ದ ವಿಚಾರ ನಿನಗೆ ನೆನಪಿದೆಯೇ?"

"ಹೌದು" ಉತ್ತರಿಸಿದ ಮೃತ್ಯುಂಜಯ, "ಅವನು ಮನೆ ಬಿಟ್ಟು ಹೋದ ನಂತರ ಅವನ ವಿಚಾರ ಯಾರೂ ಕೇಳಿ ತಿಳಿಯರು"

"ಸರಿ" ಸನ್ಯಾಸಿ ಹೇಳಿದ "ನಾನೇ ಆ ಶಂಕರ"

ಅದನ್ನು ಕೇಳಿದ ಮೃತ್ಯುಂಜಯ ಹತಾಶನಾದ. ಅಲ್ಲಿಯವರೆಗೆ ಅವನು ಆ ಗುಪ್ತ ನಿಧಿಯ ಏಕೈಕ ವಾರಸುದಾರ ತಾನು ಎಂದುಕೊಂಡಿದ್ದ. ಈಗ ಬಂಧುವೊಬ್ಬ ಅದರ ಮೇಲೆ ಸಮನಾದ ಹಕ್ಕು ಸಾಬೀತು ಪಡಿಸಿದ್ದು ನೋಡಿ, ಅವನಿಗೆ ತನ್ನ ಹಕ್ಕು ಸಾಧನೆ ಸಂಪೂರ್ಣ ನಾಶವಾಯಿತು ಎನ್ನಿಸಿತು.
ಶಂಕರ ಮುಂದುವರೆಸಿದ "ನನ್ನ ಅಣ್ಣ, ಸನ್ಯಾಸಿ ಆ ಕಾಗದ ಕೊಟ್ಟ ಕ್ಷಣದಿಂದ ಅದನ್ನು ನನ್ನಿಂದ ಮುಚ್ಚಿಡಲು ಪ್ರಯತ್ನ ಪಟ್ಟ. ಆತನ ಪ್ರಯತ್ನಗಳು ತೀವ್ರವಾದಂತೆಲ್ಲ, ನನ್ನ ಕುತೂಹಲವೂ ಬೆಳೆಯುತ್ತ ಹೋಯಿತು. ಆತ ಅದನ್ನು ಕಾಳಿ ವಿಗ್ರಹದ ಕೆಳಗೆ ಬಚ್ಚಿಟ್ಟುರುವುದನ್ನು ಪತ್ತೆ ಹಚ್ಚಿದೆ. ಆ ಪೆಟ್ಟಿಗೆಯ ಬೀಗವನ್ನು ನಕಲಿ ಕೀಲಿಯಿಂದ ತೆಗೆದು, ಅವಕಾಶ ಸಿಕ್ಕಾಗಲೆಲ್ಲಾ, ಆ ಕಾಗದದ ಇನ್ನೊಂದು ಪ್ರತಿಯನ್ನು ಮಾಡುತ್ತ ಬಂದೆ. ಅದು ಸಂಪೂರ್ಣವಾದ ದಿನ, ನಾನು ನಿಧುಯ ಶೋಧನೆಗಾಗಿ ಮನೆಯನ್ನು ಬಿಟ್ಟು ಹೊರಟೆ. ನಾನು ಬಿಟ್ಟು ಹೋದ ನನ್ನ ಹೆಂಡತಿ ಮತ್ತು ನನ್ನ ಒಂದೇ ಮಗು ಇಂದು ಜೀವಂತ ಉಳಿದಿಲ್ಲ. ನಾನು ಎಲ್ಲೆಲ್ಲಿ ಅಲೆದೆ ಎಂದು ಹೇಳುವ ಅವಶ್ಯಕತೆಯಿಲ್ಲ. ಆ ರಹಸ್ಯ ಕಾಗದದಲ್ಲಿ ಹೇಳಿದ ಜಾಗದ ಗುರುತು ಇನ್ನೊಬ್ಬ ಸನ್ಯಾಸಿಗೆ ಗೊತ್ತಾಗಬಹುದು ಎನ್ನುವ ಉದ್ದೇಶದಿಂದ ಸನ್ಯಾಸಿಗಳ ಸೇವೆಯಲ್ಲಿ ತೊಡಗಿದೆ. ಆದರೆ ಅವರಲ್ಲಿ ಸಾಕಷ್ಟು ಜನ ಸನ್ಯಾಸಿಯ ವೇಷದಲ್ಲಿದ್ದ ಠಕ್ಕರು, ಅವರು ಆ ಕಾಗದವನ್ನು ನನ್ನಿಂದ ಕದಿಯಲು ನೋಡಿದರು. ಇದೇ ರೀತಿ ಸಾಕಷ್ಟು ವರ್ಷಗಳು ಕಳೆದು ಹೋದವು, ಆದರೆ ನನಗೆ ಶಾಂತಿ, ನೆಮ್ಮದಿ ಒಂದು ಕ್ಷಣವೂ ದೊರಕಲಿಲ್ಲ".

ಕೊನೆಗೆ, ನನ್ನ ಹಿಂದಿನ ಜನ್ಮದ ಪುಣ್ಯದ ಫಲವೋ ಏನೋ, ನನಗೆ ಸ್ವಾಮಿ ರೂಪಾನಂದ ದರ್ಶನ ಭಾಗ್ಯ ಸಿಕ್ಕಿತು. ಅವರು ನನಗೆ ಹೇಳಿದರು "ಮಗೂ, ಆಸೆಯನ್ನು ತೊಡೆದು ಹಾಕು. ನಾಶ ಮಾಡಲು ಸಾಧ್ಯವಾಗದಂಥ ಸಂಪತ್ತು ನಿನ್ನದಾಗುವುದು"

"ಅವರು ನನ್ನ ಮನದಲ್ಲಿ ಕಾಡುತ್ತಿದ್ದ ಜ್ವರಕ್ಕೆ ಉಪಶಮನ ನೀಡಿದರು. ಅವರ ದಯೆಯಿಂದ, ಆಕಾಶದಲ್ಲಿನ ಬೆಳಕು ಮತ್ತು  ಭೂಮಿಯ ಮೇಲಿನ ಹಸಿರು, ರಾಜರು ಹೊಂದಿರಬಹುದಾಗಿದ್ದ ಸಂಪತ್ತಿಗೆ ಸಮ ಎನ್ನಿಸುವ ಭಾವನೆ ಮೂಡಿತು. ಚಳಿಗಾಲದಲ್ಲಿ ಒಂದು ದಿನ, ಬೆಟ್ಟದ ತಪ್ಪಲಿನಲ್ಲಿ ಹಚ್ಚಿದ್ದ ಬೆಂಕಿಯ ಕುಲುಮೆಗೆ ಆ ಕಾಗದವನ್ನು ಅರ್ಪಿಸಿ ಬಿಟ್ಟೆ. ಅದನ್ನು ನೋಡಿ ಸ್ವಾಮಿಗಳು ನಸು ನಕ್ಕರು. ಆ ಕ್ಷಣಕ್ಕೆ ನನಗೆ ನಗೆಯ ಮರ್ಮದ ಅರಿವಾಗಲಿಲ್ಲ. ಆದರೆ ಇಂದಿಗೆ ಅರ್ಥವಾಗಿದೆ. ಕಾಗದವನ್ನು ಸುಟ್ಟಷ್ಟು ಸುಲಭವಾಗಿ, ಮನಸ್ಸಿನ ಆಸೆಗಳನ್ನು ಸುಡುವುದು ಸಾಧ್ಯವಿಲ್ಲ ಎನ್ನುವುದು ಅವರ ವಿಚಾರವಾಗಿತ್ತು.”

"ಆ ಕಾಗದದ ಯಾವುದೇ ಸಣ್ಣ ತುಣುಕು ನನ್ನಲ್ಲಿ ಉಳಿಯದಿದ್ದ ಮೇಲೆ, ನನಗೆ ಸ್ವತಂತ್ರನಾದ ಸಂತೋಷ ನನ್ನ ಹೃದಯಲ್ಲಿ ತುಂಬಿತು. ವೈರಾಗ್ಯದ ನಿಜ ಅರ್ಥ ನನ್ನ ಮನಸ್ಸು ಕಂಡುಕೊಂಡಿತ್ತು. ನನಗೆ ನಾನೇ ಹೇಳಿಕೊಂಡೆ. ನನಗೆ ಇನ್ನು ಯಾವುದೇ ಭಯವೂ ಇಲ್ಲ, ಆಸೆಯೂ ಇಲ್ಲ."

ಅದಾದ ನಂತರ ನಾನು ಸ್ವಾಮಿಗಳಿಂದ ಬೇರ್ಪಟ್ಟೆ. ಅವರನ್ನು ಹುಡುಕಲು ಮತ್ತೆ ಪ್ರಯತ್ನ ಪಟ್ಟರೂ ಅವರ ದರ್ಶನ ಸಿಗಲಿಲ್ಲ. ಅಲ್ಲಿಂದ ನಾನು ಸನ್ಯಾಸಿಯಂತೆ, ಜಗತ್ತಿನ ಲೌಕಿಕಗಳಿಂದ ದೂರ ಸಾಗಿ ಅಲೆಯತೊಡಗಿದೆ. ಎಷ್ಟೋ ವರ್ಷಗಳು ಕಳೆದು ಹೋದವು. ಆ ಕಾಗದದ ಸಮಾಚಾರವನ್ನು ಮರೆತು ಬಿಟ್ಟಿದ್ದೆ. ಒಂದು ದಿನ ಈ ಧಾರಪುರದ ಪಾಳು ಗುಡಿಯಲ್ಲಿ ಉಳಿದುಕೊಂಡೆ. ಅಲ್ಲಿನ ಗೋಡೆಯ ಮೇಲೆ ಕೆಲವು ಕೆತ್ತನೆಗಳನ್ನು ನೋಡಿದಾಗ, ಅವುಗಳನ್ನು ಗುರುತು ಹಿಡಿದೆ. ನಾನು ಹಿಂದೆ ಹುಡುಕಲು ಪ್ರಯತ್ನ ಪಟ್ಟ ರಹಸ್ಯಕ್ಕೆ ಇಲ್ಲಿ ಸುಳಿವು ಸಿಕ್ಕಂತಾಯಿತು. ನನಗೆ ನಾನು ಹೇಳಿಕೊಂಡೆ "ನಾನು ಇನ್ನು ಇಲ್ಲಿ ಇರಬಾರದು. ಈ ಕಾಡನ್ನು ಬಿಟ್ಟು ಮುಂದೆ ಸಾಗಬೇಕು".

"ಆದರೆ ನಾನು ಇಲ್ಲಿಂದ ಹೋಗಲಿಲ್ಲ. ನಾನು ನನ್ನ ಕುತೂಹಲ ತಣಿಸಿ ಕೊಳ್ಳುವುದಕ್ಕಾಗಿ, ಇಲ್ಲಿ ಇರುವುದನ್ನು ಹುಡುಕಿ ತೆಗೆದರೆ ಯಾವ ಅಪಾಯವೂ ಇಲ್ಲ ಎಂದುಕೊಂಡೆ. ಆ ಚಿಹ್ನೆಗಳನ್ನು ಅಭ್ಯಸಿಸಿದೆ. ಆದರೆ ಏನೂ ತಿಳಿಯಲಿಲ್ಲ. ನಾನು ಸುಟ್ಟು ಹಾಕಿದ ಕಾಗದದ ವಿಚಾರದಲ್ಲಿ ತೊಡಗಿದೆ. ನಾನೇಕೆ ಅದನ್ನು ನಾಶ ಮಾಡಿದೆ? ಅದನ್ನು ನನ್ನ ಹತ್ತಿರ ಉಳಿಸಿ ಕೊಂಡಿದ್ದರೆ, ಅದು ಏನು ಹಾನಿ ಮಾಡುತ್ತಿತ್ತು?"

ನಾನು ಮತ್ತೆ ಹುಟ್ಟಿ ಬೆಳೆದ ಹಳ್ಳಿಗೆ ಹಿಂತಿರುಗಿದೆ. ಅಲ್ಲಿ ನನ್ನ ಪೂರ್ವಜರ ಕುಟುಂಬ ಶೋಚನೀಯ ಸ್ಥಿತಿಯಲ್ಲಿರುವುದನ್ನು ಗಮನಿಸಿದೆ. ನನಗಲ್ಲದಿದ್ದರೂ, ನನ್ನ ಈ ಬಡ ಬಂಧುಗಳ ಕಲ್ಯಾಣಕ್ಕಾಗಿ ಆ ಗುಪ್ತ ನಿಧಿಯನ್ನು ಹುಡುಕಿ ತೆಗೆಯಬೇಕೆನ್ನುವ ನಿರ್ಧಾರಕ್ಕೆ ಬಂದೆ. ನನಗೆ ಆ ರಹಸ್ಯ ಕಾಗದ ಎಲ್ಲ್ಲಿದೆ ಎನ್ನುವ ವಿಷಯ ತಿಳಿದಿತ್ತು. ಅದನ್ನು ಕದ್ದು ತರಲು ನನಗೆ ಎನೂ ಕಷ್ಟವಾಗಲಿಲ್ಲ."

ಈಗ ಒಂದು ವರ್ಷದಿಂದ, ನಾನು ಈ ಕಾಡಿನಲ್ಲಿ ಒಬ್ಬಂಟಿಯಾಗಿ, ಆ ಕಾಗದದಲ್ಲಿನ ರಹಸ್ಯದ ಸುಳಿವಿಗೆ ಹುಡುಕುತ್ತಿದ್ದೇನೆ. ಅದನ್ನು ಬಿಟ್ಟು ನನಗೆ ಬೇರೆ ಯಾವ ವಿಚಾರ ಮಾಡಲು ಸಾಧ್ಯವಾಗಿಲ್ಲ. ಅದರಿಂದ ದೂರ ಹೋಗಲು ಪ್ರಯತ್ನ ಪಟ್ಟಷ್ಟು ಅದು ನನ್ನನ್ನು ಸೆಳೆಯುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ನಾನು ಹುಚ್ಚನಂತೆ ಪ್ರಯತ್ನಿಸುತ್ತಿದ್ದೇನೆ.

ನೀನು ನನ್ನನ್ನು ಯಾವಾಗ ನೋಡಿದಿ ಎನ್ನುವ ವಿಷಯ ನನಗೆ ತಿಳಿಯದು. ನಾನು ಸಾಧಾರಣ ಮನುಷ್ಯನ ಮನ ಸ್ಥಿತಿಯಲ್ಲಿದ್ದರೆ ನೀನು ನನ್ನಿಂದ ಅಡಗಿ ಕೊಂಡಿರಲು ಸಾಧ್ಯವಿದ್ದಿಲ್ಲ. ಆದರೆ ಈ ಕೆಲಸದಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದ ನನಗೆ ಹೊರ ಜಗತ್ತಿನ ಆಗು ಹೋಗುಗಳ ಅರಿವೆಯೇ ಇರಲಿಲ್ಲ. ಇವತ್ತಿನವರೆಗೆ ನನಗೆ ನಾನು ಹುಡುಕುತ್ತಿದ್ದದ್ದು ಸಿಕ್ಕಿರಲಿಲ್ಲ. ಇಲ್ಲಿ ಅಡಗಿರುವ ಸಂಪತ್ತು, ಜಗತ್ತಿನ ಯಾವುದೇ ಶ್ರೀಮಂತ ರಾಜನ ಸಂಪತ್ತಿಗಿಂತ ದೊಡ್ಡದು. ಮತ್ತು ಅದನ್ನು ಹುಡುಕಲು ನನಗೆ ಒಂದು ಕೊನೆಯ ಚಿನ್ಹೆಯ ಅರ್ಥ ಗ್ರಹಿಸಬೇಕಿತ್ತು. ಅದರ ರಹಸ್ಯ ತುಂಬಾ ಕಠಿಣವಾದದ್ದು. ಆದರೆ ನನ್ನ ಮನಸ್ಸು ಅದಕ್ಕೆ ಪರಿಹಾರ ಕಂಡು ಕೊಂಡಿತ್ತು. ಹೀಗಾಗಿ ನಾನು ಸಂತೋಷದಲ್ಲಿ ಕಿರುಚಿದೆ "ಅದು ನನಗೆ ಸಿಕ್ಕಿತು" ಎಂದು. ನಾನೀಗ ಮನಸ್ಸು ಮಾಡಿದರೆ, ಒಂದು ಕ್ಷಣದಲ್ಲಿ ರತ್ನ, ಆಭರಣ ತುಂಬಿದ ರಹಸ್ಯ ಕೋಣೆಗೆ ಹೋಗಬಲ್ಲೆ.

ಮೃತ್ಯುಂಜಯ ಶಂಕರನ ಕಾಲಿಗೆ ಬಿದ್ದು ಕೇಳಿಕೊಂಡ "ನೀನು ಒಬ್ಬ ಸನ್ಯಾಸಿ. ನಿನಗೆ ಸಂಪತ್ತಿನಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ನನ್ನನ್ನು ಅಲ್ಲಿಗೆ ಕರೆದು ಕೊಂಡು ಹೋಗು. ಮತ್ತೆ ಮೋಸ ಮಾಡಬೇಡ."

ಶಂಕರ ಉತ್ತರಿಸಿದ “ಇಂದು ನನಗೆ ನನ್ನ ಕೊನೆಯ ಬಂಧನ ಕಳಚಿತು. ನೀನು ನನ್ನನ್ನು ಸಾಯಿಸಲೆಂದು ತಳ್ಳಿದ್ದ ಆ ಬಂಡೆಗಲ್ಲು ನನ್ನ ವ್ಯಾಮೋಹವನ್ನು ನಾಶ ಪಡಿಸಿತು. ಇಂದು ನನಗೆ ಆಸೆ ಎನ್ನುವುದು ಎಂಥ ರಾಕ್ಷಸ ಅನ್ನುವುದರ ಅರಿವಾಗಿದೆ. ಶಾಂತ ಮತ್ತು ವಿಸ್ತಾರದ ಪರಿಧಿಗೆ ಸಿಗದ ನನ್ನ ಸಂತ ಗುರುವಿನ ಮುಗುಳ್ನಗೆ ನನ್ನ ಆತ್ಮದಲ್ಲಿ ಎಂದಿಗೂ ಆರದಂತ ದೀಪ ಹೊತ್ತಿಸಿದೆ.”
ಮೃತ್ಯುಂಜಯ ಮತ್ತೆ ಕರುಣೆ ತೋರಿಸುವಂತೆ ಬೇಡಿಕೊಂಡ "ನೀನು ಬಂಧ ವಿಮುಕ್ತನಾಗಿದ್ದಿಯ. ಆದರೆ ನಾನಲ್ಲ. ನನಗೆ ಯಾವ ಸ್ವಾತಂತ್ರವೂ ಬೇಕಾಗಿಲ್ಲ. ನನ್ನನ್ನು ಈ ಸಂಪತ್ತಿನಿಂದ ದೂರಗೊಳಿಸಬೇಡ"

ಅದಕ್ಕೆ ಸನ್ಯಾಸಿ ಉತ್ತರಿಸಿದ "ಸರಿ ಮಗು. ನಿನ್ನ ಈ ಕಾಗದವನ್ನು ತೆಗೆದುಕೋ. ನಿನಗೆ ಹುಡುಕಲು ಸಾಧ್ಯವಾದಲ್ಲಿ, ಅದು ನಿನ್ನ ಸಂಪತ್ತು". ಕಾಗದವನ್ನು ಮೃತ್ಯುಂಜಯನ ಕೈಯಲ್ಲಿಟ್ಟು ಸನ್ಯಾಸಿ ಅವನನ್ನು ಒಬ್ಬನೇ ಬಿಟ್ಟು ಹೊರ ನಡೆದ. ಮೃತ್ಯುಂಜಯ ಹತಾಶೆಯ ದನಿಯಿಂದ ಕೂಗಿದ "ನನ್ನ ಮೇಲೆ ಕರುಣೆ ತೋರು. ನನ್ನ ಬಿಟ್ಟು ಹೋಗಬೇಡ. ನನಗೆ ದಯವಿಟ್ಟು ಆ ನಿಧಿ ತೋರಿಸು."  ಆದರೆ ಯಾವುದೇ ಉತ್ತರ ಬರಲಿಲ್ಲ.
ಮೃತ್ಯುಂಜಯ ತನ್ನ ದೇಹವನ್ನು ಎಳೆಯುತ್ತ ಒಂದು ಕೋಲಿನ ಸಹಾಯದಿಂದ ಸುರಂಗ ಮಾರ್ಗದಿಂದ ಹೊರಗೆ ದಾರಿ ಹುಡುಕಲು ಯತ್ನಿಸಿದ. ಆದರೆ ತಬ್ಬಿಬ್ಬುಗೊಳಿಸುವಂಥ ಆ ವ್ಯವಸ್ಥೆ, ಅವನನ್ನು ಹೊರಗೆ ಹೋಗಲು ಬಿಡಲಿಲ್ಲ. ಅವನು ಸುಸ್ತಾಗಿ ಅಲ್ಲಿಯೇ ಮಲಗಿ ನಿದ್ರೆ ಹೋದನು. ಮತ್ತೆ ಅವನಿಗೆ ಎಚ್ಚರವಾದಾಗ, ಅದು ದಿನವೋ ರಾತ್ರಿಯೋ ಗೊತ್ತಾಗಲಿಲ್ಲ. ತುಂಬಾ ಹಸಿದಿದ್ದ ಅವನು ತನ್ನ ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡಿದ್ದ ಆಹಾರ ತಿಂದು, ಮತ್ತೆ ದಾರಿಗಾಗಿ ತಡಕಾಡತೊಡಗಿದ. ದಾರಿ ಕಾಣದೇ ಕೂಗಿದ "ಓ, ಸನ್ಯಾಸಿ, ನೀನು ಎಲ್ಲಿದ್ದೀಯ?" ಅವನ ಆರ್ತನಾದ ಆ ಸುರಂಗ ಮಾರ್ಗದ ಚಕ್ರವ್ಯೂಹದಲ್ಲಿ ಪ್ರತಿಧ್ವನಿಸ ತೊಡಗಿತು. ಅದು ನಿಂತಾದ ಮೇಲೆ ಹತ್ತಿರದಲ್ಲಿಯೇ ಕೇಳಿ ಬಂತು "ನಾನು ನಿನ್ನ ಹತ್ತಿರವೇ ಇದ್ದೇನೆ. ನಿನಗೇನೂ ಬೇಕು?"

ಮೃತ್ಯುಂಜಯ ಹೇಳಿದ "ನನ್ನ ಮೇಲೆ ಕರುಣೆ ತೋರು. ನನಗೆ ದಯವಿಟ್ಟು ಆ ನಿಧಿ ತೋರಿಸು". ಅದಕ್ಕೆ ಯಾವ ಉತ್ತರವೂ ಬರಲಿಲ್ಲ. ಮತ್ತೆ ಮತ್ತೆ ಕರೆದರೂ, ನಿಶ್ಯಬ್ದವೇ ಉತ್ತರವಾಯಿತು.

ಸ್ವಲ್ಪ ಹೊತ್ತಿನ ನಂತರ ಮೃತ್ಯುಂಜಯ ತಾನು ಮಲಗಿದ್ದಲ್ಲಿಯೇ ನಿದ್ದೆ ಹೋದ. ಆ ಭೂಗತ ಪ್ರಪಂಚದ ಅಂಧಕಾರದಲ್ಲಿ, ಹಗಲು ರಾತ್ರಿಯ ನಡುವೆ ವ್ಯತ್ಯಾಸವೇ ಎದ್ದ ಇರಲಿಲ್ಲ. ಮತ್ತೆ ಎದ್ದ ನಂತರ, ಆ ಕತ್ತಲಿನಲ್ಲೇ ಬೇಡಿಕೊಂಡ "ಓ, ಸನ್ಯಾಸಿ, ನೀನು ಎಲ್ಲಿದ್ದೀಯ?"  ಹತ್ತಿರದಲ್ಲಿಯೇ ಧ್ವನಿ ಕೇಳಿ ಬಂತು "ನಾನು ನಿನ್ನ ಹತ್ತಿರವೇ ಇದ್ದೇನೆ. ನಿನಗೇನೂ ಬೇಕು?"

ಮೃತ್ಯುಂಜಯ ಉತ್ತರಿಸಿದ "ನನಗೇನೂ ಬೇಡ. ನನ್ನನ್ನು ಈ ಸೆರೆಯಿಂದ ಕಾಪಾಡು"

ಸನ್ಯಾಸಿ ಕೇಳಿದ "ನಿನಗೆ ಆ ನಿಧಿ ಬೇಡವೇ?"

ಮೃತ್ಯುಂಜಯ ಹೇಳಿದ "ಬೇಡ"

ಆಗ ಬೆಂಕಿ ಹೊತ್ತಿಸುತ್ತಿರುವ ಸದ್ದಾಗಿ, ಮರುಕ್ಷಣ ಅಲ್ಲೆಲ್ಲ ಬೆಳಕು ಚೆಲ್ಲಿತು. ಸನ್ಯಾಸಿ ಹೇಳಿದ "ಸರಿ ಮೃತ್ಯುಂಜಯ. ನಾವಿನ್ನು ಹೊರಡೋಣ"
ಮೃತ್ಯುಂಜಯ ಕೇಳಿದ "ಸ್ವಾಮಿ, ನಮ್ಮ ಪ್ರಯತ್ನವೆಲ್ಲ ವ್ಯರ್ಥವಾಯಿತೇ? ನನಗೆ ಆ ಸಂಪತ್ತು ಎಂದಿಗೂ ಸಿಗುವಿದಿಲ್ಲವೇ?"

ಆ ಕ್ಷಣವೇ ಬೆಳಕು ನಂದಿ ಹೋಯಿತು. ಮೃತ್ಯುಂಜಯ ಉದ್ಗರಿಸಿದ "ಎಂಥ ಕ್ರೂರತನ!". ಅಲ್ಲಿಯೇ ಮೌನದಲ್ಲಿ ಕುಳಿತು ವಿಚಾರಕ್ಕೆ ತೊಡಗಿದ. ಅಲ್ಲಿ ಸಮಯದ ಪರಿವೆ ತಿಳಿಯುವ ಯಾವುದೇ ಸಾಧನವೂ ಇದ್ದಿಲ್ಲ. ಮತ್ತು ಅಲ್ಲಿನ ಕತ್ತಲಿಗೆ ಕೊನೆಯೇ ಇರಲಿಲ್ಲ. ಈ ಅಂಧಕಾರವನ್ನು ಪುಡಿ ಮಾಡಿ ನಾಶಗೊಳಿಸುವ ಶಕ್ತಿ ತನ್ನಲ್ಲಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಂಡ. ಬೆಳಕಿಗಾಗಿ, ಮುಕ್ತ ಆಕಾಶವನ್ನು ಹಾಗೂ ಅಲ್ಲಿನ ವೈವಿಧ್ಯತೆಯನ್ನು ನೋಡುವ ಹಂಬಲದಿಂದ ಅವನು ಚಡಪಡಿಸಿದ. ಅವನ ಹೃದಯಕ್ಕೆ ವಿಶ್ರ್ರಾಂತಿಯಿಲ್ಲದಂತಾಯಿತು. ಅವನು ಕೂಗಿ ಕರೆದ

"ಓ, ಸನ್ಯಾಸಿ, ಕ್ರೂರ ಸನ್ಯಾಸಿ. ನನಗೆ ಯಾವ ನಿಧಿಯೂ ಬೇಡ. ನೀನು ನನ್ನನ್ನು ಕಾಪಾಡು"

ಉತ್ತರ ಬಂತು "ನಿನಗೆ ನಿಧಿಯ ಆಸೆ ಮುಗಿಯಿತೇ? ಹಾಗಿದ್ದರೆ ನನ್ನ ಕೈ ಹಿಡಿದುಕೊ. ನನ್ನ ಜೊತೆ ಬಾ"

ಈ ಸಲ ಯಾವುದೇ ಪಂಜು ಬೆಳಗಲಿಲ್ಲ. ಮೃತ್ಯುಂಜಯ ಒಂದು ಕೈಯಿಂದ ಕೋಲನ್ನು ಊರುತ್ತಾ, ಮತ್ತೊಂದು ಕೈಯಿಂದ ಸನ್ಯಾಸಿಯ ಆಸರೆ ತೆಗೆದುಕೊಂಡು ಮೇಲೆದ್ದ. ಸಾಕಷ್ಟು ತಿರುವುಗಳಿಂದ ಕೂಡಿದ್ದ ಆ ಜಟಿಲ ಮಾರ್ಗದಲ್ಲಿ, ಒಂದು ಕಡೆ ನಿಂತು ಸನ್ಯಾಸಿ ಹೇಳಿದ "ಇಲ್ಲಿಯೇ ನಿಲ್ಲು"
ಅಲ್ಲಿಯೇ ನಿಂತ ಮೃತ್ಯುಂಜಯನಿಗೆ ಒಂದು ಕಬ್ಬಿಣದ ಬಾಗಿಲು ತೆರೆದ ಸಪ್ಪಳ ಕೇಳಿಸಿತು. ನಂತರ ಸನ್ಯಾಸಿ ಅವನ ಕೈ ಹಿಡಿದು ಹೇಳಿದ "ನಡೆ. ಹೋಗೋಣ"

ಅವರಿಬ್ಬರೂ ಒಂದು ವಿಶಾಲವಾದ ಸಭಾಂಗಣ ತಲುಪಿದರು. ಆಗ ಹೊತ್ತಿಸಿದ ಪಂಜಿನ ಬೆಳಕಿನಲ್ಲಿ, ಮೃತ್ಯುಂಜಯನಿಗೆ ತಾನು ಇದುವರೆಗೂ ಕನಸಿನಲ್ಲೂ ಕಾಣದಂತ, ವಿಸ್ಮಯಕರವಾದ ನೋಟ ಅವನನ್ನು ದಿಗ್ಭ್ರಮೆಗೊಳಿಸಿತು. ಸುತ್ತಲೂ ಬಂಗಾರದ ದಪ್ಪನೆಯ ಗಟ್ಟಿಗಳನ್ನು ಪೇರಿಸಿಟ್ಟಿದ್ದರು. ಬಂಗಾರದ ಮಿಂಚು ಗೋಡೆಗಳನ್ನು ಥಳ ಥಳ ಹೊಳೆಯುವಂತೆ ಮಾಡಿ, ಸೂರ್ಯನ ಪ್ರಕಾಶವನ್ನು ಭೂಗರ್ಭದಲ್ಲಿ ಶೇಖರಿಸಿದಂತೆ ಕಂಡು ಬರುತ್ತಿತ್ತು. ಮೃತ್ಯುಂಜಯನ ಕಣ್ಣುಗಳು ಆಸೆಯಿಂದ ಮಿನುಗತೊಡಗಿದವು. "ಈ ಎಲ್ಲ ಸಂಪತ್ತು ನನ್ನದು. ಅದನ್ನು ಬಿಟ್ಟು ನಾನು ಹೋಗಲಾರೆ"

"ಸರಿ, ಹಾಗಿದ್ದರೆ" ಹೇಳಿದ ಸನ್ಯಾಸಿ "ಈ ಪಂಜು ತೆಗೆದುಕೋ. ಸ್ವಲ್ಪ ಆಹಾರ ಧಾನ್ಯ ತೆಗೆದುಕೋ. ಹಾಗು ಈ ನೀರಿನ ಬಿಂದಿಗೆ ಕೂಡ ನಿನ್ನದು. ನಾನು ವಿದಾಯ ಹೇಳುತ್ತೇನೆ."

ಇಷ್ಟು ಹೇಳಿ ಸನ್ಯಾಸಿಯು, ಭಾರವಾದ ಕಬ್ಬಿಣದ ಬಾಗಿಲನ್ನು ದೂಡಿಕೊಂಡು ಹೊರ ನಡೆದ.

ಮೃತ್ಯುಂಜಯ ಕೈಯಲ್ಲಿ ಪಂಜು ಹಿಡಿದು ಅಲ್ಲಿದ್ದ ಬಂಗಾರದ ರಾಶಿಯನ್ನು ಮತ್ತೆ ಮತ್ತೆ ಮುಟ್ಟುತ್ತ ಸುತ್ತಾಡಲು ಆರಂಭಿಸಿದ. ಕೆಲವೊಂದು ಬಂಗಾರದ ತುಂಡುಗಳನ್ನು ತೆಗೆದುಕೊಂಡು ನೆಲದ ಮೇಲೆ ಚೆಲ್ಲಾಡಿದ. ತಾನು ಕುಳಿತುಕೊಂಡು ಅವುಗಳ ರಾಶಿಯನ್ನು ತನ್ನ ತೊಡೆಯ ಮೇಲೆ ಪೇರಿಸಿಕೊಂಡ. ಒಂದರಿಂದ ಇನ್ನೊಂದು ತುಂಡಿಗೆ ಹೊಡೆದು ಅದು ಹುಟ್ಟಿಸುವ ಶಬ್ದ ಕೇಳಿ ಆನಂದಿಸಿದ. ಮತ್ತು ಅದನ್ನು ತೆಗೆದುಕೊಂಡ ಮೈ ಮೇಲೆಲ್ಲಾ ಉಜ್ಜಿಕೊಂಡ. ಸಾಕಷ್ಟು ವೇಳೆ ಕಳೆದ ಮೇಲೆ, ಆಯಾಸವಾಗಿ, ಬಂಗಾರದ ಗಟ್ಟಿಗಳನ್ನು ನೆಲದ ಮೇಲೆ ಹಾಸಿಕೊಂಡು, ಅದರ ಮೇಲೆ ಮಲಗಿ ನಿದ್ದೆ ಹೋದ.

ಮೃತ್ಯುಂಜಯ ಎದ್ದಾಗ, ಬಂಗಾರದ ಮಿಂಚು ಅವನ ಕಣ್ಣು ಕೊರೈಸಿತು. ಆದರೆ ಅಲ್ಲಿ ಬಂಗಾರ ಬಿಟ್ಟರೆ ಬೇರೆ ಏನು ಇರಲಿಲ್ಲ. ಮತ್ತೆ ಅವನಿಗೆ ಅದು ಹಗಲೋ, ರಾತ್ರಿಯೋ ಗೊತ್ತಾಗದೆ ಈ ಹೊತ್ತಿನಲ್ಲಿ ಹೊರಗಿನ ಪ್ರಪಂಚದಲ್ಲಿ ಏನು ನಡೆಯುತ್ತಿರಬಹುದು ಎಂದು ಆಶ್ಚರ್ಯ ಪಡತೊಡಗಿದ. ಬೆಳಕು ಹರಿದು ಪಕ್ಷಿಗಳು ಹಾರುತ್ತ, ಸೂರ್ಯನ ಬೆಳಕನ್ನು ಆನಂದಿಸುತ್ತಿರಬಹುದು. ತನ್ನ ಮನೆಯ ತೋಟದಲ್ಲಿ ತಂಗಾಳಿ ಸರೋವರದ ಕಡೆಯಿಂದ ಬೀಸಿ ಬರುತ್ತಿರಬಹುದು. ಅವನಿಗೆ ಆ ಸರೋವರದ ನೀರಿನಲ್ಲಿ ತೇಲುತ್ತಿರುವ ಹಂಸಗಳು ಕಣ್ಮುಂದೆ ಬಂದಂತೆ ಆಯಿತು. ಮತ್ತು ಅವುಗಳು ಹೊರಡಿಸುವ ಸದ್ದು ಕೇಳಿಸಿದಂತೆ ಆಯಿತು. ಅವನ ಮನೆಯ ಸಹಾಯಕಿ ಹಿತ್ತಾಳೆ ಬಿಂದಿಗೆ ಹಿಡಿದು ಬಂದು ನೀರಿನಲ್ಲಿ ತೊಳೆಯುತ್ತಿರುವ ದೃಶ್ಯ ಗೋಚರಿಸಿತು.

ಬಾಗಿಲು ಬಡೆದು ಮೃತ್ಯುಂಜಯ ಕರೆದ "ಓ ಸನ್ಯಾಸಿ, ನನ್ನ ಮಾತು ಕೇಳು"

ಬಾಗಿಲನ್ನು ತೆರದು ಸನ್ಯಾಸಿ ಒಳ ಬಂದ "ನಿನಗೆ ಏನು ಬೇಕು?"

"ನನಗೆ ಹೊರ ಹೋಗ ಬೇಕು" ಮೃತ್ಯುಂಜಯ ಹೇಳಿದ "ಆದರೆ ಸ್ವಲ್ಪ ಮಾತ್ರದ ಬಂಗಾರ ತೆಗೆದುಕೊಂಡು ಹೋಗಲು ಸಾಧ್ಯವೇ?"
ಸನ್ಯಾಸಿ ಯಾವುದೇ ಉತ್ತರ ಕೊಡದೆ, ಹೊಸ ಪಂಜು ಉರಿಸಿ, ನೀರಿನ ಬಿಂದಿಗೆಯನ್ನು ಮತ್ತೆ ತುಂಬಿಸಿ, ಸ್ವಲ್ಪ ಆಹಾರ ಕೊಟ್ಟು, ಮತ್ತೆ ಬಾಗಿಲನ್ನು 
ಮುಚ್ಚಿಕೊಂಡು ಹೊರ ಹೋದ.

ಮೃತ್ಯುಂಜಯ ಬಂಗಾರದ ಒಂದು ತೆಳ್ಳನೆಯ ತಗಡನ್ನು ತೆಗೆದುಕೊಂಡು ಅದನ್ನು ಬಗ್ಗಿಸಿ ಮುರಿದು, ತುಂಡು ತುಂಡು ಮಾಡಿದ. ಮತ್ತು ಅದನ್ನು ಕಸದ ಹಾಗೆ ಕೋಣೆಯಲ್ಲಿ ಚೆಲ್ಲಾಡಿದ. ಕೆಲವೊಂದನ್ನು ಬಾಯಿಯಲ್ಲಿ ಇಟ್ಟುಕೊಂಡು ತನ್ನ ಹಲ್ಲಿನ ಗುರುತು ಮೂಡಿಸಿದ. ದೊಡ್ಡ ಬಂಗಾರದ ತಟ್ಟೆಯನ್ನು ನೆಲಕ್ಕೆ ಬೀಳಿಸಿ ಕಾಲಲ್ಲಿ ತುಳಿದು ಹೊಸಕಿ ಹಾಕುವ ಪ್ರಯತ್ನ ಮಾಡಿದ. ಆಮೇಲೆ ತನಗೆ ತಾನೇ ಹೇಳಿಕೊಂಡ "ಜಗತ್ತಿನಲ್ಲಿ ಎಷ್ಟು ಜನರಿಗೆ, ನನ್ನ ಹಾಗೆ ಬಂಗಾರವನ್ನು ಕಾಲ ಕಸದಂತೆ ಬಿಸಾಡುವ ಭಾಗ್ಯ ಉಂಟು?" ನಂತರ ಅವನಿಗೆ ನಾಶ ಪಡಿಸುವ ಹುಚ್ಚು ಸೇರಿಕೊಂಡಿತು. ಅವನು ಬಂಗಾರದ ರಾಶಿಯನ್ನು ಚೆಲ್ಲಾಡಿ, ಕಸಬರಿಗೆಯಿಂದ ದೂರ ದಬ್ಬಿದ. ಈ ರೀತಿಯಲ್ಲಿ ಅವನು ರಾಜ, ಮಹಾರಾಜರಿಗೆ ಹೊನ್ನಿನ ಮೇಲಿದ್ದ ಲೋಭಕ್ಕೆ ತಿರಸ್ಕಾರ ವ್ಯಕ್ತ ಪಡಿಸಿದ.

ಚಿನ್ನವನ್ನು ಚೆಲ್ಲಾಪಿಲ್ಲಿಯಾಗಿಸುವ ಕೆಲಸ ಅವನಿಗೆ ದಣಿವು ತಂದಿತು. ಹಾಗೆಯೇ ಮಲಗಿ ನಿದ್ರೆ ಹೋದ. ಎಚ್ಚರವಾದ ಮೇಲೆ ಬಾಗಿಲಿನ ಕಡೆ ಓಡಿ, ಕೂಗಿ ಕರೆದ "ಓ ಸನ್ಯಾಸಿ, ನನಗೆ ಈ ಹೊನ್ನು ಬೇಡ. ಬೇಡವೇ ಬೇಡ"

ಆದರೆ ಬಾಗಿಲು ತೆರೆಯಲಿಲ್ಲ. ಮೃತ್ಯುಂಜಯ ತನ್ನ ಗಂಟಲು ನೋಯುವವರೆಗೆ ದೊಡ್ಡ ದನಿಯಲ್ಲಿ ಅರಚಿದ, ಆದರೂ ಬಾಗಿಲು ಮುಚ್ಚಿಯೇ ಇತ್ತು. ಕೊನೆಗೆ ಬಂಗಾರದ ತುಂಡುಗಳನ್ನು ಬಾಗಿಲಿಗೆ ಬೀಸಿ ಸದ್ದು ಮಾಡಿದ. ಆದರೆ ಉಪಯೋಗವಾಗಲಿಲ್ಲ. ಅವನು ಹತಾಶನಾದ. ಸನ್ಯಾಸಿಯು ತನ್ನನ್ನು ಈ ಚಿನ್ನದ ಸೆರೆಮನೆಯಲ್ಲಿ ಸಾಯಲು ಬಿಟ್ಟು ಹೊರಟು ಹೋದನೇ ಎನ್ನುವ ಅನುಮಾನ ಕಾಡಿತು. ಹೊನ್ನಿನ ರಾಶಿ ಮೃತ್ಯುಂಜಯನಲ್ಲಿ ಭೀತಿ ಹುಟ್ಟಿಸಿತು. ಅವನನ್ನು ಸುತ್ತುವರೆದಿದ್ದ ಚಿನ್ನ, ತನ್ನನ್ನು ನೋಡಿ ಭಯ ಹುಟ್ಟಿಸುವಂಥ ನಗು ಬೀರುತ್ತಿದೆ ಎಂದು ಭಾಸವಾಯಿತು. ದೇಹ ಕಂಪನಕ್ಕೆ ಒಳಗಾಯಿತು. ಈ ಹೊನ್ನಿನ ರಾಶಿಯ ಜೊತೆಗಿನ ಅವನ ಸಂಬಂಧ ಏನು? ಅವು ತನ್ನ ಜೊತೆ ಭಾವನೆಗಳನ್ನು ಹಂಚಿಕೊಳ್ಳಲಾರವು. ಅವನ ದುಃಖವನ್ನು ಕಂಡು ಅವು ಮರುಗುವುದು ಇಲ್ಲ. ಅವಕ್ಕೆ ಬೆಳಕು, ಗಾಳಿಯ ಅವಶ್ಯಕತೆಯೇ ಇದ್ದಿಲ್ಲ. ಅವುಗಳಿಗೆ ಬದುಕುವುದು ಬೇಕಿರಲಿಲ್ಲ. ಸ್ವತಂತ್ರವಾಗುವ ಆಸೆಯೂ ಅವುಗಳಿಗೆ ಇದ್ದಿಲ್ಲ. ನಿರಂತರ ಅಂಧಕಾರದಲ್ಲಿ ಅವು ಗಡುಸಾಗಿ, ಹೊಳೆಯುತ್ತ ಉಳಿದುಬಿಟ್ಟಿದ್ದವು.

ಭೂಮಿಯ ಮೇಲೆ ಪ್ರಾಯಶ ಈಗ ಸೂರ್ಯಾಸ್ತದ ಹೊತ್ತಾಗಿರುತ್ತದೆ. ನಿರ್ಮಲ ಬೆಳಕಿನ ಕಿರಣಗಳು, ದಿನಕ್ಕೆ ವಿದಾಯ ಹೇಳುತ್ತಾ, ಕತ್ತಲಿನ ಕೆನ್ನೆಯ ಮೇಲೆ ಕಣ್ಣೀರಿನ ಬಿಂದುಗಳ ಹಾಗೆ ಬಿದ್ದು ಮರೆಯಾಗುತ್ತವೆ. ಆಕಾಶದಲ್ಲಿ ನಕ್ಷತ್ರಗಳು ಮಿನುಗುವ ಹೊತ್ತಿಗೆ, ನನ್ನ ಹೆಂಡತಿ ಮನೆಯ ಅಂಗಳದಲ್ಲಿ ಕಟ್ಟಿರುವ ಆಕಳುಗಳಿಗೆ ಹುಲ್ಲು ಹಾಕಿ, ದೀಪ ಹೊತ್ತಿಸುತ್ತಾಳೆ. ಆಗ ಹತ್ತಿರದ ದೇವಸ್ಥಾನದಿಂದ ಕೇಳಿ ಬರುವ ಗಂಟೆಯ ಸದ್ದು ದಿನದ ಮುಕ್ತಾಯವನ್ನು ಸಾರಿ ಹೇಳುತ್ತದೆ. ಅಂದು ತನ್ನ ಮನೆಯಲ್ಲಿ ನಡೆದಿರಬಹುದಾದ ದಿನ ನಿತ್ಯದ ಕೆಲಸಗಳು ಮತ್ತು ತನ್ನ ಹಳ್ಳಿಯ ನೆನಪು ಮೃತ್ಯುಂಜಯನ ಕಲ್ಪನಾ ಶಕ್ತಿಯನ್ನು ಸ್ವಾಧೀನ ಪಡಿಸಿಕೊಂಡವು. ಅವನಿಗೆ ತನ್ನ ನಾಯಿ ಸುತ್ತಿಕೊಂಡು ಒಲೆಯ ಹತ್ತಿರ ಬೆಚ್ಚಗೆ ಮಲಗಿರಬಹುದಾದ ಕಲ್ಪನೆ ಕೂಡ ಅವನಿಗೆ ತಡೆಯಲಾರದ ನೋವು ತಂತು. ಅವನು ತಾನು ಧಾರಾಪುರದಲ್ಲಿ ಉಳಿದುಕೊಂಡಿದ್ದ ದಿನಸಿ ಅಂಗಡಿಯ ಯಜಮಾನ, ಈ ಹೊತ್ತಿಗೆ ಅಂಗಡಿಯನ್ನು ಮುಚ್ಚಿ, ಮನೆಯಲ್ಲಿ ದೀಪ ಹೊತ್ತಿಸಿ, ವಿರಾಮದಿಂದ ಓಡಾಡಿಕೊಂಡು, ರಾತ್ರಿಯ ಊಟಕ್ಕೆ ಅಣಿಯಾಗುತ್ತಿರಬಹುದು ಎಂದು ತೋರಿತು. ಅವನ ಸಂತೋಷದ ಜೀವನ ನೆನಪಾಗಿ ಅಸೂಯೆ ಆಯಿತು. ಅಂದು ವಾರದ ಯಾವ ದಿನವೋ ಅವನಿಗೆ ತಿಳಿಯದು. ಅಂದು ಭಾನುವಾರವಾಗಿದ್ದರೆ, ಹಳ್ಳಿ ಜನರು ಪೇಟೆಯಲ್ಲಿ ಖರೀದಿ ಮುಗಿಸಿ, ಗಂಟನ್ನು ಹಿಡಿದು, ಸ್ನೇಹಿತರ ಜೊತೆಗೂಡಿ ತಮ್ಮ ಊರುಗಳಿಗೆ ಮರಳಲು ದೋಣಿ ಹತ್ತಿ ಸಾಗುತ್ತಿರುವ ಎನ್ನುವ ಚಿತ್ರ ಅವನ ಕಣ್ಮುಂದೆ ಮೂಡಿತು. ಅವನಿಗೆ ರೈತನೊಬ್ಬ ತಲೆ ಮೇಲೆ ಬುಟ್ಟಿ ಹೊತ್ತು ಮತ್ತು ಕೈಯಲ್ಲಿ ಮೀನು ಹಿಡಿದು, ಗದ್ದೆಗಳ ನಡುವಿನ ದಾರಿಯಲ್ಲಿ, ಮಂದ ಬೆಳಕಿನ, ನಕ್ಷತ್ರ ತುಂಬಿದ ಆಕಾಶದ ಹಿನ್ನೆಲೆಯಲ್ಲಿ ನಡೆದು ಹೋಗುತ್ತಿರುವುದು ಕಾಣಿಸಿತು.

ಜಗತ್ತಿನ ದಿನ ನಿತ್ಯದ ಆಗು ಹೋಗುಗಳಿಂದ, ಬಿಟ್ಟು ಬಿಡದ ಯಾತ್ರೆಗಳಿಂದ ಮೃತ್ಯುಂಜಯನನ್ನು ಭೂಮಿಯ ಹಲವಾರು ಪದರಗಳು ದೂರ ಮಾಡಿದ್ದವು . ಆ ಜೀವನ, ಆ ಆಕಾಶ, ಅಲ್ಲಿಯ ಬೆಳಕು ಬೆಲೆ ಕಟ್ಟಲಾಗದಂಥ ಸಂಪತ್ತು ಎಂದು ಅವನಿಗೆ ತೋರಿತು. ಅವನಿಗೆ ಮತ್ತೆ ಭೂಮಿ ತಾಯಿಯ ಧೂಳಿನ ಸ್ಪರ್ಶ, ಹಸಿರಿನಿಂದ ತುಂಬಿದ ಸೌಂದರ್ಯ, ವಿಶಾಲವಾದ ಮುಕ್ತ ಆಕಾಶ, ತಂಗಾಳಿಯಲ್ಲಿ ತೇಲಿ ಬರುವ ಹೂವಿನ ಸುಗಂಧ, ಇವುಗಳ ಮಡಿಲಿನಲ್ಲಿ ಒಂದು ಕ್ಷಣ ಬದುಕಿದರೂ ತನ್ನ ಬದುಕು ಸಂಪೂರ್ಣ ಅಂದುಕೊಂಡು ಪ್ರಾಣ ಬಿಡುವೆ ಎಂದುಕೊಂಡ.

ಅವನಲ್ಲಿ ಈ ಭಾವನೆಗಳು ಮೂಡುತ್ತಿದ್ದ ಹಾಗೆ, ಬಾಗಿಲು ತೆರೆದು ಸನ್ಯಾಸಿ ಒಳ ಪ್ರವೇಶಿಸಿ ಕೇಳಿದ "ಮೃತ್ಯುಂಜಯ, ನಿನಗೆ ಈಗ ಏನು ಬೇಕು?"
ಅದಕ್ಕೆ ಉತ್ತರ ಬಂತು "ನನಗೆ ಇನ್ನು ಏನೂ ಬೇಡ. ಈ ಅಂಧಕಾರದಿಂದ ದೂರ ಹೋಗಲು ಮಾತ್ರ ಬಯಸುತ್ತೇನೆ. ಈ ಭ್ರಾಂತಿ ಹುಟ್ಟಿಸುವ ಹೊನ್ನು ನನಗೆ ಬೇಡ. ನನಗೆ ಬೆಳಕು, ಆಕಾಶ ಬೇಕು. ನನಗೆ ಸ್ವಾತಂತ್ರ ಬೇಕು"

ಸನ್ಯಾಸಿ ಹೇಳಿದ "ಇದರ ಹಾಗೆ ಇನ್ನೊಂದು ದಾಸ್ತಾನು ಕೋಣೆಯಿದೆ. ಅದರಲ್ಲಿ ಅಮೂಲ್ಯ, ಬೆಲೆ ಕಟ್ಟಲಾಗದಂಥ ರತ್ನಗಳು ತುಂಬಿವೆ. ಅದು ಈ ಚಿನ್ನಕ್ಕಿಂತ ಹತ್ತು ಪಟ್ಟು ಅಮೂಲ್ಯವಾದದ್ದು. ಅಲ್ಲಿಗೆ ಒಂದು ಸಲ ಹೋಗ ಬೇಡವೇ?"

ಮೃತ್ಯುಂಜಯ ಉತ್ತರಿಸಿದ "ಇಲ್ಲ"

"ಅದನ್ನು ಒಂದು ಸಲವಾದರೂ ನೋಡುವ ಕುತೂಹಲ ಇಲ್ಲವೇ?"

"ಇಲ್ಲ, ನನಗೆ ಅದನ್ನು ನೋಡುವ ಇಚ್ಛೆಯೇ ಇಲ್ಲ. ನಾನು ಮುಂದೆ ನನ್ನ ಜೀವನ ಪರ್ಯಂತ ಭಿಕ್ಷೆ ಕೇಳಿ ಬದುಕಿದರೂ ಪರವಾಗಿಲ್ಲ. ಆದರೆ ಇನ್ನು ಒಂದು ಕ್ಷಣವೂ ಇಲ್ಲಿರಲಾರೆ"

"ಹಾಗಿದ್ದರೆ ಬಾ" ಹೇಳಿದ ಸನ್ಯಾಸಿ. ಅವರು ಭಾವಿಯ ಹತ್ತಿರ ಬಂದಾಗ ಕೇಳಿದ "ಆ ಕಾಗದವನ್ನು ಏನು ಮಾಡುವೆ?"

ಮೃತ್ಯುಂಜಯ ಆ ಕಾಗದವನ್ನು ಹೊರ ತೆಗೆದು ಅದನ್ನು ಚೂರು ಚೂರು ಮಾಡಿ ಭಾವಿಯಲ್ಲಿ ಎಸೆದ.