ನಮ್ಮೂರಲ್ಲಿ ಇರುವುದೇ
ಎರಡು ಚಿತ್ರ ಮಂದಿರ. ಅವುಗಳ ಹೆಸರು ಹೆಸರಿಗೇ ಮಾತ್ರ. ಜನ ಕರೆಯುವುದು 'ಹಳೇ ಟಾಕೀಸು' ಮತ್ತು 'ಹೊಸ ಟಾಕೀಸು' ಎಂದೇ. ನಾನು ಸುಮಾರು ಏಳೆಂಟು ವರ್ಷದವನಿದ್ದಾಗ
(ಅಂದರೆ ಸುಮಾರು ಮೂವತ್ತು ವರ್ಷಗಳಿಗೂ ಹಿಂದೆ) ಅಲ್ಲಿ ಚಿತ್ರಗಳನ್ನು ನೋಡಲು ಶುರು ಮಾಡಿದ್ದು. ಅದಕ್ಕೂ
ಮುಂಚೆ ನನ್ನ ಅಕ್ಕನ ಜೊತೆ ಹೋದ ನೆನಪಿದೆಯಾದರೂ, ಅವು ಯಾವ ಚಿತ್ರ ಎನ್ನುವ ನೆನಪಿಲ್ಲ. ಹೆಣ್ಣು ಮಕ್ಕಳು
ಒಬ್ಬರೇ ಹೊರಗೆ ಹೋಗುವ ಕಾಲ ಅಂದಿಗೆ ಇದ್ದಿಲ್ಲ. ಅದಕ್ಕೇ ಅಕ್ಕ ನನಗೆ ಒಂದು ಪಾರ್ಲೆ-ಜಿ ಪೊಟ್ಟಣ ಕೊಡಿಸಿ
ಜೊತೆಗೆಂದು ಕರೆದುಕೊಂಡು ಹೋಗುತ್ತಿದ್ದಳು. ಅವಳಿಗೆ ಲಕ್ಷ್ಮೀ ಅಭಿನಯಿಸಿದ ಚಿತ್ರಗಳೆಂದರೆ ಪ್ರಾಣ.
ಚಿತ್ರ ಮುಗಿಯುವುದಕ್ಕಿಂತ ಮುಂಚೆಯೇ ನಿದ್ದೆಗೆ ಜಾರಿರುತ್ತಿದ್ದ ನನ್ನನ್ನು ಎತ್ತಿಕೊಂಡು ಮನೆಗೆ ಬರುವ
ಜವಾಬ್ದಾರಿ ಅವಳದ್ದು. ಅವಳಿಂದ ಚಿತ್ರ ಮಂದಿರಗಳ ಪರಿಚಯ ನನಗಾಯಿತಾದರೂ, ನಾನು ನೋಡಿದ ಚಿತ್ರಗಳು ನೆನಪು
ಮಾತ್ರ ಸ್ವಲ್ಪ ನಂತರದ್ದು.
ಇಬ್ಬರು-ಮೂವರು ಗೆಳೆಯರು
ಮೊದಲೇ ಮಾತನಾಡಿಕೊಂಡು, ಪಿಚ್ಚರಿಗೆ ಹೋಗುವ ಮುನ್ನ ಸ್ವಚ್ಚ ಕೈ - ಕಾಲು ಮುಖ ತೊಳೆದುಕೊಂಡು, ಮುಖಕ್ಕೆ
ಪೌಡರ್ ಬಳಿದುಕೊಂಡು, ಸಡಗರದಿಂದ ಸಜ್ಜುಗೊಳ್ಳುತ್ತಿದ್ದೆವು. ವೇಳೆಯ ಸೂಚಕದಂತೆ ಇಡೀ ಊರಿಗೇ ಕೇಳಿಸುವಂತೆ
ಟಾಕೀಸಿನ ಸ್ಪೀಕರ್ ನಲ್ಲಿ, 'ಶುಕ್ಲಾಂಭರಧರಂ ವಿಷ್ಣುಂ' ನಿಂದ ಆರಂಭವಾಗಿ, 'ಗಜಮುಖನೇ ಗಣಪತಿಯೇ' ಎಂದು
ಕೊನೆಯ ಹಾಡು ಬರುವ ಹೊತ್ತಿಗೆಲ್ಲ ಪ್ರದರ್ಶನದ ಆರಂಭ. ಬೆಂಚು, ಕುರ್ಚಿ ಹಾಗೂ ಬಾಲ್ಕನಿಯ ಮೂರು ವರ್ಗಗಳಿದ್ದರೂ,
ನಾವು ಹೆಚ್ಚಾಗಿ ಬೆಂಚಿನ ಮೇಲೆ ಕುಳಿತುಕೊಂಡು, ತಲೆ
ಮೇಲೆ ಎತ್ತಿಕೊಂಡು ಬೆಳ್ಳಿ ಪರದೆಯ ಅಗಾಧತೆಯನ್ನು ಕಣ್ತುಂಬಿಕೊಳ್ಳುತ್ತಿದ್ದೆವು.
ಆಗ ನೋಡಿದ ಮೂರು
ಚಿತ್ರಗಳ ಅಸ್ಪಷ್ಟ ನೆನಪು, ಆದರೆ ಅವುಗಳ ಕೆಲವು ಸನ್ನಿವೇಶಗಳ ನೆನಪು ಮಾತ್ರ ಅಚ್ಚೊತ್ತಿದಂತಿದೆ.
ಆ ಮೂರು ಚಿತ್ರಗಳು ಯಾವುವೆಂದರೆ - 'ಚಲಿಸುವ ಮೋಡಗಳು', 'ಸಾಹಸ ಸಿಂಹ' ಮತ್ತು 'ನ್ಯಾಯ ಎಲ್ಲಿದೆ?'.
ಈ ಮೂರೂ ಚಿತ್ರಗಳು ತೆರೆ ಕಂಡಿದ್ದು ೧೯೮೨ ರಲ್ಲಿ. ಆದರೆ ಬಿಡುಗಡೆಯಾದ ೨-೩ ವರ್ಷದ ನಂತರವೇ ಅವು ಚಿಕ್ಕ
ಊರುಗಳಿಗೆ ಬರುತ್ತಿದ್ದದ್ದು. ಹಾಗಾಗಿ ನಾನು ಅವುಗಳನ್ನು ನೋಡಿದ್ದು ಬಹುಶ ೧೯೮೫ ರ ಆಸು ಪಾಸಿನಲ್ಲಿ.
ಇಂದಿಗೆ ರಾಜಕುಮಾರ್ ಅವರನ್ನು ಆರಾಧಿಸುವ ನನಗೆ, ಬಾಲ್ಯದಲ್ಲಿ ಅವರ ಚಿತ್ರ ಅಷ್ಟು ಇಷ್ಟ ಆಗುತ್ತಿರಲಿಲ್ಲ.
ಫೈಟಿಂಗ್ ಇರದ ಚಿತ್ರಗಳನ್ನು ನೋಡುವುದೆಂತು? ಆದರೆ
'ಚಲಿಸುವ ಮೋಡಗಳು' ಚಿತ್ರದಲ್ಲಿ ನನ್ನನ್ನು ಆಕರ್ಷಿಸಿದ್ದು ಪುನೀತ್ ನ ಅಭಿನಯ. 'ಕುಂಬಳಿ
ಕಾಯಿ ಬಳ್ಳಿಲಿಟ್ಟನೋ ನಮ್ಮ ಶಿವ' ಎಂದು ಹಾಡುವ ಪರಿ ಮನರಂಜಿಸುತ್ತಿತ್ತು. ನಂತರದ ಚಿತ್ರ 'ಸಾಹಸ ಸಿಂಹ'.
ಅದು ಸಂಪೂರ್ಣ ಹೊಡೆದಾಟದ ಚಿತ್ರ. ಆ ಚಿತ್ರ ನೋಡಿದಾಗಿಂದ ನಮ್ಮ ಓಣಿಯ ಹುಡುಗರೆಲ್ಲ ವಿಷ್ಣುವರ್ಧನ್
ಅವರ ಕಟ್ಟಾಭಿಮಾನಿ ಆಗಿ ಬಿಟ್ಟಿದ್ದರು. ಅದರ ಸನ್ನಿವೇಶ ಒಂದರಲ್ಲಿ, ವಿಷ್ಣುವರ್ಧನ್ ಸುರಂಗ ಮಾರ್ಗ
ದಿಂದ ಹೊರ ಬಂದಾಗ, ಹೆಡೆ ಎತ್ತಿ ನಿಂತ ನಾಗರ ಹಾವೊಂದನ್ನು ಎವೆ ಇಕ್ಕದೇ ನೋಡುವ ದೃಶ್ಯ ನನ್ನ ನೆನಪಿನ
ಪಟಲದಿಂದ ಇಂದೂ ಮಾಸಿಲ್ಲ. ಆದರೆ ಇದನ್ನು ಮೀರಿಸುವ ಅನುಭವ ನನಗಾದದ್ದು ಶಂಕರ್ ನಾಗ್ ರ ಚಿತ್ರ ನೋಡಿದಾಗ.
ಅದು 'ನ್ಯಾಯ ಎಲ್ಲಿದೆ?' ಚಿತ್ರ. ಅದರ ಮೊದಲ ದೃಶ್ಯದಲ್ಲಿ, ತುಂಬು ತೋಳಿನ ಲೆದರ್ ಜಾಕೆಟ್, ಕೈಗೆ
ಅದೇ ಕಪ್ಪು ಬಣ್ಣದ ಕೈಗವಸು ಹಾಕಿಕೊಂಡು, ಬುಲೆಟ್ ಗಾಡಿಯ ಮೇಲೆ ಬರುವ ನಾಯಕ, ತನ್ನ ಶತ್ರುಗಳ ಮೇಲೆ
ಸೇಡು ತೀರಿಸಿಕೊಳ್ಳುವ ಪಣ ತೊಡುತ್ತಾನೆ. ನಾಯಕನ ಹಾವ-ಭಾವ, ವೇಷ-ಭೂಷಣ, ರೋಷ-ದ್ವೇಷಗಳನ್ನು ನೋಡಿದ
ನನ್ನ ಎಳೆ ಮನಸ್ಸಿಗೆ ಇವನಿಗಿಂತ 'ಹೀರೋ' ಬೇರೊಬ್ಬನಿಲ್ಲ ಎನ್ನಿಸಿಬಿಟ್ಟಿತ್ತು. ಮುಂದೆ ಬೆಳೆದಂತೆಲ್ಲ
ಅಭಿಪ್ರಾಯಗಳು ಬದಲಾದರೂ, ನಾನು ಚಿಕ್ಕಂದಿನಲ್ಲಿ ಒಪ್ಪಿಕೊಂಡಂತ ಮೊದಲ ಹೀರೋ ಎಂದರೆ ಶಂಕರ್ ನಾಗ್.
ಅದಾಗಿ ಕೆಲವೇ ವರ್ಷಗಳಿಗೆ
ಶಂಕರ್ ನಾಗ್ ಅಗಲಿ ಹೋದರು. ನಮಗಾಗಲೇ 'ಮೃಗಾಲಯ' ಚಿತ್ರದ ಅಂಬರೀಶ್ ಇಷ್ಟವಾಗ ತೊಡಗಿದ್ದ. ಮುಂದೆ
ಕೆಲವೇ ವರ್ಷಗಳಿಗೆ ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಚಿತ್ರಗಳು ಚಿತ್ರ ರಂಗಕ್ಕೆ ವೈವಿಧ್ಯತೆ
ತಂದವು. ಆದರೆ ಆ ಹೊತ್ತಿಗೆಲ್ಲ ಬಾಲ್ಯದ ಮುಗ್ಧತೆ ಮರೆಯಾದ ನಮಗೆ ಬೆಳ್ಳಿ ತೆರೆಯ ಆಕರ್ಷಣೆಯೂ ಕಡಿಮೆ
ಆಯಿತು. ಚಲನ ಚಿತ್ರ ಒಂದು ಮನರಂಜನ ಮಾಧ್ಯಮ, ಅಲ್ಲಿಯ ಖಳ ನಾಯಕರು ನಿಜ ಜೀವನದಲ್ಲಿ ಕೆಟ್ಟವರೇನಲ್ಲ
ಎನ್ನುವ ಸಂಗತಿ ಮನದಟ್ಟಾಗಿತು. ನಿಜ ಜೀವನದ ಸಂಘರ್ಶಗಳನ್ನು, ಭಾವುಕತೆಯ ಜೊತೆಗೆ ವಿವೇಕದ ಮಾರ್ಗ ತೋರುವ
ರಾಜಕುಮಾರ್ ರ ಹಾಗು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳು ಇಷ್ಟವಾಗತೊಡಗಿದವು. ಆದರೆ ಅವೆಲ್ಲ
ಬದಲಾವಣೆಯ ಮುಂಚಿನ ಕಾಲಕ್ಕೆ ಹೋಗಿ ನೋಡುವುದಾದರೆ, ಅಲ್ಲಿ ಅಗ್ರ ಸ್ಥಾನದಲ್ಲಿರುವುದು ಶಂಕರ್ ನಾಗ್
ಮತ್ತು ವಿಷ್ನುವರ್ಧನ್. ಅವರ ಚಿತ್ರಗಳು ನನ್ನ ಸುಪ್ತ ಮನಸ್ಸಿನಲ್ಲಿ ತೀವ್ರವಾದ, ಅಳಿಸಲು ಆಗದಂತ ಅನುಭವಗಳನ್ನು
ಮೂಡಿಸಿವೆ. ಚಿಕ್ಕಂದಿನಲ್ಲಿ ನೋಡಿದ ಚಿತ್ರಗಳ ಪ್ರಭಾವದ ಎಲ್ಲರ ಮೇಲೂ ಇರುತ್ತದೆ ಎನ್ನುವುದು ನನ್ನ
ಅಭಿಪ್ರಾಯ.
ಅಂದ ಹಾಗೆ ನೀವು
ಜೀವನದಲ್ಲಿ ನೋಡಿದ ಮೊದಲ ಪಿಚ್ಚರ್ ಯಾವುದು? ನೆನಪಿದೆಯೇ? ನೀವು ಅದರ ಬಗ್ಗೆ ಬರೆಯುವಿರಾ?