"ಬೀಸೋ ಗಾಳಿಯಲಿ ಹರಿವ ನೀರಾಲೇ
ಹೇಳು ಏನೆಂದಿದೆ ಓ ಗೆಳತಿ?"
ಈ ತರಹದ ಹಾಡುಗಳನ್ನು ಕೇಳುವ ಅಥವಾ ಗುನುಗುವ ವ್ಯವಧಾನ ಯಾರಿಗೆ ಉಂಟು ಈಗ? ಅದರಲ್ಲೂ ಬೆಂಗಳೂರಿಗರಿಗೆ ಕ್ಷಣ ಕ್ಷಣಕ್ಕೂ ಧಾವಂತ. ಸರಿಯಾದ ವೇಳೆಗೆ ಆಫೀಸ್ ತಲುಪುವುದೇ ಒಂದು ಸಾಹಸದ ಕೆಲಸವಾಗಿರುವಾಗ, ಬೀಸುವ ಗಾಳಿ ಏನು ಹೇಳುತ್ತಿದೆ ಯಾರಿಗೆ ಬೇಕು ಸ್ವಾಮಿ? ಹರಿವ ನೀರು? ಅದನ್ನು ನೋಡುವುದು ಯಾವಾಗ? ಈ ಊರಲ್ಲಿ ಯಾವುದೇ ನದಿಗಳಿಲ್ಲ. ತುಂಬಿ ಹರಿಯುವುದು ಕೊಳಚೆ ನೀರು ಮಾತ್ರ. ಅದು ಹೇಳುವುದು ಮೂಗು ಮುಚ್ಚಿಕೊಳ್ಳಿ ಎಂದು.
ಈ ಹಾಡು ಈಗಿನ ಸಂದರ್ಭಕ್ಕೆ ಸರಿ ಹೋಗುವುದಿಲ್ಲ ಎಂದಾಯಿತು. ಆದರೆ ಇದು ಕಳೆದು ಹೋದ ಕಾಲದ ಜೀವನ ಶೈಲಿಗೂ, ಇಂದಿನದಕ್ಕೂ ಇರುವ ವ್ಯತ್ಯಾಸ ಎತ್ತಿ ಹಿಡಿಯುತ್ತದೆ. ಏರ್ ಕಂಡೀಶನ್ ಗಾಳಿ, ಫಿಲ್ಟರ್ ನೀರು ಸೇವಿಸುವ ನಮಗೆ, ಪ್ರಕೃತಿ ನೀಡುವ ಸಂದೇಶಗಳು ಗಮನಕ್ಕೆ ಬಾರದೇ ಹೋಗುತ್ತಿವೆ. ಋತುಗಳ ಬದಲಾವಣೆ, ನಮ್ಮಲ್ಲಿ ಹೊಸತನ ತರದೇ ನಮ್ಮನ್ನು ಅನಾರೋಗ್ಯಕ್ಕೆ ಈಡು ಮಾಡುತ್ತಿವೆ. ಇನ್ನು ಎಲ್ಲಿಯ ವಸಂತ, ಎಲ್ಲಿಯ ಕೋಗಿಲೆ?
ತಲೆ ಎತ್ತಿ ಮೋಡ ನೋಡಿ ಮಳೆ ಬರುವ ಸಾಧ್ಯತೆ ಇದೆಯೋ ಎಂದು ನೋಡುವ ಬದಲು ನಮ್ಮ ಸ್ಮಾರ್ಟ್ ಫೋನ್ ನಲ್ಲಿ ಅಥವಾ ದೂರದರ್ಶನದಲ್ಲಿ ಅದರ ಬಗ್ಗೆ ಏನಿದೆಯೋ ಎಂದು ನೋಡುತ್ತೇವೆ. ಹೀಗಿರುವಾಗ ನಮಗೆ ಕಾಳಿದಾಸನ ಮೇಘ ಸಂದೇಶದ ಕಲ್ಪನೆ ಅದ್ಭುತ ಎನಿಸದೆ ಒಂದು ಮೋಜಿನ ಸಂಗತಿ ಎನಿಸುತ್ತದೆ.
ಹೀಗೆ ಗೊಣಗುವುದು ಬಿಟ್ಟು, ಸುಮ್ಮನೆ ಹಳ್ಳಿಗೆ ಬಂದು ವಾಸ ಮಾಡು ಎಂದು ಹೇಳುವಿರಾ? ಅದಕ್ಕೆ ಅಣ್ಣಾವ್ರ ಹಾಡಿನ ಬದಲಾಗಿ, ಅವರ ಮಗನ ಚಿತ್ರದ ಹಾಡು 'ಸಿಕ್ಕಾ ಪಟ್ಟೆ ಸಾಲ ಇತ್ತು ಲೈಫೀನಲಿ' ಎಂದು ಹಾಡಬೇಕಾಗುತ್ತದೆ. ಇಷ್ಟಕ್ಕೂ ಬದಲಾವಣೆಗೆ ಒಗ್ಗಿಕೊಳ್ಳದೇ, ಸಾಧ್ಯವಾಗದ್ದನ್ನೆ ಬಯಸುವುದೇ ಜೀವನ ಅಲ್ಲವೇ?