ಯಾವುದಾದರು ಜಗಳದಲ್ಲಿ, ಸಾಕಷ್ಟು ಅಪವಾದಗಳನ್ನು ಕೇಳಿ ಆದ ಮೇಲೆ, ಸಹನೆಯ ಕೊನೆ ಹಂತದಲ್ಲಿ "ಇದೊಂದು ಮಾತು ಕೇಳುವುದು ಬಾಕಿಯಿತ್ತು" ಎಂದು ಅವರಿವರು ಮಾತನಾಡುವುದು ಕೇಳುತ್ತಿರುತ್ತೇವೆ. ಅಥವಾ ಅಂತಹ ಅನುಭವ ನಮಗೇ ಆಗಿರುತ್ತದೆ. (ನಿಮಗೆ ಅಂತಹ ಅನುಭವ ಆಗಿರದೆ ಇದ್ದರೆ ನಿಮ್ಮನ್ನು ನೀವು ಲಕ್ಕಿ ಅಂದುಕೊಳ್ಳಬೇಡಿ. ಅಂತಹ ಅನುಭವಕ್ಕಾಗಿ ನೀವು ಕಾಯುತ್ತಿದ್ದಿರಿ ಎಂದಷ್ಟೇ ಅದರ ಅರ್ಥ).
ವ್ಯಕ್ತಿತ್ವ ಪಕ್ವವಾಗುವ ದಾರಿಯಲ್ಲಿ ನೋವುಗಳು ಸಹಜ. ಇತರರು ನಮ್ಮನ್ನು ನಾವು ಅಂದುಕೊಂಡ ಹಾಗೆ ನೋಡದೆ ಹೋಗಬಹುದು. ಸಂಬಂಧಗಳಲ್ಲಿ ಹೊಂದಾಣಿಕೆಗೆ ನಾವು ಎಷ್ಟೇ ಪ್ರಾಮಾಣಿಕ ಪ್ರಯತ್ನ ಪಟ್ಟರೂ, ಅದು ಇತರರಿಗೆ ಒಪ್ಪಿಗೆ ಆಗದೆ ಹೋಗಬಹುದು. ನಮ್ಮ ಜೊತೆಯಲ್ಲಿರುವ ಎಲ್ಲರಿಗೂ, ಎಲ್ಲ ಕಾಲದಲ್ಲೂ ನಮ್ಮ ಅನಿಸಿಕೆ, ಅಭಿಪ್ರಾಯಗಳು ಸರಿ ಕಾಣಬೇಕೆಂದು ಏನಿದೆ? ಆಗ ಮೂಡಿದ ಭಿನ್ನಾಭಿಪ್ರಾಯಗಳು, ನಮ್ಮನ್ನು ಟೀಕೆ, ವಿಮರ್ಶೆಗೆ ಗುರಿ ಮಾಡುತ್ತವೆ. ಸಣ್ಣ ಪುಟ್ಟ ಟೀಕೆಗೆ ಬೆದರದ ನಾವು, ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ಹೋದಾಗ, ಕೊನೆಗೆ ನಮಗೆ ಸಹನೀಯವಲ್ಲದ ಮಾತು ಕೇಳಿ ಬಂದಾಗ ನಮಗರಿವಿಲ್ಲದಂತೆ ಹೇಳುತ್ತೇವೆ "ಇದೊಂದು ಮಾತು ಕೇಳುವುದು ಬಾಕಿಯಿತ್ತು"
ಎಷ್ಟೋ ಸಲ ಇಂತಹ ಮಾತು ನಿರ್ಣಾಯಕ ಹಂತದಲ್ಲಿ ಬಂದು ಬಿಡುತ್ತದೆ. ಅಲ್ಲಿಂದಾಚೆಗೆ ಯಾವುದೊ ಒಂದು ನಿರ್ಣಯದಲ್ಲಿ ಕೊನೆಗೊಳ್ಳುವ ವಿವಾದ ನಮ್ಮನ್ನು ಘಾಸಿಗೊಳಿಸುವುದು ಸಹಜ. ಆಗ ನಮಗೆ ನೋವಾಗುವುದು ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಂಡ ರೀತಿಗೆ.
ಯಾವುದಾದರೂ ಕೆಲಸ ನಾವು ಸ್ವಯಂ ತೃಪ್ತಿಗಾಗಿ ಮಾಡಿದ್ದರೆ, ಇತರರು ಅದನ್ನು ಹೊಗಳಿದರೂ ಇಲ್ಲವೇ ತೆಗಳಿದರೂ ನಾವೇಕೆ ಅದರ ಕಡೆಗೆ ಗಮನ ಹರಿಸುತ್ತಿದ್ದೆವು? ಇಲ್ಲಿ ಸ್ವಲ್ಪ ವಿಚಾರ ಮಾಡಿ ನೋಡಿದರೆ ನಮಗೇ ಅರಿವಾಗುವುದು ನಮಗೆ ಘಾಸಿ ಮಾಡಿದ್ದು ಬೇರೆಯವರು ನಮ್ಮನ್ನು ಆದರಿಸಲಿ ಎನ್ನುವ ನಮ್ಮ ಸುಪ್ತ ಮನಸಿನ ಬಯಕೆಯಿಂದ. ನಮಗೆ ನಾವು ಏನೋ ಅಂದುಕೊಂಡಿರುತ್ತೇವೆಲ್ಲ, ಅದು ನಮ್ಮನ್ನು ದಾರಿ ತಪ್ಪಿಸುತ್ತದೆ. ಅದರಿಂದ ಹೊರ ಬಂದು ನಿರ್ಲಿಪ್ತ ಮನಸ್ಸಿನಿಂದ ನಡೆದುಕೊಂಡರೆ ನಮಗೆ ನೋವುಂಟು ಮಾಡುವ ಶಕ್ತಿ ಯಾರಿಗೆ ಇದೆ? ಇನ್ನೊಬ್ಬರು ಏನಾದ್ರು ಅನ್ನಲಿ, ಅವರು ಕೊಡುವ ಸರ್ಟಿಫಿಕೇಟ್ ನಮಗೇನು ಉಪಯೋಗ? ನಮಗೆ ನಾವು ಏನು ಎಂಬುದರ ಅರಿವು ಬಂದ ಮೇಲೆ ನಮಗೆ ಬೇರೆಯವರ ಸಮರ್ಥನೆಯ ಅವಶ್ಯಕತೆ ಇರುವುದಿಲ್ಲ. ಆಗ ನಮಗೆ ವ್ಯಕ್ತಿತ್ವದಲ್ಲಿ ಬರುವ ಪಕ್ವತೆ ಒಂದು ತಡೆಗೋಡೆಯಾಗಿ ಅಪವಾದಗಳಿಗೆ ಪ್ರತಿರೋಧ ಒಡ್ಡುತ್ತದೆ. ಯಾರು ಏನು ಎಂದರೂ, ಅದು ನಮ್ಮ ಕಿವಿಯನ್ನು ದಾಟಿ ಹೃದಯ ತಲುಪಿ ಘಾಸಿಗೊಳಿಸುವುದಿಲ್ಲ.
ಅಪವಾದಗಳು ಮತ್ತೆ ಬಂದೇ ಬರುತ್ತವೆ. ಆವಾಗ "ಇದೊಂದು ಮಾತು ಕೇಳುವುದು ಬಾಕಿಯಿತ್ತು" ಎನ್ನುವ ಮಾತು ನಿಮ್ಮ ಬಾಯಿಂದ ಹೊರಬಿದ್ದರೂ, ಅದು ನಿಮಗೆ ಯಾವುದೇ ನೋವು ಉಂಟು ಮಾಡದೇ ಇದ್ದರೆ ನಿಮಗೆ ಅಭಿನಂದನೆಗಳು.