Wednesday, February 17, 2021

ಇದೊಂದು ಮಾತು ಕೇಳುವುದು ಬಾಕಿಯಿತ್ತು

ಯಾವುದಾದರು ಜಗಳದಲ್ಲಿ, ಸಾಕಷ್ಟು ಅಪವಾದಗಳನ್ನು ಕೇಳಿ ಆದ ಮೇಲೆ, ಸಹನೆಯ ಕೊನೆ ಹಂತದಲ್ಲಿ "ಇದೊಂದು ಮಾತು ಕೇಳುವುದು ಬಾಕಿಯಿತ್ತು" ಎಂದು ಅವರಿವರು ಮಾತನಾಡುವುದು ಕೇಳುತ್ತಿರುತ್ತೇವೆ. ಅಥವಾ ಅಂತಹ ಅನುಭವ ನಮಗೇ ಆಗಿರುತ್ತದೆ. (ನಿಮಗೆ ಅಂತಹ ಅನುಭವ ಆಗಿರದೆ ಇದ್ದರೆ ನಿಮ್ಮನ್ನು ನೀವು ಲಕ್ಕಿ ಅಂದುಕೊಳ್ಳಬೇಡಿ. ಅಂತಹ ಅನುಭವಕ್ಕಾಗಿ ನೀವು ಕಾಯುತ್ತಿದ್ದಿರಿ ಎಂದಷ್ಟೇ ಅದರ ಅರ್ಥ).


ವ್ಯಕ್ತಿತ್ವ ಪಕ್ವವಾಗುವ ದಾರಿಯಲ್ಲಿ ನೋವುಗಳು ಸಹಜ. ಇತರರು ನಮ್ಮನ್ನು ನಾವು ಅಂದುಕೊಂಡ ಹಾಗೆ ನೋಡದೆ ಹೋಗಬಹುದು. ಸಂಬಂಧಗಳಲ್ಲಿ ಹೊಂದಾಣಿಕೆಗೆ ನಾವು ಎಷ್ಟೇ  ಪ್ರಾಮಾಣಿಕ ಪ್ರಯತ್ನ ಪಟ್ಟರೂ, ಅದು ಇತರರಿಗೆ ಒಪ್ಪಿಗೆ ಆಗದೆ ಹೋಗಬಹುದು. ನಮ್ಮ ಜೊತೆಯಲ್ಲಿರುವ ಎಲ್ಲರಿಗೂ, ಎಲ್ಲ ಕಾಲದಲ್ಲೂ ನಮ್ಮ ಅನಿಸಿಕೆ, ಅಭಿಪ್ರಾಯಗಳು ಸರಿ ಕಾಣಬೇಕೆಂದು ಏನಿದೆ? ಆಗ ಮೂಡಿದ ಭಿನ್ನಾಭಿಪ್ರಾಯಗಳು, ನಮ್ಮನ್ನು ಟೀಕೆ, ವಿಮರ್ಶೆಗೆ ಗುರಿ ಮಾಡುತ್ತವೆ. ಸಣ್ಣ ಪುಟ್ಟ ಟೀಕೆಗೆ ಬೆದರದ ನಾವು, ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ಹೋದಾಗ, ಕೊನೆಗೆ ನಮಗೆ ಸಹನೀಯವಲ್ಲದ ಮಾತು ಕೇಳಿ ಬಂದಾಗ ನಮಗರಿವಿಲ್ಲದಂತೆ ಹೇಳುತ್ತೇವೆ "ಇದೊಂದು ಮಾತು ಕೇಳುವುದು ಬಾಕಿಯಿತ್ತು"


ಎಷ್ಟೋ ಸಲ ಇಂತಹ ಮಾತು ನಿರ್ಣಾಯಕ ಹಂತದಲ್ಲಿ ಬಂದು ಬಿಡುತ್ತದೆ. ಅಲ್ಲಿಂದಾಚೆಗೆ ಯಾವುದೊ ಒಂದು ನಿರ್ಣಯದಲ್ಲಿ ಕೊನೆಗೊಳ್ಳುವ ವಿವಾದ ನಮ್ಮನ್ನು ಘಾಸಿಗೊಳಿಸುವುದು ಸಹಜ. ಆಗ ನಮಗೆ ನೋವಾಗುವುದು ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಂಡ ರೀತಿಗೆ. 


ಯಾವುದಾದರೂ ಕೆಲಸ ನಾವು ಸ್ವಯಂ ತೃಪ್ತಿಗಾಗಿ ಮಾಡಿದ್ದರೆ, ಇತರರು ಅದನ್ನು ಹೊಗಳಿದರೂ ಇಲ್ಲವೇ  ತೆಗಳಿದರೂ ನಾವೇಕೆ ಅದರ ಕಡೆಗೆ ಗಮನ ಹರಿಸುತ್ತಿದ್ದೆವು? ಇಲ್ಲಿ ಸ್ವಲ್ಪ ವಿಚಾರ ಮಾಡಿ ನೋಡಿದರೆ ನಮಗೇ ಅರಿವಾಗುವುದು ನಮಗೆ ಘಾಸಿ ಮಾಡಿದ್ದು ಬೇರೆಯವರು ನಮ್ಮನ್ನು ಆದರಿಸಲಿ ಎನ್ನುವ ನಮ್ಮ ಸುಪ್ತ ಮನಸಿನ ಬಯಕೆಯಿಂದ. ನಮಗೆ ನಾವು ಏನೋ ಅಂದುಕೊಂಡಿರುತ್ತೇವೆಲ್ಲ, ಅದು ನಮ್ಮನ್ನು ದಾರಿ ತಪ್ಪಿಸುತ್ತದೆ. ಅದರಿಂದ ಹೊರ ಬಂದು ನಿರ್ಲಿಪ್ತ ಮನಸ್ಸಿನಿಂದ ನಡೆದುಕೊಂಡರೆ ನಮಗೆ ನೋವುಂಟು ಮಾಡುವ ಶಕ್ತಿ ಯಾರಿಗೆ ಇದೆ? ಇನ್ನೊಬ್ಬರು ಏನಾದ್ರು ಅನ್ನಲಿ, ಅವರು ಕೊಡುವ ಸರ್ಟಿಫಿಕೇಟ್ ನಮಗೇನು ಉಪಯೋಗ? ನಮಗೆ ನಾವು ಏನು ಎಂಬುದರ ಅರಿವು ಬಂದ ಮೇಲೆ ನಮಗೆ ಬೇರೆಯವರ ಸಮರ್ಥನೆಯ ಅವಶ್ಯಕತೆ ಇರುವುದಿಲ್ಲ. ಆಗ ನಮಗೆ ವ್ಯಕ್ತಿತ್ವದಲ್ಲಿ ಬರುವ ಪಕ್ವತೆ ಒಂದು ತಡೆಗೋಡೆಯಾಗಿ ಅಪವಾದಗಳಿಗೆ ಪ್ರತಿರೋಧ ಒಡ್ಡುತ್ತದೆ. ಯಾರು ಏನು ಎಂದರೂ, ಅದು ನಮ್ಮ ಕಿವಿಯನ್ನು ದಾಟಿ ಹೃದಯ ತಲುಪಿ ಘಾಸಿಗೊಳಿಸುವುದಿಲ್ಲ.


ಅಪವಾದಗಳು ಮತ್ತೆ ಬಂದೇ ಬರುತ್ತವೆ. ಆವಾಗ "ಇದೊಂದು ಮಾತು ಕೇಳುವುದು ಬಾಕಿಯಿತ್ತು" ಎನ್ನುವ ಮಾತು ನಿಮ್ಮ ಬಾಯಿಂದ ಹೊರಬಿದ್ದರೂ, ಅದು ನಿಮಗೆ ಯಾವುದೇ ನೋವು ಉಂಟು ಮಾಡದೇ ಇದ್ದರೆ ನಿಮಗೆ ಅಭಿನಂದನೆಗಳು.

ಮೂರ್ಖರ ಪೆಟ್ಟಿಗೆ (TV) ಬಂದ್ ಮಾಡಿದ್ದರ ಅನುಕೂಲಗಳು

 ನಮ್ಮ ಮನೆಯಲ್ಲಿ ಮೂರ್ಖರ ಪೆಟ್ಟಿಗೆ ಬಂದ್ ಮಾಡಿ ಸ್ವಲ್ಪ ದಿನಗಳಾದವು. ಅದರಿಂದ ಆದ ಅನುಕೂಲಗಳನ್ನು ಇಲ್ಲಿ ಪಟ್ಟಿ ಮಾಡಿಕೊಡುತ್ತಿದ್ದೇನೆ.


೧. ನಮ್ಮ ಮಕ್ಕಳಿಬ್ಬರ ನಡುವಿನ ಜಗಳ ಕಡಿಮೆಯಾಗಿರುವುದು

೨. ಪ್ರತಿ ತಿಂಗಳು ದೂರದರ್ಶನ ನವೀಕರಿಸಲು ಬೇಕಾದ ದುಡ್ಡು ಮಿಕ್ಕಿರುವುದು

೩. ವಿದ್ಯುತ್ ಉಪಯೋಗ ಕಡಿಮೆಯಾಗಿರುವುದು


ಆದರೆ ಪ್ರಮುಖ ಉಪಯೋಗವೆಂದರೆ, ಮಕ್ಕಳು ತಮ್ಮ ಗಮನವನ್ನು ಬೇರೆ ಕಡೆಗೆ ಹರಿಸಿರುವುದು. ಈಗ ಅವರಿಗೆ ನಮ್ಮ ಜೊತೆ ಮಾತನಾಡಲು ಸಮಯವಿದೆ. ಹಾಗೆ ತಮ್ಮ ಹವ್ಯಾಸ ಬೆಳೆಸಿಕೊಳ್ಳಲು ಕೂಡ ಸಾಕಷ್ಟು ಸಮಯವಿದೆ. 

ಮಗ ಪ್ರತೀಕ (೪ನೇ ಕ್ಲಾಸು) ಬಿಡಿಸಿರುವ ಚಿತ್ರಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಆಗುತ್ತಿರುವ ಸಂತೋಷ ಕೂಡ ಬೆಲೆ ಕಟ್ಟಲಾಗದ್ದು.







Saturday, February 6, 2021

ಕಥೆ: ತೊರೆಯ ಸ್ನಾನ

ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ-ಹೊರನಾಡು ಮಾರ್ಗ ಮಧ್ಯದಲ್ಲಿ ಅದು ಒಂದು ಸುಂದರ ಕಾಫಿ ಎಸ್ಟೇಟ್. ಅಲ್ಲಿ ಇದ್ದ ನಿರ್ಜನತೆಯೇ ಅದರ ಪ್ರಾಕೃತಿಕ ಸೌಂದರ್ಯ ಹಾಗೆ ಉಳಿದುಕೊಂಡಿರಲು ಕಾರಣವಾಗಿದ್ದಿರಬೇಕು. ಅದರ ಮಾಲೀಕರು ಅಲ್ಲಿ ವರ್ಷ ಪೂರ್ತಿ ಇರದಿದ್ದರೂ, ಎಸ್ಟೇಟ್  ನೋಡಿಕೊಂಡರಲು ಇದ್ದ ಆಳು ಅದರ ನಿರ್ವಹಣೆಯ ಹೊಣೆ ಹೊತ್ತಿದ್ದ. ಮಾಲೀಕರು ಯಾವಾಗ ಬೇಕಾದರೂ ಹೊರಟು ಬಂದು ಬಿಡುತ್ತಿದ್ದರಲ್ಲ. ಅದಕ್ಕಾಗಿ ಮನೆಯ ಕಸ ಗುಡಿಸುವುದು, ಪೀಠೋಪಕರಣಗಳ ಮೇಲಿನ ಧೂಳು ಒರೆಸುವುದು, ಬೆಡ್ ಶೀಟ್ ಬದಲಾಯಿಸುವುದು ಹೀಗೆ ಮಾಲೀಕರು ಯಾವತ್ತೂ ಬಂದರೂ ಆ ಮನೆ ವಾಸ ಯೋಗ್ಯ ಎನ್ನುವಂತೆ ನೋಡಿಕೊಳ್ಳುತ್ತಿದ್ದ. ತಾನು ಕೂಡ ಅಲ್ಲಿಯೇ ಒಂದು ಕೋಣೆಯಲ್ಲಿ ಮಲಗಿಬಿಡುತ್ತಿದ್ದ. ಇಲ್ಲವೇ ಕೂಗಳತೆ ದೂರದಲ್ಲಿ ಇದ್ದ ತನ್ನ ಹಳ್ಳಿಯ ಕಡೆಗೆ ರಾತ್ರಿ ಹೊರಟು, ಮರುದಿನ ಬೆಳಿಗ್ಗೆ ವಾಪಸ್ಸಾಗುತ್ತಿದ್ದ.


ಮಾಲೀಕರು ಇವನನ್ನು ಆಳಿನ ಹಾಗೆ ಎಂದು ನೋಡಿದ್ದಿಲ್ಲ. ಅವರ ನಡುವೆ ಮಾತು ಕತೆ ಕಡಿಮೆಯಾದರೂ ಒಬ್ಬರನ್ನೊಬ್ಬರು ಸಂಪೂರ್ಣ ಅರ್ಥ ಮಾಡಿಕೊಂಡಂತೆ ವರ್ತಿಸುತ್ತಿದ್ದರು. ಅವರು ನಸುಕಿನಲ್ಲಿ ಬೇಗ ಎದ್ದರೆ, ಇವನು ಅವರಿಗೆ ಬಿಸಿ ಚಹಾ ಕಾಯಿಸುವುದು, ಎಲ್ಲೋ ಹೊರಟು ನಿಂತರೆ ಅವರ ವಾಹನ ಸ್ವಚ್ಛಗೊಳಿಸುವುದು, ರಾತ್ರಿಯ ಹೊತ್ತಿಗೆ ಊಟ ತಂದು ಕೊಡುವುದು, ಹೀಗೆ ಅವರ ಬೇಕು-ಬೇಡಗಳನ್ನು ಒಬ್ಬ ಬಂಧುವಿನ ಹಾಗೆ ನೋಡಿಕೊಳ್ಳುತ್ತಿದ್ದ. ಮಾಲೀಕರಾದರೂ ಇವನ ಕಷ್ಟಗಳಿಗೆ ಸ್ಪಂದಿಸಿ, ಅವರಿಬ್ಬರಲ್ಲಿ ಒಳ್ಳೆಯ ಅನ್ಯೋನ್ಯತೆ ಮೂಡಿತ್ತು. ಬೇಸಿಗೆಯ ದಿನಗಳಲ್ಲಿ ಹತ್ತಿರದ ತೊರೆಗೆ ಸ್ನಾನಕ್ಕೆ ಹೋಗುವುದು ಹಾಗೆಯೇ ಚಳಿ ರಾತ್ರಿಗಳಲ್ಲಿ ಮನೆ ಹೊರಗೆ ಹಿತವಾಗಿ ಸೌದೆ ಉರಿಸುತ್ತ  ಕುಳಿತುಕೊಳ್ಳುವುದು ಇಬ್ಬರಿಗೂ ಇಷ್ಟದ ವಿಷಯವಾಗಿತ್ತು.


ಮಾಲೀಕರು ಬೆಂಗಳೂರಿನಲ್ಲಿ ಹಲವಾರು ವ್ಯವಹಾರದಲ್ಲಿ ಮುಳುಗಿದ್ದರೂ, ತಮ್ಮ ಎಸ್ಟೇಟ್ ಗೆ ಆಗೊಮ್ಮೆ ಈಗೊಮ್ಮೆ ಬಂದು ಕೆಲ ದಿನ ಉಳಿದುಕೊಂಡಾಗಲೇ ಅವರಿಗೆ ನೆಮ್ಮದಿ. ಇಲ್ಲಿಯ ಪ್ರಕೃತಿ ದೇಹದೊಳಗೆ ತುಂಬುವ ಜೀವಶಕ್ತಿ ಅವರಲ್ಲಿ ಚೈತನ್ಯ ಮೂಡಿಸುತ್ತಿತ್ತು. ಬೇಸಿಗೆಯಲ್ಲಿ ಬಂದರೆ ಕೆಲ ವಾರಗಳಾದರೂ ಉಳಿದುಕೊಳ್ಳುತ್ತಿದ್ದರು. ದೇಶ ವಿದೇಶ ಸುತ್ತಿದ್ದರೂ, ಇಲ್ಲಿನ ಪಶ್ಚಿಮ ಘಟ್ಟಗಳ ನಿಸರ್ಗ ಎರೆಯುವ ತಂಪು ಬೇರೆ ಜಾಗದಲ್ಲಿ ಸಾಧ್ಯವಿಲ್ಲ ಎನ್ನುವುದು ಅವರ ಅನುಭವಕ್ಕೆ ಬಂದ ವಿಷಯ. ಹಾಗಾಗಿಯೇ ಎಸ್ಟೇಟ್ ಅವರಿಗೆ ಹೃದಯಕ್ಕೆ ತುಂಬಾ ಹತ್ತಿರ. ಹಾಗೆಯೆ ಅದನ್ನು ನೋಡಿಕೊಳ್ಳುವ ವ್ಯಕ್ತಿಯನ್ನು ಅವರಿಗೆ ಆಳಿನ ಹಾಗೆ ನೋಡುವುದು ಸಾಧ್ಯವಾಗಿರಲಿಲ್ಲ.


ಎಸ್ಟೇಟ್ ಕಡೆ ಜೋಪಾನ, ಮತ್ತೆ ಬರುವೆ ಎಂದು ಹೇಳಿ ಹೋದ ಮಾಲೀಕರು ಮತ್ತೆ ಬರದೇ ದಿನಗಳು, ತಿಂಗಳುಗಳು ಉರುಳಿದವು. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಎಸ್ಟೇಟ್ ಮನೆಯ ವೆಚ್ಚಕ್ಕೆಂದು ಪ್ರತಿ ತಿಂಗಳು ಬ್ಯಾಂಕ್ ಗೆ ದುಡ್ಡು ಬರುವಂತೆ ವ್ಯವಸ್ಥೆ ಮಾಡಿದ್ದರಲ್ಲ. ಅದನ್ನು ತೆಗೆದುಕೊಂಡು ಆಳು ಮನೆಯನ್ನು ತನ್ನ ಪ್ರತಿ ದಿನದ ಕರ್ತವ್ಯದಂತೆ ಸ್ವಚ್ಛಗೊಳಿಸಿಗೊಂಡು ಇದ್ದ. ಒಂದಲ್ಲ ಒಂದು ದಿನ ಅವರು ಮರಳಿ ಬರುತ್ತಾರೆ ಎಂಬ ನಂಬಿಕೆ ಅವನಲ್ಲಿ ಬಲವಾಗಿತ್ತು.


ಕೆಲವು ವರ್ಷಗಳ ನಂತರ ಮಾಲೀಕರು ಬಂದೇ ಬಿಟ್ಟರು. "ಅಂತೂ ಬಂದೇ ಬಿಟ್ಟಿರಿ. ನನಗೆ ವಯಸ್ಸಾಗುತ್ತ ಬಂದರೂ, ಯಾವ ಕೆಲಸವನ್ನು ನಿಲ್ಲಿಸಿಲ್ಲ. ನಿಮ್ಮ ವಾಸಕ್ಕೆ ಮನೆ  ಸ್ವಚ್ಛವಾಗಿ ಇದೆ." ಎಂದು ನೆಮ್ಮದಿಯ ಧ್ವನಿಯಲ್ಲಿ ಹೇಳಿದ ಆಳು.

"ಅದರ ಅಗತ್ಯವಿಲ್ಲ. ಕೊನೆ ಬಾರಿಗೆ ಒಮ್ಮೆ ಮನೆ ಸುತ್ತು ಹಾಕಿ ಬರೋಣ ಬಾ" ಎಂದರು ಯಜಮಾನರು.

ಅರ್ಥವಾಗದಂತೆ ನೋಟ ಬೀರಿದ ಆಳು ಅವರನ್ನು ಹಿಂಬಾಲಿಸಿದ. ಒಂದೊಂದಾಗಿ ಕೋಣೆಯ ಕದ ತೆರೆದಾಗ, ಸ್ವಚ್ಛ ನೆಲದ ಮೇಲೆ ಬಿಸಿಲು ಬೀಳಲಾರಂಭಿಸಿತು. ಕೊನೆಗೆ ಆಳು ಉಳಿದುಕೊಳ್ಳುತ್ತಿದ್ದ ಕೋಣೆಯ ಕದ ತೆಗೆದಾಗ, ಅಲ್ಲಿ ಒಬ್ಬ ವ್ಯಕ್ತಿ ನೆಲದ ಮೇಲೆ ಒರಗಿಕೊಂಡಂತೆ ಕಾಣಿಸಿತು. ಅದು ಉಸಿರು ನಿಂತು ಹೋದ ಒಂದು ನಿರ್ಜಿವ ಶವ ಎಂಬುದರ ಅರಿವಾಯಿತು.

"ಯಾರು ಇಲ್ಲಿ ಸತ್ತು ಬಿದ್ದಿರುವುದು?" ತನಗೆ ಎಂಬಂತೆ ಕೇಳಿಕೊಂಡ ಆಳು.

"ಅದು ನೀನೇ. ನೀನು ದೇಹ ಬಿಟ್ಟು ಆಗಲೇ ಎರಡು ದಿನವಾಯಿತು" ಹೇಳಿದರು ಯಜಮಾನರು.

"ಹಾಗಾದರೆ, ನೀವು ನನ್ನ ನೋಡಲು ಬಂದಿರಾ?" ಕೇಳಿದ ಆಳು.

"ಹೌದು. ನಾನು ದೇಹ ಬಿಟ್ಟು ಬಹಳ ಕಾಲವೇ ಆಯಿತು. ಆದರೆ ನೀನು ಮಾತ್ರ ಮನೆ ಜವಾಬ್ದಾರಿಯಲ್ಲಿ ಮಗ್ನನಾಗಿ ಹೋಗಿದ್ದೆ. ನಿನ್ನ ಸಮಯ ಬರುವುದಕ್ಕಾಗಿ ಇಲ್ಲಿಯವರೆಗೆ ಕಾಯಬೇಕಾಯಿತು" ಉತ್ತರಿಸಿದರು ಯಜಮಾನರು.

"ಹಾಗಾದರೆ ಈ ಮನೆ?"

"ಅದರ ಅವಶ್ಯಕತೆ ಇನ್ನಿಲ್ಲ. ತೊರೆಗೆ ಸ್ನಾನಕ್ಕೆ ಹೋಗೋಣ ಬಾ."

ಆ ಮನೆಯ ಬಾಂಧವ್ಯ ಅಲ್ಲಿಗೆ ಮುಗಿದರೂ ಯಾವುದೇ ಯೋಚನೆ ಇಲ್ಲದೆ ತಮಗೆ ಖುಷಿ ಕೊಡುವ ತೊರೆಯ ಸ್ನಾನಕ್ಕೆ ಹೊರಟರು.


(ಇತ್ತೀಚಿನ ಹೊರನಾಡು ಪ್ರವಾಸದಲ್ಲಿ ದಾರಿಯಲ್ಲಿ ನೋಡಿದ ಪಾಳು ಮನೆಗಳು ಮತ್ತು ಹಿಂದೆ ಓದಿದ ಕಥೆಗಳ ಪ್ರಭಾವದಿಂದ ರೂಪುಗೊಂಡಿದ್ದು)

Thursday, February 4, 2021

Book Summary: Only The Paranoid Survive

A strategic inflection point can be deadly when unattended to”. So wrote Andrew Grove, Intel’s then executive in his 1996 book titled “Only the Paranoid Survive”. He emphasized that those companies who are not paranoid would find themselves decoupled soon from what really matters, lose their relevance and competitive edge. Twenty-five years later, we find that the speed at which technological transformations happen, the intensity of competition and the disruptions in the way business is done have only further accelerated, making the message of this book more relevant in the current times.

Salespeople understand shifting customer demands before management does. Financial analysts are the earliest to know when the fundamentals of a business change. How to know when the changes are just transitory (noise) and when they represent the beginning of a new era (signal)? How to raise our awareness and how to use the opportunities these inflections offer to break out to a higher level of achievement? This business strategy book helps with that and provides a framework to deal with them.

For those who want to trace how the semiconductor and computing industry evolved through many strategic inflections, this is one of the books to learn from. Though this industry has significantly changed since this book was first published in 1996, it sets a stage to understand how things worked in the 1980’s & 90’s and we can clearly see that inflections are happening in a similar fashion now as well but at a larger scale and more frequently. Since the framework to understand inflections and responding to them remains the same, this well-written book helps us understand the industry we serve better.


Tuesday, February 2, 2021

ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ

ಎಸ.ಪಿ.ಬಾಲಸುಬ್ರಮಣ್ಯಂ ಅವರು ಹಾಡಿರುವ ನೂರಾರು ಗೀತೆಗಳನ್ನು ನಾವೆಲ್ಲರೂ ಕೇಳಿದ್ದೇವೆ. ಅವರು ವಿಷ್ಣುವರ್ಧನ್ ಅವರ ಚಿತ್ರಗಳಿಗೆ ಹಾಡಿದ ಧ್ವನಿಯ ಗಾಂಭೀರ್ಯ ಬೇರೆ. ಹಾಗೆ ಅಂಬರೀಷ್ ಗೆ ಹಾಡಿದಾಗ ಸ್ವಲ್ಪ ಗಡಸು ಧ್ವನಿ ಮತ್ತೆ ಶಿವರಾಜಕುಮಾರ್ ಅವರ ಆರಂಭದ ಚಿತ್ರಗಳಿಗೆ ಹಾಡಿದಾಗ ನೀಡಿದ ಎಳೆ ಧ್ವನಿ ಹೀಗೆ ತಮ್ಮ ಧ್ವನಿ ನಟರಿಗೆ ಹೊಂದಾಣಿಕೆ ಆಗುವಂತೆ ಹಾಡಿದ್ದು ಅವರ ವಿಶೇಷ.

ಹಾಗೆಯೇ ಎಷ್ಟೋ ಹೊಸ ನಟರಿಗೂ ಅವರು ಧ್ವನಿ ನೀಡಿದ್ದಾರಲ್ಲವೇ? ಅಲ್ಲಿ ಅವರಿಗೆ ಯಾವುದೇ ಹೊಂದಾಣಿಕೆಯ ಅಗತ್ಯವಿಲ್ಲದೆ ತಮ್ಮ ಧ್ವನಿಯಲ್ಲಿ ಸಂಪೂರ್ಣ ಮಾಧುರ್ಯ ತುಂಬಿ ಹಾಡುವುದು  ಸಾಧ್ಯವಿತ್ತೇನೋ? ಅಂತಹದೇ ಒಂದು ಹಾಡು ಇಲ್ಲಿದೆ. ಅವರ ಜೊತೆಗೆ ಹಾಡಿದ ವಾಣಿ ಜಯರಾಮ್ ಅವರ ಧ್ವನಿಯ ಸಿಹಿಯನ್ನು ಮೀರಿಸುವಂತೆ ಎಸ್. ಪಿ. ಹಾಡಿದ್ದಾರೆ.


"ಹಾಡುವ ಮುರಳಿಯ ಕುಣಿಯುವ ಗೆಜ್ಜೆಯ

ಎದೆಯಲಿ ಒಂದೇ ರಾಗ"


ಅದು ಆನಂದ ಭೈರವಿ ರಾಗ ಎಂದು ಅವರು ಹಾಡುತ್ತಾರಾದರೂ, ರಾಗ, ಶ್ರುತಿ, ತಾಳಗಳ ಜ್ಞಾನವಿಲ್ಲದ ನನಗೆ ಇಷ್ಟವಾದದ್ದು ಮಾತ್ರ ಎಸ್. ಪಿ. ಧ್ವನಿಯಲ್ಲಿದ್ದ ಭಾವ ಮತ್ತು ಅವರು ಇಂಪಾಗಿ ಹಾಡಿದ ರೀತಿ. ಅವರು ನಮ್ಮನ್ನು ಅಗಲಿದರೂ, ಒಳ್ಳೆಯ ಹಾಡುಗಳ ಸಂಪತ್ತನ್ನೇ ಬಿಟ್ಟು ಹೋಗಿದ್ದಾರಲ್ಲವೇ? ಅವರಿಗೊಂದು ನಮನ.


https://www.youtube.com/watch?v=5xjX7I6PUig