೬-೮ ನೇ ಶತಮಾನದ ಅವಧಿಯಲ್ಲಿ ಬಾದಾಮಿಯ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವಸ್ಥಾನಗಳ ಸಮೂಹ ಐಹೊಳೆಯಲ್ಲಿವೆ. ಹೆಚ್ಚಿನ ದೇವಸ್ಥಾನಗಳು ಶಿವ, ವಿಷ್ಣು ಮತ್ತು ದುರ್ಗೆಯನ್ನು ಪೂಜಿಸುವ ಮಂದಿರಗಳಾದರೆ, ಜೈನ ಮಂದಿರಗಳೇನೂ ಕಡಿಮೆ ಸಂಖ್ಯೆಯಲ್ಲಿಲ್ಲ. ಒಂದು ಬುದ್ಧ ಮಂದಿರ ಕೂಡ ಇಲ್ಲಿ ಕಾಣಬಹುದು. ಇದು ಆ ಕಾಲಘಟ್ಟದಲ್ಲಿ ಮೂರು ಧರ್ಮಗಳಿಗೂ ಪ್ರಾಶಸ್ತ್ಯ ಇತ್ತು ಎನ್ನುವುದು ತೋರಿಸುತ್ತದೆ. ಬೆಟ್ಟ ಕೊರೆದು ಗುಹೆಯಲ್ಲಿ ನಿರ್ಮಿಸಿದ ಮಂದಿರಗಳು, ಬೃಹದಾಕಾರದ ಕಲ್ಲುಗಳನ್ನು ಜೋಡಿಸಿ, ಅದರಲ್ಲೇ ಮಂಟಪ, ಗೋಪುರ ಕಟ್ಟಿ, ಅವುಗಳಲ್ಲಿ ಕಲೆ ಅರಳಿಸಿದ ದೇವಸ್ಥಾನಗಳು ಮನುಷ್ಯ ೧೫೦೦ ವರುಷಗಳ ಹಿಂದೆ ಕಲ್ಲನ್ನು ಪಳಗಿಸುವ ನೈಪುಣ್ಯ ಹೊಂದಿದ್ದ ಎಂದು ತೋರಿಸುತ್ತವೆ. ವಾಸ್ತುಶಿಲ್ಪದ ಪರಿಣಿತಿ ಕೂಡ ಆ ಕಾಲದಿಂದಲೇ ಆರಂಭ.
ಬಿರು ಬಿಸಿಲಿನ ಬಯಲು ಸೀಮೆಯಲ್ಲಿ ರಾಜ್ಯ ಕಟ್ಟಿ ಮೆರೆದ ಮನೆತನಗಳು ಅನೇಕ. ಅವರಿಗೆ ಬರೀ ಅಧಿಕಾರದ ಮೇಲಷ್ಟೇ ಆಸೆ ಇರಲಿಲ್ಲ. ತಮ್ಮ ಹೆಸರು ಅಜರಾಮರ ಆಗಲಿ ಎನ್ನುವ ಹೆಬ್ಬಯಕೆ ಕೂಡ ಅಷ್ಟೇ ಬಲವಾಗಿತ್ತು. ಕೋಟೆ, ಕೆರೆ, ದೇವಸ್ಥಾನಗಳ ಕಟ್ಟಿ ಸಮಾಜಕ್ಕೆ ಹಲವಾರು ಕೊಡುಗೆ ನೀಡಿ ಮಾನವನ ಏಳಿಗೆಗೆ ಕಾರಣರಾಗುತ್ತಾ ಹೋದರು. ಆದರೆ ಅವರಂತೆ ಇನ್ನೊಬ್ಬ ರಾಜನಿಗೆ ಕೂಡ ಅದೇ ಆಸೆ ಹುಟ್ಟುತ್ತದಲ್ಲ. ಆಗ ನಡೆದದ್ದು ಯುದ್ಧ. ಐಹೊಳೆ ಬಾದಾಮಿಯ ಚಾಲುಕ್ಯರಿಂದ, ರಾಷ್ಟ್ರಕೂಟರಿಗೆ ನಂತರ ಕಲ್ಯಾಣದ ಚಾಲುಕ್ಯರಿಗೆ, ದೆಹಲಿ ಸುಲ್ತಾನರಿಗೆ, ವಿಜಯನಗರದ ಅರಸರಿಗೆ, ಬಹಮನಿ ಸಾಮ್ರಾಜ್ಯಕ್ಕೆ ಹೀಗೆ ಬೇರೆ ಬೇರೆ ರಾಜ ಮನೆತನಗಳ ಆಳ್ವಿಕೆಗೆ ಒಳ ಪಡುತ್ತಾ ಬಂತು. ಮುಸ್ಲಿಮರ ಆಳ್ವಿಕೆ ಇದ್ದಾಗ ಲಾಡ್ ಖಾನ್ ಎನ್ನುವವ ಇಲ್ಲಿ ಗುಡಿಯೊಂದರಲ್ಲಿ ನೆಲೆಸಿದ್ದ. ಆಮೇಲೆ ಅವನ ಹೆಸರೇ ಆ ಗುಡಿಗೆ ಖಾಯಂ ಆಯಿತು.
ಐಹೊಳೆಗೆ ಹೋಲಿಸಿದರೆ ಪಟ್ಟದಕಲ್ಲಿನಲ್ಲಿ ದೇವಸ್ಥಾನಗಳ ಸಂಖ್ಯೆ ಕಡಿಮೆ. ಊರ ಹೆಸರೇ ಸೂಚಿಸುವಂತೆ ಚಾಲುಕ್ಯ ಅರಸರ ಪಟ್ಟಾಬ್ಜಿಷೇಕಕ್ಕೆ ಎಂದು ಕಟ್ಟಿದ ಊರಿನಲ್ಲಿ ದೇವಸ್ಥಾನಗಳ ಸಂಖ್ಯೆ ಕಾಲ ಕ್ರಮೇಣ ಹೆಚ್ಚುತ್ತಾ ಹೋಯಿತು. ವಿಶೇಷ ಎಂದರೆ ಇಲ್ಲಿನ ಕೆಲವು ದೇವಸ್ಥಾನಗಳನ್ನು ಕಟ್ಟಿಸಿದ್ದು ರಾಣಿಯರು. ಅದು ತಮ್ಮ ಗಂಡನ ವಿಜಯೋತ್ಸವಗಳ ನೆನಪಿಗಾಗಿ. ರಾಜ ಯುದ್ಧ ಮಾಡುವುದರಲ್ಲಿ ಗಮನ ಕೊಟ್ಟರೆ, ರಾಣಿಯರು ದೇವಸ್ಥಾನ ಕಟ್ಟುವ ಹೊಣೆ ಹೊತ್ತರೆನೋ? ಇಮ್ಮಡಿ ಪುಲಿಕೇಶೀ, ವಿಕ್ರಮಾದಿತ್ಯ ರಂತ ಚಾಲುಕ್ಯ ಮನೆತನದ ಅರಸರು ಗೆದ್ದ ಯುದ್ಧಗಳೇನು ಕಡಿಮೆಯೇ?
ಧರ್ಮ, ಇತಿಹಾಸ, ವಾಸ್ತುಶಿಲ್ಪ ಇವುಗಳಲ್ಲಿ ನಿಮಗೆ ಒಂದರಲ್ಲಿ ಆಸಕ್ತಿ ಇದ್ದರೂ ಸಾಕು. ಐಹೊಳೆ, ಪಟ್ಟದಕಲ್ಲು ನಿಮ್ಮನ್ನು ಬೆರಗುಗೊಳಿಸುವುದರಲ್ಲಿ ಸಂದೇಹವಿಲ್ಲ.