Tuesday, July 28, 2015

ಹೊಸತನ ತಂದಿದೆ 'ಸಂಕಥನ'

ಇದು ಕಥೆ, ಕವನ, ವಿಚಾರ, ವಿಮರ್ಶೆಗಳ ಸಮ್ಮಿಲನ. ಯಾವುದೇ ವೈಚಾರಿಕತೆಯ ಚೌಕಟ್ಟಿಗೆ ಒಳಗಾಗದೇ, ವೈವಿಧ್ಯತೆಯನ್ನು, ಹೊಸ ಬರಹಗಾರರ ಮೂಲಕ ಪರಿಚಯಿಸುವ ಯತ್ನ ಹೊಸದಾಗಿ ಆರಂಭವಾಗಿರುವ 'ಸಂಕಥನ' ಸಂಚಿಕೆಯದ್ದು.

ಇದು ತ್ರೈಮಾಸಿಕ. ನನ್ನ ಕೈಯಲ್ಲಿರುವುದು ಮೊದಲ ಸಂಚಿಕೆ. ಅತ್ಯುತ್ತಮ ಗುಣ ಮಟ್ಟದ ಮುದ್ರಣ, ಚಚ್ಚೌಕ ಆಕೃತಿಯ ಪುಸ್ತಕ. ಒಳಗಿನ ಪುಟಗಳು ನಯನ ಮನೋಹರ. ಬಾಹ್ಯ ಆಕರ್ಷಣೆಯ ಜೊತೆಗೆ ಸಾಹಿತ್ಯ ಲೋಕದ ನಂಟನ್ನು ಗಟ್ಟಿಗೊಳಿಸುವ ಪ್ರಯತ್ನ ಇದರಲ್ಲಿನ ಬರಹಗಳದ್ದು. ಕಥೆಗಳು ಅಷ್ಟಾಗಿ ಮನ ಕಲುಕದಿದ್ದರೂ, ಕವಿತೆಗಳು ಮಾತ್ರ ಕಾಡದೇ ಬಿಡುವುದಿಲ್ಲ.

ಭೂ-ಸ್ವಾಧೀನ ಕಾಯಿದೆ ರೈತನ ಕುಟುಂಬದಲ್ಲಿ ಹುಟ್ಟಿಸುವ ತಳಮಳ ವ್ಯಕ್ತ ಪಡಿಸುವ ಕವಿತೆ 'ಅಪ್ಪನ ಹೊಲದೊಳು ಠಕ್ಕರು ಬಂದರು' ಓದುಗನಲ್ಲೂ ದುಗುಡ ಹುಟ್ಟಿಸಿದರೆ, ಶಕುಂತಲೆ ಆತ್ಮ ಕಥೆ ಬರೆದು ಅಪವಾದಗಳು ದುಷ್ಯಂತನನ್ನು ಕಾಡುವಂತೆ ಮಾಡಬೇಕಿತ್ತು ಎನ್ನುವ ಕವಿತೆ ಓದುಗರನ್ನು ಕಾಡದೆ ಬಿಡದು.

ನೆರೂಡಾನ ಸಂದರ್ಶನ ಒಬ್ಬ ಕವಿಯನ್ನು ಸಾದ್ಯಂತವಾಗಿ ಪರಿಚಯಿಸುತ್ತದೆ. ಸುರೇಂದ್ರನಾಥರ 'ಗಾಳಿಗೆ ಬಿದ್ದ ಚಂದ್ರನ ತುಂಡುಗಳು' ಪುಸ್ತಕ ಪರಿಚಯ, ಲೇಖಕರ ಸಂದೇಶವನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ.

'ಮಾತೃ-ಭಾಷಾ ಶಿಕ್ಷಣ' ಲೇಖನ ಚರ್ಚೆಗೆ ಹೊಸ ಆಯಾಮಗಳನ್ನು ನೀಡುತ್ತದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕೇಳಿ ಬರುವ ವೀರಾವೇಶದ ಮಾತುಗಳಿಗಿಂತ, ಈ ತರಹದ ಸಂಚಿಕೆಗಳ ಕೊಡುಗೆ ಕನ್ನಡ ಭಾಷೆ-ಸಂಸ್ಕೃತಿಗೆ ಹೆಚ್ಚು ಉಪಯುಕ್ತ ಎನ್ನಿಸುತ್ತದೆ.

ಪ್ರತಿ ಪುಟವೂ ಅಚ್ಚುಕಟ್ಟು ಎನ್ನಿಸುವ ಈ ಪುಸ್ತಕದ ವಿನ್ಯಾಸ ಯಾವ ಓದುಗನನ್ನಾದರೂ ಆಕರ್ಷಿಸುವಂಥದ್ದು. ಸಂಪಾದಕ ರಾಜೇಂದ್ರ ಪ್ರಸಾದ್ ರ ಶ್ರಮ ಶ್ಲಾಘನೀಯ.

ಕೆಲವು ಪತ್ರಿಕೆಗಳಲ್ಲಿ ಸಂಪಾದಕ ತನ್ನ ದೈತ್ಯ ಪ್ರತಿಭೆಯನ್ನು ಎಲ್ಲ ಪುಟಗಳಲ್ಲಿ ಮತ್ತು ಬೇರೆ ಲೇಖಕರ ಬರಹಗಳಲ್ಲಿ ಕೂಡ ಅನಾವರಣಗೊಳಿಸುವ ಸಂಪ್ರದಾಯವನ್ನು ಅನುಕರಿಸದೆ, ಹೊಸ ಬರಹಗಾರರು ತಮ್ಮ  ಸ್ವಂತಿಕೆ ಕಾಪಾಡಿಕೊಳ್ಳಲು ಅವಕಾಶ ಮಾಡಿರುವುದು ಈ ಸಂಚಿಕೆಯಲ್ಲಿ ತಾಜಾತನ ಉಳಿಸಿದೆ.         

ನೀವೂ ಇದಕ್ಕೆ ಚಂದಾದಾರರಾಗಬೇಕೇ? ಇಗೋ, ಇಲ್ಲಿದೆ ಕೊಂಡಿ.


No comments:

Post a Comment