ಇಂದು ನಾನು ಬರೆಯುತ್ತಿರುವುದು ಮನುಷ್ಯ ಗೂಬೆಗಳ ಬಗ್ಗೆ ಅಲ್ಲ. ಅವರ ಕಾಟ ನನಗೆ ಇಲ್ಲ ಎಂದೇನಿಲ್ಲ. ಆದರೆ ಪಕ್ಷಿ
ಗೂಬೆಗಳ ಕಾಟ ಇಂದು ನನ್ನ ವಿಷಯ ವಸ್ತು.
ನಾವು ಬೆಂಗಳೂರು ಹೊರವಲಯದಲ್ಲಿ ಮನೆ ಕಟ್ಟಿಸಿ, ಅಲ್ಲಿಗೆ ವಾಸಕ್ಕೆ ಬಂದು ಹಲವು ತಿಂಗಳುಗಳೇ ಆದವು. ಆದರೆ ನಮ್ಮ ನೆರೆ-ಹೊರೆ ಕಾಂಕ್ರೀಟ್ ಕಾಡಲ್ಲ ಬದಲಿಗೆ ನಿಸರ್ಗದ ಮಡಿಲಿನಲ್ಲಿ ಪರಿಸರಕ್ಕೆ ಹತ್ತಿರವಾದ ಬದುಕು. ಕಣ್ಣು ಹಾಯಿಸಿದಷ್ಟು ಹಸಿರು. ಸುತ್ತ ಮುತ್ತಲಿನ ಕೆರೆಗಳು ವಾತಾವರಣ ತಂಪಾಗಿ ಇಡುವಲ್ಲಿ ಸಹಕಾರಿ. ಇಲ್ಲಿ ನಮ್ಮ ದಿನದ ಆರಂಭ ಅಲಾರಂ ಅಥವಾ ಹಾಲು, ಪೇಪರ್ ಜೊತೆ ಶುರುವಾಗದೇ, ಹಕ್ಕಿಗಳ ಕಲರವದೊಂದಿಗೆ, ಅವುಗಳ ಲವಲವಿಕೆಯ ಹಾರಾಟ, ಉತ್ಸಾಹದಲ್ಲಿ ಹೊರಡಿಸುವ ವಿಚಿತ್ರ ಶಬ್ದಗಳ ಸುಪ್ರಭಾತದೊಂದಿಗೆ ಶುರು ಆಗುತ್ತದೆ.
ನಮ್ಮ ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಗುಬ್ಬಿ, ಕಾಗೆ, ಪಾರಿವಾಳ, ಗೊರವೊಂಕಗಳನ್ನು ಬಿಟ್ಟರೆ ಬೇರೆ ಪಕ್ಷಿಗಳ ಹೆಸರೇ ಗೊತ್ತಿರದ ನನಗೆ ಇಲ್ಲಿ ಕಾಣುತ್ತಿದ್ದ ಬಗೆ ಬಗೆ ಬಣ್ಣದ, ವಿವಿಧ ಜಾತಿಯ ಪಕ್ಷಿಗಳು ವಿಸ್ಮಯ ಮೂಡಿಸಿದ್ದವು. ಇನ್ನೂ ಐದು ವರ್ಷ ದಾಟದ ನನ್ನ ಮಗನೂ ತನ್ನ ಬೈನಾಕ್ಯುಲರ್ ತಂದು ಹಕ್ಕಿಗಳ ನೋಡುವ ಉತ್ಸಾಹ ತೋರಿದ. ಇವುಗಳ ಚಿತ್ರ ತೆಗೆದು ಬ್ಲಾಗ್ ನಲ್ಲಿ ಹಾಕೋಣ ಎಂದು ನನ್ನ ಮೊಬೈಲ್ ನಲ್ಲಿ ಅವುಗಳನ್ನು ಕ್ಲಿಕ್ ಮಾಡಿದೆ. (ಆದರೆ ಆ ಚಿತ್ರಗಳನ್ನು ಕಂಪ್ಯೂಟರ್ ನಲ್ಲಿ ಹಾಕಿದಾಗ ತಿಳಿಯಿತು, ಇದಕ್ಕೆ ಕನಿಷ್ಠ ೨೦x ಜೂಮ್ ಇರುವ ಕ್ಯಾಮೆರಾ ಬೇಕು ಎಂದು). ಹೀಗೆ ಪಕ್ಷಿ ನೋಡುವ ನಮ್ಮ ಹವ್ಯಾಸ ಮೊದಲುಗೊಂಡಿತು. ಆದರೆ ರಾತ್ರಿ ಬರುವ ಹಕ್ಕಿಗಳು ಅದೇ ಮಾಧುರ್ಯ ಹೊಂದಿರುವುದಿಲ್ಲ ಎಂದು ಗೊತ್ತಾಗುವುದಕ್ಕೆ ಸ್ವಲ್ಪ ಸಮಯ ಹಿಡಿಯಿತು.
ನನಗೆ ಬಾಲ್ಯದಲ್ಲಿ ಪಕ್ಷಿಗಳೆಂದರೆ ಏನೋ ಪುಳಕ. ಪುರ್ರೆಂದು ಹಾರಿ ಹೋಗುವ ಗುಬ್ಬಿಗಳ ಹಿಂದೆ ಓಡಿ ಹೋದದ್ದೇ ಬಂತು. ಅವುಗಳನ್ನು ಮುಟ್ಟುವ ಯತ್ನ ಎಂದೂ ಫಲಕಾರಿಯಾಗಿರಲಿಲ್ಲ. ಇನ್ನೂ ಸ್ವಲ್ಪ ದೊಡ್ಡವನಾದ ಮೇಲೆ ಗೊರವಂಕ ಸಾಕಲು ಒಂದು ರಟ್ಟಿನ ಗೂಡು ಮಾಡಿಟ್ಟಿದ್ದೆ. ಆದರೆ 'ಪಕ್ಷಿಗಳು ಸ್ವತಂತ್ರ ಜೀವಿಗಳು, ಅವುಗಳನ್ನು ಬಂಧಿಸುವ ಯತ್ನ ಸರಿಯಲ್ಲ' ಎಂದು ಅಕ್ಕ ಹೇಳಿದ ಮಾತು ಸರಿ ಎಂದೆನಿಸಿ ಆ ಪ್ರಯತ್ನದಿಂದ ದೂರ ಸರಿದಿದ್ದೆ. ನಾನು ಶಾಲೆಗೆ ಹೋಗುವ ದಾರಿಯಲ್ಲಿ, ಒಂದು ತಿರುವಿನಲ್ಲಿ, ಐನೇರು (ಜಂಗಮ) ಒಬ್ಬರ ಮನೆಯಲ್ಲಿ ಗಿಳಿ ಒಂದಿತ್ತು. ಅದು ಚೆಂದಗೆ ಮಾತೂ ಕೂಡ ಆಡುತ್ತಿತ್ತು. ಅವರ ಮನೆಯ ಮುಂದೆ ನಾನು ಕೈ ಕಟ್ಟಿಕೊಂಡು ಆ ಗಿಳಿಯನ್ನು ನೋಡುತ್ತಾ ನಿಂತು ಬಿಡುತ್ತಿದ್ದೆ. ನಾನೊಬ್ಬನೇನಲ್ಲ. ಗಿಳಿ ಮಾತು ಯಾವ ಹುಡುಗರಲ್ಲಿ ಕುತೂಹಲ ಮೂಡಿಸದೆ ಇರುತ್ತೆ ಹೇಳಿ? ಆ ಮನೆಯವರು ಕೂಗು ಹಾಕಿ ನೆರೆದಿದ್ದ ಹುಡುಗರನ್ನು ಚದುರಿಸುತ್ತಿದ್ದರು. ಆಮೇಲೆ ಬಂಧುಗಳ ಮನೆಯ ಮೇಲೆ ಗಡಿಗೆಯನ್ನೇ ಗೂಡನ್ನಾಗಿಸಿ ಪಾರಿವಾಳ ಸಾಕುವ ಬಗೆಯನ್ನು ನೋಡಿದ್ದೆ. ಆದರೆ ಆ ಮನೆ ಹುಡುಗ ವಾಪಸು ಬರದಿದ್ದ ಪಾರಿವಾಳ ಹುಡುಕಿಕೊಂಡು ದೂರ ದೂರ ಅಲೆಯ ತೊಡಗಿದ ಮೇಲೆ ಅವರ ಮನೆಯವರು ಅವನ ಹವ್ಯಾಸಕ್ಕೆ ಇತಿಶ್ರೀ ಹಾಡಿದರು.
ಬೆಳೆಯುತ್ತ ಪಕ್ಷಿಗಳೆಡಿನ ಆಸಕ್ತಿ ಕಡಿಮೆಯಾದರೂ, ಅವು ಹುಟ್ಟಿಸುತ್ತಿದ್ದ ಬೆರಗು ಸಂಪೂರ್ಣವಾಗಿ ಮರೆಯಾಗಲಿಲ್ಲ. ಕಾಗೆ ಎಲ್ಲ ಕಡೆ ಕಾಣಸಿಗುವ ಪಕ್ಷಿಯಾಗದೆ ಇದ್ದರೆ ಎಲ್ಲರೂ ಇದನ್ನು 'ಎಂಥಹ ಸುಂದರ ಪಕ್ಷಿ, ಆಕರ್ಷಕ ಕಪ್ಪು ಬಣ್ಣ, ಕಾವ್-ಕಾವ್ ಎನ್ನುವ ಅದರ ಕಂಠ ಎಷ್ಟು ಸುಮಧುರ' ಎಂದು ಗುಣಗಾನ ಮಾಡುತ್ತಿದ್ದರು ಎಂದು ವಾದಿಸುತ್ತಿದ್ದೆ. ಕೇಳಿದವರು ಮುಗುಳ್ನಕ್ಕು ಸುಮ್ಮನಾಗುತ್ತಿದ್ದರು. ಈಗ್ಗೆ ಒಂದು ವರ್ಷದ ಹಿಂದೆ ಅಮೇರಿಕೆಗೆ ಹೋದಾಗ, ನಾನು ಉಳಿದುಕೊಂಡಿದ್ದ ಹೋಟೆಲಿನ ಕೋಣೆಯ ಹೊರಗಡೆ ಕುಳಿತಿದ್ದ ಅಲ್ಲಿನ ಕಾಗೆ (ಗಾತ್ರದಲ್ಲಿ ನಮ್ಮದಕ್ಕಿಂತ ಸ್ವಲ್ಪ ದೊಡ್ಡದು) ಜೊತೆಗೆ ಬಾಳೆಹಣ್ಣನ್ನು ಹಂಚಿಕೊಂಡೆ. ಮರುದಿನ ಅದೇ ಸಮಯಕ್ಕೇ ಬಂತು. ಫಲಹಾರದ ಜೊತೆಗೆ ನಮ್ಮ ಸ್ನೇಹವೂ ಬೆಳೆಯಿತು ಅನ್ನಿಸಿತು. ರವಿವಾರದಂದು ಆಫೀಸ್ ಗೆ ರಜೆ ಇದ್ದ ಕಾರಣ ಸ್ವಲ್ಪ ಜಾಸ್ತಿ ಹೊತ್ತೇ ಮಲಗಿದ್ದೆ. ಆದರೆ ಕಾಗೆ ಸದ್ದಿಗೆ ಎಚ್ಚರವಾಗಿ ಹೊರಬಂದು ನೋಡಿದರೆ ಅಲ್ಲಿ ೧೦-೧೨ ಕಾಗೆಗಳ ದಂಡೇ ನೆರೆದಿತ್ತು. ಇವು ನನ್ನ ಸ್ನೇಹಿತನ ಸ್ನೇಹಿತರೋ ಅಥವಾ ಪ್ರತಿ ದಿನ ಬೇರೊಂದು ಕಾಗೆ ನನ್ನ ಜೊತೆಯಾಗಿತ್ತೋ ತಿಳಿಯಲಿಲ್ಲ. ಆದರೆ ಹಂಚಿ ತಿನ್ನುವ ಕಾಗೆಯ ಮನೋಧರ್ಮ ನಾಗರೀಕತೆಯಲ್ಲಿ ಪಕ್ಷಿಕುಲ ಮನುಷ್ಯನಿಗಿಂತ ಮುಂದೆ ಇದೆ ಎನ್ನುವ ವಿಚಾರ ಮೂಡಿಸಿತು.
ಮತ್ತೆ ಪ್ರಸ್ತುತ ಕಾಲಕ್ಕೆ ಬಂದರೆ, ಹೊಸ ಮನೆಯ ಪರಿಸರ ಹಲವಾರು ಪಕ್ಷಿಗಳ ನೆಲೆಯಾಗಿದ್ದು ಸಂತಸ ತಂದಿತ್ತು. ಆದರೆ ಎಲ್ಲದಕ್ಕೂ ಕೊನೆ ಎನ್ನುವ ಹಾಗೆ, ಒಂದು ಸಾಯಂಕಾಲ ಮನೆಯ ಮುಂದಿನ ಸಂಪಿಗೆ ಮರದಲ್ಲಿ ಕಾಣಿಸಿಕೊಂಡಿತು ಒಂಟಿ ಗೂಬೆ. ಬೆಳಿಗ್ಗೆ ಅದೇ ಮರದಲ್ಲಿ ಕೋಗಿಲೆ ಕಂಡು ಅದೃಷ್ಟ ಅಂದುಕೊಂಡರೆ, ದುರಾದೃಷ್ಟದ ಸಂಕೇತ ಎನ್ನಿಸುವ ಗೂಬೆ ಸಾಯಂಕಾಲ ಅಲ್ಲಿ ಪ್ರತ್ಯಕ್ಷ. ಸಾಕಷ್ಟು ಗೂಬೆಗಳು ಅಲ್ಲಿ ಸಂಚರಿಸುತ್ತಿರುವುದು ಸ್ವಲ್ಪೇ ದಿನದಲ್ಲಿ ಗಮನಕ್ಕೆ ಬಂತು.
ವಿದೇಶದಲ್ಲಿ ಗೂಬೆ ಸಾಕುವದರ ಬಗ್ಗೆ ಓದಿದ್ದೇನೆ. ಆ ಪಕ್ಷಿಯೆಡೆಗೆ ನನಗೆ ಯಾವುದೇ ಮೂಢ ನಂಬಿಕೆಗಳಿಲ್ಲ. ಆದರೆ ಅದರ ಸ್ವಭಾವ ಮನುಷ್ಯನಿಗಿಂತ ತುಂಬಾ ವಿಭಿನ್ನವಾದದ್ದು, ಅದರ ಜೊತೆಗೆ ಮನುಷ್ಯನ ಹೊಂದಾಣಿಕೆ ಸುಲಭವಲ್ಲ ಎಂದು ನನ್ನ ಎಣಿಕೆ. ಅದರ ನೋಟ ಮತ್ತು ಧ್ವನಿ ಮನುಷ್ಯನಲ್ಲಿ ಭೀತಿಯ ಕಂಪನ ಮೂಡಿಸುತ್ತದೆ. ಅದಕ್ಕಾಗಿ ಆ ಪಕ್ಷಿಗೆ ಅಪಶಕುನದ ಹಣೆಪಟ್ಟ ಕಟ್ಟಿದರೆನೋ ಎಂದು ಅನುಮಾನ.
ಗೂಬೆ ಮೂರು ಸಲ ಕೂಗಿದರೆ ಅಪಶಕುನ, ಆದರೆ ಮೂವತ್ತು ಸಲ ಕೂಗಿದರೆ? ಒಂದು ದಿನ ರಾತ್ರಿ ಹತ್ತರ ಸಮಯ. ಗೂಬೆಗಳ ಗಲಾಟೆಗೆ ಹೊರ ಬಂದು ನೋಡಿದರೆ, ಅವು ಗೊರವೊಂಕ ದಂಪತಿಗಳೊಡನೆ ಕಾದಾಡುತ್ತಿರುವುದು ಕಂಡು ಬಂತು. ನನ್ನ ಸದ್ದಿಗೆ ಸ್ವಲ್ಪ ಕದನ ವಿರಾಮ ಘೋಷಿಸಿದಂತೆ ಕಂಡು ಬಂದರೂ, ದೂರ ಸಾಗಿ ಮತ್ತೆ ಜಗಳ ಮುಂದುವರಿಸಿದವು. ಅಂದಿನಿಂದ ಶುರುವಾದ ಅವುಗಳ ಹಾರಾಟ ಮತ್ತು ಕಿರುಚಾಟ ಇನ್ನು ನಿಂತಿಲ್ಲ.
ಅವುಗಳ ಬಗ್ಗೆ ಬರೆಯಬೇಕೆಂಬ ನನ್ನ ವಿಚಾರವನ್ನು ಅರಿತಂತೆ ಇಂದು ಒಂದು ಗೂಬೆ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿತು. ಎಂಥ ತೀಕ್ಷ್ಣ ನೋಟ. ನನ್ನ ವಾಹನದ ಬೆಳಕನ್ನು ಅದರ ಕಡೆ ಕೇಂದ್ರಿಕರಿಸಿದಾಗ ನಿಲ್ಲದೇ ಹಾರಿ ಹೋಯಿತು ತನ್ನ ಗುಟ್ಟು ಬಿಟ್ಟು ಕೊಡದೆ.
ಮನೆಗೆ ಭೇಟಿ ಕೊಡುವ ಸ್ನೇಹಿತರ ಮೊದಲ ಉದ್ಗಾರ "ಎಷ್ಟು ನಿರ್ಮಲ ವಾತಾವರಣ, ಎಷ್ಟು ಶುದ್ಧ ಗಾಳಿ - ಬೆಳಕು!". ಅವರಿಗೆ ಹೇಳಬೇಕು ಎಂದುಕೊಳ್ಳುತ್ತೇನೆ 'ರಾತ್ರಿ ಇಲ್ಲಿ ಒಮ್ಮೆ ಸುತ್ತಲು ಬನ್ನಿ' ಎಂದು.
ಹೇಳಲೇ? ನೀವೇನು ಅನ್ನುತ್ತೀರಿ?
Ha ha ha. :-)
ReplyDeleteI too stay in kegeri satelite town near nice road.
You are very lucky that u just have varies birds.
Since I stay near kommagata road...
In addition to lots of colur full birds(including ratna paksi,owl)
we have snakes,black colour scorpions,frogs,colourful chameleon too.
But we don't fear...infact my parents enjoy the environment.
they have gorwn tomotoes/chilies other day today things
Enjoying retirement. Far away from city.
What I liked is the way u wrote the post in our mother language.
Yes, Suresh. Writing in Kannada is effortless and a delightful experience for me. Choice of words and grammar come naturally. But for the subjects like Economics, I find it difficult to write in Kannada that is because I learnt them in English!
ReplyDelete