Saturday, September 17, 2016

ಅನುವಾದಿತ ಕಥೆ: ಏನು ನಿನ್ನ ಕನಸು? (ಮೂಲ: ರಸ್ಕಿನ್ ಬಾಂಡ್)

ಒಬ್ಬ ಮುದುಕ, ಆತ ಬೆನ್ನು ಪೂರ್ತಿ ಬಾಗಿದ ಭಿಕ್ಷುಕ. ಅವನದು ಉದ್ದನೇಯ ಬಿಳಿ ಗಡ್ಡ, ಗುಳಿ ಬಿದ್ದ ಕಣ್ಣುಗಳು. ಆತ ನಾನು ಕೂತಿದ್ದ ಲಿಚ್ಛಿ ಹಣ್ಣಿನ ಮರದ ರೆಂಬೆಯ ಕೆಳಗಡೆ ನಿಂತು, ತಲೆ ಎತ್ತಿ ನನ್ನನ್ನು ನೋಡಿದ.

'ಏನು ನಿನ್ನ ಕನಸು?' ಆತ ಕೇಳಿದ.

ಬೀದಿಯಲ್ಲಿ ಹಾದು ಹೋಗುವ ಒಬ್ಬ ಮುದುಕನ ಆ ಪ್ರಶ್ನೆ ನನ್ನನ್ನು ಚಕಿತಗೊಳಿಸಿತು.

'ಏನು ನಿನ್ನ ಕನಸು?' ಆತ ಮತ್ತೆ ಕೇಳಿದ.

'ನನಗೆ ನೆನಪಿಲ್ಲ' ನಾನು ಹೇಳಿದೆ. 'ನನಗೆ ನಿನ್ನೆ ರಾತ್ರಿ ಯಾವ ಕನಸೂ ಬಿದ್ದ ನೆನಪಿಲ್ಲ'.

'ಅದಲ್ಲ ನಾನು ಕೇಳಿದ್ದು. ಅದು ನಿನಗೂ ಗೊತ್ತು. ನೀನು ಒಬ್ಬ ಕನಸುಗಾರ ಎನ್ನುವುದು ಕಾಣುತ್ತಿದೆ. ಇದು ಲಿಚ್ಛಿ ಮರ ಹಣ್ಣು ಬಿಡುವ ಕಾಲವಲ್ಲ. ಆದರೆ ನೀನು ಈ ಮಧ್ಯಾಹ್ನದ ವೇಳೆ, ಇದರಲ್ಲಿ ಕೂತು ಕನಸು ಕಾಣುತ್ತಿರುವೆ.'

'ನನಗೆ ಇಲ್ಲಿ ಕೂಡುವುದು ಇಷ್ಟ' ನಾನು ಹೇಳಿದೆ ನಾನು ಒಬ್ಬ ಕನಸುಗಾರ ಎನ್ನುವ ವಿಷಯವನ್ನು ಒಪ್ಪಿಕೊಳ್ಳದೆ. ಬೇರೆ ಹುಡುಗರಿಗೆ ಕನಸುಗಳಿರಲಿಲ್ಲ, ಅವರ ಕೈಯಲ್ಲಿ ಕಲ್ಲು ಬೀಸುವ ಕವಣೆಗಳಿದ್ದವು.

'ಒಂದು ಕನಸು, ಬೇರೆ ಎಲ್ಲದಕ್ಕಿಂತ ಅದೇ ಬೇಕೆನ್ನುವ ಕನಸು ನಿನಗಿಲ್ಲವೇ?' ಮುದುಕ ಕೇಳಿದ.

'ಇದೆ' ನಾನು ತಡವಿಲ್ಲದೆ ಹೇಳಿದೆ. 'ನನಗೆ ನನ್ನದೇ ಆದ ಜಾಗ, ಒಂದು ಕೋಣೆ ಬೇಕು'

'ಓ! ನಿನ್ನದೇ ಆದ ಜಾಗ, ನಿನ್ನದೇ ಆದ ಮರ, ಅವೆಲ್ಲ ಒಂದೇ. ಆದರೆ ಎಲ್ಲರಿಗೂ ಅವರದೇ ಆದ ಜಾಗ ಸಿಗಲು ಸಾಧ್ಯವಿಲ್ಲ, ಅದೂ ಜನರಿಂದ ತುಂಬಿದಂಥ ನಮ್ಮ ಈ ದೇಶದಲ್ಲಿ'

'ಕೇವಲ ಒಂದು ಚಿಕ್ಕ ಕೋಣೆ'

'ಹಾಗಾದರೆ ನೀನು ಈಗ ಇರುವ ಕೋಣೆ ಎಂಥದ್ದು?'

'ಅದು ದೊಡ್ಡ ಕೋಣೆ. ಆದರೆ ಅದು ನನಗೊಬ್ಬನಿಗಲ್ಲ. ನನ್ನ ಸೋದರ, ಸೋದರಿ ಜೊತೆಗೆ ಅದನ್ನು ಹಂಚಿ ಕೊಳ್ಳಬೇಕು. ಅದಲ್ಲದೆ ಊರಿಗೆ ಚಿಕ್ಕಮ್ಮ ಬಂದಾಗ ಉಳಿದುಕೊಳ್ಳುವುದು ಅದೇ ಕೋಣೆಯಲ್ಲೇ!'

'ಸರಿ. ನಿನಗೆ ನಿಜವಾಗಲೂ ಬೇಕಿರುವುದು  ಸ್ವಾತಂತ್ರ್ಯ. ನಿನ್ನದೇ ಆದ ಮರ, ಕೋಣೆ. ನಿನ್ನದೇ ಎನಿಸುವ ಒಂದು ಜಾಗ. '

'ಹೌದು, ಅಷ್ಟೇ'

'ಅಷ್ಟೇ? ಅದೇ ಎಲ್ಲ. ಅದು ನಿನಗೆ ಸಿಕ್ಕ ದಿನ ನಿನಗೆ ನಿನ್ನ ಕನಸು ನನಸಾದ ಹಾಗೆ'

'ಅದು ಸಿಗುವ ಬಗೆ ಹೇಗೆ?'

'ನನಗೆ ಯಾವುದೇ ಮಂತ್ರ-ವಿದ್ಯೆ ಗೊತ್ತಿಲ್ಲ ನನ್ನ ಗೆಳೆಯ. ನಾನು ಒಬ್ಬ ದೇವತಾ ಪುರುಷನಾಗಿದ್ದರೆ ನಿನ್ನ ಜೊತೆ ಕಾಲ ಹರಣ ಮಾಡುತ್ತಿದ್ದೇನೆಯೇ? ನೀನು ನಿನ್ನ ಕನಸಿನ ಸಾಕಾರಕ್ಕಾಗಿ ಪ್ರಯತ್ನಿಸಬೇಕು, ಹಗಲು-ಇರುಳು ಎನ್ನದೇ. ಆ ದಾರಿಯಲ್ಲಿ ಬರುವ ಅಡೆ-ತಡೆಗಳಿಗೆ ಅವಕಾಶ ಕೊಡಕೂಡದು.  ಅಲ್ಲಿಗೆ ನೀನು ಬಹಳಷ್ಟನ್ನು ಕಡಿಮೆ ಸಮಯದಲ್ಲಿ ನೀರಿಕ್ಷಸಿಸದಿದ್ದರೆ, ನಿನಗೆ ನಿನ್ನ ಸ್ವಾತಂತ್ರ್ಯ, ನಿನ್ನದೇ ಆದ ಜಾಗ, ಕೋಣೆ ದೊರಕುವುದು. ಆದರೆ ಕಷ್ಟಕರ ಸಮಯ ಶುರುವಾಗುವುದು ಅಲ್ಲಿಂದ.’

'ಅಲ್ಲಿಂದ?'

'ಹೌದು. ಏಕೆಂದರೆ, ದೊರಕಿದ್ದು ಸುಲಭದಲ್ಲಿ ಕಳೆದುಕೊಳ್ಳಬಹುದು, ಅದು ಬೇರೆಯವರ ಸ್ವತ್ತಾಗಬಹುದು. ನೀನು ದುರಾಸೆಗೆ ಬಿದ್ದರೆ ಅಥವಾ ಉಪೇಕ್ಷೆ ಮಾಡಿದರೆ, ಇಲ್ಲವೇ ಎಲ್ಲವನ್ನು ಲಘುವಾಗಿ ಪರಿಗಣಿಸಿದರೆ, ಓಹ್!,  ನಿನ್ನ ಕನಸು ಹಠಾತ್ತಾಗಿ, ಇನ್ನಿಲ್ಲದಂತೆ ಕಣ್ಮರೆಯಾಗಿಬಿಡುತ್ತದೆ.'

'ಅದೆಲ್ಲ ನಿನಗೆ ಹೇಗೆ ಗೊತ್ತು?'

'ಏಕೆಂದರೆ ನನಗೆ ಒಂದು ಕನಸು ಇತ್ತು. ಅದನ್ನು ನಾನು ಕಳೆದುಕೊಂಡೆ'

'ನೀನು ಎಲ್ಲ ಕಳೆದುಕೊಂಡೆಯ?'

'ಹೌದು. ನನ್ನನ್ನು ನೋಡು ಗೆಳೆಯ. ನಾನು ಒಬ್ಬ ರಾಜನ ಹಾಗೆ ಕಾಣುವೇನೆ? ನನಗೆ ಬೇಕಿದ್ದೆಲ್ಲ ಇತ್ತು. ಆದರೆ ನನಗೆ  ಇನ್ನೂ ಬೇಕಿತ್ತು. ಮತ್ತಷ್ಟೂ ... ನಿನಗೆ ನಿನ್ನ ಕೋಣೆ ಸಿಕ್ಕ ಮೇಲೆ, ನಿನಗೆ  ನಿನ್ನದೇ ಆದ ಕಟ್ಟಡ ಇದ್ದರೆ ಚೆನ್ನ ಅನಿಸುತ್ತದೆ. ಅಲ್ಲಿಂದ ನಿನ್ನದೇ ಆದ ಸೀಮೆ, ರಾಜ್ಯ, ಸಾಮ್ರಾಜ್ಯ ಹೀಗೆ ನಿನ್ನ ಕನಸು ವಿಸ್ತಾರಗೊಳ್ಳುತ್ತ ಹೋಗುತ್ತದೆ. ಅದು ಸಾಕಾರಗೊಂಡ ಹಾಗೆಲ್ಲ ಅದನ್ನು ಉಳಿಸುಕೊಳ್ಳುವುದು ಕಷ್ಟವಾಗುತ್ತ ಹೋಗುತ್ತದೆ. ಆದರೆ ಅದನ್ನು ಕಳೆದುಕೊಂಡ ದಿನ, ನಿನಗೆ ನಿನ್ನ ಕೋಣೆಯೂ ಉಳಿದಿರುವಿದಿಲ್ಲ.'

'ನಿನಗೆ ನಿನ್ನದೇ ಆದ ಸಾಮ್ರಾಜ್ಯವಿತ್ತೇ?'

'ಅದೇ ತರಹದ್ದು. ನೀನು ನಿನ್ನ ಕನಸಿನ ಬೆನ್ನು ಹತ್ತು. ಆದರೆ ಬೇರೆಯವರ ಕನಸಿಗೆ ಅಡ್ಡಿಯಾಗಬೇಡ. ಯಾವುದೇ ಮನುಷ್ಯನ ದಾರಿಯಲ್ಲಿ ಅಡ್ಡ ನಿಲ್ಲಬೇಡ. ಇನ್ನೊಬ್ಬರ ಜಾಗ, ಧರ್ಮ, ಹಾಡುಗಳನ್ನು ಕಸಿಯಬೇಡ.' ಇಷ್ಟು ಹೇಳಿದ ಆ ಮುದುಕ, ಪ್ರಯಾಸದಿಂದ ಹೆಜ್ಜೆ ಹಾಕುತ್ತ ಮೆಲ್ಲಗೆ ಕಣ್ಮರೆಯಾದ. ಹಾಗೆ ಹೋಗುವಾಗ ಅವನು ಒಂದು ಹಾಡನ್ನು ಅವನು ತನಗೆ ತಾನೇ ಗುನುಗಿಕೊಳ್ಳುತ್ತಿದ್ದ. ಆ ಹಾಡನ್ನು ನಾನು ಮೊದಲು ಎಲ್ಲೂ ಕೇಳಿಲ್ಲವಾದ್ದರಿಂದ ಅದು ಅವನದೇ ಹಾಡು ಇರಬಹುದು ಎನ್ನಿಸಿತು.

‘’ನೂರು ಕಾಲ ಬಾಳು ಓ ಗೆಳೆಯ, ವಿವೇಕದಿಂದ,
ಹಾಡು ಕಸಿಯಬೇಡ ನೀನು ಬೇರೆಯವರಿಂದ’’

ಆ ಮುದುಕನ ಬುದ್ದಿ ಮತ್ತೆಯ ಬಗ್ಗೆ ವಿಚಾರ ಮಾಡುತ್ತ ನಾನು ಗಿಡದ ರೆಂಬೆಯ ಮೇಲೆ ಕುಳಿತೆ ಇದ್ದೆ. ಒಬ್ಬ ಮನುಷ್ಯನಲ್ಲಿ ವಿವೇಕ ಹಾಗೂ ದಾರಿದ್ರ್ಯ ಒಟ್ಟಿಗೆ ಇರುವುದು ಹೇಗೆ ಸಾಧ್ಯ ಎನ್ನುವ ವಿಷಯ ನನ್ನನ್ನು ಆಶ್ಚರ್ಯ ಚಕಿತನನ್ನಾಗಿ ಮಾಡಿತ್ತು. ಅವನು ಸ್ವತಂತ್ರನಾಗಿದ್ದ, ಹಾಗೆ ನಾನು ಕೂಡ. ಮರ ಇಳಿದು ಮನೆಗೆ ಹೋಗಿ ನನಗೆ ಬೇರೆ ಕೋಣೆ ಬೇಕೆಂದು ಹಕ್ಕೊತ್ತಾಯ ಮಾಡಿ ಪಡೆದುಕೊಂಡೆ. ಸ್ವಾತಂತ್ರ್ಯ ಎನ್ನುವ ಹಕ್ಕು, ಒತ್ತಾಯ ಪೂರ್ವಕವಾಗಿಯೇ ಸಿಗುವುದು ಎನ್ನುವ ಸತ್ಯದ ಅರಿವು ನನಗಾಗ ತೊಡಗಿತ್ತು.

No comments:

Post a Comment