Sunday, April 14, 2019

ಮೈಸೂರಿನ ಮೃಗಾಲಯದ ಸೆಳೆತ

"ಆಲಯ ಮೃಗಾಲಯ,
ಬಾನಾಡಿಗಳ ನಿಲಯ"

ಈ ಹಾಡಿನಲ್ಲಿ ನಾನು ಮೈಸೂರಿನ ಮೃಗಾಲಯವನ್ನು ಪ್ರಥಮ ಬಾರಿಗೆ ನೋಡಿದ್ದು. ೪ ನೇ ತರಗತಿಯಲ್ಲಿರುವಾಗ ಶಾಲೆ ಮಕ್ಕಳೆಲ್ಲ ಒಟ್ಟಿಗೆ ಈ ಹಾಡನ್ನು ಮತ್ತು ಚಿತ್ರವನ್ನು ಬೆಳ್ಳಿ ಪರದೆಯ ಅಗಾಧತತೆಯಲ್ಲಿ ಆನಂದಿಸಿದ್ದು ನನ್ನ ನೆನಪಲ್ಲಿ ಹಚ್ಚು ಹಸಿರಾಗಿದೆ. ಅದಾಗಿ ಕೆಲ ವರ್ಷಗಳಿಗೆ ಅಂದರೆ ೭ ನೇ ತರಗತಿಯಲ್ಲಿರುವಾಗ ಶಾಲಾ ಪ್ರವಾಸದ ಮೂಲಕ ಮೈಸೂರಿನ ಮೃಗಾಲಯ ನೋಡುವ ಸೌಭಾಗ್ಯ ಒದಗಿ ಬಂತು. ಆ ಬಳಿಕ ಪ್ರಾಣಿ ಪಕ್ಷಿಗಳ ಬಗ್ಗೆ ಕುತೂಹಲ ಕಡಿಮೆಯಾಗಿ ಮೃಗಾಲಯದ ಬಗ್ಗೆ ಒಲವು ಕ್ಷೀಣಿಸಿ ಹೋಯ್ತು.

ಹಾಗೆ ಎಷ್ಟೋ ವರುಷಗಳು ಉರುಳಿ ಹೋದವು. ನನ್ನ ಓದು ಮುಗಿದು, ಉದ್ಯೋಗ ಕಂಡು ಕೊಂಡು, ಮದುವೆಯಾಗಿ, ಮಗು ಹುಟ್ಟಿ, ಆ ಮಗು ಪ್ರಾಣಿ, ಪಕ್ಷಿಗಳ ಹಿಡಿಯಲು ಆರಂಭಿಸಿದಾಗ ಮತ್ತೆ ನೆನಪಿಗೆ ಬಂದಿದ್ದು ಮೈಸೂರಿನ ಮೃಗಾಲಯ. ಕೆಲಸ ಮಾಡುವ ಬೆಂಗ ಳೂರಿನಿಂದ ಮೈಸೂರಿಗೆ ಯಾವ ಮಹಾ ದೂರ? ಹಾಗೆ ಒಂದು ಶನಿವಾರ ಬಿಡುವು ಮಾಡಿಕೊಂಡು ಕಾರಿನಲ್ಲಿ ಹೊರಟೆ ಬಿಟ್ಟೆವು. ನಾವು ನೋಡುವ ಆನಂದಕ್ಕಿಂತ, ಮಕ್ಕಳಿಗೆ ತೋರಿಸಿ ಅವರು ಖುಷಿ ಪಡುವುದಿದೆಯಲ್ಲ ಆ ಆನಂದವೇ ಹೆಚ್ಛೆನಿಸಿತು. ನನ್ನ ಮಗನಿಗೆ ತುಂಬಾ ಇಷ್ಟವಾಗಿ ಹೋಯಿತು ಈ ಮೃಗಾಲಯ. ಪ್ರತಿ ವರುಷ ರಜೆಗೆ ಒಂದು ಸಲ ಭೇಟಿ ನೀಡದೆ ಇದ್ದರೆ ಅವನಿಗೆ ಎಲ್ಲಿಯ ಸಮಾಧಾನ? ಮೈಸೂರು ಊರು ಮುಟ್ಟಿದ ತಕ್ಷಣವೇ ಈಗಲೇ 'zoo' ಗೆ ಹೊಗುವುದೇ ಎಂದು ಕೇಳುತ್ತಿದ್ದ.

ಅವನು ಬೆಳೆಯುತ್ತಿದ್ದ ಹಾಗೆಯೇ, ನಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆಯಾಯಿತು. ಎರಡನೇ ಮಗನಿಗೂ ಪ್ರಾಣಿ ಪಕ್ಷಿಗಳೆಂದರೆ ಬಲು ಇಷ್ಟ. ಅವನಿಗೆ ಬರಿ ನಾಯಿ, ಬೆಕ್ಕು, ಆಕಳು ತೋರಿಸದುವುದೆಂತು? ನವಿಲು, ಗೊರಿಲ್ಲಾ, ಚಿರತೆಗಳನ್ನು ಬರೀ ಚಿತ್ರಗಳಷ್ಟೇ ತೋರಿಸಬೇಕೇ? ಸರಿ ಹೇಗಾದರೂ ಬಂತಲ್ಲ ಬೇಸಿಗೆ ರಜೆ ಎಂದು ಮತ್ತೆ ನಮ್ಮ ಪಯಣ ಸಾಗಿತು ಮೈಸೂರು ಕಡೆಗೆ.



ಸುಮಾರು ೫ ಕಿ. ಮೀ. ನಡೆದು ನೋಡಬೇಕಾದ ಈ ಮೃಗಾಲಯ ಸುತ್ತುವುದಕ್ಕೆ ನಾವು ತೆಗೆದುಕೊಂಡದ್ದು ಸುಮಾರು ಮೂರು ಘಂಟೆ. ನೋಡಿದ್ದು ನೂರಾರು ಪ್ರಾಣಿ ಪಕ್ಷಿಗಳು. ಕಲಿತು ಕೊಂಡ ವಿಷಯಗಳು ಹಲವಾರು. ಮೈಸೂರಿನ ಮೃಗಾಲಯದ ಸೆಳೆತದಲ್ಲಿ ನಮ್ಮ ಕಾಲುಗಳು ಸೆಳೆಯತೊಡಗಿದ್ದು ಅನುಭವಕ್ಕೆ ಬಂದಿದ್ದು ಹೋಟೆಲಿನ ಕೋಣೆಗೆ ಬಂದು ಕುಳಿತ ಮೇಲೆ. ಮತ್ತೆ ಮುಂದಿನ ರಜೆಗೆ ಬಂದರಾಯಿತು ಎಂದುಕೊಂಡೇ ಊರು ಖಾಲಿ ಮಾಡಿದ್ದು. ನಮ್ಮ ಖುಷಿ ನಿಮ್ಮ ಜೊತೆಗೂ ವಸಿ ಹಂಚಿಕೊಂಡರಾಯಿತು ಎಂದು ಇದನ್ನು ಬರೆದದ್ದಾಯಿತು.

No comments:

Post a Comment