ಪುರಂದರ ದಾಸರ ಕೀರ್ತನೆ
ನೀವು ಕೇಳಿಯೇ ಇರ್ತೀರಿ "ಯಾರು ಹಿತವರು ನಿನಗೆ ಈ ಮೂವರೊಳಗೆ? ನಾರಿಯೋ, ಧಾರಿಣಿಯೋ, ಸಿರಿಯೋ?"
ದಾಸರು ಗತಿಸಿ ೫೦೦ ವರ್ಷಗಳೇ ಕಳೆದು ಹೋಗಿವೆ. ಆದರೆ ಮನುಷ್ಯ ಸ್ವಭಾವದಲ್ಲಿ ಸ್ವಲ್ಪವೂ ವ್ಯತ್ಯಾಸ
ಆಗಿಲ್ಲ ನೋಡಿ. ಇತಿಹಾಸದ ಪುಟಗಳಲ್ಲಿ ಇನ್ನು ಹಿಂದಕ್ಕೆ ಹೋಗಿ ನೋಡುವುದಾದರೆ, ಪ್ರಪಂಚವನ್ನೇ ಗೆದ್ದ
ಅಲೆಕ್ಸಾಂಡರ್ ನ ಆಸ್ತಿ ಪಾಲಾಗಿದ್ದು ಯಾರಿಗೆ? ಯಾವ ಸಾರ್ಥಕತೆಗೆ? ಭಾರತದ ಚರಿತ್ರೆಯಲ್ಲಿ ಮಹಾತ್ವಾಕಾಂಕ್ಷಿ ರಾಜ ಎಂದೆನಿಸಿದ್ದ
ಚಂದ್ರಗುಪ್ತ ಮೌರ್ಯ, ತನ್ನ ರಾಜ್ಯವನ್ನು ತ್ಯಜಿಸಿ ಸಲ್ಲೇಖನ ಸ್ವೀಕರಿಸಿದ್ದು ಯಾಕೆ? ಬುದ್ಧ ಬುದ್ಧನಾಗುವುದಕ್ಕೆ
ಮುಂಚೆ ರಾಜಕುಮಾರನಾಗಿರಲಿಲ್ಲವೇ? ಹಾಗೆಯೇ ಜೈನ ಧರ್ಮದ ತೀರ್ಥಂಕರರೆಲ್ಲ ರಾಜಕುಮಾರರಾಗಿದ್ದರು. ಅವರಿಗೆಲ್ಲ
ಆಸ್ತಿ, ಅಧಿಕಾರ ಬಿಟ್ಟು ಜೀವನದಲ್ಲಿ ಮಿಗಿಲಾದದ್ದು ಬೇರಿಲ್ಲ ಎಂದೆನಿಸಿದಿದ್ದರೆ ಜಗತ್ತು ಬೇರೆಯೇ
ತರಹದಲ್ಲಿ ರೂಪುಗೊಂಡಿರುತ್ತಿತ್ತೇನೋ? ಅವರೆಲ್ಲ ರಾಜ, ಮಹಾರಾಜರು ಇಲ್ಲವೇ ಸಾಧು-ಸಂತರು, ನಮ್ಮ ಹಾಗೆ
ಮಧ್ಯಮ ವರ್ಗದ ಜನರಲ್ಲ ಎನ್ನುತ್ತಿರೋ?
ಸರಿ, ನಮಗೆ ನಿಮಗೆಲ್ಲ
ಆಸ್ತಿ ಏತಕ್ಕೆ ಬೇಕು? ಅದು ತರುವ ಆದಾಯಕ್ಕೋ, ಇಲ್ಲವೇ ಅದರಿಂದ ಬರುವ ಪ್ರತಿಷ್ಠೆಗೋ, ಅಥವಾ ಎಷ್ಟಿದ್ದರೂ
ಕಡಿಮೆ ಎನ್ನುವ ದಾಹಕ್ಕೋ, ಹೀಗೆ ಇನ್ನು ಹಲವಾರು ಕಾರಣಗಳನ್ನು ಹುಡುಕಿ ತರಬಹುದು. ಸರಿ, ಈಗ ನಮ್ಮದಾಗಿರುವ
ಆಸ್ತಿ ಗಳಿಸಿದ್ದು ಯಾರು? ಯಾವ ಕಾರಣಕ್ಕೆ? ಮತ್ತು ಅದು ನಮ್ಮದಾಗುವ ಮುನ್ನ ಬೇರೆ ಯಾರದ್ದಾಗಿತ್ತು?
ಹಾಗೆಯೇ ಅವರು ಆ ಆಸ್ತಿಯನ್ನು ಕಳೆದುಕೊಂಡಿದ್ದು ಯಾಕೆ? ಮೂಲ ಕಾರಣಗಳನ್ನು ಹುಡುಕುತ್ತ ಹೋದಂತೆ, ಕೆಲವು
ವಿಷಯಗಳು ಸ್ಪಷ್ಟ ವಾಗುತ್ತ ಹೋಗುತ್ತವೆ. ಆಸ್ತಿ ಅವಶ್ಯಕತೆಗೆ, ಅನುಕೂಲತೆಗೆ ಸಂಪಾದನೆ ಮಾಡುತ್ತದೆ
ಮೊದಲನೇ ವರ್ಗದ ಪೀಳಿಗೆ. ಆದರೆ ಅವರ ಮಕ್ಕಳ ಪೀಳಿಗೆಗೆ ದುಡಿದು ತಿನ್ನುವ ನೋವು ಬೇಡವಾಗಿ, ಆಸ್ತಿಯಿಂದ
ಬರುವ ಆದಾಯದ ಮೇಲೆ ಅವಲಂಬಿತವಾಗುತ್ತದೆ. ಅದರ ಮುಂದಿನ ಪೀಳಿಗೆ ದುಡಿತಕ್ಕೆ ಇನ್ನು ದೂರಾಗಿ, ಆಸ್ತಿ
ಮಾರಿ ಜೀವನ ನಿರ್ವಹಣೆ ಮಾಡುವ ಹಂತಕ್ಕೆ ತಲುಪುತ್ತದೆ. ಇದು ಪ್ರತಿಯೊಂದು ಕುಟುಂಬಕ್ಕೆ ಅನ್ವಯಿಸದಿದ್ದರು,
ಸಾಕಷ್ಟು ಕುಟುಂಬಗಳು ಬರಿ ೩-೪ ತಲೆಮಾರುಗಳಲ್ಲಿ ಆಸ್ತಿ ತಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ.
ಭಗವದ್ಗೀತೆಯ ಸಾರವೇ
ಇದೆ ಅಲ್ಲವೇ "ನಿನ್ನೆ ಬೇರೆ ಯಾರದೋ ಆಗಿದ್ದು, ಇಂದು ನಿನ್ನದಾಗಿದೆ ಮತ್ತು ನಾಳೆ ಬೇರೆಯವರದ್ದಾಗಲಿದೆ".
ಈ ಪ್ರಕೃತಿಯ ನಿಯಮ ಮತ್ತು ಕಾಲ ಚಕ್ರ, ಎಲ್ಲವನ್ನು, ಎಲ್ಲರನ್ನು ಮೇಲೆ-ಕೆಳಗೆ ಮಾಡುತ್ತ ಸಾಗುತ್ತದೆ.
ನೀವು ಆಸ್ತಿ ಜಗಳದಲ್ಲಿ ಸಿಲುಕಿಕೊಂಡಿದ್ದರೆ, ಅದರಲ್ಲಿ ಬಹು ಸಮಯವನ್ನು ಕಳೆದುಕೊಂಡಿದ್ದರೆ, ನಿಮಗೆ
ಈಗಾಗಲೇ ಕೆಲ ವಿಷಯ ಮನದಟ್ಟಾ ಗಿರುತ್ತದೆ. ಅವಶ್ಯಕತೆಗಿಂತ ಮತ್ತು ನಾವು ಸಂಭಾಳಿಸುವುದಕ್ಕಿಂತ ಹೆಚ್ಚ್ಚಿನ
ಆಸ್ತಿ ನಮ್ಮದಾಗಿದ್ದರೆ ಅದರಿಂದ ಆಗುವ ಉಪಯೋಗಕ್ಕಿಂತ ಅದು ತರುವ ತಲೆ ನೋವೇ ಹೆಚ್ಚು. ಆಸ್ತಿ ಉಳಿಸಿ
ಕೊಳ್ಳುವುದರಲ್ಲಿ ಕಳೆದು ಹೋಗುವ ಸಮಯ ಮತ್ತು ಶಕ್ತಿ, ಜೀವನದ ಅರ್ಥವನ್ನೇ ಕಳೆದುಬಿಡುತ್ತದೆ. ನಿಮಗೆ
ನಿಮ್ಮ ಮಕ್ಕಳು ನೆಮ್ಮದಿಯ ಜೀವನ ಮಾಡಬೇಕೆ? ಅವರಿಗೆ ಆಸ್ತಿಯ ಭಾರ ಹೊರಿಸಬೇಡಿ. ಅದರ ಬದಲಿಗೆ ಬದುಕಿನ
ವಿವಿಧತೆ, ವೈಶಾಲ್ಯತೆ ತೋರಿಸಿಕೊಡಿ. ಅವರಿಗೆ ತಮ್ಮ ಜೀವನ ರೂಪಿಸಿಕೊಳ್ಳುವ ಜೀವನ ಕೌಶಲ್ಯಗಳನ್ನು
ಕಟ್ಟಿಕೊಡಿ. ಕಾಲ ಚಕ್ರ ಆಸ್ತಿ ಕಸಿದುಕೊಳ್ಳಬಹುದು ಆದರೆ ಸಮಚಿತ್ತದಿಂದ ಬದುಕುವ ಜೀವನೋತ್ಸಾಹವನ್ನಲ್ಲ.
ಹೀಗಾಗಿಯೇ ನಾನಾಗಲೇ ನಮ್ಮ ಮನೆಯಲ್ಲಿ ಹೇಳಿಯಾಗಿದೆ, ನನಗೆ ಆಸ್ತಿಯಲ್ಲಿ ಪಾಲು ಬೇಡವೆಂದು.
ಇನ್ನು ನಿಮಗೆ ಯಾವುದೇ ಆಸ್ತಿಯಿಲ್ಲ ಎಂದರೆ, ಅಭಿನಂದನೆಗಳು. ಆದರೆ ಆಸ್ತಿಯ ಆಸೆ ಇದ್ದರೆ, ಯೋಗರಾಜ ಭಟ್ಟರ ಹಾಡು ಇನ್ನೊಮ್ಮೆ ಕೇಳಿಸಿಕೊಳ್ಳಿ.
ಇನ್ನು ನಿಮಗೆ ಯಾವುದೇ ಆಸ್ತಿಯಿಲ್ಲ ಎಂದರೆ, ಅಭಿನಂದನೆಗಳು. ಆದರೆ ಆಸ್ತಿಯ ಆಸೆ ಇದ್ದರೆ, ಯೋಗರಾಜ ಭಟ್ಟರ ಹಾಡು ಇನ್ನೊಮ್ಮೆ ಕೇಳಿಸಿಕೊಳ್ಳಿ.
"ಗಂಡ ಹೆಂಡ್ತಿ
ಇಬ್ರು ದುಡಿದು,
ಸಾಲ ಮಾಡಿ ಮನೆಯ
ಕಟ್ಟಿ,
ಮಕ್ಳು ಎಲ್ಲೋದ್ರಂಥ
ಹುಡುಕಿ
ಲೈಫು ಇಷ್ಟೇನೆ"
ನೆಮ್ಮದಿಗೆ ಒಂದು
ಮನೆ ಕಟ್ಟಿಕೊಳ್ಳುವುದರ ವಿರೋಧಿ ನಾನಲ್ಲ ಆದರೆ ಅದರ ಮೇಲಿನ ಸಾಲ ಜೀವನ ಕುಗ್ಗುವಂತಿರಬಾರದು. ನಿಮ್ಮ
ಖರ್ಚು ವೆಚ್ಚಗಳನ್ನು ಮೀರಿ ದುಡಿಯುತ್ತಿದ್ದೀರೋ, ಆಸ್ತಿ ಮಾಡಿ. ಆದರೆ ಅದರ ನಿರ್ವಹಣೆಯಲ್ಲೇ ನಿಮ್ಮ
ಜೀವನ ಕಳೆದು ಹೋಗಬಾರದಲ್ಲವೇ? ಆಸ್ತಿ ಮತ್ತು ಜೀವನ ಇವೆರಡರಿನ ನಡುವಿನ ಆಯ್ಕೆ ಬಹು ಕಷ್ಟವೇನಲ್ಲ.
ಯಾವ ಆಯ್ಕೆ ನಿಮ್ಮದು?
No comments:
Post a Comment