ಕಳೆದ ವರ್ಷ ಶಿವರಾತ್ರಿ ಸಮಯದಲ್ಲಿ ಯಾವುದಾದರೂ ಹೊಸ ಜಾಗಕ್ಕೆ ಹೋಗಬೇಕು ಎಂದುಕೊಂಡಾಗ ಸಹೋದ್ಯೋಗಿಯೊಬ್ಬ ಸೂಚಿಸಿದ್ದು ಕಾಡಿನ ಮಧ್ಯೆ ಇರುವ ಈ ದೇವಾಲಯವನ್ನು. ಬೆಳಿಗ್ಗೆಯೇ ಬೆಂಗಳೂರನ್ನು ಬಿಟ್ಟು, ಮೈಸೂರು, ನಂಜನಗೂಡು ಮಾರ್ಗವಾಗಿ (ಹಾಗೆಯೆ ಅಲ್ಲಿ ತಿಂಡಿ ತಿಂದುಕೊಂಡು), ಗುಂಡ್ಲುಪೇಟೆ ಪಟ್ಟಣಕ್ಕಿಂತ ಮುಂಚೆಯೇ ಬಲಕ್ಕೆ ತಿರುಗಿ, ಅಲ್ಲಿಂದ ಅರ್ಧ ಗಂಟೆಗೂ ಹೆಚ್ಚಿನ ಪಯಣದಲ್ಲಿ ನಾವು ಬೇಲದಕುಪ್ಪೆ ತಲುಪಿದಾಗ ಮಧ್ಯಾಹ್ನದ ಹೊತ್ತು. ಈ ದೇವಸ್ಥಾನ ಇರುವುದು ಬಂಡೀಪುರದ ಅಭಯಾರಣ್ಯದಲ್ಲಿ. ದೇವಸ್ಥಾನಕ್ಕಿಂತ ೪ ಕಿ.ಮೀ. ಮುಂಚೆಯೇ ಇರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ನಮ್ಮ ವಿವರ ಕೊಟ್ಟು ದಟ್ಟ ಕಾಡಿನ ಮಾರ್ಗವಾಗಿ ಸಾಗಬೇಕು. ಪ್ರಯಾಣಿಕರು ಮತ್ತು ಕಾಡು ಪ್ರಾಣಿಗಳು ಒಬ್ಬರಿಗೊಬ್ಬರು ತೊಂದರೆ ಕೊಡಬಾರದೆಂದು ಮಾರ್ಗಮಧ್ಯವಾಗಿ ಅರಣ್ಯ ಇಲಾಖೆಯ ಕಾವಲುಗಾರರು ಅಲ್ಲಿ ಸಶಸ್ತ್ರವಾಗಿ ನಿಂತಿರುತ್ತಾರೆ. ಹಚ್ಚ ಹಸಿರಿನ, ಪ್ರಶಾಂತ ಜಾಗದಲ್ಲಿ, ಮುಗಿಲು ಮುಟ್ಟಲು ಪೈಪೋಟಿ ನಡೆಸುವ ಹಾಗೆ ಬೆಳೆದ ನಿಂತ ಎತ್ತರದ ಮರಗಳ ಮಧ್ಯೆ, ಮಹದೇಶ್ವರ ದೇವಸ್ಥಾನವಿದೆ. ಪಕ್ಕದಲ್ಲೇ ಇರುವ ಹೊಂಡದಲ್ಲಿ ನೀರು ಕುಡಿಯಲು ಸಾಲು ಸಾಲು ಜಿಂಕೆಗಳು, ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಕಾಡು ಹಂದಿಗಳನ್ನು ಕೂಡ ಕಾಣಬಹುದು. ದೇವಸ್ಥಾನದ ಮುಂದಿನ ವಿಶಾಲ ಬಯಲು, ದೈವ ಭಕ್ತರಿಗೂ, ಪರಿಸರ ಪ್ರಿಯರಿಗೂ ಹಾಗೆ ಮಕ್ಕಳಿಗೂ ಕೆಲ ಸಮಯ ಕಳೆಯಲು ಅವಕಾಶ ಮಾಡಿಕೊಡುತ್ತದೆ. ಕುಡಿಯುವ ನೀರಿನ ಸೌಲಭ್ಯವಿದ್ದು, ನೀವು ತಿಂಡಿಯನ್ನು ಕಟ್ಟಿಕೊಂಡು ಹೋದರೆ ಉತ್ತಮ.
ವಾಪಸ್ಸು ಗುಂಡ್ಲುಪೇಟೆಗೆ ಬಂದು, ಅಲ್ಲಿಂದ ಬಂಡೀಪುರದ ಅರಣ್ಯ ಸಫಾರಿಗೆ ಹೋದಾಗ ಅಲ್ಲಿ ಕಂಡದ್ದು ಅವೇ ಜಿಂಕೆಗಳು. ಆದರೆ ಅಪರೂಪಕ್ಕೆ ಎಂಬಂತೆ ಚಿರತೆ ಕೂಡ ಕಾಣಿಸಿತು. ಸಾಯಂಕಾಲಕ್ಕೆ ನಂಜನಗೂಡಿನಲ್ಲಿ ಶ್ರೀಕಂಠೇಶ್ವರನ ದರ್ಶನಕ್ಕೆಂದು ಹೋದರೆ, ಅಲ್ಲಿ ನೆರೆದದ್ದು ಲಕ್ಷಾಂತರ ಜನಸ್ತೋಮ. ಅವರೆಲ್ಲ ಶಿವರಾತ್ರಿಯನ್ನು ಶಿವನ ಸಾನ್ನಿಧ್ಯದಲ್ಲೆ ಕಳೆಯಲೆಂದು ಬಂದವರು.
ಈ ಪ್ರವಾಸಕ್ಕೆ ಹೋಗಿ ಬಂದು ಕೇವಲ ಒಂದೇ ವರ್ಷ ಕಳೆದಿದ್ದರೂ , ಎಷ್ಟೋ ಸಮಯ ಕಳೆದು ಹೋದ ಹಾಗೆ ಅನಿಸುತ್ತಿದೆ.
ಬಂಡೀಪುರ ಅಭಯಾರಣ್ಯದಲ್ಲಿರುವ ಬೇಲದಕುಪ್ಪೆ |
ಮಹದೇಶ್ವರನ ಸನ್ನಿಧಿಯಲ್ಲಿ |
ದೇವಸ್ಥಾನ ಪಕ್ಕದ ಹೊಂಡದಲ್ಲಿ ನೀರು ಕುಡಿಯಲು ಬಂದಿರುವ ಜಿಂಕೆಗಳು |
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂದು ನೆರೆದಿದ್ದ ಜನಸ್ತೋಮ |
No comments:
Post a Comment