Thursday, December 31, 2020

ವಿದಾಯ ೨೦೨೦; ಸುಸ್ವಾಗತ ೨೦೨೧!

ಈ ವರ್ಷ ಉಂಟು ಮಾಡಿದ ಭೀತಿ, ಕಸಿದುಕೊಂಡ ಸ್ವಾತಂತ್ರ್ಯ, ಆರ್ಥಿಕ ವ್ಯವಸ್ಥೆಗೆ ಆದ ಹಾನಿ ಅಪಾರ. ನಾವಲ್ಲದಿದ್ದರೆ, ನಮ್ಮ ಸ್ನೇಹಿತರು, ಬಂಧುಗಳು ಕೊರೊನ ಧಾಳಿಯ ನೇರ ಸಂಕಟ ಅನುಭವಿಸಿದ್ದಾರೆ. ಮಕ್ಕಳು ಶಾಲೆಯ ಕಡೆಗೆ ತಲೆಯೇ ಹಾಕಲಿಲ್ಲ. ಎಷ್ಟೋ ತಿಂಗಳುಗಳ ಕಾಲ ರಸ್ತೆ, ಮಾರುಕಟ್ಟೆಗಳು ಮುಕ್ತವಾಗಿ ಇರದಿದ್ದರೂ, ಇಂಟರ್ನೆಟ್ ಮುಕ್ತವಾಗಿ ಇತ್ತಲ್ಲ. ನಾವುಗಳು ಮನೆಯ ಒಂದು ರೂಮಿನಲ್ಲಿ ಸೇರಿಕೊಂಡು ಆಫೀಸ್ ಕೆಲಸ ಮಾಡುತ್ತ ಬಂದದ್ದಾಯ್ತು. ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ತೆರೆಯುತ್ತೆ ಅಂತಾರಲ್ಲ. ನಮಗೆ ಇದ್ದ ಅವಕಾಶಗಳಿಗೆ ಹೊಂದಿಕೊಂಡು, ಹಾಗೋ, ಹೀಗೋ, ವಿನೋದವೋ-ವಿಷಾದವೋ ಈ ವರ್ಷ ಕಳೆದದ್ದಾಯ್ತು.


ಸಾಂಕ್ರಾಮಿಕ ರೋಗಗಳು ನಮ್ಮ ಪೀಳಿಗೆಗೆ ಅನುಭವ ಇರದಿದ್ದರೂ, ಇತಿಹಾಸದ ಪುಸ್ತಕಗಳು ಅವು ಉಂಟು ಮಾಡಿದ ಅನಾಹುತಗಳನ್ನು ತಿಳಿಸಿ ಕೊಡುತ್ತವೆ. ಪ್ರಕೃತಿಯು ಕಾಲ ಕಳೆದಂತೆ ಹೊಸ ಜೀವಿಗಳನ್ನು ಹುಟ್ಟು ಹಾಕುತ್ತ,  ಇದ್ದವುಗಳನ್ನು ಮಾರ್ಪಡಿಸುತ್ತ, ಹೊಂದಾಣಿಕೆ ಮಾಡಿಕೊಳ್ಳದವನ್ನು ಹೊಸಕಿ ಹಾಕುತ್ತ ಹೋಗುತ್ತದೆ. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಆಗದ ಎಷ್ಟೋ ಜೀವಿಗಳು, ಪ್ರಾಣಿ-ಪಕ್ಷಿಗಳು ಭೂಮಿಯಿಂದ ಕಣ್ಮರೆಯಾಗಿ ಹೋಗಿವೆ. ಆದರೆ ಮನುಷ್ಯ ಪ್ರಾಣಿ ತನ್ನ ಬುದ್ದಿವಂತಿಕೆಯಿಂದ ಪ್ರಕೃತಿಯನ್ನು ತುಳಿಯಲು ನೋಡುತ್ತಾನಾದರೂ, ಸಾಧ್ಯವಾಗದಿದ್ದಾಗ ಬಲು ಬೇಗ ಹೊಂದಾಣಿಕೆ ಮಾಡಿಕೊಂಡು ಬದುಕು ಉಳಿಸಿಕೊಳ್ಳುತ್ತಾನೆ. ಆ ಹೊಂದಾಣಿಕೆ ಅವನನ್ನು ಉಳಿದೆಲ್ಲ ಜೀವಿಗಳಿಗಿಂತ ಭಿನ್ನವಾಗಿಸಿ, ಭೂಮಿ ಇರುವವರೆಗೆ ಮಾನವನೂ ಇರಲು ಸಾಧ್ಯ ಎನ್ನುವಂತೆ ಮಾಡಿದೆ.   


ಬರುವ ವರ್ಷ ಶುಭವಾಗಿರಲಿ ಎಂದು ನಾವೆಲ್ಲ ಹಾರೈಸಿದರು, ಅದು ತನ್ನ ಒಡಲಲ್ಲಿ ಏನೆಲ್ಲಾ ಇಟ್ಟುಕೊಂಡಿದೆಯೋ ಕಾದು ನೋಡಬೇಕು. ಅದು ಹೂಮಳೆ ಸುರಿಸಿದರು ಇಲ್ಲ ವಿಷ ಕಾರಿದರು ಹೊಂದಿಕೊಂಡು ಹೋಗಬೇಕು. ಅದನ್ನೇ ನಾವು ನಿನ್ನೆಯಿಂದ ಕಲಿತಿರುವುದು ಮತ್ತು ನಾಳೆಗೆ ಕೊಂಡೊಯ್ಯುತ್ತಿರುವುದು. ಇದನ್ನೇ ಒಂದು ಹಾಡಾಗಿಸಿದ್ದರಲ್ಲ ಚಿ.ಉದಯಶಂಕರ್. ರಾಜಣ್ಣನ ಧ್ವನಿಯಲ್ಲಿರುವ ಈ ಗೀತೆ ಕಾಲಾತೀತವೆನ್ನುವಂತೆ, ಹಿಂದಿಗೂ, ಇಂದಿಗೂ ಮತ್ತು ಮುಂದೆಯೂ ನಮ್ಮ ಜೀವನಕ್ಕೆ ಅನ್ವಯಿಸುತ್ತದೆ.


"ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ, 

ಆಡುವ ಸಮಯದ ಗೊಂಬೆ ಮಾನವ"   


ನಿಜ, ನಾವು ನೀವೆಲ್ಲರೂ ಸಮಯದ ಗೊಂಬೆಗಳಲ್ಲವೇ? ವರ್ಷ ಒಂದು ಕಳೆದು ಇನ್ನೊಂದು ಬಂದರೇನು? ಆದರೂ ರೂಢಿ ತಪ್ಪದೆ, ನಿಮಗೆ ಹೊಸ ವರ್ಷ ಶುಭ ತರಲೆಂದು ಕೋರುತ್ತೇನೆ.



No comments:

Post a Comment