Wednesday, January 26, 2022

ಪ್ರಕೃತಿಯಲ್ಲಿ ಸೋಲು-ಗೆಲುವು ಇದೆ, ಒಳ್ಳೆಯದು-ಕೆಟ್ಟದ್ದು ಇಲ್ಲ

ಒಳ್ಳೆಯವರಿಗೆ ಒಳ್ಳೆಯದಾಗುತ್ತದೆ, ಕೆಟ್ಟವರಿಗೆ ಕೆಟ್ಟದ್ದಾಗಲೇಬೇಕು. ಹಾಗಂತ ನಿಯಮ ಎಲ್ಲಿದೆ? ಆದರೆ ಅದನ್ನು ನಂಬಿಯೇ ನಾವು (ಎಲ್ಲರೂ ಅಲ್ಲದಿದ್ದರೂ ಬಹುತೇಕ ಜನ) ಜೀವನ ಮಾಡುವುದು. 'ಸತ್ಯ  ಹರಿಶ್ಚಂದ್ರ' ಕಥೆ/ಸಿನಿಮಾದಲ್ಲಿ ಹರಿಶ್ಚಂದ್ರನಿಗೆ ಎಷ್ಟು ಕೆಟ್ಟ ಸಂದರ್ಭಗಳು ಎದುರಾದರೂ ಕೊನೆಗೆ ಒಳ್ಳೆಯದಾಗುವುದಿಲ್ಲವೇ? ಹಾಗೆಯೆ ಪಾಪಿಗಳಿಗೆ ಇಲ್ಲಿಯೇ ನರಕ ತೋರಿಸದೆ ದೇವರು (ಅಥವಾ ಅವರ ಕರ್ಮ) ಬಿಡುವುದಿಲ್ಲ ಎಂದು ಲೋಕಾರೂಢಿಯಾಗಿ ನಾವು ಮಾತನಾಡುತ್ತೇವೆ. ಆ ನಂಬಿಕೆಯೇ ನಮ್ಮ ಸಮಾಜದ ಒಗ್ಗಟ್ಟನ್ನು ಕಾಪಾಡುತ್ತದೆ. ಮನುಷ್ಯ ಒಬ್ಬರನ್ನೊಬ್ಬರು ಸಹಕರಿಸಿಕೊಂಡು ಸಂಘ ಜೀವಿಯಾಗಿ ಬಾಳುವಂತೆ ಮಾಡುತ್ತದೆ.


ಆದರೆ ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು, ನ್ಯಾಯ-ಅನ್ಯಾಯ, ಅದೃಷ್ಟ-ದುರಾದೃಷ್ಟ ಅನ್ನುವ ಪರಾಮರ್ಶೆ ಮಾನವ ಜೀವಿಗೆ ಮಾತ್ರ ಸೀಮಿತವಾದದ್ದು. ಪ್ರಕೃತಿಯಲ್ಲಿ, ಪ್ರಾಣಿ-ಪಕ್ಷಿಗಳ ಲೋಕದಲ್ಲಿ ಅದಕ್ಕೆ ಅವಕಾಶವೇ ಇಲ್ಲ. ಇಲಿಯನ್ನು ತಿಂದು ಹಾವು, ಹಾವನ್ನು ತಿಂದು ಹದ್ದು ಜೀವಿಸಿದರೆ, ನೀರಿನಲ್ಲಿ ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗಿ ಹಾಕುತ್ತವೆ. ಪ್ರಕೃತಿ ಜಿಂಕೆಗೆ ವೇಗದಿಂದ ಓಡುವ ಸಾಮರ್ಥ್ಯ ಕೊಟ್ಟರೆ, ಹುಲಿಗೆ ಹೊಂಚು ಹಾಕುವ ವಿದ್ಯೆ ಕಲಿಸಿ ಕೊಡುತ್ತದೆ. ಬಲೆ ಹೆಣೆದು, ಅದರಲ್ಲಿ ಸಿಕ್ಕಿ ಹಾಕಿ ಕೊಳ್ಳುವ ಹುಳುಗಳನ್ನು ತಿನ್ನಲು ಕಾಯ್ದು ಕೂಡುವ ಜೇಡರ ಹುಳುವಿಗೆ ನಾವು ವಂಚಕ ಎನ್ನಬಹುದು. ಆದರೆ ಅದು ಅದರ ಹೊಟ್ಟೆ ಪಾಡು. ಜೀವ ಉಳಿಸಿಕೊಳ್ಳುವುದಕ್ಕೆ ಪ್ರಕೃತಿ ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿಯೊಡನೆ ಸ್ಪರ್ಧೆಗೆ ಒಡ್ಡಿದರೆ, ಸಂತಾನೋತ್ಪತ್ತಿ ಸಮಯದಲ್ಲಿ ಸಂಗಾತಿಯನ್ನು ಗೆಲ್ಲಲು ಒಂದೇ ಜಾತಿಯ ಪ್ರಾಣಿಗಳನ್ನು ಪರಸ್ಪರ ಸ್ಪರ್ಧೆಗೆ ಇಳಿಸುತ್ತದೆ. ಅಲ್ಲಿ ಇರುವುದು ಸೋಲು-ಗೆಲುವಿನ, ಅಳಿವು-ಉಳಿವಿನ ಸ್ಪರ್ಧೆ ಮಾತ್ರ. ಗೆದ್ದ ಪ್ರಾಣಿಗೆ ಮಾತ್ರ ಜೀವಿಸುವ, ವಂಶ ಮುಂದುವರೆಸುವ ಅವಕಾಶ. ಬೇಟೆಯಾಡಿದ ಹುಲಿಯ ಅದೃಷ್ಟ, ಸತ್ತ ಜಿಂಕೆಯ ದುರಾದೃಷ್ಟ, ಹುಲಿ ದುಷ್ಟ ಪ್ರಾಣಿ, ಜಿಂಕೆ ಪಾಪದ ಪ್ರಾಣಿ ಎಂದೆಲ್ಲ ನಾವು ವಿಮರ್ಶೆ ಮಾಡಿದರೂ ಪ್ರಕೃತಿ ಅದನ್ನೆಲ್ಲ ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕುತ್ತದೆ.


ಸರಿ-ತಪ್ಪಿನ ವಿವೇಚನೆ ನಮಗೆ ನಾವು ಚಿಕ್ಕವರಾಗಿದ್ದಾಗ ನಮ್ಮ ತಂದೆ-ತಾಯಿ, ಬಂಧು-ಬಳಗ, ಶಾಲೆಯಲ್ಲಿ ಮೇಷ್ಟ್ರು, ಒಟ್ಟಿನಲ್ಲಿ ನಮ್ಮ ಸಮಾಜ ಅದನ್ನು ಹೇಳಿಕೊಡುತ್ತ ಬೆಳೆಸುತ್ತದೆ. ದೊಡ್ಡವರಾದಾಗ ಕಾನೂನಿನ ಪಾಲನೆ ಮಾಡದೇ ಹೋದರೆ ಅದಕ್ಕೆ ಕಟ್ಟಬೇಕು ದಂಡ, ಇಲ್ಲವೇ ಅನುಭವಿಸಬೇಕು ಶಿಕ್ಷೆ. ಈ ಸರಿ-ತಪ್ಪಿನ ವಿವೇಚನೆ, ಕಾಯ್ದೆ-ಕಾನೂನುಗಳೆಲ್ಲ ಎಲ್ಲ ಸಮಾಜಗಳಲ್ಲೂ ಒಂದೇ ತರಹ ಇಲ್ಲ. ಕೆಲವು ಧರ್ಮಗಳು ಮಾಂಸಾಹಾರ ನಿಷೇಧಿಸಿದರೆ, ಕೆಲವು ಧರ್ಮಗಳ ಜನರಿಗೆ ಅದು ಪ್ರತಿ ನಿತ್ಯದ ಆಹಾರ. ನಮ್ಮಲ್ಲಿ ಮದುವೆಯ ನಂತರವೇ ಮಕ್ಕಳು. ಆಫ್ರಿಕಾದ ಕೆಲ ಬುಡಕಟ್ಟು ಜನಾಂಗಗಳಲ್ಲಿ ಗರ್ಭಿಣಿಯಾದ ಮೇಲೆಯೇ ಮದುವೆ. ಅದು ಅಲ್ಲಿಯ ಕಾನೂನು. ಕೆಲ ಸಮಾಜಗಳು ಸಾಲ-ಬಡ್ಡಿ ವ್ಯವಹಾರವನ್ನು ಸಂಪೂರ್ಣ ನಿಷೇದಿಸುತ್ತವೆ. ಆದರೆ ಅದನ್ನು ಒಪ್ಪಿಕೊಂಡ ಸಮಾಜಗಳೇ ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು.


ಬಹು ಕಾಲದ ಹಿಂದೆ ಮನುಷ್ಯ ಆದಿವಾಸಿಯಾಗಿ, ಅಲೆಯುತ್ತ ಪ್ರಾಣಿಗಳನ್ನು ಬೇಟೆ ಆಡಿ ಬದುಕುತ್ತಿದ್ದಾಗ ಅವನಿಗೆ ಸರಿ-ತಪ್ಪಿನ ವಿವೇಚನೆ ಇರಲಿಲ್ಲ. ಆದರೆ ಮನುಷ್ಯ ಒಂಟಿಯಾಗಿ ಬದುಕುವುದಕ್ಕಿಂತ, ಸಂಘ ಜೀವಿಯಾಗಿ ಬದುಕಿದರೆ ಇರುವ ಅನುಕೂಲಗಳನ್ನು ಕಂಡುಕೊಂಡ. ಆದರೆ ಮನುಷ್ಯ ಒಗ್ಗಟ್ಟಿನಲ್ಲಿ ಬಾಳಬೇಕೆಂದರೆ ಆ ಜನರ ಗುಂಪು ಒಂದೇ ನಂಬಿಕೆಗಳನ್ನು ಹೊಂದಿರಬೇಕು. ಆಗ ಕದಿಯುವುದು-ಕೊಲ್ಲುವುದು ತಪ್ಪು, ಹಸಿದವರೊಡನೆ ಊಟ ಹಂಚಿಕೊಳ್ಳುವುದು ಒಳ್ಳೆಯದು ಇತ್ಯಾದಿ ನಂಬಿಕೆಗಳನ್ನು ರೂಢಿಗೆ ತಂದ. ಆ ನಂಬಿಕೆಗಳು ಮನುಷ್ಯನಿಗೆ ಸಮಾಜವನ್ನು ಕಟ್ಟಲು ಸಹಾಯ ಮಾಡಿದವು. ದೇವರು-ಧರ್ಮ-ಕರ್ಮ ಮುಂತಾದವುಗಳು ಆ ನಂಬಿಕೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಸಮಾಜವನ್ನು ವಿಸ್ತಾರಗೊಳಿಸಲು ಭದ್ರ ಬುನಾದಿ ಹಾಕಿದವು.


ನಮ್ಮ ನಂಬಿಕೆ ಏನಾದರೂ ಇರಲಿ, ಪ್ರಕೃತಿ ನಮ್ಮನ್ನು ಸ್ಪರ್ಧೆಗೆ ಒಡ್ಡದೆ ಬಿಡದು. ಆದರೆ ಸೋಲಾದಾಗ ಎದೆಗುಂದಬಾರದು ಎನ್ನುವ ಕಾರಣಕ್ಕೆ ಮನುಷ್ಯ 'ಆಗುವುದೆಲ್ಲ ಒಳ್ಳೆಯದಕ್ಕೆ' ಎನ್ನುವ ಮಾತು ರೂಢಿಗೆ ತಂದ. ಹಾಗೆಯೆ 'ಒಳ್ಳೆಯವರಿಗೂ ಕೆಟ್ಟ ಕಾಲ ಬಿಡುವಿದಿಲ್ಲ' ಎನ್ನುವ ಮಾತಿನ ಹಿಂದಿನ ಮರ್ಮ ವಿಚಾರ ಮಾಡಿ ನೋಡಿ. ಕೆಟ್ಟ ಕಾಲ ಬಂದಾಗಲೂ ಒಳ್ಳೆಯತನ ಬಿಡಬಾರದು, ಒಂದು ವೇಳೆ ನಾವು ಕೆಟ್ಟತನಕ್ಕೆ ಇಳಿದಲ್ಲಿ ಅದು ನಮ್ಮ ಸಮಾಜದ ಸಹಬಾಳ್ವೆಗೆ, ನಂಬಿಕೆಗೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ. ಹಾಗಾಗಿ ಮನುಷ್ಯ 'ಒಳ್ಳೆಯವರಿಗೂ ಕೆಟ್ಟದಾಗುತ್ತದೆ' ಎನ್ನುವ ಮಾತು ಸಮಾಜದ ರೂಢಿಯಲ್ಲಿ ಇರುವಂತೆ ನೋಡಿಕೊಂಡ. ಸಮಾಜ ಬೆಳೆದಂತೆಲ್ಲ ಆ ನಂಬಿಕಗಳೇ ಕಾಯಿದೆ, ಕಾನೂನುಗಳಾಗಿ ಮಾರ್ಪಾಡಾದವು. ನ್ಯಾಯ ಎತ್ತಿ ಹಿಡಿಯಲು, ಅನ್ಯಾಯವನ್ನು ಶಿಕ್ಷಿಸಲು ಕೋರ್ಟ್-ಪೊಲೀಸ್ ಇಲಾಖೆಗಳು ನಿರ್ಮಾಣಗೊಂಡವು. ಧರ್ಮ ಎತ್ತಿ ಹಿಡಿದವರನ್ನು ನಮ್ಮ ಸಮಾಜ ಒಳ್ಳೆಯವರು ಎಂದು ಹಾಡಿ ಹೊಗಳಿದರೆ, ವಂಚಕರಿಗೆ ಕುಖ್ಯಾತಿ ಅಂಟಿಸದೇ ಬಿಡುವುದಿಲ್ಲ. ಇವೆಲ್ಲದರ ಮೂಲ ಉದ್ದೇಶ ಒಂದೇ. ಸಮಾಜ ಒಗ್ಗಟ್ಟಾಗಿ ಇರುವಂತೆ ನೋಡಿಕೊಳ್ಳುವುದು.


ಮನುಷ್ಯನನ್ನು ಹೊರತು ಪಡಿಸಿ ಬೇರೆ ಯಾವ ಪ್ರಾಣಿ-ಪಕ್ಷಿಗಳು ಒಳ್ಳೆಯ ಅಥವಾ ಕೆಟ್ಟ ಭಾವನೆಗಳನ್ನು ವ್ಯಕ್ತ ಪಡಿಸುವುದಿಲ್ಲ. ಪ್ರಕೃತಿ ನಿರ್ಮಿಸಿದ ಪ್ರಪಂಚದಲ್ಲಿ ನ್ಯಾಯ-ಅನ್ಯಾಯದ ನಿರ್ಣಾಯಕರಿಲ್ಲ. ಅಲ್ಲಿ ಇರುವುದು ಸೋಲು-ಗೆಲುವಿನ ಸ್ಪರ್ಧೆ ಮಾತ್ರ. ಆದರೆ ಈ ನಂಬಿಕೆ, ಪರಾಮರ್ಶೆಗಳನ್ನು ಬೆಳೆಸಿಕೊಂಡ ಮನುಷ್ಯ ಇತರೆ ಪ್ರಾಣಿ-ಪಕ್ಷಿಗಳನ್ನು ಹಿಂದಕ್ಕೆ ಒತ್ತುವುದರಲ್ಲಿ ಸಂಪೂರ್ಣ ಯಶಸ್ವಿಯಾದ.


ಆದರೆ ಮಾನವ-ಮಾನವರ ನಡುವೆ ಇರುವ ಸ್ಪರ್ಧೆಯಲ್ಲಿ, ಆ ಪರಾಮರ್ಶೆಯನ್ನು ಹಿಂದಕ್ಕಿಟ್ಟು, ತೋರಿಕೆಗೆ ಮಾತ್ರ ಸಮಾಜವನ್ನು ನಂಬಿದವರಂತೆ ಅಭಿನಯ ಮಾಡುತ್ತ, ಅಂತರಂಗದಲ್ಲಿ ಸ್ವಾರ್ಥಿಗಳಾದವರಿಗೆ ಸಮಾಜವನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯ. ಏಕೆಂದರೆ ಒಳ್ಳೆಯತನ-ಕೆಟ್ಟತನಗಳೆಲ್ಲ ಸಮಾಜ ನಿರ್ಮಿಸಿದ ಕಟ್ಟುಪಾಡುಗಳು. ಪ್ರಕೃತಿಯ ನಿಯಮಗಳಲ್ಲ. ನಿಮಗೆ ನೀವು ಒಳ್ಳೆಯವರು ಎಂದುಕೊಂಡಿದ್ದರೆ, ಒಮ್ಮೆ ವಿಚಾರ ಮಾಡಿ ನೋಡಿ. ಅದು ಸಮಾಜ ನಿಮ್ಮಿಂದ ಬಯಸಿದ್ದು ಅಷ್ಟೇ. ಅದು ಸರಿಯೂ ಅಲ್ಲ, ತಪ್ಪು ಕೂಡ ಅಲ್ಲ. ಹಾಗೆಯೇ ಯಾರಾದರೂ ನಿಮಗೆ ಮೋಸ ಮಾಡಿದರೆ, ಅವರು ಕೆಟ್ಟವರು, ಅವರನ್ನು ನಂಬಿದ್ದ ನೀವು ಒಳ್ಳೆಯವರು ಎನ್ನುವುದು ಎಲ್ಲ ಸಮಾಜ ನಿರ್ಮಿಸಿದ ನಂಬಿಕೆಗಳು ಅಷ್ಟೇ. ಈ ಸತ್ಯ ಅರ್ಥ ಮಾಡಿಕೊಂಡವರು ಅದರ ದುರುಪಯೋಗಕ್ಕೆ ಇಳಿದುಬಿಡುತ್ತಾರಲ್ಲ. ಒಂದು ವೇಳೆ, ಅಂತಹವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಆಗ ನೀವೇನು ಮಾಡುವಿರಿ?


ಬೇಟೆಯಾಡುವುದನ್ನು ಹುಲಿ ಬಿಡುವುದಿಲ್ಲ ಅನ್ನುವುದಾದರೆ, ಆಕ್ರಮಣಕಾರಿ ಪ್ರವೃತ್ತಿ ಇರುವ ಮನುಷ್ಯರು ಕೂಡ ಬೇರೇನಲ್ಲ. ಯಾವುದಾದರೂ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಾಗ, ಬೇರೆಯವರು ನಿಮ್ಮನ್ನು ಒಳ್ಳೆಯತನ-ಕೆಟ್ಟತನದ ಪರಾಮರ್ಶೆಗೆ ಒಳಪಡಿಸಿದರೆ, ಅವರು ತಮ್ಮ ಒಳಿತಿಗೆ ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತಿರುವರೋ ಎಂದು ವಿಚಾರ ಮಾಡಿ ನೋಡಿ. ನ್ಯಾಯ-ಅನ್ಯಾಯ ಎಲ್ಲ ನಿಮಗೆ ಮಾತ್ರ ಅನ್ವಯ ಆಗುತ್ತದೆ, ಅವರಿಗೆ ಅಲ್ಲ ಎನ್ನುವ ಹಾಗಿದ್ದರೆ, ಆಗ ನೀವು ನಂಬಬೇಕಾದದ್ದು ಪ್ರಕೃತಿಯ ನಿಯಮ ಮಾತ್ರ. ಈಗ ನೀವು ಇರುವುದು ಸೋಲು-ಗೆಲುವಿನ ಸ್ಪರ್ಧೆಯಲ್ಲಿ. ಸರಿ-ತಪ್ಪಿನ ವಿಮರ್ಶೆ ಅಲ್ಲಿಗೆ ಬಿಟ್ಟು, ಒಳ್ಳೆಯತನದ ಕಟ್ಟು ಪಾಡಿಗೆ ಬೀಳದೆ, ನೀವು ಸ್ಪರ್ಧಿಸದಿದ್ದರೆ, ಪ್ರಕೃತಿ ನಿಮ್ಮನ್ನು ಮೂಲೆಗುಂಪು ಮಾಡದೇ ಬಿಡುವುದಿಲ್ಲ. ನೀವು ಇಲ್ಲವೇ ಅವರು ಉಳಿಯಬೇಕು ಎನ್ನುವ ಸ್ಪರ್ಧೆಯಲ್ಲಿ ನೀವೇ ಗೆಲ್ಲಬೇಕು. ಕನಿಷ್ಠ ಪಕ್ಷ ಆರೋಗ್ಯದಾಯಕ ಸ್ಪರ್ಧೆಯಾದರೂ ನೀವು ಕೊಡಬೇಕು. ಅಕಸ್ಮಾತ್ ಸೋತರೆ, 'ಆಗುವುದೆಲ್ಲ ಒಳ್ಳೆಯದಕ್ಕೆ' ಎಂದುಕೊಂಡರಾಯಿತು.


'ಭಕ್ತ ಕುಂಬಾರ' ಚಿತ್ರದಲ್ಲಿ ಕಷ್ಟ ಅನುಭವಿಸುವ ಕುಂಬಾರನಿಗೆ ಕೊನೆಯಲ್ಲಿ ಅವನು ಕಳೆದುಕೊಂಡದ್ದೆಲ್ಲ ಸಿಗುತ್ತದೆ. ಅದು ನಂಬಿಕೆ. ಅದು ಜೀವನದ ಕಷ್ಟಗಳನ್ನು ಎದುರಿಸುವ ಸ್ಥೈರ್ಯ ಕೊಡುತ್ತದೆ. ಆದರೆ ಘಜ್ನಿ ಎನ್ನುವ ಧಾಳಿಕೋರ ಗುಜರಾತ್ ನ ಸೋಮನಾಥಪುರ ದೇವಸ್ಥಾನಕ್ಕೆ ಧಾಳಿ ಮಾಡಿದಾಗ ಅಲ್ಲಿ ನೆರೆದಿದ್ದ ಸಾವಿರಾರು ಜನ, ಯಾವುದೊ ಪವಾಡದ ನಿರೀಕ್ಷೆಯಲ್ಲಿ, ಯಾವುದೇ ಹೋರಾಟ ಮಾಡದೇ ಜೀವ ಕಳೆದುಕೊಂಡರಲ್ಲ. ಅದು ಮೂಢ ನಂಬಿಕೆ. ಅವರು ಒಟ್ಟಾಗಿ, ಸಿಕ್ಕ ಆಯುಧಗಳನ್ನು ಹಿಡಿದು ಹೋರಾಟ ಮಾಡಿದ್ದರೆ, ಅವರಲ್ಲಿ ಕೆಲವು ಜನರ ಜೀವವಾದರೂ ಉಳಿಯುವ ಸಾಧ್ಯತೆ ಇತ್ತು. ಎದುರಾಳಿಗಳಲ್ಲೂ ಸಾವು-ನೋವು ಉಂಟು ಮಾಡಬಹುದಾಗಿತ್ತು. ಆ ಹೋರಾಟ ಧರ್ಮದ್ದಾಗಿರಲಿಲ್ಲ. ಬದಲಿಗೆ ಒಬ್ಬ ಸ್ವಾರ್ಥಿ ಧರ್ಮದ ದುರ್ಬಳಕೆ ಮಾಡುವುದಾಗಿತ್ತು.


ನಮ್ಮ ಜೀವನದ ಪ್ರತಿ ದಿನದ ಸಂಘರ್ಷ ನಮ್ಮ ನಂಬಿಕೆಗಳೊಡನೆ ಆಟ ಆಡುವವವರ ಜೊತೆ ಇರುತ್ತದೆ. ಆಗ ಒಳ್ಳೆಯತನಕ್ಕೆ ಕಟ್ಟು ಬೀಳದಿರಿ. ಮಾನವ ಮೌಲ್ಯಗಳಿಗೆ ಖಂಡಿತ ಬೆಲೆ ಕೊಡಿ. ಆದರೆ ಅವುಗಳಿಗೆ ಬೆಲೆ ಕೊಡದೆ ಇರುವವವರ ಜೊತೆಗೆ ಮಾತ್ರ ಪ್ರಕೃತಿ ನಿಯಮವನ್ನು ಕಡೆಗಣಿಸಬೇಡಿ.

Sunday, January 23, 2022

Book Review: Science, A History by John Gribbin

  • When Copernicus published a book in 1543 suggesting a model of the Universe with Sun at the center (correcting the earlier misconception of Earth being the center), the original edition of 400 copies did not even sell out!
  • Galileo was trained in Medicine, but taught Mathematics at a University in Pisa and he was an Astronomer by practice. Apart from compass, he built his own telescope which was the best in his times.
  • Unbiased historians find it impossible to say whether Newton or Hooke made more significant contribution. Not just in Mathematics and Physics, Newton had talents to rewrite history in his own favor as well.
  • When James Watt patented his steam engine in 1769, it was not an immediate commercial success but two decades later, it was at the heart of industrial revolution.
  • Marie Curie was banned from main laboratories for fear that sexual excitement of her presence there might prevent any research getting done.

 

Science is impersonal but scientists are not. Many of them struggled to make their ends meet but were driven by the pleasure of finding things out. They did not want to believe what their religion or society asked them to believe. They rather preferred experiments and equations to find the truth. One invention led to another and misconceptions were corrected with better explanations. It led to evolution of science. From Galileo to Stephen Hawking, science not only grew in volumes, it changed the way we live our lives. There were numerous scientists who dedicated their lives in pursuit of science. And standing on the shoulders of such giants were Newton and Einstein.

 

The history of science in the last 500 years is documented in this 600-page book through the lives of scientists who created it. You won’t appreciate science much by just going through a textbook. They are just theoretical equations and experiments. But when you understand the people who developed them along with their lives, their challenges and dilemma, you would appreciate more how the science we study came into existence.

 

John Gribbin, author of this book is a British science writer (has many popular science books to his credit), an astrophysicist and a visiting fellow in astronomy at the University of Sussex. His books are not only fascinating reads but make the science concepts such as quantum mechanics easier for a common man to understand and relate.




Tuesday, January 18, 2022

ಕಥೆ: ಸ್ವಗತಾ ಲಹರಿ

ಅಂದು ಅಸಮಾಧಾನ ಹೆಚ್ಚಿ ತಾಳ್ಮೆ ಮುಗಿದು ಹೋಗಿತ್ತು. ಜಾಗ ಬದಲಿ ಮಾಡುವುದು ವಾಸಿ ಎಂದೆನಿಸಿ, ಮಾಡುತ್ತಿದ್ದ ಕೆಲಸ ಅರ್ಧಕ್ಕೆ ನಿಲ್ಲಿಸಿ, ಲ್ಯಾಪ್ ಟಾಪ್ ಮುಚ್ಚಿ, ಬಟ್ಟೆ ಜೋಡಿಸಿಕೊಂಡು ಕಾರು ತೆಗೆದುಕೊಂಡು ಬೆಂಗಳೂರಿಗೆ ಹೊರಟು ಬಿಟ್ಟೆ. ಸಿಂಧನೂರು, ಗಂಗಾವತಿ, ಹೊಸಪೇಟೆ ಎಲ್ಲ ಊರುಗಳನ್ನು ದಾಟಿ ಕಾರು ಸರಾಗವಾಗಿ ಹೋಗುತ್ತಿತ್ತು. ಹೊಟ್ಟೆ ಹಸಿದು ಚುರ್ರ್ ಎನ್ನುತ್ತಿದ್ದರೂ, ಸೋತು ಹೋದ ಮನಸು ಊಟ ಮಾಡಲು ಒಪ್ಪಲಿಲ್ಲ. ಚಿತ್ರದುರ್ಗದ ಮುರುಘಾ ಮಠ ಸೇರುವ ಹೊತ್ತಿಗೆಲ್ಲ ಸಾಯಂಕಾಲದ ಸಮಯ. ಮಠದ ನೆರಳು ತಲೆ ಸಿಡಿಯುವುದನ್ನು ಕಡಿಮೆ ಮಾಡಿತ್ತು. ಮುಳುಗುವ ಸೂರ್ಯ ಚಿತ್ರದುರ್ಗದ ಬೆಟ್ಟವನ್ನು ಕೆಂಪಾಗಿಸಿದ್ದ. ಆ ಬೆಟ್ಟದ ಮೇಲೆ ಕೋಟೆಯ ಗೋಡೆಗಳ ಸಾಲುಗಳು ನೆತ್ತರು ಬೀರಿದಂತೆ ಕೆಂಪಾಗಿ ಕಾಣುತ್ತಿದ್ದವು. ಕಲ್ಲಿನ ಕೋಟೆ ಕಟ್ಟಿ, ರಕ್ತದ ಹೊಳೆ ಹರಿಸಿದ ನಾಯಕರಿಗಿಂತ, ಕರುಣಾ ಸೌಧವನ್ನು ಕಟ್ಟಿದ ಶರಣರ ಜೀವನ ಸಾರ್ಥಕ ಎನಿಸಿತು. ಜೀವನ  ಸಾಕಾದವರಿಗೆ ಸುಡುಗಾಡು ಅಲ್ಲದೆ ಇನ್ನೊಂದು ಆಯ್ಕೆ ಇರಲಿ ಎನ್ನುವುದಕ್ಕಾಗಿ ಶರಣರು ಮಠ ಕಟ್ಟಿದರೇನೋ ಎನಿಸಿತು. ಅಷ್ಟೊತ್ತಿಗೆ ಮತ್ತೆ ನನ್ನ ನೆತ್ತಿ ಸುಡುತ್ತಾ ಜ್ವರ ಏರಲು ಆರಂಭಿಸಿತ್ತು. ಹತ್ತಿರದಲ್ಲೇ ರೂಮು ಹುಡುಕಿ, ಮಾತ್ರೆ ತೆಗೆದುಕೊಂಡು ಮಲಗಿಬಿಟ್ಟೆ. ಮರುದಿನ ಬೆಳ್ಳಿಗೆ ಏಳುವ ವಿಶ್ವಾಸ, ಆಸೆ ಎರಡೂ ಉಳಿದಿರಲಿಲ್ಲ. ಆದರೆ ಅದಕ್ಕೆ ತದ್ವಿರುದ್ಧವಾಗಿ, ಬೆಳಿಗ್ಗೆ ಜ್ವರ ತಗ್ಗಿ ಮನಸ್ಸು ಹಗುರಾಗಿತ್ತು. ಮಾತ್ರೆಯೋ, ನಿದ್ದೆಯೊ, ಶರಣ ಆಶೀರ್ವಾದವೋ ಯಾವುದು ಕೆಲಸ ಮಾಡಿತ್ತು ತಿಳಿಯಲಿಲ್ಲ. ಎರಡು ಇಡ್ಲಿ ತಿಂದು, ಕಾರಿಗೆ ಡೀಸೆಲ್ ತುಂಬಿಸಿ ಬೆಂಗಳೂರಿನ ಕಡೆಗೆ ಪ್ರಯಾಣ ಆರಂಭಿಸಿದೆ. ಕಾರು ತೇಲಿದಂತೆ ಕರೆದುಕೊಂಡು ಹೋಗುತ್ತಿತ್ತು. ಇದೇ ಕಾರು ಹತ್ತು ವರುಷದ ಹಿಂದೆ ಇದ್ದಿದ್ದರೆ, ಇಡೀ ಕರ್ನಾಟಕವನ್ನು ಕನಿಷ್ಠ ಒಂದು ಡಜನ್ ಸಲ ಆದರೂ ಸುತ್ತದೇ ಬಿಡುತ್ತಿದ್ದಿಲ್ಲ ಅಂದುಕೊಂಡೆ. ನೋಡುವಷ್ಟರಲ್ಲಿ ಬಂದೇ ಬಿಟ್ಟಿತು ಬೆಂಗಳೂರು.

 

ಮನೆ ಮುಂದಿರುವ ಕಾರ್ಮಿಕರ ಶೆಡ್ ನಲ್ಲಿ ಅಂದು ಸಂಜೆ ಹೊಸಬರು ವಾಸ ಆರಂಭಿಸಿದ್ದರು. ಅವರಲ್ಲಿ ಒಬ್ಬನು ತನ್ನ ಹೆಸರು 'ಕುಮಾರ್' ಎಂದು ನನ್ನ ಜೊತೆ ಪರಿಚಯ ಮಾಡಿಕೊಂಡ. ಬರೀ 'ಕುಮಾರ್' ಅನ್ನುವ ಹೆಸರು ಯಾಕೋ ಸರಿ ಹೊಂದುತ್ತಿಲ್ಲ. ಹಿಂದೆ ಅಥವಾ ಮುಂದೆ ಏನಾದರು ಸೇರಿಸಿ 'ರಾಜ್ ಕುಮಾರ್' ಎಂದೋ ಇಲ್ಲವೋ 'ಕುಮಾರ ರಾಮ' ನೆಂದೋ ಹೇಳಿದ್ದರೆ ಸಮಂಜಸ ಆಗುತ್ತಿತ್ತು ಎಂದು ಹೇಳಿದೆ. ಆದರೆ ಅವನು ಕಣ್ಣು ನೆಟ್ಟಿದ್ದು ನಮ್ಮ ಮನೆ ಮುಂದಿರುವ ಸಂಪಿಗೆ ಮರದ ಕಡೆಗೆ. ಅಲ್ಲಿ ಯಾಕೆ ಜೋಕಾಲಿ ಕಟ್ಟಿದ್ದು ಎಂದು ಕೇಳಿದ. ಅವು ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳನ್ನು ಮಲಗಿಸುವ ಜೋಳಿಗೆ, ಅವನ್ನು ಬಿಚ್ಚದೆ ಹಾಗೆ ಬಿಟ್ಟು ಹೋಗಿದ್ದಾರೆ ಎಂದು ನಾನು ಹೇಳಿದೆ. ಅವನು ಅಸಮಾಧಾನದಿಂದ, ಅವನ್ನು ಹಾಗೆ ಬಿಡಬಾರದು, ಒಳ್ಳೆಯದಲ್ಲ ಎಂದು ಹೇಳಿದ. ಮತ್ತು ಅವುಗಳನ್ನು ಬಿಚ್ಚುವದಕ್ಕೆ ಸಹಾಯ ಮಾಡಿದ. ಅವುಗಳನ್ನು ಬಿಚ್ಚದಿದ್ದರೆ, ರಾತ್ರಿ ವೇಳೆಯಲ್ಲಿ ದೆವ್ವಗಳು ಅಲ್ಲಿ ಜೋಕಾಲಿ ಆಡುವುದಾಗಿ, ಆ ವಿಷಯ ತನಗೆ ಗೊತ್ತಿರುವುದಾಗಿ, ಮತ್ತು ಆ ವಿಷಯ ಅವನು ಪೂರ್ತಿ ಹೇಳಿದರೆ ನಾನು ಆ ರಾತ್ರಿ ನಿದ್ದೆಯೇ ಮಾಡುವುದಿಲ್ಲ ಎಂದು ಹೆದರಿಸಿದ. ಅಮಾವಾಸ್ಯೆ ಒಂದೆರಡು ದಿನಗಳಷ್ಟು ಹತ್ತಿರವಿತ್ತು. ಮಬ್ಬುಗತ್ತಲಿನಲ್ಲಿ ಅವನ ಮುಖ ನೋಡಿದೆ. ದವಡೆಯ ತುಂಬಾ ಗುಟಖಾ ಜಗಿಯುತ್ತಿದ್ದ ಅವನು ದೆವ್ವವಲ್ಲ, ಮನುಷ್ಯನೇ ಎಂದು ಖಾತರಿಯಾಗಿ ನಿರಾಳವಾಯಿತು.

 

ಅಂದು ರಾತ್ರಿ ಮನೆಯಲ್ಲಿ ಒಬ್ಬನೇ ಮಲಗಿದೆ. ನಡು ರಾತ್ರಿ ಎರಡು, ಮೂರು ಘಂಟೆ ಹೊತ್ತಿಗೆ ಯಾರೋ ಒಂದು ಹೆಣ್ಣು ಧ್ವನಿ 'ಅಣ್ಣಾ' ಎಂದು ಕರೆದ ಹಾಗೆ. ಅರೆ ನಿದ್ದೆಯಲ್ಲಿ ಇದ್ದ ನಾನು, ಕಿಟಕಿಯಿಂದ ಯಾರಾದರೂ ಕೂಗುತ್ತಿರಬಹುದಾ ಅಂದುಕೊಂಡೆ. ಆದರೆ ಧ್ವನಿ ಹೊರಗಡೆಯಿಂದ ಬರುತ್ತಿರಲಿಲ್ಲ. ಕಿವಿಯನ್ನು ಬಲವಾಗಿ ಮುಚ್ಚಿಕೊಂಡು ನೋಡಿದೆ. ಧ್ವನಿ ಕೇಳಿಸುತ್ತಿದ್ದದ್ದು ಸೀದಾ ಮನಸಿನಲ್ಲಿ. ಅದು ಕೆಲವು ವರುಷಗಳ ಹಿಂದೆ ಅನಾರೋಗ್ಯದಿಂದ ತೀರಿಕೊಂಡ ನನ್ನ ಚಿಕ್ಕಮ್ಮಳ ಮಗಳು, ನನ್ನ ತಂಗಿಯ ಧ್ವನಿಯನ್ನು ಹೋಲುತ್ತಿತ್ತು. ಅಷ್ಟರಲ್ಲೇ ಇನ್ನೊಂದು ಗಂಡು ಧ್ವನಿ ಕೇಳಿಸಿತು. 'ಎಷ್ಟು ಹೆದರಿಕೊಳ್ಳುತ್ತೀಯಲ್ಲ ಅಣ್ಣ ನೀನು?'. ಸಂದೇಹವೇ ಇಲ್ಲ, ಅದು ಕೆಲವೇ ತಿಂಗಳುಗಳ ಹಿಂದೆ ಅಸಹಜವಾಗಿ ತೀರಿಕೊಂಡ ನನ್ನ ಇನ್ನೊಬ ಚಿಕ್ಕಮ್ಮಳ ಮಗ, ನನ್ನ ತಮ್ಮನದು. ನಿದ್ದೆ ಹಾರಿ ಹೋಯಿತು. ಎದ್ದು ಕುಳಿತುಕೊಂಡೆ. ಅವರು ಯಾಕೆ ನನ್ನನ್ನು ಮಾತನಾಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಕ್ಷಣಾರ್ಧದಲ್ಲೇ ಉತ್ತರ ಹೊಳೆಯಿತು. ಅವರು ಬಂದಿರುವುದು ತಮ್ಮ ನೋವು ತೋಡಿಕೊಳ್ಳಲು. ನನಗೇ ಯಾರಾದರೂ ಸಮಾಧಾನ ಹೇಳಬೇಕಾದ ಪರಿಸ್ಥಿತಿಯಲ್ಲಿರುವಾಗ, ನಾನು ಅವರಿಗೇನು ಸಮಾಧಾನ ಹೇಳಬಲ್ಲೆ? ಆದರೆ ಎದ್ದು ಕುಳಿತ ಮೇಲೆ, ಬರೀ ಗುಂಯ್ಗುಡುವ ಸದ್ದು. ಅದರ ಅರ್ಥ ಏನು ಎಂದು ತಿಳಿಯದೇ ಹೋಯಿತು. ನನ್ನ ನೋವಿಗಿಂತ ಅವರ ನೋವು ತೀವ್ರವಾದದ್ದು ಎನ್ನುವುದು ಅರಿವಿಗೆ ಬಂತು. ಆದರೆ ಮುಂದೆ ಯಾವ ಸಂಪರ್ಕವೂ ಸಾಧ್ಯವಾಗಲಿಲ್ಲ. ಹಾಸಿಗೆಯಲ್ಲಿ ಹೊರಳಾಡುತ್ತಾ ನಿದ್ದೆಗೆ ಜಾರಿದ್ದು ತಿಳಿಯಲೇ ಇಲ್ಲ.

 

ಮರುದಿನ ಬೆಳ್ಳಿಗೆ ಹೊತ್ತಿಗೆ ಫೋನ್ ಮಾಡಿದ್ದ ಅಕ್ಕ ಕೇಳುತ್ತಿದ್ದಳು 'ಹುಷಾರಾಗಿದ್ದೀಯ?'. ಬದುಕಿದ್ದೀಯಾ ಎಂದು ನೇರವಾಗಿ ಕೇಳದೆ ಸೂಕ್ಷ್ಮವಾಗಿ ಕೇಳುತ್ತಿದ್ದಾಳೆ ಅಂದುಕೊಂಡೆ. ಎರಡು ದಿನದ ಒಬ್ಬಂಟಿತನ, ನೋವು, ಅನುಭವಗಳ ಮೆಲುಕು ಹಾಕಿದ ಮೇಲೆ ನನಗೇ ಅರಿವಾಗತೊಡಗಿತ್ತು. ಬುದ್ಧ ಹೇಳಿದ್ದು ಬರೀ ಆಸೆಗಳನ್ನು ಗೆಲುವುದಕ್ಕಲ್ಲ. ಆವೇಶ, ಆಲೋಚನೆಗಳನ್ನು ಕೂಡ ಗೆಲ್ಲು ಎಂದು. ನಮ್ಮ ದೇಹ ನಾವಲ್ಲವಾದರೆ, ನಮ್ಮ ಮನಸ್ಸು ಕೂಡ ನಾವಲ್ಲ. ಮನಸ್ಸು ಮಾಡುವ ವಿಚಾರಗಳು ಕೂಡ ನಾವಲ್ಲ. ಅದು ಪಡುವ ಸಂತೋಷ, ನೋವುಗಳೂ ಕೂಡ ನಾವಲ್ಲ. ಹಾಗಾದರೆ ಮನಸ್ಸಿನ ಜೊತೆ ನಮಗೆ ಇರಬಹುದಾದ ಸಂಬಂಧ ಎಂಥದ್ದು? ಅದು ಕರ್ಮಫಲ ಎಂದು ಸೂಕ್ಷ್ಮವಾಗಿ ತಿಳಿಸುತ್ತದೆ ನಮ್ಮ ಧರ್ಮಗ್ರಂಥಗಳು. ಆದರೆ ವಿಜ್ಞಾನ ಮಾತ್ರ ಆತ್ಮ, ಕರ್ಮ ಇರುವುದಕ್ಕೆ ಯಾವ ಸಾಕ್ಷಿಯೂ ಇಲ್ಲ ಎಂದು ಅದನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತದೆ. ದೇಹ, ಮನಸ್ಸು ಬೇರೆ ಬೇರೆ ಅಲ್ಲ. ಮನಸ್ಸು  ಹುಟ್ಟಿಸುವ ಭ್ರಮೆಗಳು ನಮ್ಮಲ್ಲಿ ವಿಚಿತ್ರ ಅನುಭವ ಹುಟ್ಟಿಸುತ್ತವೆ. ಅದಕ್ಕೆಲ್ಲ ನಮ್ಮ ದೇಹದಲ್ಲಿ ಶ್ರವಿಸುವ ರಾಸಾಯನಿಕಗಳು ಕಾರಣ ಎನ್ನುವ ವಿವರಣೆಯನ್ನು ವಿಜ್ಞಾನ ಕೊಡುತ್ತದೆ.

 

ನನ್ನ ಮೊಬೈಲ್ ನಲ್ಲಿ ಬ್ಯಾಂಕ್ ನವರು ಮೆಸೇಜ್ ಕಳಿಸಿದ್ದರು. ಮನೆ ಸಾಲದ ಕಂತು ಇನ್ನೆರಡು ದಿನಗಳಲ್ಲಿ ಕಟ್ಟಬೇಕು, ಖಾತೆಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ ಎಂದು. ಲ್ಯಾಪ್ ಟಾಪ್ ತೆಗೆದು ನೋಡಿದರೆ, ಕೆಲಸ ಅರ್ಧಕ್ಕೆ ಬಿಟ್ಟು ಹೋದರೆ ಹೇಗೆ ಮಾರಾಯ ಎನ್ನುವ ಹಾಗೆ ಈ-ಮೇಲ್ ಗಳ ರಾಶಿಯಿತ್ತು. ಅಧ್ಯಾತ್ಮವೋ, ವಿಜ್ಞಾನ ಹೇಳುವ ಹಾಗೆ ಭ್ರಮೆಯೋ ಎನ್ನುವುದು ಅವಸರದಲ್ಲಿ ನಿರ್ಧರಿಸಬೇಕಿಲ್ಲ. ಅವಸರ ಇರುವುದು ಲೌಕಿಕ ಜೀವನದ ಕಟ್ಟುಪಾಡುಗಳು, ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ಅಲ್ಲವೇ? ಅಲ್ಲಿಗೆ ನನ್ನ ಸ್ವಗತಾ ಲಹರಿ ತುಂಡಾಯಿತು. ಜೀವನದ ನೊಗ ಮತ್ತೆ ಹೊತ್ತು ತಿರುಗಣಿಗೆ ಬಿದ್ದದ್ದಾಯಿತು. ಇಂದಿಗೆ ಆ ಅನುಭವ, ಯಾವುದೇ ಆವೇಶ, ಉದ್ವೇಗ ಇಲ್ಲದ ಬರೀ ನೆನಪು ಮಾತ್ರ. ಹಾಗಾಗಿ ಅದೊಂದು ಹೊತ್ತುಕಳೆಯಲು ಹೇಳುವ ಕಥೆ ಅಷ್ಟೇ.

Thursday, January 13, 2022

೨೦೨೧: ಒಂದು ಹಿನ್ನೋಟ

ಕಳೆದ ವರುಷದ ಬದುಕು ನೀಡಿದ ಅನುಭವಗಳ ಒಂದು ಹಿನ್ನೋಟ.


೧. ನನಗೆ ಹೊಸ ಅಭ್ಯಾಸ ಎನ್ನುವಂತೆ, ಪ್ರತಿ ದಿನ ಅಲ್ಲದಿದ್ದರೂ ಸಾಕಷ್ಟು ದಿನಗಳ ಆರಂಭ ಆಗಿದ್ದು ಭಕ್ತಿ ಗೀತೆಗಳಿಂದ. ಪುರಂದರ ದಾಸರ 'ಬೇವು ಬೆಲ್ಲದೊಳಿಡಲೇನು ಫಲ', 'ಕಲ್ಲು ಸಕ್ಕರೆ ಕೊಳ್ಳಿರೋ', ಕನಕದಾಸರ 'ಎಸು ಕಾಯಂಗಳ ಕಳೆದು', 'ಬಾಗಿಲನು ತೆರೆದು', ಶಿಶುನಾಳ ಶರೀಫರ 'ಹಾಕಿದ ಜನಿವಾರವ', 'ದೇಹದ ಗುಡಿಯ ನೋಡಿರಣ್ಣ' ಈ ಗೀತೆಗಳು ಮಾತ್ರ ಪ್ರತಿದಿನ ಖಾಯಂ. ಕೇಳುವುದಷ್ಟೇ ಅಲ್ಲದೆ ಮೆಲ್ಲಗೆ ಅವುಗಳನ್ನು ಹಾಡಿಕೊಳ್ಳುವಷ್ಟು ತಲ್ಲೀನತೆ. ದಾಸರು ಹೃದಯದಾಳದಷ್ಟೇ ಅಲ್ಲ, ನಾಲಿಗೆಯ ತುದಿ ಮೇಲೂ ನಲಿಯುತ್ತಾರೆ.


೨. ಒಟ್ಟಾರೆ ಓದಿದ ಪುಸ್ತಕಗಳು ಸುಮಾರು ೪೦. ಸಂಖ್ಯೆಗಿಂತ ಗುಣಮಟ್ಟಕ್ಕೆ ಒತ್ತು ಕೊಡುತ್ತಿರುವುದರಿಂದ, ಕೈಗೆತ್ತಿಕೊಳ್ಳುವ ಪುಸ್ತಕದಲ್ಲಿ ಈಗ ನಾನು ತುಂಬಾ ಕಟ್ಟು ನಿಟ್ಟು. ಅತಿ ಪ್ರಭಾವ ಬೀರಿದ ಪುಸ್ತಕ ಎಂದರೆ 'Yuval Harrari' ಅವರು ಬರೆದ 'Sapiens' ಪುಸ್ತಕ. ವೇದ, ಉಪನಿಷತ್ತುಗಳಲ್ಲಿ ದೊರಕದ ಉತ್ತರಗಳು ನನಗೆ ಈ ಪುಸ್ತಕದಲ್ಲಿ ಸಿಕ್ಕವು. ಅರ್ಥವಿಲ್ಲದ ಜೀವನದಲ್ಲಿ, ಅರ್ಥ ಹುಡುಕುವ ಅಥವಾ ತನ್ನದೇ ಅರ್ಥ ತುಂಬುವ ಪ್ರಯತ್ನವನ್ನು ಮಾನವ ಅನಾದಿ ಕಾಲದಿಂದಲೂ ಜಾರಿಯಲ್ಲಿಟ್ಟಿದ್ದಾನೆ. ಪ್ರಕೃತಿ (ಜೀನ್, ಹಾರ್ಮೋನ್ ಗಳ ಮೂಲಕ) ಆಡಿಸುವ ಆಟದ ಕೈಗೊಂಬೆಯಾದ ಮಾನವ ಲಕ್ಷಾಂತರ ವರುಷಗಳ ಕಾಲ ವಿಕಾಸ ಹೊಂದಿದ ಬಗೆಯನ್ನು ವಿವರಿಸುವ ಈ ಪುಸ್ತಕ ಅಸಾಮಾನ್ಯವಾದದ್ದು.


೩. ಕಳೆದ ವರ್ಷ ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿ 'ನವಲ್ ರವಿಕಾಂತ್'. ಭಾರತೀಯ ಮೂಲದ, ಅಮೇರಿಕಾದಲ್ಲಿ ವಾಸಿಸುವ, ಹೊಸ ತರಹದ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಈತ, ತನ್ನ podcast ಗಳ ಮೂಲಕ ಜೀವನಾನುಭವಗಳನ್ನು ಹಂಚಿಕೊಂಡಿದ್ದಾನೆ. ಆತನ ಮಾತುಗಳು ನನಗೆ ಸರಿಯಾದ ನಿರ್ಧಾರಗಳು ತೆಗೆದುಕೊಳ್ಳುವುದರಲ್ಲಿ ಅತ್ಯಂತ ಸಹಕಾರಿ ಎನಿಸಿದವು.


೪. ನಾನು ಬ್ಲಾಗ್ ನಲ್ಲಿ ಬರಹಗಳನ್ನು ಬರೆಯುವುದನ್ನು ೨೦೧೩ ರಲ್ಲೇ ಪ್ರಾರಂಭಿಸಿದರೂ, ಅವುಗಳನ್ನು ನಿರ್ಭಯದಿಂದ Facebook ನಲ್ಲಿ ಹಂಚಿಕೊಳ್ಳುವುದನ್ನು ಪ್ರಾರಂಭಿಸಿದ್ದು ಕಳೆದ ವರುಷ. ಅದರ ಪರಿಣಾಮವಾಗಿ, ಕೆಲವು ಗೆಳೆಯರು ನನ್ನಲ್ಲಿರುವ ಬರಹಗಾರನನ್ನು ಗುರುತಿಸುತ್ತಿರುವುದು ಸಂತೋಷದ ವಿಷಯ. ಕಳೆದ ವರುಷ ಬರೆದ ಬರಹಗಳ ಸಂಖ್ಯೆ ೧೦೧.


೫. ಹಣಕಾಸಿನ ವಿಚಾರದಲ್ಲಿ ಕಳೆದ ವರ್ಷ ತೆಗೆದುಕೊಂಡ ನಿರ್ಧಾರಗಳು ನಿರೀಕ್ಷೆಗೂ ಮೀರಿದ ಲಾಭವನ್ನು ತಂದುಕೊಟ್ಟವು. ನನ್ನನ್ನು ಕೆಲಸದಲ್ಲಿಟ್ಟುಕೊಂಡು ಸಲಹುವ 'Applied Materials' ಕಂಪನಿಗೂ ಮತ್ತು ದೊಡ್ಡ ಮಟ್ಟದ ಹಣ ಸರಾಗವಾಗಿ ಖರ್ಚು ಮಾಡುವಷ್ಟು ಸವಲತ್ತು ನೀಡಿದ ಷೇರು ಮಾರುಕಟ್ಟೆಗೂ ನಮೋ ನಮಃ.


೬. ಕೆಲ ಕುಟುಂಬದ ಸದಸ್ಯರು ತಮ್ಮ ದೌರ್ಬಲ್ಯಗಳಿಗೆ ನಮ್ಮನ್ನು ಹೊಣೆಗಾರರನ್ನಾಗಿಸಿ, ಅತಿ ಎನಿಸುವಷ್ಟು ದೋಷಾರೋಪಗಳನ್ನು ಮಾಡಿ ನಮ್ಮನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರಲ್ಲ. ಅಂತಹ ಒಂದು ಬೆನ್ನೇರಿದ ಬೇತಾಳವನ್ನು ಕೆಳಗಿಳಿಸುವುದಷ್ಟರಲ್ಲಿ, ನನ್ನ ತಲೆಯ ಕೂದಲಿನ ಸ್ವಲ್ಪ ಭಾಗ ಬೆಳ್ಳಗಾಗಿ ಹೋಗಿದ್ದು ಕಳೆದ ವರುಷದ ವಿಶಿಷ್ಟ ಅನುಭವ. ಸಮಯಕ್ಕೆ ಸರಿಯಾಗಿ ಧೈರ್ಯ ತುಂಬಿದ ಸ್ನೇಹಿತರಿಗೊಂದು ಹೃದಯಪೂರ್ವಕ ಸಲಾಂ.


೭. ಸಾಮಾಜಿಕ ಸೇವೆಯ ಕಾರ್ಯಗಳಿಗೆ ಕಳೆದ ವರುಷ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡಲು ಸಾಧ್ಯವಾದರೂ ಅದನ್ನು ಇನ್ನು ಉತ್ತಮವಾಗಿಸಲು ಸಾಧ್ಯವಿತ್ತು ಎಂದು ನನಗೇ ಅನ್ನಿಸಿದೆ.


೮. ಎರಡು ವಾರ ಟೈಫಾಯಿಡ್ ಗುಮಾನಿಯಿಂದ ಮಲಗಿದ್ದು ಬಿಟ್ಟರೆ, ಆರೋಗ್ಯ ಕೈ ಕೊಟ್ಟಿಲ್ಲ.


೯. ವರುಷದ ಆರಂಭದಲ್ಲಿ ಶೃಂಗೇರಿ, ಹೊರನಾಡು ಪ್ರವಾಸ ಮಾಡಿದ್ದು ಬಿಟ್ಟರೆ, ಕೋವಿಡ್ ಮೂದೇವಿ ಬೇರೆ ಪ್ರವಾಸ ಮಾಡಲು ಬಿಟ್ಟಿಲ್ಲ.


ಇದು ನನ್ನ ೨೦೨೧ ರ ಹೈಲೈಟ್ಸ್. 


ಆಸೆ-ನಿರಾಸೆಗಳ ಉಯ್ಯಾಲೆ ಏರದೇ, ಬಂದಿದ್ದು ಬರಲಿ ಎನ್ನುವ ನಿರ್ಲಿಪ್ತತೆಯಿಂದ ಹೊಸ ವರುಷಕ್ಕೆ ಕಾಲಿಟ್ಟಿದ್ದೇನೆ. ದಾಸರು ಮನದಲ್ಲಿ ಜಾಗ ಮಾಡಿದರೂ, ವ್ಯಾಪಾರೀ ಬುದ್ಧಿ ಇನ್ನೂ ಹೋಗಿಲ್ಲ. ಹಣ ಗಳಿಸುವುದನ್ನು, ಮಕ್ಕಳ ಜವಾಬ್ದಾರಿಯನ್ನು ಇಷ್ಟ ಪಟ್ಟೇ ಮಾಡುತ್ತೇನೆ. ಓದಲು ಸಾಕಷ್ಟು ಪುಸ್ತಕಗಳು ಉಳಿದಿವೆ. ಸಮಯ ಕಳೆದದ್ದು ಗೊತ್ತಾಗದಂತೆ ಇರಲು, ಕಷ್ಟ-ಸುಖ ಹಂಚಿಕೊಳ್ಳಲು ನಿಮ್ಮಂತಹ ಸಮ ಮನಸ್ಸಿನ ಸ್ನೇಹಿತರಿದ್ದೀರಿ.


ಕಳೆದ ವರುಷ ನಿಮಗೆ ಹೇಗಿತ್ತು? ಹತ್ತರ ಜೊತೆಗೆ ಹನ್ನೊಂದೋ ಅಥವಾ ವಿಶಿಷ್ಟವೋ? ಈ ವರುಷದ ನಿಮ್ಮ ಗುರಿಗಳು ಏನು? ಮಾತಾಡೋಣ, ಸಿಗ್ತೀವಲ್ಲ.