ಅಂದು ಅಸಮಾಧಾನ ಹೆಚ್ಚಿ ತಾಳ್ಮೆ ಮುಗಿದು ಹೋಗಿತ್ತು. ಜಾಗ ಬದಲಿ ಮಾಡುವುದು ವಾಸಿ ಎಂದೆನಿಸಿ, ಮಾಡುತ್ತಿದ್ದ ಕೆಲಸ ಅರ್ಧಕ್ಕೆ ನಿಲ್ಲಿಸಿ, ಲ್ಯಾಪ್ ಟಾಪ್ ಮುಚ್ಚಿ, ಬಟ್ಟೆ ಜೋಡಿಸಿಕೊಂಡು ಕಾರು ತೆಗೆದುಕೊಂಡು ಬೆಂಗಳೂರಿಗೆ ಹೊರಟು ಬಿಟ್ಟೆ. ಸಿಂಧನೂರು, ಗಂಗಾವತಿ, ಹೊಸಪೇಟೆ ಎಲ್ಲ ಊರುಗಳನ್ನು ದಾಟಿ ಕಾರು ಸರಾಗವಾಗಿ ಹೋಗುತ್ತಿತ್ತು. ಹೊಟ್ಟೆ ಹಸಿದು ಚುರ್ರ್ ಎನ್ನುತ್ತಿದ್ದರೂ, ಸೋತು ಹೋದ ಮನಸು ಊಟ ಮಾಡಲು ಒಪ್ಪಲಿಲ್ಲ. ಚಿತ್ರದುರ್ಗದ ಮುರುಘಾ ಮಠ ಸೇರುವ ಹೊತ್ತಿಗೆಲ್ಲ ಸಾಯಂಕಾಲದ ಸಮಯ. ಮಠದ ನೆರಳು ತಲೆ ಸಿಡಿಯುವುದನ್ನು ಕಡಿಮೆ ಮಾಡಿತ್ತು. ಮುಳುಗುವ ಸೂರ್ಯ ಚಿತ್ರದುರ್ಗದ ಬೆಟ್ಟವನ್ನು ಕೆಂಪಾಗಿಸಿದ್ದ. ಆ ಬೆಟ್ಟದ ಮೇಲೆ ಕೋಟೆಯ ಗೋಡೆಗಳ ಸಾಲುಗಳು ನೆತ್ತರು ಬೀರಿದಂತೆ ಕೆಂಪಾಗಿ ಕಾಣುತ್ತಿದ್ದವು. ಕಲ್ಲಿನ ಕೋಟೆ ಕಟ್ಟಿ, ರಕ್ತದ ಹೊಳೆ ಹರಿಸಿದ ನಾಯಕರಿಗಿಂತ, ಕರುಣಾ ಸೌಧವನ್ನು ಕಟ್ಟಿದ ಶರಣರ ಜೀವನ ಸಾರ್ಥಕ ಎನಿಸಿತು. ಜೀವನ ಸಾಕಾದವರಿಗೆ ಸುಡುಗಾಡು ಅಲ್ಲದೆ ಇನ್ನೊಂದು ಆಯ್ಕೆ ಇರಲಿ ಎನ್ನುವುದಕ್ಕಾಗಿ ಶರಣರು ಮಠ ಕಟ್ಟಿದರೇನೋ ಎನಿಸಿತು. ಅಷ್ಟೊತ್ತಿಗೆ ಮತ್ತೆ ನನ್ನ ನೆತ್ತಿ ಸುಡುತ್ತಾ ಜ್ವರ ಏರಲು ಆರಂಭಿಸಿತ್ತು. ಹತ್ತಿರದಲ್ಲೇ ರೂಮು ಹುಡುಕಿ, ಮಾತ್ರೆ ತೆಗೆದುಕೊಂಡು ಮಲಗಿಬಿಟ್ಟೆ. ಮರುದಿನ ಬೆಳ್ಳಿಗೆ ಏಳುವ ವಿಶ್ವಾಸ, ಆಸೆ ಎರಡೂ ಉಳಿದಿರಲಿಲ್ಲ. ಆದರೆ ಅದಕ್ಕೆ ತದ್ವಿರುದ್ಧವಾಗಿ, ಬೆಳಿಗ್ಗೆ ಜ್ವರ ತಗ್ಗಿ ಮನಸ್ಸು ಹಗುರಾಗಿತ್ತು. ಮಾತ್ರೆಯೋ, ನಿದ್ದೆಯೊ, ಶರಣ ಆಶೀರ್ವಾದವೋ ಯಾವುದು ಕೆಲಸ ಮಾಡಿತ್ತು ತಿಳಿಯಲಿಲ್ಲ. ಎರಡು ಇಡ್ಲಿ ತಿಂದು, ಕಾರಿಗೆ ಡೀಸೆಲ್ ತುಂಬಿಸಿ ಬೆಂಗಳೂರಿನ ಕಡೆಗೆ ಪ್ರಯಾಣ ಆರಂಭಿಸಿದೆ. ಕಾರು ತೇಲಿದಂತೆ ಕರೆದುಕೊಂಡು ಹೋಗುತ್ತಿತ್ತು. ಇದೇ ಕಾರು ಹತ್ತು ವರುಷದ ಹಿಂದೆ ಇದ್ದಿದ್ದರೆ, ಇಡೀ ಕರ್ನಾಟಕವನ್ನು ಕನಿಷ್ಠ ಒಂದು ಡಜನ್ ಸಲ ಆದರೂ ಸುತ್ತದೇ ಬಿಡುತ್ತಿದ್ದಿಲ್ಲ ಅಂದುಕೊಂಡೆ. ನೋಡುವಷ್ಟರಲ್ಲಿ ಬಂದೇ ಬಿಟ್ಟಿತು ಬೆಂಗಳೂರು.
ಮನೆ ಮುಂದಿರುವ
ಕಾರ್ಮಿಕರ ಶೆಡ್ ನಲ್ಲಿ ಅಂದು ಸಂಜೆ ಹೊಸಬರು ವಾಸ ಆರಂಭಿಸಿದ್ದರು. ಅವರಲ್ಲಿ ಒಬ್ಬನು ತನ್ನ ಹೆಸರು
'ಕುಮಾರ್' ಎಂದು ನನ್ನ ಜೊತೆ ಪರಿಚಯ ಮಾಡಿಕೊಂಡ. ಬರೀ 'ಕುಮಾರ್' ಅನ್ನುವ ಹೆಸರು ಯಾಕೋ ಸರಿ ಹೊಂದುತ್ತಿಲ್ಲ.
ಹಿಂದೆ ಅಥವಾ ಮುಂದೆ ಏನಾದರು ಸೇರಿಸಿ 'ರಾಜ್ ಕುಮಾರ್' ಎಂದೋ ಇಲ್ಲವೋ 'ಕುಮಾರ ರಾಮ' ನೆಂದೋ ಹೇಳಿದ್ದರೆ
ಸಮಂಜಸ ಆಗುತ್ತಿತ್ತು ಎಂದು ಹೇಳಿದೆ. ಆದರೆ ಅವನು ಕಣ್ಣು ನೆಟ್ಟಿದ್ದು ನಮ್ಮ ಮನೆ ಮುಂದಿರುವ ಸಂಪಿಗೆ
ಮರದ ಕಡೆಗೆ. ಅಲ್ಲಿ ಯಾಕೆ ಜೋಕಾಲಿ ಕಟ್ಟಿದ್ದು ಎಂದು ಕೇಳಿದ. ಅವು ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳನ್ನು
ಮಲಗಿಸುವ ಜೋಳಿಗೆ, ಅವನ್ನು ಬಿಚ್ಚದೆ ಹಾಗೆ ಬಿಟ್ಟು ಹೋಗಿದ್ದಾರೆ ಎಂದು ನಾನು ಹೇಳಿದೆ. ಅವನು ಅಸಮಾಧಾನದಿಂದ,
ಅವನ್ನು ಹಾಗೆ ಬಿಡಬಾರದು, ಒಳ್ಳೆಯದಲ್ಲ ಎಂದು ಹೇಳಿದ. ಮತ್ತು ಅವುಗಳನ್ನು ಬಿಚ್ಚುವದಕ್ಕೆ ಸಹಾಯ ಮಾಡಿದ.
ಅವುಗಳನ್ನು ಬಿಚ್ಚದಿದ್ದರೆ, ರಾತ್ರಿ ವೇಳೆಯಲ್ಲಿ ದೆವ್ವಗಳು ಅಲ್ಲಿ ಜೋಕಾಲಿ ಆಡುವುದಾಗಿ, ಆ ವಿಷಯ
ತನಗೆ ಗೊತ್ತಿರುವುದಾಗಿ, ಮತ್ತು ಆ ವಿಷಯ ಅವನು ಪೂರ್ತಿ ಹೇಳಿದರೆ ನಾನು ಆ ರಾತ್ರಿ ನಿದ್ದೆಯೇ ಮಾಡುವುದಿಲ್ಲ
ಎಂದು ಹೆದರಿಸಿದ. ಅಮಾವಾಸ್ಯೆ ಒಂದೆರಡು ದಿನಗಳಷ್ಟು ಹತ್ತಿರವಿತ್ತು. ಮಬ್ಬುಗತ್ತಲಿನಲ್ಲಿ ಅವನ ಮುಖ
ನೋಡಿದೆ. ದವಡೆಯ ತುಂಬಾ ಗುಟಖಾ ಜಗಿಯುತ್ತಿದ್ದ ಅವನು ದೆವ್ವವಲ್ಲ, ಮನುಷ್ಯನೇ ಎಂದು ಖಾತರಿಯಾಗಿ ನಿರಾಳವಾಯಿತು.
ಅಂದು ರಾತ್ರಿ
ಮನೆಯಲ್ಲಿ ಒಬ್ಬನೇ ಮಲಗಿದೆ. ನಡು ರಾತ್ರಿ ಎರಡು, ಮೂರು ಘಂಟೆ ಹೊತ್ತಿಗೆ ಯಾರೋ ಒಂದು ಹೆಣ್ಣು ಧ್ವನಿ
'ಅಣ್ಣಾ' ಎಂದು ಕರೆದ ಹಾಗೆ. ಅರೆ ನಿದ್ದೆಯಲ್ಲಿ ಇದ್ದ ನಾನು, ಕಿಟಕಿಯಿಂದ ಯಾರಾದರೂ ಕೂಗುತ್ತಿರಬಹುದಾ
ಅಂದುಕೊಂಡೆ. ಆದರೆ ಧ್ವನಿ ಹೊರಗಡೆಯಿಂದ ಬರುತ್ತಿರಲಿಲ್ಲ. ಕಿವಿಯನ್ನು ಬಲವಾಗಿ ಮುಚ್ಚಿಕೊಂಡು ನೋಡಿದೆ.
ಧ್ವನಿ ಕೇಳಿಸುತ್ತಿದ್ದದ್ದು ಸೀದಾ ಮನಸಿನಲ್ಲಿ. ಅದು ಕೆಲವು ವರುಷಗಳ ಹಿಂದೆ ಅನಾರೋಗ್ಯದಿಂದ ತೀರಿಕೊಂಡ
ನನ್ನ ಚಿಕ್ಕಮ್ಮಳ ಮಗಳು, ನನ್ನ ತಂಗಿಯ ಧ್ವನಿಯನ್ನು ಹೋಲುತ್ತಿತ್ತು. ಅಷ್ಟರಲ್ಲೇ ಇನ್ನೊಂದು ಗಂಡು
ಧ್ವನಿ ಕೇಳಿಸಿತು. 'ಎಷ್ಟು ಹೆದರಿಕೊಳ್ಳುತ್ತೀಯಲ್ಲ ಅಣ್ಣ ನೀನು?'. ಸಂದೇಹವೇ ಇಲ್ಲ, ಅದು ಕೆಲವೇ
ತಿಂಗಳುಗಳ ಹಿಂದೆ ಅಸಹಜವಾಗಿ ತೀರಿಕೊಂಡ ನನ್ನ ಇನ್ನೊಬ ಚಿಕ್ಕಮ್ಮಳ ಮಗ, ನನ್ನ ತಮ್ಮನದು. ನಿದ್ದೆ
ಹಾರಿ ಹೋಯಿತು. ಎದ್ದು ಕುಳಿತುಕೊಂಡೆ. ಅವರು ಯಾಕೆ ನನ್ನನ್ನು ಮಾತನಾಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ
ಕ್ಷಣಾರ್ಧದಲ್ಲೇ ಉತ್ತರ ಹೊಳೆಯಿತು. ಅವರು ಬಂದಿರುವುದು ತಮ್ಮ ನೋವು ತೋಡಿಕೊಳ್ಳಲು. ನನಗೇ ಯಾರಾದರೂ
ಸಮಾಧಾನ ಹೇಳಬೇಕಾದ ಪರಿಸ್ಥಿತಿಯಲ್ಲಿರುವಾಗ, ನಾನು ಅವರಿಗೇನು ಸಮಾಧಾನ ಹೇಳಬಲ್ಲೆ? ಆದರೆ ಎದ್ದು ಕುಳಿತ
ಮೇಲೆ, ಬರೀ ಗುಂಯ್ಗುಡುವ ಸದ್ದು. ಅದರ ಅರ್ಥ ಏನು ಎಂದು ತಿಳಿಯದೇ ಹೋಯಿತು. ನನ್ನ ನೋವಿಗಿಂತ ಅವರ
ನೋವು ತೀವ್ರವಾದದ್ದು ಎನ್ನುವುದು ಅರಿವಿಗೆ ಬಂತು. ಆದರೆ ಮುಂದೆ ಯಾವ ಸಂಪರ್ಕವೂ ಸಾಧ್ಯವಾಗಲಿಲ್ಲ.
ಹಾಸಿಗೆಯಲ್ಲಿ ಹೊರಳಾಡುತ್ತಾ ನಿದ್ದೆಗೆ ಜಾರಿದ್ದು ತಿಳಿಯಲೇ ಇಲ್ಲ.
ಮರುದಿನ ಬೆಳ್ಳಿಗೆ
ಹೊತ್ತಿಗೆ ಫೋನ್ ಮಾಡಿದ್ದ ಅಕ್ಕ ಕೇಳುತ್ತಿದ್ದಳು 'ಹುಷಾರಾಗಿದ್ದೀಯ?'. ಬದುಕಿದ್ದೀಯಾ ಎಂದು ನೇರವಾಗಿ
ಕೇಳದೆ ಸೂಕ್ಷ್ಮವಾಗಿ ಕೇಳುತ್ತಿದ್ದಾಳೆ ಅಂದುಕೊಂಡೆ. ಎರಡು ದಿನದ ಒಬ್ಬಂಟಿತನ, ನೋವು, ಅನುಭವಗಳ ಮೆಲುಕು
ಹಾಕಿದ ಮೇಲೆ ನನಗೇ ಅರಿವಾಗತೊಡಗಿತ್ತು. ಬುದ್ಧ ಹೇಳಿದ್ದು ಬರೀ ಆಸೆಗಳನ್ನು ಗೆಲುವುದಕ್ಕಲ್ಲ. ಆವೇಶ,
ಆಲೋಚನೆಗಳನ್ನು ಕೂಡ ಗೆಲ್ಲು ಎಂದು. ನಮ್ಮ ದೇಹ ನಾವಲ್ಲವಾದರೆ, ನಮ್ಮ ಮನಸ್ಸು ಕೂಡ ನಾವಲ್ಲ. ಮನಸ್ಸು
ಮಾಡುವ ವಿಚಾರಗಳು ಕೂಡ ನಾವಲ್ಲ. ಅದು ಪಡುವ ಸಂತೋಷ, ನೋವುಗಳೂ ಕೂಡ ನಾವಲ್ಲ. ಹಾಗಾದರೆ ಮನಸ್ಸಿನ ಜೊತೆ
ನಮಗೆ ಇರಬಹುದಾದ ಸಂಬಂಧ ಎಂಥದ್ದು? ಅದು ಕರ್ಮಫಲ ಎಂದು ಸೂಕ್ಷ್ಮವಾಗಿ ತಿಳಿಸುತ್ತದೆ ನಮ್ಮ ಧರ್ಮಗ್ರಂಥಗಳು.
ಆದರೆ ವಿಜ್ಞಾನ ಮಾತ್ರ ಆತ್ಮ, ಕರ್ಮ ಇರುವುದಕ್ಕೆ ಯಾವ ಸಾಕ್ಷಿಯೂ ಇಲ್ಲ ಎಂದು ಅದನ್ನು ಸಾರಾ ಸಗಟಾಗಿ ತಿರಸ್ಕರಿಸುತ್ತದೆ.
ದೇಹ, ಮನಸ್ಸು ಬೇರೆ ಬೇರೆ ಅಲ್ಲ. ಮನಸ್ಸು ಹುಟ್ಟಿಸುವ
ಭ್ರಮೆಗಳು ನಮ್ಮಲ್ಲಿ ವಿಚಿತ್ರ ಅನುಭವ ಹುಟ್ಟಿಸುತ್ತವೆ. ಅದಕ್ಕೆಲ್ಲ ನಮ್ಮ ದೇಹದಲ್ಲಿ ಶ್ರವಿಸುವ
ರಾಸಾಯನಿಕಗಳು ಕಾರಣ ಎನ್ನುವ ವಿವರಣೆಯನ್ನು ವಿಜ್ಞಾನ ಕೊಡುತ್ತದೆ.
ನನ್ನ ಮೊಬೈಲ್ ನಲ್ಲಿ ಬ್ಯಾಂಕ್ ನವರು ಮೆಸೇಜ್ ಕಳಿಸಿದ್ದರು. ಮನೆ ಸಾಲದ ಕಂತು ಇನ್ನೆರಡು ದಿನಗಳಲ್ಲಿ ಕಟ್ಟಬೇಕು, ಖಾತೆಯಲ್ಲಿ ಹಣ ಇರುವಂತೆ ನೋಡಿಕೊಳ್ಳಿ ಎಂದು. ಲ್ಯಾಪ್ ಟಾಪ್ ತೆಗೆದು ನೋಡಿದರೆ, ಕೆಲಸ ಅರ್ಧಕ್ಕೆ ಬಿಟ್ಟು ಹೋದರೆ ಹೇಗೆ ಮಾರಾಯ ಎನ್ನುವ ಹಾಗೆ ಈ-ಮೇಲ್ ಗಳ ರಾಶಿಯಿತ್ತು. ಅಧ್ಯಾತ್ಮವೋ, ವಿಜ್ಞಾನ ಹೇಳುವ ಹಾಗೆ ಭ್ರಮೆಯೋ ಎನ್ನುವುದು ಅವಸರದಲ್ಲಿ ನಿರ್ಧರಿಸಬೇಕಿಲ್ಲ. ಅವಸರ ಇರುವುದು ಲೌಕಿಕ ಜೀವನದ ಕಟ್ಟುಪಾಡುಗಳು, ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲಿ ಅಲ್ಲವೇ? ಅಲ್ಲಿಗೆ ನನ್ನ ಸ್ವಗತಾ ಲಹರಿ ತುಂಡಾಯಿತು. ಜೀವನದ ನೊಗ ಮತ್ತೆ ಹೊತ್ತು ತಿರುಗಣಿಗೆ ಬಿದ್ದದ್ದಾಯಿತು. ಇಂದಿಗೆ ಆ ಅನುಭವ, ಯಾವುದೇ ಆವೇಶ, ಉದ್ವೇಗ ಇಲ್ಲದ ಬರೀ ನೆನಪು ಮಾತ್ರ. ಹಾಗಾಗಿ ಅದೊಂದು ಹೊತ್ತುಕಳೆಯಲು ಹೇಳುವ ಕಥೆ ಅಷ್ಟೇ.
No comments:
Post a Comment