Wednesday, January 26, 2022

ಪ್ರಕೃತಿಯಲ್ಲಿ ಸೋಲು-ಗೆಲುವು ಇದೆ, ಒಳ್ಳೆಯದು-ಕೆಟ್ಟದ್ದು ಇಲ್ಲ

ಒಳ್ಳೆಯವರಿಗೆ ಒಳ್ಳೆಯದಾಗುತ್ತದೆ, ಕೆಟ್ಟವರಿಗೆ ಕೆಟ್ಟದ್ದಾಗಲೇಬೇಕು. ಹಾಗಂತ ನಿಯಮ ಎಲ್ಲಿದೆ? ಆದರೆ ಅದನ್ನು ನಂಬಿಯೇ ನಾವು (ಎಲ್ಲರೂ ಅಲ್ಲದಿದ್ದರೂ ಬಹುತೇಕ ಜನ) ಜೀವನ ಮಾಡುವುದು. 'ಸತ್ಯ  ಹರಿಶ್ಚಂದ್ರ' ಕಥೆ/ಸಿನಿಮಾದಲ್ಲಿ ಹರಿಶ್ಚಂದ್ರನಿಗೆ ಎಷ್ಟು ಕೆಟ್ಟ ಸಂದರ್ಭಗಳು ಎದುರಾದರೂ ಕೊನೆಗೆ ಒಳ್ಳೆಯದಾಗುವುದಿಲ್ಲವೇ? ಹಾಗೆಯೆ ಪಾಪಿಗಳಿಗೆ ಇಲ್ಲಿಯೇ ನರಕ ತೋರಿಸದೆ ದೇವರು (ಅಥವಾ ಅವರ ಕರ್ಮ) ಬಿಡುವುದಿಲ್ಲ ಎಂದು ಲೋಕಾರೂಢಿಯಾಗಿ ನಾವು ಮಾತನಾಡುತ್ತೇವೆ. ಆ ನಂಬಿಕೆಯೇ ನಮ್ಮ ಸಮಾಜದ ಒಗ್ಗಟ್ಟನ್ನು ಕಾಪಾಡುತ್ತದೆ. ಮನುಷ್ಯ ಒಬ್ಬರನ್ನೊಬ್ಬರು ಸಹಕರಿಸಿಕೊಂಡು ಸಂಘ ಜೀವಿಯಾಗಿ ಬಾಳುವಂತೆ ಮಾಡುತ್ತದೆ.


ಆದರೆ ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು, ನ್ಯಾಯ-ಅನ್ಯಾಯ, ಅದೃಷ್ಟ-ದುರಾದೃಷ್ಟ ಅನ್ನುವ ಪರಾಮರ್ಶೆ ಮಾನವ ಜೀವಿಗೆ ಮಾತ್ರ ಸೀಮಿತವಾದದ್ದು. ಪ್ರಕೃತಿಯಲ್ಲಿ, ಪ್ರಾಣಿ-ಪಕ್ಷಿಗಳ ಲೋಕದಲ್ಲಿ ಅದಕ್ಕೆ ಅವಕಾಶವೇ ಇಲ್ಲ. ಇಲಿಯನ್ನು ತಿಂದು ಹಾವು, ಹಾವನ್ನು ತಿಂದು ಹದ್ದು ಜೀವಿಸಿದರೆ, ನೀರಿನಲ್ಲಿ ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗಿ ಹಾಕುತ್ತವೆ. ಪ್ರಕೃತಿ ಜಿಂಕೆಗೆ ವೇಗದಿಂದ ಓಡುವ ಸಾಮರ್ಥ್ಯ ಕೊಟ್ಟರೆ, ಹುಲಿಗೆ ಹೊಂಚು ಹಾಕುವ ವಿದ್ಯೆ ಕಲಿಸಿ ಕೊಡುತ್ತದೆ. ಬಲೆ ಹೆಣೆದು, ಅದರಲ್ಲಿ ಸಿಕ್ಕಿ ಹಾಕಿ ಕೊಳ್ಳುವ ಹುಳುಗಳನ್ನು ತಿನ್ನಲು ಕಾಯ್ದು ಕೂಡುವ ಜೇಡರ ಹುಳುವಿಗೆ ನಾವು ವಂಚಕ ಎನ್ನಬಹುದು. ಆದರೆ ಅದು ಅದರ ಹೊಟ್ಟೆ ಪಾಡು. ಜೀವ ಉಳಿಸಿಕೊಳ್ಳುವುದಕ್ಕೆ ಪ್ರಕೃತಿ ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿಯೊಡನೆ ಸ್ಪರ್ಧೆಗೆ ಒಡ್ಡಿದರೆ, ಸಂತಾನೋತ್ಪತ್ತಿ ಸಮಯದಲ್ಲಿ ಸಂಗಾತಿಯನ್ನು ಗೆಲ್ಲಲು ಒಂದೇ ಜಾತಿಯ ಪ್ರಾಣಿಗಳನ್ನು ಪರಸ್ಪರ ಸ್ಪರ್ಧೆಗೆ ಇಳಿಸುತ್ತದೆ. ಅಲ್ಲಿ ಇರುವುದು ಸೋಲು-ಗೆಲುವಿನ, ಅಳಿವು-ಉಳಿವಿನ ಸ್ಪರ್ಧೆ ಮಾತ್ರ. ಗೆದ್ದ ಪ್ರಾಣಿಗೆ ಮಾತ್ರ ಜೀವಿಸುವ, ವಂಶ ಮುಂದುವರೆಸುವ ಅವಕಾಶ. ಬೇಟೆಯಾಡಿದ ಹುಲಿಯ ಅದೃಷ್ಟ, ಸತ್ತ ಜಿಂಕೆಯ ದುರಾದೃಷ್ಟ, ಹುಲಿ ದುಷ್ಟ ಪ್ರಾಣಿ, ಜಿಂಕೆ ಪಾಪದ ಪ್ರಾಣಿ ಎಂದೆಲ್ಲ ನಾವು ವಿಮರ್ಶೆ ಮಾಡಿದರೂ ಪ್ರಕೃತಿ ಅದನ್ನೆಲ್ಲ ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕುತ್ತದೆ.


ಸರಿ-ತಪ್ಪಿನ ವಿವೇಚನೆ ನಮಗೆ ನಾವು ಚಿಕ್ಕವರಾಗಿದ್ದಾಗ ನಮ್ಮ ತಂದೆ-ತಾಯಿ, ಬಂಧು-ಬಳಗ, ಶಾಲೆಯಲ್ಲಿ ಮೇಷ್ಟ್ರು, ಒಟ್ಟಿನಲ್ಲಿ ನಮ್ಮ ಸಮಾಜ ಅದನ್ನು ಹೇಳಿಕೊಡುತ್ತ ಬೆಳೆಸುತ್ತದೆ. ದೊಡ್ಡವರಾದಾಗ ಕಾನೂನಿನ ಪಾಲನೆ ಮಾಡದೇ ಹೋದರೆ ಅದಕ್ಕೆ ಕಟ್ಟಬೇಕು ದಂಡ, ಇಲ್ಲವೇ ಅನುಭವಿಸಬೇಕು ಶಿಕ್ಷೆ. ಈ ಸರಿ-ತಪ್ಪಿನ ವಿವೇಚನೆ, ಕಾಯ್ದೆ-ಕಾನೂನುಗಳೆಲ್ಲ ಎಲ್ಲ ಸಮಾಜಗಳಲ್ಲೂ ಒಂದೇ ತರಹ ಇಲ್ಲ. ಕೆಲವು ಧರ್ಮಗಳು ಮಾಂಸಾಹಾರ ನಿಷೇಧಿಸಿದರೆ, ಕೆಲವು ಧರ್ಮಗಳ ಜನರಿಗೆ ಅದು ಪ್ರತಿ ನಿತ್ಯದ ಆಹಾರ. ನಮ್ಮಲ್ಲಿ ಮದುವೆಯ ನಂತರವೇ ಮಕ್ಕಳು. ಆಫ್ರಿಕಾದ ಕೆಲ ಬುಡಕಟ್ಟು ಜನಾಂಗಗಳಲ್ಲಿ ಗರ್ಭಿಣಿಯಾದ ಮೇಲೆಯೇ ಮದುವೆ. ಅದು ಅಲ್ಲಿಯ ಕಾನೂನು. ಕೆಲ ಸಮಾಜಗಳು ಸಾಲ-ಬಡ್ಡಿ ವ್ಯವಹಾರವನ್ನು ಸಂಪೂರ್ಣ ನಿಷೇದಿಸುತ್ತವೆ. ಆದರೆ ಅದನ್ನು ಒಪ್ಪಿಕೊಂಡ ಸಮಾಜಗಳೇ ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು.


ಬಹು ಕಾಲದ ಹಿಂದೆ ಮನುಷ್ಯ ಆದಿವಾಸಿಯಾಗಿ, ಅಲೆಯುತ್ತ ಪ್ರಾಣಿಗಳನ್ನು ಬೇಟೆ ಆಡಿ ಬದುಕುತ್ತಿದ್ದಾಗ ಅವನಿಗೆ ಸರಿ-ತಪ್ಪಿನ ವಿವೇಚನೆ ಇರಲಿಲ್ಲ. ಆದರೆ ಮನುಷ್ಯ ಒಂಟಿಯಾಗಿ ಬದುಕುವುದಕ್ಕಿಂತ, ಸಂಘ ಜೀವಿಯಾಗಿ ಬದುಕಿದರೆ ಇರುವ ಅನುಕೂಲಗಳನ್ನು ಕಂಡುಕೊಂಡ. ಆದರೆ ಮನುಷ್ಯ ಒಗ್ಗಟ್ಟಿನಲ್ಲಿ ಬಾಳಬೇಕೆಂದರೆ ಆ ಜನರ ಗುಂಪು ಒಂದೇ ನಂಬಿಕೆಗಳನ್ನು ಹೊಂದಿರಬೇಕು. ಆಗ ಕದಿಯುವುದು-ಕೊಲ್ಲುವುದು ತಪ್ಪು, ಹಸಿದವರೊಡನೆ ಊಟ ಹಂಚಿಕೊಳ್ಳುವುದು ಒಳ್ಳೆಯದು ಇತ್ಯಾದಿ ನಂಬಿಕೆಗಳನ್ನು ರೂಢಿಗೆ ತಂದ. ಆ ನಂಬಿಕೆಗಳು ಮನುಷ್ಯನಿಗೆ ಸಮಾಜವನ್ನು ಕಟ್ಟಲು ಸಹಾಯ ಮಾಡಿದವು. ದೇವರು-ಧರ್ಮ-ಕರ್ಮ ಮುಂತಾದವುಗಳು ಆ ನಂಬಿಕೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಸಮಾಜವನ್ನು ವಿಸ್ತಾರಗೊಳಿಸಲು ಭದ್ರ ಬುನಾದಿ ಹಾಕಿದವು.


ನಮ್ಮ ನಂಬಿಕೆ ಏನಾದರೂ ಇರಲಿ, ಪ್ರಕೃತಿ ನಮ್ಮನ್ನು ಸ್ಪರ್ಧೆಗೆ ಒಡ್ಡದೆ ಬಿಡದು. ಆದರೆ ಸೋಲಾದಾಗ ಎದೆಗುಂದಬಾರದು ಎನ್ನುವ ಕಾರಣಕ್ಕೆ ಮನುಷ್ಯ 'ಆಗುವುದೆಲ್ಲ ಒಳ್ಳೆಯದಕ್ಕೆ' ಎನ್ನುವ ಮಾತು ರೂಢಿಗೆ ತಂದ. ಹಾಗೆಯೆ 'ಒಳ್ಳೆಯವರಿಗೂ ಕೆಟ್ಟ ಕಾಲ ಬಿಡುವಿದಿಲ್ಲ' ಎನ್ನುವ ಮಾತಿನ ಹಿಂದಿನ ಮರ್ಮ ವಿಚಾರ ಮಾಡಿ ನೋಡಿ. ಕೆಟ್ಟ ಕಾಲ ಬಂದಾಗಲೂ ಒಳ್ಳೆಯತನ ಬಿಡಬಾರದು, ಒಂದು ವೇಳೆ ನಾವು ಕೆಟ್ಟತನಕ್ಕೆ ಇಳಿದಲ್ಲಿ ಅದು ನಮ್ಮ ಸಮಾಜದ ಸಹಬಾಳ್ವೆಗೆ, ನಂಬಿಕೆಗೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ. ಹಾಗಾಗಿ ಮನುಷ್ಯ 'ಒಳ್ಳೆಯವರಿಗೂ ಕೆಟ್ಟದಾಗುತ್ತದೆ' ಎನ್ನುವ ಮಾತು ಸಮಾಜದ ರೂಢಿಯಲ್ಲಿ ಇರುವಂತೆ ನೋಡಿಕೊಂಡ. ಸಮಾಜ ಬೆಳೆದಂತೆಲ್ಲ ಆ ನಂಬಿಕಗಳೇ ಕಾಯಿದೆ, ಕಾನೂನುಗಳಾಗಿ ಮಾರ್ಪಾಡಾದವು. ನ್ಯಾಯ ಎತ್ತಿ ಹಿಡಿಯಲು, ಅನ್ಯಾಯವನ್ನು ಶಿಕ್ಷಿಸಲು ಕೋರ್ಟ್-ಪೊಲೀಸ್ ಇಲಾಖೆಗಳು ನಿರ್ಮಾಣಗೊಂಡವು. ಧರ್ಮ ಎತ್ತಿ ಹಿಡಿದವರನ್ನು ನಮ್ಮ ಸಮಾಜ ಒಳ್ಳೆಯವರು ಎಂದು ಹಾಡಿ ಹೊಗಳಿದರೆ, ವಂಚಕರಿಗೆ ಕುಖ್ಯಾತಿ ಅಂಟಿಸದೇ ಬಿಡುವುದಿಲ್ಲ. ಇವೆಲ್ಲದರ ಮೂಲ ಉದ್ದೇಶ ಒಂದೇ. ಸಮಾಜ ಒಗ್ಗಟ್ಟಾಗಿ ಇರುವಂತೆ ನೋಡಿಕೊಳ್ಳುವುದು.


ಮನುಷ್ಯನನ್ನು ಹೊರತು ಪಡಿಸಿ ಬೇರೆ ಯಾವ ಪ್ರಾಣಿ-ಪಕ್ಷಿಗಳು ಒಳ್ಳೆಯ ಅಥವಾ ಕೆಟ್ಟ ಭಾವನೆಗಳನ್ನು ವ್ಯಕ್ತ ಪಡಿಸುವುದಿಲ್ಲ. ಪ್ರಕೃತಿ ನಿರ್ಮಿಸಿದ ಪ್ರಪಂಚದಲ್ಲಿ ನ್ಯಾಯ-ಅನ್ಯಾಯದ ನಿರ್ಣಾಯಕರಿಲ್ಲ. ಅಲ್ಲಿ ಇರುವುದು ಸೋಲು-ಗೆಲುವಿನ ಸ್ಪರ್ಧೆ ಮಾತ್ರ. ಆದರೆ ಈ ನಂಬಿಕೆ, ಪರಾಮರ್ಶೆಗಳನ್ನು ಬೆಳೆಸಿಕೊಂಡ ಮನುಷ್ಯ ಇತರೆ ಪ್ರಾಣಿ-ಪಕ್ಷಿಗಳನ್ನು ಹಿಂದಕ್ಕೆ ಒತ್ತುವುದರಲ್ಲಿ ಸಂಪೂರ್ಣ ಯಶಸ್ವಿಯಾದ.


ಆದರೆ ಮಾನವ-ಮಾನವರ ನಡುವೆ ಇರುವ ಸ್ಪರ್ಧೆಯಲ್ಲಿ, ಆ ಪರಾಮರ್ಶೆಯನ್ನು ಹಿಂದಕ್ಕಿಟ್ಟು, ತೋರಿಕೆಗೆ ಮಾತ್ರ ಸಮಾಜವನ್ನು ನಂಬಿದವರಂತೆ ಅಭಿನಯ ಮಾಡುತ್ತ, ಅಂತರಂಗದಲ್ಲಿ ಸ್ವಾರ್ಥಿಗಳಾದವರಿಗೆ ಸಮಾಜವನ್ನು ದುರುಪಯೋಗ ಪಡಿಸಿಕೊಳ್ಳಲು ಸಾಧ್ಯ. ಏಕೆಂದರೆ ಒಳ್ಳೆಯತನ-ಕೆಟ್ಟತನಗಳೆಲ್ಲ ಸಮಾಜ ನಿರ್ಮಿಸಿದ ಕಟ್ಟುಪಾಡುಗಳು. ಪ್ರಕೃತಿಯ ನಿಯಮಗಳಲ್ಲ. ನಿಮಗೆ ನೀವು ಒಳ್ಳೆಯವರು ಎಂದುಕೊಂಡಿದ್ದರೆ, ಒಮ್ಮೆ ವಿಚಾರ ಮಾಡಿ ನೋಡಿ. ಅದು ಸಮಾಜ ನಿಮ್ಮಿಂದ ಬಯಸಿದ್ದು ಅಷ್ಟೇ. ಅದು ಸರಿಯೂ ಅಲ್ಲ, ತಪ್ಪು ಕೂಡ ಅಲ್ಲ. ಹಾಗೆಯೇ ಯಾರಾದರೂ ನಿಮಗೆ ಮೋಸ ಮಾಡಿದರೆ, ಅವರು ಕೆಟ್ಟವರು, ಅವರನ್ನು ನಂಬಿದ್ದ ನೀವು ಒಳ್ಳೆಯವರು ಎನ್ನುವುದು ಎಲ್ಲ ಸಮಾಜ ನಿರ್ಮಿಸಿದ ನಂಬಿಕೆಗಳು ಅಷ್ಟೇ. ಈ ಸತ್ಯ ಅರ್ಥ ಮಾಡಿಕೊಂಡವರು ಅದರ ದುರುಪಯೋಗಕ್ಕೆ ಇಳಿದುಬಿಡುತ್ತಾರಲ್ಲ. ಒಂದು ವೇಳೆ, ಅಂತಹವರ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಆಗ ನೀವೇನು ಮಾಡುವಿರಿ?


ಬೇಟೆಯಾಡುವುದನ್ನು ಹುಲಿ ಬಿಡುವುದಿಲ್ಲ ಅನ್ನುವುದಾದರೆ, ಆಕ್ರಮಣಕಾರಿ ಪ್ರವೃತ್ತಿ ಇರುವ ಮನುಷ್ಯರು ಕೂಡ ಬೇರೇನಲ್ಲ. ಯಾವುದಾದರೂ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಾಗ, ಬೇರೆಯವರು ನಿಮ್ಮನ್ನು ಒಳ್ಳೆಯತನ-ಕೆಟ್ಟತನದ ಪರಾಮರ್ಶೆಗೆ ಒಳಪಡಿಸಿದರೆ, ಅವರು ತಮ್ಮ ಒಳಿತಿಗೆ ನಿಮ್ಮನ್ನು ಬಲಿ ತೆಗೆದುಕೊಳ್ಳುತ್ತಿರುವರೋ ಎಂದು ವಿಚಾರ ಮಾಡಿ ನೋಡಿ. ನ್ಯಾಯ-ಅನ್ಯಾಯ ಎಲ್ಲ ನಿಮಗೆ ಮಾತ್ರ ಅನ್ವಯ ಆಗುತ್ತದೆ, ಅವರಿಗೆ ಅಲ್ಲ ಎನ್ನುವ ಹಾಗಿದ್ದರೆ, ಆಗ ನೀವು ನಂಬಬೇಕಾದದ್ದು ಪ್ರಕೃತಿಯ ನಿಯಮ ಮಾತ್ರ. ಈಗ ನೀವು ಇರುವುದು ಸೋಲು-ಗೆಲುವಿನ ಸ್ಪರ್ಧೆಯಲ್ಲಿ. ಸರಿ-ತಪ್ಪಿನ ವಿಮರ್ಶೆ ಅಲ್ಲಿಗೆ ಬಿಟ್ಟು, ಒಳ್ಳೆಯತನದ ಕಟ್ಟು ಪಾಡಿಗೆ ಬೀಳದೆ, ನೀವು ಸ್ಪರ್ಧಿಸದಿದ್ದರೆ, ಪ್ರಕೃತಿ ನಿಮ್ಮನ್ನು ಮೂಲೆಗುಂಪು ಮಾಡದೇ ಬಿಡುವುದಿಲ್ಲ. ನೀವು ಇಲ್ಲವೇ ಅವರು ಉಳಿಯಬೇಕು ಎನ್ನುವ ಸ್ಪರ್ಧೆಯಲ್ಲಿ ನೀವೇ ಗೆಲ್ಲಬೇಕು. ಕನಿಷ್ಠ ಪಕ್ಷ ಆರೋಗ್ಯದಾಯಕ ಸ್ಪರ್ಧೆಯಾದರೂ ನೀವು ಕೊಡಬೇಕು. ಅಕಸ್ಮಾತ್ ಸೋತರೆ, 'ಆಗುವುದೆಲ್ಲ ಒಳ್ಳೆಯದಕ್ಕೆ' ಎಂದುಕೊಂಡರಾಯಿತು.


'ಭಕ್ತ ಕುಂಬಾರ' ಚಿತ್ರದಲ್ಲಿ ಕಷ್ಟ ಅನುಭವಿಸುವ ಕುಂಬಾರನಿಗೆ ಕೊನೆಯಲ್ಲಿ ಅವನು ಕಳೆದುಕೊಂಡದ್ದೆಲ್ಲ ಸಿಗುತ್ತದೆ. ಅದು ನಂಬಿಕೆ. ಅದು ಜೀವನದ ಕಷ್ಟಗಳನ್ನು ಎದುರಿಸುವ ಸ್ಥೈರ್ಯ ಕೊಡುತ್ತದೆ. ಆದರೆ ಘಜ್ನಿ ಎನ್ನುವ ಧಾಳಿಕೋರ ಗುಜರಾತ್ ನ ಸೋಮನಾಥಪುರ ದೇವಸ್ಥಾನಕ್ಕೆ ಧಾಳಿ ಮಾಡಿದಾಗ ಅಲ್ಲಿ ನೆರೆದಿದ್ದ ಸಾವಿರಾರು ಜನ, ಯಾವುದೊ ಪವಾಡದ ನಿರೀಕ್ಷೆಯಲ್ಲಿ, ಯಾವುದೇ ಹೋರಾಟ ಮಾಡದೇ ಜೀವ ಕಳೆದುಕೊಂಡರಲ್ಲ. ಅದು ಮೂಢ ನಂಬಿಕೆ. ಅವರು ಒಟ್ಟಾಗಿ, ಸಿಕ್ಕ ಆಯುಧಗಳನ್ನು ಹಿಡಿದು ಹೋರಾಟ ಮಾಡಿದ್ದರೆ, ಅವರಲ್ಲಿ ಕೆಲವು ಜನರ ಜೀವವಾದರೂ ಉಳಿಯುವ ಸಾಧ್ಯತೆ ಇತ್ತು. ಎದುರಾಳಿಗಳಲ್ಲೂ ಸಾವು-ನೋವು ಉಂಟು ಮಾಡಬಹುದಾಗಿತ್ತು. ಆ ಹೋರಾಟ ಧರ್ಮದ್ದಾಗಿರಲಿಲ್ಲ. ಬದಲಿಗೆ ಒಬ್ಬ ಸ್ವಾರ್ಥಿ ಧರ್ಮದ ದುರ್ಬಳಕೆ ಮಾಡುವುದಾಗಿತ್ತು.


ನಮ್ಮ ಜೀವನದ ಪ್ರತಿ ದಿನದ ಸಂಘರ್ಷ ನಮ್ಮ ನಂಬಿಕೆಗಳೊಡನೆ ಆಟ ಆಡುವವವರ ಜೊತೆ ಇರುತ್ತದೆ. ಆಗ ಒಳ್ಳೆಯತನಕ್ಕೆ ಕಟ್ಟು ಬೀಳದಿರಿ. ಮಾನವ ಮೌಲ್ಯಗಳಿಗೆ ಖಂಡಿತ ಬೆಲೆ ಕೊಡಿ. ಆದರೆ ಅವುಗಳಿಗೆ ಬೆಲೆ ಕೊಡದೆ ಇರುವವವರ ಜೊತೆಗೆ ಮಾತ್ರ ಪ್ರಕೃತಿ ನಿಯಮವನ್ನು ಕಡೆಗಣಿಸಬೇಡಿ.

No comments:

Post a Comment