Thursday, February 24, 2022

ಸರ್ವಾಧಿಕಾರಿಗಳ ಮೊದಲ ಪ್ರೇಮ: ಯುದ್ಧ

ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಾಕಾಂಕ್ಷಿಗಳಲ್ಲಿ ಮೂವರು ಪ್ರಮುಖರು: ಅಲೆಕ್ಸಾಂಡರ್, ನೆಪೋಲಿಯನ್ ಮತ್ತು ಹಿಟ್ಲರ್. ಅವರ ಪೀಳಿಗೆ ಇನ್ನು ಮುಗಿದು ಹೋಗಿಲ್ಲ ಎನ್ನುವಂತೆ, ಆ ಸಾಲಿಗೆ ಸೇರಲು ಇಂದಿನ ಕಾಲಮಾನದ ಇಬ್ಬರು ತಯಾರಾಗಿ ನಿಂತಿದ್ದಾರೆ. ಅವರು ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್. ಅವರೆಲ್ಲರ ವ್ಯಕ್ತಿತ್ವಗಳಲ್ಲಿ ಸಮಾನವಾಗಿ ಕಂಡು ಬರುವ ಅಂಶಗಳು ಕೆಲವಿವೆ. ಮೊದಲಿಗೆ ಸರ್ವಾಧಿಕಾರ, ಅವರನ್ನು ಯಾರೂ ಎದುರು ಹಾಕಿಕೊಳ್ಳುವ ಹಾಗೆ ಇಲ್ಲ. ಅವರುಗಳ ಹಿಂದೆ ಬಲಿಷ್ಠ ಸೈನ್ಯಗಳಿವೆ. ಅವರಿಗೆ ಅವಶ್ಯಕತೆಗೆ ತಕ್ಕಂತೆ ಸ್ನೇಹಿತರು. ಸಮಯ, ಸನ್ನಿವೇಶ ಬದಲಾದರೆ ತಮ್ಮ ಸ್ನೇಹಿತರನ್ನು ಯಾವುದೇ ಮುಲಾಜಿಲ್ಲದೆ ಮುಗಿಸಿ ಹಾಕುತ್ತಾರೆ. ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ಅಗಾಧ ನಂಬಿಕೆ. ಸಾಮಾನ್ಯ ಜನ ಎದುರಿಸಲಾಗದ ಅಪಾಯಗಳನ್ನು ಅವರುಗಳು ಸುಲಭವಾಗಿ ನಿಭಾಯಿಸುತ್ತಾರೆ. ಕಾನೂನುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ತಮ್ಮ ದೇಶದ ಜನರನ್ನು ಪ್ರಭಾವದಿಂದಲೋ ಇಲ್ಲವೇ ಬೆದರಿಸಿಯೋ ತಮ್ಮ ಕೆಲಸಗಳಿಗೆ ಸಹಕಾರ ನೀಡುವಂತೆ ಮತ್ತು ಪ್ರತಿಭಟಿಸದಂತೆ ನೋಡಿಕೊಳ್ಳುತ್ತಾರೆ. ಅವರು ತಮ್ಮ ಆಸೆಗಳನ್ನು ಸಾಕಾರಗೊಳಿಸಿಕೊಳ್ಳುವುದರಲ್ಲಿ ಯಶಸ್ಸು ಕಾಣುತ್ತಾರೋ ಇಲ್ಲವೋ ಆದರೆ ಅವರ ಅಂತ್ಯ ಮಾತ್ರ ದಾರುಣವಾಗಿರುತ್ತದೆ.


ಕುದುರೆಯ ಬೆನ್ನೇರಿ, ಸುಮಾರು ಮೂವತ್ತು ಸಾವಿರ ಕಿ.ಮೀ. ದೂರವನ್ನು ತನ್ನ ಸೈನ್ಯದೊಂದಿಗೆ ಕ್ರಮಿಸಿ, ಒಂದರ ನಂತರ ಇನ್ನೊಂದರಂತೆ ಯುದ್ಧಗಳನ್ನು ಅಲೆಕ್ಸಾಂಡರ್ ಗೆಲ್ಲಲ್ಲು ಸಾಧ್ಯವಾಗಿದ್ದು ಅವನ ಮೇಲೆ ವಿಪರೀತ ಅಭಿಮಾನ ಹೊಂದಿದ ಸೈನ್ಯದಿಂದ. ಆದರೆ ಯುದ್ಧ ಬಿಟ್ಟು ಬೇರೇನೂ ಮಾಡಲೊಲ್ಲದ ಅಲೆಕ್ಸಾಂಡರ್ ಕೊನೆಯುಸಿರೆಳೆದಾಗ ಅವನ ಹೆಣ ಅವನ ತಾಯ್ನಾಡು ತಲುಪಲಿಲ್ಲ. ಆಮೇಲೆ ಎಷ್ಟೋ ವರುಶಗಳವರೆಗೆ ಅವನ ದಂಡನಾಯಕರು ಅಲೆಕ್ಸಾಂಡರ್ ನ ಕಿರೀಟವನ್ನು ನ್ಯಾಯಸ್ಥಾನದಲ್ಲಿ ಇಟ್ಟು ತಮ್ಮ ಅಧಿಕಾರ ಮುಂದುವರೆಸಿದರು.


ರಣರಂಗದಲ್ಲಿ ಚಾಣಕ್ಷತೆಯಿಂದ, ಎದುರಾಳಿಗಳಲ್ಲಿ ಗೊಂದಲವೆಬ್ಬಿಸುತ್ತ ಶತ್ರು ಸೈನ್ಯವನ್ನು ಧೂಳಿಪಠ ಮಾಡುತ್ತ ಹಲವಾರು ಯುದ್ಧಗಳನ್ನು ಗೆದ್ದ ನೆಪೋಲಿಯನ್ ಮಾನವ ಜಗತ್ತು ಕಂಡ ಯುದ್ಧ ತಂತ್ರಗಾರಿಕೆಯ ನಿಪುಣ. ಆದರೆ ಅವನ ಅಂತ್ಯವೂ ಹಾಗೆ ಇತ್ತು. ಮಾನವ ಸಂಪರ್ಕ ಇಲ್ಲದೆ ಒಂದು ದ್ವೀಪದಲ್ಲಿ ಬಂದಿಯಾಗಿ ಕೊನೆ ಉಸಿರೆಳೆದ ಆ ನಿಪುಣ.


ಜರ್ಮನಿ ಜನರನ್ನು ತನ್ನ ಮೋಡಿಗೆ ಸಿಲುಕಿಸಿ ಅಧಿಕಾರ ಪಡೆದುಕೊಂಡು, ಎಂತಹ ಯುದ್ಧಗಳಿಗಾದರೂ ಸೈ ಎನ್ನುವಂತಹ ಬಲಿಷ್ಠ ಸೇನೆಯನ್ನು ಮುಂದಿಟ್ಟುಕೊಂಡು ಯುರೋಪ್ ನ ಎಲ್ಲ ರಾಷ್ತ್ರಗಳಿಗೂ ಸಿಂಹ ಸ್ವಪ್ನ ಎನಿಸಿದ ಹಿಟ್ಲರ್, ಸೋತು ಹೋದಾಗ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.


ಆದರೆ ಯುದ್ಧ ಘೋಷಣೆ ಮಾಡುವ, ಉತ್ಸಾಹದಿಂದ ರಣರಂಗಕ್ಕೆ ಇಳಿಯುವ ವೀರರು ಇಂದಿಗೂ ಇದ್ದಾರೆ. ರಷ್ಯಾ ಮತ್ತು ಚೀನಾ ದೇಶಗಳು ಅತ್ಯಾಧುನಿಕ ಎನಿಸುವ ತಂತ್ರಜ್ಞಾನ ಹೊಂದಿದ ಕ್ಷಿಪಣಿಗಳನ್ನು ಹೊಂದಿದ್ದಾರೆ. ಯಾವುದೇ ಜನ ಸಮುದಾಯವನ್ನು ನಾಶ ಪಡಿಸಬಲ್ಲ ಪರಮಾಣು ಬಾಂಬ್ ಗಳನ್ನೂ ಹೊಂದಿದ್ದಾರೆ. ಎಲ್ಲಕ್ಕೂ ಮಿಗಿಲೆನ್ನುವಂತೆ ಎಂತಹ ಎದುರಾಳಿಗಳನ್ನು ಬೇಕಾದರೂ ನಾಶ ಮಾಡುವ ಉತ್ಸಾಹದ ಮಾತುಗಳನ್ನು ಮತ್ತು ಯುದ್ಧ ಪ್ರಚೋದಿಸುವ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ. ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್  ತಮ್ಮ ದೇಶದಲ್ಲಿ ಸರ್ವಾಧಿಕಾರಿಗಳು. ಆದರೆ ಅವರಿಗೆ ಅಷ್ಟಕ್ಕೇ ತೃಪ್ತಿಯಿಲ್ಲ. ಮೊದಲಿಗೆ ನೆರೆ ದೇಶಗಳನ್ನು, ನಂತರ ಜಗತ್ತನ್ನೇ ಗೆಲ್ಲುವ ಮಹದಾಸೆ ಅವರದು.


"ಧಾಳಿಕೋರನಿಗೆ ಯಾವ ಧರ್ಮ" ಎಂದ ಅಲ್ಲಮಪ್ರಭುಗಳು "ಸಾಸಿವೆ ಸುಖಕ್ಕೆ ಸಾಗರದಷ್ಟು ದುಃಖ ನೋಡಾ" ಎಂದೂ ಕೂಡ ಹೇಳಿದ್ದಾರೆ. ಯಾರೋ ಒಬ್ಬ ಸರ್ವಾಧಿಕಾರಿ ಗೆದ್ದ ದೊಡ್ಡಸ್ತಿಕೆ ತೋರಲು ಸಾವಿರಾರು ಜನ ಪ್ರಾಣ ಕಳೆದುಕೊಳ್ಳಬೇಕು. ಲಕ್ಷಾಂತರ ಜನ ಮನೆ-ಆಸ್ತಿ ಕಳೆದುಕೊಂಡು ಊರು ಬಿಟ್ಟು ಸುರಕ್ಷಿತ ಜಾಗಕ್ಕೆ ತಲುಪಬೇಕು. ಯುದ್ಧ ತರುವ ಸಾವು-ನೋವು ಅಪಾರ. ಆದರೆ ಮನುಷ್ಯನ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಯುದ್ಧದ ಅತಿರೇಕವೂ ಒಂದು.


ಮನುಷ್ಯ ನಾಗರಿಕತೆಯೆಡೆಗೆ ಹೆಜ್ಜೆ ಇಟ್ಟರೆ, ಅವನನ್ನು ಹಿಂದಕ್ಕೆ ಎಳೆದು ತರದೇ ಬಿಡುವುದಿಲ್ಲ ಈ ಸರ್ವಾಧಿಕಾರಿಗಳು. ಅವರು ಕೂಡ ಸಮಾಜದ ಪ್ರತೀಕ ಅಲ್ಲವೇ.

Sunday, February 13, 2022

ಕಥೆ: ರಾಜಧರ್ಮ

(ವಿಜಯನಗರವನ್ನಾಳಿದ ಅರಸು ಶ್ರೀಕೃಷ್ಣದೇವರಾಯನ ಸಾವು ಮತ್ತು ನಂತರದ ಅಧಿಕಾರ ಹಸ್ತಾಂತರದ ಬಗ್ಗೆ ಇತಿಹಾಸದಲ್ಲಿ ಸಮರ್ಪಕವಾದ ವಿವರಣೆಗಳಿಲ್ಲ. ಆ ಕಾಲಘಟ್ಟದಲ್ಲಿ ನಡೆದಿರಬಹುದಾದ ಸಂಗತಿಗಳ ಬಗ್ಗೆ ಒಂದು ಕಾಲ್ಪನಿಕ ಕಥೆ)


ಅಧ್ಯಾಯ-೧; ವಿರೂಪಾಕ್ಷ ಬೀದಿಯ ವರ್ತಕರು ತಮ್ಮಲ್ಲೇ ಮಾತನಾಡಿಕೊಳ್ಳುವುದು


ಮೊದಲನೆಯ ವರ್ತಕ: ತಲೆ ತಲಾಂತರಗಳಿಂದ ಇಲ್ಲಿನ ಜನರು ವಿರೂಪಾಕ್ಷನಿಗೆ ನಡೆದು ಕೊಂಡರೆ, ನಮ್ಮ ರಾಯ ರಾಜ್ಯದ ಬೊಕ್ಕಸ ಹಣವನ್ನೆಲ್ಲ ತಿರುಪತಿಯಲ್ಲಿ ಸುರಿದು ಬರುತ್ತಾನೆ. ನೀವೇ ನೋಡಿತ್ತಿದ್ದೀರಲ್ಲ. ವಿರೂಪಾಕ್ಷನ ಸನ್ನಿಧಿಗೆ ಕೇವಲ ಎರಡು ಸಲ ದೇಣಿಗೆ ನೀಡಿದರೆ, ತಿರುಪತಿ ವೆಂಕಟೇಶನಿಗೆ ಏಳು ಸಲ ಧನ-ಕನಕ ಅರ್ಪಿಸಿದ್ದಾನೆ.


ಎರಡನೆಯ ವರ್ತಕ: ನಮ್ಮ ರಾಯ ತಿರುಪತಿಗೆ ಹೋಗುವುದು ವರುಷಕ್ಕೊಮ್ಮೆ. ಆದರೆ ಇಲ್ಲಿ ಹಂಪೆಯಲ್ಲಿ ವಿಠಲ ದೇವಸ್ಥಾನ ಕಟ್ಟಿದ ನಂತರ, ಅಲ್ಲಿ ಕೊಡುವ ದಾನಗಳಿಗೆ, ಆ ದೇವಸ್ಥಾನದ ವೈಭವಕ್ಕೆ, ಅಲ್ಲಿನ ಪೇಟೆಗೆ ಕೂಡ ಮೆರುಗು ಬಂದು ನಮ್ಮ ಪೇಟೆ ವ್ಯಾಪಾರ ಕಡಿಮೆ ಆಗಿದೆ.


ಮೂರನೆಯ ವರ್ತಕ: ಇದು ಬರಿ ಶೈವ-ವೈಷ್ಣವ ಸಮಸ್ಯೆ ಅಷ್ಟೇ ಅಲ್ಲ. ರಾಜನ ಆಸ್ಥಾನದಲ್ಲಿ ತೆಲುಗು ಭಾಷಿಕರೇ ತುಂಬಿದ್ದಾರೆ. ಸ್ವತಃ ಪ್ರಭುಗಳೇ ತೆಲುಗಿನಲ್ಲಿ ಕಾವ್ಯ ರಚಿಸುತ್ತಾರೆ. ಸುಮ್ಮನ ಅವರಿಗೆ 'ಆಂಧ್ರ ಭೋಜ' ಎಂದು ಕರೆಯುವರೇ? ಸೈನ್ಯದಲ್ಲಿ ಕೂಡ, ಮಂತ್ರಿ ತಿಮ್ಮರಸರು ತೆಲುಗು ದಳವಾಯಿಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟಿದ್ದಾರೆ.


ಮೊದಲನೆಯ ವರ್ತಕ: ಸಂಗಮ ವಂಶದ ರಾಜರುಗಳೆಲ್ಲ ವಿರೂಪಾಕ್ಷನ ಆಶೀರ್ವಾದ ಪಡೆದು, ಅವನ ಕೃಪೆಯಿಂದ ರಾಜ್ಯ ಆಳಿದವರು ಆದರೆ ಈಗಿನ ತುಳುವ ವಂಶದ ಅರಸರಿಗೆ, ಅದರಲ್ಲೂ ನಮ್ಮ ಈಗಿನ ದೊರೆಗೆ ಮಾತ್ರ ವಿಷ್ಣುವಿನ ಮೇಲೆ ಪರಮ ಪ್ರೀತಿ.


ಎರಡನೆಯ ವರ್ತಕ: ಪ್ರಭುಗಳು ಹೊರಗಿನವರಿಗೆ ಹೆಚ್ಚಿನ ಅವಕಾಶ ನೀಡುವುದು ಮುಂದುವರೆದರೆ ಮುಂದೆ ನಮ್ಮ ಗತಿ?


ಮೂರನೆಯ ವರ್ತಕ: ಸಮಯಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಆದರೆ ಅಲ್ಲಿಯವರೆಗೆ ಸುಮ್ಮನೆ ಇರದೇ ಆಕ್ಷೇಪಿಸಿದರೆ, ರಾಜಭ್ರಷ್ಟ ಎನಿಸಿಕೊಂಡು ತಲೆದಂಡ ತೆರಬೇಕಾದೀತು.

---


ಅಧ್ಯಾಯ-೨; ಮಗನನ್ನು ಕಳೆದುಕೊಂಡ ಶೋಕದಲ್ಲಿ ಶ್ರೀಕೃಷ್ಣದೇವರಾಯ ತನ್ನ ಅರಮನೆಯಲ್ಲಿ ಶೋಕಿಸುತ್ತಿದ್ದಾನೆ.


ಸರಿ ರಾತ್ರಿ ಹೊತ್ತಾಗಿ, ಎಷ್ಟು ಉರುಳಾಡಿದರೂ ಕಣ್ಣಿಗೆ ನಿದ್ದೆ ಮಾತ್ರ ಬರದು. ಹಾಸಿಗೆಯಿಂದ ಎದ್ದು ತನ್ನ ಅರಮನೆಯಲ್ಲೇ ಶ್ರೀಕೃಷ್ಣದೇವರಾಯ ಶತಪಥ ತಿರುಗಲು ತೊಡಗುತ್ತಾನೆ. ಅವನಿಗೆ ತಾನು ಎಡವಿದ್ದೆಲ್ಲಿ ಎಂದು ಅರಿವಾಗುತ್ತಿಲ್ಲ. ರಣರಂಗದಲ್ಲಿ ಸೋಲನ್ನೇ ಕಾಣದ ಅರಸನ ಮಗನಿಗೆ, ಅವನ ಅರಮನೆಯಲ್ಲೇ ವಿಷ ಪ್ರಾಶನವಾಗುವುದು ಎಂದರೇನು? 

ರಾಜಧಾನಿಗೆ ಯಾರು ಹೊಸಬರು ಬಂದರೂ, ತಳವಾರ ತನಗೆ ತಿಳಿಸುತ್ತಲೇ ಇದ್ದ. ಇದು ಸುಲ್ತಾನರು ಕಳಿಸಿದ ಬೇಹುಗಾರರ ಮಸಲತ್ತಲ್ಲ. ಏಳು ಸುತ್ತಿನ ಕಾವಲು ದಾಟಿದ ಮೇಲೆ ಮಾತ್ರ ಅರಸನ ಭೇಟಿ ಹಾಗೆ ಅರಮನೆಗೆ ಕಾಲಿಡಲು ಸಾಧ್ಯ. ಇದು ಹೊರಗಿನವರ ಕೆಲಸ ಅಲ್ಲವೇ ಅಲ್ಲ. ಛೆ, ಅಪ್ಪಾಜಿ ತಿಮ್ಮರಸು ಅವರ ಮೇಲೆ ಅನುಮಾನ ಪಟ್ಟು ಅವರನ್ನು ಶಿಕ್ಷಿಸಿದ್ದು ಎಂಥ ತಪ್ಪಾಗಿ ಹೋಯಿತು. ಈ ಕೆಲಸ ಮತ್ತಿನ್ನಾರದ್ದು? ಮಂತ್ರಿ, ದಳವಾಯಿಗಳ ಮನೆಗಳಲ್ಲಿ ಏನು ಮಾತಾದರೂ, ಯಾರು ಬಂದು ಹೋದರೂ ಅದು ತನಗೆ ಅರಿವಿಗೆ ಬರದೇ ಇರಲು ಸಾಧ್ಯವಿದ್ದಿಲ್ಲ. ರಾಜನಾದವನಿಗೆ ಅಂತಹ ಮುನ್ನೆಚ್ಚರಿಕೆ ಇರುವುದಕ್ಕೆ ಅಲ್ಲವೇ ತಾನು  ನಂಬಿಗಸ್ಥ ಗುಪ್ತಚರರ ಬಲವಾದ ವ್ಯವಸ್ಥೆ ಕಟ್ಟಿಕೊಂಡಿದ್ದು? 

ಹಾಗಾದರೆ, ಇದು ಕುಟುಂಬದವರ ಕೆಲಸವೇ? ಮಲ ತಮ್ಮ ಅಚ್ಯುತರಾಯನಿಗೆ ಸಿಂಹಾಸನದ ಮೇಲೆ ಕಣ್ಣಿರುವುದು ತಮಗೆ ತಿಳಿಯದ ವಿಷಯವೇನಲ್ಲ. ಅದಕ್ಕೆ ಅಲ್ಲವೇ ಅವನನ್ನು ದೂರದ ಚಂದ್ರಗಿರಿಗೆ ಅಟ್ಟಿದ್ದು? ಅವನು ಅಲ್ಲಿಯೇ ಕುಳಿತು ಮಸಲತ್ತು ಮಾಡುವುದಾದರೆ, ಅವನಿಗೆ ರಾಜಧಾನಿ ಹಂಪೆಯಲ್ಲಿ ಯಾರದೋ ಸಹಕಾರ ಇರಬೇಕಲ್ಲವೇ? ಯಾರಿಗೆ ಅಂತಹ ಆಸೆ ಉಂಟು? ಶ್ರೀಕೃಷ್ಣದೇವರಾಯನ ಮನದಲ್ಲಿ ಕ್ಷಣ ಕಾಲ ಅದು ಅಳಿಯ ರಾಮರಾಯನ ಕೆಲಸವಿರಬಹುದೇ ಅನ್ನಿಸಿತು. ತಕ್ಷಣವೇ ತಲೆ ಕೊಡವಿ, ಅವನು ಯುದ್ಧ ಭೂಮಿಯಲ್ಲಿ ಭುಜಕ್ಕೆ ಭುಜ ಕೊಟ್ಟು ಹೋರಾಡಿ , ನಂಬಿಕೆಗೆ ಅರ್ಹ ಅನ್ನಿಸಿದ ಮೇಲೆ ಅಲ್ಲವೇ ಅವನಿಗೆ ತನ್ನ ಮಗಳನ್ನು ಧಾರೆ ಎರೆದು ಕೊಟ್ಟಿದ್ದು? ಈ ಕೆಲಸ ಅವನದ್ದಿರಿಲಿಕ್ಕಿಲ್ಲ ಎಂದು ಪ್ರಭುಗಳಿಗೆ ಅನ್ನಿಸಿತು. ಆದರೂ ತಮಗೆ ಮೊದಲಿನ ಹಾಗೆ ಸ್ಪಷ್ಟ, ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕಳೆದು ಹೋಗಿದೆ ಎಂದು ಶ್ರೀಕೃಷ್ಣದೇವರಾಯನಿಗೆ ಸ್ವಯಂ ಅನ್ನಿಸತೊಡಗಿತ್ತು. 

ತಿರುಪತಿ ವೆಂಕಟೇಶನಿಗೆ ಹರಕೆ ಹೊತ್ತ ಮೇಲೆಯೇ ಹುಟ್ಟಿದ ತನ್ನ ಮಗನಿಗೆ, ಆ ವೆಂಕಟೇಶ ಯಾಕೆ ಅಕಾಲ ಮರಣ ಕೊಟ್ಟನೆಂದು ದೊರೆಗಳಿಗೆ ತಿಳಿಯದಾಯಿತು. ತಾನು ತಿರುಪತಿಗೆ ಕೊಟ್ಟ ಧನ-ಕನಕಗಳೇನು ಕಡಿಮೆಯೇ? ಆದರೂ ವೆಂಕಟೇಶನಿಗೆ ತಮ್ಮ ವಂಶ ರಾಜ್ಯಭಾರ ಮುಂದುವರೆಸುವುದು ಯಾಕೆ ಇಷ್ಟವಾಗಲಿಲ್ಲವೋ ಎಂದು ಪ್ರಭುಗಳಿಗೆ ತಿಳಿಯಲಿಲ್ಲ. ಇಷ್ಟಕ್ಕೂ ತಮ್ಮ ಆರೋಗ್ಯವೇಕೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ? ತಮ್ಮ ಮೈಯಲ್ಲಿ ಅಲ್ಪ ಪ್ರಮಾಣದ ವಿಷವೇನಾದರೂ ಸೇರಿಕೊಂಡಿದೆಯೇ? ಇನ್ನು ರಣರಂಗದಲ್ಲಿ ಮತ್ತೆ ಖಡ್ಗ ಬೀಸುತ್ತ ಕಾದಲು  ಸಾಧ್ಯವೇ? ಕುಮಾರನ ಸಾವಿನ ನಂತರ, ತಮಗೂ ಬದುಕುವ ಆಸೆ ಕುಂದುತ್ತಾ ಹೋಗುತ್ತಿರುವುದೇಕೆ? ಶ್ರೀಕೃಷ್ಣದೇವರಾಯನ ಅಂತರಂಗ ಕಾದ ಬಾಣಲಿಯಾಗಿತ್ತು. ದೇಹ ಮಾತ್ರ ಬಳಲಿ ಬೆಂಡಾಗಿ ಹೋಗಿತ್ತು. 

----


ಅಧ್ಯಾಯ-೩; ದಳವಾಯಿಗಳು ತಮ್ಮಲ್ಲೇ ಮಾತನಾಡಿಕೊಳ್ಳುತ್ತಿರುವುದು

ಒಬ್ಬ ದಳವಾಯಿ: ನಮ್ಮ ಅರಸರ ಮುಖ ನೋಡಿ ತಿಂಗಳುಗಳೇ ಆದವು. ಅರಮನೆಯಲ್ಲಿ ಏನು ನಡೆಯುತ್ತಿರಬಹುದು? ಇಷ್ಟಕ್ಕೂ ನಮ್ಮ ರಾಜಕುಮಾರನನ್ನು ಸಾಯಿಸಿದವರು ಯಾರು? ಏಕಿರಬಹುದು?


ಇನ್ನೊಬ್ಬ ದಳವಾಯಿ: ರಾಜ ಮನೆತನದ ವಿಷಯಗಳು ಅಷ್ಟು ಸುಲಭವಲ್ಲ. ಸಂಗಮ ವಂಶದವರನ್ನು ಕೊನೆಗಾಣಿಸಿಯೇ ಅಲ್ಲವೇ ಸಾಳುವ ವಂಶದವರು ಅಧಿಕಾರಕ್ಕೆ ಬಂದಿದ್ದು? ಹಾಗೆಯೆ ಸಾಳುವ ವಂಶದ ರಾಜಕುಮಾರನನ್ನು ಸಾಯಿಸಿಯೇ ಅಲ್ಲವೇ ಶ್ರೀಕೃಷ್ಣದೇವರಾಯನ ಅಣ್ಣ ಪಟ್ಟ ಏರಿದ್ದು ಮತ್ತು ತುಳುವ ವಂಶದ ರಾಜ್ಯಭಾರ ಆರಂಭವಾಗಿದ್ದು? ಅಧಿಕಾರದ ಆಸೆ ಕ್ಷತ್ರಿಯರಿಗೆ ಸಹಜವಾದದ್ದು. ಯುದ್ಧ ಗೆದ್ದೋ, ಇಲ್ಲವೇ ಮೋಸದಿಂದ ಮುಗಿಸಿಯೋ, ಅಧಿಕಾರ ಹಿಡಿದುಕೊಳ್ಳುತ್ತಾರೆ.


ಮತ್ತೊಬ್ಬ ದಳವಾಯಿ: ಈಗಲೂ ಹಾಗೆ ಆಗಬಹುದು ಎನ್ನಿಸುತ್ತಿದೆ. ಕಾದು ನೋಡಬೇಕು ಅಷ್ಟೇ.

---


ಅಧ್ಯಾಯ-೪; ಶ್ರೀಕೃಷ್ಣದೇವರಾಯರ ಸಾವಿನ ನಂತರ ಅವರ ಮಲ ತಮ್ಮ ಅಚ್ಚುತರಾಯರು ಪಟ್ಟವನ್ನೇರಿದ್ದಾರೆ. ಮತ್ತು ಮಂತ್ರಿ ಪದವಿ ಶ್ರೀಕೃಷ್ಣದೇವರಾಯರ ಅಳಿಯ ರಾಮರಾಯರವರದ್ದಾಗಿದೆ.

ರಾಮರಾಯ ತನ್ನ ಅಂತರಂಗದಲ್ಲೇ ಮೆಲುಕು ಹಾಕುತ್ತಿದ್ದ. ಯಾವುದೇ ಸಾಹಸಿ ಬರಿ ಧನ-ಐಶ್ವರ್ಯಗಳಿಗೆ ಮರುಳಾಗಿ ಕಾದಾಟಕ್ಕೆ ಇಳಿಯುವುದಿಲ್ಲ. ಅವನಿಗೆ ಅಧಿಕಾರದ ಆಸೆಯೇ ಮೂಲವಾಗಿರುತ್ತದೆ. ತನ್ನ ಮಾವ ಮತ್ತು ಅವನ ಮಂತ್ರಿ ತಿಮ್ಮರಸು ಇವರುಗಳೇ ಅಧಿಕಾರ ಮುಂದುವರೆಸಿದ್ದರೆ, ತನಗೆ ಮಂತ್ರಿಯಾಗುವ ಅವಕಾಶ ಎಲ್ಲಿರುತ್ತಿತ್ತು? ಇಷ್ಟಕ್ಕೂ ಬರೀ ಮಂತ್ರಿ ಪದವಿ ತನಗೆ ಸಮಾಧಾನ ತರುವ ವಿಷಯ ಅಲ್ಲ. ಆದರೆ ರಾಜ್ಯದ ಎಲ್ಲದ ಅಧಿಕಾರಗಳ ಮೇಲೆ ಹಿಡಿತ ಸಾಧಿಸಿದ ಮೇಲೆ ಅಲ್ಲವೇ ತನ್ನನ್ನು ರಾಜ ಎಂದು ಜನತೆ ಒಪ್ಪಿಕೊಳ್ಳುವುದು? ಈಗಿರುವ ಮಂತ್ರಿ  ಪದವಿಯ ಸಹಾಯದಿಂದ ಉಳಿದ ರಾಜ್ಯಭಾರದ ಅಧಿಕಾರಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದಕ್ಕೆ ಎಷ್ಟು ಸಮಯ ಬೇಕಾಗಬಹುದು? ಅಲ್ಲಿಯವರೆಗೆ ಮಾತ್ರ ಅಚ್ಚುತರಾಯನಿಗೆ ತನ್ನ ಸಹಕಾರ ಸಾಧ್ಯ. ಅವನ ನಂತರ ವಿಜಯನಗರ ಸಾಮ್ರಾಜ್ಯದ ಸಂಪೂರ್ಣ ಅಧಿಕಾರ ತನ್ನದೇ. 

ತಾನು ಸಾಹಸಿಯಾದದ್ದಕ್ಕೆ ಅಲ್ಲವೇ ಶ್ರೀಕೃಷ್ಣದೇವರಾಯ ತನ್ನನ್ನು ಅಳಿಯನಾಗಿ ಒಪ್ಪಿಕೊಂಡಿದ್ದು. ಅವನ ಮಗಳನ್ನು ಮದುವೆಯಾದ ತಾನು ರಾಜ ಕುಟುಂಬದ ಸದಸ್ಯನೇ ಆಗಲಿಲ್ಲವೇ? ಸಂಗಮ, ಸಾಳುವ ವಂಶಗಳು ಕೊನೆಯಾದ ಹಾಗೆ ಈ ತುಳುವ ವಂಶದ ಅಧಿಕಾರ ಕೂಡ ಕೊನೆಯಾಗಬಾರದೇಕೆ? ಇಷ್ಟಕ್ಕೂ ಅಧಿಕಾರ ಯಾರ ಸ್ವತ್ತೂ ಅಲ್ಲ. ಬಲದಿಂದಲೋ, ಬುದ್ಧಿಯಿಂದಲೋ ಗೆದ್ದವನಿಗೆ ಸಲ್ಲುತ್ತದೆ ಅಧಿಕಾರ. ಹಿಂದೆ ಶ್ರೀಕೃಷ್ಣದೇವರಾಯನನ್ನು ಸಾಯಿಸುವುದಕ್ಕೆ ಅವರ ಅಣ್ಣ ಆಜ್ಞೆ ಮಾಡಿರಲಿಲ್ಲವೇ? ತಿಮ್ಮರಸು ಯುಕ್ತಿಯಿಂದಲೇ ಅಲ್ಲವೇ ಶ್ರೀಕೃಷ್ಣದೇವರಾಯ ಪಟ್ಟವನ್ನೇರಿದ್ದು? ಹಾಗೆಯೆ ಇನ್ನೊಬ್ಬರ ಯುಕ್ತಿಗೆ ಅವರಿಬ್ಬರೂ ಪ್ರಾಣ ತೆತ್ತರು. 

ಅರಸನಾದವನಿಗೆ ತನ್ನ ಜೀವದ ಮತ್ತು ಅವನ ಉತ್ತರಾಧಿಕಾರಿಗಳ ಜೀವದ ಅಪಾಯ ಎಂದೆಂದಿಗೂ ಇರುತ್ತದೆ. ಅಪಾಯವನ್ನು ಉಪೇಕ್ಷಿಸಿದಾಗ ಆಗುವ ಹಾನಿ ಅಪಾರ. ಅಂತಹ ಮೈಮರೆತ ಸನ್ನಿವೇಶದಲ್ಲೇ ಅಲ್ಲವೇ  ಶ್ರೀಕೃಷ್ಣದೇವರಾಯ ತನ್ನ ಮಗನನ್ನು ಕಳೆದುಕೊಂಡಿದ್ದು. ಅವರ ಅಣ್ಣ ಸಾಳುವ ವಂಶವನ್ನು ಕೊನೆಗೊಳಿಸಿದ್ದು ಹೀಗೆಯೇ. ಹಾಗಿದ್ದಲ್ಲಿ ಇತಿಹಾಸ ಶ್ರೀಕೃಷ್ಣದೇವರಾಯನ ತಪ್ಪುಗಳನ್ನೇಕೆ ಮನ್ನಿಸಬೇಕು? ರಾಜನಾಗಿ ಅಧಿಕಾರ ಅನುಭವಿಸಿದವನಿಗೆ ಅದು ತಂದೊಡ್ಡುವ ಅಪಾಯಗಳಿಗೆ ತಲೆಯೊಡ್ಡಬೇಕಾದದ್ದು ಕೂಡ ರಾಜಧರ್ಮವೇ. ಅವನು ಉಪಾಯವಾಗಿ ಅಧಿಕಾರಕ್ಕೆ ಬಂದಿದ್ದು ರಾಜಧರ್ಮವಾದರೆ, ಅವನ ಅಂತ್ಯಕ್ಕೆ ಬೇರೆಯವರು ಉಪಾಯ ಮಾಡುವುದು ಕೂಡ ರಾಜಧರ್ಮವೇ.


[ಶ್ರೀಕೃಷ್ಣದೇವರಾಯನ ಸಾವಿನ ಪ್ರಯೋಜನವಾಗಿದ್ದು, ಅವನ ನಂತರ ಅಧಿಕಾರಕ್ಕೆ ಬಂದ ಅವನ ಮಲ ತಮ್ಮ ಅಚ್ಚುತರಾಯನಿಗೆ ಮತ್ತು ಹೆಚ್ಚಿನ ಅಧಿಕಾರ ದೊರಕಿಸಿಕೊಂಡ ರಾಮರಾಯನಿಗೆ. ಅಚ್ಚುತರಾಯನ ಸಾವಿನ ನಂತರ ಅವನ ಮಗನನ್ನು ಹೆಸರಿಗೆ ಮಾತ್ರ ರಾಜನನ್ನಾಗಿ ಮಾಡಿ, ಸಂಪೂರ್ಣ ಅಧಿಕಾರವನ್ನು ತನ್ನ ಕೈಗತ್ತಿಕೊಂಡ ರಾಮರಾಯ ಶ್ರೀಕೃಷ್ಣದೇವರಾಯನ ಸಾವಿನಿಂದ ಹೆಚ್ಚಿನ ಪ್ರಮಾಣದ ಪ್ರಯೋಜನ ಪಡೆಯುವುದರಿಂದ ಅವನ ಮೇಲೆ ಸಂಶಯ ಪಟ್ಟು ಈ ಕಥೆ ಹೆಣೆದಿರಲಾಗಿರುತ್ತದೆ. ಇದು ಒಂದು ಕಲ್ಪನೆ ಮಾತ್ರ. ಇದಕ್ಕೆ ಯಾವ ಆಧಾರಗಳು ಇರುವುದಿಲ್ಲ.]

Saturday, February 5, 2022

ತಾಯಿ ಎನ್ನುವ ಸತ್ಯ, ತಂದೆ ಎನ್ನುವ ನಂಬಿಕೆ, ಮನುಷ್ಯತ್ವ ಎನ್ನುವ ವಿಶಾಲ ಪ್ರೇಮ

ಇತ್ತೀಚಿಗೆ ಬಿಡುಗಡೆಯಾದ 'ರತ್ನನ ಪ್ರಪಂಚ' ಎನ್ನುವ ಕನ್ನಡ ಚಿತ್ರ ನೋಡಿದೆ. ಅದರಲ್ಲಿ ಆ ಚಿತ್ರದ ನಾಯಕನಿಗೆ ತಾನು ದತ್ತು ಪುತ್ರ ಎನ್ನುವ ವಿಷಯ ಗೊತ್ತಾಗಿ, ತನ್ನ ಹಡೆದವರನ್ನು ಮತ್ತು ಒಡಹುಟ್ಟಿದವರನ್ನು ಗುರುತಿಸುವ ಪ್ರಯತ್ನಕ್ಕೆ ಇಳಿಯುತ್ತಾನೆ. ಮೊದಲಿಗೆ ತನಗೆ ಅಕ್ಕ ಇರುವ ವಿಷಯ ಗೊತ್ತಾಗಿ ಅವಳನ್ನು ಹುಡುಕಿಕೊಂಡು ಹೋಗುತ್ತಾನೆ. ಅವಳು ಅವನನ್ನು ಗುರುತಿಸಿದರೂ ತೋರಗೊಡದೆ , ಕೊನೆಗೆ 'ಜೊತೆಗೆ ಆಡಲಿಲ್ಲ, ಬೆಳೆಯಲಿಲ್ಲ, ಕಷ್ಟಕ್ಕೆ ಆಗಲಿಲ್ಲ, ಸುಖಕ್ಕೆ ಆಗಲಿಲ್ಲ, ನೀನ್ಯಾವ ಸೀಮೆ ತಮ್ಮ?' ಎಂದು ದಬಾಯಿಸಿಯೇ ಬಿಡುತ್ತಾಳೆ. ಅವನ ತಮ್ಮನನ್ನು ಹುಡುಕಿಕೊಂಡು ಹೋದ ಮೇಲೆ ಅದೇ ತರಹದ ಅನುಭವ ಆಗುತ್ತದೆ. ಕೊನೆಗೆ ತನ್ನ ಹೆತ್ತ ತಾಯಿಯನ್ನು ಹುಡುಕುತ್ತಾನೆ. ಅಷ್ಟರಲ್ಲಿ ತನ್ನ ಸಾಕು ತಾಯಿ ಸತ್ತ ಸುದ್ದಿ ಬರುತ್ತದೆ. ಆಗ ಅವನಿಗೆ ಸಾಕು ತಾಯಿಯ ಪ್ರೇಮದ ನೆನಪಾಗಿ, ಹೆತ್ತ ತಾಯಿಗೆ ವಿಷಯ ತಿಳಿಸದೇ ಸಾಕು ತಾಯಿಯ ಅಂತ್ಯಸಂಸ್ಕಾರಕ್ಕೆ ಹೊರಡುತ್ತಾನೆ.

 

ವಿಚಾರ ಮಾಡಿ ನೋಡಿ. ಹೆತ್ತ ತಾಯಿಯ ಪ್ರೀತಿ ದೊಡ್ಡದೋ? ಸಾಕು ತಾಯಿಯ ಪ್ರೀತಿ ದೊಡ್ಡದೋ? ಕೃಷ್ಣನ ಹಡೆದ ತಾಯಿ ದೇವಕಿಯ ಪ್ರೀತಿ ದೊಡ್ಡದೋ ಅಥವಾ ಅವನನ್ನು ಬೆಳೆಸಿದ ತಾಯಿ ಯಶೋದೆಯ ಪ್ರೀತಿ ದೊಡ್ಡದೋ? ನೀವು ಅದೇ ಪ್ರಶ್ನೆ ನನಗೆ ಕೇಳಿದರೆ ನಾನು ಖಂಡಿತ ಯಶೋದೆಯ ಪ್ರೀತಿಯ ದೊಡ್ಡದು ಎನ್ನುವ ಉತ್ತರ ಕೊಡುತ್ತೇನೆ. ದೈಹಿಕ-ರಕ್ತ ಸಂಬಂಧಗಳನ್ನು ಮೀರಿ ತೋರಿಸುವ ಪ್ರೀತಿ ನಿಜವಾದ ಮನುಷ್ಯತ್ವವನ್ನು ಅನಾವರಣಗೊಳಿಸುತ್ತದೆ ಎನ್ನುವ ನಂಬಿಕೆ ನನ್ನದು.

 

ತಾಯಿ ಬಿಟ್ಟು ತಂದೆ ವಿಷಯಕ್ಕೆ ಬರೋಣ. ಎಲ್ಲ ತಾಯಂದಿರಿಗೂ ತಮ್ಮ ಮಕ್ಕಳನ್ನು ತಾವು ಹೊತ್ತು ಹೆತ್ತಿರುತ್ತಾದ್ದರಿಂದ ತಾವೇ ಅವರ ತಾಯಿ ಎನ್ನುವ ಸತ್ಯ ಅವರಿಗೆ ಗೊತ್ತಿರುತ್ತದೆ. ಆದರೆ ತಂದೆಗೆ ಅದು ನಂಬಿಕೆ ಮಾತ್ರ. ಮಗು ಹುಟ್ಟಿದಾಗ ಕಣ್ಣು ತಂದೆಯ ಹಾಗೆ, ಮೂಗು ಅಜ್ಜನ ಹಾಗೆ ಎಂದು ನಂಬಿಕೆ ಹುಟ್ಟಿಸುವ ಪ್ರಯತ್ನ ಆರಂಭ ಆಗುತ್ತದೆ. ಆಗ ಅವನ ಹೆಂಡತಿ ಮಗುವನ್ನು ಕೈಯಲ್ಲಿ ಕೊಟ್ಟು ನೀನೆ ಅದರ ತಂದೆ ಎಂದರೆ ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಅವನಿಗೆ ಅನುಮಾನ ಇದ್ದರೆ, ಇಂದಿನ ಆಧುನಿಕ ಕಾಲದ ವೈದ್ಯಕೀಯ ಪರೀಕ್ಷೆಗಳು ಕೂಡ ಸಂಪೂರ್ಣ ನಿಖರತೆಯಿಂದ ಯಾವುದನ್ನೂ ಸಾಬೀತು ಪಡಿಸಲಾರವು. ಇನ್ನು ಹಳೆಯ ಕಾಲದಲ್ಲಿ ಯಾವ ಪರೀಕ್ಷೆಗಳು ಇದ್ದವು? ಆದರೂ ಆಧಾರದ ಅವಶ್ಯಕತೆ ಇಲ್ಲದ, ಮಕ್ಕಳ ಮೇಲೆ ಮಮಕಾರ ತೋರುವ ತಂದೆಯ ಪ್ರೀತಿ ಯಾವ ತಾಯಿಗೂ ಕಮ್ಮಿ ಇಲ್ಲ ಎಂದೇ ಹೇಳಬಹುದು. 'ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇಲ್ಲ' ಎನ್ನುವ ನಾಣ್ಣುಡಿಯಿದೆ. ಆದರೆ ತಾಯಿ ಸಣ್ಣ ವಯಸ್ಸಿನಲ್ಲೇ ತೀರಿಕೊಂಡು, ಬರೀ ತಂದೆ ಮಾತ್ರ ಬೆಳೆಸಿದ ಹೆಣ್ಣು ಮಕ್ಕಳನ್ನು ಒಮ್ಮೆ ನೋಡಿಕೊಂಡು ಬನ್ನಿ. ಅವರು ಸಮಾಜಕ್ಕೆ ಮಾದರಿ ಎನ್ನುವ ಹಾಗಿರುತ್ತಾರೆ. ಈಗ ಹೇಳಿ, ತನ್ನದೇ ಮಗು ಎನ್ನುವ ಸತ್ಯ ಗೊತ್ತಿರುವ ತಾಯಿಯ ಪ್ರೀತಿ ದೊಡ್ಡದೋ? ಅಥವಾ ಬರೀ ನಂಬಿಕೆಯ ಮೇಲೆ ಪ್ರೀತಿ ತೋರಿಸುವ ತಂದೆಯ ಪ್ರೀತಿ ದೊಡ್ಡದೋ?

 

ಮನುಷ್ಯನ ಇತಿಹಾಸ ಎಷ್ಟು ಹಳೆಯದೋ, ಅನೈತಿಕ ಸಂಬಂಧಗಳು ಕೂಡ ಅಷ್ಟೇ ಹಳೆಯವು. ಅನೈತಿಕ ಸಂಬಂಧಗಳು ಎಷ್ಟೋ ಕುಟುಂಬಗಳ ವೈಷಮ್ಯಕ್ಕೆ, ಕೊಲೆಗಳಿಗೆ ಕಾರಣವಾಗಿವೆ. ಅದೇ ಕಾರಣಕ್ಕೆ ರಾಜ ಮಹಾರಾಜರು ತಮ್ಮ ಅಂತಃಪುರಕ್ಕೆ ನಪುಂಸಕರನ್ನು ಕಾವಲಿಗೆ ಇಡುತ್ತಿರಲಿಲ್ಲವೇ? ಅದೇ ಸಾಮಾನ್ಯ ಮನುಷ್ಯ ತನ್ನ ಹೆಂಡತಿಯನ್ನು ಕಾವಲು ಕಾಯುತ್ತ ಕೂಡಲು ಸಾಧ್ಯವೇ? ಇಷ್ಟಕ್ಕೂ ಹೆಣ್ಣು ಚಂಚಲೆ ಆದರೆ ಅವಳಿಗೆ ಕಾವಲು ಕಾಯುವ ಗಂಡಸನ್ನು ಮೂರ್ಖನನ್ನಾಗಿ ಮಾಡಲು ಎಷ್ಟು ಹೊತ್ತು ಬೇಕು? ಆದರೂ ಗಂಡ-ಹೆಂಡತಿ ಸಂಬಂಧಗಳು ನಂಬಿಕೆ ಮೇಲೆಯೇ ನಿಂತಿವೆ. ತಾಯಿಗೆ ಮಾತ್ರ ಸತ್ಯ ಗೊತ್ತಿದೆ. ಆದರೆ ಕೇವಲ ನಂಬಿಕೆಯ ಆಧಾರದ ಮೇಲೆಯೇ ಮಕ್ಕಳ ಜವಾಬ್ದಾರಿಯನ್ನು ತಂದೆ ಹೊರುತ್ತಾನೆ.

 

ತಾಯಿಗೆ ಸತ್ಯ ಮತ್ತು ತಂದೆಗೆ ನಂಬಿಕೆ ದೊಡ್ಡದಾದರೆ, ಮಕ್ಕಳಿಲ್ಲದ ದಂಪತಿಗಳು ತಮಗೆ ಹುಟ್ಟಿರದ ಮಗುವನ್ನು ಏಕೆ ದತ್ತು ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ? ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಾವು ಸ್ವತಃ ಮದುವೆ ಆಗದಿದ್ದರೂ, ಬೇರೆಯವರ ಸಾವಿರಾರು ಮಕ್ಕಳನ್ನು ತಮ್ಮ ಮಕ್ಕಳ ಹಾಗೆ ಮಠದಲ್ಲಿಟ್ಟುಕೊಂಡು ಮುದ್ದೆ-ಬುದ್ಧಿ ಕೊಟ್ಟು ಬೆಳೆಸಲಿಲ್ಲವೇ? ಅವರಿಗಿದ್ದಿದ್ದು ರಕ್ತ ಸಂಬಂಧಗಳ ಹಂಗಲ್ಲ.

 

ತಾಯಿಗೆ ಸತ್ಯ, ತಂದೆಗೆ ನಂಬಿಕೆ ಊರುಗೋಲಾದರೆ, ತಾಯಿ-ತಂದೆ ಪ್ರೀತಿಯನ್ನು ಮೀರಿ ಸಮಾಜವನ್ನು ಸಲಹಿದ ನೂರಾರು ಸಾಧು-ಸಂತರಿದ್ದಾರೆ. ಅವರು ತೋರಿದ ಮನುಷ್ಯತ್ವದ ಪಾಠ ದೊಡ್ಡದು. ನಮ್ಮ ನಿಮ್ಮ ನಡುವೆ ಕ್ಷುಲ್ಲಕವಾಗಿ ನಡೆದುಕೊಳ್ಳುವ ಮನುಜರ ನಡುವೆಯೂ ಸಿದ್ಧಗಂಗೆಯ ಶ್ರೀಗಳು, ಧರ್ಮಸ್ಥಳದ ಹೆಗ್ಗಡೆಯವರು ಇದ್ದಾರೆ ಎನ್ನುವುದೇ ಸಮಾಧಾನದ ವಿಷಯ. ಮನೆ ಮುರಿಯುವ ಸಮಾಜ ಘಾತುಕರ ನಡುವೆಯೂ, ಮನೆ ಉಳಿಸುವ, ಸಮಾಜ ಬೆಳೆಸುವ ಶರಣರು ಮನುಷ್ಯತ್ವ ಎನ್ನುವ ವಿಶಾಲ ಪ್ರೇಮ ಅಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅವರಿಗೊಂದು ಶರಣು.