ಜಗತ್ತನ್ನೇ ಗೆಲ್ಲ ಹೋರಾಟ ಮಹತ್ವಾಕಾಂಕ್ಷಿಗಳಲ್ಲಿ ಮೂವರು ಪ್ರಮುಖರು: ಅಲೆಕ್ಸಾಂಡರ್, ನೆಪೋಲಿಯನ್ ಮತ್ತು ಹಿಟ್ಲರ್. ಅವರ ಪೀಳಿಗೆ ಇನ್ನು ಮುಗಿದು ಹೋಗಿಲ್ಲ ಎನ್ನುವಂತೆ, ಆ ಸಾಲಿಗೆ ಸೇರಲು ಇಂದಿನ ಕಾಲಮಾನದ ಇಬ್ಬರು ತಯಾರಾಗಿ ನಿಂತಿದ್ದಾರೆ. ಅವರು ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್. ಅವರೆಲ್ಲರ ವ್ಯಕ್ತಿತ್ವಗಳಲ್ಲಿ ಸಮಾನವಾಗಿ ಕಂಡು ಬರುವ ಅಂಶಗಳು ಕೆಲವಿವೆ. ಮೊದಲಿಗೆ ಸರ್ವಾಧಿಕಾರ, ಅವರನ್ನು ಯಾರೂ ಎದುರು ಹಾಕಿಕೊಳ್ಳುವ ಹಾಗೆ ಇಲ್ಲ. ಅವರುಗಳ ಹಿಂದೆ ಬಲಿಷ್ಠ ಸೈನ್ಯಗಳಿವೆ. ಅವರಿಗೆ ಅವಶ್ಯಕತೆಗೆ ತಕ್ಕಂತೆ ಸ್ನೇಹಿತರು. ಸಮಯ, ಸನ್ನಿವೇಶ ಬದಲಾದರೆ ತಮ್ಮ ಸ್ನೇಹಿತರನ್ನು ಯಾವುದೇ ಮುಲಾಜಿಲ್ಲದೆ ಮುಗಿಸಿ ಹಾಕುತ್ತಾರೆ. ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ಅಗಾಧ ನಂಬಿಕೆ. ಸಾಮಾನ್ಯ ಜನ ಎದುರಿಸಲಾಗದ ಅಪಾಯಗಳನ್ನು ಅವರುಗಳು ಸುಲಭವಾಗಿ ನಿಭಾಯಿಸುತ್ತಾರೆ. ಕಾನೂನುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ತಮ್ಮ ದೇಶದ ಜನರನ್ನು ಪ್ರಭಾವದಿಂದಲೋ ಇಲ್ಲವೇ ಬೆದರಿಸಿಯೋ ತಮ್ಮ ಕೆಲಸಗಳಿಗೆ ಸಹಕಾರ ನೀಡುವಂತೆ ಮತ್ತು ಪ್ರತಿಭಟಿಸದಂತೆ ನೋಡಿಕೊಳ್ಳುತ್ತಾರೆ. ಅವರು ತಮ್ಮ ಆಸೆಗಳನ್ನು ಸಾಕಾರಗೊಳಿಸಿಕೊಳ್ಳುವುದರಲ್ಲಿ ಯಶಸ್ಸು ಕಾಣುತ್ತಾರೋ ಇಲ್ಲವೋ ಆದರೆ ಅವರ ಅಂತ್ಯ ಮಾತ್ರ ದಾರುಣವಾಗಿರುತ್ತದೆ.
ಕುದುರೆಯ ಬೆನ್ನೇರಿ, ಸುಮಾರು ಮೂವತ್ತು ಸಾವಿರ ಕಿ.ಮೀ. ದೂರವನ್ನು ತನ್ನ ಸೈನ್ಯದೊಂದಿಗೆ ಕ್ರಮಿಸಿ, ಒಂದರ ನಂತರ ಇನ್ನೊಂದರಂತೆ ಯುದ್ಧಗಳನ್ನು ಅಲೆಕ್ಸಾಂಡರ್ ಗೆಲ್ಲಲ್ಲು ಸಾಧ್ಯವಾಗಿದ್ದು ಅವನ ಮೇಲೆ ವಿಪರೀತ ಅಭಿಮಾನ ಹೊಂದಿದ ಸೈನ್ಯದಿಂದ. ಆದರೆ ಯುದ್ಧ ಬಿಟ್ಟು ಬೇರೇನೂ ಮಾಡಲೊಲ್ಲದ ಅಲೆಕ್ಸಾಂಡರ್ ಕೊನೆಯುಸಿರೆಳೆದಾಗ ಅವನ ಹೆಣ ಅವನ ತಾಯ್ನಾಡು ತಲುಪಲಿಲ್ಲ. ಆಮೇಲೆ ಎಷ್ಟೋ ವರುಶಗಳವರೆಗೆ ಅವನ ದಂಡನಾಯಕರು ಅಲೆಕ್ಸಾಂಡರ್ ನ ಕಿರೀಟವನ್ನು ನ್ಯಾಯಸ್ಥಾನದಲ್ಲಿ ಇಟ್ಟು ತಮ್ಮ ಅಧಿಕಾರ ಮುಂದುವರೆಸಿದರು.
ರಣರಂಗದಲ್ಲಿ ಚಾಣಕ್ಷತೆಯಿಂದ, ಎದುರಾಳಿಗಳಲ್ಲಿ ಗೊಂದಲವೆಬ್ಬಿಸುತ್ತ ಶತ್ರು ಸೈನ್ಯವನ್ನು ಧೂಳಿಪಠ ಮಾಡುತ್ತ ಹಲವಾರು ಯುದ್ಧಗಳನ್ನು ಗೆದ್ದ ನೆಪೋಲಿಯನ್ ಮಾನವ ಜಗತ್ತು ಕಂಡ ಯುದ್ಧ ತಂತ್ರಗಾರಿಕೆಯ ನಿಪುಣ. ಆದರೆ ಅವನ ಅಂತ್ಯವೂ ಹಾಗೆ ಇತ್ತು. ಮಾನವ ಸಂಪರ್ಕ ಇಲ್ಲದೆ ಒಂದು ದ್ವೀಪದಲ್ಲಿ ಬಂದಿಯಾಗಿ ಕೊನೆ ಉಸಿರೆಳೆದ ಆ ನಿಪುಣ.
ಜರ್ಮನಿ ಜನರನ್ನು ತನ್ನ ಮೋಡಿಗೆ ಸಿಲುಕಿಸಿ ಅಧಿಕಾರ ಪಡೆದುಕೊಂಡು, ಎಂತಹ ಯುದ್ಧಗಳಿಗಾದರೂ ಸೈ ಎನ್ನುವಂತಹ ಬಲಿಷ್ಠ ಸೇನೆಯನ್ನು ಮುಂದಿಟ್ಟುಕೊಂಡು ಯುರೋಪ್ ನ ಎಲ್ಲ ರಾಷ್ತ್ರಗಳಿಗೂ ಸಿಂಹ ಸ್ವಪ್ನ ಎನಿಸಿದ ಹಿಟ್ಲರ್, ಸೋತು ಹೋದಾಗ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.
ಆದರೆ ಯುದ್ಧ ಘೋಷಣೆ ಮಾಡುವ, ಉತ್ಸಾಹದಿಂದ ರಣರಂಗಕ್ಕೆ ಇಳಿಯುವ ವೀರರು ಇಂದಿಗೂ ಇದ್ದಾರೆ. ರಷ್ಯಾ ಮತ್ತು ಚೀನಾ ದೇಶಗಳು ಅತ್ಯಾಧುನಿಕ ಎನಿಸುವ ತಂತ್ರಜ್ಞಾನ ಹೊಂದಿದ ಕ್ಷಿಪಣಿಗಳನ್ನು ಹೊಂದಿದ್ದಾರೆ. ಯಾವುದೇ ಜನ ಸಮುದಾಯವನ್ನು ನಾಶ ಪಡಿಸಬಲ್ಲ ಪರಮಾಣು ಬಾಂಬ್ ಗಳನ್ನೂ ಹೊಂದಿದ್ದಾರೆ. ಎಲ್ಲಕ್ಕೂ ಮಿಗಿಲೆನ್ನುವಂತೆ ಎಂತಹ ಎದುರಾಳಿಗಳನ್ನು ಬೇಕಾದರೂ ನಾಶ ಮಾಡುವ ಉತ್ಸಾಹದ ಮಾತುಗಳನ್ನು ಮತ್ತು ಯುದ್ಧ ಪ್ರಚೋದಿಸುವ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ. ರಷ್ಯಾ ದೇಶದ ಪುಟಿನ್ ಮತ್ತು ಚೀನಾದ ಕ್ಸಿ ಜಿಂಪಿಂಗ್ ತಮ್ಮ ದೇಶದಲ್ಲಿ ಸರ್ವಾಧಿಕಾರಿಗಳು. ಆದರೆ ಅವರಿಗೆ ಅಷ್ಟಕ್ಕೇ ತೃಪ್ತಿಯಿಲ್ಲ. ಮೊದಲಿಗೆ ನೆರೆ ದೇಶಗಳನ್ನು, ನಂತರ ಜಗತ್ತನ್ನೇ ಗೆಲ್ಲುವ ಮಹದಾಸೆ ಅವರದು.
"ಧಾಳಿಕೋರನಿಗೆ ಯಾವ ಧರ್ಮ" ಎಂದ ಅಲ್ಲಮಪ್ರಭುಗಳು "ಸಾಸಿವೆ ಸುಖಕ್ಕೆ ಸಾಗರದಷ್ಟು ದುಃಖ ನೋಡಾ" ಎಂದೂ ಕೂಡ ಹೇಳಿದ್ದಾರೆ. ಯಾರೋ ಒಬ್ಬ ಸರ್ವಾಧಿಕಾರಿ ಗೆದ್ದ ದೊಡ್ಡಸ್ತಿಕೆ ತೋರಲು ಸಾವಿರಾರು ಜನ ಪ್ರಾಣ ಕಳೆದುಕೊಳ್ಳಬೇಕು. ಲಕ್ಷಾಂತರ ಜನ ಮನೆ-ಆಸ್ತಿ ಕಳೆದುಕೊಂಡು ಊರು ಬಿಟ್ಟು ಸುರಕ್ಷಿತ ಜಾಗಕ್ಕೆ ತಲುಪಬೇಕು. ಯುದ್ಧ ತರುವ ಸಾವು-ನೋವು ಅಪಾರ. ಆದರೆ ಮನುಷ್ಯನ ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಯುದ್ಧದ ಅತಿರೇಕವೂ ಒಂದು.
ಮನುಷ್ಯ ನಾಗರಿಕತೆಯೆಡೆಗೆ ಹೆಜ್ಜೆ ಇಟ್ಟರೆ, ಅವನನ್ನು ಹಿಂದಕ್ಕೆ ಎಳೆದು ತರದೇ ಬಿಡುವುದಿಲ್ಲ ಈ ಸರ್ವಾಧಿಕಾರಿಗಳು. ಅವರು ಕೂಡ ಸಮಾಜದ ಪ್ರತೀಕ ಅಲ್ಲವೇ.
No comments:
Post a Comment