Saturday, February 5, 2022

ತಾಯಿ ಎನ್ನುವ ಸತ್ಯ, ತಂದೆ ಎನ್ನುವ ನಂಬಿಕೆ, ಮನುಷ್ಯತ್ವ ಎನ್ನುವ ವಿಶಾಲ ಪ್ರೇಮ

ಇತ್ತೀಚಿಗೆ ಬಿಡುಗಡೆಯಾದ 'ರತ್ನನ ಪ್ರಪಂಚ' ಎನ್ನುವ ಕನ್ನಡ ಚಿತ್ರ ನೋಡಿದೆ. ಅದರಲ್ಲಿ ಆ ಚಿತ್ರದ ನಾಯಕನಿಗೆ ತಾನು ದತ್ತು ಪುತ್ರ ಎನ್ನುವ ವಿಷಯ ಗೊತ್ತಾಗಿ, ತನ್ನ ಹಡೆದವರನ್ನು ಮತ್ತು ಒಡಹುಟ್ಟಿದವರನ್ನು ಗುರುತಿಸುವ ಪ್ರಯತ್ನಕ್ಕೆ ಇಳಿಯುತ್ತಾನೆ. ಮೊದಲಿಗೆ ತನಗೆ ಅಕ್ಕ ಇರುವ ವಿಷಯ ಗೊತ್ತಾಗಿ ಅವಳನ್ನು ಹುಡುಕಿಕೊಂಡು ಹೋಗುತ್ತಾನೆ. ಅವಳು ಅವನನ್ನು ಗುರುತಿಸಿದರೂ ತೋರಗೊಡದೆ , ಕೊನೆಗೆ 'ಜೊತೆಗೆ ಆಡಲಿಲ್ಲ, ಬೆಳೆಯಲಿಲ್ಲ, ಕಷ್ಟಕ್ಕೆ ಆಗಲಿಲ್ಲ, ಸುಖಕ್ಕೆ ಆಗಲಿಲ್ಲ, ನೀನ್ಯಾವ ಸೀಮೆ ತಮ್ಮ?' ಎಂದು ದಬಾಯಿಸಿಯೇ ಬಿಡುತ್ತಾಳೆ. ಅವನ ತಮ್ಮನನ್ನು ಹುಡುಕಿಕೊಂಡು ಹೋದ ಮೇಲೆ ಅದೇ ತರಹದ ಅನುಭವ ಆಗುತ್ತದೆ. ಕೊನೆಗೆ ತನ್ನ ಹೆತ್ತ ತಾಯಿಯನ್ನು ಹುಡುಕುತ್ತಾನೆ. ಅಷ್ಟರಲ್ಲಿ ತನ್ನ ಸಾಕು ತಾಯಿ ಸತ್ತ ಸುದ್ದಿ ಬರುತ್ತದೆ. ಆಗ ಅವನಿಗೆ ಸಾಕು ತಾಯಿಯ ಪ್ರೇಮದ ನೆನಪಾಗಿ, ಹೆತ್ತ ತಾಯಿಗೆ ವಿಷಯ ತಿಳಿಸದೇ ಸಾಕು ತಾಯಿಯ ಅಂತ್ಯಸಂಸ್ಕಾರಕ್ಕೆ ಹೊರಡುತ್ತಾನೆ.

 

ವಿಚಾರ ಮಾಡಿ ನೋಡಿ. ಹೆತ್ತ ತಾಯಿಯ ಪ್ರೀತಿ ದೊಡ್ಡದೋ? ಸಾಕು ತಾಯಿಯ ಪ್ರೀತಿ ದೊಡ್ಡದೋ? ಕೃಷ್ಣನ ಹಡೆದ ತಾಯಿ ದೇವಕಿಯ ಪ್ರೀತಿ ದೊಡ್ಡದೋ ಅಥವಾ ಅವನನ್ನು ಬೆಳೆಸಿದ ತಾಯಿ ಯಶೋದೆಯ ಪ್ರೀತಿ ದೊಡ್ಡದೋ? ನೀವು ಅದೇ ಪ್ರಶ್ನೆ ನನಗೆ ಕೇಳಿದರೆ ನಾನು ಖಂಡಿತ ಯಶೋದೆಯ ಪ್ರೀತಿಯ ದೊಡ್ಡದು ಎನ್ನುವ ಉತ್ತರ ಕೊಡುತ್ತೇನೆ. ದೈಹಿಕ-ರಕ್ತ ಸಂಬಂಧಗಳನ್ನು ಮೀರಿ ತೋರಿಸುವ ಪ್ರೀತಿ ನಿಜವಾದ ಮನುಷ್ಯತ್ವವನ್ನು ಅನಾವರಣಗೊಳಿಸುತ್ತದೆ ಎನ್ನುವ ನಂಬಿಕೆ ನನ್ನದು.

 

ತಾಯಿ ಬಿಟ್ಟು ತಂದೆ ವಿಷಯಕ್ಕೆ ಬರೋಣ. ಎಲ್ಲ ತಾಯಂದಿರಿಗೂ ತಮ್ಮ ಮಕ್ಕಳನ್ನು ತಾವು ಹೊತ್ತು ಹೆತ್ತಿರುತ್ತಾದ್ದರಿಂದ ತಾವೇ ಅವರ ತಾಯಿ ಎನ್ನುವ ಸತ್ಯ ಅವರಿಗೆ ಗೊತ್ತಿರುತ್ತದೆ. ಆದರೆ ತಂದೆಗೆ ಅದು ನಂಬಿಕೆ ಮಾತ್ರ. ಮಗು ಹುಟ್ಟಿದಾಗ ಕಣ್ಣು ತಂದೆಯ ಹಾಗೆ, ಮೂಗು ಅಜ್ಜನ ಹಾಗೆ ಎಂದು ನಂಬಿಕೆ ಹುಟ್ಟಿಸುವ ಪ್ರಯತ್ನ ಆರಂಭ ಆಗುತ್ತದೆ. ಆಗ ಅವನ ಹೆಂಡತಿ ಮಗುವನ್ನು ಕೈಯಲ್ಲಿ ಕೊಟ್ಟು ನೀನೆ ಅದರ ತಂದೆ ಎಂದರೆ ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಅವನಿಗೆ ಅನುಮಾನ ಇದ್ದರೆ, ಇಂದಿನ ಆಧುನಿಕ ಕಾಲದ ವೈದ್ಯಕೀಯ ಪರೀಕ್ಷೆಗಳು ಕೂಡ ಸಂಪೂರ್ಣ ನಿಖರತೆಯಿಂದ ಯಾವುದನ್ನೂ ಸಾಬೀತು ಪಡಿಸಲಾರವು. ಇನ್ನು ಹಳೆಯ ಕಾಲದಲ್ಲಿ ಯಾವ ಪರೀಕ್ಷೆಗಳು ಇದ್ದವು? ಆದರೂ ಆಧಾರದ ಅವಶ್ಯಕತೆ ಇಲ್ಲದ, ಮಕ್ಕಳ ಮೇಲೆ ಮಮಕಾರ ತೋರುವ ತಂದೆಯ ಪ್ರೀತಿ ಯಾವ ತಾಯಿಗೂ ಕಮ್ಮಿ ಇಲ್ಲ ಎಂದೇ ಹೇಳಬಹುದು. 'ಪ್ರಪಂಚದಲ್ಲಿ ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇಲ್ಲ' ಎನ್ನುವ ನಾಣ್ಣುಡಿಯಿದೆ. ಆದರೆ ತಾಯಿ ಸಣ್ಣ ವಯಸ್ಸಿನಲ್ಲೇ ತೀರಿಕೊಂಡು, ಬರೀ ತಂದೆ ಮಾತ್ರ ಬೆಳೆಸಿದ ಹೆಣ್ಣು ಮಕ್ಕಳನ್ನು ಒಮ್ಮೆ ನೋಡಿಕೊಂಡು ಬನ್ನಿ. ಅವರು ಸಮಾಜಕ್ಕೆ ಮಾದರಿ ಎನ್ನುವ ಹಾಗಿರುತ್ತಾರೆ. ಈಗ ಹೇಳಿ, ತನ್ನದೇ ಮಗು ಎನ್ನುವ ಸತ್ಯ ಗೊತ್ತಿರುವ ತಾಯಿಯ ಪ್ರೀತಿ ದೊಡ್ಡದೋ? ಅಥವಾ ಬರೀ ನಂಬಿಕೆಯ ಮೇಲೆ ಪ್ರೀತಿ ತೋರಿಸುವ ತಂದೆಯ ಪ್ರೀತಿ ದೊಡ್ಡದೋ?

 

ಮನುಷ್ಯನ ಇತಿಹಾಸ ಎಷ್ಟು ಹಳೆಯದೋ, ಅನೈತಿಕ ಸಂಬಂಧಗಳು ಕೂಡ ಅಷ್ಟೇ ಹಳೆಯವು. ಅನೈತಿಕ ಸಂಬಂಧಗಳು ಎಷ್ಟೋ ಕುಟುಂಬಗಳ ವೈಷಮ್ಯಕ್ಕೆ, ಕೊಲೆಗಳಿಗೆ ಕಾರಣವಾಗಿವೆ. ಅದೇ ಕಾರಣಕ್ಕೆ ರಾಜ ಮಹಾರಾಜರು ತಮ್ಮ ಅಂತಃಪುರಕ್ಕೆ ನಪುಂಸಕರನ್ನು ಕಾವಲಿಗೆ ಇಡುತ್ತಿರಲಿಲ್ಲವೇ? ಅದೇ ಸಾಮಾನ್ಯ ಮನುಷ್ಯ ತನ್ನ ಹೆಂಡತಿಯನ್ನು ಕಾವಲು ಕಾಯುತ್ತ ಕೂಡಲು ಸಾಧ್ಯವೇ? ಇಷ್ಟಕ್ಕೂ ಹೆಣ್ಣು ಚಂಚಲೆ ಆದರೆ ಅವಳಿಗೆ ಕಾವಲು ಕಾಯುವ ಗಂಡಸನ್ನು ಮೂರ್ಖನನ್ನಾಗಿ ಮಾಡಲು ಎಷ್ಟು ಹೊತ್ತು ಬೇಕು? ಆದರೂ ಗಂಡ-ಹೆಂಡತಿ ಸಂಬಂಧಗಳು ನಂಬಿಕೆ ಮೇಲೆಯೇ ನಿಂತಿವೆ. ತಾಯಿಗೆ ಮಾತ್ರ ಸತ್ಯ ಗೊತ್ತಿದೆ. ಆದರೆ ಕೇವಲ ನಂಬಿಕೆಯ ಆಧಾರದ ಮೇಲೆಯೇ ಮಕ್ಕಳ ಜವಾಬ್ದಾರಿಯನ್ನು ತಂದೆ ಹೊರುತ್ತಾನೆ.

 

ತಾಯಿಗೆ ಸತ್ಯ ಮತ್ತು ತಂದೆಗೆ ನಂಬಿಕೆ ದೊಡ್ಡದಾದರೆ, ಮಕ್ಕಳಿಲ್ಲದ ದಂಪತಿಗಳು ತಮಗೆ ಹುಟ್ಟಿರದ ಮಗುವನ್ನು ಏಕೆ ದತ್ತು ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ? ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ತಾವು ಸ್ವತಃ ಮದುವೆ ಆಗದಿದ್ದರೂ, ಬೇರೆಯವರ ಸಾವಿರಾರು ಮಕ್ಕಳನ್ನು ತಮ್ಮ ಮಕ್ಕಳ ಹಾಗೆ ಮಠದಲ್ಲಿಟ್ಟುಕೊಂಡು ಮುದ್ದೆ-ಬುದ್ಧಿ ಕೊಟ್ಟು ಬೆಳೆಸಲಿಲ್ಲವೇ? ಅವರಿಗಿದ್ದಿದ್ದು ರಕ್ತ ಸಂಬಂಧಗಳ ಹಂಗಲ್ಲ.

 

ತಾಯಿಗೆ ಸತ್ಯ, ತಂದೆಗೆ ನಂಬಿಕೆ ಊರುಗೋಲಾದರೆ, ತಾಯಿ-ತಂದೆ ಪ್ರೀತಿಯನ್ನು ಮೀರಿ ಸಮಾಜವನ್ನು ಸಲಹಿದ ನೂರಾರು ಸಾಧು-ಸಂತರಿದ್ದಾರೆ. ಅವರು ತೋರಿದ ಮನುಷ್ಯತ್ವದ ಪಾಠ ದೊಡ್ಡದು. ನಮ್ಮ ನಿಮ್ಮ ನಡುವೆ ಕ್ಷುಲ್ಲಕವಾಗಿ ನಡೆದುಕೊಳ್ಳುವ ಮನುಜರ ನಡುವೆಯೂ ಸಿದ್ಧಗಂಗೆಯ ಶ್ರೀಗಳು, ಧರ್ಮಸ್ಥಳದ ಹೆಗ್ಗಡೆಯವರು ಇದ್ದಾರೆ ಎನ್ನುವುದೇ ಸಮಾಧಾನದ ವಿಷಯ. ಮನೆ ಮುರಿಯುವ ಸಮಾಜ ಘಾತುಕರ ನಡುವೆಯೂ, ಮನೆ ಉಳಿಸುವ, ಸಮಾಜ ಬೆಳೆಸುವ ಶರಣರು ಮನುಷ್ಯತ್ವ ಎನ್ನುವ ವಿಶಾಲ ಪ್ರೇಮ ಅಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅವರಿಗೊಂದು ಶರಣು.

No comments:

Post a Comment