ಬೆಳಗಿನ ಜಾವ ನಾಲ್ಕು ಗಂಟೆ. ಮನೆ ಹೊರಗೆ ನಿಲ್ಲಿಸಿದ ಕಾರು ಯಾವುದೇ ತಕರಾರು ಇಲ್ಲದೆ ಒಂದೇ ಸಲಕ್ಕೆ ಗುರುಗುಟ್ಟತೊಡಗುತ್ತದೆ. ಬೆಂಗಳೂರಿನ ನಿರ್ಜನ ರಸ್ತೆಗಳಲ್ಲಿ ಕಾರು ಓಡಿಸತೊಡಗುತ್ತೇನೆ. ಮುಂದೆ ಅಡ್ಡ ಬರುವವರಿಲ್ಲ. ಹಿಂದೆ ಹಾರ್ನ್ ಹೊಡೆಯುವವರಿಲ್ಲ. ನಿಶಬ್ದ, ಏಕಾಂತ ಬೇಡವೆನಿಸಿ ರೇಡಿಯೋ ಹಚ್ಚುತ್ತೇನೆ. ತಣ್ಣನೆಯ ಕೊರೆಯುವ ಚಳಿಯಲ್ಲಿ ಬೆಚ್ಚನೆಯ ಹಾಡು ಕೇಳಿಸುತ್ತದೆ.
'ಮನಸು ಬರೆದ ಮಧುರ ಗೀತೆ, ನೀನೇ
ಹರೆಯ ಸುರಿದ ಸ್ವಾತಿ ಮುತ್ತು, ನೀನೇ
ಕವಡೆ ಒಳಗೆ ಹನಿಯ ಬೆಸುಗೆ
ಮುತ್ತು ಹಲವು ಬಗೆ'
ನಾನು ಹೋಗಬೇಕಾದ ಜಾಗ ತಲುಪಿ ಆಗಿದೆ. ಹಗಲು ಹೊತ್ತಿನಲ್ಲಿ ಪಾರ್ಕಿಂಗ್ ಸಿಗದ ಆಸ್ಪತ್ರೆ ಬಾಗಿಲ ಮುಂದೆಯೇ ರಾಜಾರೋಷವಾಗಿ ಕಾರು ನಿಲ್ಲಿಸುತ್ತೇನೆ. ಗಿಜಿಗುಡುವ ರಿಸೆಪ್ಶನ್ ನಲ್ಲಿ ಆ ಹೊತ್ತಿನಲ್ಲಿ ಯಾರೂ ಇಲ್ಲ. ಸೆಕ್ಯೂರಿಟಿ ಗಾರ್ಡ್ ಕೂಡ ಮೂಲೆಯಲ್ಲಿ ಹೊದ್ದು ಮಲಗಿದ್ದಾನೆ. ಡಾಕ್ಟರ್ ತಪಾಸಣೆ ನಡೆಸುವ ಕೋಣೆಯಲ್ಲಿ ಜ್ಞಾನಭಾರತಿ ಠಾಣೆಯ ಪೊಲೀಸರು ಒಬ್ಬರನ್ನು ತಪಾಸಣೆಗೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚಿಗೆ ಮಾತನಾಡದ, ಆದರೆ ಸೂಕ್ಷ್ಮಗ್ರಾಹಿಯಾದ, ಅದೇ ಕಾರಣಕ್ಕೆ ಅವರನ್ನು ನಾನು ಗೌರವಿಸುವ ವೈದ್ಯ ಭೂಷಣ್ ತಮ್ಮ ಗಡ್ಡ ಕೆರೆದುಕೊಳ್ಳುತ್ತಾ, ತಲೆ ತಗ್ಗಿಸಿ ರಿಪೋರ್ಟ್ ಬರೆಯುತ್ತಿದ್ದಾರೆ. ನಾನು ಮೊದಲ ಮಹಡಿಗೆ ಹೋಗುತ್ತೇನೆ. ಅಲ್ಲಿ ಟೇಬಲ್ ಮೇಲೆಯೇ ತಲೆಯಿಟ್ಟು ಮಲಗಿದ ನರ್ಸ್ ಅನ್ನು ಎಬ್ಬಿಸಿ ನಾನು ತಂದ ಇಂಜೆಕ್ಷನ್ ಗಳನ್ನು ಕೊಡುತ್ತೇನೆ. ಚಿಕ್ಕ ಮಗನಿಗೆ ಬಂದ ವೈರಲ್ ಫೀವರ್ ದೊಡ್ಡ ಮಗನಿಗೂ ಬಂದಾಗಿದೆ. ವೈದ್ಯರು ತಾಕೀತು ಮಾಡಿದಂತೆ ಬೆಳಿಗ್ಗೆ, ಸಾಯಂಕಾಲ ಇಂಜೆಕ್ಷನ್ ಕೊಡಿಸುವುದಷ್ಟೇ ನನ್ನ ಕೆಲಸ. ಸುತ್ತ ಕಣ್ಣು ಹಾಯಿಸುತ್ತೇನೆ. ಒಂದು ವರುಷದ ಹಸುಳೆಯಿಂದ ತೊಂಬತ್ತರ ವೃದ್ಧರವರೆಗೆ ಒಬ್ಬೊಬ್ಬರು ಒಂದು ಹಾಸಿಗೆ ಹಿಡಿದು ಮಲಗಿದ್ದಾರೆ. ಜೀವನ ಆರಂಭ ಆಗುವುದು ಮತ್ತು ಕೊನೆಗೊಳ್ಳುವುದು ಆಸ್ಪತ್ರೆಯಲ್ಲೇ ಅಲ್ಲವೇ? ಆದರೆ ನಡುವೆ? ಅಲ್ಲಿಂದ ಹೊರ ಬಂದು ಮತ್ತೆ ಕಾರು ಸೇರಿ ಹಾಡು ಕೇಳಲು ತೊಡಗುತ್ತೇನೆ. ರಾತ್ರಿ ಬರಬೇಕಾದ ಹಾಡು ನಸುಕಲ್ಲಿ ಬರುತ್ತಿದೆ.
'ಮಲಗು ಮಲಗು ಚಾರುಲತೆ
ನಿನಗೂ ನೆರಳಿದೆ'
ಮಾಡಲು ಬೇರೆ ಕೆಲಸವಿಲ್ಲದ ನಾನು ಹಾಡು ಗಮನವಿಟ್ಟು ಕೇಳತೊಡುಗುತ್ತೇನೆ.
'ಎತ್ತಣ ಭೂಮಿಯ ಬಂಗಾರ
ಎತ್ತಣ ಮುತ್ತದು ಕಡಲೂರ
ಸೇರಿಸಿ ಪೋಣಿಸೋ ಮಣಿಹಾರ
ಸೃಷ್ಟಿಯ ಸುಂದರ ಹುನ್ನಾರ
ನಾನೆಲ್ಲೋ ನೀನೆಲ್ಲೋ ಇದ್ದವರು
ಈಗೊಂದು ಸೂರಡಿ ಸೇರಿದೆವು'
ಎಲ್ಲೋ ಸಿಗುವ ಬಂಗಾರ, ಮುತ್ತು ಹಾರವಾದಂತೆ ಎಲ್ಲೋ ಹುಟ್ಟಿದ ಗಂಡು-ಹೆಣ್ಣು ಜೊತೆಯಾಗುತ್ತಾರೆ. ಆದರೆ ಎಲ್ಲೋ ಹುಟ್ಟಿದ ನಾನು ಬೆಂಗಳೂರು ಸೇರಿದ್ದು ಸೃಷ್ಟಿಯ ಹುನ್ನಾರವೇ? ಅದೆಲ್ಲ ಏನಿಲ್ಲ. ಹೊಟ್ಟೆಪಾಡು ಅಷ್ಟೇ ಎನ್ನುವ ಹಾಗೆ ರಸ್ತೆಗಿಳಿದಿದ್ದ ಹಾಲು, ಪೇಪರ್ ಹಂಚುವ ಮಿತ್ರರು ಓಡಾಡುತ್ತಿದ್ದರು. ಜೀವನ ಸಾಗುವುದು ಕಾರಲ್ಲಲ್ಲ, ರಸ್ತೆಯ ಮೇಲೆ ಎಂದೆನಿಸಿ ರಸ್ತೆಗೆ ಬಂದು ನಿಂತೆ. ದುಡಿಯುವವರಿಗೆ ಬೆಂಗಳೂರು ಸ್ವರ್ಗ. ಆದರೆ ನೆಮ್ಮದಿ ಕೇಳುವವರಿಗೆ ಅಲ್ಲ. ಚಿಕ್ಕ ಊರುಗಳಲ್ಲಿ ಸ್ಪರ್ಧೆ ಕಡಿಮೆ ಹಾಗೆಯೆ ದುಡಿಮೆ ಕೂಡ. ಅದನ್ನು ಸರಿದೂಗಿಸಲು ಎಂಬಂತೆ ನೆಮ್ಮದಿ ಮಾತ್ರ ಧಾರಾಳ. ಆದರೆ ಎಲ್ಲದಕ್ಕೂ ಕೊನೆ ಎಂಬಂತೆ ಹಣದ ದಾಹ ಇರುವವರೆಗೆ ಮಾತ್ರ ಬೆಂಗಳೂರಿನ ಜಂಜಾಟ ಸಹಿಸಲು ಸಾಧ್ಯ. ಹನ್ನೆರಡನೆಯ ಶತಮಾನದಲ್ಲಿ ಗಿಜಿಗುಡುವ ಬಸವಕಲ್ಯಾಣವನ್ನು ಮತ್ತು ಬಿಜ್ಜಳನ ಅಧಿಕಾರವನ್ನು ಧಿಕ್ಕರಿಸಿ ಶರಣರು ಹೊರನಡೆಯಲಿಲ್ಲವೇ? ಬಸವಣ್ಣನವರು ಕೂಡಲ ಸಂಗಮವನ್ನು ಆಯ್ದುಕೊಂಡರೆ, ಅಕ್ಕ ಮಹಾದೇವಿಯನ್ನು ಕೈ ಬೀಸಿ ಕರೆದದ್ದು ಕದಳೀವನ. ಬೆಂಗಳೂರೆಂಬ ಅನುಭವ ಮಂಟಪ ಸಾಕಾಗುವ ಹೊತ್ತಿಗೆ ನಾನು ಕೂಡ ಇಲ್ಲಿಂದ ಹೊರಹೋಗಬೇಕು.
ಕತ್ತಲು ಮರೆಯಾಗಿ ಬೆಳಕು ಹಬ್ಬಲು ಶುರುವಾಯಿತು. ಬೆಂಗಳೂರು ತನ್ನ ದಿನದ ವ್ಯವಹಾರಕ್ಕೆ ಅಣಿಯಾಗಲು ತೊಡಗಿತ್ತು. 'ಇರುವಷ್ಟು ದಿನವಾದರೂ ಇಲ್ಲಿ ಸಂತೋಷದಿಂದ ಇರು ಮಾರಾಯ' ಎನ್ನುವಂತೆ ಅದು ನನ್ನನ್ನು ನೋಡಿ ನಕ್ಕಂತೆ ಅನಿಸಿತು. ಹತ್ತಿರದ ಹೋಟೆಲ್ ನಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಾ ನಾನು ಕೂಡ ನಗೆ ಬೀರಿದೆ.
No comments:
Post a Comment