Saturday, November 26, 2022

ಎಚ್ಚರವಿರಲಿ ಎಂದ ಬುದ್ಧ ಬೇರೆ ನಿಯಮ ಹೇಳಲಿಲ್ಲ

ಒಂದು ದಿನ ಬುದ್ಧನ ಶಿಷ್ಯ ಆನಂದ ಕೇಳಿದ 'ಒಂದು ವೇಳೆ ಸ್ತ್ರೀ ಎದುರಾದರೆ ಏನು ಮಾಡಬೇಕು?'

 

ಬುದ್ಧ ಉತ್ತರಿಸಿದ 'ನೆಲ ನೋಡಿ ಮಾತನಾಡು. ಅವಳನ್ನು ನೋಡಬೇಡ'

 

ಆನಂದ ಮರುಪ್ರಶ್ನೆ ಹಾಕಿದ 'ಅವಳನ್ನು ನೋಡಿ ಮಾತನಾಡುವ ಅವಶ್ಯಕತೆ ಬಂದರೆ?'

 

'ನೋಡು. ಆದರೆ ಮುಟ್ಟಬೇಡ' ಬುದ್ಧ ಸಮಾಧಾನದಿಂದ ಹೇಳಿದ.

 

ಆನಂದನ ಸವಾಲು ಮುಂದುವರೆಯಿತು 'ಒಂದು ವೇಳೆ ಮುಟ್ಟುವ ಅವಶ್ಯಕತೆ ಬಂದರೆ?'

 

'ಮೈ ಮೇಲೆ ಎಚ್ಚರವಿರಲಿ' ಎಂದು ಹೇಳಿದ ಬುದ್ಧ ಸುಮ್ಮನಾದ. ಮುಂದೆ ಬೇರೆ ಯಾವುದೇ ನಿಯಮ ಹೇಳಲಿಲ್ಲ.

 

ಬುದ್ಧ ಎಚ್ಚರವಿರಲಿ ಎಂದು ಹೇಳಿದ್ದು ನಮ್ಮ ಮನದ ಕಾಮನೆಗಳಿಂದ. ನಮ್ಮ ಮನದಾಸೆಗಳೇ ನಮ್ಮನ್ನು ದುಃಖಕ್ಕೆ ಈಡು ಮಾಡುತ್ತವೆ ಎಂದು ಅವನಾಗಲೇ ಅರಿತಿದ್ದ. ಅದನ್ನೇ ಸರಳವಾಗಿ 'ಆಸೆಯೇ ದುಃಖಕ್ಕೆ ಮೂಲ' ಎಂದು ಕೂಡ ಸಾರಿದ.

 

ಇಂದಿಗೆ ನಮ್ಮ ಸುತ್ತ ಮುತ್ತಲಿನ ಜನಗಳನ್ನೇ ನೋಡಿ. ಬುದ್ಧನ ಮಟ್ಟಿಗೆ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಿನ ಎಚ್ಚರ ಹೊಂದಿರುತ್ತಾರೆ. ಎಚ್ಚರವಿರುವವರು ದುಶ್ಚಟಗಳಿಗೆ ದಾಸರಾಗುವಿದಿಲ್ಲ. ಅವಕಾಶ ಇದ್ದಾಗಲೂ ನಯವಾಗಿ ತಿರಸ್ಕರಿಸಿ  ಮುಂದೆ ಸಾಗುತ್ತಾರೆ. ಎಂತಹ ಕಷ್ಟಗಳೇ ಬರಲಿ, ಅವರು ಕೊಲೆ-ಸುಲಿಗೆಗಳಿಗೆ ಇಳಿಯುವುದಿಲ್ಲ. ಅವರನ್ನು ಕಾಯುತ್ತಿರುವುದು ಅದೇ ಎಚ್ಚರ.

 

ಅದೇ ಎಚ್ಚರ ಇರದ ಮನುಷ್ಯರನ್ನು ನೋಡಿ. ಕುಡಿತಕ್ಕೆ ದಾಸರಾಗಿರುತ್ತಾರೆ. ಜೂಜಾಟಕ್ಕೆ ಮನೆ ಮಾರಲು ಹಿಂದೆ ಮುಂದೆ ನೋಡುವುದಿಲ್ಲ. ತಮ್ಮ ಸ್ವಾರ್ಥಕ್ಕೆ ಯಾರಿಗೆ ಬೇಕಾದರೂ ಅನ್ಯಾಯ ಮಾಡಲು ಹಿಂಜರಿಯುವುದಿಲ್ಲ. ಅವರು ಹೊರಗಡೆ ಎಷ್ಟೇ ಸಂತೋಷದಿಂದ ಇರುವಂತೆ ಕಂಡರೂ ಅದು ತೋರಿಕೆಯದ್ದಾಗಿರುತ್ತದೆ. ಏಕೆಂದರೆ ಸಂತೋಷದಿಂದ ಇರುವವನು ಇನ್ನೊಬ್ಬರಿಗೆ ಅನ್ಯಾಯ ಮಾಡಲು ಹೊರಡುವುದಿಲ್ಲ. ಮನದಲ್ಲಿ ಸಮಾಧಾನ ಇಲ್ಲದವನು ಮಾತ್ರ ಇನ್ನೊಬ್ಬರ ತಂಟೆಗೆ ಹೋಗಲು ಸಾಧ್ಯ.

 

ಎಚ್ಚರದ ಸಾಮರ್ಥ್ಯ ನಮ್ಮ ನಿಮ್ಮಲ್ಲಿ ಬೇರೆ ಬೇರೆ ಮಟ್ಟದಲ್ಲಿ ಇರುತ್ತದೆ. ಅದಕ್ಕೆ ತಕ್ಕಂತೆ ನಮ್ಮ ಸುಖ ಸಂತೋಷಗಳು ಕೂಡ ಬೇರೆ ಬೇರೆ ಮಟ್ಟದಲ್ಲಿ ಇರುತ್ತವೆ. ಅತಿಯಾಸೆ ಪಟ್ಟವನು ಮಾತ್ರ ಹೆಚ್ಚಿನ ದುಃಖ ಹೊಂದಲು ಸಾಧ್ಯ. ಎಚ್ಚರ ವಹಿಸಿ ಆಸೆ ತೊರೆದವನಿಗೆ, ದುಃಖಗಳು ಅಷ್ಟಾಗಿ ಬಾಧಿಸುವುದಿಲ್ಲಆಸೆ ಪಡುವುದನ್ನು ಪ್ರಕೃತಿ ನಮ್ಮಲ್ಲಿ ಸಹಜ ಗುಣ ಧರ್ಮವನ್ನಾಗಿಸಿದೆ. ಆಸೆ ಪಡುವುದು ಸುಲಭ. ಅದನ್ನು ತೊರೆಯುವುದು ದುರ್ಲಭ. ಅದಕ್ಕೆ ಸಾಧಾರಣ ಮನುಷ್ಯ ಆಸೆಗಳ ತಿರುಗಣಿಗೆ ಬಿದ್ದು ಅದರ ಜೊತೆಗೆ ಬರುವ ದುಃಖಗಳನ್ನು ತಾಳಲಾರದೆ ಒದ್ದಾಡುತ್ತಾನೆ. ಅದಕ್ಕೆ ಬುದ್ಧ ಆಸೆಗಳನ್ನು ಹತೋಟಿಯಲ್ಲಿ ಇಟ್ಟುಕೋ ಎಂದ. ಎಚ್ಚರವಿರಲಿ ಎಂದು ಹೇಳಿದ.

 

ಕಷ್ಟದ ನಿರ್ಧಾರಗಳು ಬದುಕನ್ನು ಸುಲಭವಾಗಿಸುತ್ತವೆ. ಆದರೆ ಸುಲಭದ  ನಿರ್ಧಾರಗಳು ಬದುಕನ್ನು ಕಷ್ಟಮಯವನ್ನಾಗಿಸುತ್ತವೆ. ಎಚ್ಚರವಿರಲಿ ಎಂದು ಹೇಳಿದ ಬುದ್ಧ ಕಷ್ಟದ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿದ. ಆಸೆಗಳನ್ನು ಗೆದ್ದ ಮೇಲೆ, ಇಲ್ಲವೇ ಅವುಗಳು ಹತೋಟಿಯಲ್ಲಿದ್ದರೆ ನಮ್ಮ ಜೀವನದಲ್ಲಿ ದುಃಖಗಳು ಕೂಡ ಅಷ್ಟೇ ದೂರದಲ್ಲಿ ಇರುತ್ತವೆ ಎನ್ನುವುದು ಅವನ ಜೀವನದ ಸಂದೇಶವಾಗಿತ್ತು.

 

ಅದಕ್ಕೆ 'ಎಚ್ಚರವಿರಲಿ' ಎನ್ನುವ ನಿಯಮ ಅಷ್ಟೇ ಸಾಕಾಗಿತ್ತು.

No comments:

Post a Comment