ಮಹಾಭಾರತ ಕಾಲದಲ್ಲಿ, ಇಲ್ಲಿ ಶಿವನ ಪೂಜೆಯನ್ನು 'ಮಲ್ಲಿಕಾ' ಹೂವಿನಿಂದ 'ಅರ್ಜುನ' ಮಾಡಿದ್ದರಿಂದ ಈ ದೇವಸ್ಥಾನ 'ಮಲ್ಲಿಕಾರ್ಜುನ' ದೇವಸ್ಥಾನವೆಂದೇ ಪ್ರಸಿದ್ಧಿಗೆ ಬಂತು.
ಮುರಿದ ತೊರೆ 'ಮುಡುಕುತೊರೆ' |
ಇಲ್ಲಿ ಕಾವೇರಿ ನದಿ ಮುರಿದ ತೊರೆಯಂತೆ ಹರಿಯುವುದರಿಂದ, ಈ ಸ್ಥಳಕ್ಕೆ 'ಮುಡುಕುತೊರೆ' ಎಂದು ಹೆಸರು. ಅದು ಸ್ಥಳ ಪುರಾಣ. ಇಲ್ಲಿ ಬೇಸಿಗೆಯಲ್ಲಿ ಕಾವೇರಿ ತೊರೆಯಂತೆ ಕಾಣುತ್ತಾಳೆ ಏನೋ? ಆದರೆ ನಾನು ಈಗ ನೋಡುವಾಗ ಕಾವೇರಿ ಇಲ್ಲಿ ಮೈ ತುಂಬಿ ಹರಿಯುತ್ತಿದ್ದಾಳೆ. ಹಾಗೆಯೇ ಸುತ್ತಲಿನ ಪರಿಸರ ಹಸಿರಾಗಿರುವುದು ಮತ್ತು ಹಲವೆಡೆ ದಟ್ಟ ಕಾಡು ಅವಳದೇ ಆಶೀರ್ವಾದ. ಅವಳು ರೈತರಿಗೆ ಭಾಗ್ಯ ದೇವತೆ. ಸಾಕಷ್ಟು ದೇವಸ್ಥಾನಗಳು ಅವಳ ದಡದಲ್ಲಿ.
೧,೨೦೦ ವರುಷಗಳ ಪರಂಪರೆ |
ಸುಮಾರು ಎಂಟನೇ ಶತಮಾನದಲ್ಲಿ, ತಲಕಾಡಿನ ಗಂಗ ರಾಜರಿಂದ ನಿರ್ಮಿಸಲ್ಪಟ್ಟ ಈ ದೇವಸ್ಥಾನ ನಂತರ ವಿಜಯನಗರ ಮತ್ತು ಮೈಸೂರು ಅರಸರಿಂದ ಕೂಡ ಆದರಿಸಲ್ಪಿಟ್ಟಿದೆ. ಇಂದಿನ ಕಾಲದ ಪ್ರಜಾಪ್ರಭುತ್ವ ಸರ್ಕಾರಗಳು ಕೂಡ ದೇಣಿಗೆ ನೀಡಿ ದೇವಸ್ಥಾನವನ್ನು ಸುಸ್ಥಿತಿಯಲ್ಲಿಟ್ಟಿವೆ. ಅದಕ್ಕೂ ಮಿಗಿಲಾಗಿ ಮಲ್ಲಿಕಾರ್ಜುನನ ಭಕ್ತರು, ಸುತ್ತೂರು ಮಠದ ಗಮನ ಕೂಡ. ಅವೆಲ್ಲವೂ ಸೇರಿ, ಈ ದೇವಸ್ಥಾನ ೧,೨೦೦ ವರುಷಗಳ ಕಾಲ ಭಾರತದ ಸಂಸ್ಕೃತಿ, ಪರಂಪರೆಯ ಕುರುಹಾಗಿ ಜನ ಜೀವನದಲ್ಲಿ ಬೆರೆತು ಹೋಗಿದೆ.
ಶ್ರೀ ಮಲ್ಲಿಕಾರ್ಜುನನ ಉತ್ಸವ ಮೂರ್ತಿ |
ನದಿಯ ಪಕ್ಕ ಬೆಟ್ಟ. ಅದರ ಮೇಲೆ ಪತ್ನಿ ಭ್ರಮರಾಂಭೆಯ ಜೊತೆ ವಿರಾಜಮಾನನಾಗಿರುವ ಮಲ್ಲಿಕಾರ್ಜುನನ ದರುಶನಕ್ಕೆ ನೀವು ಕುಟುಂಬದ ಅಥವಾ ಸ್ನೇಹಿತರ ಜೊತೆಗೆ ತೆರಳಬಹುದು. ಮೆಟ್ಟಿಲ ಮೂಲಕ ಬೆಟ್ಟ ಹತ್ತಬಹುದು. ಇಲ್ಲವೇ ಬೆಟ್ಟದ ಮೇಲ್ಭಾಗದವರೆಗೆ ವಾಹನದಲ್ಲಿ ಚಲಿಸಿ ನಂತರ ಕೆಲವೇ ಮೆಟ್ಟಿಲುಗಳನ್ನೇರಿ ಕೂಡ ದರುಶನ ಪಡೆಯಬಹುದು.
ಮೆಟ್ಟಿಲ ಮೂಲಕ ಬೆಟ್ಟ ಹತ್ತಬಹುದು |
ಇಲ್ಲಿಯ ಶಾಂತ ಪರಿಸರದಲ್ಲಿ ದಿನ ಕಳೆಯಬಯಸುವವರಿಗೆ ನದಿಯ ದಡದಲ್ಲಿ ಒಂದು ರೆಸಾರ್ಟ್ ಕೂಡ ಇದೆ. ಮಕ್ಕಳಿಗೆ ಆಕರ್ಷಣೆಯಾಗಿ ನದಿಯಲ್ಲಿ ತೆಪ್ಪಗಳ ಮತ್ತು ದೋಣಿಗಳ ಸೌಲಭ್ಯ ಇದೆ. ನದಿಯ ಆಚೆ ಕಡೆ ಇರುವುದೇ ತಲಕಾಡು. ತಲಕಾಡಿನ ಪಂಚಲಿಂಗಗಳಲ್ಲಿ ಈ ಮಲ್ಲಿಕಾರ್ಜುನ ದೇವಸ್ಥಾನವೂ ಒಂದು. ಬೋಟ್ ಸವಾರಿ ರೆಸಾರ್ಟ್ ನಲ್ಲಿ ಉಳಿದುಕೊಂಡವರಿಗೆ ಮಾತ್ರ. ಅಥವಾ ತಲಕಾಡು ಕಡೆಯಿಂದ ಮುಂಗಡ ಕಾಯ್ದಿರಿಸಿಕೊಳ್ಳಬೇಕು. ಸುಮ್ಮನೆ ಹೋದವರಿಗೆ ಕಾವೇರಿ ಮಡಿಲಲ್ಲಿ ಕೈ-ಕಾಲಾಡಿಸಿ, ಫೋಟೋ ತೆಗೆದುಕೊಳ್ಳಲು ಅಡ್ಡಿಯೇನಿಲ್ಲ.
ಕಾವೇರಿ ಮಡಿಲಲ್ಲಿ ಸ್ನೇಹಿತರೊಂದಿಗೆ |
ಸುತ್ತ ಒಂದೆರಡು ಗಂಟೆಗಳ ಪ್ರಯಾಣದಲ್ಲಿ ದೇವಸ್ಥಾನಗಳ ಸಮೂಹವೇ ಇದೆ. ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಗಳು ಹತ್ತಿರದ ಹಾದಿ. ದೈವ ಆರಾಧಕರಿಗೆ ಮತ್ತು ಕಾಡು-ಬೆಟ್ಟ ನೋಡಬಯಸುವವರಿಗೆ ಕಣ್ಣಿಗೆ ಹಬ್ಬ ಮತ್ತು ಮನಸ್ಸಿಗೆ ತೃಪ್ತಿ. ಶಿವರಾತ್ರಿ ಸಮಯದಲ್ಲಿ ಈ ಶಿವನ ದೇವಸ್ಥಾನಗಳು ಹೆಚ್ಚಿನ ಜನಸಂದಣಿ ಕಾಣುತ್ತವೆ. ಆದರೆ ಲೋಕ ಕಲ್ಯಾಣ ಬಯಸುವ ಭ್ರಮರಾಂಭ-ಮಲ್ಲಿಕಾರ್ಜುನರ ದರುಶನಕ್ಕೆ ಹಬ್ಬಗಳ ಹಂಗಿಲ್ಲದೆ ಬರುವ ಜನರಿಗೇನು ಕಡಿಮೆ ಇಲ್ಲ.
ಕಣ್ಣಿಗೆ ಹಬ್ಬ ಮತ್ತು ಮನಸ್ಸಿಗೆ ತೃಪ್ತಿ |
ಬೆಂಗಳೂರಿನಿಂದ ಇಲ್ಲಿಗೆ ಮದ್ದೂರು-ಮಳವಳ್ಳಿಯ ಮೂಲಕ ತಲುಪಬಹುದು. ಸುಮಾರು ೧೩೦ ಕಿ.ಮೀ. ದೂರದ ಹಾದಿ. ನಂತರದ ಪ್ರಯಾಣಕ್ಕೆ ತಲಕಾಡು ಇಲ್ಲವೇ ೫೦ ಕಿ.ಮೀ. ದೂರದ ಮೈಸೂರಿಗೆ ತೆರಳಬಹುದು. ಬೆಂಗಳೂರಿಗೆ ವಾಪಸ್ಸಾಗುವವರು ಗಗನಚುಕ್ಕಿ ಭರಚುಕ್ಕಿ ಜಲಪಾತಗಳನ್ನು ನೋಡಿಕೊಂಡು ಹೋಗಬಹುದು. ಆದರೆ ಸಂಜೆ ಐದರ ನಂತರ ಅವುಗಳ ದಾರಿ ಮುಚ್ಚಲಾಗುತ್ತದೆ ಎನ್ನುವುದು ಗಮನದಲ್ಲಿ ಇರಲಿ.
ಭರಚುಕ್ಕಿ ಜಲಪಾತ |
No comments:
Post a Comment