Wednesday, March 8, 2023

ಪ್ರತಿಯೊಂದು ಪ್ರಶ್ನೆಗೆ ಉತ್ತರ ಇರುವುದಿಲ್ಲ

ಅದು ೧೯೯೩ ನೇ ವರ್ಷ. ನಾನಾಗ ರಾಯಚೂರಿನಲ್ಲಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಪಿ.ಯು.ಸಿ. ಓದುತ್ತಿದ್ದೆ. ಆಗ ನೋಡಿದ ಹಿಂದಿ ಚಿತ್ರ 'ರಂಗ್'. ಅದು ನಟಿ ದಿವ್ಯಾ ಭಾರತಿಯ ಕೊನೆಯ ಚಿತ್ರ. ಅದಕ್ಕೆ ಏನೋ ಎನ್ನುವಂತೆ ಕಾಲೇಜಿನ ಮಿತ್ರರೆಲ್ಲ ಆ ಚಿತ್ರ ನೋಡಲು ಹೋಗಿದ್ದೆವು. ಆ ಚಿತ್ರದಲ್ಲಿ ಇಬ್ಬರು ಹೀರೋಯಿನ್ ಗಳು. ನನಗೆ ದಿವ್ಯಾ ಭಾರತಿಗಿಂತ ಎರಡನೆಯ ಹೀರೋಯಿನ್ ಆಯೇಷಾ ಜುಲ್ಕಾಳ ಅಭಿನಯ ಚೆನ್ನಾಗಿದೆ ಎನಿಸಿತ್ತು. ಅದನ್ನೇ ಸ್ನೇಹಿತನಿಗೆ ಹೇಳಿದರೆ ಊರ ಜನ ಏನು ಇಷ್ಟ ಪಡುತ್ತಿದ್ದಾರೆ ನೋಡು ಎಂದು ಹೇಳಿದ್ದ. ಆ ಚಿತ್ರದ ಒಂದು ಹಾಡು ನನಗೆ ಇಷ್ಟವಾಗಿ ನನ್ನ ನೆನಪಿನಾಳಕ್ಕೆ ಸೇರಿ ಹೋಗಿತ್ತು. ಅದು: 


'ಹರ್ ಸವಾಲ್ ಕಾ ಜವಾಬ್ ನಹಿ ಮಿಲ್ ಸಕ್ತಾ, 

ಮೇರಾ ಪ್ಯಾರ್ ಕಾ ಹಿಸಾಬ್ ನಹಿ ಮಿಲ್ ಸಕ್ತಾ' 

(ಅನುವಾದ: 

ಪ್ರತಿ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ

ನನ್ನ ಪ್ರೀತಿ ಲೆಕ್ಕಕ್ಕೆ ಸಿಗುವುದಿಲ್ಲ)


ಎನ್ನುವ ಹಾಡು. ಅದು ಪ್ರೇಮಿಗಳು ಸಂತೋಷದಿಂದ ಹಾಡುವ ಹಾಡು ಆಗಿದ್ದರೂ, ಅದು ದುಃಖದ ಸನ್ನಿವೇಶಕ್ಕೂ ಅಷ್ಟೇ ಚೆನ್ನಾಗಿ ಹೊಂದಾಣಿಕೆ ಆಗುತ್ತದೆ ಎನ್ನುವ ವಿಷಯ ನನಗೆ ತಿಳಿಯಲು ಮೂವತ್ತು ವರುಷಗಳು ಹಿಡಿಯಿತು.


ವಿಚಾರ ಮಾಡಿ ನೋಡಿ. ಹಣ, ಆಸ್ತಿಗಳು ಲೆಕ್ಕಾಚಾರಕ್ಕೆ ಸಿಗುತ್ತವೆ. ಆದರೆ ಪ್ರೀತಿ, ಪ್ರೇಮ, ಸಂಬಂಧಗಳನ್ನು ಹೇಗೆ ಅಳತೆ ಮಾಡುವಿರಿ? ನಿಮ್ಮ ಮಗುವನ್ನು ಅದು ತನ್ನ ತಂದೆ ತಾಯಿಗಳನ್ನು ಎಷ್ಟು ಪ್ರೀತಿ ಮಾಡುತ್ತದೆ ಎಂದು ಕೇಳಿ ನೋಡಿ. ಅದು ಎದೆ ಉಬ್ಬಿಸಿ, ಕೈಗಳನ್ನು ಎಷ್ಟು ಸಾಧ್ಯವೋ ಅಷ್ಟು ಅಗಲ ಮಾಡಿ ಹೇಳುತ್ತದೆ 'ಇಷ್ಟು' ಎಂದು. ಆ ಮಗು ದೊಡ್ಡವನಾಗಿ ಮೋಸದ ಅನುಭವ ಆದ ಮೇಲೆ ಕೇಳಿ ನೋಡಿ, ಮೋಸ ಹೋದ ನೋವು ಎಷ್ಟು ಎಂದು. ಅದು ಮತ್ತೆ ಕೈ ಅಗಲ ಮಾಡಿ ಹೇಳುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಕಣ್ಣಿನಾಳದಲ್ಲಿ ನಿಮಗೆ ಉತ್ತರ ಸಿಕ್ಕಿರುತ್ತದೆ.  ಸಮುದ್ರದಾಳವನ್ನು ಉಸಿರು ಬಿಗಿದಿಡಿದುಕೊಂಡು ಅಳತೆ ಮಾಡುವ ಧೀರರಿದ್ದಾರೆ. ಆದರೆ ಹೃದಯದ ಆಳವನ್ನು ಅಳತೆ ಮಾಡಿದವರು ಎಲ್ಲಿದ್ದಾರೆ?


ನಂಬಿಕೆ ಮತ್ತು ಮೋಸ ಒಂದೇ ನಾಣ್ಯದ ಎರಡು ಮುಖಗಳು. ನೀವು ನಂಬಿದಲ್ಲಿ ಮಾತ್ರ ಮೋಸ ಹೋಗಲು ಸಾಧ್ಯ. ನಂಬದೆ ಇದ್ದಲ್ಲಿ ಎಲ್ಲಿಯ ಮೋಸ? ನೀವು ಎಷ್ಟು ಬಲವಾಗಿ ನಂಬಿದ್ದೀರೋ, ಅಷ್ಟು ಆಳದ ಮೋಸ ಸಾಧ್ಯ. ನಂಬದೆ ಜೀವನ ಸಾಧ್ಯ ಇಲ್ಲ, ಹಾಗೆಯೆ ಮೋಸ ಹೋಗದೆ ಬದುಕಲು ಕೂಡ ಸಾಧ್ಯ ಇಲ್ಲ. ಲೆಕ್ಕಾಚಾರಕ್ಕೆ ಸಿಗದ ನೋವುಗಳಿಗೆ ಮದ್ದಿಲ್ಲ. ಅವರು ನಿಮಗೆ ಏಕೆ ಮೋಸ ಮಾಡಿದರು ಅಥವಾ ಮೋಸ ಹೋಗುವಷ್ಟು ಅವಿವೇಕಿ ನೀವೇಕೆ ಆಗಿದ್ದೀರಿ ಎನ್ನುವ ಪ್ರಶ್ನೆಗೆ ನಿಮಗೆ ಸಮಂಜಸ ಉತ್ತರ ಸಿಗದೇ ಹೋಗಬಹುದು. ಅದನ್ನೇ ವಿಚಾರ ಮಾಡುತ್ತಾ ಕೂಡುವ ಬದಲು ಸುಮ್ಮನೆ ಹಾಡು ಕೇಳಿ:


'ಹರ್ ಸವಾಲ್ ಕಾ ಜವಾಬ್ ನಹಿ ಮಿಲ್ ಸಕ್ತಾ, 

ಮೇರಾ ಪ್ಯಾರ್ ಕಾ ಹಿಸಾಬ್ ನಹಿ ಮಿಲ್ ಸಕ್ತಾ' 


https://www.youtube.com/watch?v=MUWZimGH4Sk&list=RDMUWZimGH4Sk&start_radio=1




No comments:

Post a Comment