Monday, April 24, 2023

ಯಾರೇ ಕೂಗಾಡಲಿ, ರಾಜಣ್ಣ ನಿನಗೆ ಸಾಟಿಯಿಲ್ಲ

ಮುತ್ತತ್ತಿರಾಯನ ಆಶೀರ್ವಾದದಿಂದ ಮುತ್ತುರಾಜನಾಗಿ ಹುಟ್ಟಿ, ಹೊಟ್ಟೆಪಾಡಿಗೆ ನಾಟಕ ಕಂಪನಿ ಸೇರಿ, ನಂತರ ಸಿನೆಮಾದಲ್ಲಿ ರಾಜಕುಮಾರನಾಗಿ ಪರಿಚಯವಾಗಿ, 'ಬೇಡರ ಕಣ್ಣಪ್ಪ' ನಿಂದ 'ಜೀವನ ಚೈತ್ರ' ದವರೆಗೆ ಕನ್ನಡ ಚಿತ್ರರಂಗದ ಅನಭಿಷಕ್ತ ರಾಜನಾಗಿ ಮೆರೆದ ಅಣ್ಣಾವ್ರ ಜೀವನಗಾಥೆ ಕೂಡ ಅಷ್ಟೇ ಆಸಕ್ತಿದಾಯಕವಾದದ್ದು.


ರಾಜಕುಮಾರ ಅಂದರೆ ಕೇವಲ ನಟನಲ್ಲ. 'ನಾನಿರುವುದೇ  ನಿಮಗಾಗಿ' ಹಾಡಿನ ಮೂಲಕ ಕನ್ನಡದ ಮೊದಲ ರಾಜ ಮಯೂರವರ್ಮನ ಪಾತ್ರಕ್ಕೆ ಜೀವ ತುಂಬಿದ ವ್ಯಕ್ತಿಯನ್ನು ಕೇವಲ ನಟ ಎಂದು ಹೇಗೆ ಕರೆಯುವುದು? 'ನಾವಿರುವ ತಾಣವೇ ಗಂಧದ ಗುಡಿ' ಎಂದು ಹಾಡಿ ನಮ್ಮಲ್ಲಿ ಅಭಿಮಾನ ಮೂಡಿಸುವುದು ಕೇವಲ ನಟನಿಂದ ಸಾಧ್ಯವೇ? ಭಕ್ತಿ ಪ್ರಧಾನ ಚಿತ್ರಗಳಿಂದ ಬಾಂಡ್ ಚಿತ್ರಗಳವೆರೆಗೆ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ರಾಜಕುಮಾರ್ ಕನ್ನಡಿಗರ ಆರಾಧ್ಯ ದೈವವಾಗಿ ಬದಲಾದದ್ದು ಅವರ ವಿನಯದಿಂದ ಮತ್ತು ಅಗಾಧ ಪ್ರತಿಭೆಯಿಂದ.


'ಯಾರೇ ಕೂಗಾಡಲಿ, ಎಮ್ಮೆ ನಿನಗೆ ಸಾಟಿಯಿಲ್ಲ', 'ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ', 'ಚಿನ್ನದ ಗೊಂಬೆಯಲ್ಲ, ದಂತದ ಗೊಂಬೆಯಲ್ಲ' ಹೀಗೆ ಅವರ ನೂರಾರು ಹಾಡುಗಳು ಅಂದಿಗೂ, ಇಂದಿಗೂ ಮನರಂಜಿಸುವುದಲ್ಲದೆ ಬದುಕಿನ ದ್ವಂದ್ವಗಳಿಗೆ ಸಲಹೆ ನೀಡುವ ಸಂಗಾತಿಯಾಗುತ್ತವೆ. ಅದಕ್ಕೆ ಏನೋ, ಅವರು ಕಾಲವಾದರೂ ಮತ್ತೆ ರಾಜಣ್ಣ ನೆನಪಾಗುವುದು ಅವರ ಹಾಡುಗಳ ಮೂಲಕ ಮತ್ತು ಅವರ ಸಂಭಾಷಣೆಗಳ ಮೂಲಕ.


ಹೊಸ ಪೀಳಿಗೆ ರಾಜಣ್ಣ ಗೊತ್ತಿಲ್ಲ. ಆದರೆ ಹಿಂದಿನ ೨-೩ ಪೀಳಿಗೆಗಳಿಗೆ ರಾಜಣ್ಣ ಒಂದು ಆದರ್ಶಮಯ ಮತ್ತು ನೈತಿಕತೆ ಎತ್ತಿ ಹಿಡಿಯುವ ಜೀವನದ ಮಾರ್ಗ ತೋರಿಸಿದರು. ಅವರು ಚಿ, ಉದಯಶಂಕರ್ ಅವರ ಜೊತೆ ನಡೆಸಿದ ಸಂಭಾಷಣೆ ಇಲ್ಲಿದೆ. ಕೇಳಿ ನೋಡಿ.


https://fb.watch/k5WNUoQPTv/


Friday, April 21, 2023

ನೋವು ಮರೆತ ಸ್ಪಷ್ಟ ಗುರುತು

ಕೆಲ ವರುಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಆಫೀಸ್ ನಲ್ಲಿ, ಮಧ್ಯಾಹ್ನದ ಹೊತ್ತಿಗೆ ಒಂದು NGO ಕಡೆಯಿಂದ ಒಂದು ಪ್ರಸ್ತುತಿ ಇದೆ ಎಂದು ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸಿದರು. ಅದು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜವಾಬ್ದಾರಿಯಿಂದ ಚಲಾಯಿಸುವುದು ಮತ್ತು ರಸ್ತೆಯಲ್ಲಿ ಇರುವ ಇತರರ ಮೇಲೆ ಸಹಾನುಭೂತಿ ತೋರಿಸುವುದು ಅದರ ಕುರಿತಾಗಿತ್ತು. ನಮ್ಮ ಸಹೋದ್ಯೋಗಿಯೊಬ್ಬ ಅವರಿಗೆ ಪ್ರಶ್ನೆ ಕೇಳಿಯೇ ಬಿಟ್ಟ 'ನಿಮಗೇಕೆ ಇದರಲ್ಲಿ ಆಸಕ್ತಿ?' ಅವರು ಸಮಾಧಾನದಿಂದ ಉತ್ತರಿಸಿದರು. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಅವರ ಮಗಳ ಮೇಲೆ ಒಬ್ಬ ಲಾರಿ ಹತ್ತಿಸಿ ಸಹಾಯಕ್ಕೆ ನಿಲ್ಲದೆ ಹೋಗಿದ್ದ. ಬೇರೆಯವರು ಗಮನಿಸುವದಷ್ಟರಲ್ಲಿ ಅವಳು ತೀವ್ರ ರಕ್ತಸಾವ್ರದಿಂದ ಅಸು ನೀಗಿದ್ದಳು. ಅದನ್ನು ಆತ ನಮಗೆ ಯಾವುದೇ ನೋವಿಲ್ಲದೆ ವಿವರಿಸಿದ್ದ. ಮತ್ತು ಆ ಘಟನೆ ಒಂದು NGO ಸ್ಥಾಪನೆಗೆ ಕಾರಣ ಆಯಿತು ಎಂದು ವಿವರಿಸಿದ್ದ.


ಯಾರೇ ಆಗಲಿ, ತೀವ್ರ ನೋವಿಗೆ ಒಳಪಟ್ಟಾಗ ಖಿನ್ನತೆಗೆ ಒಳಗಾಗುತ್ತಾರೆ. ಅದು ತಮಗೆ ಏಕೆ ಆಯಿತು ಎನ್ನುವ ಪ್ರಶ್ನೆ ಮತ್ತೆ ಹಾಕಿಕೊಳ್ಳುತ್ತಾರೆ. 'ಸಾವಿರದ ಮನೆಯಿಂದ ಸಾಸಿವೆ ತಾ' ಎಂದ ಬುದ್ಧ ಅದು ಎಲ್ಲರಿಗೆ ಸಹಜ ಎನ್ನುವ ಮನವರಿಕೆ ಮಾಡಿಕೊಟ್ಟದ್ದನಲ್ಲವೇ? ಹಾಗೆಯೆ ಆ ನೋವನ್ನು ಭರಿಸುವ ಶಕ್ತಿ ಮನಸ್ಸಿಗೆ ಬಂದಾಗ ಅದು ಬೇರೆಯ ತರಹದ ವಿಚಾರಗಳನ್ನು ಮಾಡಲು ತೊಡಗುತ್ತದೆ. ಅದರಿಂದ ತಾವು ಕಲಿಯಬೇಕಾದ್ದು ಏನು ಎನ್ನುವ ಪ್ರಶ್ನೆ ಅವರಿಗೆ ಖಿನ್ನತೆಯಿಂದ ಹೊರ ಬರುವಂತೆ ಮಾಡುತ್ತದೆ. ಆ ತರಹ ಇನ್ನೊಬ್ಬರಿಗೆ ಆಗಬಾರದು ಎಂದರೆ ಏನು ಮಾಡಬೇಕು ಅನ್ನುವ ದಿಕ್ಕಿನಲ್ಲಿ ಕೆಲಸ ಪ್ರಾರಂಭಿಸುವದರೊಂದಿಗೆ ಆ ದುಃಖ ಬಹತೇಕ ಮರೆಯಾಗಿಬಿಡುತ್ತದೆ. ಅದು ನೋವು ಮರೆತ ಸ್ಪಷ್ಟ ಗುರುತು.


ಲೋಕ ಕಲ್ಯಾಣ ಮಾಡಿದ ಜನರ ಜೀವನ ಗಮನಿಸಿ ನೋಡಿ. ಅವರು ಮಠ ಕಟ್ಟಿದ್ದು, ಕೆರೆ ಕಟ್ಟಿದ್ದು ಜನ ಹಿತಕ್ಕಾಗಿ ಎಂದು ಮೇಲ್ನೋಟಕ್ಕೆ ಅನಿಸಿದರೂ, ಅದು ಅವರು ತಮ್ಮ ನೋವು ಮರೆಯುವ ಪ್ರಕ್ರಿಯೆಯ ಕೊನೆಯ ಹಂತ ಆಗಿರುತ್ತದೆ. ಯಾವುದೇ ನೋವು ತಿನ್ನದ ಮನುಷ್ಯ ಸ್ವಾರ್ಥಿಯಾಗಿ ಬಾಳುವ ಸಾಧ್ಯತೆ ಹೆಚ್ಚು. ಆದರೆ ತಾಯಿಯನ್ನು ವೈದ್ಯಕೀಯ ಚಿಕಿತ್ಸೆ ಇಲ್ಲದೆ ಕಳೆದುಕೊಂಡ ಮನುಷ್ಯ, ತಮ್ಮೂರಿನಲ್ಲೆಯೇ ಹೊಸ ಆಸ್ಪತ್ರೆ ಕಟ್ಟಿಸಲು ಹೊರಡುತ್ತಾನೆ. ತಾನು ಕಲಿತುಕೊಂಡ ವಿಷಯಗಳನ್ನು ಇತರ ಒಳಿತಿಗೆ ಹಂಚಿಕೊಳ್ಳಲು ಬಯಸುತ್ತಾನೆ. ಅನಾಥರಾಗಿ ಬೆಳೆದವರು ಅನಾಥಾಶ್ರಮ ಕಟ್ಟಲು ಮುಂದಾಗುತ್ತಾರೆ. ಸಮಾಜದಿಂದ ತುಳಿತಕ್ಕೆ ಒಳಗಾದವರು, ಅದನ್ನು ತಮ್ಮದೇ ದಾರಿಯಲ್ಲಿ ತಡೆಗಟ್ಟುವ ಗಾಂಧಿ, ಅಂಬೇಡ್ಕರ್ ಆಗುತ್ತಾರೆ.


ಅದನ್ನು ಅವರು ಬರೀ ಸಮಾಜ ಸೇವೆಗೆಂದು ಮಾಡಿದರು ಎಂದುಕೊಳ್ಳಬೇಡಿ. ಮನಶಾಸ್ತ್ರದ ಪ್ರಕಾರ ಅದು ಅವರ ತಮ್ಮ ಆಂತರಿಕ ದಳ್ಳುರಿ ಶಮನ ಮಾಡಿಕೊಳ್ಳುವ ಪ್ರಕ್ರಿಯೆಯ ಒಂದು ಭಾಗ ಆಗಿತ್ತು ಅಷ್ಟೇ. ಅದು ಚಿಕ್ಕ ವಯಸ್ಸಿನಲ್ಲಿ ನೋವುಂಡ ಮನುಷ್ಯ ಮುಂದೆ ದೊಡ್ಡ ಸಾಧಕ ಆಗಲು ನೆರವಾಗುತ್ತದೆ. ಆದರೆ ನೋವುಗಳು ಕೊನೆ ವಯಸ್ಸಿನಲ್ಲಿ ಬಂದರೆ ಅವುಗಳು ಸಾವು ಬೇಗ ತಂದುಕೊಳ್ಳುವ ಸಾಧನ ಅಷ್ಟೇ.


ಯಾವುದೇ ಸಮಾಜ ಸುಧಾರಕ ನೋವು ನೋಡುತ್ತಾ ಸುಮ್ಮನೆ ಕೂಡುವುದಿಲ್ಲ. ಬುದ್ಧ ಜ್ಞಾನಿಯಾದ ಮೇಲೆ ಒಂದು ಮೂಲೆಯಲ್ಲಿ ಕುಳಿತು ಧ್ಯಾನ ಮಾಡುವ ಬದಲು ಅಲೆದಾಡುತ್ತ ಜನರ ಅಜ್ಞಾನ ಕಳೆಯುವ ಪ್ರಯತ್ನ ಮಾಡಿದ. ತನ್ನ ಹುಡುಕಾಟದ ನೋವು ಇತರರಿಗೆ ಆಗದೆ ಇರಲಿ ಎಂದು ತಾನು ತಿಳಿದುಕೊಂಡಿದ್ದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡಿದ. ಅದು ಅವನು ತನ್ನ ನೋವು ಮರೆತ ಸ್ಪಷ್ಟ ಗುರುತು ಆಗಿತ್ತು.

Sunday, April 2, 2023

ಊರಿಂಗೆ ದಾರಿಯನು ಆರು ತೋರಿದಡೇನು

ಸರ್ವಜ್ಞನನ್ನು ನೀವು ಕವಿ ಎನ್ನುವಿರೋ, ತತ್ವಜ್ಞಾನಿ ಎನ್ನುವಿರೋ, ಯೋಗಿ ಎನ್ನುವಿರೋ ಅಥವಾ ಗುರು ಎನ್ನುವಿರೋ, ಇಲ್ಲವೇ ಶರಣ ಎನ್ನುವಿರೋ?

 

ಅವೆಲ್ಲವುಗಳಿಗೆ ಸರಿ ಹೊಂದುವಂತೆ ಮನುಷ್ಯ ಜೀವನದ ಸೂಕ್ಷ್ಮಗಳನ್ನು ಸರಳ ಪದಗಳಲ್ಲಿ ಜೋಡಿಸಿ ತ್ರಿಪದಿ ವಚನಗಳನ್ನು ರಚಿಸಿದ ಈತನ ಜೀವನ ಅನುಭವವು ವೈವಿಧ್ಯಮಯದಿಂದ ಕೂಡಿದ್ದು. ಆತ ತನ್ನನ್ನು ತಾನು ಹೇಳಿಕೊಂಡಿದ್ದು ಹೀಗೆ:

 

'ಸರ್ವಜ್ಞನೆಂಬುವನು ಗರ್ವದಿಂದಾದವನೆ?

ಸರ್ವರೊಳಂದು ನುಡಿಗಲಿತು ವಿದ್ಯದ

ಪರ್ವತವೇ ಆದ ಸರ್ವಜ್ಞ'

 

ಆತ ಜನ ಸಾಮಾನ್ಯರ ಬದುಕನ್ನು, ಅವರ ಮೌಢ್ಯತೆಯನ್ನು ಗಮನಿಸಿ ರಚಿಸಿದ ವಚನಗಳು ಅನೇಕ. ಅದರಲ್ಲಿ ಒಂದು:

 

'ಚಿತ್ತವಿಲ್ಲದೆ ಗುಡಿಯ ಸುತ್ತಿದೆಡೆ ಫಲವೇನು?

ಎತ್ತು ಗಾಣವನು ಹೊತ್ತು ತಾ ನಿತ್ಯದಿ

ಸುತ್ತಿ ಬಂದಂತೆ ಸರ್ವಜ್ಞ'

 

ಇದು ಭಕ್ತಿಯಿರದ ಜನರ ಕುರಿತು ಆದರೆ, ಭಕ್ತಿಯನ್ನು ಅಂತರಂಗದಲ್ಲಿ ಮನೆ ಮಾಡಿಕೊಂಡವರ ಕುರಿತು ಇನ್ನೊಂದು ವಚನ ಇದೆ:

 

'ಮನದಲ್ಲಿ ನೆನೆವಂಗೆ, ಮನೆಯೇನು ಮಠವೇನು?

ಮನದಲ್ಲಿ ನೆನೆಯದಿರುವವನು ದೇಗುಲದ

ಕೊನೆಯಲ್ಲಿದ್ದೆನು ಸರ್ವಜ್ಞ'

 

'ಜಾತಿ ಹೀನನ ಮನೆ ಜ್ಯೋತಿ ತಾ ಹೀನವೇ?' ಎಂದು ಪ್ರಶ್ನಿಸಿದ ಸರ್ವಜ್ಞ ನಿಜ ಅರಿವಿನೆಡೆಗೆ ಸಾಗುವ ದಾರಿಯನ್ನು ಕೂಡ ತೋರುತ್ತಾನೆ.

 

'ಏನಾದಡೇನಯ್ಯಾ ತಾನಾಗದನ್ನಕ್ಕ

ತಾನಾಗಿ ತನ್ನನ್ನರಿದವನು ಲೋಕದಲಿ

ಏನಾದಡೇನು ಸರ್ವಜ್ಞ'

 

ಹಾಗೆಯೆ ಜೀವನವು ಋಣ ಮುಗಿಯುವ ತನಕ ಎನ್ನುವ ಎಚ್ಚರ ಕೂಡ ಕೊಡುತ್ತಾನೆ.

 

'ಎಣ್ಣೆ ಬೆಣ್ಣೆಯ ಋಣವು, ಅನ್ನ ವಸ್ತ್ರದ ಋಣವು,

ಹೊನ್ನು ಹೆಣ್ಣಿನ ಋಣ ತೀರಿದಾಕ್ಷಣದಿ

ಮಣ್ಣು ಪಾಲೆಂದ ಸರ್ವಜ್ಞ'

 

'ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು' ಎಂದ ಸರ್ವಜ್ಞ 'ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ' ಎನ್ನುವ ಸತ್ಯ ಕೂಡ ಸಾರಿದ. ಪರಮಾರ್ಥಗಳನ್ನಲ್ಲದೆ ಸಮಾಜಮುಖಿ ವಚನಗಳನ್ನು ಕೂಡ ಅವನು ರಚಿಸಿದ್ದಾನೆ.

 

'ಅಜ್ಜಿಯಿಲ್ಲದ ಮನೆ, ಮಜ್ಜಿಗೆಯಿಲ್ಲದ ಊಟ ಲಜ್ಜೆಗೇಡೆಂದ' ಸರ್ವಜ್ಞ 'ಮಾತಿನಲ್ಲಿ ಸೋತವನಿಗಿದಿರಿಲ್ಲ' ಎನ್ನುವ ಕಿವಿ ಮಾತು ಕೂಡ ಹೇಳಿದ.

 

'ಹೆಣ್ಣಿಂದ ಕೆಟ್ಟ ದಶಕಂಠ, ಕೌರವನು ಮಣ್ಣಿಂದ ಕೆಡನೆ?' ಎಂದು ಹೇಳಿ ರಾಮಾಯಣ, ಮಹಾಭಾರತಗಳ ಸಾರವನ್ನು ಒಂದೇ ಸಾಲಿನಲ್ಲಿ ಹೇಳಿ ಚಾಕಚಕ್ಯತೆ ಮೆರೆದ.

 

'ಕೋಟಿವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು' ಎಂದ ಸರ್ವಜ್ಞ ಸಾಲದ ಅನುಭವ ಹೇಳಲು ಮರೆಯಲಿಲ್ಲ.

 

'ಸಾಲವನು ಕೊಂಬಾಗ ಹಾಲು ಹಣ್ಣು ಉಂಡಂತೆ

ಸಾಲಿಗನು ಬಂದು ಎಳೆವಾಗ ಕಿಬ್ಬದಿಯ

ಕೀಲು ಮುರಿದಂತೆ ಸರ್ವಜ್ಞ'

 

ತಾನು ಬದುಕಿದ ಕಾಲದ ಮತ್ತು ಸಮಾಜದ ಅನುಭವಗಳನ್ನೆಲ್ಲ ಒಟ್ಟಾಗಿಸಿ ತನ್ನ ವಚನಗಳ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆದ ಸರ್ವಜ್ಞ. 'ಊರಿಂಗೆ ದಾರಿಯನು, ಆರು ತೋರಿದಡೇನು' ಎಂದು ಕೇಳಿದ ಸರ್ವಜ್ಞ ಬದುಕಿಗೆ ದಾರಿದೀಪ ತೋರುವ ಶರಣ ಕೂಡ ಹೌದಲ್ಲವೇ.