ಸರ್ವಜ್ಞನನ್ನು ನೀವು ಕವಿ ಎನ್ನುವಿರೋ, ತತ್ವಜ್ಞಾನಿ ಎನ್ನುವಿರೋ, ಯೋಗಿ ಎನ್ನುವಿರೋ ಅಥವಾ ಗುರು ಎನ್ನುವಿರೋ, ಇಲ್ಲವೇ ಶರಣ ಎನ್ನುವಿರೋ?
ಅವೆಲ್ಲವುಗಳಿಗೆ
ಸರಿ ಹೊಂದುವಂತೆ ಮನುಷ್ಯ ಜೀವನದ ಸೂಕ್ಷ್ಮಗಳನ್ನು ಸರಳ ಪದಗಳಲ್ಲಿ ಜೋಡಿಸಿ ತ್ರಿಪದಿ ವಚನಗಳನ್ನು ರಚಿಸಿದ
ಈತನ ಜೀವನ ಅನುಭವವು ವೈವಿಧ್ಯಮಯದಿಂದ ಕೂಡಿದ್ದು. ಆತ ತನ್ನನ್ನು ತಾನು ಹೇಳಿಕೊಂಡಿದ್ದು ಹೀಗೆ:
'ಸರ್ವಜ್ಞನೆಂಬುವನು
ಗರ್ವದಿಂದಾದವನೆ?
ಸರ್ವರೊಳಂದು
ನುಡಿಗಲಿತು ವಿದ್ಯದ
ಪರ್ವತವೇ ಆದ
ಸರ್ವಜ್ಞ'
ಆತ ಜನ ಸಾಮಾನ್ಯರ
ಬದುಕನ್ನು, ಅವರ ಮೌಢ್ಯತೆಯನ್ನು ಗಮನಿಸಿ ರಚಿಸಿದ ವಚನಗಳು ಅನೇಕ. ಅದರಲ್ಲಿ ಒಂದು:
'ಚಿತ್ತವಿಲ್ಲದೆ
ಗುಡಿಯ ಸುತ್ತಿದೆಡೆ ಫಲವೇನು?
ಎತ್ತು ಗಾಣವನು
ಹೊತ್ತು ತಾ ನಿತ್ಯದಿ
ಸುತ್ತಿ ಬಂದಂತೆ
ಸರ್ವಜ್ಞ'
ಇದು ಭಕ್ತಿಯಿರದ
ಜನರ ಕುರಿತು ಆದರೆ, ಭಕ್ತಿಯನ್ನು ಅಂತರಂಗದಲ್ಲಿ ಮನೆ ಮಾಡಿಕೊಂಡವರ ಕುರಿತು ಇನ್ನೊಂದು ವಚನ ಇದೆ:
'ಮನದಲ್ಲಿ ನೆನೆವಂಗೆ,
ಮನೆಯೇನು ಮಠವೇನು?
ಮನದಲ್ಲಿ ನೆನೆಯದಿರುವವನು
ದೇಗುಲದ
ಕೊನೆಯಲ್ಲಿದ್ದೆನು
ಸರ್ವಜ್ಞ'
'ಜಾತಿ ಹೀನನ
ಮನೆ ಜ್ಯೋತಿ ತಾ ಹೀನವೇ?' ಎಂದು ಪ್ರಶ್ನಿಸಿದ ಸರ್ವಜ್ಞ ನಿಜ ಅರಿವಿನೆಡೆಗೆ ಸಾಗುವ ದಾರಿಯನ್ನು ಕೂಡ
ತೋರುತ್ತಾನೆ.
'ಏನಾದಡೇನಯ್ಯಾ
ತಾನಾಗದನ್ನಕ್ಕ
ತಾನಾಗಿ ತನ್ನನ್ನರಿದವನು
ಲೋಕದಲಿ
ಏನಾದಡೇನು ಸರ್ವಜ್ಞ'
ಹಾಗೆಯೆ ಜೀವನವು
ಋಣ ಮುಗಿಯುವ ತನಕ ಎನ್ನುವ ಎಚ್ಚರ ಕೂಡ ಕೊಡುತ್ತಾನೆ.
'ಎಣ್ಣೆ ಬೆಣ್ಣೆಯ
ಋಣವು, ಅನ್ನ ವಸ್ತ್ರದ ಋಣವು,
ಹೊನ್ನು ಹೆಣ್ಣಿನ
ಋಣ ತೀರಿದಾಕ್ಷಣದಿ
ಮಣ್ಣು ಪಾಲೆಂದ
ಸರ್ವಜ್ಞ'
'ಸಿರಿ ಬಂದ ಕಾಲಕ್ಕೆ
ಕರೆದು ದಾನವ ಮಾಡು' ಎಂದ ಸರ್ವಜ್ಞ 'ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ' ಎನ್ನುವ ಸತ್ಯ
ಕೂಡ ಸಾರಿದ. ಪರಮಾರ್ಥಗಳನ್ನಲ್ಲದೆ ಸಮಾಜಮುಖಿ ವಚನಗಳನ್ನು ಕೂಡ ಅವನು ರಚಿಸಿದ್ದಾನೆ.
'ಅಜ್ಜಿಯಿಲ್ಲದ
ಮನೆ, ಮಜ್ಜಿಗೆಯಿಲ್ಲದ ಊಟ ಲಜ್ಜೆಗೇಡೆಂದ' ಸರ್ವಜ್ಞ 'ಮಾತಿನಲ್ಲಿ ಸೋತವನಿಗಿದಿರಿಲ್ಲ' ಎನ್ನುವ ಕಿವಿ
ಮಾತು ಕೂಡ ಹೇಳಿದ.
'ಹೆಣ್ಣಿಂದ ಕೆಟ್ಟ
ದಶಕಂಠ, ಕೌರವನು ಮಣ್ಣಿಂದ ಕೆಡನೆ?' ಎಂದು ಹೇಳಿ ರಾಮಾಯಣ, ಮಹಾಭಾರತಗಳ ಸಾರವನ್ನು ಒಂದೇ ಸಾಲಿನಲ್ಲಿ
ಹೇಳಿ ಚಾಕಚಕ್ಯತೆ ಮೆರೆದ.
'ಕೋಟಿವಿದ್ಯೆಗಳಲ್ಲಿ
ಮೇಟಿ ವಿದ್ಯೆಯೇ ಮೇಲು' ಎಂದ ಸರ್ವಜ್ಞ ಸಾಲದ ಅನುಭವ ಹೇಳಲು ಮರೆಯಲಿಲ್ಲ.
'ಸಾಲವನು ಕೊಂಬಾಗ
ಹಾಲು ಹಣ್ಣು ಉಂಡಂತೆ
ಸಾಲಿಗನು ಬಂದು
ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ
ಸರ್ವಜ್ಞ'
ತಾನು ಬದುಕಿದ ಕಾಲದ ಮತ್ತು ಸಮಾಜದ ಅನುಭವಗಳನ್ನೆಲ್ಲ ಒಟ್ಟಾಗಿಸಿ ತನ್ನ ವಚನಗಳ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆದ ಸರ್ವಜ್ಞ. 'ಊರಿಂಗೆ ದಾರಿಯನು, ಆರು ತೋರಿದಡೇನು' ಎಂದು ಕೇಳಿದ ಸರ್ವಜ್ಞ ಬದುಕಿಗೆ ದಾರಿದೀಪ ತೋರುವ ಶರಣ ಕೂಡ ಹೌದಲ್ಲವೇ.
No comments:
Post a Comment