ಸಾಮಾನ್ಯ ಮನುಷ್ಯ ಬೇಕಾದರೆ ಒಂದೊಪ್ಪತ್ತು ಊಟ ಬಿಟ್ಟು ಉಪವಾಸ ಮಾಡುತ್ತಾನೆಯೇ ಹೊರತು ವಿಷ ಬೆರೆಸಿದ ಆಹಾರ ಸೇವಿಸಲು ಒಪ್ಪುವುದಿಲ್ಲ. ಕಹಿ ಅನಿಸಿದ ಪದಾರ್ಥ ಆಗಿಂದಾಗಲೇ ಉಗುಳಿ ಜೀವ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಪ್ರಕೃತಿ ಮನುಷ್ಯನನ್ನು ರೂಪಿಸಿದ್ದು ಹಾಗೆಯೇ. ಬದುಕಿದರೆ ಹೇಗೋ ಜೀವನ ಮಾಡಬಹುದು ಎಂದುಕೊಳ್ಳುವ ಮನುಷ್ಯ ಸಾವಿನ ಅಪಾಯಗಳನ್ನು ಎದುರಿಸಲು ಹೋಗುವುದಿಲ್ಲ. ಆದರೆ ಎಲ್ಲರೂ ಹಾಗಲ್ಲ.
ಹಿಂದಿನ ಕಾಲದಲ್ಲಿ ರಾಜರುಗಳು ಒಬ್ಬರ ಮೇಲೆ ಒಬ್ಬರ ಯುದ್ಧ ಹೂಡುತ್ತಿದ್ದರಲ್ಲ. ಅದರ ಹಿಂದಿನ ಕಾರಣ, ಒಬ್ಬ ರಾಜನಿಗೆ ಹೆಚ್ಚಿನ ಅಧಿಕಾರದ ಆಸೆ. ಮತ್ತು ಇನ್ನೊಬ್ಬನಿಗೆ ಇರುವ ಅಧಿಕಾರ ಏಕೆ ಬಿಟ್ಟು ಕೊಡಬೇಕು ಎನ್ನುವ ಛಲ. ಹೆಚ್ಚಿನ ಯುದ್ಧಗಳು ಇಬ್ಬರಲ್ಲಿ ಒಬ್ಬ ರಾಜ ಸಾಯುವುದರೊಂದಿಗೆ ಕೊನೆಗೊಳ್ಳುತ್ತಿದ್ದವಲ್ಲ. ಅಂದರೆ ಸಾವಿಗೆ ಇಬ್ಬರು ರಾಜರುಗಳು ಮಾನಸಿಕವಾಗಿ ಸಿದ್ಧರಾಗಿಯೇ ಬಂದಿರುತ್ತಿದ್ದರು. ಅವರಿಗೆ ಸತ್ತರೆ ಹೇಗೆ ಎನ್ನುವ ಭಯಕ್ಕಿಂತ ಅಧಿಕಾರ ಕಳೆದುಕೊಂಡರೆ ಹೇಗೆ ಎನ್ನುವ ಚಿಂತೆ ಹೆಚ್ಚಿಗೆ ಭಾದಿಸುತ್ತಿತ್ತು.
ಇದು ಹಳೆಯ ಕಾಲಕ್ಕೆ ಸೀಮಿತವಲ್ಲ. ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಯಿಂದ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರೆಗೆ ಅವರು ಅಧಿಕಾರದಲ್ಲಿ ಇರುವಾಗ ಹತರಾದರಲ್ಲ. ಅವರು ತೆಗೆದುಕೊಂಡ ನಿರ್ಧಾರಗಳು ಶತ್ರುಗಳನ್ನು ಸೃಷ್ಟಿಸುವುದು ಮತ್ತು ಅದು ಅವರ ಜೀವಕ್ಕೆ ಕುತ್ತಾಗಬಹುದು ಎನ್ನುವ ಅಪಾಯಗಳ ಬಗ್ಗೆ ಅವರಿಗೆ ಸ್ಪಷ್ಟವಾಗಿ ಅರಿವಿತ್ತು. ಆದರೂ ಕೂಡ ಅವರೇಕೆ ಅಪಾಯಗಳಿಗೆ ಎದೆಯೊಡ್ಡಿದರು? ಪ್ರಕೃತಿ ಅವರನ್ನೇಕೆ ವಿಭಿನ್ನವಾಗಿ ರೂಪಿಸಿತು?
ಕೂಲಂಕುಷವಾಗಿ ಪರಿಶೀಲಿಸಿ ನೋಡಿದರೆ, ಪ್ರಕೃತಿ ಎಲ್ಲ ತರಹದ ಜನರನ್ನು ಸೃಷ್ಟಿಸಿತ್ತದೆ. ಕಾಡಿನಲ್ಲಿ ಜಿಂಕೆ, ತೋಳ, ಹುಲಿಗಳ ನಡುವಳಿಕೆ ಬೇರೆ ಬೇರೆ ಹಾಗೆಯೆ ಅವುಗಳ ಸಂಖ್ಯೆಯು ಕೂಡ ಬೇರೆ ಬೇರೆ. ಜಿಂಕೆಗಳು ಗುಂಪಿನಲ್ಲಿ ಬದುಕುತ್ತವೆ. ಅವುಗಳು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುವುದಿರಲಿ, ತಮ್ಮನ್ನು ರಕ್ಷಿಕೊಳ್ಳುವ ಕಲೆಯೂ ಅವುಗಳಿಗೆ ಒಲಿದಿಲ್ಲ. ಆದರೆ ಹಸಿದ ಹುಲಿ ಎಂತಹ ಪ್ರಾಣಿಯನ್ನಾದರೂ ಬೇಟೆಯಾಡುವ ಗುಂಡಿಗೆ ತೋರುತ್ತದೆ. ಅದೇ ತರಹ ಮನುಷ್ಯರಲ್ಲಿ ತಾನು ರಾಜನಾಗಬೇಕೆನ್ನುವ ಆಸೆ ಇರುವವರ ಸಂಖ್ಯೆ ಕಡಿಮೆ. ಆದರೆ ಅವರಿಲ್ಲ ಎಂದಿಲ್ಲ. ಒಂದು ಜಿಂಕೆ ಹುಲಿಗೆ ಆಹಾರವಾದರೆ ಉಳಿದವೆಲ್ಲ ಓಡಿ ತಪ್ಪಿಸಿಕೊಳ್ಳುತ್ತವಲ್ಲ. ಉಳಿದ ಜನ ಎಲ್ಲ ಆ ಪ್ರಕೃತಿಯವರು.
ಇಂದಿಗೆ ಚುನಾವಣೆಗಳು ನಡೆದಿವೆಯಲ್ಲ. ಅಲ್ಲಿ ಅಧಿಕಾರ ಬೇಕೆಂದು ಸ್ಪರ್ಧಿಸುವವರು ಕೆಲವು ಜನ. ಅವರ ಹಿಂದೆ ಹೊಡೆದಾಡಲು ತಯ್ಯಾರು ಇರುವವರು ಕೆಲವು ಸಾವಿರ ಜನ. ಆದರೆ ಅದನ್ನು ನಿಂತು ನೋಡುವವರು ಕೋಟಿ ಜನ. ಚುನಾವಣೆಯಲ್ಲಿ ಬರಿ ಮತದ ಹೋರಾಟ ಅಷ್ಟೇ ಇಲ್ಲ. ಪ್ರತಿಸ್ಪರ್ಧಿಗಳು ಬೀದಿಯಲ್ಲಿ ಕೂಡ ಹೊಡೆದಾಟಕ್ಕೆ ಇಳಿಯುತ್ತಾರೆ. ಆಗ ಸಂಘರ್ಷದಲ್ಲಿ ಕೈ-ಕಾಲು ಮುರಿಯಬಹುದು ಅಥವಾ ತಮ್ಮ ಅಥವಾ ಹಿಂಬಾಲಕರ ಜೀವವೇ ಹೋಗಬಹುದು. ಆ ಅಪಾಯವನ್ನು ಎದುರಿಸಲು ಸಜ್ಜಾಗಿರುವವನೇ ಶಾಸಕ ಆಗುತ್ತಾನೆ. ಅವನು ಒಳ್ಳೆಯವನು ಅಥವಾ ಕೆಟ್ಟವನು ಎನ್ನುವ ನೈತಿಕ ವಿಮರ್ಶೆ ನಾನು ಮಾಡುತ್ತಿಲ್ಲ. ಆದರೆ ಶಾಸಕನ ಅಧಿಕಾರದ ಆಸೆ ಅವನನ್ನು ಜೀವ ಭಯವನ್ನು ಮೆಟ್ಟಿ ನಿಲ್ಲುವಂತೆ ಮಾಡಿದೆ. ಅದು ಹಿಂದಿನ ಕಾಲದಲ್ಲಿ ರಾಜನೊಬ್ಬ ಯುದ್ಧಕ್ಕೆ ಸಜ್ಜಾದ ಹಾಗೆ.
ತಮಗೆ ಏನಾದರೂ ಆದರೆ ಹೇಗೆ ಎನ್ನುವ ಸಾಮಾನ್ಯ ಮನುಷ್ಯ ಅಂತಹ ಅಪಾಯಗಳಿಗೆ ಎದೆಯೊಡ್ಡುವುದಿಲ್ಲ. ತಲೆ ತಗ್ಗಿಸಿ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತಾನೆ. ಅಪಾಯ ಎದುರಿಸಿ ನಿಲ್ಲುವ ವ್ಯಕ್ತಿ ಒಂದು ಗೆಲ್ಲುತ್ತಾನೆ ಇಲ್ಲವೇ ಸೋತು ಸುಣ್ಣವಾಗುತ್ತಾನೆ ಅಥವಾ ಪ್ರಾಣ ಕಳೆದುಕೊಳ್ಳುತ್ತಾನೆ. ಗೆದ್ದವನ ದೊಡ್ಡಸ್ತಿಕೆ ಇನ್ನೊಬ್ಬ ಪ್ರತಿಸ್ಪರ್ಧಿ ಹುಟ್ಟುವವರೆಗೆ. ಅವನ ಸಂತತಿ ಉಳಿಯುವುದು ಕಷ್ಟ. ಕಾಡಿನಲ್ಲಿ ಹುಲಿಗಳ ಹಾಗೆ. ಆದರೆ ಅಪಾಯದಿಂದ ದೂರ ಸರಿಯುವ ವ್ಯಕ್ತಿಯ ಸಂತತಿ ಬೆಳೆಯುತ್ತ ಹೋಗುತ್ತದೆ. ಕಾಡಿನ ಜಿಂಕೆಗಳ ಹಾಗೆ.
ನಾಡನ್ನಾಳಿದ ಎಷ್ಟೋ ರಾಜ ಮನೆತನಗಳ ಸಂತತಿಗಳು ಬಹು ಬೇಗ ಅಳಿದು ಹೋದವು. ಅದು ಅವರು ಅಪಾಯಗಳನ್ನು ಎದುರಿಸಿದ್ದಕ್ಕೆ. ಸಾಮಾನ್ಯ ಜನರ ಸಂತತಿ ನೂರು ಪಟ್ಟು ಬೆಳೆಯಿತು. ಅದು ಅವರು ಪರಿಸ್ಥಿತಿಗೆ ತಲೆ ಬಾಗಿದ್ದಕ್ಕೆ. ಅದು ಕಾಡಲ್ಲಿನ ಹುಲಿ-ಜಿಂಕೆಯ ಅನುಪಾತದ ಹಾಗೆ.
ಅಧಿಕಾರ ಬೇಕೆನ್ನುವವರು ಮುಂದೆಯೂ ಇರುತ್ತಾರೆ. ಅವರು ಪುಕ್ಕಲರ ಹಾಗೆ ಬದುಕುವುದಿಲ್ಲ. ಮತ್ತು ಅವರ ಅಧಿಕಾರ ತುಂಬಾ ಕಾಲ ಕೂಡ ಉಳಿಯುವುದಿಲ್ಲ. ಹೇಗೋ ಒಂದು ಬದುಕಿದರಾಯಿತು ಎನ್ನುವವರು ಯಾವುದೇ ಸಂಘರ್ಷಕ್ಕೆ ಇಳಿಯುವುದಿಲ್ಲ. ಅವರ ಬದುಕಿದ್ದು, ಸತ್ತಿದ್ದು ಯಾರಿಗೂ ಬದಲಾವಣೆ ತರುವುದಿಲ್ಲ. ಬದಲಾವಣೆ ತರುವವರು ಸಾವಿಗೆ ಅಂಜಿ ಬದುಕುವುದಿಲ್ಲ.
(ಪ್ರಭಾವ: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ಸ್ಪರ್ಧಿಗಳ ಬೀದಿ ಹೊಡೆದಾಟ ನೋಡಿ ಅನಿಸಿದ್ದು)
No comments:
Post a Comment