Wednesday, May 17, 2023

ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ಮುನ್ನ

ಇಂದು ಟಿವಿಯಲ್ಲಿ ಸುಮ್ಮನೆ ಚಾನೆಲ್ ಬದಲು ಮಾಡುತ್ತಿದ್ದಾಗ ಅದರಲ್ಲಿ 'ಜೀವನ ಚೈತ್ರ' ಚಲನ ಚಿತ್ರ ಬರುತ್ತಿದ್ದದ್ದು ಗಮನಿಸಿದೆ. ಆ ಚಿತ್ರ ಅದಾಗಲೇ ಅರ್ಧಕ್ಕಿಂತ ಹೆಚ್ಚು ಮುಗಿದು ಹೋಗಿತ್ತು. ಆಗಲೇ ಒಂದೆರಡು ಬಾರಿ ನೋಡಿದ್ದ ನೆನಪಿದ್ದರೂ ಮತ್ತೆ ನೋಡುವ ಕುತೂಹಲ ಹುಟ್ಟಿತು. 'ಗಂಗಾ ಮಾ, ಜೈ ಜೈ  ಗಂಗಾ ಮಾ' ಎನ್ನುವ ಹಿನ್ನೆಲೆ ಸಂಗೀತದೊಂದಿಗೆ ಅಣ್ಣಾವ್ರು ಹಿಮಾಲಯದ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಾರಲ್ಲ. ಅಲ್ಲಿಂದ ಕೊನೆಯವರೆಗೆ ಟಿವಿ ಬಿಟ್ಟು ಬೇರೆ ಎಲ್ಲೂ ಹೋಗಲಿಲ್ಲ ನಾನು.

'ನಾದಮಯ ಈ ಲೋಕವೆಲ್ಲಾ' ಎನ್ನುವ ಅದ್ಭುತ ಹಾಡಿನಲ್ಲಿ ನಮಗೆ ಗಂಗೋತ್ರಿ, ಗೋಮುಖ, ಕೇದಾರನಾಥ, ಬದರೀನಾಥ, ದೇವಪ್ರಯಾಗ ಕೊನೆಗೆ ಹರಿದ್ವಾರವನ್ನು ತೋರಿಸುತ್ತ ಅಧ್ಯಾತ್ಮ ಲೋಕಕ್ಕೆ ಸೆಳೆಯುವ ಹಾಡು ಹಾಡುವ ಅಣ್ಣಾವ್ರಿಗೆ ತಮ್ಮ ಊರಿನವನನ್ನು ನೋಡಿ ಜ್ಞಾಪಕ ಮರಳುತ್ತದೆ. ತಾಯಿಯನ್ನು ಕಾಣುವ ಆಸೆಯೊಂದಿಗೆ ಊರಿಗೆ ಮರಳುತ್ತಾರೆ ವಿಶ್ವನಾಥ ಜೋಡೀದಾರ.

ತಮ್ಮ ಮನೆಯಲ್ಲಿ ನಡೆದಿರುವ ಕುಡುಕರ ಸಮಾರಾಧನೆಯನ್ನು ಕಂಡು ಸಿಡಿದೇಳುವ ಅಣ್ಣಾವ್ರ ಅಭಿನಯ, ಸಂಭಾಷಣೆಗಳು ಅಮೋಘ. 'ಎಲ್ಲೋ ಅಮ್ಮ' ಎಂದು ತಮ್ಮ ಮಗನನ್ನು ಹಿಡಿದೆತ್ತುವ ಸ್ಥೈರ್ಯ ಅವರ ಪಾತ್ರಗಳಿಗಲ್ಲದೆ ಬೇರೆ ಯಾರಿಗುಂಟು? ಮಗ ಇನ್ನು ಸತ್ತಿಲ್ಲ ಎನ್ನುವ ನಂಬಿಕೆ ಸುಳ್ಳು ಮಾಡದೆ ಅವರ ಅಮ್ಮನಿಗೆ ತಮ್ಮ ತೋಳಿನಲ್ಲೇ ನೆಮ್ಮದಿಯ ಕೊನೆ ಉಸಿರು ಬಿಡುವ ಅವಕಾಶ ವಿಶ್ವನಾಥ ಜೋಡೀದಾರ ಪಾತ್ರಕ್ಕೆ. ನಂತರ ಮದಿರೆ ತಯಾರಿಸುವ ಕಾರ್ಖಾನೆ ಮುಚ್ಚಿಸಿ, ಉಯಿಲು ಬರೆದಿಟ್ಟು ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ರಾಜಕುಮಾರ್ ಅವರ ಅಭಿನಯ ಅದ್ಭುತ.

ಅದೇ ಅಣ್ಣಾವ್ರ ಸೂಪರ್ ಹಿಟ್ ಚಿತ್ರ ಎನ್ನಿಸಿಕೊಂಡ, ೧೯೭೨ ರಲ್ಲಿ ಬಿಡುಗಡೆಗೊಂಡ 'ಬಂಗಾರದ ಮನುಷ್ಯ' ಚಿತ್ರದಲ್ಲಿ ಕೂಡ ಕೊನೆಯ ಸನ್ನಿವೇಶ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದೇ ಇದೆ. ಆದರೆ ಆ ಚಿತ್ರದುದ್ದಕ್ಕೂ ಯಾವ ಪ್ರಯತ್ನ ಬಿಡದೆ ಆದರೆ ಕೊನೆಗೆ ಹತಾಶೆಗೊಂಡು, ಸೋತು ಹೋಗಿ, ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದೇ ಬೇರೆ. ಮತ್ತು 'ಜೀವನ ಚೈತ್ರ'ದ ಸಂತೃಪ್ತ ಜೀವನ ನಡೆಸಿ, ಆತ್ಮ ತೃಪ್ತಿಯೊಂದಿಗೆ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದೇ ಬೇರೆ.

ಎಲ್ಲರ ಜೀವನವೂ ಕೊನೆಯಾಗುತ್ತದೆ. ಅದನ್ನೇ ಚಿತ್ರದಲ್ಲಿ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದರ ಮೂಲಕ ನಿರ್ದೇಶಕ ತೋರಿಸುತ್ತಾನೆ. ೧೯೭೨ರ  'ಬಂಗಾರದ ಮನುಷ್ಯ' ದ ರಾಜೀವನ ಪಾತ್ರ ಮತ್ತು ೧೯೯೨ರ  'ಜೀವನ ಚೈತ್ರ'ದ ವಿಶ್ವನಾಥ ಜೋಡೀದಾರ ಪಾತ್ರ ಹೊರತಲ್ಲ. ಆದರೆ ಆ ಎರಡು ಕಥೆಗಳು ಅಂತ್ಯಗೊಳ್ಳುವ ಸಂದರ್ಭಗಳು ಬೇರೆ ಬೇರೆ. ಮತ್ತು ಆ ಎರಡು ಚಿತ್ರಗಳಲ್ಲಿ ಅಭಿನಯಿಸಿದ ಅಣ್ಣಾವ್ರು ಆ ಪಾತ್ರಗಳಿಗೆ ತುಂಬಿದ ಜೀವಕಳೆಯು ಕೂಡ ಬೇರೆ.

ಅದು ಬರೀ ಕಥೆಗಳಿಗಷ್ಟೇ ಸೀಮಿತವಲ್ಲ. ನನಗೆ, ನಿಮಗೆ ಕೂಡ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ಸಂದರ್ಭ ಬಂದೇ ಬಿಡುತ್ತದೆ. ಆದರೆ ಅಷ್ಟರವರೆಗೆ ನಾವು ಬದುಕಿದ ರೀತಿ ಹೇಗಿತ್ತು, ನಮಗೆ ಬಂದ ಸಂದರ್ಭ ಮತ್ತು ಅವಕಾಶಗಳು ಹೇಗಿದ್ದವು ಅನ್ನುವುದು ನಮಗೆ ರಾಜೀವನ ವಿಷಾದಮಯ ಅಂತ್ಯ ಸಾಧ್ಯವೋ ಅಥವಾ ವಿಶ್ವನಾಥ ಜೋಡೀದಾರರ ನೆಮ್ಮದಿಯ ಅಂತ್ಯ ಸಾಧ್ಯವೋ ಎನ್ನುವದು ನಿರ್ಧರಿಸುತ್ತದೆ. ಎಲ್ಲ ಸಾಧ್ಯತೆಗಳನ್ನು ತೆರೆಯ ಮೇಲೆ ಅಭಿನಯಿಸಿ ತೋರಿಸಿದ ರಾಜಣ್ಣ ಏಕೆ ಅಜರಾಮರ ಎನ್ನುವುದು ಅವರ ಚಿತ್ರಗಳು ಮತ್ತೆ ಮತ್ತೆ ಮನದಟ್ಟು ಮಾಡಿ ತೋರಿಸುತ್ತವೆ.

'' failed to upload. Invalid response: Unexpected token '<', "<html>

  "... is not valid JSON


No comments:

Post a Comment