Monday, September 4, 2023

ಆದಾಯ ಮುಖ್ಯವೋ, ಖರ್ಚು ಮುಖ್ಯವೋ?

ನಿಮಗೆ ಬರುವ ಸಂಬಳ ಎಷ್ಟು?ನಿಮ್ಮ ವ್ಯಾಪಾರದಲ್ಲಿ ಸಿಗುವ ಲಾಭ ಎಷ್ಟು? ಅದು ನಿಮಗೆ ಮತ್ತು ನಿಮ್ಮ ಹತ್ತಿರದವರಿಗಷ್ಟೇ ಗೊತ್ತಿರಲು ಸಾಧ್ಯ.

ನಿಮ್ಮ ಮನೆ ಎಷ್ಟು ದೊಡ್ಡದು? ನಿಮ್ಮ ಕಾರಿನ ಬೆಲೆ ಎಷ್ಟಾಗುತ್ತದೆ? ನೀವು ಧರಿಸುವ ಬಟ್ಟೆಗಳು ಎಂಥವು? ನಿಮ್ಮ ಮೈ ಮೇಲಿರುವ ಬಂಗಾರದ ಒಡವೆಗಳ ಮೌಲ್ಯ ಎಷ್ಟು? ಅದನ್ನು ಯಾರು ಬೇಕಾದರೂ ಹೇಳಲು ಸಾಧ್ಯ.

ನಿಮಗೆ ಇಷ್ಟ ಇದೆಯೋ, ಇಲ್ಲವೋ, ಸಮಾಜ ಮಾತ್ರ ನೀವು ಮಾಡುವ ಖರ್ಚುಗಳ ಮೇಲೆ ನಿಮ್ಮನ್ನು ಅಳೆಯುತ್ತದೆ. ನಿಮಗೆ ಎಷ್ಟು ಪ್ರತಿಷ್ಠೆ ಕೊಡಬೇಕು ಎನ್ನುವುದು ಕೂಡ ಅದರ ಮೇಲೆ ನಿಗದಿಯಾಗಿರುತ್ತದೆ. ನೀವು ಸಮಾಜದಲ್ಲಿನ ಪ್ರತಿಷ್ಠೆಗೆ ಬೆಂಕಿ ಇಡೀ ಎನ್ನಬಹುದು. ಆದರೆ ನಿಮ್ಮ ತಂದೆ-ತಾಯಿ, ಹೆಂಡತಿ-ಮಕ್ಕಳು ಸಮಾಜದ ಒಂದು ಭಾಗ ಅಲ್ಲವೇ? ಅವರಿಗೆ ತಾವು ಏನು ಎಂದು ಯಾರಿಗೋ ತೋರಿಸಬೇಕಾಗಿರುತ್ತದೆ. ಅವರುಗಳು ತಮ್ಮ ಬಿಲ್ಲಿಗೆ ನಿಮ್ಮನ್ನೇ ಬಾಣವನ್ನಾಗಿಸುತ್ತಾರೆ. ಅದೇ ಕಾರಣಕ್ಕೆ ನಿಮ್ಮ ಮನೆಯಲ್ಲಿನ ಸಮಾರಂಭಗಳಿಗೆ ನೀವು ಕಡಿಮೆ ಖರ್ಚು ಮಾಡಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ನೀವು ದುಡಿಮೆ ಕೂಡ ಹೆಚ್ಚಿಗೆ ಮಾಡಿಕೊಳ್ಳಬೇಕಾಗುತ್ತದೆ.

ನಿಮಗೆ ಸರಳ ಜೀವನ ಇಷ್ಟ ಎಂದುಕೊಳ್ಳಿ. ಆದರೆ ನಿಮ್ಮ ಆತ್ಮೀಯ ಸ್ನೇಹಿತರು ಕೂಡ, ಒಂದಲ್ಲ ಒಂದು ಸಲ ನಿಮಗೆ ಖರ್ಚು ಹೆಚ್ಚಿಸಿಕೊಳ್ಳಲು ಸಲಹೆ ನೀಡಿಯೇ ಬಿಡುತ್ತಾರೆ. ಮನೆ ಕಟ್ಟಿಸುವುದು ಒಂದೇ ಸಲ, ಚೆನ್ನಾಗಿಯೇ ಕಟ್ಟಿಸಿಕೊಳ್ಳಿ ಎಂದು ಚೆನ್ನಾಗಿಯೇ ಖರ್ಚು ಮಾಡಿಸುತ್ತಾರೆ. ಆಮೇಲೆ ಎಷ್ಟು ದಿನ ಅಂತ ಬಸ್ ನಲ್ಲಿ, ಬೈಕ್ ನಲ್ಲಿ ಓಡಾಡುತ್ತಿರ? ಅದು ಕೂಡ ಯಾರು ಯಾರೋ ಕಾರು ತೆಗೆದುಕೊಳ್ಳುತ್ತಿರುವ ಕಾಲದಲ್ಲಿ? ಬೆಂಗಳೂರಿನಲ್ಲಿ ಟ್ರಾಫಿಕ್ ಜಾಸ್ತಿ, ಒಬ್ಬ ಡ್ರೈವರ್ ಇಟ್ಟುಕೊಂಡರೆ ಅನುಕೂಲ ಎನ್ನುವುದು ಅದರ ಮುಂದಿನ ಖರ್ಚು. ಅಷ್ಟೆಲ್ಲ ಆದ ಮೇಲೆ ಜೀವನಕ್ಕಿಂತ ದುಡ್ಡು ಮುಖ್ಯನಾ ಎನ್ನುವ ವಾದ ಬೇರೆ.

ನೀವು ಒಮ್ಮೆ ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚುಗಳಿಗೆ ವಾಲಿದರೆ ಮುಗಿಯಿತು. ಊರಿನ ಜನರ ಹೆಸರಿನಲ್ಲಿ ನೀವು ದೊಡ್ಡ ಪಾರ್ಟಿ. ಆದರೆ ಸಾಲ ಯಾವಾಗ ತೀರುತ್ತದೋ ಎನ್ನುವ ನಿಮ್ಮ ಚಿಂತೆ ಅವರಿಗೆ ಕೇಳಲು ಇಷ್ಟವೇ ಇಲ್ಲ. ಈ ಜಂಜಾಟದಲ್ಲಿ ನಿಮಗೆ ದುಡ್ಡಿಗಿಂತ ನೆಮ್ಮದಿ ಮುಖ್ಯ ಎನ್ನಿಸಲು ಶುರು ಆಗುತ್ತದೆ. ನಿಮಗೆ ಈಗಾಗಲೇ ಆದಾಯ ತರುವ ಸಂತೋಷ, ಖರ್ಚು-ಸಾಲ ತರುವ ಸಂಕಟಗಳನ್ನು ಬೇಕಾದಷ್ಟು ಸಲ ಅನುಭವಿಸಿ ಆಗಿದೆ. ಕ್ರಮೇಣ ದುಡ್ಡಿಗಿಂತ ಜೀವನ ಮುಖ್ಯ ಅಲ್ಲವೇ ಎಂದು ನೀವು ಸ್ವಂತ ಅನುಭವದಿಂದಲೇ ಕಂಡುಕೊಳ್ಳುತ್ತೀರಿ. ಆಮೇಲೆ ನೀವು ಬಡವರಾಗಿದ್ದಾಗ ಎಷ್ಟು ನೆಮ್ಮದಿ ಇತ್ತು ಆದರೆ ಈಗ ಶ್ರೀಮಂತಿಕೆ ಬಂದರೂ ಅದು ಏಕಿಲ್ಲ ಎನ್ನುವ ವಿಚಾರ ಮೂಡಲು ಆರಂಭ ಆಗುತ್ತದೆ.

ದುಡ್ಡು ಬೇಕೆಂದರೆ ಅದು ಹೇಗೆ ಸಿಗುವುದಿಲ್ಲವೋ, ಹಾಗೆಯೆ ನೆಮ್ಮದಿ ಬೇಕೆಂದರೆ ಅದು ಸಿಗಲು ಸಾಧ್ಯವೇ ಇಲ್ಲ. ಯಾವುದೊ ವೃತ್ತಿಯಲ್ಲಿ ಪರಿಣಿತಿ ಸಾಧಿಸಿದ ಮೇಲೆ, ಸಾಕಷ್ಟು ಶ್ರಮ ಪಟ್ಟ ಮೇಲೆ ನಿಮಗೆ ದುಡ್ಡು ಬಂತು. ಆದರೆ ನೆಮ್ಮದಿ ಬೇಕೆಂದರೆ ಮಾಡಬೇಕಾದದ್ದು ಇನ್ನೂ ಕಷ್ಟದ ಕೆಲಸ. ಈಗ ನೀವು ನೆಮ್ಮದಿ ಹುಡುಕುವುದಕ್ಕಿಂತ, ನೆಮ್ಮದಿ ಹೇಗೆ ಕಳೆದು ಹೋಗುತ್ತದೆ ಮತ್ತು ಆ ವಿಷಯಗಳನ್ನು ನೀವು ಹೇಗೆ ದೂರ ಮಾಡಿಕೊಳ್ಳಬೇಕು ಎಂದು ಹುಡುಕಬೇಕು. ಪದೇ, ಪದೇ ಕೈ ಕೊಡುವ ಕಾರನ್ನು ಹೇಗೆ ಮಾರಿ ಕೈ ತೊಳೆದುಕೊಳ್ಳುತ್ತೇವೆಯೋ, ಹಾಗೆಯೆ ನಮ್ಮನ್ನು ಸಮಸ್ಯೆಗೆ ಈಡು ಮಾಡುವ ಸಂಗತಿಗಳನ್ನು ದೂರ ಮಾಡಿಕೊಳ್ಳುತ್ತ ಹೋಗಬೇಕು. ಇಷ್ಟ ಪಟ್ಟು ಕಟ್ಟಿಸಿದ ಮನೆ ಕೂಡ ಮಾರಿ ಬಿಡಬಹುದು. ಆದರೆ ಪದೇ ಪದೇ ಫೇಲ್ ಆಗುವ ಮಗನನ್ನು ಏನು ಮಾಡುವಿರಿ? ಮನುಷ್ಯ ಸಂಬಂಧದ ಸಮಸ್ಯೆಗಳಿಂದ ಪಾರಾಗುವುದು ಕಠಿಣ.

ದುಡ್ಡು ಗಳಿಸುವುದು-ಉಳಿಸಿಕೊಳ್ಳುವುದು ಹೇಗೆ ಕಠಿಣವೋ, ನೆಮ್ಮದಿ ಕೂಡ ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದು ಹೆಚ್ಚು ಕಠಿಣ. ದುಡ್ಡಿನ ವಿಷಯದಲ್ಲಿ ಹೇಗೆ ಆದಾಯ-ಖರ್ಚುಗಳನ್ನು ಸರಿದೂಗಿಸಿಕೊಂಡು ಹೋಗಬೇಕೋ, ನೆಮ್ಮದಿಯಲ್ಲಿ ಕೂಡ ಖುಷಿ ತರುವ ವಿಷಯಗಳು, ಬೇಜಾರು ಮಾಡುವ ವಿಷಯಗಳನ್ನು ಸಮತೋಲನದಲ್ಲಿಡಬೇಕು. ನಿಮ್ಮ ಖರ್ಚು ಕಡಿಮೆ ಇದ್ದರೆ, ಕಡಿಮೆ ಆದಾಯದಲ್ಲಿ ಬದುಕಬಹುದಲ್ಲವೇ? ಅದು ದುಡ್ಡು ಆಗಿರಲಿ, ನೆಮ್ಮದಿಯೇ ಆಗಿರಲಿ. ಕಡಿಮೆ ಸಂತೋಷ ಬಯಸಿದರೆ, ದುಃಖ ಕೊಡುವ ಸಂಗತಿಗಳು ಕೂಡ ತಾನಾಗಿಯೇ ಕಡಿಮೆ ಆಗುತ್ತವೆ. ಖರ್ಚು ಕಡಿಮೆ ಮಾಡಲು ಸಾಧ್ಯ ಇಲ್ಲ ಎಂದರೆ, ಅವುಗಳು ಹತೋಟಿಯಲ್ಲಾದರೂ ಇರಬೇಕು. ಅಂದ ಹಾಗೆ ಇದನ್ನು ನಾನು ಪುಸ್ತಕ ಓದಿ ಕಲಿತದದ್ದಲ್ಲ.

ನೀವು ಕಡು ಬಡತನದಲ್ಲಿದ್ದರೆ ನಿಮಗಿರುವುದು ಆದಾಯದ ಸಮಸ್ಯೆ. ಊಟ-ಬಟ್ಟೆಗೆ ತೊಂದರೆಯಿಲ್ಲ ಆದರೆ ದುಡ್ಡು ಸಾಕಾಗುತ್ತಿಲ್ಲ ಎಂದರೆ ಅದು ಖರ್ಚಿನ ಸಮಸ್ಯೆ. ಹಣಕಾಸಿನ ತೊಂದರೆ ಇಲ್ಲ ಆದರೆ ನೆಮ್ಮದಿ ಇಲ್ಲ ಎಂದರೆ ನೀವು ಜೀವನದಲ್ಲಿ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ನಿಮ್ಮಲ್ಲಿ ದುಡ್ಡು-ನೆಮ್ಮದಿ ಎರಡು ಇದ್ದು ಇನ್ನೂ ಫೇಸ್ ಬುಕ್ ನಲ್ಲಿ ಉಳಿದುಕೊಂಡಿದ್ದರೆ ನಿಮಗೆ ಪ್ರಣಾಮಗಳು.

No comments:

Post a Comment