Sunday, September 24, 2023

ಕಾದಂಬರಿ: ಸನ್ಯಾಸಿಯ ಬದುಕು (ಶಿವರಾಮ ಕಾರಂತ)

ಜೂಜಿನಲ್ಲಿ ದುಡ್ಡು ಕಳೆದುಕೊಂಡುಕೊಂಡು, ಹತಾಶನಾಗಿ, ಜೀವನದಲ್ಲಿ ಜುಗುಪ್ಸೆಗೊಂಡು ದೇಶಾಂತರ ಹೋಗುವ ಶಂಕರರಾಯ ಮತ್ತು ಅವನು ಬಿಟ್ಟು ಹೋದ ಪತ್ನಿಯನ್ನು ಮತ್ತು ಮಕ್ಕಳನ್ನು ಸಲಹುವ ರುಕ್ಮಿಣಿ ಮಾಯಿ ಈ ಕಾದಂಬರಿಯ ಮುಖ್ಯ ಪಾತ್ರಗಳು.


ಸಾಲ ಮಾಡಿ, ಜವಾಬಾರಿಯನ್ನು ನಿಭಾಯಿಸದೆ ಹೆಂಡತಿ ಸುಮಿತ್ರೆ ಮತ್ತು  ಮಕ್ಕಳಿಬ್ಬರನ್ನು ಹಿಂದೆ ಬಿಟ್ಟುಹೋಗುವ ಶಂಕರರಾಯ ಸಾಧುಗಳ ಜೊತೆ ಅಲೆಯುತ್ತ ದೇಶ ಸುತ್ತುತ್ತಾನೆ. ಅವರ ಅಲೌಕಿಕ ಭಾಷೆ ಕಲಿಯುತ್ತಾನೆ. ಅವನು ಹೆಸರು ಶಿವಾನಂದ ನಂತರ ಕೃಷ್ಣಾನಂದ ಎಂದು ಬದಲಾಗುತ್ತದೆ.  ಅವನ ಸುತ್ತಾಟದ ಸಮಯದಲ್ಲಿ ಅವನಿಗೆ ಭಕ್ತರು, ಅಭಿಮಾನಿ ಬಳಗ ಬೆಳೆಯುತ್ತದೆ. ತಾನು ಬಿಟ್ಟು ಹೋದ ಊರಿನ ಸಮೀಪವೇ ಅವನಿಗೆ ಭಕ್ತರು ಆಶ್ರಮ ನಿರ್ಮಿಸುತ್ತಾರೆ. ಅವನಿಗೆ ದೇವ ದೂತ ಎಂದು ಜನ ಪೂಜಿಸಲು ತೊಡಗುತ್ತಾರೆ.


ಗಂಡ, ಮಕ್ಕಳಿಲ್ಲದೆ ಅವರಿವರ ಮನೆ ಕೆಲಸದಲ್ಲಿ ನೇರವಾಗಿ, ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ರುಕ್ಮಿಣಿ ಮಾಯಿ, ಸುಮಿತ್ರೆಯ ಪರಿಸ್ಥಿತಿ ಕಂಡು ಮರುಗುತ್ತಾಳೆ. ಅವಳಿಗೆ ತಾಯಿಯ ಸ್ಥಾನದಲ್ಲಿ ನಿಂತು ವರುಷಗಳ ಕಾಲ ಅವಳ ಕುಟುಂಬಕ್ಕೆ ಆಸರೆಯಾಗುತ್ತಾಳೆ. ಅವಳ ಮಕ್ಕಳನ್ನು ಪೋಷಿಸುತ್ತಾಳೆ. ಕೊನೆಗೆ ಆ ಮನೆಯಲ್ಲೇ ಪ್ರಾಣ ತ್ಯಜಿಸುತ್ತಾಳೆ.


ಜೀವನೋತ್ಸಾಹ, ಸಮಾಜಮುಖಿ ಕಾದಂಬರಿಗಳನ್ನು ಬರೆದ ಶಿವರಾಮ ಕಾರಂತರು ಇಲ್ಲಿಯೂ ಕೂಡ ಜೀವನ ಕಷ್ಟಗಳನ್ನು ಎದುರಿಸುತ್ತ ಅದರಲ್ಲೇ ಸಾರ್ಥಕತೆ ಕಾಣುವ ಜೀವಗಳನ್ನು ಅಭಿನಂದಿಸುತ್ತಾರೆ. ಹಾಗೆಯೆ, ಸನ್ಯಾಸಿಯಾಗಿ ದೇವರನ್ನು ಹುಡುಕುತ್ತ ಹೊರಟವರು, ವೈರಾಗ್ಯದ ಸೋಗಿನಲ್ಲಿ ತಾವು ಬಿಟ್ಟು ಬಂದ ಪ್ರಾಪಂಚಿಕ ಆಸೆಗಳನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಅನುಭವಿಸಲು ತೊಡಗುತ್ತಾರೆ ಮತ್ತು ಅದಕ್ಕೆ ದೇವರ ಇಚ್ಛೆ ಎನ್ನುವ ಸಬೂಬು ನೀಡುತ್ತಾರೆ ಎನ್ನುವುದನ್ನು ಸೊಗಸಾಗಿ ಚಿತ್ರಿಸುತ್ತಾರೆ. 

 

ಇದು ೧೯೪೮ ರಲ್ಲಿ ಪ್ರಕಟಗೊಂಡ ಕಾದಂಬರಿ. ಆಗ ಕಾರಂತರು ಸುಮಾರು ನಲವತ್ತೈದು ವರ್ಷ ವಯಸ್ಸಿನವರು. ಅವರ 'ಮೂಕಜ್ಜಿಯ ಕನಸುಗಳು' ಪುಸ್ತಕ ಬರುವುದಕ್ಕೆ ಇನ್ನೂ ಮೂವತ್ತು ವರ್ಷ ಬಾಕಿಯಿತ್ತು. ಆ ವಯಸ್ಸಿನಲ್ಲೇ ಅವರು  ವೈರಾಗಿಗಳ ಸೋಗಿನಲ್ಲಿ ಇರುವ ಜನರ ಮನಸ್ಸಿನಾಳಕ್ಕೆ ಇಳಿದು, ಅವರ ಅನ್ವೇಷಣೆ ಮೊದಲಿಗೆ ಪ್ರಾಮಾಣಿಕವಾಗಿದ್ದರೂ ಮತ್ತೆ ಸಮಾಜದೊಳಗೆ ದೇವ ಮಾನವರ ರೂಪದಲ್ಲಿ ಹೇಗೆ ವಾಪಸ್ಸಾಗುತ್ತಾರೆ ಮತ್ತೆ ಅವೇ ಪ್ರಾಪಂಚಿಕ ಹಂಬಲಗಳಿಗೆ ಹೇಗೆ ಬಲಿಯಾಗುತ್ತಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ಹಾಗೆಯೆ ನಮ್ಮೊಳಗೇ ಸಮಾಜದ ಕೆಳಸ್ತರದಲ್ಲಿ ಬದುಕಿದರೂ, ಮಾನವೀಯತೆಯನ್ನು ಎತ್ತಿ ಹಿಡಿಯುವ ಜೀವಗಳು ಮತ್ತು ಅದರಲ್ಲೇ ದೇವರನ್ನು ಕಾಣುವ ವ್ಯಕ್ತಿಗಳ ಸಾರ್ಥಕತೆ  ಸನ್ಯಾಸಿಗಳಿಗಿಂತ ಹೆಚ್ಚಿನದು ಎಂದು ತೋರಿಸಿಕೊಡುತ್ತಾರೆ.


ಬದುಕನ್ನು ಪ್ರೀತಿಸಿದ ಕಾರಂತರು ತಮ್ಮ ಕಾದಂಬರಿಗಳ ಮೂಲಕ ಕೂಡ ಅದೇ ಸಂದೇಶವನ್ನೇ ಸಾರುತ್ತಾರೆ.





No comments:

Post a Comment