Sunday, October 8, 2023

ಇಳಿಸಂಜೆಯ ಹೆಂಗಸು

(ಇದು William  Dalrymple ಅವರ "Nine Lives" ಪುಸ್ತಕದಲ್ಲಿನ 'The Lady Twilight' ಅಧ್ಯಾಯದ ಭಾವಾನುವಾದದ ಸಾರಾಂಶ)

'ನೀನು ತಲೆಬುರುಡೆಯನ್ನು ಕುಡಿಯುವದಕ್ಕೆ ಉಪಯೋಗ ಮಾಡುವ ಮೊದಲು ಅದು ಸರಿಯಾದ ಶವದಿಂದ ಬಂದದ್ದು ಎನ್ನುವುದು  ಖಚಿತ ಪಡಿಸಿಕೊಳ್ಳಬೇಕು.'

ನಾವು ಸ್ಮಶಾನ ಮಧ್ಯದಲ್ಲಿದ್ದ ಗುಡಿಸಲು ಒಂದರಲ್ಲಿ ಕುಳಿತು ಮಾತನಾಡುತ್ತಿದ್ದೆವು. ಅದು ಬಂಗಾಳದಲ್ಲಿನ ತಾರಾಪೀಠ. ಶಕ್ತಿ ಪೀಠ ಎಂದು ಕೂಡ ಕರೆಸಿಕೊಳ್ಳುತ್ತದೆ. ಅದು ಮಹಾನ್ ಶಕ್ತಿ ದೇವತೆಯಾದ ತಾರಾಳ ಮನೆ.

ತಾರಾಪೀಠ ಅಶುಭ ಎನ್ನಿಸುವ ಒಂದು ವಿಲಕ್ಷಣ ಜಾಗ. ಕಲ್ಕತ್ತೆಯಲ್ಲಿ ನನಗೆ ಈ ಜಾಗದ ಬಗ್ಗೆ ಸಾಕಷ್ಟು ಜನ ಎಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲಿ ಮಧ್ಯ ರಾತ್ರಿಯಲ್ಲಿ ನಡೆಯುವ ಸಂಗತಿಗಳ ಬಗ್ಗೆ ಜನ ಗುಸು ಗುಸು ಮಾತನಾಡಿಕೊಳ್ಳುತ್ತಾರೆ.

ಆದರೆ ಅಲ್ಲಿಯೇ ತಾರಾ ದೇವತೆ ಜೀವಿಸುವುದು. ಬಲಿ ಕೊಡುವ ಕುರಿಗಳ ರಕ್ತ ಹೀರಿಯೇ  ಅವಳು ಸಂಪನ್ನಳಾಗುವುದು. ಆ ಸ್ಮಶಾನದಲ್ಲಿಯೇ ಅನೇಕ ತಾಂತ್ರಿಕ ಸಾಧಕರು ನೆಲೆಗೊಂಡಿದ್ದಾರೆ. ಅವರ ಗುಡಿಸಲ ಬಾಗಿಲಿಗೆ ಮನುಷ್ಯರ ಅದರಲ್ಲೂ ಸಣ್ಣ ಮಕ್ಕಳ ತಲೆಬುರುಡೆಗಳನ್ನು ತೋರಣದಂತೆ ತೂಗು ಹಾಕಿದ್ದಾರೆ. ನರಿ, ಹದ್ದುಗಳ ಮತ್ತು ಹಾವುಗಳ ತಲೆ ಬುರುಡೆಗಳು ಮತ್ತು ಎಲುಬುಗಳು ಕೂಡ ಆ ಮಾಲೆಗಳಲ್ಲಿ ಕಾಣಬಹುದು.

" ಅದು ಸರಿಯಾದ ತಲೆ ಬುರುಡೆ ಎಂದು ಹೇಗೆ ಗೊತ್ತಾಗುತ್ತದೆ?" ನಾನು ಮನಿಷಾಳನ್ನು ಕೇಳಿದೆ.

"ಸ್ಮಶಾನದಲ್ಲಿ ಕಾವಲು ಇರುವವರು, ಅಂತ್ಯ ಸಂಸ್ಕಾರಕ್ಕೆ ನೆರವಾಗುವವರು ನಮಗೆ ಈ ತಲೆ ಬುರುಡೆ ತಂದು ಕೊಡುತ್ತಾರೆ" ವಾಸ್ತು ಸ್ಥಿತಿಯನ್ನು ಹೇಳುತ್ತಾ ಮನಿಷಾ ಮುಂದುವರೆಸಿದಳು. "ಸತ್ತ ವ್ಯಕ್ತಿ ಆತ್ಮ ಹತ್ಯೆ ಮಾಡಿಕೊಂಡಿದ್ದರೆ ಅದು ಅತ್ಯುತ್ತಮ ತಲೆ ಬುರುಡೆ. ಹಾಗೆ ಮದುವೆ ಆಗದೆ ತೀರಿಕೊಂಡ ಕುಮಾರಿಯರ ತಲೆ ಬುರುಡೆಗಳು ಕೂಡ ವಿಶೇಷ ಶಕ್ತಿ ಹೊಂದಿರುತ್ತವೆ"

"ಆಮೇಲೆ?"

"ಒಂದು ಸಲ ಸರಿಯಾದ ತಲೆ ಬುರುಡೆ ಸಿಕ್ಕ ಮೇಲೆ, ಅದನ್ನು ಕೆಲ ದಿನ ಮಣ್ಣಲ್ಲಿ ಹುದುಗಿಸಬೇಕು. ನಂತರ ಹೊರ ತೆಗೆದು ಎಣ್ಣೆ ಸವರಬೇಕು. ಆಗ ಅದು ಕುಡಿಯಲು ಯೋಗ್ಯ  ಬಟ್ಟಲು ಆಗುತ್ತದೆ. ಬರಿ ಮಾಲೆ ಮಾಡಿ ಹಾಕುವುವುದಾದರೆ, ಅದನ್ನು ಒಣಗಿಸಿ, ಅದಕ್ಕೆ ಕೆಂಪು ಬಣ್ಣ ಬಳಿದು ತೂಗು ಬಿಡಬಹುದು, ಆಗ ಅದು ಮಳೆಗೆ ಕೆಡುವುದಿಲ್ಲ"

ಹೊರ ಜಗತ್ತಿನಲ್ಲಿ ಮಾಟ-ಮಂತ್ರ ಎಂದು ಭೀತಿಯಿಂದ ಕರೆಸಿಕೊಳ್ಳುವ ಈ ಅಭ್ಯಾಸಗಳು ಈ ಜಾಗದಲ್ಲಿ ಸಾಧಾರಣ ಸಂಗತಿ ಅಷ್ಟೇ. ಈ ಜಾಗದಲ್ಲಿ ವಾಸಿಸುವ ತಾಂತ್ರಿಕ ಸಾಧಕರು, ತಮ್ಮ ಮೈಗೆಲ್ಲ ಬೂದಿ ಬಳೆದುಕೊಂಡು, ನಗ್ನ-ಅಥವಾ ಅರೆ ನಗ್ನರಾಗಿ,  ತಾಯಿ ತಾರಾಳ ಆರಾಧನೆಯಲ್ಲಿ ತೊಡಗಿರುತ್ತಾರೆ. ಅಲ್ಲಿರುವ ಅನೇಕ ಸಾಧಕರಲ್ಲಿ ಒಬ್ಬ ತಪನ್ ಸಾಧು. ಅವನು ಮನಿಶಾಳ ಗುರು ಮತ್ತು ಸಂಗಾತಿ.

ಮನಿಷಾ ಭಯ ಹುಟ್ಟಿಸುವ ಹೆಣ್ಣು ಮಗಳಲ್ಲ. ಅವಳ ಜಡ್ಡುಗಟ್ಟಿದ ಕೂದಲು, ಕೇಸರಿ ಬಣ್ಣದ ಬಟ್ಟೆಗಿಂತ ಅವಳ ನಡತೆಯಲ್ಲಿ ಹೆಚ್ಚಿನ ವ್ಯಕ್ತಿತ್ವದಲ್ಲಿ ತೋರುವುದು. ಅವಳು ದೇವಿ ಆರಾಧನೆಗೆ ಬರುವ ಭಕ್ತರಲ್ಲಿ ಆದರೆ ತೋರುತ್ತಾಳೆ. ದಾರಿಹೋಕ ಸಾಧುಗಳಿಗೆ ನೀರು-ಚಹಾ ನೀಡಿ ಸುಧಾರಿಸಿಕೊಳ್ಳುವ ವ್ಯವಸ್ಥೆ ಮಾಡುತ್ತಾಳೆ. ಮತ್ತು ತಪನ್ ಸಾಧುವನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ.

ಅವಳು ಹೇಳಿದಳು "ಜನ ಏನಾದರೂ ಮಾತನಾಡಿಕೊಳ್ಳಲಿ. ಇದು ಭೂತ ಪ್ರೇರಿತ ಹೆದರಿಕೊಳ್ಳುವ ಜಾಗವಲ್ಲ. ಇಲ್ಲಿರುವ ನಾವುಗಳು, ಪಟ್ಟಣದಲ್ಲಿರುವ ಜನರಿಗಿಂತ, ಒಬ್ಬರನ್ನೊಬ್ಬರು ಕಾಳಜಿಯಿಂದ ನೋಡಿಕೊಳ್ಳುತ್ತೇವೆ. ಆದರೆ ಜನರಿಗೆ ನಮ್ಮ ಬಗ್ಗೆ ತಲ್ಪು ಕಲ್ಪನೆಗಳಿವೆ. ಇಲ್ಲಿರುವವರು ಮಧ್ಯ ವ್ಯಸನಿಗಳು. ಸಣ್ಣ ಮಕ್ಕಳನ್ನು ಕದ್ದು , ನರಬಲಿ ಕೊಡುತ್ತಾರೆ ಎಂದೆಲ್ಲ ಅಂದುಕೊಳ್ಳುತ್ತಾರೆ. ನನ್ನನ್ನು ಕೂಡ ಮಾಟಗಾತಿ ಎಂದುಕೊಂಡಿದ್ದಾರೆ."

ಅವಳು ಮುಂದುವರೆಸಿದಳು "ಇಲ್ಲಿರುವವರೆಲ್ಲ ತಾಯಿ ತಾರಾಳ ಭಕ್ತರು. ಅವಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಅವಳನ್ನು ಪೂಜಿಸುವವರು. ರೀತಿಗಳು ಮಾತ್ರ ಭಿನ್ನ ಅಷ್ಟೇ. ತಾಯಿ ತಾರಾ ಇಲ್ಲಿಯೇ ನೆಲೆಸಿದ್ದಾಳೆ. ಅವಳು ಪ್ರತಿ ದಿನ ನಮ್ಮ ಅನುಭವಕ್ಕೆ ಬರುತ್ತಾಳೆ. ತಾಯಿ ಯಾರಲ್ಲೂ ಭೀತಿ ಹುಟ್ಟಿಸುವುದಿಲ್ಲ. ಗಂಡ-ಅತ್ತೆಗೆ ಬೇಡವಾಗಿದ್ದ ನಾನು, ನನಗಿದ್ದ ಮೂರು ಹೆಣ್ಣು ಮಕ್ಕಳನ್ನು ಬಿಟ್ಟು ಮನೆಯಿಂದ ಹೊರ ಬಂದಾಗ ನನಗೆ ರಕ್ಷಣೆ ನೀಡಿದ್ದು ತಪನ ಸಾಧು. ಇಲ್ಲಿಗೆ ಬರುವಂತೆ ತಾಯಿಯೇ ನನಗೆ ಪ್ರೇರಣೆ ನೀಡಿದ್ದು. ಇನ್ನು ನಾನು ಬೇರೆಲ್ಲಿಗೂ ಹೋಗಲಾರೆ. ಈ ಸ್ಮಶಾನದಲ್ಲೇ ನಾನು ಜೀವನ  ಕಂಡುಕೊಂಡಿದ್ದು. ತಾಯಿ ತಾರಲೇ ನನಗೆ ರಕ್ಷಣೆ, ನನಗೆ ಸ್ಪೂರ್ತಿ. ಇನ್ನು ನನ್ನ ಜೀವನ ಅವಳೇ ನಿರ್ಧರಿಸುತ್ತಾಳೆ "

ಅಂದು ಸಂಜೆ ಮನಿಷಾ ನನ್ನನ್ನು ದೇವಸ್ಥಾನಕ್ಕೆ ಕರೆದುಕೊಂಡು  ಹೋದಳು. ಸಂಜೆ ಆರತಿಯ ಹೊತ್ತಾದರೂ, ದೇವಸ್ಥಾನದಲ್ಲಿ ಜನರು ಕಡಿಮೆಯೇ ಇದ್ದರು. ಹೊರಗೆ ತಪನ್ ಸಾಧು ಯಾವುದೊ ಪೂಜೆಯ ಕೈಂಕರ್ಯದಲ್ಲಿ ತೊಡಗಿದ್ದ. ಅದನ್ನು ಮಾಡಿಸಲು ಬಂದವನು ಒಬ್ಬ ರಾಜಕಾರಣಿ. ತನಗೆ ಚುನಾವಣೆಯಲ್ಲಿ ಗೆಲುವು ಸಿಗಲೆಂದು ಆ ಪೂಜೆ ಮಾಡಿಸಿ ಹಾಗೆಯೆ ಬಲಿ ಕೊಡಲು ಒಂದು ಕುರಿಯನ್ನು ತಂದಿದ್ದ.

ಅದನ್ನು ದೂರದಿಂದಲೇ ಗಮನಿಸುತ್ತಾ, ಮನಿಷಾ ಮಾತಿಗೆ ತೊಡಗಿದಳು.

"ನನಗೆ ಏಳು ಜನ ಅಕ್ಕಂದಿರು ಮತ್ತು ಒಬ್ಬ ತಮ್ಮ. ಮನೆಯಲ್ಲಿ ದಿನಕ್ಕೆ ಒಂದೇ ಹೊತ್ತು ಉಣ್ಣುವಷ್ಟು ಬಡತನ. ತಾಯಿಗೆ ನನ್ನ ತಮ್ಮನ ಮೇಲೆ ವಿಶೇಷ ಪ್ರೀತಿ. ನನಗೆ ಚಿಕ್ಕಂದಿನಿಂದಲೂ ಆಧ್ಯತ್ಮದ ಬಗ್ಗೆ ಸೆಳೆತ. ಮನೆಯಲ್ಲಿ ದುರ್ಗೆ, ಕಾಳಿ, ತಾರಾ ದೇವತೆಗಳ ಚಿತ್ರಪಟಗಳನ್ನು ನೋಡುತ್ತಾ ಭಕ್ತಿ ಪರವಶಳಾಗುತ್ತಿದ್ದೆ.

ಹದಿನಾರು ವರುಷಕ್ಕೆ ನನಗೆ ಮದುವೆ ಆಯಿತು, ಮೊದಲ ಮಗಳು ಹುಟ್ಟಿದ ಮೇಲೆ ನನಗೆ ಮೈ ಮೇಲೆ ದೇವಿ ಬರಲು ಆರಂಭಿಸಿದಳು. ಕಾಲ ಕ್ರಮೇಣ ಅದು ಹೆಚ್ಚಾಗುತ್ತಾ ಹೋಯಿತು. ಅದು ನನ್ನ ಗಂಡ-ಅತ್ತೆಗೆ ಕಸಿವಿಸಿ ಉಂಟು ಮಾಡುತ್ತಾ ಹೋಯಿತು. ಒಂದು ದಿನ ಮೈ ಮೇಲೆ ದೇವಿ ಬಂದು ನನಗೆ ಪ್ರಜ್ಞೆ ತಪ್ಪಿ ಕೆಲ ಸಮಯದ ನಂತರ ಎಚ್ಚರವಾದಾಗ ಪೂಜಾರಿಯೊಬ್ಬ ನನ್ನ ಕಾಲು ತೊಳೆದು ಪೂಜೆ ಮಾಡಿದ್ದೂ ನನ್ನ ಗಮನಕ್ಕೆ ಬಂತು. ನನ್ನ ಗಂಡ-ಅತ್ತೆಗೆ ಇದು ಸರಿ ಕಾಣದೆ ಹೋಯಿತು. ಆದರೆ ನನ್ನ ಮೇಲೆ ದೇವಿ ಬರುವುದು ಹೆಚ್ಚಾಗುತ್ತಾ ಹೋಯಿತು. ಒಂದು ದಿನ ದೇವಿ ಪ್ರೇರಣೆಯೊಂದ ಮನೆಯಿಂದ ಹೊರ ಬಿದ್ದು ಒಂದು ಕಾಳಿ ಮಂದಿರ ಸೇರಿದೆ. ಮತ್ತೆ ಕನಸಿನಲ್ಲಿ ತಾರಾಪೀಠಕ್ಕೆ ಬಂದು ತಪನ್ ಸಾಧುವನ್ನು ಕಾಣುವಂತೆ ತಾಯಿ ಅಪ್ಪಣೆ ಕೊಟ್ಟಳು. ಅಲ್ಲಿಂದ ಇದೆ ನನ್ನ ಮನೆ ಆಯಿತು.

ಈಗ ನನ್ನ ಆರಾಧನೆ ತಾಯಿ ತಾರಾಳಿಗೆ ಮೀಸಲು. ಅದಕ್ಕೆ ತಲೆ ಬುರುಡೆಗಳು ಸಹಾಯ ಆಗುತ್ತವೆ. ಆದರೆ ನಾನು ಈಗ ತಾಯಿಯನ್ನು ಪ್ರೀತಿಯಿಂದ ಒಲಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದೇನೆ."

"ನಿನಗೆ ಕುಟುಂಬದ ನೆನಪಾಗಲಿಲ್ಲವೇ?" ನಾನು ಕೇಳಿದೆ.

ತಾರಾ ಉತ್ತರಿಸಿದಳು "ಇಪ್ಪತ್ತು ವರುಶಗಳವರೆಗೆ ಯಾವುದೇ ಸಂಪರ್ಕ ಇರಲಿಲ್ಲ. ನನ್ನ ಗಂಡ ತಾನು ಸಾಯುವ ಮುನ್ನ, ನಾನು ತಾರಪುರದಲ್ಲಿ ಇರುವ ವಿಷಯ ನನ್ನ ಮಕ್ಕಳಿಗೆ ತಿಳಿಸಿದನಂತೆ. ಅವರು ನನ್ನನ್ನು ಹುಡುಕಿಕೊಂಡು ಬಂದರು. ಇಬ್ಬರು ದೊಡ್ಡ ಹೆಣ್ಣು ಮಕ್ಕಳಿಗೆ ಮದುವೆ ಆಗಿ ಮಕ್ಕಳು ಆಗಿದ್ದರು. ನಾವು ಒಬ್ಬರನ್ನೊಬ್ಬರು ನೋಡಿದ ಎಷ್ಟೋ ಹೊತ್ತು ಮಾತೇ ಹೊರಡಲಿಲ್ಲ.ನಂತರ ಒಬ್ಬರನ್ನೊಬ್ಬರು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತೆವು. ನನ್ನ ಚಿಕ್ಕ ಮಗಳು ಮತ್ತು ತಾಯಿ ಹತ್ತಿರದ ಊರಲ್ಲೇ ಇರುತ್ತಾರೆ. ಆಗಾಗ ಭೇಟಿಯಾಗುತ್ತವೆ. ಇವತ್ತು ಬೆಳಿಗ್ಗೆ ಪೂಜೆಗೆ ಅವರು ಬಂದು ಹೋದರು".

ಇನ್ನು ಮಾತು ಸಾಕು ಎನ್ನುವಂತೆ ಮನಿಷಾ ಹೇಳಿದಳು "ನನಗೆ ಉಳಿದಿರುವ ಆಸೆ ಎಂದರೆ ತಾಯಿ ತಾರಾಳ ತೋಳ್ತೆಕ್ಕೆಯಲ್ಲಿ ಸಾಯಬೇಕು ಎನ್ನುವುದು ಒಂದೇ".

--0--

No comments:

Post a Comment