ನಾನು ಚಿಕ್ಕವನಿದ್ದಾಗ (೮೦ ರ ದಶಕದಲ್ಲಿ) ಹಳ್ಳದಿಂದ, ದೂರದ ಮನೆಗಳಲ್ಲಿ ಆಳದಲ್ಲಿರುವ ನಲ್ಲಿಗಳಿಂದ ಕೊಡದಲ್ಲಿ ನೀರು ಹೊತ್ತು ತಂದ ನೆನಪಿದೆ. ಇದು ಪ್ರತಿನಿತ್ಯದ ಮನೆಯವರೆಲ್ಲರ ಕೆಲಸವಾಗಿತ್ತು. ಬರೀ ನಮ್ಮನೆ ಅಷ್ಟೇ ಅಲ್ಲ. ಊರಲ್ಲಿರುವ ಎಲ್ಲರಿಗು ಕೊಡದಲ್ಲಿ ನೀರು ಹೊತ್ತು ತಂದರಷ್ಟೇ ಮನೆಯಲ್ಲಿ ನೀರು. ಆ ಪರಿಸ್ಥಿತಿಯಲ್ಲಿ ಹಬ್ಬ ಬಂದರೆ, ನೆಂಟರು ಬಂದರೆ ಮನೆಯಲ್ಲಿ ನೀರಿಗೇನು ಮಾಡುವುದು ಎನ್ನುವ ಚಿಂತೆ ನನ್ನ ತಾಯಿಯಾದಾಗಿರುತ್ತಿತ್ತು .
ಕಾಲ ಬದಲಾಯಿತು. ಮನೆ ಮುಂದಿನ ನಲ್ಲಿಗಳಿಗೆ ನೀರು ಬರಲಾರಂಭಿಸಿತು. ಕೆಲವರಿಗೆ ಬೋರ್ವೆಲ್ ಸೌಲಭ್ಯ. ಇನ್ನು ನೀರು ಕಡಿಮೆ ಬಿದ್ದರೆ ಟ್ಯಾಂಕರ್ ಗಳಿಂದ ನೀರು ತರಿಸಿಕೊಳ್ಳುವುದು ಕೂಡ ಈಗ ಸಾಧ್ಯ. ಗಂಡಸರಾದರೆ ಭುಜದ ಮೇಲೆ, ಹೆಂಗಸರಾದರೆ ಸೊಂಟದಲ್ಲಿ ಕೊಡ ಹೊತ್ತು ಬರುವ ನೋಟ ಈಗ ತೀರಾ ಅಪರೂಪ.
ಆಗಿನ ಕಾಲಕ್ಕೂ ಹೋಲಿಸಿ ನೋಡಿದರೆ ಈಗಿರುವ ಸೌಲಭ್ಯಗಳಿಗೆ ಅಂದಿನ ಕಾಲ ಏನು ಅಲ್ಲ. ಆದರೆ ಕೊಡದಲ್ಲಿ ನೀರು ಹೊತ್ತು ತರುವುದು ಒಂದು ಜವಾಬ್ದಾರಿ ಅಂದುಕೊಡದಿದ್ದ ನಮಗೆ ಅದು ದುಃಖದ ಸಂಗತಿ ಅಂತ ಅನಿಸಿಯೇ ಇರಲಿಲ್ಲ. ಊರ ಜನ ಕೊಡ ಹೊತ್ತು ತರುವಾಗ ನಮಗೆಲ್ಲಿಂದ ದುಃಖ? ಅದೇ ಈಗ ಯಾರಿಗಾದರೂ ಕೊಡದಲ್ಲಿ ನೀರು ಹೊತ್ತು ತನ್ನಿ ಎಂದರೆ ಅದು ತಮಗೆ ಕೊಟ್ಟ ಶಿಕ್ಷೆ ಎಂದುಕೊಳ್ಳುತ್ತಾರೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನಾವೊಬ್ಬರೆ ನೀರನ್ನು ಹೊತ್ತ ತರಬೇಕಾದ ಪರಿಸ್ಥಿತಿ ಇದ್ದರೆ ಮಾತ್ರ ದುಃಖ. ಇಲ್ಲದಿದ್ದರೆ ಅದು ಸಾಮಾನ್ಯ ಅಂಶ ಅಷ್ಟೇ. ಅಲ್ಲಿ ದುಃಖ-ಸಂತೋಷ ಎರಡೂ ಇಲ್ಲ. ಇದು ಜೀವನದ ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ನಿಮ್ಮ ಊರಲ್ಲಿ ಎಲ್ಲರು ಹರಿದ ಬಟ್ಟೆಗಳನ್ನು ಧರಿಸಿದರೆ ನಮಗೆ ಕೂಡ ಹರಿದ ಬಟ್ಟೆ ಧರಿಸುವದರಲ್ಲಿ ಯಾವ ಅವಮಾನ ಕೂಡ ಎನಿಸುವುದಿಲ್ಲ. ಅದೇ ಕೆಲವರು ಅಥವಾ ಸಾಕಷ್ಟು ಜನ ಒಳ್ಳೆಯ ಬಟ್ಟೆ ಧರಿಸಿದರೆ, ನಮಗೆ ಖಂಡಿತ ದುಃಖ ಅನಿಸುತ್ತದೆ. ಅವರಲ್ಲಿರುವ ವಸ್ತು ನಮ್ಮಲಿಲ್ಲ ಎನ್ನುವ ಹೋಲಿಕೆ ನಮ್ಮಲ್ಲಿ ಅಸೂಯೆ ಮೂಡಿಸುತ್ತದೆ.
ಬೇರೆ ಯಾರ ಹತ್ತಿರವಿರದಿದ್ದ ವಸ್ತುವಿನ ಮೇಲೆ ನಮಗೆ ಆಸೆ ಮೂಡುವದೇ ಇಲ್ಲ. ಉದಾಹರಣೆಗೆ ನಮ್ಮ ಸುತ್ತ ಮುತ್ತಲಿನ ಜನ ತಮ್ಮ ಓಡಾಟಕ್ಕೆ ಪ್ರೈವೇಟ್ ಜೆಟ್ ಇಟ್ಟುಕೊಂಡಿರುವುದಿಲ್ಲ. ಆದರೆ ಅಂತಹ ಸುದ್ದಿಗಳನ್ನು ಟಿವಿ ಯಲ್ಲಿ ನೋಡಿದರೆ ಅಥವಾ ಪತ್ರಿಕೆಗಳಲ್ಲಿ ಓದಿದರೆ ಅದು ನಮಗೆ ಬೇಕು ಎನಿಸುವುದಿಲ್ಲ ಮತ್ತು ಅವರ ಮೇಲೆ ನಮಗೆ ಅಸೂಯೆ ಮೂಡುವುದಿಲ್ಲ. ಅದೇ ನಮ್ಮ ನೆರೆಯವರು ಅಥವಾ ಸಂಬಂಧಿಕರು ಒಂದು ದೊಡ್ಡ ಕಾರನ್ನು ತಮ್ಮ ಮನೆಯ ಮುಂದೆ ನಿಲ್ಲಿಸಿಕೊಂಡರೆ ಆಗ ನಮ್ಮ ಪ್ರತಿಷ್ಠೆ ಭುಗಿಲೇಳುತ್ತದೆ. ಅಲ್ಲಿವರೆಗೆ ಕಾರಿನ ಆಸೆ ಇರದಿದ್ದ ನಾವುಗಳು ಅಸೂಯೆಯಿಂದ ಸಂಕಟಕ್ಕೀಡಾಗುತ್ತೇವೆ. ಹೊಸ ಆಸೆಯ ಹಿಂದೆ ಬೀಳುತ್ತೇವೆ.
ಊರ ಜನ ಕೊಡದಲ್ಲಿ ನೀರು ಹೊತ್ತು ತರುವಾಗ, ಅದೇ ಕೆಲಸ ಮಾಡಿದ ನಮಗೆ ಇರದಿದ್ದ ದುಃಖ ಈಗ ನಮ್ಮ ನೆರೆಯವರಿಗಿಂತ, ಹತ್ತಿರದ ಬಂಧುಗಳಿಗಿಂತ ಕಡಿಮೆ ಎನಿಸಿಕೊಳ್ಳುವುದು ದುಃಖ ಉಂಟು ಮಾಡುತ್ತದೆ. 'ಆಸೆಯೇ ದುಃಖದ ಮೂಲ' ಎಂದು ಹೇಳಿದ ಬುದ್ಧ, ಅಸೂಯೆ ಆಸೆಯ ತಾಯಿ ಎಂದು ಹೇಳುವುದು ಮರೆತು ಹೋದ.
ಬೇರೆಯವರಿಗಿಂತ ನಾವು ಕಡಿಮೆ ಅನಿಸಿಕೊಳ್ಳಬಾರದು ಎನ್ನುವ ಹೋಲಿಕೆ ನಮ್ಮಲ್ಲಿ ಅಸೂಯೆ ಮನೆ ಮಾಡುವಂತೆ ಮಾಡಿ, ನಮಗೆ ಉಪಯೋಗವಿರದ ಆಸೆಗಳಿಗೆ ಬಲಿಯಾಗುವಂತೆ ಮಾಡುತ್ತದೆ. ಅಸೂಯೆ ಇರದಿದ್ದರೆ ಅಲ್ಲಿ ಆಸೆಗಳಿಗೂ ಕಡಿವಾಣ ಇರುತ್ತದೆ. ಅದರಿಂದ ಏನು ಸಾರ್ಥಕತೆ ಇದೆ ಎನ್ನುವ ವಿವೇಕ ಕೂಡ ಇರುತ್ತದೆ. ಆದರೆ ಅಸೂಯೆ ಇದ್ದಲ್ಲಿ ಉಳಿದೆಲ್ಲ ಲೋಭ, ಮದ-ಮತ್ಸರಗಳು ಅತಿರೇಕಕ್ಕೆ ಹೋಗುತ್ತವೆ. ಸರಿ-ತಪ್ಪಿನ ತರ್ಕಗಳು, ವಿವೇಚನಗಳು ಕೆಲಸಕ್ಕೆ ಬಾರದೆ ಹೋಗುತ್ತವೆ.
ನಾವೊಬ್ಬರೆ ಕಾಡಿನಲ್ಲಿ ಮನೆ ಮಾಡಿಕೊಂಡು ಇರಲು ಸಾಧ್ಯವಿಲ್ಲ. ಸಮಾಜದಲ್ಲಿ ಬದುಕಿದಾಗ ಅಸೂಯೆ ಸಾಮಾನ್ಯ ಪ್ರಕ್ರಿಯೆ. ಆದರೆ ಅಸೂಯೆ ನಮ್ಮ ವಿವೇಚನೆ ದಾಟಿ ಹೋಗದಂತೆ ನೋಡಿಕೊಳ್ಳುವುದು ಮಾತ್ರ ನಮಗೆ ಬಿಟ್ಟಿದ್ದು. ನಮ್ಮಲ್ಲಿ ಆಸೆ ಹುಟ್ಟಿದಾಗ ಅದಕ್ಕೆ ಕಾರಣ ಅಸೂಯೆಯೋ ಎನ್ನುವುದು ಗಮನಿಸಿ ನೋಡಿ. ಇಲ್ಲದಿದ್ದರೆ ನಾವದರ ಬಲಿಪಶು ಅಷ್ಟೇ.
No comments:
Post a Comment