ನೀವು ಶಾಲೆ ಕಲಿಯುತ್ತಿದ್ದಾಗ ಗಣಿತದ ಸೂತ್ರಗಳನ್ನು ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವ್ಯಾಖ್ಯಾನಗಳನ್ನು ನೆನಪಿಟ್ಟುಕೊಳ್ಳಲು ಶ್ರಮ ಪಡುತ್ತಿದ್ರಿ. ಆದರೆ ಅಜ್ಜಿ ಹೇಳಿದ ಕಥೆಗಳು, ರಾಗವಾಗಿ ಹಾಡಲು ಕಲಿತ ಪದಗಳು, ಸ್ನೇಹಿತರೊಡನೆ ಹಂಚಿಕೊಳ್ಳುತ್ತಿದ್ದ ತಮಾಷೆಯ ಮಾತುಗಳನ್ನು ನೆನಪಿಟ್ಟುಕೊಳ್ಳಲು ನಿಮಗೆ ಯಾವುದೇ ಶ್ರಮ ಬೇಕಿದ್ದಿರಲಿಲ್ಲ. ಹತ್ತಾರು ವರುಷಗಳ ನಂತರ ಸಿಕ್ಕ ಸ್ನೇಹಿತನೊಡನೆ, ಹಿಂದೆ ನೀವು ಅವನನ್ನು ಗೇಲಿ ಮಾಡಿದ್ದು ಮತ್ತೆ ನೆನಪಿಸಿಕೊಂಡು ನಗಬಲ್ಲರಿ. ಆದರೆ ಆದರೆ ನಿಮಗೆ ನಾಲ್ಕನೇ ಕ್ಲಾಸಿನಲ್ಲಿ ಬಂದ ಅಂಕಗಳನ್ನು ನೆನಪಿಸಿಕೊಳ್ಳಲು ಕಷ್ಟ. ಯಾಕೆ ಹೀಗೆ ಎಂದು ಯೋಚಿಸಿದ್ದೀರಾ?
ಮನುಷ್ಯ ರೂಪುಗೊಂಡಿದ್ದೆ ಹಾಗೆ. ಲಕ್ಷಾಂತರ ವರುಷಗಳ ಹಿಂದೆ ಮನುಜ ಆದಿವಾಸಿಯಾಗಿ ಬದುಕುತ್ತಿದ್ದಾಗ ಅವನಿಗೆ ಭಾಷೆ, ಅಂಕೆ-ಸಂಖ್ಯೆಗಳ ಅರಿವಿರಲಿಲ್ಲ. ಅದು ಅವನಿಗೆ ಬೇಕಾಗಿದ್ದು ಇಲ್ಲ. ಆದರೆ ಅವನು ಕಾಡಿನಲ್ಲಿ ನೋಡಿದ ಪ್ರಾಣಿಗಳ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತುತ್ತಿದ್ದ. ಕ್ರಮೇಣ ಅದು ಚಿತ್ರಕಲೆಯಾಗಿ ಬದಲಾಗಿತು. ಅವನ ಹೆಂಡತಿ ಮಗುವಿಗೆ ಬರಿ ಗುನುಗುತ್ತ ಜೋಗುಳ ಹಾಡುತ್ತಿದ್ದಳು. ಮುಂದೆ ಅವುಗಳು ಹಾಡುಗಳಾಗಿ ಬದಲಾದವು. ಮನುಷ್ಯರ ಗುಂಪು ದೊಡ್ಡದಾದಂತೆಲ್ಲ ಅವರಿಗೆ ಕೇವಲ ಸಂಜ್ಞೆಗಳು ಸಾಕಾಗದೆ ಭಾಷೆಯ ಅವಶ್ಯಕತೆ ಮೂಡಿತು. ಆಡು ಭಾಷೆಗೆ ಲಿಪಿ ಮೂಡಲು ಇನ್ನು ಕೆಲವು ಸಾವಿರ ವರುಷಗಳೇ ಕಳೆದವು. ವಸ್ತುಗಳ ಬದಲಾವಣೆಗೆ, ವ್ಯಾಪಾರಕ್ಕೆ ಅನುಕೂಲವಾಗಲು ಅವನಿಗೆ ಸಂಖ್ಯೆಗಳ ಅವಶ್ಯಕತೆ ಮೂಡಿತು. ಬರೀ ಕೈ ಬೆರಳುಗಳ ಎಣಿಕೆ ಸಾಕಾಗದೆ ಸೊನ್ನೆಯನ್ನು ಸಂಖ್ಯಾ ಪದ್ದತಿಗೆ ಸೇರಿಸಿದರು. ಪ್ರಕೃತಿ ವಿಕಾಸದಲ್ಲಿ ಕೊನೆಗೆ ಬಂದದ್ದು ಸಂಖ್ಯೆ. ಹಾಗಾಗಿ ಮಾನವನ ಮೆದುಳು ಭಾಷೆಯನ್ನು ಸಲೀಸಾಗಿ ಕಲಿಯುವಷ್ಟು ಸಂಖ್ಯೆಗಳನ್ನು ಗ್ರಹಿಸುವುದಿಲ್ಲ. ಹಾಗೆಯೆ ಭಾಷೆಗಿಂತ ಮೊದಲು ಮನುಷ್ಯ ಹಾವ-ಭಾವಗಳನ್ನು ಉಪಯೋಗಿಸಿ ವ್ಯವಹರಿಸುತ್ತಿದ್ದ. ಅದಕ್ಕೆ ಮನುಷ್ಯನ ಮುಖದ ಮೇಲೆ ಮೂಡುವ ಎಷ್ಟೋ ಭಾವನೆಗಳನ್ನು ಭಾಷೆಯಲ್ಲಿ ವ್ಯಕ್ತ ಪಡಿಸುವುದು ಕಷ್ಟ. ಅದಕ್ಕೆ ನೋಡಿ. ಎಂತಹ ಕಷ್ಟದ ವಿಷಯವೇ ಇರಲಿ, ಚಿತ್ರ ಬಿಡಿಸಿ ತೋರಿಸಿ ಅಥವಾ ಅಭಿನಯಿಸಿ ತೋರಿಸಿ. ಹೆಚ್ಚಿನ ವಿವರಣೆ ಕೊಡದೆ ನೀವು ಇನ್ನೊಬ್ಬರಿಗೆ ಸುಲಭದಲ್ಲಿ ವಿಷಯ ಅರ್ಥ ಮಾಡಿಸಬಹುದು.
ಕನ್ನಡ ನಾಡಿನ ಮೊದಲ ದೊರೆ ಮಯೂರ ವರ್ಮನ ಬಗ್ಗೆ ಜನ ಓದಿ ತಿಳಿದುಕೊಂಡಿದ್ದಕ್ಕಿಂತ ಚಲನಚಿತ್ರ ನೋಡಿ ಅರಿತವರೇ ಹೆಚ್ಚು. ಏಕೆಂದರೆ ಕಾದಂಬರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಚಲನಚಿತ್ರಗಳು ಸಾಧಾರಣ ಮನುಷ್ಯನಲ್ಲಿ ಭಾವಾವೇಶಗಳನ್ನು ಮೂಡಿಸುತ್ತವೆ. ಚಿತ್ರ ನೋಡಿ ಬಂದ ಜನಕ್ಕೆ ಮಯೂರ ವರ್ಮ ಯಾವ ಶತಮಾನದಲ್ಲಿ ಬದುಕಿದ್ದ ಎನ್ನುವ ವಿಷಯ ಗಮನಕ್ಕೆ ಬಾರದೆ ಹೋಗುತ್ತದೆ. ಆದರೆ ಮಯೂರನಿಗೆ ಬೀಳುತ್ತಿದ್ದ ಕನಸುಗಳು, ಅವನಲ್ಲಿ ಮೂಡುವ ರೋಷ, ಅವನ ಶೌರ್ಯ ಮತ್ತು 'ನಾನಿರುವುದೇ ನಿಮಗಾಗಿ' ಎನ್ನುವ ಹಾಡು ಅವರಿಗೆ ಮರೆಯಲು ಸಾಧ್ಯವೇ ಆಗುವುದಿಲ್ಲ. ಇದು ಬರೀ ಕನ್ನಡ ನಾಡಿಗೆ ಮಾತ್ರ ಸೀಮಿತವಲ್ಲ.
ಟೈಟಾನಿಕ್ ಚಿತ್ರ ನೆನಪಿಸಿಕೊಳ್ಳಿ. ಅದರಲ್ಲಿ ಲಕ್ಷಾಂತರ ಬೆಲೆ ಬಾಳುವ ಹಡಗು ಮುಳುಗಿ ಹೋಗುತ್ತದೆ. ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ ಚಿತ್ರ ನೋಡಿದ ಜನರಿಗೆ ನೆನಪಿನಲ್ಲಿ ಉಳಿಯುವುದು ನಾಯಕ-ನಾಯಕಿಯ ನಡುವಿನ ಪ್ರೀತಿ. ಮತ್ತು ಅದು ದುಃಖಾಂತ ಕಾಣುವ ರೀತಿ. ಅದು ಜನರ ಮನಸ್ಸಿನೊಳಗೆ ಇಳಿದಷ್ಟು ಬೇರೆ ವಿಷಯಗಳು ಇಳಿಯುವುದಿಲ್ಲ.
ಅಂಕೆ-ಸಂಖ್ಯೆಗಳಿಗೆ ಖಂಡಿತ ಮಹತ್ವ ಇದೆ. ಆದರೆ ಅದನ್ನು ಕಥೆಯ ರೂಪದಲ್ಲಿ ಹೇಳದೆ ಹೋದರೆ ಅದನ್ನು ಗ್ರಹಿಸುವುದು ಮತ್ತು ನೆನಪಿನಲ್ಲಿ ಇಟ್ಟುಕೊಳ್ಳುವುದು ಜನರಿಗೆ ಕಷ್ಟ. ಮತ್ತು ಕಥೆಯನ್ನು ನೀವು ಎಷ್ಟು ಪರಿಣಾಮಕಾರಿಯಾಗಿ ಹೇಳುತ್ತೀರೋ, ಅದು ಜನರ ಮನಸ್ಸಿಗೆ ಎಷ್ಟರ ಮಟ್ಟಿಗೆ ನಾಟುತ್ತದೋ ಎನ್ನುವುದು ಆ ಕಥೆ ಹುಟ್ಟಿಸುವ ಭಾವನೆಗಳ ಮೇಲೆ ಅವಲಂಬಿತ ಆಗಿರುತ್ತದೆ. ಜನರ ಮನಸ್ಸಿನಲ್ಲಿ ಭಾವನೆಗಳನ್ನು ಹುಟ್ಟಿಸದ ಕಥೆ ಅಲ್ಪಾಯುಷಿ. ಹಾಗೆಯೇ ರಾಮಾಯಣ, ಮಹಾಭಾರತಗಳು ಚಿರಂಜೀವಿಗಳಾಗಿರುವುದಕ್ಕೆ ಕಾರಣ ಅವು ಹುಟ್ಟಿಸುವ ವಿಚಾರ ಮತ್ತು ಭಾವನೆಗಳು.
ಅಂಕೆ-ಸಂಖ್ಯೆ ಗಳಲ್ಲಿ ನುರಿತವರು ವ್ಯಾಪಾರಿಗಳಾದರು, ಶ್ರೀಮಂತರಾದರು ಹಾಗೆಯೆ ಸುಲಭದಲ್ಲಿ ಜನ ಅವರನ್ನು ಮರೆತು ಹೋದರು. ಆದರೆ ಭಾವನೆಗಳಿಗೆ ಸ್ಪಂದಿಸುವ ಬಸವಣ್ಣನವರ ವಚನಗಳು, ದಾಸರ ಪದಗಳು ಜನರ ಬಾಯಲ್ಲಿ ಚಿರಸ್ಥಾಯಿಯಾಗಿ ಉಳಿದು ಹೋದವು. ಕಾಲ ಬದಲಾದರೂ, ಭಾಷೆ, ಜೀವನಶೈಲಿ ಬದಲಾದರೂ, ಆಧುನಿಕ ಮನುಷ್ಯನ ಭಾವನೆಗಳಿಗೂ, ಆದಿವಾಸಿಯ ಮನಸ್ಸಿನ ಭಾವನೆಗಳಿಗೂ ಏನೂ ವ್ಯತ್ಯಾಸವಿಲ್ಲ. ಅವನನ್ನು ಗೆಲ್ಲಲು, ಅವನ ಭಾವನೆಗಳಿಗೆ ಸ್ಪಂದಿಸಿದಾಗ ಮಾತ್ರ ಸಾಧ್ಯ. ಮತ್ತು ಅದಕ್ಕೆ ಅಂಕೆ-ಸಂಖ್ಯೆ ಗಳಿಂತ ಕಥೆ-ಗೀತೆಗಳೇ ಸುಲಭದ ಹಾದಿ.
No comments:
Post a Comment